ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ಅಶಕ್ತ ಪ್ರಚಾರಕ “ಅಶಕ್ತತೆಯ ಎದುರಿನಲ್ಲಿಯೂ ಉಜ್ವಲ ದೃಷ್ಟಿಕೋನ” (ಫೆಬ್ರವರಿ 22, 2000, ಇಂಗ್ಲಿಷ್‌) ಎಂಬ ಲೇಖನದಲ್ಲಿ ಕಾನ್ಸ್‌ಟ್ಯಾಂಟ್ಯೀನ್‌ ಮಾರಾಸಾಫ್‌ ಅವರ ಕಥೆಯನ್ನು ಓದಿದಾಗ ನನಗೆ ಅಳುವನ್ನು ತಡೆದುಕೊಳ್ಳಲಿಕ್ಕೇ ಆಗಲಿಲ್ಲ. ನಾನೊಬ್ಬ ಅವಿವಾಹಿತ ತಾಯಿಯಾಗಿದ್ದು, ನನಗೆ ಇಬ್ಬರು ಮಕ್ಕಳಿದ್ದಾರೆ. ಇವರನ್ನು ಬೆಳೆಸುವುದು ತುಂಬ ಕಷ್ಟವಾಗಿರುವುದರಿಂದ ಕೆಲವೊಮ್ಮೆ ನನ್ನ ಸಮಸ್ಯೆಗಳಿಗೆ ಅಂತ್ಯವೇ ಇಲ್ಲವೇನೋ ಎಂದನಿಸುತ್ತದೆ. ಆದರೆ, ನನ್ನ ಸಮಸ್ಯೆ ಇವರ ಮುಂದೆ ಏನೇನೂ ಇಲ್ಲ ಎಂದು ಇದನ್ನು ಓದಿದ ಮೇಲೆ ತಿಳಿದುಕೊಂಡೆ!

ಐ., ರಷ್ಯ

ನಾನೊಬ್ಬ ಪೂರ್ಣ ಸಮಯದ ಸೌವಾರ್ತಿಕಳು. ನನಗೆ ಅಕ್ಷಿಪಟದ ಕಾಯಿಲೆ ಇರುವುದರಿಂದ ಓದಲು ಬಹಳ ಕಷ್ಟವಾಗುತ್ತದೆ. ಮೊದಲೆಲ್ಲ ನಾನು ಯಾವಾಗಲೂ ತುಂಬ ಓದುತ್ತಿದ್ದೆ. ಆದರೆ ಈಗ ಓದಲಿಕ್ಕೆ ಆಗದಿರುವ ಕಾರಣ ಆಗಾಗ್ಗೆ ಬಹಳ ಹತಾಶಳೂ ಖಿನ್ನಳೂ ಆಗುತ್ತೇನೆ. ಆದರೆ, ಕಾನ್ಸ್‌ಟ್ಯಾಂಟ್ಯೀನ್‌ ಬಗ್ಗೆ ನಾನು ನೆನಸಿಕೊಳ್ಳುವಾಗಲೆಲ್ಲ, ನಾನೆಂದೂ ಯಾವುದರ ಬಗ್ಗೆಯೂ ಗೊಣಗಬಾರದು ಎಂದು ಅನಿಸುತ್ತದೆ. ಅವರು ಬೆಟ್ಟದಂತಹ ಕಷ್ಟಗಳನ್ನು ದಾಟಿ, ಒಬ್ಬ ಪೂರ್ಣ ಸಮಯದ ಸೌವಾರ್ತಿಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ನಿಜವಾಗಿಯೂ ಯೆಹೋವನು ಎಂತಹ ಬಲವನ್ನು ಕೊಡುತ್ತಾನೆ!

ಡಬ್ಲ್ಯೂ. ಡಬ್ಲ್ಯೂ. ಭಾರತ

16 ವರ್ಷ ಪ್ರಾಯದವಳಾಗಿದ್ದಾಗ ನನಗೆ ಸೊಂಟದಿಂದ ಕೆಳಗೆ ಲಕ್ವಹೊಡೆಯಿತು. ಕಾನ್ಸ್‌ಟ್ಯಾಂಟ್ಯೀನ್‌ ಅವರಂತೆ ನಾನು ದಿನಾಲೂ ಬಹಳ ಕಷ್ಟವನ್ನು ಅನುಭವಿಸುತ್ತೇನೆ. ಒಬ್ಬ ವ್ಯಕ್ತಿಯು ಅಶಕ್ತನಾಗಿದ್ದರೂ ಸಮಾಜದಲ್ಲಿ ಅವನಿಗೂ ಒಂದು ಸ್ಥಾನವಿದೆ ಮತ್ತು ದೇವರ ಆರಾಧನೆಯಲ್ಲಿ ಅವನಿಗೂ ಒಂದು ಪಾಲು ಇದೆ ಎಂಬುದನ್ನು ಈ ಲೇಖನವು ಚೆನ್ನಾಗಿ ತೋರಿಸಿತು. ನನಗೆ ಕಿವಿ ಅಷ್ಟೇನೂ ಚೆನ್ನಾಗಿ ಕೇಳಿಸುವುದಿಲ್ಲ ಹಾಗೂ ಕಣ್ಣು ಸರಿಯಾಗಿ ಕಾಣಿಸುವುದಿಲ್ಲವಾದರೂ, ಸ್ಟೂಲಿನ ಮೇಲೆ ಗೋಡೆಗೆ ಒರಗಿಕೊಂಡು ಕುಳಿತುಕೊಳ್ಳುವ ಮೂಲಕ, ರಸ್ತೆಯಲ್ಲಿ ನಾನು ಸಾರುತ್ತೇನೆ. ಕಾನ್ಸ್‌ಟ್ಯಾಂಟ್ಯೀನ್‌ ಅವರ ಹುರುಪು, ಉತ್ಸಾಹ ಹಾಗೂ ಭಕ್ತಿಗೆ ಸಾವಿರ ಅಭಿನಂದನೆ.

ಡಿ. ಎಫ್‌., ಕೋಟ್‌ ಡಿವಾರ್‌ (g00 11/22)

ಆಧುನಿಕ ದಾಸತ್ವ ನನಗೆ 16 ವರ್ಷ. ನನಗೆ ನಿಮ್ಮ ಲೇಖನವು ಬಹಳ ಹಿಡಿಸಿತು. ಆಧುನಿಕ ದಾಸತ್ವದಿಂದ ಬೆಂದುನೊಂದಿರುವ ಕೆಲವು ಹುಡುಗಿಯರನ್ನು ನಾನು ಬಲ್ಲೆ. ಅವರ ತಲೆಯ ಮೇಲೊಂದು ಸೂರನ್ನು ನೀಡಿರುವ ಕುಟುಂಬಗಳಲ್ಲಿ ಅವರು ಬೆವರುಸುರಿಸಿ ಕೆಲಸಮಾಡುತ್ತಾರೆ. ಆದರೆ ಅವರಿಗೆ ಶಿಕ್ಷಣವೋ ವಾತ್ಸಲ್ಯವೋ ಸಿಗುವುದಿಲ್ಲ. ಯೆಹೋವನು ಬಹಳ ಬೇಗನೆ ದಬ್ಬಾಳಿಕೆಯಿಂದ ನಲುಗಿಹೋಗಿರುವವರನ್ನು ಮೇಲೆತ್ತುತ್ತಾನೆ ಎಂಬುದನ್ನು ಬೈಬಲಿನಲ್ಲಿ ಓದಿದ ಮೇಲೆ ನನಗೆ ಬಹಳ ಸಮಾಧಾನವಾಯಿತು.

ಏ. ಓ., ಬುರ್ಕಿನಾ ಫಾಸೊ (g00 11/22)

ಆತ್ಮಹತ್ಯೆ “ಆತ್ಮಹತ್ಯೆ​—⁠ಯಾರು ಹೆಚ್ಚು ಅಪಾಯದಲ್ಲಿದ್ದಾರೆ?” (ಮಾರ್ಚ್‌ 8, 2000) ಎಂಬ ಸರಣಿಯು ನಮಗೆ ನಿಜವಾಗಿಯೂ ಅಗತ್ಯವಾದ ಲೇಖನಮಾಲೆಯಾಗಿತ್ತು. ಎಂಟು ತಿಂಗಳುಗಳ ಹಿಂದೆ ನನ್ನ ತಾಯಿ ಹಠಾತ್ತನೇ ತೀರಿಕೊಂಡರು. ತಾಯಿಯು ಮೃತರಾದಾಗ ನನ್ನ ತಂದೆಯು ಊರಿನಲ್ಲಿರದಿದ್ದ ಕಾರಣ ತಪ್ಪಿತಸ್ಥ ಮನೋಭಾವದಿಂದ ನರಳುತ್ತಿದ್ದಾರೆ. ನನಗೆ ಬದುಕಲು ಇಷ್ಟವಿಲ್ಲ ಎಂದು ಅವರು ಹೇಳುತ್ತಿರುತ್ತಾರೆ. ಇಂತಹ ಸಮಯದಲ್ಲಿ ನಿಮ್ಮ ಲೇಖನಗಳು ಬಂದದ್ದರಿಂದ ನನ್ನ ತಂದೆಗೂ ನನಗೂ ಇದು ಬಹಳಷ್ಟು ಪ್ರಯೋಜನವನ್ನು ತಂದಿತು.

ಆರ್‌. ಝೆಡ್‌., ಜರ್ಮನಿ

ಎರಡು ವರ್ಷಗಳ ಹಿಂದೆ ನನ್ನ ಅಜ್ಜ ಆತ್ಮಹತ್ಯೆ ಮಾಡಿಕೊಂಡರು. ಅಜ್ಜಿಯು ತೀರಿಕೊಂಡ ನಂತರ ಅವರ ಮಾನಸಿಕ ಸ್ಥಿತಿಯು ತುಂಬ ಹದಗೆಟ್ಟಿತ್ತು. ಅವರು ಏಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದನ್ನು ತಿಳಿದುಕೊಳ್ಳಲು ನಿಮ್ಮ ಲೇಖನಗಳು ನನಗೆ ಸಹಾಯಮಾಡಿದವು.

ಎ. ಎಮ್‌., ಅಮೆರಿಕ

48 ವರ್ಷ ಪ್ರಾಯದ ನನ್ನ ಅಣ್ಣ ಜನವರಿ ತಿಂಗಳಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಅವನ ಮೆಮೋರಿಯಲ್‌ ಸರ್ವಿಸ್‌ನ ಮರುದಿನ, ಯೆಹೋವನ ಸಾಕ್ಷಿಯಲ್ಲದ ನನ್ನ ತಂದೆ ಎಚ್ಚರ! ಪತ್ರಿಕೆಯ ಈ ಸಂಚಿಕೆಯನ್ನು ನಮ್ಮ ಮನೆಯ ಅಂಚೆಡಬ್ಬಿಯಲ್ಲಿ ಕಂಡುಕೊಂಡರು. ಇದನ್ನು ಅವರು ನಮಗೆ ತೋರಿಸಿದಾಗ, ಅವರಿಗೆ ಮಾತೇ ಹೊರಬರಲಿಲ್ಲ ಆದರೆ, ಅವರ ಕಣ್ಣುಗಳು ತುಂಬಿದ ಕೊಳಗಳಾಗಿದ್ದವು. ಬಹಳ ಸಾಂತ್ವನವನ್ನು ನೀಡುವಂತಹದ್ದಾಗಿದ್ದ ಈ ಸರಣಿಗಾಗಿ ನಮ್ಮ ಕುಟುಂಬದವರೆಲ್ಲರೂ ಸಂತೋಷದಿಂದ ಹಾಗೂ ಕೃತಜ್ಞತೆಯಿಂದ ಕಣ್ಣೀರು ಸುರಿಸಿದೆವು.

ಬಿ. ಜೆ., ಅಮೆರಿಕ

ನಮ್ಮ ಶಾಲಾ ಜಿಲ್ಲೆಯಲ್ಲಿ ಕಳೆದ ವರ್ಷ ಸುಮಾರು ಆರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡರು. ಇದು ಎಷ್ಟು ಚಿಂತೆಗೀಡು ಮಾಡಿತೆಂದರೆ, ಶಾಲಾ ಜಿಲ್ಲೆಯು ಶಾಲೆಗಳ ವ್ಯವಸ್ಥೆಯೊಳಗೆ ಆತ್ಮಹತ್ಯೆಯ ಬಗ್ಗೆ ನಿಗಾ ಇಡುವಂತೆ ಏರ್ಪಾಡುಮಾಡಿತು. ನಮ್ಮ ಸಂದೇಶಕ್ಕೆ ಅಷ್ಟೇನೂ ಪ್ರತಿಕ್ರಿಯೆ ತೋರಿಸದ ಕ್ಷೇತ್ರಗಳಲ್ಲಿರುವ ಜನರಿಗೆ ನಾವು ಈ ಸಂಚಿಕೆಯನ್ನು ನೀಡಿದೆವು. ಆಗ ಕೆಲವೊಮ್ಮೆ ನಾವು ನಮ್ಮ ಪ್ರಸ್ತಾವನೆಯನ್ನು ಹೇಳಿಮುಗಿಸುವುದರೊಳಗೆ ಜನರು ನಮ್ಮ ಕೈಯಿಂದ ಪತ್ರಿಕೆಯನ್ನು ಆತುರದಿಂದ ಕಸಿದುಕೊಳ್ಳುತ್ತಿದ್ದರು!

ಕೆ. ಕೆ., ಅಮೆರಿಕ

ನಾನು ಹದಿಪ್ರಾಯದಲ್ಲಿರುವಾಗ, ನನ್ನ ತಂದೆಯು ಮೃತರಾದರು. ಅವರು ಮೃತರಾದ ನಂತರ ಎರಡು ಬಾರಿ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದೆ. “ಆತ್ಮಹತ್ಯೆ” ಎಂಬ ಹೆಸರನ್ನು ಎತ್ತುವುದೇ ಮಹಾ ಪಾಪ ಎಂದು ಕೆಲವರು ನೆನಸುತ್ತಾರೆ. ಆದರೆ ನೀವು ಎಚ್ಚರ! ಪತ್ರಿಕೆಯ ಮುಖಪುಟದಲ್ಲಿ ಇದನ್ನು ಹಾಕಿದ್ದಕ್ಕೆ ತುಂಬ ಉಪಕಾರ. ಮುಚ್ಚುಮರೆಯಿಲ್ಲದ, ನೈಜವಾದ ಹಾಗೂ ಬಹಳ ಅರ್ಥಭರಿತವಾದ ಲೇಖನವು ಇದಾಗಿತ್ತು.

ಎಮ್‌. ಜಿ., ಫ್ರಾನ್ಸ್‌ (g00 11/8)

ಸ್ನೇಹಿತರ ಸಮಸ್ಯೆಗಳು “ಯುವ ಜನರು ಪ್ರಶ್ನಿಸುವುದು . . . ನನ್ನ ಗೆಳತಿಯು ನನ್ನ ಮನಸ್ಸನ್ನು ನೋಯಿಸಿದ್ದೇಕೆ?” (ಮಾರ್ಚ್‌ 8, 2000) ಎಂಬ ಲೇಖನವು ನನಗೆ ಸಹಾಯಮಾಡಿತು. ಆರೂವರೆ ವರ್ಷಗಳಿಂದಲೂ ನನ್ನ ಬೆಸ್ಟ್‌ ಫ್ರೆಂಡ್‌ ಆಗಿದ್ದವಳು ನನ್ನ ಮನಸ್ಸನ್ನು ಬಹಳವಾಗಿ ನೋಯಿಸಿದಳು. ನಿಮ್ಮ ಲೇಖನದಲ್ಲಿ ತಿಳಿಸಿರುವ ಸಲಹೆಗಳಿಗನುಸಾರ, ನಾನು ನನ್ನ ಗೆಳತಿಯೊಂದಿಗೆ ಕೆರಳದೆ, ಶಾಂತಚಿತ್ತದಿಂದ ಮಾತಾಡಿದೆ. ಇದರಿಂದಾಗಿ ನಾವು ಈಗ ಇನ್ನೂ ಹೆಚ್ಚು ಆಪ್ತರಾಗಿದ್ದೇವೆ.

ಎಮ್‌. ಎಲ್‌., ಅಮೆರಿಕ (g00 11/8)