ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಒತ್ತಡಕ್ಕೊಳಗಾಗಿರುವ ಮಕ್ಕಳು

ಭಾರತದಲ್ಲಿ, ಶಾಲೆಯ ವಾರ್ಷಿಕ ಪರೀಕ್ಷೆಯ ಸಮಯವು ಅನೇಕ ಮಕ್ಕಳ ಮೇಲೆ ಹೆಚ್ಚು ಒತ್ತಡವನ್ನು ಹೇರುತ್ತದೆ ಎಂಬುದಾಗಿ ಮುಂಬಯಿಯ ಏಷ್ಯನ್‌ ಏಜ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಇದಕ್ಕೆ ಕಾರಣವೇನು? ಪರೀಕ್ಷೆಗೆ ಮುಂಚೆ ಅವಸರದಲ್ಲಿ ತಯಾರಿಮಾಡುವುದು ಮತ್ತು ಒಳ್ಳೇ ಅಂಕಗಳನ್ನು ಪಡೆದುಕೊಳ್ಳಬೇಕೆಂಬ ಒತ್ತಡವು ಕೆಲವು ಮಕ್ಕಳ ಶಕ್ತಿಗೆ ಮೀರಿದ್ದಾಗಿರುತ್ತದೆ. ಇದರಿಂದಾಗಿ, ಪರೀಕ್ಷೆಯ ಸಮಯದಲ್ಲಿ ಮನೋಶಾಸ್ತ್ರಜ್ಞರನ್ನು ಭೇಟಿಮಾಡುವ ಮಕ್ಕಳ ಸಂಖ್ಯೆಯು ಎರಡು ಪಟ್ಟು ಇರುತ್ತದೆ. ಕೆಲವು ಹೆತ್ತವರು, ತಮ್ಮ ಮಕ್ಕಳು ಪರೀಕ್ಷೆಯನ್ನು ಉತ್ತಮವಾಗಿ ಬರೆಯಬೇಕು ಎಂಬ ಆತಂಕದಿಂದ ಎಲ್ಲಾ ರೀತಿಯ ಮನೋರಂಜನೆಗೂ ಪೂರ್ಣ ವಿರಾಮವನ್ನು ಹಾಕಿಬಿಡುತ್ತಾರೆ. “ಹೆತ್ತವರು, ಮಕ್ಕಳನ್ನು ತೀವ್ರವಾದ ಒತ್ತಡಕ್ಕೀಡುಮಾಡುತ್ತಾರೆ. ಅದರೊಂದಿಗೆ ಯಾರು ಹೆಚ್ಚು ಅಂಕಗಳನ್ನು ಗಳಿಸುತ್ತಾರೆ ಎಂಬ ವಿಷಯದಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆಯು ಇರುತ್ತದೆ” ಎಂಬುದಾಗಿ ಮನೋಶಾಸ್ತ್ರಜ್ಞರಾದ ವಿ. ಕೆ. ಮುಂದ್ರಾ ಹೇಳುತ್ತಾರೆ. ಅವರು ಇನ್ನೂ ಹೇಳುವುದೇನೆಂದರೆ, ಅನೇಕ ಹೆತ್ತವರು ತಮ್ಮ “ಮಕ್ಕಳನ್ನು ಸ್ವಲ್ಪ ಆರಾಮವಾಗಿರುವಂತೆ ಬಿಡುವುದರಿಂದ ಅವರ ಮನಸ್ಸು ಪುನರ್‌ಚೇತನಗೊಳ್ಳುವುದು ಹಾಗೂ ಚೆನ್ನಾಗಿ ಕಲಿಯಲು ಸಹಾಯಮಾಡುವುದು ಎಂಬುದನ್ನು ಅರ್ಥಮಾಡಿಕೊಂಡಿಲ್ಲ.” ಡಾಕ್ಟರ್‌ ಹರೀಷ್‌ ಶೆಟ್ಟಿ ಹೇಳುವುದೇನೆಂದರೆ, ಪರೀಕ್ಷೆಯೆಂಬ ಪೆಡಂಭೂತವು “ಒಂದರಿಂದ ಏಳನೇ ತರಗತಿಯ ಮಕ್ಕಳನ್ನು ಕೂಡ ಹಿಡಿದುಕೊಂಡಿದೆ.” (g00 11/22)

ಕಾಡುಹಂದಿಗಳು ನಗರವಾಸಿಗಳಾಗುತ್ತಿವೆ

ಸ್ವಾಭಾವಿಕವಾಗಿ ಕಾಡುಹಂದಿಗಳು ತುಂಬ ನಾಚಿಕೆ ಸ್ವಭಾವದ ಪ್ರಾಣಿಗಳು. ಇವು, ಕಾಡನ್ನು ಬಿಟ್ಟು ನಗರಕ್ಕೆ ವಲಸೆಹೋಗಲು ಪ್ರಾರಂಭಿಸಿವೆ. ಏಕೆಂದರೆ, ನಗರಗಳು ಬೇಕಾದಷ್ಟು ಆಹಾರವನ್ನು ಒದಗಿಸುತ್ತವೆ. ಅಷ್ಟೇ ಅಲ್ಲ, ಬೇಟೆಯಾಡುವವರಿಂದ ರಕ್ಷಣೆಯನ್ನೂ ಒದಗಿಸುತ್ತವೆ ಎಂಬುದಾಗಿ ಜರ್ಮನಿಯ ವಾರಪತ್ರಿಕೆಯಾದ ಡೀ ವೊಕ್‌ ಹೇಳುತ್ತದೆ. ಹೆಣ್ಣು ಕಾಡುಹಂದಿಗಳು ಜರ್ಮನಿಯ ಬರ್ಲಿನ್‌ ನಗರದಲ್ಲಿ ಮರಿಗಳಿಗೆ ಜನ್ಮನೀಡಿವೆ. ಹಸಿದು ಕಂಗಾಲಾಗಿರುವ ಈ ಪ್ರಾಣಿಗಳು ಆಹಾರಕ್ಕಾಗಿ ಕಾಡುಗಳಲ್ಲಿ ಇಲ್ಲವೇ ಸಾರ್ವಜನಿಕ ಉದ್ಯಾನವನಗಳಲ್ಲಿ ಮಾತ್ರವೇ ತಿರುಗುವುದಿಲ್ಲ, ಅವು ಟ್ಯೂಲಿಪ್‌ ಹೂಗಳನ್ನು ತಿಂದುಹಾಕುವ ಮೂಲಕ ಖಾಸಗಿ ಉದ್ಯಾನವನಗಳನ್ನು ಕೂಡ ಧ್ವಂಸಮಾಡುತ್ತವೆ. ಸುಮಾರು 350 ಕಿಲೋಗ್ರ್ಯಾಮ್‌ಗಳಷ್ಟು ತೂಕವಿರುವ ಈ ಕಾಡುಹಂದಿಗಳು ಅನೇಕವೇಳೆ ನಗರವಾಸಿಗಳನ್ನು ಹೆದರಿಸಿಬಿಟ್ಟಿವೆ. ಕೆಲವೊಂದು ಸಂದರ್ಭಗಳಲ್ಲಿ ಈ ರೀತಿಯಾಗಿ ಹೆದರಿಹೋದವರು, ರಕ್ಷಣೆಗಾಗಿ ಮರಗಳ ಇಲ್ಲವೆ ಟೆಲಿಫೋನು ಕಂಬಗಳ ಮೊರೆಹೋಗಿದ್ದಾರೆ. ಈ ಪ್ರಾಣಿಗಳು ಅಸಂಖ್ಯಾತ ರಸ್ತೆ ಅಪಘಾತವನ್ನು ಉಂಟುಮಾಡಿವೆ. ಅನೇಕ ನಿವಾಸಿಗಳು ಕೆಲಸದಿಂದ ಮನೆಗೆ ಹಿಂದಿರುಗಿದಾಗ ಮುಳ್ಳುಗಳ ಪೊದೆಯಂತೆ ಗುಂಪಾಗಿ ನಿಂತಿರುವ ಈ ಆಕ್ರಮಣಕಾರಿಗಳನ್ನು ಎದುರಿಸಬೇಕಾಯಿತು. “ಮನೆಯ ಬಾಗಿಲಿನಿಂದ ನನ್ನ ಕಾರಿನ ವರೆಗೆ 20 ಕಾಡುಹಂದಿಗಳು ನಿಂತಿರುವಾಗ, ನಾನು ಹೇಗೆ ತಾನೆ ಮನೆಯ ಒಳಗೆ ಹೋಗಲು ಸಾಧ್ಯ” ಎಂಬುದಾಗಿ ಒಬ್ಬ ವ್ಯಕ್ತಿಯು ಕೇಳುತ್ತಾನೆ. (g00 11/22)

ಹೊಸ ಜೀವಿಗಳಿಗೆ ನಾಮಕರಣ

“ಎಲ್ಲಾ ಸೌಕರ್ಯಗಳಿರುವ ಒಬ್ಬ ಪ್ರಿಯ ವ್ಯಕ್ತಿಗೆ ಕೊಡುವುದಕ್ಕಾಗಿ, ವಿಶೇಷ ಉಡುಗೊರೆಯೊಂದನ್ನು ನೀವು ಹುಡುಕುತ್ತಿದ್ದೀರೋ? ಹಾಗಾದರೆ, ನಿಮಗೆ ಬೇಕಾಗಿರುವ ಸಹಾಯ ಇಲ್ಲಿದೆ. ಅದೇನೆಂದರೆ, ಜೈವಿಕವೈವಿಧ್ಯತೆಯ ಸಂಶೋಧನೆಗಾಗಿ ನೀವು ದಾನವನ್ನು ಕೊಡುವುದಾದರೆ, ಈ ಹಿಂದೆ ಅಜ್ಞಾತವಾಗಿದ್ದ ಆರ್ಕಿಡ್‌, ಸೊಳ್ಳೆ ಅಥವಾ ಸಮುದ್ರದಲ್ಲಿರುವ ಮೃದ್ವಂಗಿಗಳಂತಹ ಜೀವಿಗಳಿಗೆ ನಿಮ್ಮ ಪ್ರಿಯ ವ್ಯಕ್ತಿಗಳ ಹೆಸರನ್ನು ಇಡಬಹುದು. ಮತ್ತು ಆ ಹೆಸರನ್ನು ವೈಜ್ಞಾನಿಕ ಸಾಹಿತ್ಯದಲ್ಲಿ ಚಿರಸ್ಮರಣೀಯವಾಗಿ ದಾಖಲಿಸಿಡಬಹುದು” ಎಂಬುದಾಗಿ ಸೈಯನ್ಸ್‌ ಪತ್ರಿಕೆಯು ತಿಳಿಸುತ್ತದೆ. ಈ ಜೀವಿಗಳಿಗೆ ಬೇರೆಯವರ ಹೆಸರನ್ನು ಇಡಲು ನಿಮಗೆ ಇಷ್ಟವಿಲ್ಲದಿದ್ದರೆ, ನಿಮ್ಮ ಹೆಸರನ್ನೇ ಇಡಬಹುದು. ಇತ್ತೀಚೆಗೆ ಮಾಡಲ್ಪಟ್ಟ ಸಂಶೋಧನೆಗನುಸಾರ, ಇಂದು ಬದುಕುಳಿದಿರುವ ಜೀವಿಗಳಲ್ಲಿ ಕೇವಲ ಹತ್ತರಲ್ಲಿ ಒಂದು ಭಾಗದಷ್ಟು ಅಥವಾ ಕೆಲವೇ ಕೆಲವು ಜೀವಿಗಳು ಮಾತ್ರ ವೈಜ್ಞಾನಿಕ ಸಾಹಿತ್ಯಗಳಲ್ಲಿ ವರ್ಣಿಸಲ್ಪಟ್ಟಿವೆ. ಸಂಗ್ರಹಿಸಲ್ಪಟ್ಟಿರುವ ಸಾವಿರಾರು ಜೀವಿಗಳು ಅನಾಮಧೇಯವಾಗಿಯೇ ಸಂಗ್ರಹಾಲಯದ ಡ್ರಾಯರುಗಳಲ್ಲಿ ಉಳಿದುಕೊಂಡಿವೆ. ಅಲ್ಲಿ, ಅವು ತಮ್ಮ ನಾಮಕರಣಕ್ಕಾಗಿಯೂ ವೈಜ್ಞಾನಿಕ ಪತ್ರಿಕೆಗಳಲ್ಲಿ ತಮ್ಮನ್ನು ವರ್ಣಿಸಲ್ಪಡುವುದಕ್ಕಾಗಿಯೂ ಕಾಯುತ್ತಿವೆ. ಆದುದರಿಂದ, ಈಗ ಜನರು ವೆಬ್‌ಸೈಟುಗಳನ್ನು ತೆರೆದು ನೋಡುವ ಮೂಲಕ, ಪ್ರಕಾಶಿಸಲ್ಪಡುವುದಕ್ಕಾಗಿ ಸಿದ್ಧವಾಗಿರುವ ಅನಾಮಧೇಯ ಜೀವಿಗಳ ಚಿತ್ರಗಳನ್ನು ವರ್ಣನೆಯೊಂದಿಗೆ ನೋಡಬಹುದು. ನಂತರ 2,800 ಡಾಲರ್‌ ಅಥವಾ ಅದಕ್ಕಿಂತಲೂ ಹೆಚ್ಚು ಹಣವನ್ನು ದಾನವಾಗಿ ಕೊಡುವ ಮೂಲಕ, ತಾವು ಇಚ್ಛಿಸುವ ಜೀವಿಗಳಿಗೆ ಒಂದು ಲ್ಯಾಟಿನ್‌ ಹೆಸರನ್ನು ಇಡಬಹುದು. ಹೀಗೆ ದಾನವನ್ನು ಕೊಟ್ಟು ನಾಮಕರಣ ಮಾಡುವ ಮೂಲಕ, ಬೈಯೊಪ್ಯಾಟ್‌ ಎಂದು ಕರೆಯಲ್ಪಡುವ ಸಂಸ್ಥೆಯು ವರ್ಗೀಕರಣ ತತ್ವಕ್ಕಾಗಿಯೂ ಹಾಗೂ ಹೊಸ ಜೀವಿಗಳ ಸಂರಕ್ಷಣೆಗಾಗಿಯೂ ಹಣವನ್ನು ಶೇಖರಿಸಲು ಆಶಿಸುತ್ತದೆ. (g00 11/8)

ಬಾಲ್ಯ ವಿವಾಹ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗನುಸಾರ ಭಾರತದಲ್ಲಿ ಮದುವೆಯಾಗಿರುವ ತರುಣತರುಣಿಯರಲ್ಲಿ ಹೆಚ್ಚು ಕಡಿಮೆ 36 ಪ್ರತಿಶತದಷ್ಟು ಮಂದಿ 13 ವರ್ಷದಿಂದ 16 ವರ್ಷದ ವಯಸ್ಸಿನವರಾಗಿದ್ದರು. ಆ ಅಧ್ಯಯನವು ಇನ್ನೂ ಕಂಡುಹಿಡಿದಿದ್ದೇನೆಂದರೆ, 17ರಿಂದ 19 ವರ್ಷ ವಯಸ್ಸಿನ ಹುಡುಗಿಯರು ಈಗಾಗಲೇ ತಾಯಿಯಾಗಿದ್ದರು ಇಲ್ಲವೇ ಗರ್ಭಿಣಿಯರಾಗಿದ್ದರು ಎಂಬುದಾಗಿ ಮುಂಬಯಿಯ ಏಷ್ಯನ್‌ ಏಜ್‌ ಪತ್ರಿಕೆಯು ವರದಿಸುತ್ತದೆ. 15ರಿಂದ 19 ವರ್ಷದ ಯುವ ತಾಯಂದಿರು ಗರ್ಭಧರಿಸುವುದರಿಂದ ಮರಣವನ್ನಪ್ಪುವ ಸಾಧ್ಯತೆಯು, 20ರಿಂದ 24 ವರ್ಷ ವಯಸ್ಸಿನ ತಾಯಿಯರಿಗೆ ಹೋಲಿಸಿನೋಡುವಾಗ, ಎರಡರಷ್ಟಿದೆ ಎಂಬುದಾಗಿ ವರದಿಯು ತಿಳಿಸುತ್ತದೆ. ಅಷ್ಟೇ ಅಲ್ಲ, ಕಳೆದ ಕೆಲವು ವರ್ಷಗಳಿಂದ 15ರಿಂದ 24 ವರ್ಷದ ಯುವಜನರು ರತಿರವಾನಿತ ಸೋಂಕುಗಳಿಗೆ ತುತ್ತಾಗಿರುವ ಸಂಖ್ಯೆಯು ಎರಡು ಪಟ್ಟಾಗಿದೆ. ಹೆಚ್ಚುತ್ತಿರುವ ಈ ಸಮಸ್ಯೆಗೆ ಸ್ನೇಹಿತರು ಮತ್ತು ಪ್ರಸಾರ ಮಾಧ್ಯಮವು ಲೈಂಗಿಕ ವಿಷಯಗಳ ಕುರಿತು ಕೊಡುವ ತಪ್ಪಾದ ಮಾಹಿತಿಯೇ ಕಾರಣವಾಗಿದೆ ಎಂಬುದಾಗಿ ಪರಿಣತರು ದೂರುತ್ತಾರೆ. (g00 11/22)

ರೋಗಹಾರಿ ವೈದ್ಯನೇ ಮತ್ತೊಂದು ರೋಗಕ್ಕೆ ದಾನಿ!

“ಮೂವತ್ತು ವರುಷಗಳ ಹಿಂದೆ, ಈಜಿಪ್ಟ್‌ನ ಐವರಲ್ಲಿ ಮೂರು ಜನ ಬಿಲ್‌ಹಾರ್ಸಿಅ (ರಕ್ತದಲ್ಲೂ ಮೂತ್ರಕೋಶದಲ್ಲೂ ಇರುವ ಪರಾವಲಂಬಿ ಚಪ್ಪಟೆ ಹುಳು) ಎಂಬ ದೇಹಾರೋಗ್ಯವನ್ನು ಕುಗ್ಗಿಸುವಂಥ ರೋಗದಿಂದ ಬಾಧಿತರಾದರು. ಇದು ಪರೋಪಜೀವಿಗಳಿಂದ ಆರಂಭವಾಗಿ ನೀರಿನಲ್ಲಿ ವಾಸಿಸುವ ಬಸವನ ಹುಳುಗಳಿಂದ ಹರಡಿಸಲ್ಪಡುತ್ತದೆ,” ಎಂಬುದಾಗಿ ದಿ ಇಕಾನಮಿಸ್ಟ್‌ ತಿಳಿಸುತ್ತದೆ. ಆಧುನಿಕ ಔಷಧಗಳನ್ನು ಉಪಯೋಗಿಸಿ ಮಾಡಿದ ಅಧಿಕವಾದ ಕಾರ್ಯಾಚರಣೆಗಳು, ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಿವೆ. ಆದರೆ, ಪ್ರಾರಂಭದಲ್ಲಿ ನಡಿಸಲ್ಪಟ್ಟ ಇಂತಹ ಕಾರ್ಯಾಚರಣೆಗಳಿಂದ, “ಲಕ್ಷಾಂತರ ಜನರು ಹೆಪಟೈಟಿಸ್‌-ಸಿ ಎಂಬ ರೋಗದಿಂದ ಬಾಧಿತರಾಗಿರಬಹುದು. ಈ ಮಾರಕ ವೈರಸ್‌, ‘ಬಿಲ್‌ಹಾರ್ಸಿಅ’ದ ಸ್ಥಾನವನ್ನು ತೆಗೆದುಕೊಂಡು, ಈಜಿಪ್ಟ್‌ನ ಪ್ರಧಾನ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಬಹುದು.” ಇದಕ್ಕೆ ಕಾರಣವೇನೆಂದರೆ, ಬಿಲ್‌ಹಾರ್ಸಿಅ ರೋಗವನ್ನು ತಡೆಗಟ್ಟಲಿಕ್ಕಾಗಿ ಕೊಡಲ್ಪಟ್ಟ ಇನ್‌ಜೆಕ್ಷನ್‌ನ ಸೂಜಿಗಳನ್ನು “ಪುನಃ ಪುನಃ ಉಪಯೋಗಿಸಲಾಯಿತು, ಮತ್ತು ಕೆಲವೊಮ್ಮೆ ಮಾತ್ರ ಸಂಪೂರ್ಣವಾಗಿ ಕ್ರಿಮಿಶುದ್ಧಿ ಮಾಡಲ್ಪಟ್ಟವು . . . 1988ರ ವರೆಗೆ ವಿಜ್ಞಾನಿಗಳು, ರಕ್ತದಲ್ಲಿ ಬೆಳೆಯುವ ಹೆಪಟೈಟಿಸ್‌-ಸಿ ವೈರಸ್‌ (ಏಚ್‌ಸಿವಿ) ಅನ್ನು ಕಂಡುಹಿಡಿಯಲಿಲ್ಲ,” ಎಂಬುದಾಗಿ ಆ ಪತ್ರಿಕೆಯು ಹೇಳುತ್ತದೆ. “ಲೋಕದಲ್ಲಿ, ಹೆಪಟೈಟಿಸ್‌-ಸಿ ವೈರಸ್‌ನಿಂದ ಬಾಧಿತರಾಗಿರುವವರು ಅತ್ಯಧಿಕ ಸಂಖ್ಯೆ”ಯಲ್ಲಿರುವುದು ಈಜಿಪ್ಟ್‌ನಲ್ಲೇ ಎಂದು ಸಮೀಕ್ಷೆಗಳು ತೋರಿಸುತ್ತವೆ. ಈಜಿಪ್ಟ್‌ನ 11 ದಶಲಕ್ಷ ಮಂದಿ​—⁠ಸರಾಸರಿ ಆರರಲ್ಲಿ ಒಬ್ಬರು​—⁠ಈ ರೋಗದಿಂದ ಬಾಧಿತರಾಗಿದ್ದು, ಇದರಲ್ಲಿ 70 ಪ್ರತಿಶತ ಕೇಸ್‌ಗಳು ಅಸ್ಥಿಗತ ಪಿತ್ರಜನಕಾಂಗದ ರೋಗವಾಗಿ ಬೆಳೆಯುತ್ತವೆ ಮತ್ತು 5 ಪ್ರತಿಶತ ಕೇಸ್‌ಗಳು ಮಾರಕವಾಗಿ ಪರಿಣಮಿಸುತ್ತವೆ. “ಇಷ್ಟರ ತನಕ, ಒಂದು ರೋಗಕ್ಕೆ ಸಂಬಂಧಪಟ್ಟ ವೈರಸ್‌, ವೈದ್ಯರ ಮೂಲಕ ರವಾನಿಸಲ್ಪಟ್ಟಿರುವ ಅತಿ ದೊಡ್ಡ ಘಟನೆಯಾಗಿದೆ” ಎಂದು ಇದನ್ನು ಕರೆಯಲಾಗಿದೆ. ಅದೇ ಲೇಖನವು ಕೂಡಿಸುವುದು: “ಒಪ್ಪಿಕೊಳ್ಳಬೇಕಾದ ಒಂದು ವಿಷಯವೇನೆಂದರೆ, ಈ ಎಲ್ಲ ವಿಸ್ತಾರವಾದ ಕಾರ್ಯಾಚರಣೆಗಳನ್ನು ನಡೆಸದಿರುತ್ತಿದ್ದಲ್ಲಿ, ಬಿಲ್‌ಹಾರ್ಸಿಅದಿಂದ ಇನ್ನೂ ಅನೇಕ ಜನರು ಕೊಲ್ಲಲ್ಪಟ್ಟಿರುತ್ತಿದ್ದರು.” (g00 11/22)

ಬಲಿಪಶುಗಳಾದ ಮಕ್ಕಳು

“ಪ್ರತಿದಿನ . . . ಐದು ವರ್ಷಕ್ಕಿಂತಲೂ ಕಡಿಮೆಯಿರುವ 30,500ರಷ್ಟು ಗಂಡು ಹಾಗೂ ಹೆಣ್ಣು ಮಕ್ಕಳು ಸಾಯುತ್ತಾರೆ. ಅನೇಕ ಸಂದರ್ಭಗಳಲ್ಲಿ ಇವರು ಸಾಯುವುದಕ್ಕೆ ಕಾರಣವಾಗಿರುವ ವಿಷಯಗಳನ್ನು ತಡೆಗಟ್ಟಬಹುದಾಗಿದೆ” ಎಂಬುದಾಗಿ ವಿಶ್ವಸಂಸ್ಥೆಯ ಮಕ್ಕಳ ನಿಧಿಯವರ ವರದಿಯಾದ ದ ಸ್ಟೇಟ್‌ ಆಫ್‌ ದ ವರ್ಲ್ಡ್ಸ್‌ ಚಿಲ್ಡ್ರನ್‌ 2000ದಲ್ಲಿ ಹೇಳಲಾಗಿದೆ. ಬಲಿಪಶುಗಳಾಗುತ್ತಿರುವ ಮಕ್ಕಳ ಕುರಿತು ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯು ಹೇಳುವುದೇನೆಂದರೆ, “ಅಂದಾಜುಮಾಡಲ್ಪಟ್ಟಿರುವಂತೆ 20 ಲಕ್ಷ ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ. ಕಳೆದ ದಶಕದಲ್ಲಿ ಶಸ್ತ್ರಗಳನ್ನು ಉಪಯೋಗಿಸಿ ಮಾಡಲ್ಪಟ್ಟ ಕಲಹಗಳಲ್ಲಿ 60 ಲಕ್ಷ ಮಕ್ಕಳು ಹಾನಿಗೊಳಗಾಗಿದ್ದಾರೆ ಇಲ್ಲವೇ ಊನಗೊಳಿಸಲ್ಪಟ್ಟಿದ್ದಾರೆ. ಇನ್ನೂ ಹೆಚ್ಚಿನವರು ಮಾನವ ಹಕ್ಕುಗಳಿಂದ ವಂಚಿಸಲ್ಪಟ್ಟು ದುರುಪಯೋಗಕ್ಕೆ ಬಲಿಯಾಗಿದ್ದಾರೆ.” 1.5 ಕೋಟಿಗಳಿಗಿಂತಲೂ ಹೆಚ್ಚಿನ ಮಕ್ಕಳು ನಿರಾಶ್ರಿತರಾಗಿದ್ದಾರೆ ಮತ್ತು ಹತ್ತು ಲಕ್ಷಕ್ಕಿಂತಲೂ ಹೆಚ್ಚಿನ ಮಕ್ಕಳು ತಮ್ಮ ಹೆತ್ತವರಿಂದ ಅಗಲಿಸಲ್ಪಟ್ಟಿದ್ದಾರೆ ಇಲ್ಲವೇ ಅನಾಥರಾಗಿದ್ದಾರೆ. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಕಾರ್ಮಿಕರ ಸಂಸ್ಥೆಯು ಮಾಡಿರುವ ಅಧ್ಯಯನಗಳು ತೋರಿಸುವುದರ ಕುರಿತು ಆ ವರದಿಯು ತಿಳಿಸುವುದೇನೆಂದರೆ, ಏನಿಲ್ಲವೆಂದರೂ 5ರಿಂದ 14 ವರ್ಷದ ಕನಿಷ್ಠಪಕ್ಷ 25 ಕೋಟಿಯಷ್ಟು ಮಕ್ಕಳು ಕಡ್ಡಾಯದ ಕಾರ್ಮಿಕರಾಗಿದ್ದಾರೆ. 20 ಪ್ರತಿಶತದಷ್ಟು ಮಕ್ಕಳು ತೀರ ಅಪಾಯಕರವಾದ ಪರಿಸ್ಥಿತಿಗಳಲ್ಲಿ ಕೆಲಸಮಾಡುತ್ತಿದ್ದಾರೆ. ಲೋಕದಾದ್ಯಂತ ಸುಮಾರು 10 ಲಕ್ಷ ಮಕ್ಕಳು ವೇಶ್ಯೆಯರಾಗಿ ಕೆಲಸಮಾಡುವಂತೆ ಒತ್ತಾಯಿಸಲ್ಪಟ್ಟಿದ್ದಾರೆ. ಮತ್ತು ಪ್ರತಿ ತಿಂಗಳಿಗೆ ಸುಮಾರು 2,50,000ದಷ್ಟು ಮಕ್ಕಳು ಏಚ್‌ಐವಿ ವೈರಸ್‌ನಿಂದ ಸೋಂಕಿತರಾಗುತ್ತಾರೆ. 13 ಕೋಟಿ ಮಕ್ಕಳು ಶಾಲೆಗೆ ಹೋಗುವುದಿಲ್ಲ. ಇವರಲ್ಲಿ ಮೂರನೇ ಎರಡರಷ್ಟು ಮಂದಿ ಹೆಣ್ಣು ಮಕ್ಕಳಾಗಿದ್ದಾರೆ. (g00 11/8)

ಚೀನಾದಲ್ಲಿ ಸಿಗುವ ವನ್ಯಮೃಗಗಳ ಭೋಜನ

ಚೀನೀಯರ “ಬದಲಾಗುತ್ತಿರುವ ಜೀವನಶೈಲಿ ಹಾಗೂ ಆಹಾರ ಸೇವನೆಯು” ಅಲ್ಲಿನ ವನ್ಯಜೀವಕ್ಕೆ ಬೆದರಿಕೆಯನ್ನೊಡ್ಡಿದೆ ಎಂಬುದಾಗಿ ಡೌನ್‌ ಟು ಅರ್ಥ್‌ ಪತ್ರಿಕೆಯು ಹೇಳುತ್ತದೆ. ಇದಕ್ಕೆ ಕಾರಣವೇನೆಂದರೆ, ಆರೋಗ್ಯಕರವಾದ ಪಥ್ಯಕ್ಕೆ, ಇನ್ನಿತರ ಆಹಾರಕ್ಕಿಂತ ಕೆಲವೊಂದು ವನ್ಯಜೀವಿಗಳ ಮಾಂಸವು ಹೆಚ್ಚು ಉತ್ತಮವಾದದ್ದು ಎಂಬ ನಂಬಿಕೆಯು ಅಲ್ಲಿನ ಜನರಲ್ಲಿ ಹೆಚ್ಚಾಗುತ್ತಿರುವುದೇ ಆಗಿದೆ. ಇದರಿಂದಾಗಿ ಅಲ್ಲಿ ವಿಲಕ್ಷಣವಾದ ಭೋಜನಗಳಿಗೆ ಬೇಡಿಕೆಯು ತೀರ ಹೆಚ್ಚಾಗಿದೆ. ಅಂತಹ ಭೋಜನಗಳ ಪಟ್ಟಿಯು ಹೀಗಿದೆ: ಹಾವುಗಳಿಗೆ ಮೊದಲನೇ ಸ್ಥಾನ, ಅದರಲ್ಲೂ ವಿಷಭರಿತ ಹಾವುಗಳ ತಲೆಯಾದರೆ ಅವುಗಳ ಬೆಲೆಯು ಎರಡು ಪಟ್ಟು ಹೆಚ್ಚಾಗಿರುವುದು. ಕಾಡುಹಂದಿಗಳು, ಪುನುಗುಬೆಕ್ಕುಗಳು, ಕಾಡುಕಪ್ಪೆಗಳು, ಕಪ್ಪೆಗಳು, ಹೆಬ್ಬಾವುಗಳು, ವಲ್ಕಚರ್ಮದ ಪ್ರಾಣಿಗಳು, ಚಿರು ಎಂಬ ಟಿಬೇಟಿನ ಜಿಂಕೆ ಹಾಗೂ ವಿರಳವಾಗಿ ಸಿಗುವ ಪಕ್ಷಿಗಳ ಭೋಜನವು ಅತ್ಯಂತ ಜನಪ್ರಿಯವಾಗಿದ್ದು, ಚೀನಾದಾದ್ಯಂತವಿರುವ ರೆಸ್ಟಾರೆಂಟುಗಳ ಭೋಜನ ಪಟ್ಟಿಯಲ್ಲಿ (ಮೆನ್ಯೂ) ಕಾಣಸಿಗುತ್ತವೆ. ಸ್ವಾರಸ್ಯಕರವಾದ ವಿಷಯವೇನೆಂದರೆ, ಈ ಪಟ್ಟಿಯಲ್ಲಿರುವ ಅನೇಕ ಪ್ರಾಣಿಗಳು ಅಪಾಯಕ್ಕೊಳಗಾಗಿರುವ ಪ್ರಾಣಿಗಳಾಗಿವೆ. ಮತ್ತು ಇವುಗಳ ರಕ್ಷಣೆಯು ಸರ್ಕಾರದ ಹೊಣೆಯಾಗಿದೆ. ಆದರೂ, ರೆಸ್ಟಾರೆಂಟುಗಳನ್ನು ಇಟ್ಟುಕೊಂಡಿರುವ ಕೆಲವರು, ತಮ್ಮಲ್ಲಿ ಸಿಗುವ ವನ್ಯಜೀವಿಗಳ ಭಕ್ಷ್ಯಗಳು, ಸಾಕಿದ ಪ್ರಾಣಿಗಳಿಂದಲೋ ಅಥವಾ ಕೃತಕ ಮೂಲಗಳಿಂದ ಹುಟ್ಟಿಸಿದ ಪ್ರಾಣಿಗಳಿಂದಲೋ ಮಾಡಿದವುಗಳಲ್ಲ, ಬದಲಿಗೆ ನಿಜವಾದ ವನ್ಯಜೀವಿಗಳ ಭಕ್ಷ್ಯಗಳು ಎಂಬ ಬೋರ್ಡುಗಳನ್ನು ಹಾಕುವ ಮೂಲಕ ತಮ್ಮ ಗಿರಾಕಿಗಳಿಗೆ ಭರವಸೆಯನ್ನು ನೀಡುತ್ತಾರೆ. ಈ ರೀತಿಯ ಸ್ವ-ಶೈಲಿ ರಸಭಕ್ಷ್ಯಗಳಿಂದ ವನ್ಯಜೀವಿಗಳನ್ನು ರಕ್ಷಿಸುವುದಕ್ಕಾಗಿ ಚೀನಾದ ಸರ್ಕಾರವು ಒಂದು ಚಳುವಳಿಯನ್ನು ಆರಂಭಿಸಿದೆ. ಮತ್ತು “ವನ್ಯಜೀವಿಗಳ ಭೋಜನ ಬೇಡ” ಎಂಬ ಘೋಷಣೆಗಳನ್ನು ಉಪಯೋಗಿಸುತ್ತಿದೆ. (g00 11/8)

ಧೂಮಪಾನಿಗಳಿರಲಿ ಇಲ್ಲದಿರಲಿ, ತಪ್ಪಿಸಲಾಗದ ಮಾಲಿನ್ಯ

ಭಾರತದಲ್ಲಿ ಧೂಮಪಾನ ಮಾಡುವ ಅಧಿಕಾಂಶ ಮಕ್ಕಳು ಈ ಚಟವನ್ನು ಬಹಳ ಬೇಗನೆ ಕಲಿಯುತ್ತಾರೆ. ಮುಂಬಯಿಯಲ್ಲಿರುವ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌ನ ಒಂದು ವರದಿಗನುಸಾರ, ಸರಾಸರಿಯಾಗಿ ನೋಡುವುದಾದರೆ, ಹೆತ್ತವರ ಹದ್ದುಬಸ್ತಿಲ್ಲದ ಬೀದಿ ಮಕ್ಕಳು 8 ವರ್ಷಕ್ಕೇ ಧೂಮಪಾನ ಮಾಡುವುದನ್ನು ಕಲಿತರೆ, ನೋಡಿಕೊಳ್ಳುವವರಿದ್ದು ಶಾಲೆಗೆ ಹೋಗುವ ಮಕ್ಕಳು 11 ವರ್ಷಕ್ಕೆ ಕಲಿತುಕೊಳ್ಳುತ್ತಾರೆ. ಆದರೆ ಮುಂಬಯಿಯ ಇನ್ನೊಂದು ಸಮೀಕ್ಷೆಯು ತೋರಿಸಿದ್ದೇನೆಂದರೆ, ಹೆತ್ತವರ ಒಳ್ಳೇ ಆರೈಕೆ ಹಾಗೂ ಹದ್ದುಬಸ್ತಿನ ಕೆಳಗಿದ್ದು, ಎಂದೂ ಧೂಮಪಾನವನ್ನು ಮಾಡದಿದ್ದ ಮಕ್ಕಳು ಮಲಿನಗೊಂಡ ಗಾಳಿಯನ್ನು ಸೇವಿಸುತ್ತಾರೆ. ಇದು ಒಂದು ದಿನಕ್ಕೆ ಎರಡು ಪ್ಯಾಕೆಟ್‌ ಸಿಗರೇಟನ್ನು ಸೇದುವುದಕ್ಕೆ ಸಮವಾಗಿದೆ! ದಿ ಏಷ್ಯನ್‌ ಏಜ್‌ ಪತ್ರಿಕೆಯಲ್ಲಿ ವರದಿಸಿದಂತೆ, ಮುಂಬಯಿ ಮತ್ತು ದೆಹಲಿ, ಲೋಕದಲ್ಲೇ ಅತ್ಯಂತ ಹೆಚ್ಚು ಮಲಿನಗೊಂಡ ಐದು ನಗರಗಳಲ್ಲಿ ಒಂದಾಗಿವೆ. ಒಂದು ದಿನಕ್ಕೆ ಮುಂಬಯಿಯ ರಸ್ತೆಗಳಲ್ಲಿ 9,00,000 ವಾಹನಗಳು ಸತತವಾಗಿ ಚಲಿಸುತ್ತಿರುತ್ತವೆ. ಇನ್ನೂ 3,00,000 ವಾಹನಗಳು ಪ್ರತಿದಿನ ನಗರದ ಒಳಗೂ ಹೊರಗೂ ಚಲಿಸುತ್ತಿರುತ್ತವೆ. ವಾಯುಮಾಲಿನ್ಯದ ಮಟ್ಟವನ್ನು ನೋಡುವುದಾದರೆ, ಅದು ಲೋಕಾರೋಗ್ಯ ಸಂಸ್ಥೆಯು ನಿರ್ಧರಿಸಿರುವ ಮಟ್ಟಕ್ಕಿಂತ 600ರಿಂದ 800 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ವರದಿಸಲಾಗಿದೆ. (g00 11/8)

ಪಕ್ಷಿಗಳಿಗೆ ಅಪಾಯಕಾರಿ

“ಉತ್ತರ ಅಮೆರಿಕದ ಆಫೀಸ್‌ ಕಟ್ಟಡಗಳು ಹಾಗೂ ಸಂಪರ್ಕಮಾಧ್ಯಮದ ಗೋಪುರಗಳು ನಿಶ್ಶಬ್ದ ಹಂತಕಗಳಾಗಿವೆ” ಎಂದು ಕೆನಡದ ಟೊರಾಂಟೋದ ದ ಗ್ಲೋಬ್‌ ಆ್ಯಂಡ್‌ ಮೆಯ್ಲ್‌ ಪತ್ರಿಕೆಯು ಹೇಳುತ್ತದೆ. ಏಕೆಂದರೆ, “ಪಕ್ಷಿಗಳು ಗೋಡೆಗಳಿಗೆ ಮಾತ್ರವಲ್ಲ ಮನೆಗಳ ಕಿಟಕಿಗಳಿಗೂ ಡಿಕ್ಕಿಹೊಡೆದುಕೊಳ್ಳುವ ಮೂಲಕ, ಆ ಖಂಡದಲ್ಲಿ ವರ್ಷಕ್ಕೆ ಹತ್ತು ಕೋಟಿಯಷ್ಟು ಪಕ್ಷಿಗಳು ಕೊಲ್ಲಲ್ಪಡುತ್ತವೆ.” ರಾತ್ರಿಯ ವೇಳೆಯಲ್ಲಿ ಆಫೀಸಿನಲ್ಲಿ ಆರಿಸದೆ ಹಾಗೆಯೇ ಬಿಟ್ಟುಹೋದ ದೀಪಗಳು, ವಲಸೆಹೋಗುವ ಪಕ್ಷಿಗಳ ಯಾನಮಾಡುವ ಸಾಮರ್ಥ್ಯವನ್ನು ವ್ಯಕ್ತಪಡಿಸಲಾಗದ ರೀತಿಯಲ್ಲಿ ಗೊಂದಲಕ್ಕೀಡುಮಾಡುತ್ತವೆ. ಈ ರೀತಿಯ ಸಮಸ್ಯೆಯು ಎಲ್ಲಾ ಕಡೆಗಳಲ್ಲೂ ಇದೆ ಎಂದು ಪರಿಣತರು ಹೇಳುತ್ತಾರೆ. “ಯಾವುದೇ ಖಂಡದಲ್ಲಿರುವ ದೇಶದಲ್ಲಿ ಈ ರೀತಿಯಾದ ಘಟನೆಗಳು ಸಂಭವಿಸಿದ ಸ್ಥಳವು ಇಲ್ಲವೇ ಇಲ್ಲ ಎಂದು ನಾನು ನೆನಸುತ್ತೇನೆ” ಎಂಬುದಾಗಿ ಪಕ್ಷಿವಿಜ್ಞಾನಿಯಾದ ಡೇವಿಡ್‌ ವಿಲಾರ್ಡ್‌ ಹೇಳುತ್ತಾರೆ. ಟೋರಾಂಟೋದಲ್ಲಿರುವ ಮಾರಕ ದೀಪದ ಕುರಿತು ಎಚ್ಚರಿಕೆ ಎಂಬಂತಹ ಸಂಘಗಳು ರಾತ್ರಿವೇಳೆಯಲ್ಲಿ ಉರಿಯುತ್ತಿರುವ ಆಫೀಸಿನ ದೀಪಗಳನ್ನು ಆರಿಸುವಂತೆ ಕೆಲಸಗಾರರಿಗೆ ತರಬೇತಿಯನ್ನು ಕೊಡಲು ಪ್ರಯಾಸಪಡುತ್ತಿವೆ.

ಅಷ್ಟುಮಾತ್ರವಲ್ಲದೆ, ಡಿಸ್ಕೋ ಮತ್ತು ಇನ್ನಿತರ ಮನೋರಂಜನೆಯನ್ನು ನೀಡುವ ಸ್ಥಳಗಳಿಗೆ ಜನರನ್ನು ಆಕರ್ಷಿಸುವುದಕ್ಕಾಗಿ ಉಪಯೋಗಿಸುವ “ಆಕಾಶಕ್ಕೆ ಮುಖಮಾಡಿರುವ ದೀಪಗಳು” ಆಕಾಶದಲ್ಲಿ ಬೆಳಕನ್ನು ವೃತ್ತಾಕಾರದಲ್ಲಿ ಹರಿಸುತ್ತವೆ. ಈ ಪ್ರಕಾಶ ಪ್ರಕ್ಷೇಪಕಗಳು, ರಾತ್ರಿಯಲ್ಲಿ ಚಲಿಸುವ ಪ್ರಾಣಿಗಳು ಹಾಗೂ ಪಕ್ಷಿಗಳು ದಿಕ್ಕು ತಪ್ಪುವಂತೆ ಮಾಡುತ್ತವೆ ಎಂದು ಫ್ರ್ಯಾಂಕ್‌ಫರ್ಟರ್‌ ಆಲ್‌ಗೆಮೈನ್‌ ಟ್ಸೀಟುಂಗ್‌ ಎಂಬ ಜರ್ಮನಿಯ ಪತ್ರಿಕೆಯು ವರದಿಸುತ್ತದೆ. ಈ ದೀಪಗಳು, ಪಕ್ಷಿಗಳ ಮತ್ತು ಬಾವಲಿಗಳ ಸೂಕ್ಷ್ಮವಾದ ಸಂಚಾರಯಾನಕ್ಕೆ ತೊಂದರೆಯನ್ನು ಉಂಟುಮಾಡುತ್ತವೆ. ನಿಮಗೆ ತಿಳಿದಿರುವಂತೆ, ಈ ರೀತಿಯಾಗಿ ಗಲಿಬಿಲಿಗೊಂಡ ಸಮಯದಲ್ಲಿ ಪಕ್ಷಿಗಳು ತಾವು ವಲಸೆಹೋಗುವ ಗುಂಪಿನಿಂದ ಚದರಿಹೋಗುತ್ತಾ, ಮಾರ್ಗವನ್ನು ಬದಲಾಯಿಸುತ್ತವೆ ಹಾಗೂ ಆತಂಕದಿಂದ ಕೂಗುತ್ತಾ ಕೆಲವೊಮ್ಮೆ ತಾವು ವಲಸೆ ಹೋಗಬೇಕಾದ ದಿಕ್ಕನ್ನೇ ಬದಲಾಯಿಸುತ್ತವೆ. ಪಕ್ಷಿಗಳು ದಿಕ್ಕುತಪ್ಪಿದಾಗ ವೃತ್ತಾಕಾರದಲ್ಲೇ ತಿರುಗುತ್ತಿರುತ್ತವೆ ಮತ್ತು ಕೆಲವೊಮ್ಮೆ ದಣಿದು ಕೆಳಗಿಳಿಯುತ್ತವೆ. ಬಲಹೀನವಾದ ಪಕ್ಷಿಗಳು ಸತ್ತೂ ಹೋಗುತ್ತವೆ. ಜರ್ಮನಿಯ ಫ್ರ್ಯಾಂಕ್‌ಫರ್ಟಿನಲ್ಲಿರುವ ಪಕ್ಷಿಗಳ ರಕ್ಷಣೆಗಾಗಿರುವ ಇನ್‌ಸ್ಟಿಟ್ಯೂಟ್‌, “ಆಕಾಶಕ್ಕೆ ಮುಖಮಾಡಿರುವ ದೀಪಗಳನ್ನು” ನಿಷೇಧಿಸುವಂತೆ ಕರೆನೀಡಿದೆ. (g00 11/8)