ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೈಂಗಿಕ ಕಿರುಕುಳವನ್ನು ನಾನು ಹೇಗೆ ನಿಭಾಯಿಸಬಲ್ಲೆ?

ಲೈಂಗಿಕ ಕಿರುಕುಳವನ್ನು ನಾನು ಹೇಗೆ ನಿಭಾಯಿಸಬಲ್ಲೆ?

ಯುವ ಜನರು ಪ್ರಶ್ನಿಸುವುದು . . .

ಲೈಂಗಿಕ ಕಿರುಕುಳವನ್ನು ನಾನು ಹೇಗೆ ನಿಭಾಯಿಸಬಲ್ಲೆ?

“ನಮ್ಮನ್ನು ಕಾಡಿಸಲಿಕ್ಕಾಗಿ ಹುಡುಗರು ಸೀಟಿ ಹೊಡೆಯುತ್ತಾರೆ.”​—⁠ಕಾರ್ಲ, ಐಯರ್ಲೆಂಡ್‌.

“ಹುಡುಗಿಯರು ಪುನಃ ಪುನಃ ಫೋನ್‌ ಮಾಡುತ್ತಾರೆ. ಅವರು ನಮ್ಮ ನಿರ್ಧಾರವನ್ನು ಸಡಿಲಿಸಲು ಪ್ರಯತ್ನಿಸುತ್ತಾರೆ.”​—⁠ಜೇಸನ್‌, ಅಮೆರಿಕ.

“ಅವನು ನನ್ನ ತೋಳನ್ನು ಮುಟ್ಟುತ್ತಾ ಇದ್ದ ಹಾಗೂ ಕೈಯನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಿದ್ದ.”​—⁠ಯುಕೀಕೊ, ಜಪಾನ್‌.

“ಹುಡುಗಿಯರು ನನ್ನೊಂದಿಗೆ ಅಶ್ಲೀಲವಾಗಿ ಮಾತಾಡುತ್ತಾರೆ.” ​—⁠ಆ್ಯಲೆಕ್ಸಾಂಡರ್‌, ಐಯರ್ಲೆಂಡ್‌.

“ಒಬ್ಬ ಹುಡುಗನು ಶಾಲಾ ಬಸ್ಸಿನಲ್ಲಿ ಕುಳಿತುಕೊಂಡು ನನಗೆ ಏನೇನೋ ಹೇಳುತ್ತಿದ್ದ. ಆದರೆ ನನ್ನೊಂದಿಗೆ ಡೇಟಿಂಗ್‌ಗೆ ಬರಲು ಅವನಿಗೆ ಇಷ್ಟವಿರಲಿಲ್ಲ. ಅವನು ಸುಮ್ಮನೆ ನನ್ನನ್ನು ಕಾಡಿಸುತ್ತಿದ್ದ.”​—⁠ರಾಸ್‌ಲಿನ್‌, ಅಮೆರಿಕ.

ಪ್ರೇಮದ ಚೆಲ್ಲಾಟವಾಡುವ ಒಂದು ನೋಟ, ಲೈಂಗಿಕ ಮನೋಭಾವದಿಂದ ಕೂಡಿದ ಒಂದು “ಅಭಿನಂದನೆ,” ಒಂದು ಅಶ್ಲೀಲ ತಮಾಷೆ, ಮನಸ್ಸಿನಲ್ಲಿ ಕೆಟ್ಟ ಭಾವನೆಗಳನ್ನಿಟ್ಟುಕೊಂಡು ಸ್ಪರ್ಶಿಸುವುದು​—⁠ಇಂತಹ ವರ್ತನೆಯು ಅನಪೇಕ್ಷಿತವಾಗಿದ್ದು, ಪುನರಾವರ್ತಿಸಲ್ಪಟ್ಟಾಗ, ಯಾವುದನ್ನು ಲೈಂಗಿಕ ಕಿರುಕುಳ ಎಂದು ಕರೆಯಸಾಧ್ಯವಿದೆಯೋ ಅದಕ್ಕೆ ಸರಿಸಮವಾಗಿರುತ್ತದೆ. ಭೌಗೋಲಿಕ ಸಂಖ್ಯಾಸಂಗ್ರಹಣಗಳನ್ನು ಪಡೆದುಕೊಳ್ಳುವುದು ಕಷ್ಟಕರವಾಗಿರುವುದಾದರೂ, ಅಮೆರಿಕದಲ್ಲಿರುವ ಶಾಲಾವಯಸ್ಸಿನ ಯುವ ಜನರಲ್ಲಿ ಅಧಿಕಾಂಶ ಮಂದಿ ಈ ಕಿರುಕುಳವನ್ನು ಅನುಭವಿಸಿದ್ದಾರೆ ಎಂದು ಸಮೀಕ್ಷೆಗಳು ತಿಳಿಸುತ್ತವೆ.

ಲೈಂಗಿಕ ಕಿರುಕುಳ ಎಂದರೇನು? ಲೈಂಗಿಕ ಕಿರುಕುಳವನ್ನು ಹಾಗೂ ಲಿಂಗಜಾತಿಯ ಪೂರ್ವಾಗ್ರಹವನ್ನು ನಿಭಾಯಿಸುವುದು (ಇಂಗ್ಲಿಷ್‌) ಎಂಬ ಡಾ. ವಿಕ್ಟೋರಿಯ ಶಾರಿಂದ ಬರೆಯಲ್ಪಟ್ಟ ಪುಸ್ತಕವು, ಅದನ್ನು ಹೀಗೆ ಅರ್ಥನಿರೂಪಿಸುತ್ತದೆ: “ಲೈಂಗಿಕವಾಗಿ ಯಾರಿಗಾದರೂ ತೊಂದರೆ ಕೊಡುವುದು . . . ಶಾರೀರಿಕವಾಗಿರಸಾಧ್ಯವಿದೆ (ಅಂದರೆ ಲೈಂಗಿಕ ಕಾಮನೆಯಿಂದ ಯಾರನ್ನಾದರೂ ಸ್ಪರ್ಶಿಸುವುದು), ಶಾಬ್ದಿಕವಾಗಿರಸಾಧ್ಯವಿದೆ (ಅಂದರೆ ಯಾರಾದರೊಬ್ಬರ ರೂಪದ ಕುರಿತು ಅಹಿತಕರವಾಗಿ ಮಾತಾಡುವುದು), ಅಥವಾ ಭಾವಾಭಿನಯಗಳಿಂದ ವ್ಯಕ್ತಪಡಿಸುವಂಥದ್ದಾಗಿರಸಾಧ್ಯವಿದೆ.” ಕೆಲವೊಮ್ಮೆ ಅಸಭ್ಯ ಲೈಂಗಿಕ ಮಾತುಕತೆಯು ಸಹ ಈ ಕಿರುಕುಳದಲ್ಲಿ ಒಳಗೂಡಿರುತ್ತದೆ.

ಶಾಲೆಯಲ್ಲಿ ಎದುರಿಸಲ್ಪಡುವಂತಹ ಕಿರುಕುಳವು ಹೆಚ್ಚಾಗಿ ನಿಮ್ಮ ಸಮಾನಸ್ಥರಿಂದ ಬರಬಹುದು. ಆದರೂ, ಕೆಲವು ಸಂದರ್ಭಗಳಲ್ಲಿ ವಯಸ್ಕರು, ಅಂದರೆ ಶಿಕ್ಷಕರೇ ಲೈಂಗಿಕ ಕಿರುಕುಳವನ್ನು ಕೊಡಬಹುದು. ರೆಡ್‌ಬುಕ್‌ ಪತ್ರಿಕೆಯಲ್ಲಿದ್ದ ಒಂದು ಲೇಖನವು ಊಹಿಸುವುದೇನೆಂದರೆ, ಲೈಂಗಿಕ ಅಪರಾಧಗಳಿಗಾಗಿ ಶಿಕ್ಷೆವಿಧಿಸಲ್ಪಟ್ಟಿರುವ ಶಿಕ್ಷಕರ ಒಂದು ಚಿಕ್ಕ ಗುಂಪು, “ಲೈಂಗಿಕ ವಿಷಯದಲ್ಲಿ ಅಪರಾಧಿಗಳಾಗಿರುವ ಶಿಕ್ಷಕರ ದೊಡ್ಡ ಸಮೂಹದ ಒಂದು ಚಿಕ್ಕ ಭಾಗವನ್ನು ಮಾತ್ರ ಪ್ರತಿನಿಧಿಸುತ್ತದೆ.”

ಬೈಬಲ್‌ ಸಮಯಗಳಲ್ಲಿ ಸಹ, ಸ್ತ್ರೀಯರು ಮತ್ತು ಕೆಲವೊಮ್ಮೆ ಪುರುಷರು ಇಂತಹ ಅಯೋಗ್ಯ ವರ್ತನೆಗೆ ಗುರಿಯಾಗಿದ್ದರು. (ಆದಿಕಾಂಡ 39:7; ರೂತಳು 2:​8, 9, 15) ಮತ್ತು ಬೈಬಲು ಈ ಕರಾಳ ವಿಷಯಗಳನ್ನು ಮುಂತಿಳಿಸಿದ್ದು: “ಕಡೇ ದಿವಸಗಳಲ್ಲಿ ಕಠಿನ ಕಾಲಗಳು ಬರುವವು. ಜನರು ಸ್ವಾರ್ಥಿಗಳು, ಲೋಭಿಗಳು, ಜಂಬಕೊಚ್ಚಿಕೊಳ್ಳುವವರು, ಮತ್ತು ಅಹಂಕಾರಿಗಳೂ ಆಗಿರುವರು . . . ; ಅವರು ನಿರ್ದಯರೂ, ಕರುಣೆಯಿಲ್ಲದವರೂ, ಚಾಡಿಹೇಳುವವರೂ, ಹಿಂಸಕರೂ, ಉಗ್ರತೆಯುಳ್ಳವರೂ ಆಗಿರುವರು.” (2 ತಿಮೊಥೆಯ 3:​1-3, ಟುಡೇಸ್‌ ಇಂಗ್ಲಿಷ್‌ ವರ್ಷನ್‌) ಆದುದರಿಂದ, ನೀವು ಸಹ ಲೈಂಗಿಕ ಕಿರುಕುಳವನ್ನು ಎದುರಿಸುವ ಸಂಭವವಿದೆ.

ದೇವರ ದೃಷ್ಟಿಕೋನ

ಲೈಂಗಿಕ ಕಿರುಕುಳದಿಂದ ಎಲ್ಲ ಯುವ ಜನರು ಕೋಪಗೊಳ್ಳುವುದಿಲ್ಲ ಎಂಬುದು ಒಪ್ಪತಕ್ಕ ವಿಷಯವೇ. ಏಕೆಂದರೆ ಇದು ಕೆಲವರಿಗೆ ವಿನೋದವಾಗಿರಬಹುದು ಅಥವಾ ಒಂದು ಚೆಲ್ಲಾಟವಾಗಿರಬಹುದು. ತಾವು ಸಹ ಇತರರಿಗೆ ಲೈಂಗಿಕ ಕಿರುಕುಳ ನೀಡಿದ್ದೇವೆಂದು, ಲೈಂಗಿಕ ಕಿರುಕುಳಕ್ಕೆ ಬಲಿಯಾದವರಲ್ಲಿ ಸುಮಾರು 75 ಪ್ರತಿಶತ ಮಂದಿ ಒಪ್ಪಿಕೊಂಡರು ಎಂದು ಅಮೆರಿಕದ ಒಂದು ಸಮೀಕ್ಷೆಯು ತೋರಿಸಿತು. ಲೈಂಗಿಕ ಆಕ್ರಮಣಶೀಲ ವರ್ತನೆಯ ಗಂಭೀರತೆಯನ್ನು ಕ್ಷುಲ್ಲಕವಾಗಿ ಎಣಿಸುವ ಮೂಲಕ, ಅಂದರೆ ಇದೊಂದು ಹುಡುಗಾಟದ ಕೃತ್ಯವೆಂದು ಕಡೆಗಣಿಸುವ ಮೂಲಕ, ಕೆಲವು ವಯಸ್ಕರು ಸಮಸ್ಯೆಯನ್ನು ಇನ್ನೂ ಗಂಭೀರಗೊಳಿಸಬಹುದು. ಆದರೆ ದೇವರು ಇದನ್ನು ಯಾವ ರೀತಿಯಲ್ಲಿ ಪರಿಗಣಿಸುತ್ತಾನೆ?

ದೇವರ ವಾಕ್ಯವಾದ ಬೈಬಲು, ಎಲ್ಲ ರೀತಿಯ ಲೈಂಗಿಕ ಕಿರುಕುಳವನ್ನು ಖಂಡಿಸುತ್ತದೆ ಎಂಬುದಂತೂ ಸ್ಪಷ್ಟ. ಲೈಂಗಿಕ ಎಲ್ಲೆಗಳನ್ನು ದಾಟಿಹೋಗುವ ಮೂಲಕ ಇತರರಿಗೆ ‘ಕೇಡುಮಾಡಬಾರದು’ ಎಂದು ನಮಗೆ ಹೇಳಲ್ಪಟ್ಟಿದೆ. (1 ಥೆಸಲೊನೀಕ 4:​3-8) ವಾಸ್ತವದಲ್ಲಿ, ‘ಯೌವನಸ್ತ್ರೀಯರನ್ನು ಪೂರ್ಣಶುದ್ಧಭಾವದಿಂದ ಅಕ್ಕತಂಗಿಯರೋಪಾದಿ’ ಉಪಚರಿಸುವಂತೆ ಯುವಕರಿಗೆ ಆಜ್ಞೆಯು ಕೊಡಲ್ಪಟ್ಟಿದೆ. (1 ತಿಮೊಥೆಯ 5:​1, 2) ಅಷ್ಟುಮಾತ್ರವಲ್ಲ, “ಅಶ್ಲೀಲ ಕುಚೋದ್ಯವನ್ನು” (NW) ಸಹ ಬೈಬಲು ಖಂಡಿಸುತ್ತದೆ. (ಎಫೆಸ 5:​3, 4) ಆದುದರಿಂದ, ಲೈಂಗಿಕ ಕಿರುಕುಳಕ್ಕೆ ಒಳಗಾದಾಗ ನೀವು ಕೋಪಗೊಳ್ಳುವ, ರೇಗುವ, ಗಲಿಬಿಲಿಗೊಳ್ಳುವ ಮತ್ತು ಅವಮಾನದ ಅನಿಸಿಕೆಯಾಗುವುದು ಸಹಜ ಮತ್ತು ಹಾಗೆ ಭಾವಿಸುವ ಹಕ್ಕು ನಿಮಗಿದೆ!

ನಾನು ಏನು ಹೇಳಬೇಕು?

ಈ ರೀತಿ ಯಾರಾದರೂ ನಿಮಗೆ ತೊಂದರೆ ಕೊಡುವಲ್ಲಿ ಆಗ ನೀವು ಹೇಗೆ ಪ್ರತಿಕ್ರಿಯಿಸಬೇಕು? ಕೆಲವೊಮ್ಮೆ ಅಸ್ಪಷ್ಟವಾದ ಹಾಗೂ ಅನಿಶ್ಚಿತವಾದ ಉತ್ತರವು, ನಿಮಗೆ ಕಿರುಕುಳ ಕೊಡುವಂತಹ ವ್ಯಕ್ತಿಯು ತನ್ನ ಕಿರುಕುಳವನ್ನು ಇನ್ನೂ ಹೆಚ್ಚಿಸುವಂತೆ ಮಾಡಬಹುದು. ಯೋಸೇಫನ ಧಣಿಯ ಪತ್ನಿಯು ಯೋಸೇಫನನ್ನು ಸಂಗಮಕ್ಕೆ ಕರೆದಾಗ, ಅವನು ಕೇವಲ ಅವಳ ಮಾತನ್ನು ತಳ್ಳಿಹಾಕಲಿಲ್ಲ ಎಂದು ಬೈಬಲು ನಮಗೆ ಹೇಳುತ್ತದೆ. ಬದಲಾಗಿ, ಅವಳ ಅನೈತಿಕ ಪ್ರಸ್ತಾಪವನ್ನು ಖಡಾಖಂಡಿತವಾಗಿ ನಿರಾಕರಿಸಿದನು. (ಆದಿಕಾಂಡ 39:​8, 9, 12) ಇಂದು ಸಹ, ದೃಢವಾದ ಹಾಗೂ ನೇರವಾದ ಉತ್ತರವು, ಲೈಂಗಿಕ ಕಿರುಕುಳವನ್ನು ತಡೆಗಟ್ಟಲಿಕ್ಕಾಗಿರುವ ಅತ್ಯುತ್ತಮ ಮಾರ್ಗವಾಗಿದೆ.

ನಿಮಗೆ ತೊಂದರೆಯನ್ನು ಉಂಟುಮಾಡುತ್ತಿರುವ ವ್ಯಕ್ತಿಯು, ನಿಮಗೆ ಕೋಪವನ್ನೆಬ್ಬಿಸಲಿಕ್ಕಾಗಿ ಹಾಗೆ ಮಾಡುತ್ತಿಲ್ಲದಿರಬಹುದು. ನೀವು ಯಾವುದನ್ನು ಕಿರುಕುಳವೆಂದು ನೆನಸುತ್ತೀರೋ ಅದು, ನಿಮ್ಮ ಗಮನವನ್ನು ಸೆಳೆದುಕೊಳ್ಳಲಿಕ್ಕಾಗಿ ಮಾಡಲ್ಪಡುವ ಅಸಭ್ಯ ಪ್ರಯತ್ನವಾಗಿರಬಹುದು. ಆದುದರಿಂದ, ಈ ಅನಪೇಕ್ಷಿತ ಪ್ರೇಮಸಂಧಾನವನ್ನು ನಿಲ್ಲಿಸಲಿಕ್ಕಾಗಿ ನೀವು ಅನಾಗರಿಕ ನಡವಳಿಕೆಯನ್ನೇ ಉಪಯೋಗಿಸುವುದು ಒಳಿತು ಎಂದು ನೆನಸಬೇಡಿರಿ. ‘ಈ ರೀತಿ ಮಾತಾಡುವುದು ನನಗೆ ಹಿಡಿಸುವುದಿಲ್ಲ’ ಅಥವಾ ‘ದಯವಿಟ್ಟು ನೀನು ನನ್ನನ್ನು ಮುಟ್ಟಬೇಡ’ ಎಂದು ಹೇಳುವುದರಿಂದ, ಈ ವಿಷಯದಲ್ಲಿ ನಿಮ್ಮ ದೃಷ್ಟಿಕೋನವೇನು ಎಂಬುದು ಆ ವ್ಯಕ್ತಿಗೆ ನೇರವಾಗಿ ಗೊತ್ತಾಗುವುದು. ನೀವು ಏನೇ ಹೇಳಲಿ, ನಿಮ್ಮ ಉತ್ತರವು ಖಡಾಖಂಡಿತವಾಗಿರಬೇಕು. ಇಲ್ಲವೆಂದರೆ ಇಲ್ಲ! ಆ್ಯಂಡ್ರಿಯ ಎಂಬ ಯುವತಿಯೊಬ್ಬಳು ಈ ರೀತಿಯಲ್ಲಿ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾಳೆ: “ನಿಮ್ಮ ವರ್ತನೆಯು ಅವರಿಗೆ ಅರ್ಥವಾಗದಿದ್ದಲ್ಲಿ, ನೀವು ನೇರವಾಗಿ ಅವರೊಂದಿಗೆ ಮಾತಾಡಬೇಕು. ಕೆಲವೊಮ್ಮೆ ನೀವು ದಯದಾಕ್ಷಿಣ್ಯವಿಲ್ಲದೆ ಮಾತಾಡಬೇಕಾಗುತ್ತದೆ.” ‘ನಿಲ್ಲಿಸುತ್ತೀಯೊ ಇಲ್ಲವೋ!’ ಎಂದು ದೃಢವಾಗಿ ಹೇಳುವುದು ಸಹ ಪರಿಣಾಮಕಾರಿಯಾಗಿರಬಹುದು.

ಸನ್ನಿವೇಶವು ಇನ್ನೂ ಗಂಭೀರವಾಗುವಲ್ಲಿ, ನೀವೇ ಒಂಟಿಯಾಗಿ ವಿಷಯಗಳನ್ನು ನಿರ್ವಹಿಸಲು ಪ್ರಯತ್ನಿಸಬೇಡಿರಿ. ಅದಕ್ಕೆ ಬದಲಾಗಿ, ನಿಮ್ಮ ಹೆತ್ತವರೊಂದಿಗೆ ಮತ್ತು ಇತರ ಪ್ರೌಢ ವಯಸ್ಕರೊಂದಿಗೆ ಈ ವಿಷಯವನ್ನು ಚರ್ಚಿಸಲು ಪ್ರಯತ್ನಿಸಿರಿ. ಈ ಸನ್ನಿವೇಶದೊಂದಿಗೆ ವ್ಯವಹರಿಸಲಿಕ್ಕಾಗಿ ಅವರು ಕೆಲವು ಪ್ರಾಯೋಗಿಕ ಸಲಹೆಗಳನ್ನು ಕೊಡಬಹುದು. ಕೊನೆಯ ಪ್ರಯತ್ನದೋಪಾದಿ, ಶಾಲೆಯ ಅಧಿಕಾರಿಗಳಿಗೆ ಈ ವಿಷಯದ ಕುರಿತು ತಿಳಿಸುವ ಪ್ರಯತ್ನವನ್ನೂ ಅವರು ಮಾಡಬಹುದು. ಹೀಗೆ ಮಾಡುವುದು ನಿಮ್ಮನ್ನು ತುಂಬ ಪೇಚಾಟಕ್ಕೆ ಸಿಕ್ಕಿಸುವುದಾದರೂ, ಇದು ಇನ್ನೂ ಹೆಚ್ಚಿನ ತೊಂದರೆಯಿಂದ ನಿಮ್ಮನ್ನು ಕಾಪಾಡಸಾಧ್ಯವಿದೆ.

ಕಿರುಕುಳವನ್ನು ತಡೆಗಟ್ಟುವುದು

ಮೊದಲನೆಯದಾಗಿ ಈ ಕಿರುಕುಳಕ್ಕೆ ಬಲಿಯಾಗುವುದರಿಂದ ದೂರವಿರುವುದೇ ಅತ್ಯುತ್ತಮವಾದ ಮಾರ್ಗವಾಗಿದೆ ಎಂಬುದಂತೂ ನಿಶ್ಚಯ. ಈ ವಿಷಯದಲ್ಲಿ ಯಾವುದು ಸಹಾಯಮಾಡಬಹುದು? ಆ್ಯಂಡ್ರಿಯ ಸಲಹೆ ನೀಡುವುದು: “ನಿಮಗೆ ಅವರಲ್ಲಿ ಆಸಕ್ತಿಯಿದೆ ಎಂಬ ಅಭಿಪ್ರಾಯವನ್ನು ಮೂಡಿಸದಿರಿ. ಏಕೆಂದರೆ ಅದರ ಕುರಿತು ಬೇರೆಯವರು ಕೇಳಿಸಿಕೊಳ್ಳುವರು, ಮತ್ತು ನಿಮ್ಮ ಮೇಲಿನ ಒತ್ತಡವು ಇನ್ನೂ ಹೆಚ್ಚಾಗುವುದು.” ನೀವು ಯಾವ ರೀತಿ ಉಡುಪು ಧರಿಸುತ್ತೀರಿ ಎಂಬುದು ಪ್ರಮುಖ ಪಾತ್ರವನ್ನು ವಹಿಸಸಾಧ್ಯವಿದೆ. ಯುವಪ್ರಾಯದ ಮಾರ ಹೇಳುವುದು: “ನಾನು ಹಳೆಯ ಕಾಲದ ಅಜ್ಜಿಯಂತೆ ಉಡುಪು ಧರಿಸುವುದಿಲ್ಲ, ಅದೇ ಸಮಯದಲ್ಲಿ ನನ್ನ ದೇಹಕ್ಕೆ ಗಮನಸೆಳೆಯುವಂತಹ ರೀತಿಯ ಬಟ್ಟೆಗಳನ್ನು ಸಹ ನಾನು ಹಾಕಿಕೊಳ್ಳುವುದಿಲ್ಲ.” ಲೈಂಗಿಕ ಪ್ರಸ್ತಾಪಗಳನ್ನು ತಿರಸ್ಕರಿಸುತ್ತಾ, ಅದೇ ಸಮಯದಲ್ಲಿ ಲೈಂಗಿಕ ಕಾಮನೆಗಳನ್ನು ಬಡಿದೆಬ್ಬಿಸುವಂತಹ ಬಟ್ಟೆಗಳನ್ನು ಧರಿಸುತ್ತಾ ಇರುವಲ್ಲಿ, ಇದು ಗೊಂದಲಮಯ ಅನಿಸಿಕೆಯನ್ನು ವ್ಯಕ್ತಪಡಿಸುವಂತಿರಬಹುದು. ಆದುದರಿಂದಲೇ, “ಸಭ್ಯತೆಯಿಂದ ಹಾಗೂ ಸ್ವಸ್ಥಮನಸ್ಸನಿಂದ” ಉಡುಪನ್ನು ಧರಿಸುವಂತೆ ಬೈಬಲು ಶಿಫಾರಸ್ಸುಮಾಡುತ್ತದೆ.​—⁠1 ತಿಮೊಥೆಯ 2:​9, NW.

ನೀವು ಸ್ನೇಹಿತರನ್ನು ಆಯ್ಕೆಮಾಡುವ ವಿಧವು ಸಹ, ನೀವು ಹೇಗೆ ಉಪಚರಿಸಲ್ಪಡುತ್ತೀರಿ ಎಂಬುದರ ಮೇಲೆ ಪ್ರಭಾವ ಬೀರುತ್ತದೆ. (ಜ್ಞಾನೋಕ್ತಿ 13:20) ಈ ವಿಷಯದಲ್ಲಿ ರಾಸ್‌ಲಿನ್‌ ಹೇಳುವುದು: “ಒಂದು ಗುಂಪಿನಲ್ಲಿರುವ ಕೆಲವು ಹುಡುಗಿಯರು ಹುಡುಗರ ಕೀಟಲೆಯನ್ನು ಇಷ್ಟಪಡುವಲ್ಲಿ, ಆ ಗುಂಪಿನಲ್ಲಿರುವ ಎಲ್ಲ ಹುಡುಗಿಯರು ತಮ್ಮ ಕೀಟಲೆಯನ್ನು ಇಷ್ಟಪಡುತ್ತಾರೆ ಎಂದು ಹುಡುಗರು ನೆನಸಬಹುದು.” ಕಾರ್ಲಳೂ ಅದೇ ಮಾತನ್ನು ಹೇಳಿದಳು: “ಹುಡುಗರ ಮಾತುಗಳಿಗೆ ತಲೆಬಾಗುವ ಅಥವಾ ಹುಡುಗರ ಕೀಟಲೆಯನ್ನು ಇಷ್ಟಪಡುವಂತಹ ಹುಡುಗಿಯರೊಂದಿಗೆ ನೀವು ಸಹವಾಸಮಾಡುವಲ್ಲಿ, ನೀವು ಸಹ ಲೈಂಗಿಕ ಕಿರುಕುಳವನ್ನು ಅನುಭವಿಸುವಿರಿ.”

ದೀನ ಎಂಬ ಹೆಸರಿನ ಯುವತಿಯ ಕುರಿತು ಬೈಬಲು ನಮಗೆ ಹೇಳುತ್ತದೆ. ತಮ್ಮ ಸಡಿಲು ನಡತೆಗೆ ಪ್ರಖ್ಯಾತರಾಗಿದ್ದ ಕಾನಾನ್ಯ ಯುವತಿಯರೊಂದಿಗೆ ದೀನಳು ಸ್ನೇಹ ಬೆಳೆಸಿದಳು. ಇದರ ಪರಿಣಾಮವಾಗಿ ಅವಳು ಲೈಂಗಿಕ ದುರಾಕ್ರಮಣಕ್ಕೆ ತುತ್ತಾದಳು. (ಆದಿಕಾಂಡ 34:​1, 2) ಸಕಾರಣದಿಂದಲೇ ಬೈಬಲು ಹೇಳುವುದು: “ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ [“ಕಟ್ಟುನಿಟ್ಟಾಗಿ,” NW] ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ.” (ಎಫೆಸ 5:15) ಹೌದು, ನೀವು ಹೇಗೆ ಉಡುಪು ಧರಿಸುತ್ತೀರಿ, ಹೇಗೆ ಮಾತಾಡುತ್ತೀರಿ, ಮತ್ತು ನೀವು ಯಾರೊಂದಿಗೆ ಸಹವಾಸಮಾಡುತ್ತೀರಿ ಎಂಬ ವಿಷಯದಲ್ಲಿ “ಕಟ್ಟುನಿಟ್ಟಾಗಿ”ರುವುದು, ಲೈಂಗಿಕ ಕಿರುಕುಳದಿಂದ ನಿಮ್ಮನ್ನು ಸಂರಕ್ಷಿಸಲು ಹೆಚ್ಚಿನ ಸಹಾಯವನ್ನು ನೀಡಸಾಧ್ಯವಿದೆ.

ಆದರೂ, ಕ್ರೈಸ್ತ ಯುವಜನರು ಲೈಂಗಿಕ ಕಿರುಕುಳವನ್ನು ಅನುಭವಿಸುವುದರಿಂದ ದೂರವಿರುವ ಅತ್ಯಂತ ಪರಿಣಾಮಕಾರಿಯಾದ ವಿಧವು, ನಿಮ್ಮ ಧಾರ್ಮಿಕ ನಿಲುವಿನ ಕುರಿತು ಇತರರಿಗೆ ಹೇಳುವುದೇ ಆಗಿದೆ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರುವ ಯುವ ಟೇಮೊನ್‌ ಜ್ಞಾಪಿಸಿಕೊಳ್ಳುವುದು: “ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೆಂಬುದು ನನ್ನ ಸಹಪಾಠಿಗಳಿಗೆ ತಿಳಿದಿತ್ತು, ಇದು ಬಹುಮಟ್ಟಿಗೆ ಎಲ್ಲ ಲೈಂಗಿಕ ಕಿರುಕುಳವನ್ನು ನಿಲ್ಲಿಸಿಬಿಟ್ಟಿತು.” ಆ್ಯಂಡ್ರಿಯ ಹೇಳುವುದು: “ನಾನು ಒಬ್ಬ ಯೆಹೋವನ ಸಾಕ್ಷಿಯೆಂದು ಅವರಿಗೆ ಹೇಳುವುದು ಬಹಳ ಪ್ರಾಮುಖ್ಯವಾದದ್ದಾಗಿದೆ. ಆಗ, ಅನೇಕ ವಿಧಗಳಲ್ಲಿ ನೀವು ಅವರಿಗಿಂತ ಭಿನ್ನರಾಗಿದ್ದೀರಿ ಮತ್ತು ಕಟ್ಟುನಿಟ್ಟಾದ ನೈತಿಕ ಮಟ್ಟಗಳು ನಿಮಗಿವೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳುವರು.”​—⁠ಮತ್ತಾಯ 5:​15, 16.

ಒಂದುವೇಳೆ ನಿಮಗೆ ಕಿರುಕುಳ ಕೊಡಲ್ಪಟ್ಟಲ್ಲಿ

ಕೆಲವೊಮ್ಮೆ ನೀವು ಎಷ್ಟೇ ಪ್ರಯತ್ನಪಟ್ಟರೂ, ಒರಟಾದ ಹಾಗೂ ಕಿರುಕುಳ ಕೊಡುವಂತಹ ಜನರಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಿರಬಹುದು. ಆದರೆ, ಒಬ್ಬ ವ್ಯಕ್ತಿಯ ಲೈಂಗಿಕ ಕಿರುಕುಳಕ್ಕೆ ನೀವು ಬಲಿಪಶುವಾಗುವಲ್ಲಿ, ನೀವು ಎಷ್ಟರ ತನಕ ಒಬ್ಬ ಕ್ರೈಸ್ತರೋಪಾದಿ ವರ್ತಿಸುತ್ತೀರೋ ಅಷ್ಟರ ವರೆಗೆ ದೋಷಿಭಾವವನ್ನು ತಾಳುವ ಅಗತ್ಯವಿಲ್ಲ. (1 ಪೇತ್ರ 3:​16, 17) ಒಂದುವೇಳೆ ಈ ಸನ್ನಿವೇಶದಿಂದ ನೀವು ಭಾವನಾತ್ಮಕವಾಗಿ ಸಂಕಟವನ್ನು ಅನುಭವಿಸುವಲ್ಲಿ, ನಿಮ್ಮ ಹೆತ್ತವರೊಂದಿಗೆ ಅಥವಾ ಕ್ರೈಸ್ತ ಸಭೆಯಲ್ಲಿರುವ ಪ್ರೌಢರೊಂದಿಗೆ ಮಾತಾಡುವ ಮೂಲಕ ಬೆಂಬಲವನ್ನು ಪಡೆದುಕೊಳ್ಳಿರಿ. ನೀವು ಲೈಂಗಿಕ ಕಿರುಕುಳವನ್ನು ಅನುಭವಿಸುತ್ತಿರುವಾಗ, ಸ್ವತಃ ನಿಮ್ಮ ಬಗ್ಗೆ ಒಳ್ಳೆಯ ಅನಿಸಿಕೆಯುಂಟಾಗುವುದು ತುಂಬ ಕಷ್ಟ ಎಂದು ರಾಸ್‌ಲಿನ್‌ ಒಪ್ಪಿಕೊಳ್ಳುತ್ತಾಳೆ. “ನೀವು ಯಾರೊಂದಿಗೆ ಮನಬಿಚ್ಚಿ ಮಾತಾಡಬಲ್ಲಿರೋ ಅಂತಹ ಒಬ್ಬ ವ್ಯಕ್ತಿಯೊಂದಿಗೆ ಸಹವಾಸಮಾಡುವುದು ತುಂಬ ಸಹಾಯಕಾರಿಯಾಗಿರುವುದು” ಎಂದು ಅವಳು ಹೇಳುತ್ತಾಳೆ. ಅಷ್ಟುಮಾತ್ರವಲ್ಲ, “ಯೆಹೋವನಿಗೆ ಮೊರೆಯಿಡುವವರು, ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ” ಎಂಬುದನ್ನು ಎಂದೂ ಮರೆಯದಿರಿ.​—⁠ಕೀರ್ತನೆ 145:​18, 19.

ಅಯೋಗ್ಯವರ್ತನೆಯ ವಿರುದ್ಧ ಒಂದು ನಿಲುವನ್ನು ತೆಗೆದುಕೊಳ್ಳುವುದು ಅಷ್ಟೇನೂ ಸುಲಭವಾದ ಸಂಗತಿಯಲ್ಲ, ಆದರೂ ಪ್ರಯತ್ನಪಡಬೇಕಾಗಿದೆ. ಉದಾಹರಣೆಗೆ, ಶೂನೇಮ್‌ನ ಯುವತಿಯೊಬ್ಬಳ ಕುರಿತಾದ ಬೈಬಲ್‌ ವೃತ್ತಾಂತವನ್ನು ಪರಿಗಣಿಸಿರಿ. ಇಂದು ಕಿರುಕುಳ ಎಂಬ ಶಬ್ದವು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳಲ್ಪಟ್ಟಿರುವಂತಹ ರೀತಿಯಲ್ಲಿ ಈ ಯುವತಿಯು ಕಿರುಕುಳವನ್ನು ಅನುಭವಿಸಿರಲಿಲ್ಲವಾದರೂ, ಯೆಹೂದದ ಧನಿಕ ಹಾಗೂ ಪ್ರಬಲ ಅರಸನಾಗಿದ್ದ ಸೊಲೊಮೋನನು ಇವಳೊಂದಿಗೆ ಅನಪೇಕ್ಷಿತವಾದ ಲೈಂಗಿಕ ಪ್ರಸ್ತಾಪಗಳನ್ನು ಮಾಡಿದನು. ಆದರೆ ಇವಳು ಇನ್ನೊಬ್ಬ ಪುರುಷನನ್ನು ಪ್ರೀತಿಸುತ್ತಿದ್ದುದರಿಂದ, ಈ ಪ್ರಸ್ತಾಪಗಳನ್ನು ಅವಳು ನಿರಾಕರಿಸಿದಳು. ಆದುದರಿಂದ, “ನಾನು ಕೋಟೆ” ಎಂದು ಅವಳು ತನ್ನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಶಕ್ತಳಾದಳು.​—⁠ಪರಮ ಗೀತ 8:​4, 10.

ನೀವು ಸಹ ತದ್ರೀತಿಯ ನೈತಿಕ ಬಲ ಹಾಗೂ ದೃಢನಿರ್ಧಾರವನ್ನು ತೋರಿಸಿರಿ. ಅನಪೇಕ್ಷಿತವಾದ ಲೈಂಗಿಕ ಪ್ರಸ್ತಾಪಗಳು ಮಾಡಲ್ಪಟ್ಟಾಗ ನೀವು “ಕೋಟೆ”ಯಂತಿರಿ. ನಿಮ್ಮ ಸುತ್ತಲಿರುವ ಪ್ರತಿಯೊಬ್ಬರಿಗೆ ನಿಮ್ಮ ಕ್ರೈಸ್ತ ನಿಲುವನ್ನು ಸ್ಪಷ್ಟವಾಗಿ ತಿಳಿಯಪಡಿಸಿರಿ. ಹೀಗೆ ಮಾಡುವ ಮೂಲಕ ನೀವು “ನಿರ್ದೋಷಿಗಳೂ ಯಥಾರ್ಥ ಮನಸ್ಸುಳ್ಳವರೂ” ಆಗಿ ಉಳಿಯಸಾಧ್ಯವಿದೆ ಮತ್ತು ನೀವು ದೇವರನ್ನು ಸಂತೋಷಪಡಿಸಿದ್ದೀರಿ ಎಂಬ ಆತ್ಮವಿಶ್ವಾಸವೂ ನಿಮಗಿರಸಾಧ್ಯವಿದೆ.​—⁠ಫಿಲಿಪ್ಪಿ 2:15. *

[ಪಾದಟಿಪ್ಪಣಿ]

^ ಲೈಂಗಿಕ ಕಿರುಕುಳದ ಕುರಿತಾದ ಹೆಚ್ಚಿನ ಸಲಹೆಯು ಎಚ್ಚರ! ಪತ್ರಿಕೆಯ ಈ ಸಂಚಿಕೆಗಳಲ್ಲಿ ಕೊಡಲ್ಪಟ್ಟಿದೆ: ಜೂನ್‌ 8, 1996; ಸೆಪ್ಟೆಂಬರ್‌ 8, 1995; ಮತ್ತು ಮೇ 22, 1991 (ಇಂಗ್ಲಿಷ್‌).

[ಪುಟ 26ರಲ್ಲಿರುವ ಚಿತ್ರ]

ನಿಮ್ಮ ಕ್ರೈಸ್ತ ನಂಬಿಕೆಗಳನ್ನು ಎಲ್ಲರಿಗೂ ತಿಳಿಸುವುದು, ಒಂದು ರೀತಿಯ ಸಂರಕ್ಷಣೆಯಾಗಿರಸಾಧ್ಯವಿದೆ

[ಪುಟ 26ರಲ್ಲಿರುವ ಚಿತ್ರ]

ಹುಡುಗರ ಕೀಟಲೆಗೆ ಸ್ಪಂದಿಸುವಂತಹ ಗುಂಪಿನೊಂದಿಗೆ ಸೇರದಿರುವ ಮೂಲಕ, ನೀವು ಕಿರುಕುಳವನ್ನು ತಡೆಗಟ್ಟಬಹುದು