ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನರ್ಸ್‌ಗಳು ನಮಗೆ ಅವರ ಆವಶ್ಯಕತೆ ಏಕಿದೆ?

ನರ್ಸ್‌ಗಳು ನಮಗೆ ಅವರ ಆವಶ್ಯಕತೆ ಏಕಿದೆ?

ನರ್ಸ್‌ಗಳು ನಮಗೆ ಅವರ ಆವಶ್ಯಕತೆ ಏಕಿದೆ?

“ನರ್ಸ್‌ ಆಗುವುದು ಅಷ್ಟೇನೂ ಸುಲಭವಲ್ಲ. ಏಕೆಂದರೆ, ಇರುವಂಥ ಅನೇಕ ಕಲೆಗಳಲ್ಲಿ ಇದು ಅತ್ಯಂತ ಕಷ್ಟಕರವಾದ ಕಲೆಯಾಗಿದೆ. ನರ್ಸ್‌ ಆಗಿ ಕೆಲಸಮಾಡುವುದರ ಹಿಂದಿರುವ ಉದ್ದೇಶವು ಸಹಾನುಭೂತಿಯಾಗಿರುವುದಾದರೂ, ಕೇವಲ ಅದಷ್ಟೇ ಸಾಕಾಗುವುದಿಲ್ಲ. ಇದಕ್ಕೆ ಜ್ಞಾನವು ಸಹ ಅತ್ಯಗತ್ಯವಾಗಿದೆ.” ​—⁠ಮೇರಿ ಅಡಿಲೈಡ್‌ ನಟಿಂಗ್‌, 1925, ಜಗತ್ತಿನಲ್ಲೇ ನರ್ಸಿಂಗ್‌ನ ಪ್ರಪ್ರಥಮ ಪ್ರೊಫೆಸರ್‌.

ಸರಳವಾದ ಮಾತುಗಳಲ್ಲಿ ಹೇಳುವುದಾದರೆ, ನರ್ಸಿಂಗ್‌ ವೃತ್ತಿಯು ಸಾವಿರಾರು ವರ್ಷಗಳಷ್ಟು ಹಿಂದಿನದ್ದಾಗಿದೆ. ಬೈಬಲ್‌ ಸಮಯಗಳಲ್ಲೂ ಅದು ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಪುರಾವೆಯಿದೆ. (1 ಅರಸು 1:​2-4, NW) ಇತಿಹಾಸದಾದ್ಯಂತ, ಇಂತಹ ಅನೇಕ ಹೆಸರಾಂತ ಸ್ತ್ರೀಯರು ಅಸ್ವಸ್ಥರ ಆರೈಕೆಮಾಡಿದ್ದಾರೆ. ಉದಾಹರಣೆಗೆ, ಹಂಗೆರಿಯ ಎಲಿಸಬೆತಳ (1207-31) ವಿಷಯವನ್ನು ತೆಗೆದುಕೊಳ್ಳಿರಿ. ಇವಳು ಅರಸನಾದ IIನೆಯ ಆ್ಯಂಡ್ರೂವಿನ ಮಗಳಾಗಿದ್ದಳು. 1226ರಲ್ಲಿ ಉಂಟಾಗಿದ್ದ ಕ್ಷಾಮದ ಸಮಯದಲ್ಲಿ, ಇವಳು ಆಹಾರ ವಿತರಣೆಮಾಡುವ ಏರ್ಪಾಡನ್ನು ಮಾಡಿದಳು. ತದನಂತರ, ಆಸ್ಪತ್ರೆಗಳನ್ನು ಕಟ್ಟುವ ಏರ್ಪಾಡನ್ನು ಸಹ ಮಾಡಿದಳು. ಮತ್ತು ಕುಷ್ಠರೋಗಿಗಳ ಆರೈಕೆ ಮಾಡಿದಳು. 24 ವರ್ಷ ಪ್ರಾಯದವಳಾಗಿದ್ದಾಗ ಎಲಿಸಬೆತ್‌ ಮೃತಪಟ್ಟಳು. ತನ್ನ ಅಲ್ಪಾಯುಸ್ಸಿನ ಹೆಚ್ಚಿನ ಭಾಗವನ್ನು ಅಸ್ವಸ್ಥರ ಆರೈಕೆಗಾಗಿ ಮೀಸಲಾಗಿಟ್ಟಳು.

ನಾವು ನರ್ಸಿಂಗ್‌ನ ಇತಿಹಾಸದ ಕುರಿತಾಗಿ ಮಾತಾಡುವಾಗ, ಫ್ಲಾರೆನ್ಸ್‌ ನೈಟಿಂಗೇಲ್‌ನ ಬಗ್ಗೆ ತಿಳಿಸದೆ ಇರುವುದು ಖಂಡಿತವಾಗಿಯೂ ಅಸಾಧ್ಯ. ಫ್ಲಾರೆನ್ಸ್‌ ನೈಟಿಂಗೇಲ್‌ ಒಬ್ಬ ಆಂಗ್ಲ ಮಹಿಳೆಯಾಗಿದ್ದಳು. 38 ನರ್ಸ್‌ಗಳ ಒಂದು ಗುಂಪಿನ ಸಹಾಯದಿಂದ ಈ ಧೀರ ಮಹಿಳೆಯು, 1853-56ರ ಕ್ರಿಮಿಯನ್‌ ಯುದ್ಧದ ಸಮಯದಲ್ಲಿ, ಕಾನ್ಸ್‌ಟ್ಯಾಂಟಿನೋಪಲ್‌ನ ಹೊರವಲಯದಲ್ಲಿದ್ದ ಸ್ಕೂಟಾರೀಯ ಮಿಲಿಟರಿ ಆಸ್ಪತ್ರೆಯ ದುರಸ್ತಿಮಾಡಿಸುವ ಹೊಣೆಹೊತ್ತಳು. ಅವಳು ಆ ಸ್ಥಳಕ್ಕೆ ಆಗಮಿಸಿದಾಗ, ಸತ್ತವರ ಸಂಖ್ಯೆಯು ಸುಮಾರು 60 ಪ್ರತಿಶತವಾಗಿತ್ತು; 1856ನಲ್ಲಿ ಅವಳು ಅಲ್ಲಿಂದ ಹೊರಟಾಗ, ಮರಣ ಸಂಖ್ಯೆಯು 2 ಪ್ರತಿಶತಕ್ಕಿಂತ ಕಡಿಮೆಯಾಗಿತ್ತು.​—⁠6ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿರಿ.

ನರ್ಸಿಂಗ್‌ ವೃತ್ತಿಯ ಮೇಲೆ ಬಲವಾದ ಪ್ರಭಾವವನ್ನು ಬೀರಿದ ಇನ್ನೊಂದು ಸಂಸ್ಥೆಯು, ಜರ್ಮನಿಯ ಕೈಸರ್ಸ್‌ವರ್ಟ್‌ನಲ್ಲಿರುವ ಇನ್‌ಸ್ಟಿಟ್ಯೂಟ್‌ ಆಫ್‌ ಪ್ರಾಟೆಸ್ಟಂಟ್‌ ಡೀಕನಿಸಸ್‌ ಆಗಿತ್ತು. ಕ್ರಿಮಿಯ ಎಂಬ ಸ್ಥಳಕ್ಕೆ ಹೋಗುವ ಮುಂಚೆ ನೈಟಿಂಗೇಲ್‌ ಸಹ ಇದೇ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಳು. ಸಕಾಲದಲ್ಲಿ ಇನ್ನೂ ಅನೇಕ ಅತ್ಯುತ್ತಮ ನರ್ಸಿಂಗ್‌ ಸಂಸ್ಥೆಗಳು ಕಾಣಿಸಿಕೊಳ್ಳತೊಡಗಿದವು. ಉದಾಹರಣೆಗೆ, 1903ರಲ್ಲಿ ಆ್ಯಗ್ನೆಸ್‌ ಕಾರ್ಲ್‌ ಎಂಬ ಮಹಿಳೆಯು, ಜರ್ಮನ್‌ ನರ್ಸ್‌ಗಳಿಗಾಗಿ ಒಂದು ವೃತ್ತಿಪರ ಸಂಸ್ಥೆಯನ್ನು ಸ್ಥಾಪಿಸಿದಳು.

ಇಂದು, ನಮ್ಮ ಆರೋಗ್ಯಾರೈಕೆ ವ್ಯವಸ್ಥೆಯಲ್ಲಿ ನರ್ಸ್‌ಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಪರಿಗಣಿಸಲಾಗುತ್ತದೆ. 141 ದೇಶಗಳಲ್ಲಿ ಸದ್ಯಕ್ಕೆ 90,00,000 ನರ್ಸ್‌ಗಳು ಹಾಗೂ ಎಎನ್‌ಎಮ್‌ (ANM)ಗಳು ಇದ್ದಾರೆ ಎಂದು ಲೋಕಾರೋಗ್ಯ ಸಂಸ್ಥೆಯು ವರದಿಸುತ್ತದೆ. ಮತ್ತು ಇವರು ಎಷ್ಟು ಅತ್ಯಾವಶ್ಯಕವಾದ ಕೆಲಸವನ್ನು ನಿರ್ವಹಿಸುತ್ತಾರೆ! ದಿ ಅಟ್ಲಾಂಟಿಕ್‌ ಮಂತ್ಲಿ ಎಂಬ ಪತ್ರಿಕೆಯು ಹೀಗೆ ತಿಳಿಸುತ್ತದೆ: ನರ್ಸ್‌ಗಳು “ತಮ್ಮ ಕೆಲಸದಲ್ಲಿ ಆರೈಕೆ, ಜ್ಞಾನ ಹಾಗೂ ಭರವಸೆಯನ್ನು ಒಟ್ಟಿಗೆ ನೇಯುತ್ತಾರೆ. ಇದು, ರೋಗಿಗಳು ಬದುಕಿ ಉಳಿಯುವ ವಿಷಯದಲ್ಲಿ ತುಂಬ ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತದೆ.” ಆದುದರಿಂದ, ನಾವು ನರ್ಸ್‌ಗಳ ವಿಷಯದಲ್ಲಿ ಹೀಗೆ ಪ್ರಶ್ನಿಸಿಕೊಳ್ಳುವುದು ಸೂಕ್ತವಾಗಿರಸಾಧ್ಯವಿದೆ: ನರ್ಸ್‌ಗಳು ಇಲ್ಲದಿರುತ್ತಿದ್ದರೆ ನಾವೇನು ಮಾಡುತ್ತಿದ್ದೆವು?

ರೋಗಿಯು ಚೇತರಿಸಿಕೊಳ್ಳುವುದರಲ್ಲಿ ನರ್ಸ್‌ಗಳ ಪಾತ್ರ

ಒಂದು ವಿಶ್ವಕೋಶವು ನರ್ಸಿಂಗ್‌ನ ಅರ್ಥವನ್ನು ಹೀಗೆ ನಿರೂಪಿಸುತ್ತದೆ: “ರೋಗಿಯ ಅಸ್ವಸ್ಥತೆ ಅಥವಾ ಗಾಯವು ಗುಣವಾಗುವಂತೆ ಹಾಗೂ ಅವನು ಇತರರಿಗೆ ಭಾರವಾಗಿರದೆ, ಸಾಧ್ಯವಾದಷ್ಟು ಮಟ್ಟಿಗೆ ಸ್ವಾವಲಂಬಿಯಾಗುವಂತೆ ಒಬ್ಬ ನರ್ಸ್‌ ಆ ರೋಗಿಗೆ ಸಹಾಯಮಾಡುವ ಕಾರ್ಯವಿಧಾನ.”

ಈ ಕೆಲಸದಲ್ಲಿ ಇನ್ನೂ ಹೆಚ್ಚಿನದ್ದು ಒಳಗೂಡಿದೆ ಎಂಬುದಂತೂ ನಿಜ. ನಾಡಿಯನ್ನು ಪರೀಕ್ಷಿಸುವುದು ಹಾಗೂ ಬ್ಲಡ್‌ ಪ್ರೆಷರ್‌ (ರಕ್ತದೊತ್ತಡ) ಅನ್ನು ನೋಡುವುದು ಮಾತ್ರ ನರ್ಸ್‌ನ ಕೆಲಸವಾಗಿರುವುದಿಲ್ಲ. ರೋಗಿಯು ಗುಣಹೊಂದುವುದರಲ್ಲಿ ನರ್ಸ್‌ ಪ್ರಮುಖ ಪಾತ್ರವನ್ನು ವಹಿಸುತ್ತಾಳೆ. ಈ ವಿಷಯದಲ್ಲಿ ದಿ ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಷನ್‌ ಎನ್‌ಸೈಕ್ಲೊಪೀಡಿಯ ಆಫ್‌ ಮೆಡಿಸಿನ್‌ ಹೀಗೆ ಹೇಳುತ್ತದೆ: “ಒಬ್ಬ ನರ್ಸ್‌, ರೋಗಿಯ ಅಸ್ವಸ್ಥತೆಗಿಂತಲೂ ಹೆಚ್ಚಾಗಿ ಆ ಅಸ್ವಸ್ಥತೆಯಿಂದ ರೋಗಿಯು ತೋರಿಸುವ ಪ್ರತಿಕ್ರಿಯೆಯ ಕುರಿತು ಚಿಂತಿಸುತ್ತಾಳೆ; ಮತ್ತು ರೋಗಿಯ ಶಾರೀರಿಕ, ಮಾನಸಿಕ ವೇದನೆಯನ್ನು ಉಪಶಮನಮಾಡಲು ಹಾಗೂ ಸಾಧ್ಯವಿರುವಲ್ಲಿ ಬೇರೆ ರೋಗಗಳು ಬರದಂತೆ ತಡೆಗಟ್ಟಲು ಸತತವಾಗಿ ಪರಿಶ್ರಮಿಸುತ್ತಾಳೆ.” ಅಷ್ಟುಮಾತ್ರವಲ್ಲ, ಒಬ್ಬ ನರ್ಸ್‌ “ರೋಗಿಯನ್ನು ತುಂಬ ಸಹಾನುಭೂತಿಯಿಂದ ನೋಡಿಕೊಳ್ಳುತ್ತಾಳೆ. ಅಂದರೆ, ಅವನ ಚಿಂತೆಗಳು ಹಾಗೂ ಆತಂಕಗಳಿಗೆ ತಾಳ್ಮೆಯಿಂದ ಕಿವಿಗೊಡುತ್ತಾಳೆ ಮತ್ತು ಅಗತ್ಯವಿರುವ ಭಾವನಾತ್ಮಕ ಬೆಂಬಲ ಹಾಗೂ ಸಾಂತ್ವನವನ್ನು ನೀಡುತ್ತಾಳೆ.” ಮತ್ತು ಒಬ್ಬ ರೋಗಿಯು ಸಾಯುತ್ತಿರುವಾಗ, ಒಬ್ಬ ನರ್ಸ್‌ “ಆ ರೋಗಿಯು ವ್ಯಥೆಯಿಂದಲ್ಲ, ಧೈರ್ಯ ಹಾಗೂ ಘನತೆಯಿಂದ ಮರಣವನ್ನು ಎದುರಿಸುವಂತೆ ಸಹಾಯಮಾಡುತ್ತಾಳೆ,” ಎಂದು ಸಹ ಇದೇ ಮೂಲವು ಹೇಳುತ್ತದೆ.

ಅನೇಕ ನರ್ಸ್‌ಗಳು ತಮ್ಮ ಜವಾಬ್ದಾರಿಯನ್ನು ಕೇವಲ ಕರ್ತವ್ಯವಾಗಿ ನೆನಸುವುದಿಲ್ಲ. ಉದಾಹರಣೆಗೆ, ನ್ಯೂ ಯಾರ್ಕ್‌ ನಗರದಲ್ಲಿರುವ ಮೋಂಟಿಫಿಯೋರಿ ಮೆಡಿಕಲ್‌ ಸೆಂಟರ್‌ನಲ್ಲಿ ಕೆಲಸಮಾಡುತ್ತಿರುವಾಗ ತನಗಾದ ಅನುಭವದ ಕುರಿತು ಇಲನ್‌ ಡಿ. ಬಾರ್‌ ಎಂಬ ನರ್ಸ್‌ ಬರೆದಳು. ಶಸ್ತ್ರಚಿಕಿತ್ಸಕರ ತಂಡದೊಂದಿಗೆ ಹೋಗಿ ತನ್ನ ಬೆಳಗಿನ ಕೆಲಸವನ್ನು ಬೇಗ ಬೇಗ ಮುಗಿಸುವುದನ್ನು ಅವಳು ಇಷ್ಟಪಡುವುದಿಲ್ಲ. ಅವಳು ಬರೆಯುವುದು: “ನಾನು ರೋಗಿಗಳೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ. ಅವರನ್ನು ನೋಡಿಕೊಳ್ಳಲು, ಸರಾಗವಾಗಿ ಉಸಿರಾಡುವಂತೆ ಅವರಿಗೆ ಸಹಾಯಮಾಡಲು, ಅವರನ್ನು ಅಡ್ಡಾಡಿಸಲು, ಅವರ ಗಾಯಗಳನ್ನು ಶುಚಿಮಾಡಿ, ಔಷಧಿ ಹಚ್ಚಿ ಬ್ಯಾಂಡೇಜ್‌ ಅನ್ನು ಕಟ್ಟಲು, ಅವರ ಪ್ರಶ್ನೆಗಳಿಗೆ ಉತ್ತರ ಕೊಡಲು, ಅನೇಕ ವಿಷಯಗಳನ್ನು ಅವರಿಗೆ ವಿವರಿಸಲು, ಮತ್ತು ವೈಯಕ್ತಿಕ ಸಾಂತ್ವನವನ್ನು ನೀಡಲು ಬಯಸುತ್ತೇನೆ. ಇದನ್ನೆಲ್ಲಾ ಮಾಡುವುದು ನನಗೆ ತುಂಬ ಇಷ್ಟ. ಏಕೆಂದರೆ, ಇದರಿಂದ ರೋಗಿಗಳೊಂದಿಗೆ ಸ್ನೇಹ ಸಂಬಂಧವನ್ನು ಬೆಳೆಸಸಾಧ್ಯವಿದೆ.”

ಒಂದು ಆಸ್ಪತ್ರೆಯಲ್ಲಿ ಯಾರು ರೋಗಿಯಾಗಿ ಇದ್ದು ಬಂದಿದ್ದಾರೋ ಅವರು, ಇಂತಹದ್ದೇ ನಿಸ್ವಾರ್ಥ ಮನೋಭಾವವನ್ನು ತೋರಿಸಿರುವಂತಹ ಸಹಾನುಭೂತಿಯುಳ್ಳ ಒಬ್ಬ ನರ್ಸ್‌ ಅನ್ನು ಜ್ಞಾಪಿಸಿಕೊಳ್ಳಸಾಧ್ಯವಿದೆ. ಆದರೆ, ಒಬ್ಬ ಸಮರ್ಥ ನರ್ಸ್‌ ಆಗಬೇಕಾದರೆ ಯಾವುದರ ಅಗತ್ಯವಿದೆ?

(g00 11/8)

[ಪುಟ 3ರಲ್ಲಿರುವ ಚಿತ್ರ]

ಫ್ಲಾರೆನ್ಸ್‌ ನೈಟಿಂಗೇಲ್‌

[ಕೃಪೆ]

Courtesy National Library of Medicine