ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೂಯೀ ಬ್ರೇಲ್‌ ಗಾಢಾಂಧಕಾರದಲ್ಲಿರುವವರಿಗೆ ಬೆಳಕು

ಲೂಯೀ ಬ್ರೇಲ್‌ ಗಾಢಾಂಧಕಾರದಲ್ಲಿರುವವರಿಗೆ ಬೆಳಕು

ಲೂಯೀ ಬ್ರೇಲ್‌ ಗಾಢಾಂಧಕಾರದಲ್ಲಿರುವವರಿಗೆ ಬೆಳಕು

ಓದುವುದು ಹಾಗೂ ಬರೆಯುವುದು ನಿಮಗೆ ಎಷ್ಟು ಮಹತ್ತ್ವದ್ದಾಗಿದೆ? ಕೆಲವರು ಇದನ್ನು ಬಹಳ ಹಗುರವಾಗಿ ತೆಗೆದುಕೊಳ್ಳಬಹುದು. ಆದರೆ ನಿಜವಾಗಿಯೂ ಹೇಳಬೇಕಾದರೆ, ಓದುವುದು ಮತ್ತು ಬರೆಯುವುದು ನಮ್ಮ ಕಲಿಕೆಯ ಬುನಾದಿಯಾಗಿದೆ. ಲಿಖಿತ ಭಾಷೆಯ ಬೀಗವನ್ನು ತೆರೆಯಲು ಅಸಮರ್ಥರೆಂದರೆ, ಅದು ಮಹಾ ಜ್ಞಾನಭಂಡಾರದ ಬೀಗದ ಕೈಯನ್ನು ಕಳೆದುಕೊಂಡಂತೆಯೇ ಸರಿ.

ನೂರಾರು ವರ್ಷಗಳ ವರೆಗೆ, ಲಿಖಿತ ಭಾಷೆಯು ಅಂಧರಿಗೆ ಲಭ್ಯವಿರಲಿಲ್ಲ. ಆದುದರಿಂದ, ಇವರ ಕರುಣಾಜನಕ ಸ್ಥಿತಿಯನ್ನು ನೋಡಿ, 19ನೇ ಶತಮಾನದಲ್ಲಿ ಒಬ್ಬ ಶ್ರದ್ಧಾಪೂರ್ವಕ ಯುವಕನು ಸಂವಾದದ ಒಂದು ವಿಧಾನವನ್ನು ಕಂಡುಹಿಡಿದನು. ಅದು ನಿಜವಾಗಿಯೂ ಅವನಿಗೂ ಇನ್ನಿತರ ಲಕ್ಷಾಂತರ ಜನರಿಗೂ ಹೊಸ ಬಾಗಿಲನ್ನು ತೆರೆಯಿತು.

ದುರಂತದಿಂದ ಆಶಾಕಿರಣವು ಹೊರಹೊಮ್ಮುತ್ತದೆ

ಲೂಯೀ ಬ್ರೇಲ್‌ 1809ರಲ್ಲಿ ಹುಟ್ಟಿದನು. ಅವನು ಹುಟ್ಟಿದ್ದು ಫ್ರಾನ್ಸ್‌ನ ಕೂಪ್ರೆ ಎಂಬ ಹಳ್ಳಿಯಲ್ಲಿ, ಇದು ಪ್ಯಾರಿಸ್‌ನಿಂದ ಸುಮಾರು 40 ಕಿಲೊಮೀಟರುಗಳಷ್ಟು ದೂರದಲ್ಲಿದೆ. ಇವನ ತಂದೆ ಸೀಮೋನ್‌ ರೆನೇ, ಹೊಟ್ಟೆಪಾಡಿಗಾಗಿ ಕುದುರೆಗಾಡಿಗೆ ಬೇಕಾದ ಸಾಮಾನು ಸರಂಜಾಮುಗಳನ್ನು ತಯಾರಿಸುತ್ತಿದ್ದ. ಬಾಲಕನಾದ ಲೂಯೀ ತನ್ನ ತಂದೆಯ ವರ್ಕ್‌ಶಾಪ್‌ನಲ್ಲಿ ಆಡುತ್ತಿರುತ್ತಿದ್ದ. ಹೀಗೆ, ಒಮ್ಮೆ ಆಡುತ್ತಿರುವಾಗ ಒಂದು ದುರ್ಘಟನೆಯು ಸಂಭವಿಸಿತು. ಮೊನಚಾದ ಒಂದು ಉಪಕರಣವನ್ನು ಕೈಯಲ್ಲಿ ಹಿಡಿದುಕೊಂಡು​—⁠ಇದು ದಬ್ಬಳವಾಗಿದ್ದಿರಬಹುದು​—⁠ಲೂಯೀ ತನಗೇ ಅರಿವಿಲ್ಲದೆ ಕಚಕ್ಕನೇ ಅದನ್ನು ತನ್ನ ಕಣ್ಣಿಗೆ ಚುಚ್ಚಿಕೊಂಡನು. ಕಣ್ಣಿಗಾದ ಹಾನಿಯನ್ನು ಸರಿಪಡಿಸಲಿಕ್ಕೇ ಆಗಲಿಲ್ಲ. ಆದರೆ ಇನ್ನೂ ದುಃಖದ ವಿಷಯವೇನೆಂದರೆ, ಆ ಕಣ್ಣಿನಲ್ಲಾದ ಸೋಂಕು ಮತ್ತೊಂದು ಕಣ್ಣಿಗೂ ಹರಡಿತು. ಪಾಪ ಇಷ್ಟೊಂದು ಎಳೆಯ ವಯಸ್ಸಿನಲ್ಲಿಯೇ ಲೂಯೀ ಎರಡೂ ಕಣ್ಣುಗಳನ್ನು ಕಳೆದುಕೊಂಡನು. ಆಗ ಅವನು ಕೇವಲ ಮೂರು ವರ್ಷದ ಮುಗ್ಧ ಹಸುಳೆ.

ಆಗಿದ್ದು ಆಗಿಹೋಯಿತು ಎಂದು ನೆನಸುತ್ತಾ, ಲೂಯೀಯ ತಂದೆತಾಯಿಯರು ಮತ್ತು ಪ್ಯಾರಿಷ್‌ ಪಾದ್ರಿಯಾದ ಸಾಕ್‌ ಪಾಲ್ವೀ ಅವನನ್ನು ಅಲ್ಲಿನ ಶಾಲೆಗೆ ಸೇರಿಸಿದರು. ಅಲ್ಲಿ ತರಗತಿಯಲ್ಲಿ ಏನನ್ನು ಕೇಳಿಸಿಕೊಂಡನೋ ಅದರಲ್ಲಿ ಹೆಚ್ಚಿನಾಂಶವನ್ನು ಲೂಯೀ ಅರ್ಥಮಾಡಿಕೊಂಡನು. ಕೆಲವು ವರ್ಷಗಳ ತನಕ ಅವನು ಇಡೀ ತರಗತಿಯಲ್ಲಿಯೇ ಹೆಚ್ಚು ಅಂಕಗಳನ್ನು ಪಡೆಯುವ ವಿದ್ಯಾರ್ಥಿಯಾಗಿದ್ದನು! ಆದರೆ ದೃಷ್ಟಿಯುಳ್ಳವರಿಗೆ ತಯಾರಿಸಲ್ಪಟ್ಟ ವಿಧಾನಗಳಿಂದ ಒಬ್ಬ ಅಂಧ ವ್ಯಕ್ತಿಯು ಪೂರ್ತಿಯಾಗಿ ಕಲಿತುಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಅದಕ್ಕೆ ಕೆಲವೊಂದು ಮಿತಿಗಳಿದ್ದವು. ಆದುದರಿಂದ, ಇಸವಿ 1819ರಲ್ಲಿ ಲೂಯೀಯನ್ನು ರಾಯಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಬ್ಲೈಂಡ್‌ ಯೂತ್‌ ಶಾಲೆಗೆ ಸೇರಿಸಲಾಯಿತು.

ಆ ಇನ್‌ಸ್ಟಿಟ್ಯೂಟ್‌ನ ಸ್ಥಾಪಕನು ವಾಲಾಂಟನ್‌ ಅವ್ಯೀ ಆಗಿದ್ದನು. ಅಂಧರಿಗೆ ಓದಲು ಸಹಾಯಮಾಡುವುದಕ್ಕಾಗಿ ಪ್ರೋಗ್ರ್ಯಾಮ್‌ ಅನ್ನು ಕಂಡುಹಿಡಿದವರಲ್ಲೇ ಮೊದಲ ವ್ಯಕ್ತಿ ಇವನಾಗಿದ್ದನು. ಒಬ್ಬ ಅಂಧ ವ್ಯಕ್ತಿಯು ಸಾಮಾನ್ಯ ರೀತಿಯ ಶಿಕ್ಷಣದ ಪ್ರಯೋಜನಗಳನ್ನು ಪಡೆದುಕೊಳ್ಳಸಾಧ್ಯವಿಲ್ಲ ಎಂಬ ಭಾವನೆಯನ್ನು ಸುಳ್ಳಾಗಿಸುವುದು ಅವನ ಆಸೆಯಾಗಿತ್ತು. ಅವ್ಯೀಯ ಆರಂಭದ ಪ್ರಯೋಗಗಳಲ್ಲಿ ಒಂದು, ಮಂದವಾದ ಪೇಪರ್‌ನ ಮೇಲೆ ದೊಡ್ಡದಾದ ಉಬ್ಬು ಪದಗಳನ್ನು ಕೆತ್ತುವುದಾಗಿತ್ತು. ಇದು ಕೇವಲ ಆರಂಭವಾಗಿತ್ತಾದರೂ, ಈ ಪ್ರಯತ್ನಗಳು ಬೀಜಗಳನ್ನು ನೆಟ್ಟವು ಮಾತ್ರವಲ್ಲ, ಮುಂದೆ ಬಲವಾಗಿ ಬೇರುಹಿಡಿದವು.

ಅವ್ಯೀಯ ಪುಟ್ಟ ಲೈಬ್ರರಿಯ ಪುಸ್ತಕಗಳಲ್ಲಿ ದೊಡ್ಡದಾಗಿ ಕೆತ್ತಲ್ಪಟ್ಟ ಪದಗಳನ್ನು ಓದಲು ಬ್ರೇಲ್‌ ಕಲಿತುಕೊಂಡ. ಆದರೆ ಈ ರೀತಿಯ ಕಲಿಯುವಿಕೆಗೆ ತುಂಬ ಸಮಯ ಹಿಡಿಯುತ್ತದೆ ಮಾತ್ರವಲ್ಲ, ಇದು ಪ್ರಾಯೋಗಿಕವಲ್ಲ ಎಂಬುದನ್ನು ಸಹ ಇವನು ಕಂಡುಕೊಂಡನು. ಏನೇ ಆಗಲಿ, ಪದಗಳು ಕಣ್ಣುಗಳಿಗಾಗಿ ರಚಿಸಲ್ಪಟ್ಟಿದ್ದವೇ ಹೊರತು ಬೆರಳುಗಳಿಗಲ್ಲ. ಆದರೆ ಸಂತೋಷಕರವಾದ ವಿಷಯವೆಂದರೆ, ಈ ಕೊರತೆಗಳನ್ನು ಗುರುತಿಸಿದ ಯಾರೋ ಒಬ್ಬರು ಇದನ್ನು ಸರಿಪಡಿಸಲಿಕ್ಕಿದ್ದರು.

ಅನಿರೀಕ್ಷಿತ ಮೂಲದಿಂದ ಒಂದು ವಿಚಾರ ಹೊಳೆದದ್ದು

ಇಸವಿ 1821ರಲ್ಲಿ, ನಿವೃತ್ತ ಫ್ರೆಂಚ್‌ ಆರ್ಟಿಲರಿ ಕ್ಯಾಪ್ಟನ್‌ ಆಗಿದ್ದ ಶರ್ಲ್‌ ಬರ್‌ಬ್ಯೋ ಈ ಇನ್‌ಸ್ಟಿಟ್ಯೂಟ್‌ ಅನ್ನು ಸಂದರ್ಶಿಸಿದ. ಆಗ ಲೂಯೀ ಬ್ರೇಲ್‌ ಕೇವಲ 12 ವರ್ಷದ ಹುಡುಗ. ಅಲ್ಲಿ ಆ ಕ್ಯಾಪ್ಟನ್‌ ನೈಟ್‌ ರೈಟಿಂಗ್‌ ಎಂದು ಕರೆಯಲ್ಪಟ್ಟ ಸಂವಾದ ಮಾಧ್ಯಮವನ್ನು ಪರಿಚಯಿಸಿದ. ಇದು ಮುಂದೆ ಸೊನೋಗ್ರ್ಯಾಫಿ ಎಂಬ ಹೆಸರನ್ನು ಪಡೆದುಕೊಂಡಿತು. ನೈಟ್‌ ರೈಟಿಂಗ್‌ ಅನ್ನು ರಣರಂಗದಲ್ಲಿ ಉಪಯೋಗಿಸಲಿಕ್ಕೆಂದೇ ರಚಿಸಲಾಗಿತ್ತು. ಆರು ಚುಕ್ಕೆ ಎತ್ತರ, ಎರಡು ಚುಕ್ಕೆ ಅಗಲದ ಆಯತಾಕಾರದಲ್ಲಿ ಏರ್ಪಡಿಸಲ್ಪಟ್ಟ ಹಾಗೂ ಎತ್ತರಿಸಿದ ಚುಕ್ಕೆಗಳನ್ನು ಉಪಯೋಗಿಸಿ ಮಾಡುವ ಕೈ ಸ್ವರ್ಶ ಸಂವಾದವು ಇದಾಗಿದೆ. ಉಚ್ಚಾರಣಾರೂಪದಲ್ಲಿ ಪದಗಳನ್ನು ಪ್ರತಿನಿಧಿಸುವ ಕೋಡ್‌ ಅನ್ನು ಉಪಯೋಗಿಸುವ ಈ ವಿಧಾನವು ಶಾಲೆಯಲ್ಲಿ ಜನಪ್ರಿಯವಾಯಿತು. ಬ್ರೇಲ್‌ ಬಹಳ ಉತ್ಸುಕತೆಯಿಂದ ಈ ಹೊಸ ವಿಧಾನವನ್ನು ಉಪಯೋಗಿಸಿದನು. ಮತ್ತು ಅದರಲ್ಲಿ ಕೆಲವೊಂದು ಸುಧಾರಣೆಗಳನ್ನು ಸಹ ಮಾಡಿದನು. ಆದರೆ ಇದನ್ನು ನಿಜವಾಗಿಯೂ ಪ್ರಾಯೋಗಿಕವಾಗಿ ಮಾಡಲು ಅವನು ಬಹಳ ಶ್ರಮವಹಿಸಿ, ಪಟ್ಟುಹಿಡಿಯಬೇಕಾಗಿತ್ತು. “ನಾನು ನನ್ನ ಕಣ್ಣಿನಿಂದ ಮನುಷ್ಯರ, ಘಟನೆಗಳ, ವಿಚಾರಗಳ ಹಾಗೂ ಸಿದ್ಧಾಂತಗಳ ಬಗ್ಗೆ ತಿಳಿದುಕೊಳ್ಳಸಾಧ್ಯವಿಲ್ಲವೆಂದರೆ, ನಾನು ಮತ್ತೊಂದು ಮಾರ್ಗವನ್ನು ಹುಡುಕುತ್ತೇನೆ” ಎಂದು ಅವನು ತನ್ನ ಡೈರಿಯಲ್ಲಿ ಬರೆದಿದ್ದನು.

ಆದುದರಿಂದ, ಅವನು ಮುಂದಿನ ಎರಡು ವರ್ಷಗಳ ತನಕ ಆ ಕೋಡ್‌ ಅನ್ನು ಸರಳೀಕರಿಸಲು ದೃಢಸಂಕಲ್ಪದಿಂದ ಕೆಲಸಮಾಡಿದನು. ಕೊನೆಗೂ, ಪರಿಷ್ಕೃತ ಹಾಗೂ ಅತ್ಯುತ್ಕೃಷ್ಟವಾದ ವಿಧಾನವನ್ನು ಕಂಡುಹಿಡಿದನು. ಇದು ಕೇವಲ ಮೂರು ಚುಕ್ಕೆಗಳಷ್ಟು ಎತ್ತರವಿದ್ದ ಹಾಗೂ ಎರಡು ಚುಕ್ಕೆಗಳಷ್ಟು ಅಗಲವಿದ್ದ ಒಂದು ಸೆಲ್‌ (ಕೋಶ) ಆಗಿತ್ತು. 1824ರಲ್ಲಿ ಲೂಯೀ ಬ್ರೇಲ್‌ ಕೇವಲ 15 ವರ್ಷದವನಾಗಿದ್ದಾಗ, ಆರು ಚುಕ್ಕೆಗಳುಳ್ಳ ಸೆಲ್‌ ವಿಧಾನವನ್ನು ಸಂಪೂರ್ಣಗೊಳಿಸಿದನು. ಅದರ ನಂತರ, ಅವನು ಒಂದು ಇನ್‌ಸ್ಟಿಟ್ಯೂಟ್‌ನಲ್ಲಿ ಕಲಿಸಲಾರಂಭಿಸಿದನು. 1829ರಲ್ಲಿ ಅವನು ಒಂದು ಅಪೂರ್ವವಾದ ವಿಧಾನವನ್ನು ಜನರ ಮುಂದಿಟ್ಟನು. ಇಂದು ಅದು ಅವನ ಹೆಸರಿನಲ್ಲಿ ವಿರಾಜಿಸುತ್ತಿದೆ. ಅಲ್ಪಸ್ವಲ್ಪ ಪರಿಷ್ಕರಣವನ್ನು ಬಿಟ್ಟರೆ, ಬೇರೆಲ್ಲವೂ ಅವನು ಕಂಡುಹಿಡಿದ ರೀತಿಯಲ್ಲೇ ಇಂದಿನ ವರೆಗೂ ಉಳಿದಿದೆ.

ಬ್ರೇಲ್‌ ಇಂದು ಲೋಕದಾದ್ಯಂತ ಲಭ್ಯವಿದೆ

ಇಸವಿ 1820ಗಳ ಕಡೇ ಭಾಗದಲ್ಲಿ, ಬ್ರೇಲ್‌ನ ಎತ್ತರಿಸಲ್ಪಟ್ಟ ಚುಕ್ಕೆಯ ಬಗ್ಗೆ ವಿವರಿಸಿದ ಒಂದು ಪುಸ್ತಕವು ಪ್ರಥಮವಾಗಿ ಅಚ್ಚುಮಾಡಲ್ಪಟ್ಟಿತು. ಆದರೆ ಈ ರೀತಿಯ ವಿಧಾನವು ಬಹಳ ನಿಧಾನಗತಿಯಲ್ಲಿ ಜನಪ್ರಿಯತೆಯನ್ನು ಪಡೆಯಿತು. ಆ ಇನ್‌ಸ್ಟಿಟ್ಯೂಟ್‌ನಲ್ಲಿಯೇ, 1854ರ ತನಕ ಈ ಹೊಸ ಕೋಡ್‌ ಅಧಿಕೃತ ಮನ್ನಣೆಯನ್ನು ಪಡೆದಿರಲಿಲ್ಲ. ಅಂದರೆ, ಬ್ರೇಲ್‌ ಮೃತ್ಯುವಶನಾದ ಎರಡು ವರ್ಷಗಳ ಬಳಿಕವೇ ಅದನ್ನು ಸ್ವೀಕರಿಸಲಾಯಿತು. ಇಷ್ಟೆಲ್ಲ ಆದರೂ, ಅತ್ಯುತ್ಕೃಷ್ಟವಾದ ಈ ವಿಧಾನವು ಜನಪ್ರಿಯತೆಯ ಉತ್ತುಂಗವನ್ನು ಏರಿಯೇ ಬಿಟ್ಟಿತು.

ಹಲವಾರು ಸಂಘಸಂಸ್ಥೆಗಳು ಬ್ರೇಲ್‌ ಲಿಪಿಯ ಸಾಹಿತ್ಯವನ್ನು ಹೊರತಂದಿವೆ. ವಾಚ್‌ಟವರ್‌ ಸೊಸೈಟಿಯು ಇಂತಹ ಸಾಹಿತ್ಯಗಳನ್ನು ಇಸವಿ 1912ರಲ್ಲಿ ಹೊರತಂದಿತು. ಆಗ ಇಂಗ್ಲಿಷ್‌ ಮಾತಾಡುವ ಜಗತ್ತಿನಲ್ಲಿ ಆ ಕೋಡ್‌ ಇನ್ನೂ ಪ್ರಮಾಣಬದ್ಧವಾಗಲಿಕ್ಕಿತ್ತು. ಇಂದು ಆಧುನಿಕ ಬ್ರೇಲ್‌ ಮುದ್ರಣ ವಿಧಾನಗಳನ್ನು ಉಪಯೋಗಿಸುತ್ತಾ, ಲಕ್ಷಾಂತರ ಪುಟಗಳುಳ್ಳ ಸಾಹಿತ್ಯಗಳನ್ನು ಸೊಸೈಟಿಯು ಹೊರತರುತ್ತಿದೆ. ಇದು ಪ್ರತಿ ವರ್ಷ ಎಂಟು ಭಾಷೆಗಳಲ್ಲಿ ಹೊರತರಲ್ಪಟ್ಟು, ಸುಮಾರು 70ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ವಿತರಿಸಲ್ಪಡುತ್ತಿದೆ. ಬ್ರೇಲ್‌ ಲಿಪಿಯ ಬೈಬಲ್‌ ಸಾಹಿತ್ಯಕ್ಕೆ ತುಂಬ ಬೇಡಿಕೆಯಿರುವುದರಿಂದ, ಇತ್ತೀಚೆಗೆ ಸೊಸೈಟಿಯು ಈ ಮುಂಚೆಗಿಂತ ಎರಡು ಪಟ್ಟು ಹೆಚ್ಚು ಸಾಹಿತ್ಯವನ್ನು ಮುದ್ರಿಸುತ್ತಿದೆ.

ಕಣ್ಣಿಲ್ಲದ ಲಕ್ಷಾಂತರ ಜನರು ಇಂದು ಈ ಸರಳ ಹಾಗೂ ಕೌಶಲ್ಯಭರಿತ ಬ್ರೇಲ್‌ ಲಿಪಿಯಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಇದೆಲ್ಲವೂ ಸುಮಾರು 200 ವರ್ಷಗಳ ಹಿಂದೆ ಒಬ್ಬ ಬಾಲಕನು ತನ್ನನ್ನು ತಾನೇ ಅರ್ಪಿಸಿಕೊಂಡು ಮಾಡಿದ ಪ್ರಯತ್ನದ ಫಲವೇ ಆಗಿದೆ.

[ಪುಟ 15ರಲ್ಲಿರುವ ಚೌಕ/ಚಿತ್ರಗಳು]

ಬ್ರೇಲ್‌ ಕೋಡ್‌ನ ರಹಸ್ಯ

ಬ್ರೇಲ್‌ ಅನ್ನು ಎಡಭಾಗದಿಂದ ಬಲಭಾಗಕ್ಕೆ ಓದಲಾಗುತ್ತದೆ. ಮತ್ತು ಇದಕ್ಕೆ ಒಂದು ಇಲ್ಲವೇ ಎರಡೂ ಕೈಗಳನ್ನು ಉಪಯೋಗಿಸಬಹುದು. ಪ್ರತಿಯೊಂದು ಬ್ರೇಲ್‌ ಸೆಲ್‌ನಲ್ಲಿ 63 ಚುಕ್ಕೆ ಸಂಯೋಜನೆಗಳಿರುತ್ತವೆ. ಆದುದರಿಂದ ಹೆಚ್ಚಿನ ಅಕ್ಷರಮಾಲೆಗಳಲ್ಲಿ, ಅಕ್ಷರಗಳೂ ವಿರಾಮ ಚಿಹ್ನೆಗಳೂ ನಿರ್ದಿಷ್ಟ ಚುಕ್ಕೆಗಳ ಸಂಯೋಜನೆಯಿಂದ ವರ್ಗೀಕರಿಸಲ್ಪಡುತ್ತವೆ. ಭಾಷೆಗಳು ಬ್ರೇಲ್‌ನ ಸಂಕ್ಷಿಪ್ತ ವಿಧಾನವನ್ನು ಉಪಯೋಗಿಸುತ್ತದೆ. ಇದು ಆಗಾಗ್ಗೆ ಅಕ್ಷರ ಸಂಯೋಜನೆಗಳಲ್ಲಿ ಇಲ್ಲವೇ ಇಡೀ ಪದಗಳಲ್ಲಿ ಉಪಯೋಗಿಸಲ್ಪಡುವ ಕೆಲವು ನಿರ್ದಿಷ್ಟ ಸೆಲ್‌ಗಳನ್ನು ಸೂಚಿಸುತ್ತದೆ. ಬ್ರೇಲ್‌ ಲಿಪಿಯನ್ನು ಓದುವುದರಲ್ಲಿ ಕೆಲವರು ಎಷ್ಟು ನಿಪುಣರೆಂದರೆ, ಒಂದು ನಿಮಿಷಕ್ಕೆ 200 ಪದಗಳನ್ನು ಚಕಚಕನೇ ಓದಿಬಿಡುತ್ತಾರೆ!

[ಚಿತ್ರಗಳು]

ಮೇಲಿನ ಎರಡು ಸಾಲುಗಳಲ್ಲಿ ಮೊದಲ ಹತ್ತು ಅಕ್ಷರಗಳು ಕೇವಲ ಚುಕ್ಕೆಗಳಾಗಿರುತ್ತವೆ

ಮುಂದಿನ ಹತ್ತು ಅಕ್ಷರಗಳು ಮೊದಲ ಹತ್ತು ಅಕ್ಷರಗಳಿಗೆ ಕೆಳಗೆ ಎಡಭಾಗಕ್ಕೆ ಮಾತ್ರ ಚುಕ್ಕೆಯನ್ನು ಸೇರಿಸುತ್ತವೆ

ಕೊನೆಯ ಐದು ಅಕ್ಷರಗಳು, ಮೊದಲ ಐದು ಅಕ್ಷರಗಳಿಗೆ ಕೆಳಗೆ ಎರಡೂ ಕಡೆಗೆ ಚುಕ್ಕೆಗಳನ್ನು ಸೇರಿಸುತ್ತವೆ; “w” ಎಂಬ ಈ ಅಕ್ಷರವು ಹೊರತುಪಡಿಸಿದ್ದಾಗಿದೆ, ಏಕೆಂದರೆ ಅನಂತರ ಇದನ್ನು ಫ್ರೆಂಚ್‌ ಅಕ್ಷರಮಾಲೆಗೆ ಸೇರಿಸಲಾಯಿತು

[ಪುಟ 14ರಲ್ಲಿರುವ ಚಿತ್ರ ಕೃಪೆ]

ಛಾಯಾಚಿತ್ರ: © Maison Natale de Louis Braille - Coupvray, France/Photo Jean-Claude Yon