ರಾಶಿಚಕ್ರವು ನಿಮ್ಮ ಜೀವನವನ್ನು ಪ್ರಭಾವಿಸಬೇಕೋ?
ಬೈಬಲಿನ ದೃಷ್ಟಿಕೋನ
ರಾಶಿಚಕ್ರವು ನಿಮ್ಮ ಜೀವನವನ್ನು ಪ್ರಭಾವಿಸಬೇಕೋ?
“ನಕ್ಷತ್ರಗಳಲ್ಲಿ ತಮ್ಮ ಅದೃಷ್ಟವನ್ನು ಹುಡುಕುವ ಆಬಾಲವೃದ್ಧರಿಗೆ ಬರವೇ ಇಲ್ಲ.” —ಪೋಪ್ ಜಾನ್ ಪಾಲ್ II.
ಒಂದು ಅಭಿಪ್ರಾಯ ಸಂಗ್ರಹಣೆಗನುಸಾರ, ಪ್ರತಿ ನಾಲ್ಕು ಅಮೆರಿಕನ್ನರಲ್ಲಿ ಒಬ್ಬನು ಯಾವುದೇ ನಿರ್ಣಯಗಳನ್ನು ಮಾಡುವ ಮೊದಲು ಜ್ಯೋತಿಷ್ಯಕ್ಕೆ ಮೊರೆಹೋಗುತ್ತಾನೆ. ಜನರು ಜ್ಯೋತಿಷ್ಯರ ಬಳಿ ಹೋಗುವುದು ಕೇವಲ ಅಮೆರಿಕದಲ್ಲಿ ಮಾತ್ರವಲ್ಲ. ನಿಜವಾಗಿ ನೋಡುವುದಾದರೆ, ಲೋಕದ ಎಲ್ಲ ಕಡೆಗಳಲ್ಲೂ ಹಣಕಾಸು, ಪ್ರಯಾಣ, ವೃತ್ತಿ ಬದಲಾವಣೆಗಳು, ಮದುವೆಯ ತಾರೀಖುಗಳನ್ನು ಗೊತ್ತುಪಡಿಸುವ ಹಾಗೂ ಸೇನಾ ವ್ಯವಸ್ಥೆಗಳು ಮುಂತಾದ ವಿಷಯಗಳಿಗಾಗಿ ಜನರು ರಾಶಿಚಕ್ರವನ್ನು ನೋಡುತ್ತಾರೆ. ರಾಶಿಚಕ್ರದಿಂದ ಭಾವಿ ಪತಿ, ಪತ್ನಿಯನ್ನು ಕಂಡುಹಿಡಿಯಬಹುದು ಹಾಗೂ ಯಾವ ಸಂಗಾತಿ ಅನ್ಯೋನ್ಯವಾಗಿ ಬಾಳಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಪೂರ್ವದಿಂದ ಪಶ್ಚಿಮದ ವರೆಗೆ ಈ ಜ್ಯೋತಿಷ್ಯವು ಕೋಟ್ಯಂತರ ಜನರನ್ನು ಮೋಡಿಮಾಡಿದೆ. ಆದರೆ ನಿಜವಾಗಿಯೂ ರಾಶಿಚಕ್ರದ ಮೂಲವು ಯಾವುದಾಗಿದೆ?
ಐತಿಹಾಸಿಕ ಹಿನ್ನೆಲೆ
ಬಹಳ ಹಿಂದಿನಿಂದಲೂ ಜನರು ಹಲವಾರು ವಿಧದ ರಾಶಿಚಕ್ರಗಳನ್ನು ಉಪಯೋಗಿಸುತ್ತಿದ್ದರು ಎಂಬುದು ಕಂಡುಬಂದಿದೆ. ಉದಾಹರಣೆಗೆ, “ರಾಶಿಚಕ್ರದ ನಕ್ಷತ್ರಗಳು” (NW) ಎಂದು ಬೈಬಲು ಸಹ ಉಲ್ಲೇಖವನ್ನು ಮಾಡುತ್ತದೆ. (2 ಅರಸು 23:5) ಹಿಂದಿನ ಕಾಲಗಳಲ್ಲಿ ಹಿಂದುಗಳು, ಚೀನಾದವರು, ಐಗುಪ್ತ್ಯರು, ಗ್ರೀಕರು ಹಾಗೂ ಇನ್ನಿತರ ಜನರು ರಾಶಿಚಕ್ರಕ್ಕೆ ಮೊರೆಹೋಗುತ್ತಿದ್ದರು. ಆದರೆ, ರಾಶಿಚಕ್ರದ ಉಪಯೋಗವು ಮೊದಲು ಪ್ರಾರಂಭವಾಗಿದ್ದು ಪುರಾತನ ಬಾಬೇಲಿನಲ್ಲಿಯೇ.
ಬಾಬಿಲೋನ್ಯರು ಭವಿಷ್ಯತ್ತಿನ ಬಗ್ಗೆ ತಿಳಿದುಕೊಳ್ಳಲಿಕ್ಕಾಗಿ ಜ್ಯೋತಿಷ್ಯವನ್ನು ಕೇಳುತ್ತಿದ್ದರು. ಆಕಾಶಕಾಯಗಳ ಚಲನವಲನಗಳನ್ನು ಗಮನಿಸುತ್ತಾ, ವಿಸ್ತಾರವಾದ ಚಾರ್ಟ್ ಹಾಗೂ ತಖ್ತೆಯನ್ನು ಮಾಡಿದರು. ಇವುಗಳ ಮೂಲಕ, ಮನುಷ್ಯರ ದೈನಂದಿನ ವ್ಯವಹಾರಗಳನ್ನು ಹಾಗೂ ಭೂಮಂಡಲದಲ್ಲಿ ಆಗುವ ಘಟನೆಗಳನ್ನು ಮುಂದಾಗಿಯೇ ಹೇಳಲಾಗುತ್ತಿತ್ತು. ಎಷ್ಟೋ ಸಮಯ, ಜ್ಯೋತಿಷ್ಯರಿಂದ ಸಲಹೆಯನ್ನು ಕೇಳದೆ ರಾಜಕೀಯದ ಬಗ್ಗೆ ಇಲ್ಲವೆ ಮಿಲಿಟರಿಯ ಬಗ್ಗೆ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಆದುದರಿಂದ, ಅಸಾಧಾರಣವಾದ ವಿವೇಕವನ್ನು ಹಾಗೂ ಅತಿಮಾನುಷ ಶಕ್ತಿಯನ್ನು ಹೊಂದಿದ್ದೇವೆ ಎಂದು ಪ್ರತಿಪಾದಿಸಿಕೊಳ್ಳುತ್ತಿದ್ದ ಪುರೋಹಿತ ವರ್ಗದವರು ಮಹತ್ತರವಾದ ವರ್ಚಸ್ಸನ್ನು ಪಡೆದುಕೊಂಡರು. ಮಾತ್ರವಲ್ಲ, ಬಾಬೆಲಿನ ಮಹಾ ದೇವಸ್ಥಾನಗಳೆಲ್ಲವುಗಳಲ್ಲಿ ಖಗೋಲ ದೃಶ್ಯಗಳನ್ನು ಪರೀಕ್ಷಿಸುವ ಸಮೀಕ್ಷೆ ಶಾಲೆಗಳಿದ್ದವು.
ಇಂದು ಸಹ ಅನೇಕ ಜನರ ಜೀವಿತದಲ್ಲಿ ರಾಶಿಚಕ್ರವು ಬಹಳ ಮುಖ್ಯವಾದ
ಸ್ಥಾನವನ್ನು ಹೊಂದಿದೆ. ಜಾತಕ ಕುಂಡಲಿಯನ್ನು ನಂಬುವುದಿಲ್ಲ ಎಂದು ಹೇಳುವ ವ್ಯಕ್ತಿ ಸಹ, ಯಾವಾಗಲಾದರೊಮ್ಮೆ ತಮಾಷೆಗಾಗಿಯೋ ಕುತೂಹಲಕ್ಕಾಗಿಯೋ ಅದನ್ನು ನೋಡಬಹುದು. ಜ್ಯೋತಿಷ್ಯರು ಮುಂತಿಳಿಸಿರುವ ಕೆಲವೊಂದು ವಿಷಯಗಳು ನಿಜ ಆಗಿವೆ ಎಂಬುದು ವಾಸ್ತವವೇ. ಆದರೆ ಇದರರ್ಥ ಯಾವುದೇ ಕಾರ್ಯವನ್ನು ಮಾಡುವ ಮುಂಚೆ ನಕ್ಷತ್ರಗಳನ್ನು ನೋಡುವುದು ಪ್ರಯೋಜನಕಾರಿಯಾಗಿದೆ ಎಂಬುದೋ? ಯೆಹೋವನ ಹಿಂದಿನ ಕಾಲದ ಸೇವಕರಿಗೆ ಜ್ಯೋತಿಷ್ಯದ ಬಗ್ಗೆ ಯಾವ ದೃಷ್ಟಿಕೋನವಿತ್ತು?ಗುಪ್ತ ಅಪಾಯಗಳು
ಬಾಬೇಲಿನವರಂತೆ ನಂಬಿಗಸ್ತ ಯೆಹೂದ್ಯರು ಜ್ಯೋತಿಷ್ಯಕ್ಕೆ ಮೊರೆಹೋಗುತ್ತಿರಲಿಲ್ಲ. ಮತ್ತು ಇದು ಒಳ್ಳೆಯದಕ್ಕಾಗಿಯೇ ಆಗಿತ್ತು. ಏಕೆಂದರೆ ದೇವರು ಅವರಿಗೆ ತೀರ ಸ್ಪಷ್ಟವಾಗಿ ಎಚ್ಚರಿಕೆಯನ್ನು ನೀಡಿದ್ದನು. ಆತನು ಹೇಳಿದ್ದು: “ಕಣಿಕೇಳುವವರು, ಶಕುನನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು, ಮಾಟಗಾರರು, ತಂತ್ರಗಾರರು, ಸತ್ತವರನ್ನು ವಿಚಾರಿಸುವವರು, ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ.” * (ಓರೆ ಅಕ್ಷರಗಳು ನಮ್ಮವು.)—ಧರ್ಮೋಪದೇಶಕಾಂಡ 18:10-12.
ದೇವರ ಸೇವಕರು ಜ್ಯೋತಿಷ್ಯದ ವಿರುದ್ಧವಾಗಿ ದೃಢವಾದ ನಿಲುವನ್ನು ತೆಗೆದುಕೊಂಡರು. ಉದಾಹರಣೆಗೆ, ನಂಬಿಗಸ್ತ ರಾಜನಾದ ಯೋಷೀಯನು, “ಬಾಳನಿಗೂ ಸೂರ್ಯಚಂದ್ರನಕ್ಷತ್ರಗಳೆನಿಸಿಕೊಳ್ಳುವ ಆಕಾಶಸೈನ್ಯಕ್ಕೂ ಧೂಪಸುಡುವದಕ್ಕಾಗಿ . . . ನೇಮಿಸಲ್ಪಟ್ಟ ಎಲ್ಲಾ ಪೂಜಾರಿಗಳನ್ನು ತೆಗೆದುಹಾಕಿದನು.” ಹೀಗೆ ಯೋಷೀಯನು “ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾದನು” ಮತ್ತು ದೇವರು ಅವನನ್ನು ಆಶೀರ್ವದಿಸಿದನು. (2 ಅರಸು 22:2; 23:5) ಆದರೆ ‘ಜ್ಯೋತಿಷ್ಯರು ಹೇಳಿರುವ ಕೆಲವೊಂದು ವಿಷಯಗಳಾದರೂ ನಿಜವಾಗಿಲ್ಲವೋ?’ ಎಂದು ಕೆಲವರು ಕೇಳಬಹುದು.
ಆಸಕ್ತಿಕರವಾಗಿ, ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ ನಾವು ಒಬ್ಬ ದಾಸಿಯ ಬಗ್ಗೆ ಓದುತ್ತೇವೆ. “ಅವಳು ಕಣಿಹೇಳುವದರಿಂದ ಅವಳ ಯಜಮಾನರಿಗೆ ಬಹು ಆದಾಯವಾಗುತ್ತಿತ್ತು.” ಈ ದಾಸಿಯು ಹೇಳಿದ ಕೆಲವೊಂದು ವಿಷಯಗಳು ಸತ್ಯವಾದವು ಮತ್ತು ಅವಳ ಶಕ್ತಿಯಿಂದ ಅವಳ ಯಜಮಾನರಿಗೆ ಬಹಳ ಲಾಭವಾಯಿತು ನಿಜ. ಆದರೆ ಭವಿಷ್ಯತ್ತಿನ ಘಟನೆಗಳ ಬಗ್ಗೆ ಮುಂತಿಳಿಸುವ ಆ ದಾಸಿಯ ಸಾಮರ್ಥ್ಯದ ಹಿಂದೆ ಏನಿತ್ತು? ಅವಳು “ಕಣಿಹೇಳುವ ಪಿಶಾಚನಾತ್ಮದ” (NW) ಪ್ರಭಾವದಿಂದ ಹೀಗೆ ಮಾಡುತ್ತಿದ್ದಳು ಎಂದು ಬೈಬಲು ಹೇಳುತ್ತದೆ.—ಅ. ಕೃತ್ಯಗಳು 16:16.
“ಲೋಕವೆಲ್ಲವು ಕೆಡುಕನ” ಅಂದರೆ, ಪಿಶಾಚನಾದ ಸೈತಾನನ “ವಶದಲ್ಲಿ ಬಿದ್ದಿದೆ” ಎಂದು ಬೈಬಲು ಹೇಳುತ್ತದೆ. (1 ಯೋಹಾನ 5:19) ಕೆಲವೊಂದು ವಿಷಯಗಳು ಕಪಟೋಪಾಯದಿಂದ ನಿಜವಾಗುವಂತೆ ಮಾಡುವುದರ ಮೂಲಕ, ಸೈತಾನನು ಹಾಗೂ ಅವನ ದೆವ್ವಗಳು ಕೋಟ್ಯಂತರ ಜನರನ್ನು ಮೋಡಿಮಾಡಿದ್ದಾರೆ.
ಜ್ಯೋತಿಷ್ಯವು ‘ಸೈತಾನನ ತಂತ್ರೋಪಾಯಗಳಲ್ಲಿ’ ಒಂದಾಗಿದೆ. ಮತ್ತು ಸೈತಾನನು ಇದನ್ನು ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ಜನರನ್ನು ನಿಯಂತ್ರಿಸಲು ಹಾಗೂ ಅವರ ಮೇಲೆ ಪ್ರಭಾವವನ್ನು ಬೀರಲು ಉಪಯೋಗಿಸುತ್ತಾನೆ. ಆದುದರಿಂದಲೇ, ಜ್ಯೋತಿಷ್ಯವನ್ನು ಒಳಗೂಡುವ ಸೈತಾನನ ಚಾಲಾಕಿನ ಕುತಂತ್ರಗಳನ್ನು ‘ಎದುರಿಸಿ ನಿಲ್ಲುವುದರ’ ಬಗ್ಗೆ ಬೈಬಲು ಕ್ರೈಸ್ತರಿಗೆ ಬುದ್ಧಿವಾದವನ್ನು ಹೇಳುವುದರಲ್ಲಿ ಆಶ್ಚರ್ಯವಿಲ್ಲ. (ಎಫೆಸ 6:11) ಆದರೆ ಭವಿಷ್ಯತ್ತಿನ ಸಂಬಂಧದಲ್ಲಿ ಯಾವುದೇ ಮಾರ್ಗದರ್ಶನವಿಲ್ಲದೇ ನಾವು ಬಿಡಲ್ಪಟ್ಟಿದ್ದೇವೆ ಎಂಬುದು ಇದರರ್ಥವೋ?
ಬೈಬಲ್—ಒಂದು ಭರವಸಾರ್ಹ ಮಾರ್ಗದರ್ಶನ
ನಿರ್ಣಯಗಳನ್ನು ಮಾಡುವಾಗ ಬೈಬಲು ಭರವಸಾರ್ಹವಾದ ಮಾರ್ಗದರ್ಶಿಯಾಗಿದೆ ಎಂದು ಲಕ್ಷಾಂತರ ಜನರು ಕಂಡುಕೊಂಡಿದ್ದಾರೆ. ಕೀರ್ತನೆಗಾರನಾದ ದಾವೀದನು ಹೇಳುವಂತೆ: “ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ.” (ಕೀರ್ತನೆ 19:7; 119:105) ಪ್ರತಿಯೊಂದು ಸಂದರ್ಭದಲ್ಲಿಯೂ ಒಬ್ಬ ವ್ಯಕ್ತಿ ಏನು ಮಾಡಬೇಕೆಂಬುದನ್ನು ಬೈಬಲು ಸವಿವರವಾಗಿ ತಿಳಿಸುತ್ತದೆ ಎಂಬುದು ಇದರರ್ಥವಲ್ಲ. ಅದರ ಬದಲು, ನಮ್ಮ ಗ್ರಹಣಶಕ್ತಿಯನ್ನು ತರಬೇತಿಗೊಳಿಸುವಂತಹ ತತ್ತ್ವಗಳನ್ನು ದೇವರ ವಾಕ್ಯವು ಹೊಂದಿದೆ. ಇದು, ಸರಿ ಯಾವುದು ಹಾಗೂ ತಪ್ಪು ಯಾವುದು ಎಂಬುದನ್ನು ತಿಳಿದುಕೊಳ್ಳಲು ನಮ್ಮನ್ನು ಶಕ್ತಗೊಳಿಸುತ್ತದೆ ಮಾತ್ರವಲ್ಲ, ವಿವೇಕಯುತ ನಿರ್ಣಯಗಳನ್ನು ಮಾಡಲು ನಮಗೆ ಸಹಾಯಮಾಡುತ್ತದೆ.—ಇಬ್ರಿಯ 5:14.
ಆದುದರಿಂದ, ನಿಜ ಕ್ರೈಸ್ತರು ತಮಾಷೆಗಾಗಿಯೋ ಕುತೂಹಲಕ್ಕಾಗಿಯೋ ಜಾತಕ ಕುಂಡಲಿಯನ್ನು ನೋಡುವುದಿಲ್ಲ. ಇದರ ಬದಲು, ಪೈಶಾಚಿಕ ಪ್ರಭಾವದ ಎಲ್ಲ ಕುಟಿಲ ರೂಪಗಳ ಕುರಿತಾಗಿ ದೇವರ ವಾಕ್ಯದಲ್ಲಿ ನೀಡಲ್ಪಟ್ಟಿರುವ ಎಚ್ಚರಿಕೆಗಳನ್ನು ಅವರು ವಿವೇಕಯುತವಾಗಿ ಪಾಲಿಸುತ್ತಾರೆ. ನಿಮ್ಮ ಜೀವನವನ್ನು ರಾಶಿಚಕ್ರವು ಪ್ರಭಾವಿಸುವಂತೆ ಬಿಡುವ ಬದಲು ಬೈಬಲು ನಿಮ್ಮ ಜೀವನವನ್ನು ಪ್ರಭಾವಿಸುವಂತೆ ಬಿಡುವಾಗ, ಅನಂತಾನಂತ ಕಾಲದ ವರೆಗೂ ದೇವರ ಆಶೀರ್ವಾದವು ನಿಮ್ಮ ಮೇಲಿರುವುದು.—ಕೀರ್ತನೆ 37:29, 38.
(g00 11/8)
[ಪಾದಟಿಪ್ಪಣಿ]
^ ಕಣಿಕೇಳುವುದು ಎಲ್ಲ ವಿಷಯಗಳನ್ನು, ವಿಶೇಷವಾಗಿ ಭವಿಷ್ಯತ್ತಿನ ಘಟನೆಗಳನ್ನು ಮಾಂತ್ರಿಕ ಶಕ್ತಿಗಳಿಂದ ತಿಳಿದುಕೊಳ್ಳುವುದನ್ನು ಒಳಗೂಡುತ್ತದೆ.
[ಪುಟ 26ರಲ್ಲಿರುವ ಚಿತ್ರ]
ಪೌರಸ್ತ್ಯ ರಾಶಿಚಕ್ರ
[ಪುಟ 26ರಲ್ಲಿರುವ ಚಿತ್ರ]
ಪಾಶ್ಚಾತ್ಯ ರಾಶಿಚಕ್ರ