ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಸ್ಟ್ರೇಲಿಯದ ಕೊಂಡಿಹೀನ ಜೇನ್ನೊಣವ ಬಂದು ನೋಡಿ

ಆಸ್ಟ್ರೇಲಿಯದ ಕೊಂಡಿಹೀನ ಜೇನ್ನೊಣವ ಬಂದು ನೋಡಿ

ಆಸ್ಟ್ರೇಲಿಯದ ಕೊಂಡಿಹೀನ ಜೇನ್ನೊಣವ ಬಂದು ನೋಡಿ

ಆಸ್ಟ್ರೇಲಿಯದ ಎಚ್ಚರ! ಸುದ್ದಿಗಾರರಿಂದ

ಯಾವಾಗಲಾದರೊಮ್ಮೆ, ವಸಂತ ಕಾಲದಲ್ಲಿ ಮಿರಮಿರನೆ ಮಿಂಚುತ್ತಿರುವ ಸೂರ್ಯನ ರಶ್ಮಿಯಲ್ಲಿ ಹೂವಿನಿಂದ ಹೂವಿಗೆ, ಗುಂಯ್ಯ್‌ ಎಂದು ಶಬ್ದ ಮಾಡುತ್ತಾ ಹಾರುತ್ತಿರುವ ಜೇನುನೊಣಗಳನ್ನು ನೋಡುತ್ತಾ, ನಿಮ್ಮೊಡಲಿನ ದುಃಖವನ್ನೆಲ್ಲಾ ಚೆಲ್ಲಿಬಿಟ್ಟಿದ್ದೀರೋ? ನಿಜವಾಗಿಯೂ ಅವು ಕಣ್ಮನಕ್ಕೆ ತಂಪೆರೆಯುವ ಸುಂದರ ಜೀವಿಗಳು. ಹಾಂ, ಅದು ಕುಟುಕದಿದ್ದರೆ ಮಾತ್ರ!

ಕೊಂಡಿಹೀನ ಜೇನ್ನೊಣಗಳಿವೆ ಎಂದರೆ ನೀವು ಬಾಯಿಯ ಮೇಲೆ ಬೆರಳಿಡುವಿರಿ. ಇವುಗಳನ್ನು ಆಸ್ಟ್ರೇಲಿಯದ ಕೊಂಡಿಹೀನ ಜೇನ್ನೊಣಗಳು ಎಂದು ಕರೆಯುತ್ತಾರೆ ಮತ್ತು ಇವುಗಳನ್ನು ಪೂರ್ವ ಆಸ್ಟ್ರೇಲಿಯದ ಅನೇಕ ಭಾಗಗಳಲ್ಲಿ ಕಂಡುಕೊಳ್ಳಬಹುದು. ಈ ಕೊಂಡಿಹೀನ ಜೇನ್ನೊಣಗಳು ನಾಲ್ಕು ಮಿಲಿಮೀಟರುಗಳಿಗಿಂತಲೂ ಸ್ವಲ್ಪ ಉದ್ದವಾಗಿರುತ್ತವೆ. ಅವು ಕಪ್ಪು ಬಣ್ಣದ್ದಾಗಿದ್ದು, ಮುಖಗಳ ಮತ್ತು ಪಕ್ಕಗಳಲ್ಲಿ ಬಿಳಿಯ ಕೂದಲನ್ನು ಹೊಂದಿರುತ್ತವೆ. ಇವುಗಳಲ್ಲಿ ಅನೇಕ ಜೇನ್ನೊಣಗಳ ದೇಹದ ಮಧ್ಯಭಾಗದ ಬೆನ್ನಿನ ಪಕ್ಕಗಳ ಮೇಲೆ ಪುಟ್ಟ ಪುಟ್ಟ ಹಳದಿ ಚುಕ್ಕೆಗಳಿರುತ್ತವೆ. ಉತ್ತರಭಾಗದ ಕ್ವೀನ್ಸ್‌ಲ್ಯಾಂಡ್‌ನಿಂದ ಸದರ್ನ್‌ ನ್ಯೂ ಸೌತ್‌ ವೇಲ್ಸ್‌ ವರೆಗೆ ಕರಾವಳಿಯುದ್ದಕ್ಕೂ ಏನಿಲ್ಲವೆಂದರೂ, ಹತ್ತು ಜಾತಿಯ ಕೊಂಡಿಹೀನ ಜೇನ್ನೊಣಗಳನ್ನು ಕಂಡುಕೊಳ್ಳಬಹುದು. ಕೆಲವನ್ನು ಖಂಡದ ಉಷ್ಣವಲಯದ ಉತ್ತರಭಾಗದಲ್ಲಿ ಕಂಡುಕೊಳ್ಳಲಾಗಿದೆ.

ಜೇನುಗೂಡುಗಳಿಂದ ಜೇನನ್ನು ತೆಗೆಯುವವರಿಗೆ ಸಿಗುವ ಪ್ರಯೋಜನಗಳ ಬಗ್ಗೆ ಸ್ವಲ್ಪ ಯೋಚಿಸಿ. ಒಬ್ಬ ಜೇನುಸಾಕಣೆಗಾರನು ಹೇಳುವುದು: “[ಬೇರೆ ಜೇನ್ನೊಣಗಳ ಜಾತಿಗಳೊಂದಿಗೆ] ಕೆಲಸಮಾಡುವಾಗ ನಾನು ಜೇನ್ನೊಣಗಳ ಮುಸುಕು ಹಾಗೂ ತುಂಬುಕತ್ತಿನ ಸ್ವೆಟರ್‌ ಅನ್ನು ಧರಿಸುತ್ತೇನೆ. ಅದರೆ [ಕೊಂಡಿಹೀನ ಜೇನ್ನೊಣಗಳೊಂದಿಗೆ] ಕೆಲಸಮಾಡುವಾಗ ಅವುಗಳಿಂದ ನನ್ನನ್ನು ರಕ್ಷಿಸಿಕೊಳ್ಳಲು ಏನೂ ಬೇಕಾಗಿಲ್ಲ. ಜೇನುಗೂಡಿನ ಪೆಟ್ಟಿಗೆ ತೆರೆದು ಐದು ನಿಮಿಷಗಳು ಆದ ಬಳಿಕವೂ, ನಾನು ಅಲ್ಲಿ ಇದ್ದೇನೆಂಬ ಪರಿವೆ ಸಹ ಇಲ್ಲದೆ ಅವು ತಮ್ಮ ಪಾಡಿಗೆ ತಾವು ಕೆಲಸಮಾಡುತ್ತಿರುತ್ತವೆ.”

ಈ ಕೊಂಡಿಹೀನ ಜೇನ್ನೊಣಗಳ ಜೇನುಗೂಡುಗಳು ಇತರ ಜೇನ್ನೊಣಗಳಿಗಿಂತ ತುಂಬ ಭಿನ್ನವಾಗಿರುತ್ತವೆ. ವಾಸ್ತವದಲ್ಲಿ, ಅವುಗಳನ್ನು ಗೂಡುಗಳೆಂದೇ ಕರೆಯುತ್ತಾರೆ. ತಮ್ಮ ಜೇನು ಹಾಗೂ ಪರಾಗವನ್ನು ಮಾಮೂಲಿಯಾದ ಷಡ್ಭುಜದಾಕಾರದ ಜೇನುಗೂಡಿನಲ್ಲಿ ಶೇಖರಿಸಲಿಕ್ಕೆ ಬದಲಾಗಿ, ಇವು ಅಂಡಾಕಾರದ ಕುಂಡಗಳ ಜೊಂಪೆಗಳನ್ನು ಕಟ್ಟುತ್ತವೆ. ಅವು ತುಂಬಿದ ನಂತರ ಆ ಕುಂಡಗಳನ್ನು ಸೀಲ್‌ ಮಾಡಲಾಗುತ್ತದೆ ಮತ್ತು ಅವುಗಳ ಮೇಲೆ ಇಲ್ಲವೆ ಅದರ ಸುತ್ತಲೂ ಇತರ ಕುಂಡಗಳು ಕಟ್ಟಲ್ಪಡುತ್ತವೆ.

ಗೂಡಿನೊಳಗೆ

ಬನ್ನಿ, 15,000 ಕೊಂಡಿಹೀನ ಜೇನ್ನೊಣಗಳಿರುವ ಗೂಡಿನ ಕಲ್ಪನಾಲೋಕಕ್ಕೆ ಹೋಗೋಣ. ಆದರೆ ಎಚ್ಚರಿಕೆ! ಈ ಜೇನ್ನೊಣಗಳು ಕುಟುಕದಿದ್ದರೂ ತಮ್ಮ ಬಾಯಿಂದ ನಿಮ್ಮನ್ನು ಕಚ್ಚಬಹುದು.

ಗೂಡಿನ ಮಧ್ಯಭಾಗದ ಓಣಿಯಿಂದ ಹಾದುಹೋಗುವಾಗ, ನಾವು ಭರಾಟೆಯಿಂದ ಕೆಲಸನಡೆಯುತ್ತಿರುವ ಲೋಕವೊಂದನ್ನು ನೋಡಸಾಧ್ಯವಿದೆ. ಈ ಜೇನ್ನೊಣಗಳು ಒಗ್ಗಟ್ಟಿನಿಂದ ತಂಡವಾಗಿ ಕೆಲಸಮಾಡುತ್ತವೆ. ಪ್ರತಿಯೊಂದು ಜೇನ್ನೊಣಕ್ಕೂ ಏನು ಮಾಡಬೇಕು ಹಾಗೂ ಎಲ್ಲಿ ಕೆಲಸದ ಅಗತ್ಯವಿದೆ ಎಂಬುದು ಕರಾರುವಾಕ್ಕಾಗಿ ಗೊತ್ತಿರುತ್ತದೆ. ಒಂದು ಪುಟ್ಟ ಜೇನ್ನೊಣವು, ಪರಿಪೂರ್ಣವಾದ ಬ್ಲೂಪ್ರಿಂಟನ್ನು ಅನುಸರಿಸುತ್ತಿದೆಯೋ ಎಂಬಂತೆ ಕಣ್ಣಲ್ಲಿ ಕಣ್ಣಿಟ್ಟು ಹೊಸದಾದ ಒಂದು ಜೇನಿನ ಕುಂಡಕ್ಕೆ ಆಕಾರಕೊಡುತ್ತಾ, ಪಾಲಿಷ್‌ ಮಾಡುತ್ತಾ ಇರುವುದನ್ನು ನಾವು ಕಾಣುತ್ತೇವೆ. ನಮ್ಮ ಪಕ್ಕದಲ್ಲಿಯೇ ಇನ್ನೂ ನಾಲ್ಕು ಜೇನ್ನೊಣಗಳು ಈಗ ತಾನೇ ಜೇನಿನಿಂದ ತುಂಬಿಕೊಂಡ ಕುಂಡವೊಂದನ್ನು ಮುಚ್ಚುತ್ತಿವೆ. ಒಂದು ದೊಡ್ಡ ತ್ರಿಪರಿಮಾಣದ ಜಾಲರಿ ಚೌಕಟ್ಟಿನೊಳಗೆ ಜೇನಿನ ಕುಂಡಗಳು ಕಟ್ಟಲ್ಪಡುತ್ತವೆ. ಈ ಕುಶಲ ಕೆಲಸಗಾರಿಕೆಯು ಜೇನಿನ ತೂಕವನ್ನು ಹೊರಲು ನೆರವಾಗುತ್ತದೆ.

ನಾವೀಗ ಮುಂದಿನ ವಿಭಾಗಕ್ಕೆ ಬರುತ್ತೇವೆ. ಇಲ್ಲಿ ಬೇರೆ ಜೇನ್ನೊಣಗಳಗಿಂತಲೂ ಬಹಳ ದೊಡ್ಡದಾಗಿರುವ ಒಂದು ಜೇನ್ನೊಣವನ್ನು ನೋಡುತ್ತೇವೆ. ಬೆಡಗುಬಿನ್ನಾಣದ ರಾಣಿಯೇ ಇವಳು! ಕಪ್ಪು ಹಾಗೂ ಹೊಂಬಣ್ಣದ ಪಟ್ಟೆಗಳುಳ್ಳ ಮತ್ತು ಸುತ್ತುಮುತ್ತಲೂ ಇನ್ನಿತರ ಕಾರ್ಯಮಗ್ನ ಜೇನ್ನೊಣಗಳಿಂದ ಸುತ್ತುವರಿದಿರುವ ಇವಳು ಎಂತಹ ಮೋಹಕ ಚೆಲುವೆ! ಅವಳಿಗಾಗಿ ಸಿದ್ಧಪಡಿಸಿರುವ 60 ಕೋಶಗಳಲ್ಲಿ ಈ ರಾಣಿ ಈಗ ಮೊಟ್ಟೆಗಳನ್ನಿಡುತ್ತಾಳೆ. ಎಷ್ಟೊಂದು ನಯನಾಜೂಕಿನಿಂದ ಹಾಗೂ ಕರಾರುವಾಕ್ಕಾಗಿ ಮೊಟ್ಟೆಯನ್ನಿಡುತ್ತಾಳೆ. ಇವಳು ಮಗುವನ್ನು ತೊಟ್ಟಿಲಲ್ಲಿ ಮಲಗಿಸುತ್ತಿರುವ ತಾಯಿಯ ಜ್ಞಾಪಕಹುಟ್ಟಿಸುತ್ತಾಳೆ! ಇವಳು ಹೀಗೆ ಮೊಟ್ಟೆಯಿಡುತ್ತಾ ಹೋಗುವಾಗ ಕೆಲಸಗಾರರು ಸಹ ಅವಳ ಹಿಂದೆಹಿಂದೆಯೇ ಹೋಗುತ್ತಾ, ಎಷ್ಟು ಬೇಗನೆ ಅದನ್ನು ಸೀಲ್‌ ಮಾಡುತ್ತಾರೆ ನೋಡಿ. ಚಿಟಿಕೆ ಹೊಡೆಯುವುದರಲ್ಲಿ ಕೆಲಸ ಮುಗಿಯಿತು!

ಮೊಟ್ಟೆಗಳು ಒಡೆಯುವಾಗ

ಮೊಟ್ಟೆಗಳು ಒಡೆಯುವಾಗ, ಪುಟ್ಟ ಮರಿಹುಳು (ಅಥವಾ ಲಾರ್ವ) ಅದಕ್ಕಾಗಿ ಸಿದ್ಧಪಡಿಸಿದ್ದ ಕೋಶದಲ್ಲಿರುವ ಆಹಾರವನ್ನು ಸೇವಿಸುತ್ತದೆ. ಅದು ಬೆಳೆದಾಗ, ಲಾರ್ವ ರೇಷ್ಮೆಗೂಡನ್ನು ಹೆಣೆದುಕೊಳ್ಳುತ್ತದೆ. ಈ ರೇಷ್ಮೆಗೂಡಿನಲ್ಲಿ ಮರಿಹುಳು (ಗೂಡುಹುಳು ಹಂತದಿಂದ) ಜೇನ್ನೊಣವಾಗುತ್ತದೆ. ಆಮೇಲೆ ಇದು ರೇಷ್ಮೆಗೂಡಿನಿಂದ ಹೊರಬಂದು, ಕೆಲಸಮಾಡಲು ಶುರುಮಾಡುತ್ತದೆ. ಅಂದರೆ, ಅದನ್ನು ನೋಡಿಕೊಳ್ಳುತ್ತಿರುವ ಜೇನ್ನೊಣಗಳು ಅದನ್ನು ಸ್ವಲ್ಪ ಮುದ್ದು ಮಾಡಿದ ನಂತರ ಕೆಲಸಮಾಡಲು ತೊಡಗುತ್ತದೆ. ಆದರೆ ಆ ಜೇನುಮೇಣದ ಕೋಶಗಳಿಗೆ ಏನಾಗುತ್ತದೆ? ಅವುಗಳನ್ನು ತತ್‌ಕ್ಷಣವೇ ಸಂಗ್ರಹಿಸಿಡಲಾಗುತ್ತದೆ. ಏಕೆಂದರೆ ಅದನ್ನು ಪುನಃ ಉಪಯೋಗಿಸಲಿಕ್ಕಾಗಿಯೇ. ಜೇನ್ನೊಣಗಳು ಒಮ್ಮೆ ರೇಷ್ಮೆಗೂಡಿನಿಂದ ಹೊರಬಂದವೆಂದರೆ, ಆ ರೇಷ್ಮೆಗೂಡುಗಳು ಬೇಕಾಗಿರುವುದಿಲ್ಲ. ಅವುಗಳನ್ನು ಜೇನುಗೂಡಿನಲ್ಲಿಯೇ ಬಿಟ್ಟರೆ ಅವು ರಾಶಿಯಾಗುತ್ತವೆ. ಆದುದರಿಂದ ಹಲವಾರು ಕ್ಲೀನರ್‌ ಜೇನ್ನೊಣಗಳು ಅವುಗಳನ್ನೆಲ್ಲಾ ಶುಚಿಮಾಡಿಬಿಡುತ್ತವೆ.

ಅನೇಕ ಜಾತಿಯ ಕೊಂಡಿಹೀನ ಜೇನ್ನೊಣಗಳು ಸರೂಮೆನ್‌ ಎಂಬ ಕಟ್ಟುವ ಸಾಮಗ್ರಿಯನ್ನು ಉತ್ಪಾದಿಸುತ್ತವೆ. ಜೇನ್ನೊಣಗಳ ದೇಹದಿಂದಲೇ ಉಂಟಾಗುವ ಮೇಣ ಹಾಗೂ ಮರಗಿಡಗಳಿಂದ ಶೇಖರಿಸಲ್ಪಟ್ಟ ರಾಳ ಹಾಗೂ ಮೇಣವು ತಾನೇ ಸರೂಮೆನ್‌ ಆಗಿರುತ್ತದೆ. ಕಂಬ, ಅಡ್ಡತೊಲೆ ಹಾಗೂ ಅಡ್ಡಸರಳಿನ ಚೌಕಟ್ಟನ್ನು ಕಟ್ಟಲು ಮತ್ತು ಇದರ ಜೊತೆಗೆ ಎಲ್ಲ ಸಂದುಗಳನ್ನು ಬಲಪಡಿಸಲು ಈ ಸರೂಮೆನ್‌ ಅನ್ನು ಉಪಯೋಗಿಸಲಾಗುತ್ತದೆ. ಇದೇ ಚೌಕಟ್ಟಿನಲ್ಲಿ ಜೇನು ಹಾಗೂ ಪರಾಗ ಕುಂಡಗಳನ್ನು ಕಟ್ಟುವಾಗ, ಜೇನ್ನೊಣಗಳು ಕುಂಡಗಳಿಗೆ ಆಕಾರಕೊಡುತ್ತಾ ಸರೂಮೆನ್‌ ಅನ್ನು ಇರುಕುತ್ತಾ ಒಳಗೆ ಅತ್ತಿಂದಿತ್ತ ಓಡಾಡುತ್ತಾ ಇರುತ್ತವೆ. ಅನಂತರ ಈ ಕುಂಡಗಳು ಭರ್ತಿಮಾಡಲ್ಪಟ್ಟು, ಶೇಖರಿಸಿಡಲಿಕ್ಕಾಗಿ ಮುಚ್ಚಲ್ಪಡುತ್ತವೆ. ಹುಟ್ಟರಿವಿನಿಂದ, ಈ ಜೇನ್ನೊಣಗಳು ಯಾವ ಯಾವ ಗಿಡಗಳು ಆಯಾ ಋತುವಿನಲ್ಲಿ ಬೆಳೆಯುತ್ತವೆ ಎಂಬುದರ ಮಹತ್ವ ಹಾಗೂ ಋತುವಿನ ಹವಾಮಾನದ ಅಪಾಯಗಳನ್ನು ತಿಳಿದಿರುತ್ತವೆಂದು ಕಾಣಿಸುತ್ತದೆ. ಆಹಾರವನ್ನು ಶೇಖರಿಸಿ, ರಕ್ಷಿಸಿಡುವುದು, ಬದುಕಿ ಉಳಿಯಲು ಅತ್ಯಾವಶ್ಯಕ ಎಂಬುದನ್ನು ಅವು ಚೆನ್ನಾಗಿ ತಿಳಿದಿರುತ್ತವೆ.

ಜೇನ್ನೊಣಗಳು ಗೂಡನ್ನು ಬಿಟ್ಟು, ಕಟ್ಟುವ ಸಾಮಗ್ರಿ, ಮಕರಂದ ಹಾಗೂ ಪರಾಗವನ್ನು ಹುಡುಕುತ್ತಾ ಹೋಗುತ್ತವೆ. ಗೂಡಿನ ಹೊರಗೆ ಜೇನ್ನೊಣವು ಒಬ್ಬ ಒಳ್ಳೆಯ ಪೈಲಟ್‌ ಹಾಗೂ ನಾವಿಕನಾಗುತ್ತದೆ. ಜೇನ್ನೊಣಕ್ಕೆ ಏನನ್ನು ಸಂಗ್ರಹಿಸಬೇಕು ಹಾಗೂ ಅದನ್ನು ಎಲ್ಲಿ ಕಂಡುಕೊಳ್ಳಬೇಕು ಎಂಬುದು ಚೆನ್ನಾಗಿ ಗೊತ್ತಿರುತ್ತದೆ.

ಒಂದು ಹೊಸ ಮನೆಯನ್ನು ಕಟ್ಟುವುದು

ಜೇನ್ನೊಣಗಳ ಸಂಖ್ಯೆಯು ಹೆಚ್ಚಿದಂತೆ, ಈಗ ಗೂಡು ಪೂರ್ತಿ ತುಂಬುತ್ತದೆ. ಈಗ ಏನು ಮಾಡುವುದು? “ಮತ್ತೊಂದು ಮನೆಯನ್ನು ಕಟ್ಟಬೇಕು” ಎಂಬ ಸಂದೇಶವು ಜೇನ್ನೊಣಗಳ ಕುಟುಂಬಕ್ಕೆ ರವಾನಿಸಲ್ಪಡುತ್ತದೆ. ಗೂಡನ್ನು ಕಟ್ಟಲು ಸೂಕ್ತವಾಗಿರಬಹುದಾದ ಕುಳಿಯನ್ನು ಒಂದು ಬೇಹುಕಾರ ಜೇನ್ನೊಣವು ಪರೀಕ್ಷಿಸುತ್ತದೆ. ಅನಂತರ, “ಎಂಜಿನೀಯರ್‌ಗಳು” ಬರುತ್ತಾರೆ. ಇವರಲ್ಲಿ ಸುಮಾರು 30ರಿಂದ 50 ಪರಿಣತರು ಹಲವಾರು ತಾಸುಗಳ ವರೆಗೆ, ಗೆರೆ ಮತ್ತು ಗೂಟದಿಂದ ಗುರುತುಹಾಕುವ ಹಾಗೆ, ಕುಳಿಯ ಒಳಮೇಲ್ಮೈಯನ್ನು ಪರೀಕ್ಷಿಸುತ್ತಾರೆ. ಅಡಿಪಾಯವು ಒಳ್ಳೆಯದಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ಅನಂತರ ಅವರು ಅದನ್ನು ತಿಳಿಸಲು ಮನೆಗೆ ಹಿಂದಿರುಗುತ್ತಾರೆ. ಮುಂದೆ, ಸಾಮಾನ್ಯವಾಗಿ 48 ತಾಸುಗಳೊಳಗೆ ನಿಜವಾದ “ವಾಸ್ತುಶಿಲ್ಪಿಗಳು” ಬರುತ್ತಾರೆ. ಆ ಸಿಬ್ಬಂದಿ ವರ್ಗದಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚಿನ ಜೇನ್ನೊಣಗಳು ಇರಬಹುದು. ಆದರೆ ರಾಣಿಯಿರುವುದಿಲ್ಲ. ಮೊದಲಿದ್ದ ಗೂಡಿನಿಂದ ಕಟ್ಟುವ ಸಾಮಗ್ರಿ ಹಾಗೂ ಆಹಾರವನ್ನು ತರುತ್ತಾ ಅವು ಬೇಗನೆ ಬಿರುಸಿನಿಂದ ಕೆಲಸಮಾಡಲು ಪ್ರಾರಂಭಿಸುತ್ತವೆ.

ಈ ಹೊಸ ಗೂಡನ್ನು ರಾಣಿಯ ಬರುವಿಕೆಗಾಗಿ ಸಿದ್ಧಪಡಿಸುವಾಗ, ಸರಿಯಾದ ಉಷ್ಣತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಕಾವು ಗೂಡನ್ನು ಕಟ್ಟಬೇಕಾಗಿರುವುದು. ಅಂದರೆ, ಸುಮಾರು 28 ಡಿಗ್ರಿ ಸೆಲ್ಸಿಯಸ್‌ ಉಷ್ಣವಿರಬೇಕು. ಇದಕ್ಕಾಗಿ, ಗೂಡನ್ನು ಕಂಬಳಿಯಲ್ಲಿ ಸುತ್ತುವಂತೆ, ಕೆಲಸಗಾರ ಜೇನ್ನೊಣಗಳು ಗೂಡಿನ ಸುತ್ತಲೂ ಸರೂಮೆನ್‌ನ ಗೋಡೆಯನ್ನು ಕಟ್ಟುತ್ತವೆ. ಮೊಟ್ಟೆಗಳನ್ನು ಬೆಚ್ಚಗೆ ಇಡಬೇಕೆಂಬುದು ಈ ಬುದ್ಧಿವಂತ ಜೇನ್ನೊಣಗಳಿಗೆ ಗೊತ್ತಿರುವಂತೆ ತೋರುತ್ತದೆ. ಈಗ ಎಲ್ಲವೂ ಸಿದ್ಧವಾಗಿದೆ. ಮತ್ತು ಒಂಬತ್ತನೆಯ ದಿನ, ಮೊದಲಿದ್ದ ಗೂಡಿನಲ್ಲಿ ಬೆಳೆದು ದೊಡ್ಡದಾದ ಹೊಸ ರಾಣಿಯನ್ನು ಹೊಸ ಮನೆಗೆ ಕರೆತರಲಾಗುತ್ತದೆ. ಬಂದ ಕೂಡಲೇ, ಅವಳು ತನ್ನ ಅರಮನೆಯಲ್ಲಿ ಇನ್ನೂ ಹೆಚ್ಚಿನ ಜೇನ್ನೊಣಗಳನ್ನು ಉತ್ಪಾದಿಸಲಿಕ್ಕಾಗಿ ಮೊಟ್ಟೆಗಳನ್ನಿಡಲು ಪ್ರಾರಂಭಿಸುತ್ತಾಳೆ.

ಕ್ರಮೇಣವಾಗಿ, ಮೊದಲಿನ ಗೂಡಿನಿಂದ ಬಂದ ಜೇನ್ನೊಣಗಳು ಸಾಯುತ್ತವೆ. ಈಗ, ಈ ಹೊಸ ಮನೆಯಲ್ಲಿ ಜನ್ಮತಳೆದ ಪುಟ್ಟ ಜೇನ್ನೊಣಗಳು ಮನೆತುಂಬುತ್ತವೆ. ಸ್ವಲ್ಪ ಸಮಯವಾದ ನಂತರ, ಈ ಗೂಡಿನಲ್ಲಿರುವ ಜೇನ್ನೊಣಗಳು ಮತ್ತೊಂದು ಮನೆಯನ್ನು ಕಟ್ಟುವ ಅಗತ್ಯವನ್ನು ಕಂಡುಕೊಳ್ಳುತ್ತವೆ. ಸರಿಸಾಟಿಯಿಲ್ಲದ ಸೃಷ್ಟಿಕರ್ತನಿಂದ ರಚಿಸಲ್ಪಟ್ಟ ಮತ್ತೊಂದು ಬೆರಗುಗೊಳಿಸುವ ಚಕ್ರವು ತಿರುಗುತ್ತಾ ಹೋಗುತ್ತದೆ!

(g00 11/8)

[ಪುಟ 13ರಲ್ಲಿರುವ ಚಿತ್ರ]

ಕೊಂಡಿಹೀನ ಜೇನ್ನೊಣಗಳು ಷಡ್ಭುಜದಾಕಾರದ ಜೇನುಗೂಡನ್ನು ಕಟ್ಟುವುದರ ಬದಲು, ಅಂಡಾಕಾರದ ಕುಂಡಗಳ ಜೊಂಪೆಗಳನ್ನು ಕಟ್ಟುತ್ತವೆ

[ಪುಟ 14ರಲ್ಲಿರುವ ಚಿತ್ರ]

ಆಸ್ಟ್ರೇಲಿಯದಲ್ಲಿ ಏನಿಲ್ಲವೆಂದರೂ, ಹತ್ತು ಜಾತಿಯ ಕೊಂಡಿಹೀನ ಜೇನ್ನೊಣಗಳನ್ನು ಕಂಡುಕೊಳ್ಳಬಹುದು