ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವನಿಗೆ ಇಲ್ಲ ಎಂದು ನಾನು ಹೇಗೆ ಹೇಳಬಲ್ಲೆ?

ಅವನಿಗೆ ಇಲ್ಲ ಎಂದು ನಾನು ಹೇಗೆ ಹೇಳಬಲ್ಲೆ?

ಯುವ ಜನರು ಪ್ರಶ್ನಿಸುವುದು . . .

ಅವನಿಗೆ ಇಲ್ಲ ಎಂದು ನಾನು ಹೇಗೆ ಹೇಳಬಲ್ಲೆ?

“ನನ್ನ ಸಭೆಯಲ್ಲಿರುವ ಒಬ್ಬ ಸಹೋದರನು ಈ ಬೇಸಗೆಯಲ್ಲಿ ನನ್ನನ್ನು ಪ್ರೀತಿಸಲಾರಂಭಿಸಿದನು. ನಿಜವಾಗಿಯೂ ಹೇಳಬೇಕಾದರೆ ನಾನು ಅವನನ್ನು ಇಷ್ಟಪಡಲಿಲ್ಲ. ಆದರೆ ಸಮಸ್ಯೆಯೇನೆಂದರೆ, ಅವನ ಮನಸ್ಸನ್ನು ನೋಯಿಸದೆ ಅವನಿಗೆ ಇಲ್ಲ ಎಂದು ಹೇಗೆ ಹೇಳುವುದು ಎಂಬುದು ನನಗೆ ಗೊತ್ತಿರಲಿಲ್ಲ.” ​—⁠ಎಲಿಸಬೆತ್‌. *

“ನಾನು ನಿಮ್ಮನ್ನು ಹೆಚ್ಚು ಪರಿಚಯಮಾಡಿಕೊಳ್ಳಬಹುದೋ?” ಒಬ್ಬ ಯುವಕನು ಹೀಗೆ ನಿಮ್ಮನ್ನು ಯಾವಾಗಲಾದರೂ ಕೇಳಿದ್ದಾನೋ? ಒಬ್ಬ ಯುವತಿಯಾಗಿ, * ಈ ಮಾತುಗಳನ್ನು ಕೇಳಿ ನೀವು ಆನಂದಿಸಿರಬೇಕು ಮತ್ತು ಪ್ರಸನ್ನರಾಗಿರಬೇಕು, ಅಷ್ಟೇ ಏಕೆ ಸಂತೋಷದಿಂದ ನಿಮಗೆ ಹುಚ್ಚು ಹಿಡಿದಂತೆಯೂ ಆಗಿರಬಹುದು! ಇನ್ನೊಂದು ಕಡೆಯಲ್ಲಿ, ನೀವು ಎಷ್ಟು ತಬ್ಬಿಬ್ಬುಗೊಂಡಿರಬಹುದೆಂದರೆ, ಪ್ರತ್ಯುತ್ತರವಾಗಿ ಏನು ಹೇಳಬೇಕೆಂಬುದೇ ನಿಮಗೆ ತೋಚದಂತಾಗಿರಬಹುದು.

ಯಾರಾದರೂ ನಿಮ್ಮಲ್ಲಿ ಪ್ರಣಯಾತ್ಮಕ ಆಸಕ್ತಿಯನ್ನು ವ್ಯಕ್ತಪಡಿಸುವುದಾದರೆ, ವಿವಿಧ ರೀತಿಯ ಭಾವನೆಗಳು ನಿಮ್ಮಲ್ಲಿ ಮೂಡಿಬರಬಹುದು. ಪ್ರಾಮುಖ್ಯವಾಗಿ, ನೀವು ಮದುವೆಯಾಗುವ ಪ್ರಾಯದಲ್ಲಿದ್ದು, ಇಂತಹ ಸನ್ನಿವೇಶಕ್ಕೆ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿರುವುದಾದರೆ ಆಗ ಇದು ವಿಶೇಷವಾಗಿ ನಿಜವಾಗಿರುವುದು! * ಹಾಗಿದ್ದರೂ, ನೀವು ಹೇಗೆ ಪ್ರತಿಕ್ರಿಯಿಸುವಿರಿ ಎಂಬುದು ಬಹುಮಟ್ಟಿಗೆ ಈ ಪ್ರಶ್ನೆಯನ್ನು ಯಾರು ಕೇಳುತ್ತಿದ್ದಾರೆ ಎನ್ನುವುದರ ಮೇಲೆ ಆತುಕೊಂಡಿದೆ. ಒಂದುವೇಳೆ ಅವನು ಭಾವನಾತ್ಮಕವಾಗಿ ಒಬ್ಬ ಪ್ರೌಢ ವ್ಯಕ್ತಿಯಾಗಿರುವುದಾದರೆ ಮತ್ತು ನೀವೂ ಅವನನ್ನು ಇಷ್ಟಪಡುವುದಾದರೆ, ಆಗ ಉತ್ತರ ಕೊಡುವುದು ಸುಲಭವಾಗಿರುವುದು. ಆದರೆ, ಒಬ್ಬ ಸೂಕ್ತವಾದ ಸಂಗಾತಿಗೆ ಬೇಕಾದ ಅರ್ಹತೆಗಳು ಅವನಲ್ಲಿ ಕಂಡುಬರದಿದ್ದರೆ ಆಗೇನು? ಅಥವಾ ಅವನಲ್ಲಿ ಒಳ್ಳೆಯ ಗುಣಗಳು ಇರಬಹುದಾದರೂ ನಿಮಗೆ ಅವನಲ್ಲಿ ಆಸಕ್ತಿಯಿಲ್ಲದಿದ್ದರೆ ಆಗೇನು ಮಾಡುವಿರಿ?

ಒಬ್ಬಾತನೊಂದಿಗೆ ಸ್ವಲ್ಪಕಾಲ ಪ್ರಣಯಾಚರಣೆ ನಡೆಸಿದ ನಂತರ, ಜೀವನಪೂರ್ತಿ ಆ ವ್ಯಕ್ತಿಯೊಂದಿಗೆ ಇರಲು ಇಷ್ಟವಿಲ್ಲ ಎಂಬ ಮನವರಿಕೆಯಾಗಿರುವ ಯುವತಿಯೊಬ್ಬಳ ಪರಿಸ್ಥಿತಿಯನ್ನೂ ಪರಿಗಣಿಸಿ. ಆ ಸಂಬಂಧವನ್ನು ಕೊನೆಗಾಣಿಸುವ ಬದಲು ಅವಳು ಅವನೊಂದಿಗೆ ಓಡಾಡುವುದನ್ನು ಮುಂದುವರಿಸುತ್ತಾಳೆ. “ಅವನಿಗೆ ಇಲ್ಲ ಎಂದು ನಾನು ಹೇಗೆ ಹೇಳಬಲ್ಲೆ?” ಎಂದು ಕೇಳುತ್ತಾಳೆ.

ನಿಮಗೆ ಪ್ರಣಯಾತ್ಮಕ ಆಸಕ್ತಿಯಿಲ್ಲದಿರುವಾಗ

ಹಿಂದೆ ಪೂರ್ವಜರ ಸಮಯಗಳಲ್ಲಿ, ಜನರು ತಮ್ಮ ಹೆತ್ತವರು ಆಯ್ಕೆಮಾಡಿದ ವ್ಯಕ್ತಿಗಳನ್ನೇ ಮದುವೆಮಾಡಿಕೊಳ್ಳುತ್ತಿದ್ದರು. (ಆದಿಕಾಂಡ 24:2-4, 8) ಪಾಶ್ಚಾತ್ಯ ದೇಶಗಳಲ್ಲಿ ಬಹುಮಟ್ಟಿಗೆ ಎಲ್ಲ ಕ್ರೈಸ್ತರು ತಮ್ಮ ಸ್ವಂತ ಸಂಗಾತಿಯನ್ನು ಆರಿಸಿಕೊಳ್ಳಲು ಸ್ವತಂತ್ರರಾಗಿದ್ದಾರೆ. ಬೈಬಲಿನಲ್ಲಿ ಒಂದು ಷರತ್ತಿದೆ; ಅದೇನೆಂದರೆ, ಕ್ರೈಸ್ತರು “ಕರ್ತನಲ್ಲಿ ಮಾತ್ರ” ಮದುವೆಯಾಗಬೇಕು.​—⁠1 ಕೊರಿಂಥ 7:​39, NW.

ನಿಮ್ಮಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸುವ ಅಥವಾ ನೀವು ಸ್ವಲ್ಪಕಾಲ ಪ್ರಣಯಾಚರಣೆ ನಡೆಸಿರುವ ಯಾರೇ ಒಬ್ಬ ಜೊತೆ ವಿಶ್ವಾಸಿಯನ್ನು ನೀವು ಮದುವೆಮಾಡಿಕೊಳ್ಳಲೇಬೇಕು ಎಂಬುದು ಇದರ ಅರ್ಥವೋ? ಮಧ್ಯಪ್ರಾಚ್ಯದ ಶೂನೇಮ್‌ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದ ಒಬ್ಬ ಯುವತಿಯ ಕುರಿತಾದ ಬೈಬಲ್‌ ಉದಾಹರಣೆಯನ್ನು ಪರಿಗಣಿಸಿ. ಅವಳ ರಾಜನಾದ ಸೊಲೊಮೋನನು ಅವಳನ್ನು ನೋಡಿ ತುಂಬ ಪ್ರೀತಿಸಲಾರಂಭಿಸಿದನು. ಸೊಲೊಮೋನನು ಅವಳ ಪ್ರೀತಿಯನ್ನು ಗಳಿಸಲು ಹಾತೊರೆದಾಗ, ಅವಳು ಅವನನ್ನು ನಿರಾಕರಿಸಿದಳು. ಮಾತ್ರವಲ್ಲದೆ, ರಾಜನ ಆಸ್ಥಾನದಲ್ಲಿ ಅವನ ಸೇವೆಗಾಗಿ ನಿಂತಿರುವ ಸ್ತ್ರೀಯರಿಗೆ, “ಉಚಿತಕಾಲಕ್ಕೆ ಮುಂಚೆ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸಬಾರದೆಂದು” ಕೋರಿಕೊಂಡಳು. (ಪರಮಗೀತ 2:7) ಭಾವನೆಗಳ ಮೇಲೆ ಆಧಾರಿತವಾದ ತೀರ್ಮಾನವನ್ನು ಮಾಡುವಂತೆ ಇತರರು ತನ್ನನ್ನು ಪ್ರಭಾವಿಸಲು ಈ ಜಾಣ ಕನ್ಯೆಯು ಬಿಡಲಿಲ್ಲ. ಸರಳವಾಗಿ ಹೇಳಬೇಕಾದರೆ, ಅವಳಿಗೆ ಸೊಲೊಮೋನನಲ್ಲಿ ಪ್ರಣಯಾತ್ಮಕ ಆಸಕ್ತಿಯಿರಲಿಲ್ಲ. ಏಕೆಂದರೆ ಅವಳು ಒಬ್ಬ ದೀನನಾದ ಕುರುಬನನ್ನು ಪ್ರೀತಿಸುತ್ತಿದ್ದಳು.

ಇಂದು ಮದುವೆಯಾಗಲು ಯೋಚಿಸುತ್ತಿರುವವರಿಗೆ ಇದು ಒಂದು ಒಳ್ಳೆಯ ಪಾಠವನ್ನು ಕಲಿಸುತ್ತದೆ: ಕಣ್ಣಿಗೆ ಬಿದ್ದವರನ್ನೆಲ್ಲಾ ನೀವು ಸುಮ್ಮನೆ ಪ್ರೀತಿಸಲು ಸಾಧ್ಯವಿಲ್ಲ. ಆದುದರಿಂದ, ಒಬ್ಬ ವ್ಯಕ್ತಿಯೊಂದಿಗೆ ಸ್ವಲ್ಪಕಾಲ ಪ್ರಣಯಾಚರಣೆ ನಡೆಸಿದ ನಂತರ, ತಾನು ಅವನಲ್ಲಿ ಅನುರಕ್ತಳಾಗಿಲ್ಲ ಎಂಬುದನ್ನು ಒಬ್ಬ ಯುವತಿಯು ಕಂಡುಕೊಳ್ಳಬಹುದು. ಅವಳ ಅನಿಸಿಕೆಗಳು ಆ ವ್ಯಕ್ತಿಯ ನಡವಳಿಕೆಯಲ್ಲಿ ಕಂಡುಬರುವ ಕೆಲವು ಗಮನಾರ್ಹ ಕೊರತೆಗಳ ಮೇಲೆ ಆಧಾರಿತವಾಗಿರಬಹುದು. ಅಥವಾ ಅವನೆಡೆಗೆ ಇವಳು ಆಕರ್ಷಿಸಲ್ಪಡದೆಯೂ ಇರಬಹುದು. ಇಂತಹ ಅನಿಸಿಕೆಗಳನ್ನು ಅಲಕ್ಷಿಸುವುದು ಮೂರ್ಖತನವಾಗಿರುವುದು. ಕೇವಲ ಈ ಅನಿಸಿಕೆಗಳನ್ನು ಅಲಕ್ಷಿಸುವುದರಿಂದ ಅವು ಹೋಗಿಬಿಡುವುದಿಲ್ಲ. * ತಾನು ಪ್ರಣಯಾಚರಣೆ ನಡೆಸುತ್ತಿದ್ದ ಒಬ್ಬ ಯುವಕನ ಬಗ್ಗೆ ಟಮಾರ ಹೇಳಿದ್ದು: “ನನ್ನ ಮನಸ್ಸಿನಲ್ಲಿ ಅವನ ಕುರಿತು ಅನೇಕ ಸಂದೇಹಗಳಿದ್ದವು. ಕೇವಲ ಚಿಕ್ಕಪುಟ್ಟ ಸಂದೇಹಗಳಲ್ಲ, ಬದಲಾಗಿ ನಾನು ಅವನೊಂದಿಗಿದ್ದಾಗ ಕಳವಳ ಹಾಗೂ ಚಿಂತೆಗೊಳಪಡಿಸುವಷ್ಟರ ಮಟ್ಟಿಗಿನ ದೊಡ್ಡ ಸಂದೇಹಗಳು ನನಗಿದ್ದವು.” ತದನಂತರ, ಈ ಎಲ್ಲ ಸಂದೇಹಗಳಿಂದಾಗಿ ತಮ್ಮ ಸಂಬಂಧವನ್ನು ಕೊನೆಗಾಣಿಸುವುದೇ ಉತ್ತಮವಾದದ್ದೆಂದು ಅವಳು ಮನಗಂಡಳು.

ಇಲ್ಲ ಎಂದು ಹೇಳುವುದು ಯಾಕೆ ಕಷ್ಟಕರವಾಗಿದೆ?

ಒಬ್ಬ ಯುವಕನಿಗೆ ಇಲ್ಲ ಎಂದು ಹೇಳುವುದು ಸುಲಭವೆಂದನಿಸಬಹುದಾದರೂ, ಅದನ್ನು ನೇರವಾಗಿ ಹೇಳುವುದೇ ಕಷ್ಟಕರ. ಆರಂಭದಲ್ಲಿ ತಿಳಿಸಿದ ಎಲಿಸಬೆತಳಂತೆ, ಅವನ ಮನನೋಯಿಸುವುದರ ಕುರಿತು ನೀವು ಚಿಂತಿಸುತ್ತಿರಬಹುದು. ನಾವು ಬೇರೆಯವರ ಭಾವನೆಗಳ ವಿಷಯದಲ್ಲಿ ಚಿಂತೆಯುಳ್ಳವರಾಗಿರಬೇಕು ಎಂಬುದು ನಿಜ. ‘ಕನಿಕರ ಎಂಬ ಸದ್ಗುಣವನ್ನು ಧರಿಸಿಕೊಳ್ಳುವಂತೆ’ ಮತ್ತು ಬೇರೆಯವರು ನಮ್ಮೊಂದಿಗೆ ಹೇಗೆ ವ್ಯವಹರಿಸಬೇಕೆಂದು ನಾವು ಬಯಸುತ್ತೇವೋ ಹಾಗೆಯೇ ನಾವು ಅವರೊಂದಿಗೆ ವ್ಯವಹರಿಸುವಂತೆ ಬೈಬಲು ಕ್ರೈಸ್ತರನ್ನು ಪ್ರೋತ್ಸಾಹಿಸುತ್ತದೆ. (ಕೊಲೊಸ್ಸೆ 3:​12; ಮತ್ತಾಯ 7:​12) ಆದರೂ, ನೀವು ಆ ಯುವಕನನ್ನು ಆಶಾಭಂಗಪಡಿಸಿ ಅವನ ಮನಸ್ಸಿಗೆ ನೋವನ್ನು ಉಂಟುಮಾಡಬಾರದೆಂಬ ಕಾರಣಕ್ಕಾಗಿ, ಹೊರತೋರಿಕೆಗೆ ಅವನೊಂದಿಗೆ ಸ್ನೇಹವನ್ನು ಮುಂದುವರಿಸುತ್ತಿರಬೇಕು ಎಂಬುದು ಇದರ ಅರ್ಥವೋ? ಎಂದಾದರೊಂದು ದಿನ ನಿಮ್ಮ ಮನಸ್ಸಿನಲ್ಲಿ ಏನಿದೆಯೆಂಬುದನ್ನು ಅವನು ಕಂಡುಕೊಳ್ಳುವನು. ಮತ್ತು ನೀವು ಪ್ರಾಮಾಣಿಕರಾಗಿರದ ಕಾರಣ ಹಾಗೂ ನಿಮ್ಮ ನಿಜವಾದ ಅನಿಸಿಕೆಗಳನ್ನು ತಿಳಿಸಲು ತಡಮಾಡಿದ್ದರಿಂದ ಅವನ ನೋವು ಹೆಚ್ಚುವುದೇ ಹೊರತು ಕಡಿಮೆಯಾಗದು. ನೀವು ಅವನ ಮನಸ್ಸನ್ನು ನೋಯಿಸಲು ಬಯಸದ ಕಾರಣ ಅವನನ್ನು ಮದುವೆಮಾಡಿಕೊಳ್ಳುವುದು ಪರಿಸ್ಥಿತಿಯನ್ನು ಇನ್ನೂ ಹದಗೆಡಿಸುವುದು. ಕನಿಕರವೆಂಬ ಅಸ್ತಿವಾರದ ಮೇಲೆ ಕಟ್ಟಲ್ಪಡುವ ಮದುವೆ ದುರ್ಬಲವಾಗಿರುತ್ತದೆ.

ಬಹುಶಃ, ‘ನಾನು ಇವನನ್ನು ಮದುವೆಯಾಗಲಿಲ್ಲವೆಂದರೆ ನನಗೆ ಮದುವೆಯಾಗಲು ಇನ್ನೊಂದು ಅವಕಾಶ ಸಿಗುವುದೋ ಇಲ್ಲವೋ’ ಎಂಬ ಅನಿಸಿಕೆಯೊಂದಿಗೆ ನೀವು ಹೋರಾಡುತ್ತಿರಬಹುದು. “‘ನಾನು ಇಷ್ಟಪಡುವವನು’ ಅವನಲ್ಲ, ಆದರೆ ನನ್ನನ್ನು ಮದುವೆಯಾಗಲು ಅವನಾದರೂ ಇದ್ದಾನಲ್ಲ ಮತ್ತು ನಿಜವಾಗಿಯೂ ನಾನು ಒಂಟಿಯಾಗಿರಲು ಬಯಸುವುದಿಲ್ಲ,” ಎಂದು ಒಬ್ಬ ಹುಡುಗಿ ಯೋಚಿಸಬಹುದು, ಎಂಬುದನ್ನು ಟೀನ್‌ ಪತ್ರಿಕೆಯ ಒಂದು ಲೇಖನವು ಹೇಳಿತು. ಒಬ್ಬರ ಸಾಹಚರ್ಯಕ್ಕಾಗಿ ಹಾತೊರೆಯುವ ಬಯಕೆ ತೀವ್ರವಾಗಿರುತ್ತದೆ ಎಂಬುದು ಒಪ್ಪತಕ್ಕ ವಿಷಯವೇ. ಆದರೂ, ಈ ಬಯಕೆಯನ್ನು ಸರಿಯಾದ ರೀತಿಯಲ್ಲಿ ಪೂರೈಸಲಿಕ್ಕಾಗಿ, ಕೈಗೆ ಸಿಕ್ಕ ಯಾರನ್ನೇ ಆಗಲಿ ಸಂಗಾತಿಯಾಗಿ ಮಾಡಿಕೊಳ್ಳಬೇಕು ಎಂಬುದು ಇದರ ಅರ್ಥವಲ್ಲ. ನೀವು ನಿಜವಾಗಿಯೂ ಪ್ರೀತಿಸುವಂಥ ಹಾಗೂ ವಿವಾಹದ ಶಾಸ್ತ್ರೀಯ ಜವಾಬ್ದಾರಿಗಳನ್ನು ನೆರವೇರಿಸಲು ಶಕ್ತನಾಗಿರುವಂಥ ಒಬ್ಬ ವ್ಯಕ್ತಿಯನ್ನು ಕಂಡುಕೊಳ್ಳುವುದು ಇದರಲ್ಲಿ ಒಳಗೂಡಿದೆ. (ಎಫೆಸ 5:​33) ಹೀಗಿರುವುದರಿಂದ, ಒಬ್ಬ ಸಂಗಾತಿಗಾಗಿ ಆತುರದಿಂದ ತೀರ್ಮಾನ ಮಾಡಬೇಡಿ! ಅವಸರದಿಂದ ಮದುವೆಯಾದ ಎಷ್ಟೋ ಜನರು ಈಗ ವ್ಯಥೆಪಡುತ್ತಿದ್ದಾರೆ.

ಕೊನೆಯದಾಗಿ, ಕೆಲವರು ಒಬ್ಬ ಯುವಕನಲ್ಲಿ ಗಂಭೀರವಾದ ನ್ಯೂನತೆಗಳಿವೆ ಎಂಬುದನ್ನು ತಿಳಿದುಕೊಂಡರೂ ಅವನೊಂದಿಗೆ ಪ್ರಣಯಾಚರಣೆ ನಡೆಸುವುದನ್ನು ಮುಂದುವರಿಸಬಹುದು. ಅವರು ತರ್ಕಿಸುವುದು, ‘ನಾನು ಅವನಿಗೆ ಇನ್ನೂ ಸ್ವಲ್ಪ ಸಮಯ ಕೊಟ್ಟರೆ ಅವನು ಬದಲಾಗಬಹುದು.’ ಇದು ಯೋಗ್ಯ ದೃಷ್ಟಿಕೋನವಾಗಿದೆಯೋ? ಏನೇ ಆದರೂ, ಕೆಟ್ಟ ಪ್ರವೃತ್ತಿಗಳು ಹಾಗೂ ಹವ್ಯಾಸಗಳು ಆಳವಾಗಿ ಬೇರೂರಿರುತ್ತವೆ ಮತ್ತು ಇವುಗಳನ್ನು ಬದಲಾಯಿಸುವುದು ತುಂಬ ಕಷ್ಟ. ಒಂದುವೇಳೆ ಅವನು ಇದ್ದಕ್ಕಿದ್ದಂತೆ ಬದಲಾವಣೆಗಳನ್ನು ಮಾಡಬಹುದು, ಆದರೆ ಇಂತಹ ಬದಲಾವಣೆಗಳು ಶಾಶ್ವತವಾಗಿರುವವು ಎಂದು ನೀವು ಹೇಗೆ ನಂಬಸಾಧ್ಯವಿದೆ? ಇಂತಹ ಒಂದು ಪರಿಸ್ಥಿತಿಯಲ್ಲಿ ಕರನ್‌ ಎಂಬ ಹೆಸರಿನ ಯುವತಿಯು ಏನು ಮಾಡಿದಳು ಎಂಬುದನ್ನು ನೋಡಿ. ತನ್ನ ಹಾಗೂ ತಾನು ಪ್ರಣಯಾಚರಣೆ ನಡೆಸುತ್ತಿದ್ದ ಒಬ್ಬ ಯುವಕನ ಗುರಿಗಳು ತೀರ ಭಿನ್ನವಾಗಿವೆ ಎಂಬುದನ್ನು ಅರಿತ ಕರನ್‌ ಜಾಣತನದಿಂದ ಆ ಸಂಬಂಧವನ್ನು ಕೊನೆಗಾಣಿಸಲು ತೀರ್ಮಾನಿಸಿದಳು. “ಹೀಗೆ ಮಾಡುವುದು ತುಂಬ ಕಷ್ಟಕರವಾಗಿತ್ತು, ಏಕೆಂದರೆ ನಾನು ಅವನಿಂದ ಆಕರ್ಷಿಸಲ್ಪಟ್ಟಿದ್ದೆ. ಆದರೆ ನಾನು ಸರಿಯಾದದ್ದನ್ನೇ ಮಾಡುತ್ತಿದ್ದೇನೆ ಎಂಬುದು ನನಗೆ ಗೊತ್ತಿತ್ತು” ಎಂದು ಅವಳು ಒಪ್ಪಿಕೊಳ್ಳುತ್ತಾಳೆ.

ಹ್ಯಾಂಡಲ್‌ ವಿತ್‌ ಕೇರ್‌

ಒಬ್ಬನಿಗೆ ಇಲ್ಲ ಎಂದು ಹೇಳುವುದು ಕಷ್ಟಕರವಾದದ್ದೇ ಎಂಬುದು ಒಪ್ಪತಕ್ಕ ವಿಷಯವೇ. ನಾಜೂಕಾದ ವಸ್ತುಗಳಿರುವ ಒಂದು ಪೆಟ್ಟಿಗೆಯನ್ನು ಹೇಗೆ ಜೋಪಾನವಾಗಿ ನೋಡಿಕೊಳ್ಳುತ್ತಾರೋ, ಹಾಗೆಯೇ ಇಂತಹ ಪರಿಸ್ಥಿತಿಯನ್ನು ಕೂಡ ಜಾಗರೂಕತೆಯಿಂದ ನಿಭಾಯಿಸಬೇಕು. ಉಪಯುಕ್ತಕರವಾಗಿರಬಹುದಾದ ಕೆಲವು ಸಲಹೆಗಳು ಇಲ್ಲಿ ಕೊಡಲ್ಪಟ್ಟಿವೆ.

ಈ ವಿಚಾರವನ್ನು ನಿಮ್ಮ ಹೆತ್ತವರೊಂದಿಗೋ ಅಥವಾ ನಿಮ್ಮ ಸಭೆಯಲ್ಲಿರುವ ಒಬ್ಬ ಪ್ರೌಢ ಕ್ರೈಸ್ತರೊಂದಿಗೋ ಚರ್ಚಿಸಿರಿ. ನೀವು ನಿರೀಕ್ಷಿಸುವಂತಹ ವಿಷಯಗಳು ಸ್ವಲ್ಪ ಮಟ್ಟಿಗೆ ಅವಾಸ್ತವಿಕವಾಗಿವೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುವುದರಲ್ಲಿ ಅವರು ಸಹಾಯಮಾಡಬಲ್ಲರು.

ಸ್ಪಷ್ಟವಾಗಿ ಹಾಗೂ ಮುಚ್ಚುಮರೆಯಿಲ್ಲದೆ ಮಾತಾಡಿರಿ. ನಿಮ್ಮ ಅನಿಸಿಕೆಗಳ ಕುರಿತಾಗಿ ಅವನ ಮನಸ್ಸಿನಲ್ಲಿ ಯಾವುದೇ ರೀತಿಯ ಸಂದೇಹಗಳು ಏಳುವಂತೆ ಬಿಡಬೇಡಿ. ನಿಮ್ಮೊಂದಿಗೆ ಮದುವೆಯ ಪ್ರಸ್ತಾಪ ಮಾಡುವ ವ್ಯಕ್ತಿಗೆ ನೀವು, “ನನಗೆ ಇಷ್ಟವಿಲ್ಲ” ಎಂದು ಹೇಳುವಾಗ, ಅವರು ನಿಮ್ಮ ತಂಟೆಗೆ ಬರಲಾರರು. ಅವಶ್ಯವಿದ್ದರೆ, ನಿಮ್ಮ ನಿರಾಕರಣೆಯನ್ನು ಬಲವಾದ ಶಬ್ದಗಳಲ್ಲಿ ತಿಳಿಸಿ; ಅಂದರೆ, “ನನ್ನನ್ನು ಕ್ಷಮಿಸಿಬಿಡಿ, ಯಾಕೆಂದರೆ ನನಗೆ ನಿಜವಾಗಿಯೂ ನಿಮ್ಮಲ್ಲಿ ಆಸಕ್ತಿಯಿಲ್ಲ” ಎಂದು ಹೇಳಿ. ಅವನು ಇನ್ನು ಸ್ವಲ್ಪ ಪಟ್ಟುಹಿಡಿಯುವುದಾದರೆ, ನೀವು ನಿಮ್ಮ ತೀರ್ಮಾನವನ್ನು ಬದಲಾಯಿಸಬಹುದು ಎಂಬ ಅನಿಸಿಕೆಯನ್ನು ಕೊಡದ ಹಾಗೆ ಎಚ್ಚರಿಕೆ ವಹಿಸಿ. ನಿಮಗೆ ಅವನೆಡೆಗೆ ಯಾವುದೇ ರೀತಿಯ ಪ್ರಣಯಾತ್ಮಕ ಭಾವನೆಗಳಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ. ಹೀಗೆ ಮಾಡುವುದರಿಂದ, ಯಾವುದೇ ರೀತಿಯ ಗೊಂದಲವನ್ನು ಅನುಭವಿಸಬೇಕಾಗಿರುವುದಿಲ್ಲ, ಹಾಗೂ ಅವನು ಬೇಗನೆ ತನ್ನ ಆಶಾಭಂಗವನ್ನು ಮರೆಯಲು ಸಾಧ್ಯವಾಗುತ್ತದೆ.

ಪ್ರಾಮಾಣಿಕತೆಯೊಂದಿಗೆ ಜಾಣತನವನ್ನು ಸರಿದೂಗಿಸಿ. “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು” ಎಂದು ಜ್ಞಾನೋಕ್ತಿ 12:18 ತಿಳಿಸುತ್ತದೆ. ಮುಚ್ಚುಮರೆಯಿಲ್ಲದೆ ಮಾತಾಡುವುದು ಪ್ರಾಮುಖ್ಯವಾಗಿರುವುದಾದರೂ, ನಮ್ಮ ಸಂಭಾಷಣೆ ಯಾವಾಗಲೂ “ಇಂಪಾಗಿಯೂ ರಸವತ್ತಾಗಿಯೂ” ಇರಬೇಕೆಂದು ಬೈಬಲ್‌ ಹೇಳುತ್ತದೆ.​—⁠ಕೊಲೊಸ್ಸೆ 4:⁠6.

ನಿಮ್ಮ ತೀರ್ಮಾನಕ್ಕೆ ಅಂಟಿಕೊಂಡಿರಿ. ಸದುದ್ದೇಶವುಳ್ಳ ಸ್ನೇಹಿತರಿಗೆ, ನಿಮ್ಮ ತೀರ್ಮಾನದ ಹಿಂದಿರುವ ಕಾರಣಗಳ ಕುರಿತು ಸ್ವಲ್ಪವೇ ತಿಳಿದಿರುವುದರಿಂದ, ನೀವು ಕೊನೆಗೊಳಿಸಿದ ಸಂಬಂಧಕ್ಕೆ ಇನ್ನೊಂದು ಅವಕಾಶಕೊಡುವಂತೆ ಒತ್ತಾಯಿಸಬಹುದು. ಆದರೆ ಅಂತ್ಯದ ವರೆಗೂ ನಿಮ್ಮ ತೀರ್ಮಾನದಂತೆ ಜೀವಿಸಬೇಕಾಗಿರುವುದು ನೀವು, ಸದುದ್ದೇಶವುಳ್ಳ ನಿಮ್ಮ ಸ್ನೇಹಿತರಲ್ಲ.

ನಿಮ್ಮ ಮಾತುಗಳಿಗೆ ತಕ್ಕಂತೆ ನಡೆದುಕೊಳ್ಳಿ. ಈ ಮುಂಚೆ ನೀವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದಿರಬಹುದು ಮತ್ತು ಮುಂದೆಯೂ ನಿಮ್ಮ ಸ್ನೇಹವು ಹೀಗೆಯೇ ಮುಂದುವರಿಯಬೇಕು ಎಂದು ಬಯಸುವುದು ಸ್ವಾಭಾವಿಕವಾದದ್ದೇ. ಆದರೆ ಸಾಮಾನ್ಯವಾಗಿ ಅದು ಪ್ರಾಯೋಗಿಕವೂ ಅಲ್ಲ ಅಥವಾ ಹಾಗಾಗಲು ಸಾಧ್ಯವೂ ಇಲ್ಲ. ನಿಮಗಾಗಿರುವ ಅವನ ಭಾವನೆಗಳು ಪ್ರಣಯಾತ್ಮಕವಾಗಿ ಮಾರ್ಪಟ್ಟಿವೆ. ಅವನು ಅಂತಹ ಭಾವನೆಗಳನ್ನು ಬದಿಗೊತ್ತಿ, ಏನೂ ಸಂಭವಿಸಲಿಲ್ಲ ಎಂಬಂತೆ ನಡೆದುಕೊಳ್ಳಸಾಧ್ಯವಿದೆ ಎಂದು ನೆನಸುವುದು ವಾಸ್ತವಿಕವಾದದ್ದಾಗಿದೆಯೋ? ಆದುದರಿಂದ, ನೀವಿಬ್ಬರೂ ಪರಸ್ಪರ ಸ್ನೇಹಭಾವದಿಂದ ವರ್ತಿಸುವುದು ಒಳ್ಳೆಯದಾಗಿರುವುದಾದರೂ, ಯಾವಾಗಲೂ ಫೋನಿನಲ್ಲಿ ಮಾತಾಡುವುದು ಅಥವಾ ಸಾಮಾಜಿಕ ಸಂದರ್ಭಗಳಲ್ಲಿ ಒಟ್ಟಿಗೆ ತುಂಬ ಸಮಯವನ್ನು ಕಳೆಯುವುದು, ಅವನ ಸಂಕಟವನ್ನು ಇನ್ನೂ ಹೆಚ್ಚಿಸುವುದು. ಅಷ್ಟುಮಾತ್ರವಲ್ಲ, ಅದು ನೀವು ಅವನ ಭಾವನೆಗಳೊಂದಿಗೆ ಆಟವಾಡುವುದಕ್ಕೆ ಸಮಾನವಾಗಿರಬಹುದು ಮತ್ತು ನೀವು ಹೀಗೆ ಮಾಡುವುದು ಖಂಡಿತವಾಗಿಯೂ ತಪ್ಪಾಗಿದೆ.

ಒಬ್ಬರಿಗೊಬ್ಬರು ‘ಸತ್ಯವನ್ನೇ ಆಡಿರಿ’ ಎಂದು ಅಪೊಸ್ತಲ ಪೌಲನು ಪ್ರೋತ್ಸಾಹಿಸಿದನು. (ಎಫೆಸ 4:​25) ಹೀಗೆ ಮಾಡುವುದು ಕಷ್ಟಕರವಾಗಿರಬಹುದು, ಆದರೆ ನೀವಿಬ್ಬರೂ ನಿಮ್ಮ ನಿಮ್ಮ ಜೀವಿತವನ್ನು ಮುಂದುವರಿಸಲು ಇದು ನಿಮಗೆ ಸಹಾಯಮಾಡಬಹುದು.

(g01 3/22)

[ಪಾದಟಿಪ್ಪಣಿಗಳು]

^ ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

^ ಈ ಲೇಖನವು ಯುವತಿಯರನ್ನು ನಿರ್ದೇಶಿಸಿ ಮಾತಾಡುತ್ತಿರುವುದಾದರೂ, ಇದರಲ್ಲಿರುವ ತತ್ತ್ವಗಳು ಯುವಕರಿಗೂ ಅನ್ವಯಿಸುತ್ತವೆ.

^ ತುಂಬ ಎಳೆಯ ಪ್ರಾಯದಲ್ಲೇ ಪ್ರೀತಿಸುವುದರ ಅಪಾಯಗಳ ಕುರಿತು ನಮ್ಮ 2001, ಜನವರಿ 22ರ (ಇಂಗ್ಲಿಷ್‌) ಸಂಚಿಕೆಯಲ್ಲಿ ಚರ್ಚಿಸಲಾಗಿತ್ತು.

^ 1988, ಜುಲೈ 22ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯಲ್ಲಿ ಬಂದಿರುವ “ಯುವ ಜನರು ಪ್ರಶ್ನಿಸುವುದು . . . ನಾವು ನಮ್ಮ ಸಂಬಂಧವನ್ನು ಕೊನೆಗಾಣಿಸಬೇಕೋ?” ಎಂಬ ಲೇಖನವನ್ನು ನೋಡಿ.

[ಪುಟ 19ರಲ್ಲಿರುವ ಚಿತ್ರಗಳು]

ಕಣ್ಣಿಗೆ ಬಿದ್ದವರನ್ನೆಲ್ಲಾ ನೀವು ಸುಮ್ಮನೆ ಪ್ರೀತಿಸಲು ಸಾಧ್ಯವಿಲ್ಲ

[ಪುಟ 20ರಲ್ಲಿರುವ ಚಿತ್ರಗಳು]

ನಿಮ್ಮ ಅನಿಸಿಕೆಗಳನ್ನು ಸ್ಪಷ್ಟವಾಗಿಯೂ ಮುಚ್ಚುಮರೆಯಿಲ್ಲದೆಯೂ ವ್ಯಕ್ತಪಡಿಸಿ