ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾಪರ್‌ ಕ್ಯಾನ್ಯನ್‌ ನೋಡ ಬನ್ನಿ

ಕಾಪರ್‌ ಕ್ಯಾನ್ಯನ್‌ ನೋಡ ಬನ್ನಿ

ಕಾಪರ್‌ ಕ್ಯಾನ್ಯನ್‌ ನೋಡ ಬನ್ನಿ

ಮೆಕ್ಸಿಕೊದ ಎಚ್ಚರ! ಸುದ್ದಿಗಾರರಿಂದ

ಕಾಪರ್‌ ಕ್ಯಾನ್ಯನ್‌ ನೈಸರ್ಗಿಕ ಅದ್ಭುತವಾಗಿದೆ. ಇದು ಸಿಯರಾ ಮಡ್ರೆ ಆಕ್ಸ್‌ಡೆಂಟಾಲ್‌ ಎಂದು ಕರೆಯಲ್ಪಡುವ ಮೆಕ್ಸಿಕೊದ ಉತ್ತರಭಾಗದ ಪರ್ವತ ಶ್ರೇಣಿಯಲ್ಲಿದೆ. ಮತ್ತು ಇದು ಸುಮಾರು 50,000 ಚದರ ಕಿಲೊಮೀಟರುಗಳಷ್ಟು ಸ್ಥಳವನ್ನು ಆವರಿಸುತ್ತದೆ. ಅಂದರೆ, ಇದು ಕೊಸ್ಟರೀಕದ ಗಾತ್ರದ ಪ್ರದೇಶವನ್ನು ಆವರಿಸುತ್ತದೆ.

ಈ ಹೆಸರು ನಿಮ್ಮನ್ನು ದಾರಿತಪ್ಪಿಸಬಹುದು. ಆದರೆ ಕಾಪರ್‌ ಕ್ಯಾನ್ಯನ್‌ ಕೇವಲ ಒಂದು ಕಮರಿಯಲ್ಲ, ಬದಲಾಗಿ ಒಂದಕ್ಕೊಂದು ಸೇರಿಕೊಂಡಿರುವ ಸುಮಾರು 20 ಕಮರಿಗಳ ಒಂದು ಜಾಲವಾಗಿದೆ. ಇವುಗಳಲ್ಲಿ ಒಂದು ಕಮರಿ ಕಾಪರ್‌ ಕ್ಯಾನ್ಯನ್‌ ಆಗಿದೆ. ಇದರಿಂದ ಇಡೀ ಜಾಲಕ್ಕೆ ಈ ಹೆಸರು ಬಂದಿದೆ. ಪರಿಶೋಧಕರಾದ ರಿಚರ್ಡ್‌ ಫಿಷರ್‌ಗನುಸಾರ, ಇವುಗಳಲ್ಲಿ ಮೂರು ಕ್ಯಾನ್ಯನ್‌ಗಳು ಅಮೆರಿಕದಲ್ಲಿರುವ ಗ್ರ್ಯಾಂಡ್‌ ಕ್ಯಾನ್ಯನ್‌ಗಿಂತ ಬಹಳ ಆಳವಾಗಿವೆ. *

ಕಾಪರ್‌ ಕ್ಯಾನ್ಯನ್‌ ಬಹಳ ವಿಸ್ತಾರವಾಗಿರುವ ಕಾರಣ, ಬಹಳಷ್ಟು ಪ್ರವಾಸಿಗರು ಕೇವಲ ಕೆಲವೇ ಸ್ಥಳಗಳಲ್ಲಿ ನಿಂತು ಕಮರಿಗಳನ್ನು ನೋಡಸಾಧ್ಯವಿದೆ. ಕಾಪರ್‌, ಸೀನ್‌ಫೋರೋಸಾ ಮತ್ತು ಯೂರೀಕಿ ಕ್ಯಾನ್ಯನ್‌ಗಳನ್ನು ನೋಡುವುದೇ ಒಂದು ಹೃದಯಂಗಮ ದೃಶ್ಯ. ಆದರೆ, ಕೆಲವು ಜನರು ಡೀವೀಸಾಡೇರೋ ವೀಕ್ಷಣಾ ಸ್ಥಾನದಲ್ಲಿ ನಿಂತು ನಯನಮನೋಹರವಾದ ದೃಶ್ಯವನ್ನು ನೋಡಬಹುದು ಎಂದು ನೆನಸುತ್ತಾರೆ. ಇಲ್ಲಿಂದ ಕಾಪರ್‌, ಯೂರೀಕಿ ಮತ್ತು ಟಾರಾರೆಕ್‌ವಾ ಕ್ಯಾನ್ಯನ್‌ಗಳ ಸಂಗಮವಾಗುವ ವಿಹಂಗಮ ನೋಟವನ್ನು ನೋಡಬಹುದು.

ವೈವಿಧ್ಯಮಯ ಹವಾಮಾನ

ಅಡ್ಡಾದಿಡ್ಡಿಯಾದ ಎತ್ತರವಿರುವುದರಿಂದ ಇದು, ಕಾಪರ್‌ ಕ್ಯಾನ್ಯನ್‌ನ ಹವಾಮಾನ ಹಾಗೂ ಸಸ್ಯಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ. ಮೀಜೆಲ್‌ ಗ್ಲೀಸನ್‌ರವರು ಹಾಗೂ ಒಂದು ಗುಂಪು ಯೂರೀಕಿ ಕ್ಯಾನ್ಯನ್‌ನಿಂದ ಕೆಳಗಿಳಿಯುತ್ತಿರುವಾಗ ಇದನ್ನು ಅನುಭವಿಸಿದರು. ಮಿಹೀಕೋ ಡೆಸ್‌ಕೋನೋಸೀಡೋ ಎಂಬ ಪತ್ರಿಕೆಯಲ್ಲಿ ಅವರು ಬರೆದುದು: “ನಮಗೆ ಬಿಸಿಯು ತಗಲಲು ಶುರುವಾಯಿತು ಮತ್ತು ಪೈನ್‌ ಮರಗಳು ಕಣ್ಮರೆಯಾದವು. ಈಗ ನಮ್ಮ ಕಣ್ಣಮುಂದೆ ಉಷ್ಣವಲಯದ ಸಸ್ಯಗಳು ಅಂದರೆ, ಬಾಳೆಹಣ್ಣು, ಆವಕಾಡೊ ಹಾಗೂ ಕಿತ್ತಲೆಹಣ್ಣುಗಳ ಮರವಿದ್ದವು. ನಮಗೆ ಅದನ್ನು ನಂಬಲಿಕ್ಕೆ ಆಗಲಿಲ್ಲ. ಸಂಕ್ಷಿಪ್ತವಾಗಿ ಹೇಳಬೇಕಾದರೆ, ನನ್ನ ಜೀವನದಲ್ಲಿಯೇ ಮೊದಲ ಬಾರಿ, ನಾನು ಇಷ್ಟೊಂದು ಸ್ವಲ್ಪ ಸಮಯ ಹಾಗೂ ಅಂತರದಲ್ಲಿ ತಣ್ಣನೆಯ ಅರಣ್ಯಗಳಿಂದ ಉಷ್ಣವಲಯದ ಅರಣ್ಯಗಳಿಗೆ ಹಾದುಹೋಗಿರುವುದು.”

ಕ್ಯಾನ್ಯನ್‌ಗಳ ಎತ್ತರವಾಗಿರುವ ಪ್ರಸ್ಥಭೂಮಿಗಳಲ್ಲಿ ಸುಮಾರು 15 ಜಾತಿ ಪೈನ್‌ ಮರಗಳು ಹಾಗೂ ಸುಮಾರು 25 ಜಾತಿ ಓಕ್‌ ಮರಗಳಿವೆ. ಕಾಪರ್‌ ಕ್ಯಾನ್ಯನ್‌ನಲ್ಲಿ ಪಾಪ್ಲರ್‌ ಮರ ಹಾಗೂ ಜೂನಿಪರ್‌ ಮರಗಳು ಸಹ ಇವೆ. ಬೇಸಿಗೆಯ ಸಮಯದಲ್ಲಿ ಇಡೀ ಸಿಯೆರಾ ವಿಧವಿಧವಾದ ಹೂವುಗಳಿಂದ ನಳನಳಿಸುತ್ತದೆ. ಇವುಗಳಲ್ಲಿ ಕೆಲವನ್ನು ಆಹಾರಕ್ಕಾಗಿ ಉಪಯೋಗಿಸಲಾಗುತ್ತದೆ. ಇಲ್ಲವೆ ಟಾರಾವೂಮಾರಾ ಎಂದು ಕರೆಯಲ್ಪಡುವ ಅಲ್ಲಿನ ನಿವಾಸಿಗಳು, ಇದನ್ನು ನೈಸರ್ಗಿಕ ಔಷಧವಾಗಿ ಉಪಯೋಗಿಸುತ್ತಾರೆ. ಸಮುದ್ರ ಮಟ್ಟಕ್ಕಿಂತ ಸುಮಾರು 5,900 ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿರುವುದರಿಂದ, ಸಿಯೆರಾದ ಹವಾಮಾನವು ವರ್ಷದಲ್ಲಿ ಹೆಚ್ಚಿನ ಸಮಯ ಉಷ್ಣದಿಂದ ತಣ್ಣನೆಯ ಹವಾಮಾನಕ್ಕೆ ಏರಿಳಿತವನ್ನು ಹೊಂದುತ್ತಿರುತ್ತದೆ. ಚಳಿಗಾಲದಲ್ಲಿ ಸ್ವಲ್ಪ ಮಳೆಬೀಳುತ್ತದೆ ಮತ್ತು ಆಗೊಮ್ಮೆ ಈಗೊಮ್ಮೆ ಹಿಮಪಾತವಾಗುತ್ತದೆ.

ಭೇಟಿಗಾರರು ಕೆಳಗಿಳಿದಂತೆ ಅವರಿಗೆ ವಿಧವಿಧವಾದ ಮರಗಳು ಹಾಗೂ ಪಾಪಸುಕಳ್ಳಿಗಳು ಕಣ್ಣಿಗೆದುರಾಗುತ್ತವೆ. ಇನ್ನೂ ಸ್ವಲ್ಪ ಕೆಳಗೆ 17 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿರುವ ಉಷ್ಣವಲಯದ ಅಪ್ಯಾಯಮಾನ ಹವಾಮಾನವನ್ನು ಕಂಡುಕೊಳ್ಳಸಾಧ್ಯವಿದೆ. ಆದರೆ ಬೇಸಿಗೆಯ ಕಾಲದಲ್ಲಿ ಇದೇ ವಲಯವು ಬಹಳ ಇರುಸುಮುರುಸನ್ನು ತರುವಂತಹದ್ದಾಗಿರುತ್ತದೆ. ಏಕೆಂದರೆ ಆಗ ತಾಪಮಾನವು 35 ಮತ್ತು 45 ಡಿಗ್ರಿ ಸೆಲ್ಸಿಯಸ್‌ನ ನಡುವೆ ಏರಿಳಿತವಾಗುತ್ತಿರುತ್ತದೆ ಮತ್ತು ಇದರ ಜೊತೆಗೆ ಎಷ್ಟು ಮಳೆಬೀಳುತ್ತದೆ ಎಂದರೆ ಇದರಿಂದ ನದಿಗಳು ಉಕ್ಕಿಹರಿಯುತ್ತವೆ.

ಈ ಕ್ಷೇತ್ರದ ಚೆಲುವು ಎರಡು ಭವ್ಯವಾದ ಜಲಪಾತಗಳಿಂದ ಇಮ್ಮಡಿಸುತ್ತದೆ. ಲೋಕದಲ್ಲಿರುವ ಅತಿ ಎತ್ತರವಾದ ಜಲಪಾತಗಳಲ್ಲಿ ಒಂದಾಗಿರುವ ಪ್ಯೇಡ್ರಾ ಬೊಲಾಡಾ ಜಲಪಾತವು, ಸುಮಾರು 1,490 ಅಡಿ ಆಳವಾದದ್ದಾಗಿದೆ. ಮತ್ತು ಇನ್ನೊಂದು ಜಲಪಾತವು ಬಾಸಾಸಿಆಚೀಯಾಗಿದ್ದು, 810 ಅಡಿ ಆಳವಾದದ್ದಾಗಿದೆ.

ವನ್ಯಜೀವಿ ಆಶ್ರಯಧಾಮ

ಕಾಪರ್‌ ಕ್ಯಾನ್ಯನ್‌ ಅನೇಕ ವನ್ಯಜೀವಿಗಳಿಗೆ ಬೀಡಾಗಿದೆ. ಮೆಕ್ಸಿಕೊದಲ್ಲಿರುವ ಸುಮಾರು 30 ಪ್ರತಿಶತ ಸಸ್ತನಿಗಳು ಈ ಸ್ಥಳದಲ್ಲಿ ವಾಸಿಸುತ್ತವೆಂದು ಹೇಳಲಾಗುತ್ತದೆ. ಇವುಗಳಲ್ಲಿ ಬ್ಲ್ಯಾಕ್‌ ಬೇರ್‌ (ಕಪ್ಪು ಕರಡಿ), ಪ್ಯೂಮ ಬೆಕ್ಕು, ನೀರುನಾಯಿ, ಮೆಕ್ಸಿಕನ್‌ ತೋಳ, ಬೋರ್‌ (ಕಾಡು ಹಂದಿ), ಕಾಡುಬೆಕ್ಕು, ರಕೂನ್‌, ಬ್ಯಾಡ್ಜರ್‌, ಸ್ಕಂಕ್‌ ಹಾಗೂ ಬಾವಲಿ, ಅಳಿಲು, ಮೊಲ ಮುಂತಾದವುಗಳಿವೆ.

ಗೋಲ್ಡನ್‌ ಈಗಲ್‌, ಪೆರಿಗ್ರೈನ್‌ ಫ್ಯಾಲ್ಕನ್‌ ಸೇರಿಸಿ, ಕಾಪರ್‌ ಕ್ಯಾನ್ಯನ್‌ನಲ್ಲಿ ಸುಮಾರು 400 ವಿವಿಧ ಜಾತಿಗಳ ಹಕ್ಕಿಗಳು ನೆಲಸಿವೆ. ಉತ್ತರ ಹಾಗೂ ಮಧ್ಯ ಅಮೆರಿಕದ ನಡುವೆ ಮುಖ್ಯವಾದ ಸ್ಥಳದಲ್ಲಿ ಈ ಕ್ಯಾನ್ಯನ್‌ ಇರುವುದರಿಂದ, ವಲಸೆಹೋಗುವ ಹಕ್ಕಿಗಳು ಇಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಇನ್ನೂ ಕೆಲವು ಹಕ್ಕಿಗಳು ತಮ್ಮ ಪ್ರಯಾಣವನ್ನು ಮುಂದುವರಿಸುವ ಮುಂಚೆ ಸ್ವಲ್ಪ ಹೊತ್ತು ವಿಶ್ರಾಮವನ್ನು ತೆಗೆದುಕೊಳ್ಳಲು ಇಲ್ಲಿ ಬರುತ್ತವೆ.

ಕಾಪರ್‌ ಕ್ಯಾನ್ಯನ್‌ ಅನ್ನು ನಿರ್ಮಿಸಿದ ಕೀರ್ತಿಯು ಎಲ್ಲ ನೈಸರ್ಗಿಕ ಅದ್ಭುತಗಳ ಸೃಷ್ಟಿಕರ್ತನಾದ ಯೆಹೋವ ದೇವರಿಗೇ ಸಲ್ಲುತ್ತದೆ. ರಾಜ ದಾವೀದನು ಒಮ್ಮೆ ವ್ಯಕ್ತಪಡಿಸಿದಂತೆ, “ಯೆಹೋವಾ, ಮಹಿಮಪ್ರತಾಪವೈಭವ ಪರಾಕ್ರಮಪ್ರಭಾವಗಳು ನಿನ್ನವು; ಭೂಮ್ಯಾಕಾಶಗಳಲ್ಲಿರುವದೆಲ್ಲಾ ನಿನ್ನದೇ.”​—⁠1 ಪೂರ್ವಕಾಲವೃತ್ತಾಂತ 29:⁠11.

(g00 11/8)

[ಪಾದಟಿಪ್ಪಣಿ]

^ ಯೂರೀಕಿ ಕ್ಯಾನ್ಯನ್‌ 6,160 ಅಡಿ ಆಳ; ಸೀನ್‌ಫೋರೋಸಾ ಕ್ಯಾನ್ಯನ್‌ 6,000 ಅಡಿ ಆಳ; ಬಾಟೋಪೀಲಾಸ್‌ ಕ್ಯಾನ್ಯನ್‌ 5,900 ಅಡಿ ಆಳ. ಮತ್ತು ಗ್ರ್ಯಾಂಡ್‌ ಕ್ಯಾನ್ಯನ್‌ ಸುಮಾರು 5,300 ಅಡಿ ಆಳ.

[ಪುಟ 18ರಲ್ಲಿರುವ ಚೌಕ/ಚಿತ್ರ]

ರೈಲಿನಿಂದ ಒಂದು ನೋಟ

ಚವಾವ್‌ ಪೆಸಿಫಿಕ್‌ ರೈಲ್ವೆಯು, ಅಮೆರಿಕ-ಮೆಕ್ಸಿಕೊ ಗಡಿಯಾದ ಓಹೀನಾಗ್‌ನಿಂದ ಪೆಸಿಫಿಕ್‌ ಸಮುದ್ರದ ಪೋರ್ಟ್‌ ಆಫ್‌ ಟೋಪೋಲೋಬಾಮ್‌ಬೋ ವರೆಗೆ ಸುಮಾರು 583 ಮೈಲಿ ದೂರದ ವರೆಗೆ ಚಾಚಿಕೊಂಡಿದೆ. ಇದು ಕಾಪರ್‌ ಕ್ಯಾನ್ಯನ್‌ನನ್ನು ಹಾದುಹೋಗುತ್ತದೆ. ಮೇಲ್ಮೈ ಲಕ್ಷಣಗಳ ವೈಶಿಷ್ಟ್ಯಗಳ ಕಾರಣ, ಈ ರೈಲು ಮಾರ್ಗವನ್ನು ಅತಿ ದೊಡ್ಡ ಎಂಜನೀಯರಿಂಗ್‌ ಚಮತ್ಕಾರವಾಗಿ ಪರಿಗಣಿಸಲಾಗುತ್ತದೆ. ಈ ರೈಲು ತನ್ನ ಪ್ರಯಾಣದಲ್ಲಿ ಬೇರೆ ಬೇರೆ ವಿಸ್ತೀರ್ಣಗಳ ಸುಮಾರು 37 ದೊಡ್ಡ ಸೇತುವೆಗಳನ್ನು ದಾಟಿಹೋಗುತ್ತದೆ. ಅದರಲ್ಲಿ ಅತ್ಯಂತ ಉದ್ದವಾದ ಸೇತುವೆ ಫ್ವೆರ್‌ಟೇ ನದಿಯನ್ನು ದಾಟುವ 1,640 ಅಡಿ ಉದ್ದದ ಸೇತುವೆಯಾಗಿದೆ. ಚೀನೀಪಾಸ್‌ ನದಿಯ ಮೇಲೆ ಕಟ್ಟಲ್ಪಟ್ಟಿರುವ 300 ಅಡಿ ಎತ್ತರದ ಸೇತುವೆಯು ಅತ್ಯಂತ ಎತ್ತರವಾದ ಸೇತುವೆಯಾಗಿದೆ.

ಈ ರೈಲು 99 ಸುರಂಗಮಾರ್ಗಗಳನ್ನು ಹಾದುಹೋಗುತ್ತದೆ. ಅತ್ಯಂತ ಉದ್ದವಾದ ಸುರಂಗಮಾರ್ಗವು ಎಲ್‌ ಡೆಸ್ಕಾನ್ಸೋ ಆಗಿದೆ. ಇದು ಸುಮಾರು 5,900 ಅಡಿ ಉದ್ದವಿದೆ. ರೈಲಿನಲ್ಲಿ ಪ್ರಯಾಣಮಾಡುತ್ತಿರುವಾಗ ಈ ಕಾಪರ್‌ ಕ್ಯಾನ್ಯನ್‌ನ ನೋಟವು ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.

[ಪುಟ 15ರಲ್ಲಿರುವ ಭೂಪಟಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಅಮೆರಿಕ

ಮೆಕ್ಸಿಕೊ

ಚವಾವ್‌

ಓಹೀನಾಗ್‌

ಚವಾವ್‌

ಕಾಪರ್‌ ಕ್ಯಾನ್ಯನ್‌ ಪ್ರದೇಶ

ಲಾ ಜುಂಟಾ

ಕ್ರೀಲ್‌

ಡೀವೀಸಾಡೇರೋ

ಟೋಪೋಲೋಬಾಮ್‌ಬೋ

[ಪುಟ 15ರಲ್ಲಿರುವ ಚಿತ್ರ]

ಬಾಸಾಸಿಆಚೀ ಜಲಪಾತ

[ಕೃಪೆ]

© Tom Till

[ಪುಟ 16, 17ರಲ್ಲಿರುವ ಚಿತ್ರ]

ಡೀವೀಸಾಡೇರೋದಲ್ಲಿರುವ ಒಂದು ನೋಟ

[ಕೃಪೆ]

© Tom Till

[ಪುಟ 17ರಲ್ಲಿರುವ ಚಿತ್ರ]

ಟಾರಾವೂಮಾರಾ ಜನರು ಕ್ಯಾನ್ಯನಾದ್ಯಂತ ವಾಸಿಸುತ್ತಾರೆ

[ಕೃಪೆ]

George Hunter/ H. Armstrong Roberts

[ಪುಟ 17ರಲ್ಲಿರುವ ಚಿತ್ರಗಳು]

ರೆಕ್‌ ಸರೋವರ

[ಪುಟ 15ರಲ್ಲಿರುವ ಚಿತ್ರ ಕೃಪೆ]

George Hunter/H. Armstrong Roberts