ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚೈನೀಸ್‌ ಔಷಧದಂಗಡಿಗೆ ಒಂದು ಭೇಟಿ

ಚೈನೀಸ್‌ ಔಷಧದಂಗಡಿಗೆ ಒಂದು ಭೇಟಿ

ಚೈನೀಸ್‌ ಔಷಧದಂಗಡಿಗೆ ಒಂದು ಭೇಟಿ

ಕ್ವಾಕ್‌ ಕಿಟ್‌ ಸುಮಾರು ದಿನಗಳಿಂದ ಕಾಯಿಲೆ ಬಿದ್ದಿದ್ದಾನೆ. ಆದುದರಿಂದ ಅವನು ಒಬ್ಬ ಡಾಕ್ಟರನ್ನು ನೋಡಲು ಹೋಗುತ್ತಿದ್ದಾನೆ. ಅವನೊಬ್ಬ ಚೈನೀಸ್‌ ವ್ಯಕ್ತಿಯಾಗಿರುವ ಕಾರಣ, ಸಾಂಪ್ರದಾಯಿಕ ಚೈನೀಸ್‌ ಔಷಧಿಯನ್ನು ಕೊಡುವ ಡಾಕ್ಟರ್‌ ಬಳಿ ಹೋಗಲು ಇಷ್ಟಪಡುತ್ತಾನೆ. ಕುಟುಂಬದ ಒಬ್ಬ ಸ್ನೇಹಿತನು, ಹತ್ತಿರದಲ್ಲಿಯೇ ಗಿಡಮೂಲಿಕೆಯ ಅಂಗಡಿಯಿರುವ ಒಬ್ಬ ಡಾಕ್ಟರನ ಬಗ್ಗೆ ತಿಳಿದಿದ್ದಾನೆ. ಆದುದರಿಂದ ಕ್ವಾಕ್‌ ಕಿಟ್‌ಗಿರುವ ಕಾಯಿಲೆಯನ್ನು ವಾಸಿಮಾಡುವ ಗಿಡಮೂಲಿಕೆ ಮಿಶ್ರಣದ ಟೀಯನ್ನು ಕೊಡುವ ಒಬ್ಬ ಡಾಕ್ಟರ್‌ ಇದ್ದಾನೆ ಎಂದು ಆ ಸ್ನೇಹಿತನು ಅವನಿಗೆ ಹೇಳುತ್ತಾನೆ.

ಆಗ್ನೇಯ ಏಷ್ಯಾದ ಅನೇಕ ಭಾಗಗಳಲ್ಲಿರುವಂತೆ, ಚೈನಾದಲ್ಲಿ ಡಾಕ್ಟರ್‌ ಬಳಿ ಹೋಗುವುದು ಪಾಶ್ಚಾತ್ಯ ದೇಶಗಳಿಗಿಂತ ತೀರ ಭಿನ್ನವೇ ಆಗಿರುತ್ತದೆ. ಪಾಶ್ಚಾತ್ಯ ದೇಶದಲ್ಲಿ, ಒಬ್ಬ ಡಾಕ್ಟರ್‌ ಬಳಿ ಹೋಗಲು ಮೊದಲು ಅಪಾಯಿಂಟ್‌ಮೆಂಟ್‌ ತೆಗೆದುಕೊಳ್ಳಬೇಕು. ಆಮೇಲೆ ಅವನ ಕ್ಲಿನಿಕ್‌ಗೆ ಹೋಗಿ, ಪರೀಕ್ಷೆ ಮಾಡಿಸಿಕೊಂಡು, ಔಷಧದ ಚೀಟಿಯನ್ನು ಪಡೆದುಕೊಳ್ಳಬೇಕು. ಅದಾದ ಮೇಲೆ, ಔಷಧದಂಗಡಿಗೆ ಹೋಗಿ ಬೇಕಾದ ಔಷಧವನ್ನು ಕೊಂಡುಕೊಳ್ಳಬೇಕು. ಆದರೆ ಚೈನೀಸ್‌ ಡಾಕ್ಟರನ ಕಾರ್ಯವಿಧಾನವೇ ಬೇರೆಯಾಗಿರುತ್ತದೆ. ಮತ್ತು ಅದು ಬಹಳ ಸರಳವಾಗಿರುತ್ತದೆ. ನೀವು ಒಂದು ಗಿಡಮೂಲಿಕೆಯ ಅಂಗಡಿಗೆ ಹೋದರೆ, ಅಲ್ಲಿ ಯಾವಾಗಲೂ ಕೆಲಸಮಾಡುತ್ತಿರುವ ಒಬ್ಬ ಗಿಡಮೂಲಿಕೆಯ ವ್ಯಾಪಾರಿ ಇರುತ್ತಾನೆ. ಅವನು ಚೈನೀಸ್‌ ಔಷಧಿಯ ಡಾಕ್ಟರನೂ ಆಗಿರುತ್ತಾನೆ. ಅವನು ನಿಮ್ಮನ್ನು ಪರೀಕ್ಷಿಸಿ, ನಿಮ್ಮ ಸಮಸ್ಯೆಯೇನು ಎಂಬುದನ್ನು ಕಂಡುಹಿಡಿದು, ಗಿಡಮೂಲಿಕೆಯ ಔಷಧಿಯನ್ನು ಅಳತೆಮಾಡಿ, ಅದನ್ನು ನೀವು ಹೇಗೆ ತೆಗೆದುಕೊಳ್ಳಬೇಕು ಎಂದು ಹೇಳುತ್ತಾನೆ. ಆದರೆ, ಇವೆಲ್ಲವೂ ಒಂದೇ ಭೇಟಿಯಲ್ಲಿ! *

ಗಿಡಮೂಲಿಕೆಗಳನ್ನು ಔಷಧವಾಗಿ ಸೇವಿಸುವುದೋ?

ಪಾಶ್ಚಾತ್ಯ ದೇಶದವರು ಮಾತ್ರೆ, ಕ್ಯಾಪ್ಸ್ಯೂಲ್‌, ಹಾಗೂ ಇಂಜೆಕ್ಷನ್‌ಗೆ ಒಗ್ಗಿಹೋಗಿರುವುದಾದರೂ, ಇಂತಹ ಔಷಧಿಗಳನ್ನು ಇತ್ತೀಚೆಗಷ್ಟೇ ಕಂಡುಹಿಡಿಯಲಾಯಿತು. ಸಾವಿರಾರು ವರ್ಷಗಳ ಹಿಂದಿನಿಂದಲೂ, ಜನರು ಪ್ರಾಕೃತಿಕ ವಿಧಾನದಲ್ಲಿ ಮಾಡಲ್ಪಡುವ ವಾಸಿಯ ಮೇಲೆ ಅವಲಂಬಿಸಿದ್ದಾರೆ. ಉದಾಹರಣೆಗೆ, ಬೈಬಲ್‌ ಸಮಯಗಳಲ್ಲಿ ಇಬ್ರಿಯ ವೈದ್ಯರು ಎಣ್ಣೆ, ಮುಲಾಮು ಹಾಗೂ ದ್ರಾಕ್ಷಾರಸವನ್ನು ಔಷಧವಾಗಿ ಉಪಯೋಗಿಸಿದರು. (ಯೆಶಾಯ 1:6; ಯೆರೆಮೀಯ 46:11; ಲೂಕ 10:34) ಒಣಗಿದ ಅಂಜೂರಗಳಿಂದ ಪಟ್ಟಿಗಳನ್ನು ಮಾಡಿ, ಕುರುಗಳನ್ನು ವಾಸಿಮಾಡಲು ಉಪಯೋಗಿಸಲಾಗುತ್ತಿತ್ತು.​—⁠2 ಅರಸು 20:⁠7.

ಪ್ರತಿಯೊಂದು ರಾಷ್ಟ್ರ ಇಲ್ಲವೆ ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಯ ಗಿಡಮೂಲಿಕೆಗಳನ್ನು ಮತ್ತು ಇನ್ನಿತರ ಔಷಧಗಳನ್ನು ರೋಗರುಜಿನಗಳಿಗಾಗಿ ಉಪಯೋಗಿಸಿದ್ದಾರೆ. ಇಂದು, ಅಡಿಗೆಗೆ ಉಪಯೋಗಿಸುವ ಅನೇಕ ಮಸಾಲೆ ಪದಾರ್ಥಗಳು ಹಿಂದೆ ಔಷಧಕ್ಕಾಗಿ ಬಳಸಲ್ಪಡುತ್ತಿದ್ದವು. ಇಂತಹ ಔಷಧಗಳು ಯಾವಾಗಲೂ ಒಳ್ಳೆಯ ಫಲಿತಾಂಶಗಳನ್ನು ತಂದವು ಎಂಬುದು ಇದರರ್ಥವಲ್ಲ. ಬದಲಾಗಿ, ಇದರಲ್ಲಿ ಅನೇಕ ಬಾರಿ ಮೂಢನಂಬಿಕೆ ಹಾಗೂ ಅಜ್ಞಾನವು ಎದ್ದುಕಾಣುತ್ತಿತ್ತು. ಆದರೂ, ರೋಗಿಗಳಿಗೆ ಚಿಕಿತ್ಸೆಯನ್ನು ಕೊಡಲು ಇಂತಹ ವಿಧಾನಗಳು ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿವೆ. ಇಂದು ಉಪಯೋಗಿಸಲ್ಪಡುತ್ತಿರುವ ಅತಿ ಸಾಮಾನ್ಯವಾದ ಔಷಧಗಳು ಗಿಡಗಳಿಂದ ತಯಾರಿಸಿದವುಗಳಾಗಿವೆ.

ಚೈನೀಸ್‌ ಔಷಧದ ಸಿದ್ಧಾಂತ ಹಾಗೂ ಪ್ರಯೋಗ

ರೋಗಗಳಿಗೆ ಗಿಡಮೂಲಿಕೆಯ ಔಷಧವನ್ನು ಕೊಡುವುದು ಚೀನಾದ ಇತಿಹಾಸದಲ್ಲಿ ಬಹು ಮುಖ್ಯವಾದ ಭಾಗವಾಗಿದೆ. ಐತೀಹ್ಯವಾದ ಪೀತ ಸಮ್ರಾಟ ಹ್ವಾಂಗ್‌ ಡೀ, ನೇ ಜಿಂಗ್‌ ಎಂಬ ಪುಸ್ತಕವನ್ನು ಬರೆದನು. ಇದು ಶಸ್ತ್ರಚಿಕಿತ್ಸೆಯನ್ನು ಮಾಡದೇ ರೋಗವನ್ನು ವಾಸಿಮಾಡುವುದರ ಬಗ್ಗೆ ಸೂತ್ರಗಳನ್ನು ನೀಡಿತು. ಚೈನಾದಲ್ಲಿ ವೈದ್ಯಕೀಯ ವೃತ್ತಿಯಲ್ಲಿರುವವರು ಈ ಪುಸ್ತಕವನ್ನು ಈಗಲೂ ಉಪಯೋಗಿಸುತ್ತಿದ್ದಾರೆ. * ಈ ಪುಸ್ತಕವು ಯಾವಾಗ ಬರೆಯಲ್ಪಟ್ಟಿತು ಎಂಬುದು ಈಗಲೂ ವಾದವಿವಾದಕ್ಕೆ ಒಳಪಟ್ಟಿದೆ. ಆದರೂ, ಇದು ಪಾಶ್ಚಾತ್ಯ ವೈದ್ಯಕೀಯ ಪುಸ್ತಕವು ಆವರಿಸುವಂತಹ ಅನೇಕ ವಿಷಯಗಳನ್ನು ಆವರಿಸುತ್ತದೆ. ಇದು ರೋಗವನ್ನು ಕಂಡುಹಿಡಿಯುವ ರೋಗಲಕ್ಷಣಗಳು, ಕಾರಣಗಳು, ಚಿಕಿತ್ಸೆ ಹಾಗೂ ರೋಗವನ್ನು ತಡೆಗಟ್ಟುವುದರ ಕುರಿತು ಮಾತ್ರ ಚರ್ಚಿಸುವುದಿಲ್ಲ. ಬದಲಿಗೆ, ಅಂಗರಚನಾ ಶಾಸ್ತ್ರ ಹಾಗೂ ದೈಹಿಕ ಕ್ರಿಯೆಗಳನ್ನು ಸಹ ಚರ್ಚಿಸುತ್ತದೆ.

ಆಗ್ನೇಯ ಏಷ್ಯಾದ ಹೆಚ್ಚಿನ ವೈದ್ಯಕೀಯ ವೃತ್ತಿಯಲ್ಲಿ ಯಿನ್‌ ಯಾಂಗ್‌ ಸಿದ್ಧಾಂತದ ಪ್ರಭಾವವಿರುವಂತೆಯೇ, ಚೈನೀಸ್‌ ಔಷಧದ ಸಿದ್ಧಾಂತ ಹಾಗೂ ಪ್ರಯೋಗದ ಮೇಲೂ ಅದು ವ್ಯಾಪಕ ಪ್ರಭಾವವನ್ನು ಬೀರಿದೆ. ಯಿನ್‌ ತಂಪು ಹಾಗೂ ಯಾಂಗ್‌ ಉಷ್ಣವನ್ನು ಸೂಚಿಸುತ್ತದೆ. ಅವು ಇನ್ನೂ ಅನೇಕ ಪ್ರತಿವಿರುದ್ಧವಾದ ಗುಣಗಳನ್ನು ಸೂಚಿಸುತ್ತವೆ. * ಮಾತ್ರವಲ್ಲ, ಸೂಜಿ ಚಿಕಿತ್ಸೆಯೊಂದಿಗೆ (ಆಕ್ಯೂಪಂಚರ್‌) ಸಂಬಂಧಪಟ್ಟಿರುವ ದೇಹದ ಮೇಲಿನ ಮೆರಿಡಿಯನ್‌ ಬಿಂದುಗಳು ಸಹ ರೋಗವನ್ನು ಕಂಡುಹಿಡಿಯಲು ಹಾಗೂ ಚಿಕಿತ್ಸೆಯನ್ನು ನೀಡಲು ಪರಿಗಣಿಸಲಾಗುತ್ತದೆ. ರೋಗಿಯ ದೇಹದಲ್ಲಿ ಯಿನ್‌-ಯಾಂಗ್‌ ಅಸಮತೋಲನವನ್ನು ಸರಿಪಡಿಸಲು, ತಂಪು ಇಲ್ಲವೆ ಉಷ್ಣ ಎಂದು ಪರಿಗಣಿಸಲ್ಪಟ್ಟ ಗಿಡಮೂಲಿಕೆಗಳು ಹಾಗೂ ಆಹಾರಗಳನ್ನು ಕೊಡಲಾಗುತ್ತದೆ.

ಉದಾಹರಣೆಗೆ, ಜ್ವರವಿರುವ ರೋಗಿಯೊಬ್ಬನನ್ನು ಉಷ್ಣ ವ್ಯಕ್ತಿಯಾಗಿ ಪರಿಗಣಿಸಲಾಗುತ್ತದೆ. ಆದುದರಿಂದ ಅವನ ದೇಹಕ್ಕೆ ತಂಪಾಗಿರುವ ಗಿಡಮೂಲಿಕೆಗಳನ್ನು ಕೊಡಲಾಗುತ್ತದೆ. ಈಗ ಯಿನ್‌-ಯಾಂಗ್‌ ಎಂದು ನಿರ್ದಿಷ್ಟವಾಗಿ ಕರೆಯಲ್ಪಡದಿದ್ದರೂ, ರೋಗಿಗೆ ಯಾವ ಚಿಕಿತ್ಸೆಯನ್ನು ಕೊಡಬೇಕು ಎಂಬುದನ್ನು ನಿರ್ಧರಿಸಲಿಕ್ಕಾಗಿ ಅದೇ ತತ್ತ್ವಗಳನ್ನು ಈಗಲೂ ಉಪಯೋಗಿಸಲಾಗುತ್ತಿದೆ. ಆದರೆ ಚೈನೀಸ್‌ ಔಷಧವನ್ನು ನೀಡುವ ಡಾಕ್ಟರ್‌ ನಿಮ್ಮ ಸಮಸ್ಯೆಯೇನಾಗಿದೆ ಎಂಬುದನ್ನು ಹೇಗೆ ಕಂಡುಹಿಡಿಯುವನು? ಮತ್ತು ಗಿಡಮೂಲಿಕೆಯ ಅಂಗಡಿ ಅಂದರೆ ಹೇಗಿರುತ್ತದೆ? ಅದನ್ನು ಕಂಡುಕೊಳ್ಳಲು, ಕ್ವಾಕ್‌ ಕಿಟ್‌ ಹೋಗುತ್ತಿರುವ ಅದೇ ಅಂಗಡಿಗೆ ನಾವು ಏಕೆ ಅವನ ಜೊತೆ ಹೋಗಬಾರದು?

ವಿಚಿತ್ರವಾದ ಗಿಡಮೂಲಿಕೆಯ ಅಂಗಡಿಗೆ

ಓಹ್‌ ಏನಾಶ್ಚರ್ಯ! ಇವತ್ತು ಕ್ವಾಕ್‌ ಕಿಟ್‌ ಡಾಕ್ಟರ್‌ ಅನ್ನು ನೋಡಲು ಕಾಯಬೇಕಾಗಿದೆ. ಫ್ಲೂ ರೋಗವು ಎಲ್ಲೆಲ್ಲೂ ಇದೆ ಎಂದನಿಸುತ್ತದೆ. ಏಕೆಂದರೆ, ಅವನಿಗಿಂತ ಮುಂಚೆ ಇನ್ನಿಬ್ಬರು ರೋಗಿಗಳು ಕಾಯುತ್ತಾ ಇದ್ದಾರೆ. ಕಾಯುತ್ತಿರುವ ಸಮಯದಲ್ಲಿ ನಾವು ಅಂಗಡಿಯ ಸುತ್ತಮುತ್ತಲು ಹೋಗಿ ನೋಡೋಣ.

ಒಳಗೆ ಹೋದಾಕ್ಷಣ ನಮ್ಮ ಕಣ್ಣಿಗೆ ಮೊದಲು ಬೀಳುವುದು, ಒಣಗಿದ ಪದಾರ್ಥಗಳ ರಾಶಿಯೇ. ಅಣಬೆ, ಚಿಪ್ಪುಮೀನು, ಕಡಲ್ಗಿವಿ ಮೃದ್ವಂಗಿ, ಅಂಜೂರ, ಕಾಯಿ ಹಾಗೂ ಇನ್ನಿತರ ಖಾದ್ಯ ಪದಾರ್ಥಗಳು ಪ್ರವೇಶ ದ್ವಾರದಲ್ಲಿಯೇ ತೆರೆದ ತೊಟ್ಟಿಗಳಲ್ಲಿ ಪ್ರದರ್ಶನಕ್ಕಿಡಲ್ಪಟ್ಟಿವೆ. ಹೌದು, ಇಲ್ಲಿ ಆಹಾರ ಪದಾರ್ಥಗಳು ಸಿಗುತ್ತವೆ. ಆದರೆ ಇವುಗಳಲ್ಲಿ ಕೆಲವನ್ನು ಔಷಧಿಯಾಗಿ ಸಹ ನೀಡಲಾಗುತ್ತದೆ.

ಅದಾದ ಮೇಲೆ ಕಿರಿದಾದ ಅಂಗಡಿಯ ಎರಡು ಪಕ್ಕಗಳಲ್ಲಿ ಗಾಜಿನ ಶೋಕೇಸನ್ನು ನೋಡಬಹುದು. ಇಲ್ಲಿ, ವಿಶೇಷವಾದ ಗಿಡಮೂಲಿಕೆಗಳು, ಅಜೈವಿಕ ಪದಾರ್ಥಗಳು ಹಾಗೂ ಪ್ರಾಣಿಗಳ ಒಣ ಅಂಗಗಳಿವೆ. ಇವು ಬಹಳ ದುಬಾರಿಯಾಗಿರುತ್ತವೆ. ಹತ್ತಿರದಿಂದ ನೋಡುವಾಗ, ಅಲ್ಲಿ ನಾವು ಜಿಂಕೆಯ ಕೊಂಬು, ಚಿಪ್ಪುಗಳು, ಒಣಗಿಸಿದ ಹಲ್ಲಿಗಳು ಹಾಗೂ ಕಡಲ್ಗುದುರೆಯಂತಹ ಇತರ ವಿಚಿತ್ರ ಪದಾರ್ಥಗಳನ್ನು ನೋಡುತ್ತೇವೆ. ಘೇಂಡಾಮೃಗದ ಕೊಂಬು, ಕರಡಿಯ ಪಿತ್ತಕೋಶ ಮತ್ತು ಇನ್ನಿತರ ಪ್ರಾಣಿಗಳ ಅಂಗಗಳನ್ನು ಈ ಶೋಕೇಸಿನಲ್ಲಿ ಕಾಣಬಹುದು. ಆದರೆ ಈಗ ಇವುಗಳ ಉಪಯೋಗವನ್ನು ನಿಷೇಧಿಸಲಾಗಿದೆ.

ಅಂಗಡಿಯ ಇನ್ನೊಂದು ಮೂಲೆಯಲ್ಲಿ, ಶೀತ ಮತ್ತು ಹೊಟ್ಟೆ ಸರಿಯಿಲ್ಲದಿರುವಾಗ ಕೊಡುವ ಕೆಲವು ಮಿಶ್ರಣಗೊಳಿಸಿದ ಗಿಡಮೂಲಿಕೆಗಳ ಪ್ಯಾಕೆಟ್‌ಗಳು ಹಾಗೂ ಚೈನಾದ ಗಿಡಮೂಲಿಕೆಯ ಬಾಟಲಿ ಔಷಧದ ಪುಸ್ತಕವು ಕಂಡುಬರುತ್ತದೆ. ಅಂಗಡಿಯ ಸಹಾಯಕ ಇಲ್ಲವೆ ಕ್ಲರ್ಕ್‌ಗೆ ನಿಮ್ಮ ಸಮಸ್ಯೆಯೇನೆಂದು ಹೇಳಿದರೆ ಸಾಕು. ಅವನು ಬಾಟಲಿ ಔಷಧವನ್ನು ತೆಗೆದುಕೊಳ್ಳುವಂತೆ ಇಲ್ಲವೆ ಮಿಶ್ರಣಗೊಳಿಸಿದ ಗಿಡಮೂಲಿಕೆಯ ಪ್ಯಾಕೆಟ್‌ ಅನ್ನು ಕೊಡುತ್ತಾನೆ ಮಾತ್ರವಲ್ಲ, ಅದನ್ನು ಮನೆಯಲ್ಲಿ ಹೇಗೆ ತಯಾರಿಮಾಡಿ ಸೇವಿಸಬೇಕೆಂದು ಸಹ ಹೇಳುತ್ತಾನೆ.

ಅಂಗಡಿಯ ಸಹಾಯಕನ ಹಿಂದಿರುವ ಗೋಡೆಯ ಒಂದು ಪಕ್ಕದಲ್ಲಿ ಶೆಲ್ಫಿನ ಮೇಲೆ ಉದ್ದುದ್ದದ ಜಾರ್‌ ಇವೆ. ಇವುಗಳಲ್ಲಿ ವಿಧವಿಧವಾದ ಒಣಗಿದ ಬೇರುಗಳು, ಎಲೆಗಳು ಹಾಗೂ ಕಡ್ಡಿಗಳಿವೆ. ಈ ಗಿಡಮೂಲಿಕೆಗಳ ಬಗ್ಗೆ ಗ್ರಾಹಕರು ಚೆನ್ನಾಗಿ ತಿಳಿದಿರುತ್ತಾರೆ. ಆದುದರಿಂದ ಅವರೇ ಇವುಗಳನ್ನು ತೆಗೆದುಕೊಂಡು ಹೋಗಿ ಔಷಧಿಯನ್ನು ತಯಾರಿಸಬಹುದು ಇಲ್ಲವೆ ಅಡಿಗೆಗೆ ಉಪಯೋಗಿಸಬಹುದು. ಅಂಗಡಿಯ ಮತ್ತೊಂದು ಪಕ್ಕದಲ್ಲಿ, ನೆಲದಿಂದ ಚಾವಣಿಯ ವರೆಗೆ ದೊಡ್ಡ ಕ್ಯಾಬಿನೆಟ್‌ ಇದ್ದು, ಬಳಕೆಯಿಂದಾಗಿ ಸವೆದುಹೋಗಿರುವ ಡ್ರಾಅರ್‌ಗಳಿವೆ. ಇದನ್ನು ಬೀಟ್ಸೀಗ್ವೇ ಅಥವಾ “ಒಂದು ನೂರು ಮಕ್ಕಳ ಕ್ಯಾಬಿನೆಟ್‌” ಎಂದು ಕರೆಯಲಾಗುತ್ತದೆ. ಏಕೆಂದರೆ, ಈ ರೀತಿಯ ಗಿಡಮೂಲಿಕೆಯ ಕ್ಯಾಬಿನೆಟ್‌ನಲ್ಲಿ ನೂರು ಅಥವಾ ಅದಕ್ಕಿಂತ ಹೆಚ್ಚು ಡ್ರಾಅರ್‌ಗಳಿರಬಹುದು. ಈ ಡ್ರಾಅರ್‌ಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಗಿಡಮೂಲಿಕೆಯ ಔಷಧಗಳನ್ನು ಸುಲಭವಾಗಿ ಕಂಡುಕೊಳ್ಳಬಹುದು. ಮತ್ತು ಯಾವಾಗಲೂ ಉಪಯೋಗಿಸುವ ಔಷಧಗಳನ್ನು ಕೈಗೆಟುಕುವ ಸ್ಥಳಗಳಲ್ಲಿ ಇಡಲಾಗಿರುತ್ತದೆ. ಈ ಡ್ರಾಅರ್‌ಗಳ ಮೇಲೆ ಲೇಬಲ್‌ ಅನ್ನು ಅಂಟಿಸಿರದೇ ಇರುವುದು ಅಸಾಮಾನ್ಯವಾದ ಸಂಗತಿಯೇನಲ್ಲ. ಏಕೆಂದರೆ, ಅನುಭವಿ ಸಹಾಯಕರಿಗೆ ಯಾವ ಗಿಡಮೂಲಿಕೆ ಎಲ್ಲಿದೆ ಎಂಬುದು ನಿಖರವಾಗಿ ಗೊತ್ತಿರುತ್ತದೆ.

ಸಹಾಯಕನು ಎಷ್ಟು ಚುರುಕಾಗಿ ಗಿಡಮೂಲಿಕೆಯನ್ನು ತೂಕಮಾಡಿ ಆ ಮಹಿಳೆಗೆ ಕೊಡುತ್ತಿದ್ದಾನೆ ನೋಡಿರಿ. ಅವನು ಒಂದು ಸೂಕ್ಷ್ಮವಾದ ಆದರೆ ನಿಷ್ಕೃಷ್ಟವಾದ ಏಷ್ಯಾದ ತಕ್ಕಡಿಯನ್ನು ಉಪಯೋಗಿಸುತ್ತಿದ್ದಾನೆ. ಒಂದು ಪಕ್ಕದಲ್ಲಿ ಅಳತೆಕೋಲಿದ್ದು, ಮೂರು ತಂತಿಗಳಿಂದ ಕೂಡಿದ ವರ್ತುಲಾಕಾರದ ತಟ್ಟೆಯು ತೂಗುತ್ತಿದೆ ಮತ್ತು ಇನ್ನೊಂದು ಕಡೆ ತೂಕದ ಬಟ್ಟು ಇದೆ. ಕೆಲವೊಂದು ಗಿಡಮೂಲಿಕೆಗಳನ್ನು ಅಧಿಕ ಪ್ರಮಾಣದಲ್ಲಿ ತೆಗೆದುಕೊಂಡರೆ ಜೀವಕ್ಕೆ ಅಪಾಯ ಎಂಬುದು ಅವನಿಗೆ ಗೊತ್ತಿರುವುದರಿಂದ, ಅವನು ಕಣ್ಣಲ್ಲಿ ಕಣ್ಣಿಟ್ಟು ತೂಕಮಾಡಬೇಕಾಗಿರುತ್ತದೆ. ಆದರೆ ಎಲ್ಲ ಪದಾರ್ಥವು ತೂಕಮಾಡಲ್ಪಡುವುದಿಲ್ಲ. ಅವನು ಬೇರೆ ಬೇರೆ ಡ್ರಾಅರ್‌ನಿಂದ ಅರ್ಧಮುಷ್ಟಿಯಷ್ಟು ಗಿಡಮೂಲಿಕೆಗಳನ್ನು ತೆಗೆದು, ಕಾಗದದ ಮೇಲೆ ಹಾಕುತ್ತಿದ್ದಾನೆ. ಹೌದು, ನೀವು ನೋಡುತ್ತಿರುವುದು ಸರಿಯೇ. ಈ ಔಷಧಿಯಲ್ಲಿ ಸಿಕಾಡ ಕೀಟದ ರೆಕ್ಕೆಯು ಸಹ ಇದೆ. ಈ ಗಿಡಮೂಲಿಕೆಗಳನ್ನು ಅವನು ಪೊಟ್ಟಣಮಾಡಿ ಕೊಡುವಾಗ, ಈ ಔಷಧದ ಗುಟುಕನ್ನು ಹೇಗೆ ತಯಾರಿಸಬೇಕು ಎಂಬುದನ್ನು ಆ ಮಹಿಳೆಗೆ ಹೇಳುತ್ತಿದ್ದಾನೆ.

ಗಿಡಮೂಲಿಕೆಯ ಔಷಧಗಳನ್ನು ಹಲವಾರು ವಿಧಗಳಲ್ಲಿ ತಯಾರಿಸಲಾಗುತ್ತದೆ. ಮತ್ತು ಸೇವಿಸಲಾಗುತ್ತದೆ. ಕೆಲವು ಪುಡಿ ಔಷಧವಾಗಿರುತ್ತವೆ. ಈ ಔಷಧದ ಗುಟುಕನ್ನು ರೋಗಿಯು ಬಿಸಿನೀರಿನಲ್ಲಿ ಕರಗಿಸಿ, ನಂತರ ಅದನ್ನು ಕುಡಿಯುತ್ತಾನೆ. ಕೆಲವೊಂದು, ಪೇಸ್ಟ್‌ ರೀತಿಯಲ್ಲಿರುತ್ತವೆ. ಇವುಗಳನ್ನು ಜೇನುತುಪ್ಪ ಇಲ್ಲವೆ ಆಲ್ಕೋಹಾಲ್‌ನಲ್ಲಿ ತೆಗೆದುಕೊಳ್ಳಲಾಗುತ್ತದೆ. ಆದರೆ, ತೀರ ಸಾಮಾನ್ಯವಾದ ತಯಾರಿ ವಿಧಾನವನ್ನು ಈ ಮಹಿಳೆಗೆ ಹೇಳಲಾಯಿತು. ಅಂದರೆ, ಕಷಾಯ ಮಾಡುವ ಮೂಲಕ ಇದನ್ನು ತೆಗೆದುಕೊಳ್ಳಬೇಕೆಂದು ಹೇಳಲಾಯಿತು. ಅಂದರೆ, ಅವಳು ಪಿಂಗಾಣಿ ಮಡಕೆಯಲ್ಲಿ ಸುಮಾರು ಒಂದು ಗಂಟೆಯ ತನಕ ಈ ಗಿಡಮೂಲಿಕೆಗಳನ್ನು ಕುದಿಸಬೇಕು. ಆಮೇಲೆ ಪ್ರತಿ ಕೆಲವು ಗಂಟೆಗಳ ನಂತರ ಸ್ವಲ್ಪ ಸ್ವಲ್ಪ ಅದನ್ನು ಕುಡಿಯಬೇಕು. ಆ ಮಹಿಳೆಗೆ ಇನ್ನೂ ಔಷಧಿ ಬೇಕಾಗಿರುವಲ್ಲಿ ನೇರವಾಗಿ ಅಂಗಡಿಗೆ ಹೋದರೆ ಸಾಕು. ಔಷಧಿಯು ಅವಳಿಗೆ ಸಿಗುತ್ತದೆ.

ಅಬ್ಬಾ ಕೊನೆಗೂ, ಕ್ವಾಕ್‌ ಕಿಟ್‌ನ ಸರದಿ ಬಂತು. ಡಾಕ್ಟರ್‌ ಅವನ ಬ್ಲಡ್‌ ಪ್ರೆಷರ್‌ ಅನ್ನು ನೋಡುವುದೋ ಇಲ್ಲವೆ ಅವನ ಹೃದಯಬಡಿತವನ್ನು ಕೇಳಿಸಿಕೊಳ್ಳುವುದೋ ಇಲ್ಲ. ಅದಕ್ಕೆ ಬದಲಿಗೆ, ಕ್ವಾಕ್‌ ಕಿಟ್‌ಗೆ ಸರಿಯಾಗಿ ನಿದ್ರೆ ಬರುತ್ತದೋ? ಪಚನಕ್ರಿಯೆ ಸರಿಯಾಗಿದೆಯಾ, ಹಸಿವೆಯಾಗುತ್ತದೆಯೋ? ಸರಿಯಾಗಿ ಮಲವಿಸರ್ಜನೆಯಾಗುತ್ತದೋ? ಜ್ವರವಿದೆಯೇ, ಚರ್ಮವು ಹೇಗಿದೆ ಮತ್ತು ಬಣ್ಣವು ಯಾವ ರೀತಿಯದ್ದಾಗಿದೆ? ಎಂಬ ರೋಗಲಕ್ಷಣಗಳನ್ನು ಕೇಳುತ್ತಾನೆ. ಡಾಕ್ಟರ್‌ ತೀರ ಹತ್ತಿರದಿಂದ ಅವನ ಕಣ್ಣುಗಳನ್ನು ಪರೀಕ್ಷಿಸುತ್ತಾನೆ ಮತ್ತು ಅವನ ನಾಲಿಗೆಯ ಮೇಲೆ ಬೇರೆ ಬೇರೆ ಜಾಗದಲ್ಲಿ ಅದರ ಬಣ್ಣ ಹೇಗಿದೆ ಎಂಬುದನ್ನು ಪರೀಕ್ಷಿಸುತ್ತಾನೆ. ಈಗ ಅವನು ಕ್ವಾಕ್‌ ಕಿಟ್‌ನ ಎರಡೂ ಮಣಿಕಟ್ಟನ್ನು ಹಿಡಿದುಕೊಂಡು, ಬೇರೆ ಬೇರೆ ಸ್ಥಳಗಳಲ್ಲಿ ಒತ್ತಡವನ್ನು ಬದಲಾಯಿಸುತ್ತಾ ನಾಡಿಮಿಡಿತವನ್ನು ಪರೀಕ್ಷಿಸುತ್ತಾನೆ. ಈ ರೀತಿಯ ಪರೀಕ್ಷೆಯು ದೇಹದ ವಿವಿಧ ಅವಯವಗಳು ಹಾಗೂ ಭಾಗಗಳು ಯಾವ ಸ್ಥಿತಿಯಲ್ಲಿವೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇನು, ಶರೀರದಿಂದ ಹೊರಬರುತ್ತಿರುವ ಅಸಾಮಾನ್ಯವಾದ ವಾಸನೆಗಳನ್ನು ಸಹ ಡಾಕ್ಟರ್‌ ಕಂಡುಹಿಡಿಯುತ್ತಾನೆ! ಈಗ ಅವನ ತೀರ್ಪೇನು? ಅದೇ ಕ್ವಾಕ್‌ ಕಿಟ್‌ಗೆ ಫ್ಲೂ ಇದೆ. ಅವನು ಸಂಪೂರ್ಣವಾಗಿ ಬೆಡ್‌ ರೆಸ್ಟ್‌ ತೆಗೆದುಕೊಳ್ಳಬೇಕು ಮತ್ತು ಕುದಿಸಿ, ಕುಡಿಯಬೇಕಾಗಿರುವ ಔಷಧಿಯ ಜೊತೆಗೆ ಸಾಕಷ್ಟು ನೀರನ್ನು ಕುಡಿಯಬೇಕು. ಗಿಡಮೂಲಿಕೆಯ ಟೀ ಬಹಳ ಕಹಿಯಾಗಿರುತ್ತದೆ ಆದರೆ ಅದರಿಂದ ರೋಗ ಉಪಶಮನವಾಗುತ್ತದೆ. ಯಾವ ಆಹಾರವನ್ನು ತಿನ್ನಬಾರದು ಎಂದು ಹೇಳುವುದರ ಜೊತೆಗೆ, ಕ್ವಾಕ್‌ ಕಿಟ್‌ ಈ ಔಷಧಿಯನ್ನು ತೆಗೆದುಕೊಂಡ ಮೇಲೆ, ಅವನ ಬಾಯಿಯಲ್ಲಿ ಒಳ್ಳೆಯ ರುಚಿಯಿರಲೆಂದು ಸಕ್ಕರೆ ಪಾಕದಲ್ಲಿ ನೆನೆಸಿಟ್ಟ ಪ್ಲಮ್‌ ಅನ್ನು ತೆಗೆದುಕೊಳ್ಳುವಂತೆ ಹೇಳುತ್ತಾನೆ.

ಈಗ ಕ್ವಾಕ್‌ ಕಿಟ್‌ ಗಿಡಮೂಲಿಕೆಗಳ ಪೊಟ್ಟಣದೊಂದಿಗೆ ಹೊರಹೋಗುತ್ತಾನೆ. ಡಾಕ್ಟರ್‌ನ ಕನ್ಸಲ್ಟೇಷನ್‌ ಫೀಸು ಹಾಗೂ ಔಷಧಿಯ ಖರ್ಚು ಎಲ್ಲ ಸೇರಿಸಿ, ಸುಮಾರು 20 ಡಾಲರಿಗಿಂತಲೂ ಕಡಿಮೆ. ನಿಜವಾಗಿಯೂ ಉಳಿತಾಯವೇ. ಗಿಡಮೂಲಿಕೆಗಳು ಪವಾಡದಿಂದ ವಾಸಿಮಾಡುವುದಿಲ್ಲವಾದರೂ, ನೋಡುತ್ತಾ ಬನ್ನಿ ಕ್ವಾಕ್‌ ಕಿಟ್‌ ಇನ್ನೂ ಕೆಲವೇ ದಿವಸಗಳೊಳಗೆ ವಾಸಿಯಾಗುತ್ತಾನೆ. ಆದರೆ ಹೆಚ್ಚು ಔಷಧವನ್ನು ತೆಗೆದುಕೊಳ್ಳುವುದು ಬೇಗನೆ ವಾಸಿಮಾಡುವುದೆಂದು ಕೆಲವರು ನೆನಸಿ, ಹೆಚ್ಚನ್ನು ತೆಗೆದುಕೊಂಡ ತಪ್ಪನ್ನೇ ಇವನು ಮಾಡಬಾರದು ಅಷ್ಟೇ. ಏಕೆಂದರೆ, ಕೆಲವು ಗಿಡಮೂಲಿಕೆಗಳ ಔಷಧಿಯ ತೀರ ಹೆಚ್ಚು ಡೋಸ್‌ ಅನ್ನು ತೆಗೆದುಕೊಂಡ ಕಾರಣ, ಕೆಲವರಿಗೆ ಅತಿಯಾದ ರಿಆ್ಯಕ್ಷನ್‌ ಆಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಕೆಲವು ದೇಶಗಳಲ್ಲಿ ಗಿಡಮೂಲಿಕೆಗಳ ಇಲ್ಲವೆ ಚೈನೀಸ್‌ ಸಾಂಪ್ರದಾಯಿಕ ಔಷಧದ ಡಾಕ್ಟರ್‌ಗಳ ಮೇಲೆ ಯಾವುದೇ ಕಾನೂನು ಕಟ್ಟುಪಾಡುಗಳಿಲ್ಲ. ಆದುದರಿಂದ ಇದು ಕೆಲವರನ್ನು ಗಿಡಮೂಲಿಕೆಯ ಢೋಂಗಿ ಡಾಕ್ಟರ್‌ ಆಗಿ ನಟಿಸುವಂತೆ ಮತ್ತು ವಾಸಿಕಾರಕ ಎಂದು ಸುಳ್ಳು ಹೇಳಿ ಹಾನಿಕರವಾದ ಗಿಡಮೂಲಿಕೆಯ ಔಷಧಗಳನ್ನು ಮಾರುವುದಕ್ಕೆ ಎಡೆಮಾಡಿಕೊಟ್ಟಿದೆ. ಆದುದರಿಂದಲೇ, ಏಷ್ಯಾದ ಅನೇಕ ರೋಗಿಗಳು ಸಾಂಪ್ರದಾಯಿಕ ಚೈನೀಸ್‌ ಡಾಕ್ಟರ್‌ ಬಳಿ ಹೋಗಬೇಕು ಎಂದು ಮನಸ್ಸುಮಾಡುವಾಗಲೆಲ್ಲ, ಹತ್ತಿರದ ಸಂಬಂಧಿಗಳು ಹಾಗೂ ಸ್ನೇಹಿತರು ಶಿಫಾರಸ್ಸುಮಾಡಿದ ಡಾಕ್ಟರ್‌ ಹತ್ತಿರವೇ ಹೋಗುತ್ತಾರೆ.

ಗಿಡಮೂಲಿಕೆಗಳೇ ಆಗಿರಲಿ ಇಲ್ಲವೆ ಇಂಗ್ಲಿಷ್‌ ಔಷಧಗಳೇ ಆಗಿರಲಿ ಯಾವುದೂ ಎಲ್ಲ ರೋಗವನ್ನು ವಾಸಿಮಾಡಸಾಧ್ಯವಿಲ್ಲ. ಆದರೂ, ಚೈನೀಸ್‌ ಔಷಧದಂಗಡಿ ಮತ್ತು ಅದರ ಸಾಂಪ್ರದಾಯಿಕ ಔಷಧದ ಡಾಕ್ಟರ್‌ ಏಷ್ಯಾದ ಜೀವನದಲ್ಲಿ ಅವಿಭಾಜ್ಯದ ಅಂಗವಾಗಿಹೋಗಿದ್ದಾರೆ.

(g00 11/8)

[ಪಾದಟಿಪ್ಪಣಿಗಳು]

^ ಎಚ್ಚರ! ಪತ್ರಿಕೆಯು ಆರೋಗ್ಯ ಸಮಸ್ಯೆಗಳಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯನ್ನು ಶಿಫಾರಸುಮಾಡುವುದಿಲ್ಲ. ಯಾವುದೇ ಚಿಕಿತ್ಸೆಯನ್ನು ಪಡೆದುಕೊಳ್ಳಲಿ ಅದು ಬೈಬಲಿನ ತತ್ವಗಳಿಗೆ ವಿರುದ್ಧವಾಗಿಲ್ಲ ಎಂಬುದನ್ನು ಕ್ರೈಸ್ತರು ಖಚಿತಪಡಿಸಿಕೊಳ್ಳತಕ್ಕದ್ದು.

^ ಸೋ ರಾಜಮನೆತನದ ಆಳ್ವಿಕೆಯ ಮುಂಚೆ, ಪುರಾಣೋಕ್ತ ಅರಸನಾದ ಪೀತ ಸಮ್ರಾಟನು ಸಾ.ಶ.ಪೂ. 2697ರಿಂದ 2595ರ ವರೆಗೆ ಆಳಿದನು ಎಂದು ಹೇಳಲಾಗುತ್ತದೆ. ಆದರೆ, ನೇ ಜಿಂಗ್‌ ಪುಸ್ತಕವು ಸೋ ಆಳ್ವಿಕೆಯು ಅಂತ್ಯಗೊಳ್ಳುವ ತನಕ ಬರೆಯಲ್ಪಟ್ಟಿರಲಿಲ್ಲ ಎಂದು ಅನೇಕ ವಿದ್ವಾಂಸರ ನಂಬೋಣವಾಗಿದೆ. ಈ ಆಳ್ವಿಕೆಯು ಸಾ.ಶ.ಪೂ. 1100ರಿಂದ 250ರ ವರೆಗಿತ್ತು.

^ “ಯಿನ್‌” ಅಂದರೆ, “ತಂಪು” ಅಥವಾ “ನೆರಳು” ಎಂದಾಗಿದೆ. ಮಾತ್ರವಲ್ಲ ಇದು ಕತ್ತಲೆ, ತಣ್ಣನೆಯ, ಸ್ತ್ರೀತ್ವ ಎಂಬರ್ಥವನ್ನು ಸಹ ಕೊಡುತ್ತದೆ. “ಯಾಂಗ್‌” ಇದಕ್ಕೆ ವಿರುದ್ಧವಾಗಿದೆ. ಇದು ಬೆಳಕು, ಬಿಸಿ, ಪುರುಷತ್ವ ಎಂಬರ್ಥವನ್ನು ಕೊಡುತ್ತದೆ.

[ಪುಟ 23ರಲ್ಲಿರುವ ಚಿತ್ರಗಳು]

ಒಣಗಿಸಿದ ಕಡಲ್ಗುದುರೆಗಳನ್ನು ಸೇರಿಸಿ ವಿಚಿತ್ರವಾದ ಪದಾರ್ಥಗಳನ್ನು ಗಿಡಮೂಲಿಕೆಗಳ ಅಂಗಡಿಯಲ್ಲಿ ನೋಡಸಾಧ್ಯವಿದೆ

[ಪುಟ 24ರಲ್ಲಿರುವ ಚಿತ್ರಗಳು]

ಒಣಗಿಸಿದ ಬೇರುಗಳು, ಎಲೆಗಳು ಮತ್ತು ಕಡ್ಡಿಗಳನ್ನು ಜಾಗರೂಕವಾಗಿ ತೂಕಮಾಡಲಾಗುತ್ತದೆ