ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನರ್ಸ್‌ಗಳ ಅತಿ ಪ್ರಾಮುಖ್ಯ ಪಾತ್ರ

ನರ್ಸ್‌ಗಳ ಅತಿ ಪ್ರಾಮುಖ್ಯ ಪಾತ್ರ

ನರ್ಸ್‌ಗಳ ಅತಿ ಪ್ರಾಮುಖ್ಯ ಪಾತ್ರ

“ಒಬ್ಬ ನರ್ಸ್‌, ಜನರನ್ನು ಪೋಷಿಸುವ, ಉತ್ತೇಜಿಸುವ, ಹಾಗೂ ಸಂರಕ್ಷಿಸುವ ವ್ಯಕ್ತಿಯಾಗಿದ್ದಾಳೆ; ಅವಳು, ಅಸ್ವಸ್ಥರು ಮತ್ತು ಗಾಯಗೊಂಡವರು ಹಾಗೂ ವೃದ್ಧರ ಆರೈಕೆಯನ್ನು ಮಾಡಲು ಸಿದ್ಧಳಾಗಿರುವಂತಹ ಒಬ್ಬ ವ್ಯಕ್ತಿಯಾಗಿದ್ದಾಳೆ.”​—⁠ಇಂದಿನ ಲೋಕದಲ್ಲಿ ನರ್ಸಿಂಗ್‌ ವೃತ್ತಿ​—⁠ಪಂಥಾಹ್ವಾನಗಳು, ವಿವಾದಗಳು, ಮತ್ತು ಪ್ರವೃತ್ತಿಗಳು (ಇಂಗ್ಲಿಷ್‌).

ಒಬ್ಬ ಸಮರ್ಥ ನರ್ಸ್‌ ಆಗಲು ನಿಸ್ವಾರ್ಥ ಮನೋಭಾವವು ಅತ್ಯಗತ್ಯವಾಗಿದೆ. ಆದರೂ, ಕೇವಲ ಈ ಗುಣವಷ್ಟೇ ಸಾಕಾಗುವುದಿಲ್ಲ. ಏಕೆಂದರೆ, ಒಳ್ಳೆಯ ನರ್ಸ್‌ಗಳಾಗಲು ಈ ಗುಣದೊಂದಿಗೆ ಬಹಳಷ್ಟು ತರಬೇತಿ ಹಾಗೂ ವ್ಯಾಪಕವಾದ ಅನುಭವವೂ ಬೇಕಾಗಿದೆ. ತುಂಬ ಅತ್ಯಗತ್ಯವಾಗಿರುವ ಒಂದು ಆವಶ್ಯಕತೆ ಯಾವುದೆಂದರೆ, ಸುಮಾರು ಒಂದರಿಂದ ನಾಲ್ಕು ವರ್ಷಗಳ ಅಥವಾ ಇನ್ನೂ ಹೆಚ್ಚಿನ ಅಭ್ಯಾಸ ಹಾಗೂ ಪ್ರಾಯೋಗಿಕ ತರಬೇತಿಯೇ ಆಗಿದೆ. ಒಬ್ಬ ಒಳ್ಳೆಯ ನರ್ಸ್‌ ಆಗಲು ಯಾವ ಗುಣಗಳು ಬೇಕಾಗಿವೆ? ಎಚ್ಚರ! ಪತ್ರಿಕೆಯ ಪ್ರತಿನಿಧಿಗಳಿಂದ ಸಂದರ್ಶನ ಮಾಡಲ್ಪಟ್ಟ ಅನುಭವಸ್ಥ ನರ್ಸ್‌ಗಳಿಂದ ಕೊಡಲ್ಪಟ್ಟ ಕೆಲವು ಉತ್ತರಗಳು ಈ ಕೆಳಗಿನಂತಿವೆ.

“ವೈದ್ಯರು ರೋಗಿಯನ್ನು ಗುಣಪಡಿಸುತ್ತಾರೆ, ಆದರೆ ನರ್ಸ್‌ಗಳು ರೋಗಿಗಳ ಆರೈಕೆಮಾಡುತ್ತಾರೆ. ಉದಾಹರಣೆಗೆ, ನಿಮಗೆ ಅಸ್ಥಿಗತ ರೋಗವಿದೆ ಅಥವಾ ನೀವು ಬೇಗನೆ ಸಾಯಲಿದ್ದೀರಿ ಎಂದು ವೈದ್ಯರು ರೋಗಿಗಳಿಗೆ ತಿಳಿಸುವಾಗ, ಆ ರೋಗಿಗಳಿಗೆ ಮಾನಸಿಕ ಆಘಾತವಾಗುತ್ತದೆ. ಅಂತಹ ಸಮಯದಲ್ಲಿ ನಾವು ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಗಾಯಗೊಂಡಿರುವ ರೋಗಿಗಳಲ್ಲಿ ಭರವಸೆಯನ್ನು ಸಹ ಮೂಡಿಸಬೇಕಾಗುತ್ತದೆ. ಅಸ್ವಸ್ಥರ ಆರೈಕೆ ಮಾಡುವಾಗ ನಾವು ತಾಯಿಯ ಸ್ಥಾನವನ್ನು ತೆಗೆದುಕೊಳ್ಳಬೇಕಾಗುತ್ತದೆ.”​—⁠ಕಾರ್ಮನ್‌ ಕಿಲ್‌ಮಾರ್ಟಿನ್‌, ಸ್ಪೆಯ್ನ್‌.

“ರೋಗಿಯು ಅನುಭವಿಸುವ ನೋವು ಹಾಗೂ ಸಂಕಟವನ್ನು ನಾವು ಸಹ ಅನುಭವಿಸಲು ಸಿದ್ಧರಿರಬೇಕು ಹಾಗೂ ಅವರಿಗೆ ಸಹಾಯಮಾಡಲು ಬಯಸುವವರಾಗಿರಬೇಕು. ನಮಗೆ ಕನಿಕರ ಹಾಗೂ ದೀರ್ಘಶಾಂತಿಯು ಇರಬೇಕು. ಯಾವಾಗಲೂ ನರ್ಸಿಂಗ್‌ ವೃತ್ತಿ ಹಾಗೂ ಔಷಧದ ಬಗ್ಗೆ ಹೆಚ್ಚನ್ನು ಕಲಿಯುವ ಬಯಕೆಯು ನಮ್ಮಲ್ಲಿರಬೇಕು.”​—⁠ಟಾಡಾಶಿ ಹಾಟಾನೊ, ಜಪಾನ್‌.

“ಇತ್ತೀಚಿನ ವರ್ಷಗಳಲ್ಲಿ ನರ್ಸ್‌ಗಳಿಗೆ ನರ್ಸಿಂಗ್‌ ವೃತ್ತಿಯಲ್ಲಿ ಇನ್ನೂ ಹೆಚ್ಚು ಜ್ಞಾನವನ್ನು ಪಡೆದುಕೊಳ್ಳುವ ಅಗತ್ಯ ಉಂಟಾಗಿದೆ. ಆದುದರಿಂದ, ಇದರ ಬಗ್ಗೆ ಅಭ್ಯಾಸಮಾಡುವ ಬಯಕೆ ಹಾಗೂ ಅಭ್ಯಾಸಮಾಡಿದ ವಿಷಯವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವು ಅತ್ಯಗತ್ಯವಾಗಿದೆ. ಇದಲ್ಲದೆ, ಕೆಲವೊಂದು ಸನ್ನಿವೇಶಗಳು ಎದುರಾದಾಗ, ನರ್ಸ್‌ಗಳು ಕೂಡಲೆ ತೀರ್ಮಾನ ತೆಗೆದುಕೊಳ್ಳಬೇಕು ಮತ್ತು ತ್ವರಿತಗತಿಯಲ್ಲಿ ಕ್ರಿಯೆಗೈಯಬೇಕು.”​—⁠ಕೇಕೊ ಕಾವಾನೆ, ಜಪಾನ್‌.

“ಒಬ್ಬ ನರ್ಸ್‌ ಆಗಿರುವುದರಿಂದ ನಾವು ಆದರಣೆಯನ್ನು ತೋರಿಸಬೇಕಾಗಿದೆ. ನಾವು ಸೈರಣೆಯುಳ್ಳವರಾಗಿರಬೇಕು ಮತ್ತು ಸಹಾನುಭೂತಿಯನ್ನು ತೋರಿಸಬೇಕು.”​—⁠ಆರಾಸಿಲೀ ಗಾರ್ಸೀಆ ಪಾಡೀಯಾ, ಮೆಕ್ಸಿಕೊ.

“ಒಬ್ಬ ಒಳ್ಳೆಯ ನರ್ಸ್‌ ಆಗಲು ಓದುವುದರಲ್ಲಿ ಆಸಕ್ತಿಯಿರಬೇಕು, ಬೇರೆಯವರ ನೋವನ್ನು ಅರ್ಥಮಾಡಿಕೊಳ್ಳುವವರಾಗಿರಬೇಕು ಮತ್ತು ತಮ್ಮ ವೃತ್ತಿಯಲ್ಲಿ ತುಂಬ ನಿಪುಣರಾಗಿರಬೇಕು. ಒಂದುವೇಳೆ ಒಬ್ಬ ನರ್ಸ್‌ಗೆ ನಿಸ್ವಾರ್ಥ ಮನೋಭಾವವು ಇಲ್ಲದಿರುವಲ್ಲಿ ಅಥವಾ ವೈದ್ಯಕೀಯ ವರ್ಗದ ಮೇಲಧಿಕಾರಿಗಳಿಂದ ಕೊಡಲ್ಪಡುವ ಸಲಹೆಗೆ ಅಸಮಾಧಾನವನ್ನು ವ್ಯಕ್ತಪಡಿಸುವಲ್ಲಿ, ಅಂತಹ ನರ್ಸ್‌ಗಳನ್ನು ರೋಗಿಗಳೂ ಇಷ್ಟಪಡುವುದಿಲ್ಲ ಮತ್ತು ಸಹೋದ್ಯೋಗಿಗಳೂ ಅವರೊಂದಿಗೆ ಕೆಲಸಮಾಡಲು ಇಷ್ಟಪಡುವುದಿಲ್ಲ.”​—⁠ರೋಸ್ಯಾಂಜೆಲಾ ಸಾಂಟೋಸ್‌, ಬ್ರಸಿಲ್‌.

“ಕೆಲವೊಂದು ಗುಣಗಳಂತೂ ತುಂಬ ಅತ್ಯಗತ್ಯವಾಗಿವೆ. ಅವು ಯಾವುವೆಂದರೆ, ನಮ್ಯಭಾವ, ಸೈರಣೆ, ಹಾಗೂ ತಾಳ್ಮೆ. ಅಷ್ಟುಮಾತ್ರವಲ್ಲ, ನಾವು ಬಿಚ್ಚುಮನಸ್ಸಿನವರಾಗಿರಬೇಕು. ನಮ್ಮ ಸಹೋದ್ಯೋಗಿಗಳೊಂದಿಗೆ ಮತ್ತು ವೈದ್ಯಕೀಯ ವರ್ಗದವರೊಂದಿಗೆ ಚೆನ್ನಾಗಿ ಹೊಂದಿಕೊಂಡು ಹೋಗುವ ಸ್ವಭಾವದವರಾಗಿರಬೇಕು. ನಾವು ತುಂಬ ನಿಪುಣರಾಗಿರಬೇಕಾದರೆ, ಬೇಗನೆ ಹೊಸ ಕೌಶಲಗಳನ್ನು ತಿಳಿದುಕೊಂಡು, ಅವುಗಳಿಗೆ ಹೊಂದಿಕೊಳ್ಳುವವರಾಗಿರಬೇಕು.”​—⁠ಮಾರ್ಕ್‌ ಕೊಹ್ಲೆರ್‌, ಫ್ರಾನ್ಸ್‌.

“ನಾವು ಜನರನ್ನು ಪ್ರೀತಿಸಬೇಕು ಮತ್ತು ನಿಜವಾಗಿಯೂ ಇತರರಿಗೆ ಸಹಾಯಮಾಡಲು ಬಯಸಬೇಕು. ಅಷ್ಟುಮಾತ್ರವಲ್ಲ, ನಾವು ಒತ್ತಡ (ಸ್ಟ್ರೆಸ್‌)ವನ್ನು ಸಹ ತಾಳಿಕೊಳ್ಳಬೇಕಾಗಿದೆ. ಏಕೆಂದರೆ ನರ್ಸಿಂಗ್‌ ವೃತ್ತಿಯಲ್ಲಿ ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ ತಪ್ಪುಗಳನ್ನು ಮಾಡುವಲ್ಲಿ, ಇದರಿಂದ ವಿಪತ್ಕಾರಕ ಪರಿಣಾಮಗಳು ಸಂಭವಿಸಬಹುದು. ಕೆಲವೊಮ್ಮೆ ನರ್ಸ್‌ಗಳ ಕೊರತೆಯಿರುವಾಗಲೂ, ಇದೇ ರೀತಿಯ ಕೆಲಸವನ್ನು ಮಾಡಲು ನಾವು ಒಗ್ಗಿಕೊಳ್ಳಬೇಕು. ಹೀಗೆ ಮಾಡುವಾಗ, ನಮ್ಮ ಕೆಲಸದ ಗುಣಮಟ್ಟವೂ ಅತ್ಯುತ್ತಮವಾಗಿರುವುದು.”​—⁠ಕ್ಲಾಡಿಯಾ ರೇಕರ್‌-ಬಾಕರ್‌, ನೆದರ್ಲೆಂಡ್ಸ್‌.

ಆರೈಕೆಮಾಡುವ ಸ್ಥಾನದಲ್ಲಿರುವ ನರ್ಸ್‌

ಇಂದಿನ ಲೋಕದಲ್ಲಿ ನರ್ಸಿಂಗ್‌ ವೃತ್ತಿ (ಇಂಗ್ಲಿಷ್‌) ಎಂಬ ಪುಸ್ತಕವು ಹೀಗೆ ಹೇಳುತ್ತದೆ: “ನರ್ಸಿಂಗ್‌ ವೃತ್ತಿಯು, ಬೇರೆ ಬೇರೆ ರೀತಿಯ ಆರೋಗ್ಯಸಂಬಂಧಿತ ಸನ್ನಿವೇಶಗಳಲ್ಲಿ ಒಬ್ಬ ವ್ಯಕ್ತಿಯ ಆರೈಕೆಮಾಡುವುದಕ್ಕೆ ಸಂಬಂಧಿಸಿದ್ದಾಗಿದೆ. ಆದುದರಿಂದಲೇ, ಔಷಧವು ರೋಗಿಯನ್ನು ಗುಣಪಡಿಸುವಾಗ, ನರ್ಸಿಂಗ್‌ ವೃತ್ತಿಯು ರೋಗಿಯ ಆರೈಕೆಮಾಡುತ್ತದೆ ಎಂದು ನಾವು ನೆನಸುತ್ತೇವೆ.”

ಹೀಗೆ, ನರ್ಸ್‌ಗಳು ಆರೈಕೆಮಾಡುವ ಸ್ಥಾನದಲ್ಲಿದ್ದಾರೆ. ಆದುದರಿಂದ, ಅವರು ಆರೈಕೆಮಾಡಲೇಬೇಕಾಗಿದೆ. ಸ್ವಲ್ಪ ಸಮಯದ ಹಿಂದೆ, ಸುಮಾರು 1,200 ಮಂದಿ ರೆಜಿಸ್ಟರ್ಡ್‌ ನರ್ಸ್‌ಗಳಿಗೆ “ಒಬ್ಬ ನರ್ಸ್‌ ಆಗಿರುವ ನಿಮಗೆ ನಿಮ್ಮ ಕೆಲಸದಲ್ಲಿ ಯಾವ ಅಂಶವು ಅತ್ಯಂತ ಪ್ರಾಮುಖ್ಯವಾದದ್ದಾಗಿದೆ?” ಎಂದು ಕೇಳಲಾಯಿತು. ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ ಆರೈಕೆಯನ್ನು ನೀಡುವುದೇ ಅತ್ಯಂತ ಪ್ರಾಮುಖ್ಯ ಅಂಶವಾಗಿದೆ ಎಂದು 98 ಪ್ರತಿಶತ ಮಂದಿ ಉತ್ತರಿಸಿದರು.

ತಾವು ರೋಗಿಗಳಿಗೆ ಸಲ್ಲಿಸುವ ಅಮೂಲ್ಯ ಸೇವೆಯು ಅಷ್ಟೇನೂ ದೊಡ್ಡದಲ್ಲ ಎಂದು ಸ್ವತಃ ನರ್ಸ್‌ಗಳು ಭಾವಿಸುತ್ತಾರೆ. ಈ ಮೇಲೆ ತಿಳಿಸಲ್ಪಟ್ಟಿರುವ ಕಾರ್ಮನ್‌ ಕಿಲ್‌ಮಾರ್ಟಿನ್‌ಗೆ ನರ್ಸಿಂಗ್‌ ವೃತ್ತಿಯಲ್ಲಿ ಸುಮಾರು 12 ವರ್ಷಗಳ ಅನುಭವವಿದೆ. ಅವಳು ಎಚ್ಚರ! ಪತ್ರಿಕೆಯ ಸುದ್ದಿಗಾರರಿಗೆ ಹೀಗೆ ಹೇಳಿದಳು: “ಒಂದು ಬಾರಿ ನನ್ನ ಗೆಳತಿಯ ಬಳಿ ನಾನು, ತೀರ ಅಸ್ವಸ್ಥರಾಗಿರುವ ರೋಗಿಗಳನ್ನು ನೋಡಿಕೊಳ್ಳುವಾಗ, ತುಂಬ ಮಿತವಾದ ಸಹಾಯವನ್ನು ಮಾತ್ರ ನೀಡಸಾಧ್ಯವಿದೆ, ಅದಕ್ಕಿಂತ ಹೆಚ್ಚಿನದ್ದೇನನ್ನೂ ನಾನು ಮಾಡಲಾರೆನೆಂದು ನನಗನಿಸುತ್ತದೆ ಎಂದು ಹೇಳಿಕೊಂಡೆ. ನನ್ನ ಅನಿಸಿಕೆಯೇನೆಂದರೆ, ನಾನು ಕೇವಲ ಒಂದು ‘ಬ್ಯಾಂಡ್‌-ಏಡ್‌’ ಮಾಡುವಷ್ಟು ಸಹಾಯಮಾಡುತ್ತೇನೆ ಅಷ್ಟೇ. ಆಗ ನನ್ನ ಗೆಳತಿಯು ಉತ್ತರಿಸಿದ್ದು: ‘ನೀನು ತುಂಬ ಅಮೂಲ್ಯವಾದ ಒಂದು “ಬ್ಯಾಂಡ್‌-ಏಡ್‌”ನಂತಿದ್ದೀ. ಏಕೆಂದರೆ ಒಬ್ಬ ವ್ಯಕ್ತಿಯು ಅಸ್ವಸ್ಥನಾಗಿರುವಾಗ, ಅವನಿಗೆ ಬೇರೇನೂ ಬೇಕಾಗಿಲ್ಲ, ಕೇವಲ ನಿನ್ನಂತಹ ವ್ಯಕ್ತಿಯ ಆವಶ್ಯಕತೆ ಅವನಿಗಿರುತ್ತದೆ​—⁠ಅಂದರೆ ಸಹಾನುಭೂತಿಯಿರುವ ಒಬ್ಬ ನರ್ಸ್‌ನ ಆವಶ್ಯಕತೆ ಆ ರೋಗಿಗಿರುತ್ತದೆ.’”

ನರ್ಸ್‌ಗಳು ಈ ರೀತಿಯ ಆರೈಕೆ ನೀಡುವಾಗ, ಅವರ ಮೇಲೆ ಇದು ಭಾರಿ ಒತ್ತಡವನ್ನು ಹೇರುತ್ತದೆ ಎಂಬುದಂತೂ ಖಂಡಿತ. ಏಕೆಂದರೆ ಅವರು ಪ್ರತಿ ದಿನ ಹತ್ತು ಅಥವಾ ಅದಕ್ಕಿಂತಲೂ ಹೆಚ್ಚು ತಾಸುಗಳ ವರೆಗೆ ಕೆಲಸಮಾಡುತ್ತಾರೆ! ಸ್ವತ್ಯಾಗ ಮನೋಭಾವವಿರುವ ಈ ನರ್ಸ್‌ಗಳು, ನರ್ಸಿಂಗ್‌ ವೃತ್ತಿಯನ್ನು ಆಯ್ಕೆಮಾಡುವಂತೆ ಯಾವುದು ಅವರನ್ನು ಪ್ರಚೋದಿಸಿತು?

ಯಾಕೆ ನರ್ಸ್‌ ಆಗಬೇಕು?

ಎಚ್ಚರ! ಪತ್ರಿಕೆಯು ಲೋಕದಾದ್ಯಂತವಿರುವ ಅನೇಕ ನರ್ಸ್‌ಗಳನ್ನು ಇಂಟರ್‌ವ್ಯೂ ಮಾಡಿತು. “ನರ್ಸ್‌ ಆಗುವಂತೆ ಯಾವುದು ನಿಮ್ಮನ್ನು ಪ್ರಚೋದಿಸಿತು?” ಎಂದು ಅವರನ್ನು ಕೇಳಿದಾಗ, ಅವರು ಕೊಟ್ಟ ಉತ್ತರಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ.

ಟೆರೀ ವೆಧರ್‌ಸನ್‌ ಎಂಬುವವರಿಗೆ ನರ್ಸಿಂಗ್‌ ವೃತ್ತಿಯಲ್ಲಿ 47 ವರ್ಷಗಳ ಅನುಭವವಿದೆ. ಈಗ ಅವರು ಇಂಗ್ಲೆಂಡಿನ ಮ್ಯಾಂಚೆಸ್ಟರ್‌ನಲ್ಲಿರುವ ಒಂದು ಆಸ್ಪತ್ರೆಯ ಯೂರೊಲಜಿ (ಮೂತ್ರಶಾಸ್ತ್ರ) ಇಲಾಖೆಯಲ್ಲಿ ಕ್ಲಿನಿಕಲ್‌ ನರ್ಸ್‌ ಸ್ಪೆಷಲಿಸ್ಟ್‌ ಆಗಿ ಕೆಲಸಮಾಡುತ್ತಿದ್ದಾರೆ. ಅವರು ಹೇಳುವುದು: “ನಾನು ಒಬ್ಬ ಕ್ಯಾಥೊಲಿಕಳಾಗಿ ಬೆಳೆದೆ ಮತ್ತು ಕ್ಯಾಥೊಲಿಕ್‌ ಬೋರ್ಡಿಂಗ್‌ ಸ್ಕೂಲಿನಲ್ಲಿ ವ್ಯಾಸಂಗಮಾಡಿದೆ. ದೊಡ್ಡವಳಾದ ಮೇಲೆ ನಾನು ಒಬ್ಬ ನನ್‌ ಅಥವಾ ಒಬ್ಬ ನರ್ಸ್‌ ಆಗಬೇಕೆಂದು ನಿರ್ಧರಿಸಿದೆ. ಯಾಕೆಂದರೆ ಇತರರ ಸೇವೆಮಾಡಬೇಕೆಂಬ ಕಡುಬಯಕೆ ನನ್ನಲ್ಲಿತ್ತು. ನೀವು ಇದನ್ನು ಒಂದು ಅಂತಃಪ್ರೇರಣೆ ಎಂದು ಸಹ ಕರೆಯಬಹುದು. ಕೊನೆಗೂ ನಾನು ನರ್ಸ್‌ ಆಗುವ ಆಯ್ಕೆಯನ್ನೇ ಮಾಡಿದೆ.”

ಜಪಾನಿನ ಸೈಟಾಮಾದ ಚೀವಾ ಮಾಟ್ಸುನಾಗಾ ಎಂಬ ಮಹಿಳೆಯು, ಸುಮಾರು ಎಂಟು ವರ್ಷಗಳಿಂದ ತನ್ನ ಸ್ವಂತ ಕ್ಲಿನಿಕನ್ನು ನಡೆಸುತ್ತಿದ್ದಾಳೆ. ಅವಳು ಹೇಳುವುದು: “‘ನಮ್ಮ ಜೀವಮಾನದಲ್ಲೆಲ್ಲ ಕೆಲಸಮಾಡುವಂತೆ ನಮ್ಮನ್ನು ಅರ್ಹರನ್ನಾಗಿ ಮಾಡುವ ಒಂದು ಕೌಶಲವನ್ನು ಕಲಿತುಕೊಳ್ಳುವುದು ಒಳ್ಳೇದು,’ ಎಂದು ನನ್ನ ತಂದೆಯವರು ಯಾವಾಗಲೂ ಹೇಳುತ್ತಿದ್ದರು. ನಾನು ಅವರ ಆಲೋಚನೆಯನ್ನೇ ಅನುಸರಿಸಲು ನಿರ್ಧರಿಸಿದೆ. ಆದುದರಿಂದಲೇ ನಾನು ನರ್ಸಿಂಗ್‌ ವೃತ್ತಿಯನ್ನು ಆಯ್ಕೆಮಾಡಿದೆ.”

ಜಪಾನಿನ ಟೋಕಿಯೊದ ಎಟ್ಸ್‌ಕೊ ಕೊಟಾನೀ ಎಂಬುವವರು ಒಬ್ಬ ನರ್ಸ್‌ ಆಗಿದ್ದು, ನರ್ಸಿಂಗ್‌ ವೃತ್ತಿಯಲ್ಲಿ 38 ವರ್ಷಗಳ ಅನುಭವವುಳ್ಳವರು. ಅವರು ಹೇಳಿದ್ದು: “ನಾನಿನ್ನೂ ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ, ನನ್ನ ತಂದೆಯವರು ಬಿದ್ದುಬಿಟ್ಟರು. ಮತ್ತು ತುಂಬ ರಕ್ತವನ್ನು ಕಳೆದುಕೊಂಡರು. ಆಸ್ಪತ್ರೆಯಲ್ಲಿ ನನ್ನ ತಂದೆಯವರನ್ನು ನೋಡಿದಾಗ, ನಾನು ಒಬ್ಬ ನರ್ಸ್‌ ಆಗಲೇಬೇಕೆಂದು ನಿರ್ಧರಿಸಿದೆ. ಏಕೆಂದರೆ ಮುಂದೆ ಅಸ್ವಸ್ಥ ಜನರಿಗೆ ನಾನು ಸಹಾಯಮಾಡಬಹುದು ಎಂದು ನನಗನಿಸಿತು.”

ಇನ್ನಿತರರು, ಅಸ್ವಸ್ಥರಾಗಿರುವಾಗ ತಮಗಾದ ಸ್ವಂತ ಅನುಭವದಿಂದ ಪ್ರಚೋದಿತರಾಗಿ ನರ್ಸಿಂಗ್‌ ವೃತ್ತಿಯನ್ನು ಆಯ್ಕೆಮಾಡಿದ್ದರು. ಮೆಕ್ಸಿಕೋದಲ್ಲಿರುವ ಎನೇಡಾ ಬೀಏರಾ ಎಂಬ ನರ್ಸ್‌ ಹೀಗೆ ಹೇಳುತ್ತಾಳೆ: “ನಾನು ಆರು ವರ್ಷದವಳಾಗಿದ್ದಾಗ ನನಗೆ ಬ್ರಾಂಕೈಟಿಸ್‌ ಇತ್ತು. ಆದುದರಿಂದ, ಎರಡು ವಾರಗಳ ವರೆಗೆ ಆಸ್ಪತ್ರೆಯಲ್ಲಿದ್ದೆ. ಆ ಸಮಯಾವಧಿಯಲ್ಲೇ, ಮುಂದೆ ನಾನೂ ಒಬ್ಬ ನರ್ಸ್‌ ಆಗಬೇಕೆಂದು ನಿರ್ಧರಿಸಿದೆ.”

ಒಬ್ಬ ನರ್ಸ್‌ ಆಗಬೇಕಾದರೆ ತುಂಬ ಸ್ವತ್ಯಾಗ ಮನೋಭಾವವುಳ್ಳವರಾಗಿರುವ ಅಗತ್ಯವಿದೆ ಎಂಬುದಂತೂ ಸ್ಪಷ್ಟ. ಹಾಗಾದರೆ, ಈ ಶ್ರೇಷ್ಠ ವೃತ್ತಿಯಿಂದ ಸಿಗುವ ಪ್ರತಿಫಲಗಳನ್ನು ಮತ್ತು ಎದುರಿಸಬೇಕಾಗಿರುವ ಪಂಥಾಹ್ವಾನಗಳನ್ನು ನಾವು ನಿಕಟವಾಗಿ ಪರಿಶೀಲಿಸೋಣ.

ನರ್ಸ್‌ ಆಗುವುದರಿಂದ ಸಿಗುವ ಆನಂದ

ನರ್ಸ್‌ ಆಗುವುದರಿಂದ ಯಾವ ಆನಂದವು ಸಿಗುತ್ತದೆ? ಈ ಪ್ರಶ್ನೆಗೆ ಉತ್ತರವು, ಒಬ್ಬ ವ್ಯಕ್ತಿಯು ನರ್ಸಿಂಗ್‌ ವೃತ್ತಿಯ ಯಾವ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರೋ ಅದರ ಮೇಲೆ ಹೊಂದಿಕೊಂಡಿರುವುದು. ಉದಾಹರಣೆಗೆ, ತಮ್ಮ ಸಹಾಯದಿಂದ ಯಶಸ್ವಿಯಾಗಿ ಜನಿಸುವ ಪ್ರತಿಯೊಂದು ಮಗುವನ್ನು ನೋಡುವಾಗ ಎಎನ್‌ಎಮ್‌ಗಳಿಗೆ ತುಂಬ ಆನಂದವಾಗುತ್ತದೆ. “ಗರ್ಭಧಾರಣೆಯ ಸಮಯದಿಂದ ಹಿಡಿದು ಹೆರಿಗೆಯ ತನಕ ನಾವು ಮಗುವಿನ ಬೆಳವಣಿಗೆಯನ್ನು ಗಮನಿಸಿರುತ್ತೇವೆ. ಆದುದರಿಂದ, ಅಂತಹ ಒಂದು ಆರೋಗ್ಯಭರಿತ ಮಗುವನ್ನು ಹೆರಿಗೆ ಮಾಡಿಸುವುದು ಖಂಡಿತವಾಗಿಯೂ ಅದ್ಭುತಕರ ಕೆಲಸವಾಗಿದೆ,” ಎಂದು ನೆದರ್ಲೆಂಡ್ಸ್‌ನ ಒಬ್ಬ ಎಎನ್‌ಎಮ್‌ ಹೇಳುತ್ತಾಳೆ. ನೆದರ್ಲೆಂಡ್ಸ್‌ನವಳೇ ಆದ ಯೋಲಾಂಡಾ ಕೀಲನ್‌ ಫಾನ್‌ ಹೋಫ್ಟ್‌ ಎಂಬ ಮಹಿಳೆಯು ಹೇಳುವುದು: “ದಂಪತಿಗಳು ಹಾಗೂ ಆರೋಗ್ಯ ಪ್ರವರ್ತಕರು ಅನುಭವಿಸಸಾಧ್ಯವಿರುವ ಅತ್ಯಂತ ಸುಂದರ ಅನುಭವಗಳಲ್ಲಿ ಒಂದು, ಹೆರಿಗೆ ಮಾಡಿಸುವುದೇ ಆಗಿದೆ. ಖಂಡಿತವಾಗಿಯೂ ಇದು ಒಂದು ಅದ್ಭುತವಾಗಿದೆ!”

ಫ್ರಾನ್ಸ್‌ನ ಡ್ರೋನಲ್ಲಿರುವ ರಾಶಿಟ್‌ ಅಸಾಮ್‌ ಎಂಬುವವರು ಸರಕಾರದಿಂದ ಪ್ರಮಾಣಪತ್ರ ಪಡೆದಿರುವ ನರ್ಸ್‌ ಆಗಿದ್ದಾರೆ. ಇವರು 40 ವರ್ಷ ಪ್ರಾಯದವರಾಗಿದ್ದು, ಒಬ್ಬ ಅನೆಸ್ತಿಟಿಸ್ಟ್‌ (ಅರಿವಳಿಕೆತಜ್ಞ) ಆಗಿ ಕೆಲಸಮಾಡುತ್ತಿದ್ದಾರೆ. ಅವರಿಗೆ ನರ್ಸಿಂಗ್‌ ವೃತ್ತಿ ಏಕೆ ಇಷ್ಟ? ಏಕೆಂದರೆ, “ಒಂದು ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಲು ನಾನು ಸಹ ಸಹಾಯಮಾಡಿದ್ದೇನೆ ಮತ್ತು ತುಂಬ ಆಸಕ್ತಿಕರವಾದ ಹಾಗೂ ಸತತವಾಗಿ ಪ್ರಗತಿಮಾಡುತ್ತಿರುವಂಥ ಒಂದು ವೃತ್ತಿಯ ಸದಸ್ಯನಾಗಿದ್ದೇನೆ ಎಂಬ ಸಂತೃಪ್ತಿ ನನಗೆ ಸಿಗುತ್ತದೆ,” ಎಂದು ಅವರು ಹೇಳುತ್ತಾರೆ. ಐಸಕ್‌ ಬಾಂಗಿಲಿ ಎಂಬುವವರು ಸಹ ಫ್ರಾನ್ಸ್‌ನವರಾಗಿದ್ದು, ಅವರು ಹೇಳಿದ್ದು: “ ಒಬ್ಬ ರೋಗಿಯು ಇನ್ನೇನು ಸಾಯಲಿದ್ದಾನೆ ಎಂದು ನಾವು ನೆನಸಿದ್ದು, ಸತತ ಪ್ರಯಾಸದ ನಂತರ ಆ ರೋಗಿಯನ್ನು ಉಳಿಸಿದಂತಹ ತುರ್ತು ಸನ್ನಿವೇಶಗಳಲ್ಲಿ, ರೋಗಿಗಳು ಹಾಗೂ ಅವರ ಕುಟುಂಬಗಳು ನಮಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವಾಗಲಂತೂ ನನ್ನ ಮನಸ್ಸಿಗೆ ತುಂಬ ಸಂತೋಷವಾಗುತ್ತದೆ.”

ಈ ಮುಂಚೆ ತಿಳಿಸಲ್ಪಟ್ಟಿರುವ ಟೆರೀ ವೆಧರ್‌ಸನ್‌ ಅವರಿಗೆ, ಕೃತಜ್ಞತೆಯನ್ನು ವ್ಯಕ್ತಪಡಿಸುವಂತಹ ಒಂದು ಪತ್ರವು ಸಿಕ್ಕಿತು. ಒಬ್ಬ ವಿಧವೆಯು ಅವರಿಗೆ ಹೀಗೆ ಬರೆದರು: “ಚಾರ್ಲ್ಸ್‌ ಅಸ್ವಸ್ಥನಾಗಿದ್ದ ಸಮಯದಲ್ಲಿ, ನಿಮ್ಮ ಪ್ರಶಾಂತವಾದ ಹಾಗೂ ಪುನರಾಶ್ವಾಸನಾದಾಯಕ ಮುಖಭಾವದಿಂದ ನಾವು ಉಪಶಮನವನ್ನು ಪಡೆದುಕೊಂಡೆವು. ಆದುದರಿಂದ, ಈ ಸಂದರ್ಭದಲ್ಲಿ ನಿಮಗೆ ಉಪಕಾರವನ್ನು ಸಲ್ಲಿಸದೆ ಇರಲು ನನ್ನಿಂದಾಗದು. ನಿಮ್ಮ ಹೃತ್ಪೂರ್ವಕ ಸ್ನೇಹವೇ ನಮ್ಮ ಖಿನ್ನತೆಯನ್ನು ದೂರಮಾಡಿತು, ಮತ್ತು ಅದರಿಂದಲೇ ನಾವು ಬಲವನ್ನು ಪಡೆದುಕೊಂಡೆವು.”

ಪಂಥಾಹ್ವಾನಗಳನ್ನು ಎದುರಿಸುವುದು

ನರ್ಸಿಂಗ್‌ ವೃತ್ತಿಯಿಂದ ಸಿಗುವ ಆನಂದದೊಂದಿಗೆ ಅನೇಕ ಪಂಥಾಹ್ವಾನಗಳು ಸಹ ಎದುರಾಗುತ್ತವೆ. ನರ್ಸಿಂಗ್‌ ವೃತ್ತಿಯಲ್ಲಿ ತಪ್ಪುಗಳನ್ನು ಮಾಡುವ ಅವಕಾಶವೇ ಇಲ್ಲ! ಔಷಧಿಯನ್ನು ಕೊಡುವುದಾಗಲಿ, ರಕ್ತವನ್ನು ತೆಗೆಯುವುದಾಗಲಿ, ಚುಚ್ಚುಮದ್ದನ್ನು ಕೊಡುವುದಾಗಲಿ ಅಥವಾ ಒಬ್ಬ ರೋಗಿಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯುವುದಾಗಿರಲಿ, ಒಬ್ಬ ನರ್ಸ್‌ ಅತ್ಯಂತ ಜಾಗರೂಕತೆಯಿಂದ ಈ ಕೆಲಸಗಳನ್ನು ಮಾಡಬೇಕಾಗಿದೆ. ಅವನು ಅಥವಾ ಅವಳು ಒಂದು ತಪ್ಪನ್ನೂ ಮಾಡಸಾಧ್ಯವಿಲ್ಲ; ಅದರಲ್ಲೂ ವಿಶೇಷವಾಗಿ ತೊಂದರೆಗೊಳಗಾದವರು ನ್ಯಾಯಾಲಯದಲ್ಲಿ ವ್ಯಾಜ್ಯಹೂಡುವುದು ಸರ್ವಸಾಮಾನ್ಯವಾಗಿರುವಂತಹ ದೇಶಗಳಲ್ಲಂತೂ ಖಂಡಿತವಾಗಿಯೂ ಸತ್ಯವಾಗಿದೆ. ಆದರೂ, ಕೆಲವೊಮ್ಮೆ ನರ್ಸ್‌ಗಳು ಕಷ್ಟಕರ ಸನ್ನಿವೇಶಕ್ಕೆ ಒಳಗಾಗುತ್ತಾರೆ. ಉದಾಹರಣೆಗೆ, ಒಬ್ಬ ವೈದ್ಯನು ರೋಗಿಯೊಬ್ಬನಿಗೆ ತಪ್ಪಾದ ಔಷಧಿಯನ್ನು ಬರೆದುಕೊಟ್ಟಿದ್ದಾನೆ ಅಥವಾ ರೋಗಿಯ ಜೀವವು ಅಪಾಯದಲ್ಲಿ ಬೀಳಸಾಧ್ಯವಿರುವಂತಹ ಆರ್ಡರ್‌ಗಳನ್ನು ಕೊಟ್ಟಿದ್ದಾನೆ ಎಂದು ಒಬ್ಬ ನರ್ಸ್‌ಗೆ ಅನಿಸುತ್ತದೆ ಎಂದಿಟ್ಟುಕೊಳ್ಳಿ. ಅಂತಹ ಸಂದರ್ಭದಲ್ಲಿ ನರ್ಸ್‌ಗಳು ಏನು ಮಾಡಸಾಧ್ಯವಿದೆ? ವೈದ್ಯರಿಗೇ ಸವಾಲು ಹಾಕಸಾಧ್ಯವಿದೆಯೋ? ವೈದ್ಯರನ್ನು ಎದುರಿಸಲು ಧೈರ್ಯ, ಚಾತುರ್ಯ, ಹಾಗೂ ವ್ಯವಹಾರ ಕೌಶಲದ ಅಗತ್ಯವಿದೆ. ಅಷ್ಟುಮಾತ್ರವಲ್ಲ, ಇದು ತುಂಬ ಅಪಾಯಕರವಾದದ್ದೂ ಆಗಿದೆ. ವೈದ್ಯರು ಯಾರನ್ನು ತಮ್ಮ ಕೈಕೆಳಗಿನವರೆಂದು ನೆನಸುತ್ತಾರೋ ಅವರು ಕೊಡುವ ಸಲಹೆಗಳನ್ನು ಸ್ವೀಕರಿಸಲು ಕೆಲವು ವೈದ್ಯರು ಸಿದ್ಧರಿರುವುದಿಲ್ಲ ಎಂಬುದು ದುಃಖಕರ ಸಂಗತಿಯಾಗಿದೆ.

ಈ ವಿಷಯದಲ್ಲಿ ಕೆಲವು ನರ್ಸ್‌ಗಳು ಏನೆಂದು ಹೇಳಿದ್ದಾರೆ? 34 ವರ್ಷಗಳಿಂದ ರೆಜಿಸ್ಟರ್ಡ್‌ ನರ್ಸ್‌ ಆಗಿರುವ ಅಮೆರಿಕದ ವಿಸ್‌ಕಾನ್‌ಸಿನ್‌ನ ಬಾರ್‌ಬ್ರ ರೈನಿಕ ಎಂಬುವವರು ಎಚ್ಚರ! ಪತ್ರಿಕೆಗೆ ಹೀಗೆ ಹೇಳಿದರು: “ಒಬ್ಬ ನರ್ಸ್‌ಗೆ ತುಂಬ ಧೈರ್ಯವಿರಬೇಕು. ಎಲ್ಲಕ್ಕಿಂತಲೂ ಮೊದಲಾಗಿ, ಅವಳು ರೋಗಿಗಳಿಗೆ ಕೊಡುವ ಔಷಧಗಳಿಗೆ ಅಥವಾ ಅವಳು ನೀಡುವ ಚಿಕಿತ್ಸೆಗಳಿಗೆ ಮತ್ತು ಅವುಗಳಿಂದ ಉಂಟಾಗುವ ಯಾವುದೇ ಪರಿಣಾಮಗಳಿಗೆ ಕಾನೂನುಸಮ್ಮತವಾಗಿ ಜವಾಬ್ದಾರಳಾಗಿದ್ದಾಳೆ. ಒಂದುವೇಳೆ ಒಬ್ಬ ನರ್ಸ್‌ ಕಲಿತಿರದಂತಹ ಕೆಲಸವನ್ನು ಮಾಡುವಂತೆ ವೈದ್ಯರು ಅವಳಿಗೆ ಹೇಳುವಲ್ಲಿ ಅಥವಾ ವೈದ್ಯರು ಕೊಟ್ಟಿರುವ ಆರ್ಡರ್‌ ತಪ್ಪೆಂದು ಅವಳಿಗೆ ಅನಿಸುವಲ್ಲಿ, ವೈದ್ಯರ ಸಲಹೆಯನ್ನು ಕಾರ್ಯರೂಪಕ್ಕೆ ತರಲು ಅವಳು ನಿರಾಕರಿಸಶಕ್ತಳಾಗಿರಬೇಕು. ಫ್ಲಾರೆನ್ಸ್‌ ನೈಟಿಂಗೇಲಳ ದಿನಗಳಲ್ಲಿ ಅಥವಾ 50 ವರ್ಷಗಳ ಹಿಂದೆ ನರ್ಸಿಂಗ್‌ ವೃತ್ತಿ ಯಾವ ರೀತಿ ಇತ್ತೋ ಅದೇ ರೀತಿ ಈಗ ಇಲ್ಲ. ಯಾವಾಗ ವೈದ್ಯರ ಸಲಹೆಯನ್ನು ನಿರಾಕರಿಸಬೇಕು ಮತ್ತು ಒಂದುವೇಳೆ ಮಧ್ಯರಾತ್ರಿಯಲ್ಲಿ ಅಗತ್ಯಬೀಳುವುದಾದರೂ, ರೋಗಿಯನ್ನು ನೋಡುವಂತೆ ಯಾವಾಗ ವೈದ್ಯರನ್ನು ಒತ್ತಾಯಿಸಬೇಕು ಎಂಬುದನ್ನು ಈಗ ನರ್ಸ್‌ಗಳು ಗ್ರಹಿಸುವ ಅಗತ್ಯವಿದೆ. ಮತ್ತು ಒಂದುವೇಳೆ ನಾವು ತಪ್ಪುಮಾಡುವಲ್ಲಿ, ವೈದ್ಯರಿಂದ ಬರುವಂತಹ ಯಾವುದೇ ರೀತಿಯ ಕುಚೋದ್ಯವನ್ನು ಸಹಿಸಲು ಸಹ ಸಿದ್ಧರಿರಬೇಕು.”

ನರ್ಸ್‌ಗಳು ಎದುರಿಸುವಂತಹ ಇನ್ನೊಂದು ಸಮಸ್ಯೆಯು, ಕೆಲಸದ ಸ್ಥಳದಲ್ಲಿ ಎದುರಿಸಬೇಕಾಗಿರುವ ಹಿಂಸಾಚಾರವೇ ಆಗಿದೆ. ದಕ್ಷಿಣ ಆಫ್ರಿಕದಿಂದ ಬಂದ ಒಂದು ವರದಿಯು ಹೇಳುವುದೇನೆಂದರೆ, ನರ್ಸಿಂಗ್‌ ವೃತ್ತಿಯ ಸಿಬ್ಬಂದಿಗಳು “ಕೆಲಸದ ಸ್ಥಳದಲ್ಲಿ ನಿಂದೆ ಹಾಗೂ ಹಿಂಸಾಚಾರಕ್ಕೆ ಒಳಗಾಗುವ ಅಪಾಯ ಅತ್ಯಧಿಕವೆಂದು ತಿಳಿದುಬಂದಿದೆ. ನಿಜವಾಗಿಯೂ ಹೇಳುವುದಾದರೆ, ಸೆರೆಮನೆಯ ಗಾರ್ಡ್‌ಗಳು ಅಥವಾ ಪೊಲೀಸ್‌ ಆಫೀಸರುಗಳಿಗಿಂತಲೂ ಹೆಚ್ಚಾಗಿ ನರ್ಸ್‌ಗಳು ಕೆಲಸದ ಸ್ಥಳದಲ್ಲಿ ಆಕ್ರಮಣಕ್ಕೊಳಗಾಗುತ್ತಾರೆ. ಮತ್ತು ಸುಮಾರು 72% ನರ್ಸ್‌ಗಳಿಗೆ ಈ ಹಲ್ಲೆಯಿಂದ ಸುರಕ್ಷಿತ ಅನಿಸಿಕೆಯೇ ಇಲ್ಲ.” ಬ್ರಿಟನ್‌ನಲ್ಲಿಯೂ ಇದೇ ರೀತಿಯ ಸನ್ನಿವೇಶವು ವರದಿಸಲ್ಪಟ್ಟಿದೆ. ಅಲ್ಲಿ ಇತ್ತೀಚಿಗೆ ನಡೆಸಲ್ಪಟ್ಟ ಒಂದು ಸಮೀಕ್ಷೆಯಲ್ಲಿ, ಕಳೆದ ವರ್ಷ ಶಾರೀರಿಕ ಹಿಂಸೆಗೊಳಗಾಗಿದ್ದಂತಹ ಒಬ್ಬ ನರ್ಸ್‌ನ ಕುರಿತು, ಸುಮಾರು 97 ಪ್ರತಿಶತ ನರ್ಸ್‌ಗಳಿಗೆ ಗೊತ್ತಿತ್ತು. ಈ ಹಿಂಸಾಚಾರಕ್ಕೆ ಕಾರಣವೇನು? ಕೆಲವೊಮ್ಮೆ, ಅಮಲೌಷಧ ಚಟವಿರುವ ಮತ್ತು ಕುಡಿತದ ದುರಭ್ಯಾಸವಿರುವ ಇಲ್ಲವೆ ಒತ್ತಡಕ್ಕೆ ಒಳಗಾಗಿರುವ ಅಥವಾ ದುಃಖಪೀಡಿತರಾಗಿರುವಂತಹ ರೋಗಿಗಳಿಂದ ಈ ರೀತಿಯ ಸಮಸ್ಯೆಗಳು ಉಂಟುಮಾಡಲ್ಪಡುತ್ತವೆ.

ಈ ಎಲ್ಲ ಒತ್ತಡದಿಂದ ಉಂಟಾಗುವ ಶಾರೀರಿಕ ಹಾಗೂ ಭಾವನಾತ್ಮಕ ಆಯಾಸದೊಂದಿಗೂ ನರ್ಸ್‌ಗಳು ಹೆಣಗಾಡಬೇಕಾಗಿದೆ. ಇದರ ಜೊತೆಗೆ, ಕಡಿಮೆ ಸಿಬ್ಬಂದಿಗಳಿರುವುದು ಸಹ ಇನ್ನೊಂದು ಸಮಸ್ಯೆಯಾಗಿದೆ. ತನ್ನ ಮನಸ್ಸಾಕ್ಷಿಗನುಸಾರ ನಡೆಯುವ ಒಬ್ಬ ನರ್ಸ್‌ ವಿಪರೀತ ಕೆಲಸದ ಕಾರಣದಿಂದ ಒಬ್ಬ ರೋಗಿಗೆ ಸಾಕಷ್ಟು ಆರೈಕೆಯನ್ನು ನೀಡಲು ತಪ್ಪಿಹೋಗುವಲ್ಲಿ, ಇದು ಅವಳ ಮೇಲೆ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ. ಈ ಸನ್ನಿವೇಶವನ್ನು ನಿಭಾಯಿಸಲಿಕ್ಕಾಗಿ ಅವಳು ವಿರಾಮವನ್ನು ತೆಗೆದುಕೊಳ್ಳದೆ ಓವರ್‌ಟೈಮ್‌ ಮಾಡುವಲ್ಲಿ, ಪರಿಸ್ಥಿತಿಯು ಇನ್ನೂ ಹದಗೆಡಬಲ್ಲದು. ಇದರಿಂದಾಗಿ ಇನ್ನೂ ಹೆಚ್ಚು ಆಶಾಭಂಗವಾಗುತ್ತದೆ.

ಲೋಕವ್ಯಾಪಕವಾಗಿರುವ ಅನೇಕ ಆಸ್ಪತ್ರೆಗಳಲ್ಲಿ ಸಾಕಷ್ಟು ವೈದ್ಯಕೀಯ ಸಿಬ್ಬಂದಿಗಳಿಲ್ಲ. ಮ್ಯಾಡ್ರಿಡ್‌ನ ಮುಂಡೋ ಸಾನೀಟಾರ್ಯೋ ಪತ್ರಿಕೆಯಲ್ಲಿನ ಒಂದು ವರದಿಯು ಹೀಗೆ ಹೇಳುತ್ತದೆ: “ನಮ್ಮ ಆಸ್ಪತ್ರೆಗಳಲ್ಲಿ ಸಾಕಷ್ಟು ನರ್ಸ್‌ಗಳಿಲ್ಲ. ಯಾರಿಗೆ ಆರೋಗ್ಯಾರೈಕೆಯು ಬೇಕಾಗಿದೆಯೋ ಅವರು ನರ್ಸ್‌ಗಳ ಅಗತ್ಯವನ್ನು ಮನಗಾಣುತ್ತಾರೆ.” ಇಷ್ಟೊಂದು ಕಡಿಮೆ ನರ್ಸ್‌ಗಳಿರಲು ಕಾರಣವೇನು? ಹಣವನ್ನು ಉಳಿತಾಯಮಾಡುವುದಕ್ಕಾಗಿಯೇ. ಮ್ಯಾಡ್ರಿಡ್‌ನ ಆಸ್ಪತ್ರೆಗಳಲ್ಲಿ ಸುಮಾರು 13,000 ವೃತ್ತಿಪರ ನರ್ಸ್‌ಗಳ ಕೊರತೆಯಿದೆ ಎಂದು ಅದೇ ವರದಿಯು ತಿಳಿಸಿತು!

ನರ್ಸ್‌ಗಳ ಮೇಲೆ ಒತ್ತಡವನ್ನು ಹೇರಿರುವ ಇನ್ನೊಂದು ಕಾರಣವು ಯಾವುದೆಂದರೆ, ಅವರು ದೀರ್ಘ ಸಮಯದ ವರೆಗೆ ಕೆಲಸಮಾಡಬೇಕಾಗುತ್ತದೆ ಮತ್ತು ಅವರಿಗೆ ತುಂಬ ಕಡಿಮೆ ಸಂಬಳ ಸಿಗುತ್ತದೆ. ದ ಸ್ಕಾಟ್ಸ್‌ಮನ್‌ ಎಂಬ ವಾರ್ತಾಪತ್ರಿಕೆಯು ಹೇಳಿದ್ದು: “ಯೂನಿಸನ್‌ ಎಂಬ ಸಾರ್ವಜನಿಕ ಸೇವಾ ಸಂಘದ ವರದಿಗನುಸಾರ, ಬ್ರಿಟನ್‌ನಲ್ಲಿರುವ ಐವರು ನರ್ಸ್‌ಗಳಲ್ಲಿ ಒಬ್ಬರಿಗಿಂತಲೂ ಹೆಚ್ಚು ಮಂದಿ, ಹಾಗೂ ನರ್ಸಿಂಗ್‌ ಅಸಿಸ್ಟೆಂಟ್‌ಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು ಮಂದಿ, ತಮ್ಮ ಜೀವನೋಪಾಯಕ್ಕಾಗಿ ನರ್ಸಿಂಗ್‌ ವೃತ್ತಿಯೊಂದಿಗೆ ಇನ್ನೊಂದು ಉದ್ಯೋಗವನ್ನೂ ಮಾಡುತ್ತಾರೆ.” ತಮಗೆ ಕೊಡಲ್ಪಡುವ ಸಂಬಳ ತುಂಬ ಕಡಿಮೆ ಎಂದು ಸುಮಾರು ನಾಲ್ಕು ನರ್ಸ್‌ಗಳಲ್ಲಿ 3 ನರ್ಸ್‌ಗಳು ಒಪ್ಪಿಕೊಳ್ಳುತ್ತಾರೆ. ಇದರ ಫಲಿತಾಂಶವಾಗಿ, ಬಹುತೇಕ ನರ್ಸ್‌ಗಳು ತಮ್ಮ ವೃತ್ತಿಯನ್ನು ಬಿಟ್ಟುಬಿಡುವ ಮನಸ್ಸುಮಾಡಿದ್ದಾರೆ.

ನರ್ಸ್‌ಗಳಿಗೆ ಮಾನಸಿಕ ಒತ್ತಡವನ್ನು ಉಂಟುಮಾಡುವಂತಹ ಅನೇಕ ಅಂಶಗಳಿವೆ. ಲೋಕದಾದ್ಯಂತ ಇರುವ ನರ್ಸ್‌ಗಳಿಂದ ಎಚ್ಚರ! ಪತ್ರಿಕೆಯ ಸುದ್ದಿಗಾರರು ಸಂಗ್ರಹಿಸಿದ ಹೇಳಿಕೆಗಳ ಆಧಾರದ ಮೇಲೆ ತಿಳಿಸುವುದಾದರೆ, ರೋಗಿಗಳ ಸಾವು ನರ್ಸ್‌ಗಳ ಮೇಲೆ ಖಿನ್ನತೆಯ ಪರಿಣಾಮವನ್ನು ಬೀರಬಲ್ಲದು. ಮಾಗ್ಡ ಸ್ವಾಂಗ್‌ ಎಂಬ ಮಹಿಳೆಯು ಈಜಿಪ್ಟಿನ ಹಿನ್ನೆಲೆಯಿಂದ ಬಂದವಳಾಗಿದ್ದು, ನ್ಯೂ ಯಾರ್ಕಿನ ಬ್ರೂಕ್ಲಿನ್‌ನಲ್ಲಿ ಕೆಲಸಮಾಡುತ್ತಿದ್ದಾಳೆ. ನರ್ಸಿಂಗ್‌ ವೃತ್ತಿಯಲ್ಲಿ ಯಾವುದು ತುಂಬ ಕಷ್ಟಕರವಾದ ಸಂಗತಿಯಾಗಿದೆ ಎಂದು ಅವಳನ್ನು ಕೇಳಿದಾಗ, ಅವಳು ಹೀಗೆ ಉತ್ತರಿಸಿದಳು: “ನಾನು ಆರೈಕೆಮಾಡುತ್ತಿದ್ದಂತಹ ರೋಗಿಗಳಲ್ಲಿ ಕಡಿಮೆಪಕ್ಷ 30 ರೋಗಿಗಳು ಹತ್ತು ವರ್ಷಗಳ ಕಾಲಾವಧಿಯಲ್ಲಿ ಸಾಯುವುದನ್ನು ಕಣ್ಣಾರೆ ನೋಡುವುದೇ. ಇದು ಭಾವನಾತ್ಮಕವಾಗಿ ನಮ್ಮನ್ನು ತುಂಬ ದುರ್ಬಲಗೊಳಿಸುತ್ತದೆ.” ಆದುದರಿಂದ, ಒಂದು ಮೂಲವು ಹೀಗೆ ಹೇಳುವುದರಲ್ಲಿ ಆಶ್ಚರ್ಯವೇನೂ ಇಲ್ಲ: “ಸಾಯುವಂತಹ ರೋಗಿಗಳ ಆರೈಕೆಮಾಡಲಿಕ್ಕಾಗಿ ಒಬ್ಬನು ತನ್ನ ಪ್ರಯತ್ನಗಳು ಹಾಗೂ ಭಾವನೆಗಳನ್ನು ಸತತವಾಗಿ ಮುಡಿಪಾಗಿಡುವುದು, ಅವನ ಭಾವನಾತ್ಮಕ ಹಾಗೂ ಶಾರೀರಿಕ ಸ್ಥಿತಿಗತಿಯ ಮೇಲೆ ಹಾನಿಕರ ಪರಿಣಾಮವನ್ನು ಬೀರಸಾಧ್ಯವಿದೆ.”

ನರ್ಸ್‌ಗಳ ಭವಿಷ್ಯತ್ತು

ತಾಂತ್ರಿಕತೆಯಲ್ಲಾಗುತ್ತಿರುವ ಬೆಳವಣಿಗೆ ಹಾಗೂ ಪ್ರಭಾವವು, ನರ್ಸಿಂಗ್‌ ವೃತ್ತಿಯ ಒತ್ತಡಗಳನ್ನು ಇನ್ನೂ ಅಧಿಕಗೊಳಿಸುತ್ತಿದೆ. ಆದುದರಿಂದ, ತಾಂತ್ರಿಕತೆಯನ್ನು ಮಾನವೀಯತೆಯೊಂದಿಗೆ ಸರಿಹೊಂದಿಸುವುದೇ ಈಗ ಒಂದು ಸವಾಲಾಗಿದೆ. ನಾವು ಯಂತ್ರಗಳ ಸಹಾಯದಿಂದ ಕೆಲಸಮಾಡುತ್ತಿರುವುದಾದರೂ, ಮಾನವಸಹಜ ಭಾವನೆಗಳಿಂದ ರೋಗಿಗಳೊಂದಿಗೆ ವ್ಯವಹರಿಸಬೇಕಾಗಿದೆ. ಏನೇ ಆಗಲಿ, ಯಾವುದೇ ಯಂತ್ರವು ಒಬ್ಬ ನರ್ಸ್‌ನಷ್ಟು ಆರೈಕೆ ಹಾಗೂ ಸಹಾನುಭೂತಿಯನ್ನು ಖಂಡಿತ ತೋರಿಸಲಾರದು.

ಒಂದು ಪತ್ರಿಕೆಯು ಹೇಳುವುದು: “ನರ್ಸಿಂಗ್‌ ಎಂಬುದು ನಿರಂತರ ಇರುವಂತಹ ಒಂದು ವೃತ್ತಿಯಾಗಿದೆ. . . . ಮಾನವೀಯತೆಯು ಎಷ್ಟರ ತನಕ ಅಸ್ತಿತ್ವದಲ್ಲಿರುತ್ತದೋ ಅಷ್ಟರ ತನಕ, ಆರೈಕೆ, ಸಹಾನುಭೂತಿ, ಹಾಗೂ ತಿಳುವಳಿಕೆಯ ಅಗತ್ಯವು ಸಹ ಯಾವಾಗಲೂ ಇರುವುದು.” ಮತ್ತು ನರ್ಸಿಂಗ್‌ ವೃತ್ತಿಯು ಆ ಅಗತ್ಯವನ್ನು ಪೂರೈಸುತ್ತದೆ ಎಂಬುದು ನಿಜ. ಆದರೆ ಆರೋಗ್ಯಾರೈಕೆಯ ವಿಷಯದಲ್ಲಿ ಅತ್ಯುತ್ತಮ ಹೊರನೋಟವನ್ನು ಇಟ್ಟುಕೊಳ್ಳಲು ಇನ್ನೊಂದು ಮುಖ್ಯ ಕಾರಣವಿದೆ. ಅದೇನೆಂದರೆ, ಯಾರೊಬ್ಬರೂ “ತಾನು ಅಸ್ವಸ್ಥನು” ಎಂದು ಹೇಳದಿರುವಂತಹ ಒಂದು ಸಮಯವು ಬರುವುದು ಎಂಬುದನ್ನು ಬೈಬಲು ರುಜುಪಡಿಸುತ್ತದೆ. (ಯೆಶಾಯ 33:24) ದೇವರು ವಾಗ್ದಾನಿಸಿರುವಂತಹ ಹೊಸ ಲೋಕದಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ಆಸ್ಪತ್ರೆಗಳ ಆವಶ್ಯಕತೆಯಿರುವುದಿಲ್ಲ.​—⁠ಯೆಶಾಯ 65:17; 2 ಪೇತ್ರ 3:⁠13.

ಅಷ್ಟುಮಾತ್ರವಲ್ಲ, ಬೈಬಲು ಇನ್ನೊಂದು ವಾಗ್ದಾನವನ್ನು ಸಹ ಮಾಡುತ್ತದೆ: “ದೇವರು . . . ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:​3, 4) ಆದರೂ, ಅಷ್ಟರ ತನಕ ನಾವು ಲೋಕದಾದ್ಯಂತ ಇರುವ ಲಕ್ಷಾಂತರ ನರ್ಸ್‌ಗಳು ನೀಡುವ ಎಲ್ಲ ರೀತಿಯ ಆರೈಕೆಗೆ ಹಾಗೂ ಅವರು ಮಾಡುವ ಎಲ್ಲ ತ್ಯಾಗಗಳಿಗೆ ಕೃತಜ್ಞರಾಗಿರಬೇಕು. ಏಕೆಂದರೆ ನರ್ಸ್‌ಗಳು ಇಲ್ಲದಿರುತ್ತಿದ್ದರೆ ನಾವು ಆಸ್ಪತ್ರೆಗಳಲ್ಲಿ ಉಳಿಯುವುದು ಅಸಾಧ್ಯವಲ್ಲದಿದ್ದರೂ, ಖಂಡಿತವಾಗಿಯೂ ಅಹಿತಕರವಾಗಿರುತ್ತಿತ್ತು. ಆದುದರಿಂದ, “ನರ್ಸ್‌ಗಳು ಇಲ್ಲದಿರುತ್ತಿದ್ದರೆ ನಾವೇನು ಮಾಡುತ್ತಿದ್ದೆವು?” ಎಂಬ ಪ್ರಶ್ನೆಯು ಅದೆಷ್ಟು ಸೂಕ್ತವಾದದ್ದಾಗಿದೆ!

(g00 11/8)

[ಪುಟ 6ರಲ್ಲಿರುವ ಚೌಕ/ಚಿತ್ರ]

ಫ್ಲಾರೆನ್ಸ್‌ ನೈಟಿಂಗೇಲ್‌​—⁠ಆಧುನಿಕ ನರ್ಸಿಂಗ್‌ನ ಮೂಲಕರ್ತೆ

ಇಸವಿ 1820 ರಲ್ಲಿ ಇಟಲಿಯ ಶ್ರೀಮಂತ ಬ್ರಿಟಿಷ್‌ ದಂಪತಿಗಳ ಮಗಳಾಗಿ ಜನಿಸಿದ ಫ್ಲಾರೆನ್ಸ್‌ ನೈಟಿಂಗೇಲ್‌ ತುಂಬ ಮುದ್ದಿನಿಂದ ಬೆಳೆಸಲ್ಪಟ್ಟಿದ್ದಳು. ಯುವತಿಯಾಗಿದ್ದ ಫ್ಲಾರೆನ್ಸ್‌ ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದಳು. ಮತ್ತು ಆರೋಗ್ಯ ಸಂಬಂಧಿತ ವಿಷಯಗಳ ಅಧ್ಯಯನ ಮಾಡಲು ಹಾಗೂ ಅದೇ ಸಮಯದಲ್ಲಿ ಬಡವರ ಆರೈಕೆಮಾಡಲು ಆರಂಭಿಸಿದಳು. ಫ್ಲಾರೆನ್ಸಳ ಈ ನಿರ್ಧಾರವನ್ನು ಹೆತ್ತವರು ತುಂಬ ವಿರೋಧಿಸಿದರು. ಆದರೂ, ಜರ್ಮನಿಯ ಕೈಸರ್ಸ್‌ವರ್ಟ್‌ನಲ್ಲಿರುವ ನರ್ಸ್‌ ಟ್ರೈನಿಂಗ್‌ ಶಾಲೆಯಲ್ಲಿ ತರಬೇತಿಯನ್ನು ಪಡೆದುಕೊಂಡಳು. ಸಮಯಾನಂತರ ಅವಳು ಪ್ಯಾರಿಸ್‌ನಲ್ಲೂ ನರ್ಸಿಂಗ್‌ ಬಗ್ಗೆ ಅಧ್ಯಯನ ಮಾಡಿದಳು. ಹೀಗೆ, ತನ್ನ 33 ರ ಪ್ರಾಯದಲ್ಲಿ ಫ್ಲಾರೆನ್ಸ್‌, ಲಂಡನ್‌ನ ಮಹಿಳಾ ಆಸ್ಪತ್ರೆಯಲ್ಲಿ ಮೇಲ್ವಿಚಾರಕಿಯಾಗಿ ಕೆಲಸಮಾಡತೊಡಗಿದಳು.

ಆದರೆ ಕ್ರಿಮಿಯದಲ್ಲಿದ್ದ ಗಾಯಾಳು ಸೈನಿಕರ ಆರೈಕೆಮಾಡಲು ಫ್ಲಾರೆನ್ಸ್‌ ಹೋಗಿದ್ದಾಗ, ಅನೇಕ ಪಂಥಾಹ್ವಾನಗಳನ್ನು ಎದುರಿಸಬೇಕಾಯಿತು. ಅಲ್ಲಿ, ತನ್ನ 38 ಮಂದಿ ನರ್ಸ್‌ಗಳೊಂದಿಗೆ ಅವಳು ಇಲಿಗಳು ತುಂಬಿಕೊಂಡಿದ್ದ ಒಂದು ಆಸ್ಪತ್ರೆಯನ್ನು ಸ್ಪಚ್ಛಗೊಳಿಸಬೇಕಾಯಿತು. ಈ ಕೆಲಸವನ್ನು ಮಾಡುವುದು ತುಂಬ ಕಷ್ಟಕರವಾಗಿತ್ತು. ಏಕೆಂದರೆ ಮೊದಲಾಗಿ ಅಲ್ಲಿ ಸಾಬೂನು ಇರಲಿಲ್ಲ. ವಾಷ್‌ಬೇಸಿನ್‌ಗಳು ಮತ್ತು ಟವೆಲ್‌ಗಳು ಇರಲಿಲ್ಲ. ಸಾಕಷ್ಟು ಮಂಚಗಳು, ಹಾಸಿಗೆಗಳು ಹಾಗೂ ಬ್ಯಾಂಡೇಜ್‌ಗಳೂ ಇರಲಿಲ್ಲ. ಫ್ಲಾರೆನ್ಸ್‌ ಹಾಗೂ ಅವಳ ಗುಂಪಿನವರು ಈ ಪಂಥಾಹ್ವಾನವನ್ನು ಎದುರಿಸಲು ಸಿದ್ಧರಾದರು. ಮತ್ತು ಯುದ್ಧವು ಕೊನೆಗೊಳ್ಳುವಷ್ಟರೊಳಗೆ, ನರ್ಸಿಂಗ್‌ನಲ್ಲಿ ಹಾಗೂ ಆಸ್ಪತ್ರೆಯ ಆಡಳಿತದಲ್ಲಿ ಲೋಕವ್ಯಾಪಕವಾಗಿ ಅವಳು ಸುಧಾರಣೆಗಳನ್ನು ಮಾಡಿದಳು. 1860 ರಲ್ಲಿ, ಲಂಡನ್‌ನಲ್ಲಿರುವ ಸೆಂಟ್‌ ಥಾಮಸ್‌ ಆಸ್ಪತ್ರೆಯಲ್ಲಿ ನರ್ಸ್‌ಗಳಿಗಾಗಿ ನೈಟಿಂಗೇಲ್‌ ಟ್ರೈನಿಂಗ್‌ ಸ್ಕೂಲನ್ನು ಸ್ಥಾಪಿಸಿದಳು. ಯಾವುದೇ ಧಾರ್ಮಿಕ ಸಂಸ್ಥೆಗೆ ಒಳಪಡದಿರುವಂತಹ ಪ್ರಪ್ರಥಮ ನರ್ಸಿಂಗ್‌ ಶಾಲೆ ಇದಾಗಿತ್ತು. ಅನೇಕ ವರ್ಷಗಳ ವರೆಗೆ ಫ್ಲಾರೆನ್ಸ್‌ ಅಸ್ವಸ್ಥಳಾಗಿ ಹಾಸಿಗೆ ಹಿಡಿದಿದ್ದಳು ಮತ್ತು 1910 ರಲ್ಲಿ ಮರಣಪಟ್ಟಳು. ಆದರೂ, ಆರೋಗ್ಯಾರೈಕೆಯ ಮಟ್ಟಗಳನ್ನು ಉತ್ತಮಗೊಳಿಸುವ ಪ್ರಯತ್ನದಿಂದ, ಅಸ್ವಸ್ಥಳಾಗಿದ್ದಾಗಲೇ ಅವಳು ಅನೇಕ ಪುಸ್ತಕಗಳು ಹಾಗೂ ಕರಪತ್ರಗಳನ್ನು ಬರೆಯುವುದನ್ನು ಮುಂದುವರಿಸಿದಳು.

ಫ್ಲಾರೆನ್ಸ್‌ ನೈಟಿಂಗೇಲಳು ಪರೋಪಕಾರದ ಮೂರ್ತಿಯಾಗಿದ್ದಳು ಎಂದು ಕೆಲವರು ನೆನಸುವುದಾದರೂ, ಇನ್ನಿತರರು ಅವಳ ವಿಷಯದಲ್ಲಿ ಆಕ್ಷೇಪವೆತ್ತುತ್ತಾರೆ. ಇತರರು ಸಹ ನರ್ಸಿಂಗ್‌ ವೃತ್ತಿಯಲ್ಲಿ ಬಹಳಷ್ಟು ನೆರವನ್ನು ನೀಡಿರುವುದರಿಂದ, ಫ್ಲಾರೆನ್ಸಳಷ್ಟೇ ಕೀರ್ತಿಯು ಅವರಿಗೂ ಸಲ್ಲಬೇಕು ಎಂದು ವಾದಿಸುತ್ತಾರೆ. ಇದಲ್ಲದೆ, ಅವಳ ಸತ್ಕೀರ್ತಿಯು ತೀವ್ರ ವಾಗ್ವಾದಕ್ಕೆ ಒಳಗಾಗಿದೆ. ನರ್ಸಿಂಗ್‌ ವೃತ್ತಿಯ ಇತಿಹಾಸ (ಇಂಗ್ಲಿಷ್‌) ಎಂಬ ಪುಸ್ತಕಕ್ಕನುಸಾರ, ಅವಳು “ವಿಚಿತ್ರ ಸ್ವಭಾವದವಳೂ, ಮನಬಂದಂತೆ ವರ್ತಿಸುವವಳೂ, ಹಠವಾದಿಯೂ, ಮುಂಗೋಪಿಯೂ, ದಬ್ಬಾಳಿಕೆ ನಡೆಸುವವಳೂ ಆಗಿದ್ದಳು,” ಎಂದು ಕೆಲವರು ವಾದಿಸುತ್ತಾರೆ. ಅದೇ ಸಮಯದಲ್ಲಿ, ಇನ್ನಿತರರು ಅವಳ “ಪ್ರತಿಭೆ, ಅವಳ ಸ್ವಭಾವ, ಅವಳ ಅದ್ಭುತ ಚೈತನ್ಯ, ಹಾಗೂ ಅವಳ ವ್ಯಕ್ತಿತ್ವದಲ್ಲಿದ್ದ ಅಸಂಗತ ಗುಣಗಳಿಂದ” ಮನಸೂರೆಗೊಂಡಿದ್ದಾರೆ. ಅವಳ ನಿಜವಾದ ಗುಣವು ಏನೇ ಆಗಿರಲಿ, ಒಂದು ಸಂಗತಿಯಂತೂ ಸತ್ಯ: ಅದೇನೆಂದರೆ, ನರ್ಸಿಂಗ್‌ನಲ್ಲಿ ಹಾಗೂ ಆಸ್ಪತ್ರೆಯ ಆಡಳಿತದಲ್ಲಿ ಅವಳು ಬೆಳಕಿಗೆ ತಂದ ಪ್ರಾಯೋಗಿಕ ವಿಧಾನಗಳು ಅನೇಕ ದೇಶಗಳಲ್ಲಿ ಪ್ರಖ್ಯಾತವಾದವು. ಆದುದರಿಂದ, ಇಂದಿನ ನರ್ಸಿಂಗ್‌ ವೃತ್ತಿಯ ಮೂಲಕರ್ತೆ ಅವಳೇ ಎಂದು ಹೇಳಸಾಧ್ಯವಿದೆ.

[ಕೃಪೆ]

ನರ್ಸ್‌ಗಳಿಗಾಗಿ ಎಲ್ಲಿ ನೈಟಿಂಗೇಲ್‌ ಟ್ರೈನಿಂಗ್‌ ಸ್ಕೂಲ್‌ ಸ್ಥಾಪಿಸಲ್ಪಟ್ಟಿತೋ ಆ ಸೆಂಟ್‌ ಥಾಮಸ್‌ ಆಸ್ಪತ್ರೆ

Courtesy National Library of Medicine

[ಪುಟ 8ರಲ್ಲಿರುವ ಚೌಕ/ಚಿತ್ರ]

ಒಬ್ಬ ನರ್ಸ್‌ನ ಅರ್ಹತೆಗಳು

ನರ್ಸ್‌: “ನರ್ಸಿಂಗ್‌ ವೃತ್ತಿಯಲ್ಲಿ ವೈಜ್ಞಾನಿಕ ಆಧಾರದ ಮೇಲೆ ವಿಶೇಷ ತರಬೇತಿಯನ್ನು ಪಡೆದುಕೊಂಡಿದ್ದು, ಅಗತ್ಯವಿರುವ ಶಿಕ್ಷಣವನ್ನು ಮುಗಿಸಿ, ವೈದ್ಯಕೀಯ ಅರ್ಹತೆಯನ್ನು ಪಡೆದಿರುವ ವ್ಯಕ್ತಿ.”

ರೆಜಿಸ್ಟರ್ಡ್‌ ನರ್ಸ್‌: “ಪದವಿಯನ್ನು ಪಡೆದುಕೊಂಡಿರುವ ಒಬ್ಬ ನರ್ಸ್‌ ಆಗಿದ್ದು, ಸ್ಟೇಟ್‌ ಬೋರ್ಡ್‌ ಆಫ್‌ ನರ್ಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ; ಇವರು ನರ್ಸ್‌ ವೃತ್ತಿಯನ್ನು ಆರಂಭಿಸಲು ಕಾನೂನುಬದ್ಧ ಅಂಗೀಕಾರವನ್ನು [ರೆಜಿಸ್ಟರ್ಡ್‌] ಪಡೆದಿರುವ . . . ಮತ್ತು ರೆಜಿಸ್ಟರ್ಡ್‌ ನರ್ಸ್‌ (R.N.) ಎಂಬ ಪದವಿಯನ್ನು ಕಾನೂನುಬದ್ಧವಾಗಿ ಉಪಯೋಗಿಸಲು ಅರ್ಹವಾಗಿರುವ ವ್ಯಕ್ತಿ.”

ಕ್ಲಿನಿಕಲ್‌ ನರ್ಸ್‌ ಸ್ಪೆಷಲಿಸ್ಟ್‌: “ಒಬ್ಬ ರೆಜಿಸ್ಟರ್ಡ್‌ ನರ್ಸ್‌. ಆದರೆ ನರ್ಸಿಂಗ್‌ ವೃತ್ತಿಯ ವಿಶೇಷ ಕ್ಷೇತ್ರವೊಂದರಲ್ಲಿ ಉತ್ತಮ ಮಟ್ಟದ ಜ್ಞಾನ, ಕೌಶಲ, ಹಾಗೂ ಅರ್ಹತೆ ಪಡೆದಿರುವಂತಹ ಒಬ್ಬ ವ್ಯಕ್ತಿ.”

ನರ್ಸ್‌-ಎಎನ್‌ಎಮ್‌: “ನರ್ಸಿಂಗ್‌ ಹಾಗೂ ಎಎನ್‌ಎಮ್‌ ಎಂಬ ಎರಡೂ ಕ್ಷೇತ್ರಗಳಲ್ಲಿ ಶಿಕ್ಷಣವನ್ನು ಪಡೆದಿರುವ ಒಬ್ಬ ವ್ಯಕ್ತಿ.”

ಪ್ರ್ಯಾಕ್ಟಿಕಲ್‌ ನರ್ಸ್‌: “ಒಬ್ಬ ನರ್ಸ್‌ನ ಕೆಲಸಮಾಡುವುದರಲ್ಲಿ ಪ್ರಾಯೋಗಿಕ ಅನುಭವವಿರುವುದಾದರೂ, ಯಾವುದೇ ರೀತಿಯ ನರ್ಸಿಂಗ್‌ ಶಾಲೆಯಿಂದ ಪದವಿಯನ್ನು ಪಡೆದುಕೊಂಡಿರದಂಥ ಒಬ್ಬ ವ್ಯಕ್ತಿ.”

ಲೈಸನ್‌ಸ್ಡ್‌ ಪ್ರ್ಯಾಕ್ಟಿಕಲ್‌ ನರ್ಸ್‌: “ನರ್ಸಿಂಗ್‌ ವೃತ್ತಿಯಲ್ಲಿ ಪ್ರಾಯೋಗಿಕ ಶಿಕ್ಷಣವನ್ನು ಒದಗಿಸುವಂತಹ ಒಂದು ಶಾಲೆಯಲ್ಲಿ ಪದವಿಪಡೆದುಕೊಂಡಿದ್ದು, . . . ಲೈಸನ್‌ಸ್ಡ್‌ ಪ್ರ್ಯಾಕ್ಟಿಕಲ್‌ ನರ್ಸ್‌ ಆಗಿ ಅಥವಾ ವೃತ್ತಿಪರ ನರ್ಸ್‌ ಆಗಿ ಕೆಲಸಮಾಡಲು ಕಾನೂನುಬದ್ಧವಾಗಿ ಅರ್ಹತೆ ಪಡೆದಿರುವಂತಹ ಒಬ್ಬ ವ್ಯಕ್ತಿ.”

[ಕೃಪೆ]

ಅಮೆರಿಕದ ಡೋರ್ಲ್ಯಾಂಡ್ಸ್‌ ಇಲ್ಲಸ್ಟ್ರೇಟೆಡ್‌ ಮೆಡಿಕಲ್‌ ಡಿಕ್ಷ್‌ನೆರಿ ಎಂಬ ಪ್ರಕಾಶನದಿಂದ

UN/J. Isaac

[ಪುಟ 9ರಲ್ಲಿರುವ ಚೌಕ/ಚಿತ್ರಗಳು]

‘ಆರೋಗ್ಯಾರೈಕೆಯ ಬೆನ್ನೆಲುಬು’

ಇಸವಿ 1999ರ ಜೂನ್‌ ತಿಂಗಳಿನಲ್ಲಿ, ನರ್ಸ್‌ಗಳ ಅಂತಾರಾಷ್ಟ್ರೀಯ ಸಮ್ಮೇಳನವು ನಡೆಯಿತು. ಆಗ, ಲೋಕಾರೋಗ್ಯ ಸಂಸ್ಥೆಯ ಡೈರೆಕ್ಟರ್‌-ಜನರಲ್‌ರಾದ ಡಾ. ಗ್ರೋ ಹಾರ್ಲಮ್‌ ಬ್ರಂಟ್‌ಲಾನ್‌ ಎಂಬುವವರು ಹೇಳಿದ್ದು:

“ನರ್ಸ್‌ಗಳು ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರರಾಗಿದ್ದಾರೆ. ಮತ್ತು ನಮ್ಮ ಭೂಗ್ರಹವನ್ನು ಆರೋಗ್ಯಕರವಾಗಿ ಇಡುವ ವಿಷಯದಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. . . . ಅನೇಕ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳಲ್ಲಿರುವ ಅರ್ಹ ಸಿಬ್ಬಂದಿಗಳಲ್ಲಿ ಸುಮಾರು 80%ದಷ್ಟು ನರ್ಸ್‌ಗಳು ಹಾಗೂ ಎಎನ್‌ಎಮ್‌ಗಳಿದ್ದಾರೆ. ಆದುದರಿಂದ, 21ನೆಯ ಶತಮಾನದಲ್ಲಿ ಎಲ್ಲರ ಆರೋಗ್ಯ ಸಂಬಂಧಿತ ಆವಶ್ಯಕತೆಗಳಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ಮಾಡುವಂತೆ ಪ್ರಚೋದಿಸಲು ಸಾಕಾಗುವಷ್ಟು ಬಲ ನರ್ಸ್‌ಗಳಲ್ಲಿದೆ ಎಂಬುದನ್ನು ಈ ಸಂಖ್ಯೆಯು ವ್ಯಕ್ತಪಡಿಸುತ್ತದೆ. ಆರೋಗ್ಯ ಇಲಾಖೆಯಲ್ಲಿ ಅವರು ಮಾಡುವ ಸಹಾಯವು, ಆರೋಗ್ಯಾರೈಕೆಯ ಎಲ್ಲ ಕ್ಷೇತ್ರಗಳನ್ನೂ ಆವರಿಸುತ್ತದೆ ಎಂಬುದಂತೂ ನಿಜ . . . ನರ್ಸ್‌ಗಳು ಅಧಿಕಾಂಶ ಆರೋಗ್ಯಾರೈಕೆ ತಂಡಗಳ ಬೆನ್ನೆಲುಬಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.”

ಮೆಕ್ಸಿಕೊದ ಮಾಜಿ ಅಧ್ಯಕ್ಷರಾಗಿರುವ ಅರ್ನೆಸ್ಟೊ ಸೆಡೇಯೋ ಪೋನ್ಸಾ ಡೀ ಲೇಆನ್‌, ಒಂದು ಭಾಷಣದಲ್ಲಿ ಮೆಕ್ಸಿಕೊದ ನರ್ಸ್‌ಗಳನ್ನು ತುಂಬ ಹೊಗಳಿದರು. ಆ ಭಾಷಣದಲ್ಲಿ ಅವರು ಹೇಳಿದ್ದು: “ದಿನೇ ದಿನೇ ನೀವೆಲ್ಲರೂ . . . ಮೆಕ್ಸಿಕೊದ ಜನತೆಯ ಆರೋಗ್ಯವನ್ನು ಕಾಪಾಡುವುದಕ್ಕಾಗಿ ಮತ್ತು ಗುಣಪಡಿಸುವುದಕ್ಕಾಗಿ ನಿಮ್ಮ ಜ್ಞಾನ, ಒಗ್ಗಟ್ಟು, ಹಾಗೂ ಸೇವೆಯನ್ನು, ಮೀಸಲಾಗಿಡುತ್ತೀರಿ. ದಿನೇ ದಿನೇ ನೀವು ಅಗತ್ಯವಿರುವವರಿಗೆ ವೃತ್ತಿಪರ ಸಹಾಯವನ್ನು ಒದಗಿಸುತ್ತೀರಿ ಮಾತ್ರವಲ್ಲ, ಸ್ನೇಹಪೂರ್ಣ, ಸಮರ್ಪಿತ ಹಾಗೂ ಮಾನವೀಯತೆಯಿಂದ ಕೂಡಿದ ಸಾಂತ್ವನವನ್ನೂ ನೀಡುತ್ತೀರಿ. . . . ನಮ್ಮ ಆರೋಗ್ಯ ಸಂಸ್ಥೆಗಳಲ್ಲಿ ನಿಮ್ಮ ಸಂಖ್ಯೆಯೇ ಅತ್ಯಧಿಕವಾಗಿದೆ . . . ಬದುಕಿ ಉಳಿಯುವಂತಹ ಪ್ರತಿಯೊಬ್ಬ ವ್ಯಕ್ತಿಯಲ್ಲಿ, ಲಸಿಕೆಹಾಕಲ್ಪಡುವಂತಹ ಪ್ರತಿಯೊಂದು ಮಗುವಿನಲ್ಲಿ, ಹೊಸದಾಗಿ ಜನಿಸುವಂತಹ ಪ್ರತಿಯೊಂದು ಶಿಶುವಿನಲ್ಲಿ, ಆರೋಗ್ಯದ ಬಗ್ಗೆ ಕೊಡಲ್ಪಡುವಂತಹ ಪ್ರತಿಯೊಂದು ಭಾಷಣದಲ್ಲಿ, ಗುಣವಾಗುವಂತಹ ಪ್ರತಿಯೊಂದು ರೋಗದಲ್ಲಿ, ಆರೈಕೆ ಹಾಗೂ ಬೆಂಬಲವನ್ನು ಪಡೆದುಕೊಳ್ಳುವಂತಹ ಪ್ರತಿಯೊಬ್ಬ ರೋಗಿಯಲ್ಲಿ, ನಮ್ಮ ನರ್ಸಿಂಗ್‌ ಸಿಬ್ಬಂದಿಯ ಪರಿಶ್ರಮವು ಸುವ್ಯಕ್ತವಾಗುತ್ತದೆ.”

[ಕೃಪೆ]

UN/DPI Photo by Greg Kinch

UN/DPI Photo by Evan Schneider

[ಪುಟ 11ರಲ್ಲಿರುವ ಚೌಕ/ಚಿತ್ರ]

ಗಣ್ಯತೆಯ ಮನೋಭಾವವಿರುವ ಒಬ್ಬ ವೈದ್ಯ

ನ್ಯೂ ಯಾರ್ಕ್‌ ಪ್ರೆಸ್ಬಿಟೇರಿಯನ್‌ ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿರುವ ಡಾ. ಸಂದೀಪ್‌ ಜೋಹಾರ್‌ ಎಂಬುವವರು, ದಕ್ಷ ನರ್ಸ್‌ಗಳಿಗೆ ತಾನು ಋಣಿಯಾಗಿದ್ದೇನೆ ಎಂದು ಹೇಳಿದರು. ಸಾಯುತ್ತಿರುವ ಒಬ್ಬ ರೋಗಿಗೆ ಇನ್ನೂ ಹೆಚ್ಚು ಮಾರ್ಫಿನ್‌ ಅನ್ನು ಕೊಡುವ ಅಗತ್ಯವಿದೆ ಎಂದು ಒಬ್ಬ ನರ್ಸ್‌ ಅವರಿಗೆ ಹೇಳಿದಳು; ಆದರೆ ಅದನ್ನು ತಿಳಿಸುವಾಗ ಅವಳು ತುಂಬ ಚಾತುರ್ಯವನ್ನು ಉಪಯೋಗಿಸಿದಳು. ಅವರು ಬರೆದುದು: “ಒಳ್ಳೇ ನರ್ಸ್‌ಗಳು ಕೆಲವೊಮ್ಮೆ ವೈದ್ಯರ ತಪ್ಪುಗಳನ್ನೇ ಸರಿಪಡಿಸುತ್ತಾರೆ. ಇಂಟೆನ್ಸೀವ್‌ ಕೇರ್‌ ಯೂನಿಟ್‌ (ICU)ನಂತಹ ಸ್ಪೆಷಲ್‌ ವಾರ್ಡ್‌ಗಳಲ್ಲಿರುವ ನರ್ಸ್‌ಗಳು, ಇಡೀ ಆಸ್ಪತ್ರೆಯಲ್ಲೇ ಅತ್ಯುತ್ತಮ ತರಬೇತಿ ಪಡೆದಿರುವ ವೃತ್ತಿಪರ ನರ್ಸ್‌ಗಳಲ್ಲಿ ಕೆಲವರಾಗಿದ್ದಾರೆ. ನಾನು ಸಹಾಯಕ ವೈದ್ಯನಾಗಿ ಶಿಕ್ಷಣಪಡೆಯುತ್ತಿದ್ದಾಗ, ಕ್ಯಾತಿಟರ್‌ಗಳನ್ನು ಹೇಗೆ ಉಪಯೋಗಿಸುವುದು ಮತ್ತು ವೆಂಟಿಲೇಟರ್‌ (ಕೃತಕ ಉಸಿರಾಟಕ್ಕೆ ಬಳಸುವ ಉಪಕರಣ)ಗಳನ್ನು ಹೇಗೆ ಸರಿಹೊಂದಿಸುವುದು ಎಂಬುದನ್ನು ನರ್ಸ್‌ಗಳೇ ನನಗೆ ಕಲಿಸಿದರು. ಅಷ್ಟುಮಾತ್ರವಲ್ಲ, ಯಾವ ಔಷಧಗಳನ್ನು ಉಪಯೋಗಿಸಬಾರದು ಎಂಬುದನ್ನು ಸಹ ಅವರೇ ನನಗೆ ಹೇಳಿದರು.”

ಇನ್ನೂ ಮುಂದುವರಿಸುತ್ತಾ ಅವರು ಹೇಳಿದ್ದು: “ರೋಗಿಗಳಿಗೆ ಅತ್ಯಗತ್ಯವಾಗಿರುವ ಮಾನಸಿಕ ಹಾಗೂ ಭಾವನಾತ್ಮಕ ಬೆಂಬಲವನ್ನು ನರ್ಸ್‌ಗಳು ನೀಡುತ್ತಾರೆ. ಏಕೆಂದರೆ ರೋಗಿಗಳೊಂದಿಗೆ ಹೆಚ್ಚು ಸಮಯವನ್ನು ಕಳೆಯುವವರು ಅವರೇ ಆಗಿದ್ದಾರೆ. . . . ಆ ಕೂಡಲೆ ಒಬ್ಬ ರೋಗಿಯನ್ನು ನಾನಾಗಿಯೇ ಹೋಗಿ ನೋಡುವುದು ತುಂಬ ಅಪರೂಪ; ಆದರೆ ನಾನು ತುಂಬ ವಿಶ್ವಾಸವಿಟ್ಟಿರುವಂತಹ ಒಬ್ಬ ನರ್ಸ್‌ ನನಗೆ, ಒಬ್ಬ ರೋಗಿಯನ್ನು ತತ್‌ಕ್ಷಣವೇ ಹೋಗಿ ನೋಡಬೇಕೆಂದು ಹೇಳುವಲ್ಲಿ, ಆ ಕೂಡಲೆ ನಾನು ಹೋಗಿ ನೋಡುತ್ತೇನೆ.”

[ಪುಟ 7ರಲ್ಲಿರುವ ಚಿತ್ರ]

“ಇತರರ ಸೇವೆಮಾಡಬೇಕೆಂಬ ಬಯಕೆ ನನ್ನಲ್ಲಿತ್ತು.”​—⁠ಟೆರಿ ವೆಧರ್‌ಸನ್‌, ಇಂಗ್ಲೆಂಡ್‌.

[ಪುಟ 7ರಲ್ಲಿರುವ ಚಿತ್ರ]

“ಆಸ್ಪತ್ರೆಯಲ್ಲಿ ನನ್ನ ತಂದೆಯವರನ್ನು ನೋಡಿದಾಗ, ನಾನು ಒಬ್ಬ ನರ್ಸ್‌ ಆಗಲೇಬೇಕೆಂದು ನಿರ್ಧರಿಸಿದೆ.”​—⁠ಎಟ್ಸ್‌ಕೊ ಕೊಟಾನೀ, ಜಪಾನ್‌.

[ಪುಟ 7ರಲ್ಲಿರುವ ಚಿತ್ರ]

‘ಒಬ್ಬ ಎಎನ್‌ಎಮ್‌ ಅನುಭವಿಸಸಾಧ್ಯವಿರುವ ಅತ್ಯಂತ ಸುಂದರ ಅನುಭವಗಳಲ್ಲಿ ಒಂದು, ಹೆರಿಗೆ ಮಾಡಿಸುವುದೇ ಆಗಿದೆ.’​—⁠ಯೋಲಾಂಡಾ ಕೀಲನ್‌ ಫಾನ್‌ ಹೋಫ್ಟ್‌, ನೆದರ್ಲೆಂಡ್ಸ್‌.

[ಪುಟ 8ರಲ್ಲಿರುವ ಚಿತ್ರ]

ಮಗುವಿಗೆ ಜನ್ಮ ನೀಡುವುದರಲ್ಲಿ ಸಹಾಯಮಾಡುವ ಮೂಲಕ ಎಎನ್‌ಎಮ್‌ಗಳು ಸಂತೋಷ ಹಾಗೂ ಸಂತೃಪ್ತಿಯನ್ನು ಪಡೆದುಕೊಳ್ಳುತ್ತಾರೆ