ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ನೋವಿಲ್ಲದ ಹೃದಯಾಘಾತ

ಎದೆಯಲ್ಲಿ ಹಿಂಡಿದಂತಹ ಅನುಭವವಾಗುವುದಾದರೆ, ಅದು ಹೃದಯಾಘಾತದ ಸಾಮಾನ್ಯ ಸೂಚನೆಯಾಗಿದೆ ಎಂಬುದು ಅಧಿಕಾಂಶ ಜನರಿಗೆ ಗೊತ್ತಿದೆ. ಆದರೆ, “ಮೂರನೇ ಒಂದು ಭಾಗದಷ್ಟು ರೋಗಿಗಳಿಗೆ ಹೃದಯಾಘಾತದ ಸಮಯದಲ್ಲಿ ಯಾವುದೇ ನೋವಿನ ಅನಿಸಿಕೆಯಾಗುವುದಿಲ್ಲ” ಎಂಬುದು ಕೆಲವೇ ಮಂದಿಗೆ ತಿಳಿದಿದೆ ಎಂದು ಟೈಮ್‌ ಪತ್ರಿಕೆಯು ವರದಿಸುತ್ತದೆ. ದ ಜರ್ನಲ್‌ ಆಫ್‌ ದಿ ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಷನ್‌ನಲ್ಲಿ ಪ್ರಕಾಶಿಸಲ್ಪಟ್ಟ ಒಂದು ಅಧ್ಯಯನವು ಹೇಳುವುದು: “ಎದೆ ನೋವನ್ನು ಅನುಭವಿಸದಿದ್ದರೂ ಹೃದಯಾಘಾತಕ್ಕೆ ಒಳಗಾಗುವಂತಹ ವ್ಯಕ್ತಿಗಳು, ಆಸ್ಪತ್ರೆಗೆ ಹೋಗುವುದನ್ನು ಸರಾಸರಿ ಎರಡು ತಾಸುಗಳಷ್ಟು ಮುಂದೂಡುವುದರ ಕಾರಣವನ್ನು” ವಿವರಿಸಲು ಅದು ಸಹಾಯಮಾಡುತ್ತದೆ. ಆದರೂ, ಜೀವವನ್ನು ಉಳಿಸಸಾಧ್ಯವಿರುವಂತಹ ಯಾವುದೇ ರೀತಿಯ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸ್ವಲ್ಪ ತಡಮಾಡುವುದು ಕೂಡ ತುಂಬ ಅಪಾಯಕರವಾದದ್ದಾಗಿದೆ. ನೀವು ಏನನ್ನು ಗಮನಿಸುತ್ತಿರಬೇಕಾಗಿದೆ? “ಉಬ್ಬಸವು ಗಮನಿಸಸಾಧ್ಯವಿರುವ ಎರಡನೆಯ ಅತಿ ದೊಡ್ಡ ಎಚ್ಚರಿಕೆಯಾಗಿರಬಹುದು” ಎಂದು ಟೈಮ್‌ ಪತ್ರಿಕೆಯು ಹೇಳುತ್ತದೆ. ಕಂಡುಬರಸಾಧ್ಯವಿರುವ ಇನ್ನಿತರ ಸೂಚನೆಗಳಲ್ಲಿ, ಓಕರಿಕೆ, ತುಂಬ ಬೆವರುವಿಕೆ ಹಾಗೂ “ನೀವು ಆಚೆಈಚೆ ಸುತ್ತಾಡಿದರೆ ಅಥವಾ ಶಾರೀರಿಕವಾಗಿ ನಿಮ್ಮನ್ನು ದಣಿಸಿಕೊಳ್ಳುವುದಾದರೆ ಅಧಿಕಗೊಳ್ಳುವಂಥ ಯಾವುದೇ ರೀತಿಯ ‘ಎದೆಯುರಿ’” ಸಹ ಒಂದಾಗಿದೆ ಎಂದು ಆ ಲೇಖನವು ಹೇಳುತ್ತದೆ. (g01 1/22)

ಅಂಟಿಕೊಳ್ಳುವಂಥ ಕಾಲ್ಬೆರಳುಗಳು

ಮನೆಯ ಹಲ್ಲಿಗಳು, ಗಾಜಿನಷ್ಟು ನುಣುಪಾದ ಮೇಲ್ಮೈಯಿರುವ ಮನೆಯ ಒಳಮಾಳಿಗೆ (ಸೀಲಿಂಗ್‌)ಯ ಮೇಲೆ ಸುಲಭವಾಗಿ ಹರಿದಾಡಬಲ್ಲವು. ಅವು ಹೇಗೆ ಇಷ್ಟು ಸಲೀಸಾಗಿ ಹರಿದಾಡಬಲ್ಲವು? ದಶಕಗಳಿಂದ ಈ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿರುವ ವಿಜ್ಞಾನಿಗಳು, ಈಗ ತಮ್ಮ ಬಳಿ ಅದಕ್ಕೆ ವಿವರಣೆ ಇದೆಯೆಂದು ನೆನಸುತ್ತಾರೆ. ವಿಜ್ಞಾನಿಗಳು ಹಾಗೂ ಇಂಜಿನಿಯರ್‌ಗಳ ತಂಡದ ಅಭಿಪ್ರಾಯವೇನೆಂದರೆ, “ಈ ಹಲ್ಲಿಗಳು ತಮ್ಮ ಪಾದಗಳ ಮೇಲಿರುವ ಚಿಕ್ಕ ಚಿಕ್ಕ ರೋಮಗಳನ್ನು (ಅಥವಾ ಸೀಟಿಯನ್ನು) ಒಂದು ವಸ್ತುವಿನ ಮೇಲ್ಮೈಯ ಮೇಲೆ ಉಜ್ಜಿದಾಗ, ಅತ್ಯಾಶ್ಚರ್ಯಕರವಾದ ರೀತಿಯಲ್ಲಿ ಅಂಟಿನ ಶಕ್ತಿಯು ಉಂಟಾಗುತ್ತದೆ. ಅಂತಹ ಪ್ರತಿಯೊಂದು ರೋಮದಿಂದ ಇನ್ನೂ ಸೂಕ್ಷ್ಮವಾದ ರೋಮಗಳು ಹೊರಡುತ್ತವೆ. ಇವುಗಳನ್ನು ಸ್ಪ್ಯಾಟುಲೆ ಎಂದು ಕರೆಯಲಾಗುತ್ತದೆ. ಹಲ್ಲಿಯು ಒಂದು ಮೇಲ್ಮೈಯನ್ನು ತನ್ನ ಪಾದದಿಂದ ಹಿಡಿದುಕೊಂಡಾಗ, ಅದರ ಅಂಗಾಲಿನಲ್ಲಿರುವ ಸುಮಾರು ಒಂದು ಶತಕೋಟಿ ಸ್ಪ್ಯಾಟುಲೆಗಳು ವಸ್ತುವಿನ ಮೇಲ್ಮೈಗೆ ಭದ್ರವಾಗಿ ಅಂಟಿಕೊಳ್ಳುತ್ತವೆ; ಇದರಲ್ಲಿ ಅಣುಗಳ ನಡುವಣ (ಇಂಟರ್‌ಮಾಲಿಕ್ಯುಲರ್‌) ಶಕ್ತಿಯು . . . ಒಳಗೂಡಿರಬಹುದು” ಎಂದು ಸೈಯನ್ಸ್‌ ನ್ಯೂಸ್‌ ಪತ್ರಿಕೆಯು ವರದಿಸುತ್ತದೆ. ಸಂಶೋಧಕರು ಇನ್ನೂ ಗಮನಿಸುವುದೇನೆಂದರೆ, ಹಲ್ಲಿಗಳು ತಮ್ಮ ಕಾಲ್ಬೆರಳುಗಳನ್ನು ಎಷ್ಟರ ಮಟ್ಟಿಗೆ ಅಂಟಿಸುತ್ತವೆಂದರೆ, “ಅವು ವಸ್ತುವಿನ ಮೇಲ್ಮೈಯ ವಿರುದ್ಧ ಚಿಕ್ಕ ರೋಮಗಳನ್ನು ಬಲವಾಗಿ ಒತ್ತುತ್ತವೆ ಮಾತ್ರವಲ್ಲ, ಅದಕ್ಕೆ ಸಮಾಂತರವಾಗಿ ಅವುಗಳನ್ನು ಒಳಗೆಳೆದುಕೊಳ್ಳುತ್ತದೆ ಸಹ.” “ಒತ್ತುವಿಕೆಗೆ ಹೋಲಿಸುವಾಗ” ಈ ಕ್ರಿಯೆಯು “ಪ್ರತಿಯೊಂದು ರೋಮದ ಹಿಡಿತವನ್ನು 10 ಪಟ್ಟು” ಅಧಿಕಗೊಳಿಸುತ್ತದೆ ಎಂದು ಆ ಪತ್ರಿಕೆಯು ಹೇಳುತ್ತದೆ. (g01 1/22)

ಬ್ರಿಟನ್‌ನವರು ಅತಿ ಹೆಚ್ಚು ಟಿವಿ ನೋಡುತ್ತಾರೆ

“ಬ್ರಿಟನ್‌ನಲ್ಲಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ಮಂದಿ, ಒಂದು ವಾರ ಕೆಲಸಕ್ಕೆ ಎಷ್ಟು ಸಮಯವನ್ನು ಕಳೆಯುತ್ತಾರೋ ಅಷ್ಟೇ ಸಮಯವನ್ನು ಟಿವಿ ನೋಡುವುದರಲ್ಲಿ ಕಳೆಯುತ್ತಾರೆ” ಎಂದು ದಿ ಇಂಡಿಪೆಂಡೆಂಟ್‌ ಎಂಬ ಲಂಡನ್‌ನ ವಾರ್ತಾಪತ್ರಿಕೆಯು ವರದಿಸುತ್ತದೆ. ಸಂಶೋಧಕರಿಗನುಸಾರ, ಬ್ರಿಟನ್‌ನ ಸರಾಸರಿ ಜನರು ಪ್ರತಿ ವಾರ ಟಿವಿ ನೋಡುವುದರಲ್ಲಿ 25 ತಾಸುಗಳನ್ನು ಕಳೆಯುತ್ತಾರೆ, ಆದರೆ 21 ಪ್ರತಿಶತ ಮಂದಿ 36 ತಾಸುಗಳಿಗಿಂತಲೂ ಹೆಚ್ಚು ಸಮಯವನ್ನು ಟಿವಿ ನೋಡುವುದರಲ್ಲಿ ಕಳೆಯುತ್ತಾರೆ. “ಕಂಡುಹಿಡಿತಗಳು ರುಜುಪಡಿಸುವಂತೆ, ಕೇವಲ ಯುವ ಜನರು ಮಾತ್ರ ಇಷ್ಟು ವಿಪರೀತ ಮಟ್ಟದಲ್ಲಿ ಟಿವಿಯನ್ನು ನೋಡುತ್ತಿರಲಿಲ್ಲ, ಬದಲಾಗಿ ಇದರಲ್ಲಿ ಪುರುಷರು, ಸ್ತ್ರೀಯರು ಹಾಗೂ ವೃದ್ಧರು ಸಹ ಸೇರಿದ್ದರು” ಎಂದು ವಾರ್ತಾಪತ್ರಿಕೆಯು ಹೇಳುತ್ತದೆ. ಒಂದು ವಾರಕ್ಕೆ ಸುಮಾರು 30 ತಾಸುಗಳಷ್ಟು ಟಿವಿ ನೋಡುವ ರೂಢಿಯಿರುವ ಒಂದು ಕುಟುಂಬವು ಹೇಳಿದ್ದೇನೆಂದರೆ, ಟೆಲಿವಿಷನ್‌ ನಮಗೆ “ವಾಸ್ತವಿಕತೆಯಿಂದ ದೂರಹೋಗಲು ಅಗತ್ಯವಿರುವ” ಸಹಾಯವನ್ನು ಒದಗಿಸುತ್ತದೆ. ಆದರೂ, ವಿಪರೀತವಾಗಿ ಟಿವಿ ನೋಡುವ ಹವ್ಯಾಸಕ್ಕೆ ಖಂಡಿತವಾಗಿಯೂ ಬೆಲೆ ತೆರಲೇಬೇಕಾಗುತ್ತದೆ. 20 ದೇಶಗಳ ಕುರಿತಾದ ಒಂದು ಅಧ್ಯಯನದಲ್ಲಿ, ಯುನೈಟೆಡ್‌ ಕಿಂಗ್‌ಡಮ್‌ “ಅತಿ ಹೆಚ್ಚು ಟಿವಿ ನೋಡುವವರ ಪಟ್ಟಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿದೆ” ಎಂದು ಲಂಡನ್‌ನ ದ ಗಾರ್ಡಿಯನ್‌ ವೀಕ್ಲಿ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಆದರೂ, “ಸಾಕ್ಷರತೆಯ ಮೂರು ನಿರ್ಣಾಯಕ ಅಳತೆಗೋಲುಗಳಲ್ಲಿ ಬ್ರಿಟನ್‌ ತೀರ ಕೆಳಗಿನ ಸ್ಥಾನದಲ್ಲಿದೆ.” (g01 1/22)

ಚಿಕ್ಕ ಮಕ್ಕಳು ಹಾಗೂ ನಾಯಿಗಳು

ಮೆಕ್ಸಿಕೊ ನಗರದ ಎಲ್‌ ಯೂನೀವರ್ಸಾಲ್‌ ಎಂಬ ವಾರ್ತಾಪತ್ರಿಕೆಯಲ್ಲಿ ಬಂದ ವರದಿಗನುಸಾರ, ನಾಯಿಗಳು ಮಕ್ಕಳನ್ನು ಕಚ್ಚಸಾಧ್ಯವಿರುವುದರಿಂದ, ಯಾರೂ ಇಲ್ಲದಿರುವಾಗ ಚಿಕ್ಕ ಮಕ್ಕಳನ್ನು ನಾಯಿಯ ಬಳಿ ಬಿಟ್ಟುಹೋಗುವುದು ತುಂಬ ಅಪಾಯಕರವಾದದ್ದಾಗಿದೆ. “ಸಾಮಾನ್ಯವಾಗಿ ಮಕ್ಕಳು ಯಾವಾಗಲೂ ನಾಯಿಗಳನ್ನು ಕೆಣಕುತ್ತಾರೆ ಮತ್ತು ತಮ್ಮ ರಕ್ಷಣೆಗಾಗಿ ನಾಯಿಗಳು ಮಕ್ಕಳ ಮೇಲೆ ಆಕ್ರಮಣಮಾಡುತ್ತವೆ” ಎಂದು ಆ ವರದಿಯು ಹೇಳುತ್ತದೆ. ಕಳೆದ ಐದು ವರ್ಷಗಳಲ್ಲಿ ನಾಯಿ ಕಚ್ಚಿಸಿಕೊಂಡು ಬಂದ 426 ಮಕ್ಕಳಿಗೆ, ಮೆಕ್ಸಿಕೊದಲ್ಲಿರುವ ಒಂದು ಆಸ್ಪತ್ರೆಯು ಚಿಕಿತ್ಸೆ ನೀಡಿದೆ. ಈ ಮಕ್ಕಳಲ್ಲಿ ಸುಮಾರು 12 ಪ್ರತಿಶತ ಮಂದಿಗೆ ಶಾಶ್ವತವಾದ ಊನಗಳಾದವು ಅಥವಾ ಅವರು ವಿರೂಪಗೊಳಿಸಲ್ಪಟ್ಟರು. ಎಲ್ಲ ನಾಯಿಗಳ ವಿಷಯದಲ್ಲಿ ತಮ್ಮ ಮಕ್ಕಳಿಗೆ ಮೂಲಭೂತ ನಿಯಮಗಳನ್ನು ಕಲಿಸುವಂತೆ ಈ ವರದಿಯು ಹೆತ್ತವರನ್ನು ಉತ್ತೇಜಿಸಿತು: ನಾಯಿಗಳ ಆಟದ ವಸ್ತುಗಳು, ಮನೆ, ಹಾಗೂ ಅದರ ಊಟದ ಪಾತ್ರೆಗಳನ್ನು ಆದರದಿಂದ ನೋಡಿ; ನಾಯಿಯು ಆಹಾರವನ್ನು ತಿನ್ನುತ್ತಿರುವಾಗ ಅಥವಾ ಮಲಗಿರುವಾಗ ಅದರ ಬಳಿಗೆ ಹೋಗಬಾರದು; ಅದರ ಬಾಲವನ್ನು ಎಳೆಯಬಾರದು ಅಥವಾ ಅದರ ಮೇಲೆ ಹತ್ತಲು ಪ್ರಯತ್ನಿಸಬಾರದು. (g01 3/8)

ಸಾಕಷ್ಟು ನಿದ್ರಿಸುವುದು

“ನಾವು ಅಪಾಯಕರವಾದ ರೀತಿಯಲ್ಲಿ ನಿದ್ರೆಯಿಂದ ವಂಚಿತರಾಗಿರುವವರ ಸಮಾಜಕ್ಕೆ ಸೇರಿದವರಾಗಿದ್ದೇವೆ” ಎಂದು ಯೂನಿವರ್ಸಿಟಿ ಆಫ್‌ ಕೊಲಂಬಿಯಾದ ಮನಶ್ಶಾಸ್ತ್ರಜ್ಞರಾದ ಸ್ಟ್ಯಾನ್ಲಿ ಕೋರನ್‌ ಹೇಳುತ್ತಾರೆ. ತ್ರೀ ಮೈಲ್‌ ಐಲೆಂಡ್‌ನಲ್ಲಾದ ನ್ಯೂಕ್ಲಿಯರ್‌ ದುರ್ಘಟನೆ ಹಾಗೂ ಎಕ್ಸನ್‌ ವಾಲ್ಡೆಸ್‌ ತೈಲ ದುರಂತಕ್ಕೆ, ತೀರ ಕಡಿಮೆ ನಿದ್ರೆಯೇ ಒಂದು ಕಾರಣವಾಗಿತ್ತು. ತೂಕಡಿಕೆಯ ಕಾರಣದಿಂದ, ಪ್ರತಿ ವರ್ಷ ಉತ್ತರ ಅಮೆರಿಕದಲ್ಲಿ 1,00,000ಕ್ಕಿಂತಲೂ ಹೆಚ್ಚಿನ ಕಾರ್‌ ಅಪಘಾತಗಳಾಗುತ್ತವೆ ಎಂದು ಕೆನಡದ ಮಕ್ಲೀನ್ಸ್‌ ಪತ್ರಿಕೆಯು ವರದಿಸುತ್ತದೆ. ಸ್ಟ್ಯಾನ್‌ಫರ್ಡ್‌ ವಿಶ್ವವಿದ್ಯಾನಿಲಯದ ನಿದ್ರೆಯ ವಿಶೇಷಜ್ಞರಾಗಿರುವ ಡಾ. ವಿಲಿಯಮ್‌ ಡಮೆಂಟ್‌ ಎಚ್ಚರಿಕೆ ನೀಡುವುದು: “ತಮಗೆ ಎಷ್ಟು ನಿದ್ರೆಯ ಆವಶ್ಯಕತೆಯಿದೆ ಎಂಬುದನ್ನು ಜನರು ನಿಜವಾಗಿಯೂ ಅರ್ಥಮಾಡಿಕೊಳ್ಳುವುದಿಲ್ಲ.” ಚೆನ್ನಾಗಿ ನಿದ್ರಿಸಲಿಕ್ಕಾಗಿ ಸಂಶೋಧಕರು ಈ ಸಲಹೆಗಳನ್ನು ಕೊಡುತ್ತಾರೆ: ನಿಮ್ಮ ರಾತ್ರಿಯೂಟವನ್ನು ಮಲಗಲು ಹೋಗುವ ಕಡಿಮೆಪಕ್ಷ ಮೂರು ತಾಸುಗಳಿಗೆ ಮುಂಚೆ ಸೇವಿಸಿರಿ. ಪ್ರತಿ ದಿನ ಒಂದೇ ಸಮಯದಲ್ಲಿ ಮಲಗಿರಿ ಮತ್ತು ಅದೇ ಸಮಯಕ್ಕೆ ಏಳಿರಿ. ನಿಮ್ಮ ಮಲಗುವ ಕೋಣೆಯಲ್ಲಿ ಟಿವಿ ಅಥವಾ ಕಂಪ್ಯೂಟರನ್ನು ಇಡಬೇಡಿರಿ. ಕ್ಯಾಫೀನ್‌, ಮದ್ಯಸಾರ ಹಾಗೂ ಹೊಗೆಸೊಪ್ಪುಗಳನ್ನು ಸೇವಿಸಬೇಡಿ. ನಿಮ್ಮ ಪಾದಗಳನ್ನು ಬೆಚ್ಚಗಿಡಲಿಕ್ಕಾಗಿ ಮಲಗುವಾಗ ಕಾಲುಚೀಲ (ಸಾಕ್ಸ್‌)ಗಳನ್ನು ಹಾಕಿಕೊಳ್ಳಿರಿ. ಮಲಗುವ ಮೊದಲು ಬೆಚ್ಚಗಿನ ನೀರಿನಿಂದ ಸ್ನಾನಮಾಡಿರಿ. ದಿನಾಲೂ ವ್ಯಾಯಾಮ ಮಾಡಿರಿ; ಆದರೆ ಮಲಗುವ ಸ್ವಲ್ಪ ಸಮಯಕ್ಕೆ ಮುಂಚೆ ಮಾಡಬೇಡಿರಿ. ಕೊನೆಯದಾಗಿ, ಮಕ್ಲೀನ್ಸ್‌ ಪತ್ರಿಕೆಯು ಹೇಳುವುದು: “ನಿಮಗೆ ನಿದ್ರೆ ಬರದೆ ಇರುವಲ್ಲಿ, ಹಾಸಿಗೆಯಿಂದ ಎದ್ದು ಯಾವುದಾದರೊಂದು ಕೆಲಸವನ್ನು ಮಾಡುತ್ತಿರಿ. ನಿಮಗೆ ಆಯಾಸವೆನಿಸಿದಾಗ ಪುನಃ ಮಲಗಲು ಹೋಗಿ, ಆದರೆ ನೀವು ಪ್ರತಿ ದಿನ ಏಳುವಂಥ ಸಮಯದಲ್ಲೇ ಹಾಸಿಗೆಯಿಂದ ಏಳಿರಿ.” (g01 3/8)

ಅಡಿಗೆ ಮನೆಯನ್ನು ಸ್ವಚ್ಛವಾಗಿಡುವುದು

ತುಂಬ ಚಟುವಟಿಕೆಯಿಂದ ಕೂಡಿರುವ ಅಡಿಗೆ ಮನೆಯಲ್ಲಿ ಅಡಗಿರುವಂಥ, ರೋಗಕಾರಕ ರೋಗಾಣುಗಳನ್ನು “ಹೊಡೆದೋಡಿಸಲು [ಸಾಮಾನ್ಯ] ಬ್ಲೀಚ್‌ ನಿಮಗೆ ಹೆಚ್ಚು ಸಹಾಯಕರವಾಗಿದೆ” ಎಂದು ಕೆನಡದ ವ್ಯಾಂಕೂವರ್‌ ಸನ್‌ ಎಂಬ ವಾರ್ತಾಪತ್ರಿಕೆಯು ಹೇಳುತ್ತದೆ. ಆ ವರದಿಯು ಈ ಕೆಳಗಿನ ಸಲಹೆಗಳನ್ನು ಕೊಡುತ್ತದೆ: 4 ಲೀಟರ್‌ಗಳಷ್ಟು ಬೆಚ್ಚಗಿನ ನೀರಿಗೆ​—⁠ಬಿಸಿ ನೀರಿಗಲ್ಲ​—⁠30 ಮಿಲಿಲೀಟರ್‌ನಷ್ಟು ಬ್ಲೀಚ್‌ ಸೇರಿಸಿದ ದ್ರಾವಣವನ್ನು ದಿನಾಲೂ ತಯಾರಿಸಿರಿ. ಬಿಸಿ ನೀರನ್ನು ಉಪಯೋಗಿಸುವುದಾದರೆ ಬ್ಲೀಚ್‌ ಆವಿಯಾಗಿಬಿಡುತ್ತದೆ. ಸ್ವಚ್ಛವಾಗಿರುವ ಒಂದು ಬಟ್ಟೆಯನ್ನು ಉಪಯೋಗಿಸಿ, ಈ ಬ್ಲೀಚ್‌ ದ್ರಾವಣದಿಂದ ಅಡಿಗೆ ಮನೆಯನ್ನು ಒರಸಿರಿ. ನೆಲವು ಗಾಳಿಯಲ್ಲಿ ಒಣಗುವಂತೆ ಬಿಡಿರಿ. ಹೀಗೆ ತುಂಬ ಹೊತ್ತು ಬಿಡುವುದರಿಂದ, ಬ್ಲೀಚ್‌ನೊಂದಿಗೆ ಸಂಪರ್ಕ ಹೊಂದುವ ಅನೇಕ ರೋಗಾಣುಗಳನ್ನು ಸಾಯುತ್ತವೆ. ಬಿಸಿಯಾದ ಸೋಪ್‌ ನೀರಿನಿಂದ ಪಾತ್ರೆಗಳನ್ನು ಉಜ್ಜಿ ತೊಳೆದು, ಕೆಲವು ನಿಮಿಷಗಳ ವರೆಗೆ ಅವುಗಳನ್ನು ಬ್ಲೀಚ್‌ ದ್ರಾವಣದಲ್ಲಿ ಮುಳುಗಿಸಿಡಿ. ಆ ಪಾತ್ರೆಗಳನ್ನು ಒಣಗಿಸಿದಾಗ, ಅವುಗಳ ಮೇಲೆ ಯಾವುದೇ ರಾಸಾಯನಿಕ ಪದಾರ್ಥವು ಉಳಿದಿರುವುದಿಲ್ಲ. ಪ್ರತಿ ದಿನ ಅಡಿಗೆ ಮನೆಯ ಸ್ಪಂಜುಗಳು, ಪಾತ್ರೆಗಳನ್ನು ಒರೆಸುವ ಬಟ್ಟೆ ಹಾಗೂ ಉಜ್ಜುವ ಚಗರೆಯನ್ನು ಚೆನ್ನಾಗಿ ತೊಳೆಯಿರಿ ಮತ್ತು ಬ್ಲೀಚ್‌ ಮಾಡಿರಿ. ಅಷ್ಟುಮಾತ್ರವಲ್ಲ, ನಿಮ್ಮ ಕೈಗಳಿಂದ ಆಹಾರವು ಕಲುಷಿತಗೊಳ್ಳುವ ಅಪಾಯವನ್ನು ಕಡಿಮೆಗೊಳಿಸಲಿಕ್ಕಾಗಿ, ನಿಮ್ಮ ಕೈಗಳನ್ನು ಹಾಗೂ ಉಗುರುಗಳ ಕೆಳಭಾಗವನ್ನು ಚೆನ್ನಾಗಿ ತೊಳೆಯಿರಿ. (g01 3/8)

ಬ್ಯಾಕ್ಟೀರಿಯದ ವಿರುದ್ಧ ಹೋರಾಟವು ಅನುಚಿತ

“ಮನೆಯಲ್ಲಿ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ಅಮೆರಿಕದ ಅನುಭೋಗಿಗಳು, ತಪ್ಪಾದ ರೀತಿಯಲ್ಲಿ ಕಾರ್ಯನಡಿಸುತ್ತಿದ್ದಾರೆ” ಎಂದು ಯುಎಸ್‌ಎ ಟುಡೇ ವರದಿಸುತ್ತದೆ. ಒಂದು ವಾರ್ತಾಪತ್ರಿಕೆಗನುಸಾರ, ಟಫ್‌ಟ್ಸ್‌ ವಿಶ್ವವಿದ್ಯಾನಿಲಯದ ವೈದ್ಯರೂ ಸೂಕ್ಷ್ಮಜೀವಿಶಾಸ್ತ್ರಜ್ಞರೂ ಆಗಿರುವ ಸ್ಟ್ಯೂಅರ್ಟ್‌ ಲೀವಿ ಹೀಗೆ ಹೇಳುತ್ತಾರೆ: “ಬ್ಯಾಕ್ಟೀರಿಯ ನಿರೋಧಕ ಉತ್ಪನ್ನಗಳ ಉತ್ಪಾದನೆಯು ಅತ್ಯಧಿಕಗೊಳ್ಳುತ್ತಿರುವುದರಿಂದ . . . ಬ್ಯಾಕ್ಟೀರಿಯ ನಿರೋಧಕ ಸೋಪುಗಳನ್ನು ಮಾತ್ರವಲ್ಲ ಪ್ರತಿಜೀವಾಣುಗಳನ್ನೂ ತಡೆದುಕೊಳ್ಳಸಾಧ್ಯವಿರುವಂಥ ಬ್ಯಾಕ್ಟೀರಿಯಗಳ ಉದಯವು ತೀವ್ರಗೊಳ್ಳುವ ಬೆದರಿಕೆಯುಂಟಾಗಿದೆ.” ಮನೆ ಪರಿಸರವನ್ನು ಬ್ಯಾಕ್ಟೀರಿಯಗಳಿಂದ ದೂರವಿಡಲಿಕ್ಕಾಗಿ ಬ್ಯಾಕ್ಟೀರಿಯ ನಿರೋಧಕ ಉತ್ಪನ್ನಗಳನ್ನು ಉಪಯೋಗಿಸುವುದು, “ಒಂದು ನೊಣವನ್ನು ಸಾಯಿಸಲಿಕ್ಕಾಗಿ ಮರದ ಸುತ್ತಿಗೆಯನ್ನು ಉಪಯೋಗಿಸುವುದಕ್ಕೆ ಸಮಾನವಾಗಿದೆ” ಎಂದು ಲೀವಿ ಹೇಳುತ್ತಾರೆ. ಇನ್ನೊಂದು ಕಡೆಯಲ್ಲಿ, ಬ್ಲೀಚ್‌, ಹೈಡ್ರೋಜನ್‌ ಪರಾಕ್ಸೈಡ್‌, ಬಿಸಿ ನೀರು ಹಾಗೂ ಸೋಪ್‌ನಂತಹ ಸ್ವಚ್ಛಗೊಳಿಸುವ ವಸ್ತುಗಳು ಕೊಳೆಯನ್ನು ಇಲ್ಲವಾಗಿಸಲು ಸಹಾಯಕರವಾಗಿವೆ ಮಾತ್ರವಲ್ಲ, ಈ ವಸ್ತುಗಳಿಗೆ ನಿರೋಧಕವಾಗಿರುವಂಥ ಬೇರೆ ರೂಪಗಳಲ್ಲಿ ಬ್ಯಾಕ್ಟೀರಿಯವು ರೂಪಾಂತರಗೊಳ್ಳದಂತೆ ಸಹ ತಡೆಯುತ್ತವೆ. “ಬ್ಯಾಕ್ಟೀರಿಯಕ್ಕೂ ನಮಗೂ ನಂಟಿದೆ. ಆದುದರಿಂದ ನಾವು ಅದರೊಂದಿಗೆ ಶಾಂತಿ ಸಂಧಾನವನ್ನು ಮಾಡಿಕೊಳ್ಳಬೇಕು” ಎಂದು ಲೀವಿ ಹೇಳುತ್ತಾರೆ. (g01 1/22)

ಕೀಟನಾಶಕ್ಕಾಗಿ ಕೂಲಿ

ಹೋಪ್ಲೊ ಎಂದು ಕರೆಯಲ್ಪಡುವ 2.5 ಸೆಂಟಿಮೀಟರುಗಳಷ್ಟು ಉದ್ದದ ರೆಕ್ಕೆಯುಳ್ಳ ಕೀಟಗಳನ್ನು ಕೊಲ್ಲುವ ಪ್ರಯತ್ನದಿಂದ, ಭಾರತದ ಉತ್ತರ ಪ್ರದೇಶದ ಅರಣ್ಯ ಇಲಾಖೆಯು ಈ ಕಾರ್ಯಾಚರಣೆಯನ್ನು ಆರಂಭಿಸಿದೆ; ಹೆಚ್ಚುಕಡಿಮೆ 6,50,000 ಸಾಲ್‌ ವೃಕ್ಷಗಳಿರುವ ಒಂದು ಅರಣ್ಯವನ್ನು ಈ ಕೀಟಗಳು ನಾಶಪಡಿಸುತ್ತಿವೆ ಎಂದು ದ ಟೈಮ್ಸ್‌ ಆಫ್‌ ಇಂಡಿಯ ವರದಿಸುತ್ತದೆ. ಇತ್ತೀಚಿಗೆ ಈ ಕೀಟಗಳ ಸಂಖ್ಯೆಯು ಅತ್ಯಧಿಕಗೊಂಡಿರುವುದರಿಂದ, ಈ ವೃಕ್ಷ ಜಾತಿಯ ಅಸ್ತಿತ್ವಕ್ಕೇ ಧಕ್ಕೆಯುಂಟಾಗಿದೆ. ಈ ಕೀಟಗಳು ವೃಕ್ಷದ ತೊಗಟೆ ಹಾಗೂ ಕಾಂಡದಲ್ಲಿ ಬಿಲತೋಡಿಕೊಂಡಿರುತ್ತವೆ ಮತ್ತು ಮರಗಳು ಕ್ರಮೇಣ ಒಣಗಿ ಸಾಯುವಂತೆ ಮಾಡುತ್ತವೆ. ಈ ಕೀಟಗಳನ್ನು ಹಿಡಿಯಲಿಕ್ಕಾಗಿ ಅರಣ್ಯ ಇಲಾಖೆಯು “ಟ್ರ್ಯಾಪ್‌ ಟ್ರೀ” ವಿಧಾನವನ್ನು ಉಪಯೋಗಿಸುತ್ತಿದೆ. ಎಲ್ಲಿ ಕೀಟಗಳು ಕಂಡುಬರುತ್ತವೋ ಆ ಕ್ಷೇತ್ರದಲ್ಲಿ, ಚಿಕ್ಕ ಸಾಲ್‌ ವೃಕ್ಷದ ತೊಗಟೆಯ ತುಂಡುಗಳನ್ನು ಹರಡಲಾಗುತ್ತದೆ. ಈ ತುಂಡುಗಳಿಂದ ತೊಟ್ಟಿಕ್ಕುವ ದ್ರವ ಪದಾರ್ಥವು ಕೀಟಗಳನ್ನು ತನ್ನ ಕಡೆಗೆ ಆಕರ್ಷಿಸಿ, ಅವುಗಳಿಗೆ ಅಮಲೇರಿಸುವುದರಿಂದ, ಅವುಗಳನ್ನು ಹಿಡಿಯುವುದು ತುಂಬ ಸುಲಭವಾಗುತ್ತದೆ. ಕೀಟಗಳನ್ನು ಹಿಡಿಯಲಿಕ್ಕಾಗಿ ಸ್ಥಳೀಯ ಹುಡುಗರಿಗೆ ಹಣವನ್ನು ಕೊಡಲಾಗುತ್ತಿದೆ. ಆದುದರಿಂದ, ಒಂದು ಕೀಟವನ್ನು ಹಿಡಿದರೆ ಅವರಿಗೆ 75 ಪೈಸೆ (ಸುಮಾರು ಎರಡು ಸೆಂಟ್ಸ್‌) ಸಿಗುತ್ತದೆ. (g01 3/8)

ನಿವೃತ್ತಿಯ ನಂತರದ ನಿರಾಶಾಜನಕ ಸ್ಥಿತಿ

ಸಾಮಾನ್ಯವಾಗಿ ನಿವೃತ್ತಿಯಾಗುವ ವಯಸ್ಸಿಗೆ ತುಂಬ ಮುಂಚೆಯೇ ನಿಮ್ಮ ಉದ್ಯೋಗದಿಂದ ನಿವೃತ್ತಿಯನ್ನು ಪಡೆಯುವುದರಿಂದ ಕೆಲವು ಪ್ರಯೋಜನಗಳಿವೆಯಾದರೂ, ಇದು ಭಾವನಾತ್ಮಕವಾಗಿ ವೇದನಾಭರಿತ ಪರಿಣಾಮವನ್ನು ಉಂಟುಮಾಡಸಾಧ್ಯವಿದೆ. ಬ್ರಸಿಲ್‌ನ ಡೀಯೇರೀಯೊ ಡ ಪರ್ನಂಬೂಕೋ ವಾರ್ತಾಪತ್ರಿಕೆಯು ವರದಿಸುವುದೇನೆಂದರೆ, ಈ ಮುಂಚೆ ಸರಕಾರೀ ಉದ್ಯೋಗದಲ್ಲಿದ್ದವರು ನಿವೃತ್ತಿಯ ಬಳಿಕ, ‘ಅತೃಪ್ತಿ, ಕಿರಿಕಿರಿ, ಅಭದ್ರತೆ, ವ್ಯಕ್ತಿತ್ವವನ್ನು ಕಳೆದುಕೊಂಡ ಅನಿಸಿಕೆಯಿಂದ ಹಿಡಿದು, ಖಿನ್ನತೆ ಹಾಗೂ ತಮ್ಮ ಲೋಕವು ಕುಸಿದು ಬೀಳುತ್ತಿದೆ ಎಂಬ ಭಾವನೆಯ ತನಕ’ ಬೇರೆ ಬೇರೆ ಸಮಸ್ಯೆಗಳನ್ನು ಎದುರಿಸುತ್ತೇವೆಂದು ದೂರುತ್ತಾರೆ. ವೃದ್ಧಾಪ್ಯಶಾಸ್ತ್ರಜ್ಞರಾದ ಗೇಡೋ ಶಾಷ್‌ನಿಕ್‌ ಅವರಿಗನುಸಾರ, “ಬೇಗನೆ ನಿವೃತ್ತಿಯನ್ನು ಪಡೆದುಕೊಳ್ಳುವಂಥ ಪುರುಷರು ಕುಡಿತವನ್ನು ಅವಲಂಬಿಸುವುದು ಹಾಗೂ ಸ್ತ್ರೀಯರು ಔಷಧಗಳನ್ನು ಅವಲಂಬಿಸುವುದು ಅಸಾಮಾನ್ಯವಾದ ಸಂಗತಿಯೇನಲ್ಲ.” ಯಾರು ನಿವೃತ್ತಿಯನ್ನು ಪಡೆದುಕೊಳ್ಳುವ ಯೋಜನೆಯನ್ನು ಮಾಡುತ್ತಿದ್ದಾರೋ ಅವರು, “ಸಾಲಮಾಡುವುದರಿಂದ ದೂರವಿರಬೇಕು, ತಮಗಿರುವ ಕೌಶಲಗಳನ್ನು ಬೇರೆ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು, ಮತ್ತು ಅತಿಯಾದ ಸಾಲದಲ್ಲಿ ಮುಳುಗಿಹೋಗುವುದರಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಇತರರಿಂದ ಸಲಹೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು” ಎಂದು ಮನಶ್ಶಾಸ್ತ್ರಜ್ಞರಾದ ಗ್ರೇಸಿ ಸಾಂಟೋಸ್‌ ಹೇಳುತ್ತಾರೆ. (g01 3/8)