ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾಜೂಕಾದ ದಂತಗಳನ್ನು ರಕ್ಷಿಸುವ ವಿಧ

ನಾಜೂಕಾದ ದಂತಗಳನ್ನು ರಕ್ಷಿಸುವ ವಿಧ

ನಾಜೂಕಾದ ದಂತಗಳನ್ನು ರಕ್ಷಿಸುವ ವಿಧ

ನಿಮಗೆ ಎಷ್ಟು ವಯಸ್ಸಾಗಿದ್ದಾಗ ಹಲ್ಲು ಬೆಳೆಯಲು ಪ್ರಾರಂಭವಾಯಿತು? ನೀವು ಇನ್ನೂ ಗರ್ಭದಲ್ಲಿರುವಾಗಲೇ ಅಂದರೆ, ತಾನು ಗರ್ಭವತಿಯಾಗಿದ್ದೇನೆಂದು ನಿಮ್ಮ ತಾಯಿಗೆ ಗೊತ್ತಾಗುವ ಮೊದಲೇ, ಆ ಪ್ರಕ್ರಿಯೆಯು ಪ್ರಾರಂಭವಾಯಿತು ಎಂಬುದನ್ನು ತಿಳಿದುಕೊಳ್ಳುವಾಗ ನಿಮಗೆ ಬಹಳ ಆಶ್ಚರ್ಯವಾಗಬಹುದು. ಆದುದರಿಂದಲೇ, ತಾಯಿಯಾಗಲಿರುವವಳು ಕ್ಯಾಲ್ಸಿಯಂ, ರಂಜಕ, ಪ್ರೋಟೀನ್‌ ಮತ್ತು ವಿಟಮಿನ್‌ಗಳನ್ನು ಸೇರಿಸಿ, ಸಾಕಷ್ಟು ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.

ನವಜಾತ ಶಿಶುಗಳ ಕುರಿತೇನು? ಬಾಟಲಿ ಹಾಲನ್ನು ಕುಡಿಯುವ ಕಂದಮ್ಮಗಳಿಗೆ ಹಲ್ಲುಳುಕು ಆಗುವುದು ಜಾಸ್ತಿ ಎಂದು ಪರಿಣತರು ಹೇಳುತ್ತಾರೆ. ಸಾಮಾನ್ಯವಾಗಿ ಮುಂದಿನ ಮೇಲಿನ ಹಲ್ಲುಗಳು ಹುಳುಕಾಗುತ್ತವೆ. ಆದರೆ ಅದು ಹೇಗೆ ಆಗುತ್ತದೆ? ಕೆಲವು ಶಿಶುಗಳು ಹಾಲು, ಜ್ಯೂಸ್‌, ಸಕ್ಕರೆ ನೀರು ಅಥವಾ ಸೋಡದಂತಹ ನೀರನ್ನು ಬಾಟಲಿಯಲ್ಲಿ ಚೀಪುತ್ತಾ ಚೀಪುತ್ತಾ ಹಾಗೆ ನಿದ್ದೆಹೋಗುತ್ತವೆ. ಹುಳಿಹಿಡಿಯುವ ಈ ದ್ರಾವಣಗಳು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ ಮತ್ತು ಇವುಗಳಿಂದ ಬ್ಯಾಕ್ಟೀರಿಯಗಳು ಬೆಳೆಯುತ್ತವೆ. ಬ್ಯಾಕ್ಟೀರಿಯ ಆ್ಯಸಿಡನ್ನು ಉಂಟುಮಾಡುತ್ತದೆ. ಇದು ಮಗುವಿನ ಹಲ್ಲುಗಳಿಗೆ​—⁠ವಿಶೇಷವಾಗಿ ಈ ಆಮ್ಲಗಳು ರಾತ್ರಿ ಪೂರ್ತಿ ಮಗುವಿನ ಹಲ್ಲುಗಳಲ್ಲಿರುವುದಾದರೆ​—⁠ಹಾನಿಮಾಡಸಾಧ್ಯವಿದೆ. ಕೆಲವು ಶಿಶುಗಳ ಹಲ್ಲುಗಳು ತೀರ ಹುಳುಕಾಗುವುದರಿಂದ ಬೇಗನೆ ಹಲ್ಲುಗಳು ಬಿದ್ದುಹೋಗಬಹುದು. ಅಂದರೆ, ಇದು ಮುಂದೆ ಸ್ಥಿರವಾದ ಹಲ್ಲುಗಳ ಬೆಳವಣಿಗೆಯಲ್ಲಿ ದುಷ್ಪರಿಣಾಮವನ್ನು ಬೀರುತ್ತದೆ.

ತಮ್ಮ ಮಗುವಿನ ನಾಜೂಕಾದ ಹಲ್ಲುಗಳನ್ನು ತಂದೆತಾಯಂದಿರು ಹೇಗೆ ರಕ್ಷಿಸಸಾಧ್ಯವಿದೆ? ಎದೆಹಾಲನ್ನು ಕುಡಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಏಕೆಂದರೆ ತಾಯಿಯ ಹಾಲು ಕ್ರಿಮಿ ಶುದ್ಧೀಕೃತವಾಗಿದ್ದು, ಅದರಲ್ಲಿ ಹೇರಳವಾದ ಪ್ರತಿವಿಷ ವಸ್ತುಗಳಿರುತ್ತವೆ. ಬಾಟಲಿ ಹಾಲನ್ನು ಏನಾದರೂ ಉಪಯೋಗಿಸುವಲ್ಲಿ, ಮಗುವಿಗೆ 18 ತಿಂಗಳುಗಳು ತುಂಬುವಾಗ ಅದನ್ನು ನಿಲ್ಲಿಸಿಬಿಡಬೇಕು ಎಂದು ಪರಿಣತರು ಹೇಳುತ್ತಾರೆ. ಬಾಟಲಿಯನ್ನು ಕೇವಲ ಹಾಲು ಕುಡಿಸುವುದಕ್ಕಾಗಿ ಉಪಯೋಗಿಸಬೇಕೇ ಹೊರತು, ಅದನ್ನು ಮಗುವಿಗೆ ಸುಮ್ಮನೆ ಚೀಪುತ್ತಾ ಇರಲು ಕೊಡಬಾರದು ಎಂದು ಇವರು ಬಲವಾಗಿ ಶಿಫಾರಸ್ಸು ಮಾಡುತ್ತಾರೆ. ಮಾತ್ರವಲ್ಲ, ಮಗುವಿಗೆ ಬಾಟಲಿಯನ್ನು ಕೊಟ್ಟು ಮಲಗಿಸುವುದಾದರೆ, ಸಾದಾ ನೀರನ್ನು ಅದರಲ್ಲಿ ತುಂಬಿಸಿ ಕೊಡುವುದು ಬಹಳ ಒಳ್ಳೆಯದು. ಪ್ರತಿ ಬಾರಿ ಹಾಲನ್ನು ಕುಡಿಸಿದ ನಂತರ, ಶುದ್ಧವಾದ, ಮೆತ್ತನೆಯ ಬಟ್ಟೆಯಿಂದ ನಿಮ್ಮ ಕಂದಮ್ಮನ ಹಲ್ಲನ್ನು ಶುಚಿಗೊಳಿಸಿ.

ಎಳೆವಯಸ್ಸಿನಲ್ಲಿಯೇ ಹಲ್ಲು ಹುಳುಕಾಗುವುದನ್ನು ಖಂಡಿತವಾಗಿಯೂ ತಡೆಗಟ್ಟಬಹುದು. ಸರಿಯಾದ ದಂತಾರೈಕೆ​—⁠ಹೌದು, ಪುಟ್ಟ ಕಂದಮ್ಮಗಳಿಗೂ​—⁠ಬಹಳ ಮುಖ್ಯ! (g00 11/22)