ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಾರಿಯಲ್ಲಿ ನಿಮ್ಮನ್ನು ತಡೆದುನಿಲ್ಲಿಸುವಂಥ ಒಂದು ಮರ

ದಾರಿಯಲ್ಲಿ ನಿಮ್ಮನ್ನು ತಡೆದುನಿಲ್ಲಿಸುವಂಥ ಒಂದು ಮರ

ದಾರಿಯಲ್ಲಿ ನಿಮ್ಮನ್ನು ತಡೆದುನಿಲ್ಲಿಸುವಂಥ ಒಂದು ಮರ

ಎಕ್ವಡಾರ್‌ನ ಎಚ್ಚರ! ಲೇಖಕನಿಂದ

ಡಿಸೆಂಬರ್‌ ತಿಂಗಳು ಅರ್ಧ ಮುಗಿದುಹೋಗಿದ್ದರೂ, ಎಕ್ವಡಾರ್‌ನ ಕರಾವಳಿ ಬಯಲುಗಳಲ್ಲಿ ಋತುವಿಗನುಸಾರ ಬರುವ ಮಳೆಯು ಇನ್ನೂ ಬೀಳಲು ಆರಂಭಿಸಿರಲಿಲ್ಲ. ಬೆಟ್ಟಗುಡ್ಡಗಳ ಏರುತಗ್ಗುಗಳ ಮೇಲೆ ಧೂಳು ಮುಸುಕಿದ್ದರಿಂದ, ಅಲ್ಲಿನ ಮರಗಿಡಗಳು ತುಂಬ ಮೊಬ್ಬಾಗಿ ಕಾಣುತ್ತಿದ್ದವು. ಆಕಾಶದಲ್ಲಿ ದಟ್ಟವಾದ ಮೋಡಗಳು ಮುಸುಕಿದ್ದರಿಂದ, ಆ ದಿನವು ಲವಲವಿಕೆಯೇ ಇಲ್ಲದಿರುವಂತೆ ಕಂಡುಬರುತ್ತಿತ್ತು. ಈ ವಾತಾವರಣದಲ್ಲಿ, ಪ್ರಯಾಣಿಕರ ಒಂದು ಗುಂಪು ಹೆದ್ದಾರಿಯಲ್ಲಿ ಪಶ್ಚಿಮ ದಿಕ್ಕಿನಲ್ಲಿರುವ ಪೆಸಿಫಿಕ್‌ ಮಹಾಸಾಗರದ ಕಡೆಗೆ ಪ್ರಯಾಣಿಸುತ್ತಿತ್ತು. ಇದ್ದಕ್ಕಿದ್ದಂತೆ, ಎಲ್ಲರ ಕಣ್ಣುಗಳೂ ರಸ್ತೆಯ ಬದಿಯಲ್ಲಿದ್ದ ಒಂದು ಮರದ ಮೇಲೆ ಕೇಂದ್ರೀಕೃತವಾದವು. ಆ ಕೂಡಲೆ ಕಾರ್‌ ಸಹ ನಿಂತಿತು. ಅವರು ಯಾವ ಮರವನ್ನು ನೋಡುತ್ತಿದ್ದರು?

ಸಂಪೂರ್ಣವಾಗಿ ಹೂವುಗಳಿಂದ ಕಂಗೊಳಿಸುತ್ತಿದ್ದ ಗ್ವಾಯಕನ್‌ ಮರವನ್ನೇ! ಒಂದು ಕ್ಷಣ ಎಲ್ಲರೂ ಮೌನವಾಗಿದ್ದ ಬಳಿಕ ಒಬ್ಬರು ಉದ್ಗರಿಸಿದ್ದು: “ಎಷ್ಟು ಸುಂದರವಾಗಿದೆ! ಇಂತಹ ಸುಂದರ ಬಣ್ಣದ ಹೂವನ್ನು ನೀವು ಎಂದಾದರೂ ನೋಡಿದ್ದೀರೋ? ಗುಲಾಬಿ, ನೇರಳೆ, ಕೆಂಪು ಅಥವಾ ಕಿತ್ತಿಳೆ ಬಣ್ಣದ ಹೂಗಳನ್ನು ಬಿಡುವಂಥ ಅನೇಕ ಮರಗಳನ್ನು ನಾನು ನೋಡಿದ್ದೇನೆ, ಆದರೆ ಈ ಮರದ ಹೂವುಗಳು ತುಂಬ ಸುಂದರವಾಗಿದ್ದು, ಆ ಎಲ್ಲ ಹೂವುಗಳಿಗಿಂತ ಮಿಗಿಲಾಗಿವೆ!”

ಇದರ ಹೊಂಬಣ್ಣದ ಸೌಂದರ್ಯವನ್ನು ಆಸ್ವಾದಿಸಿದ ಬಳಿಕ ಅವರು ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಇಂತಹ ಅಪೂರ್ವ ದೃಶ್ಯವು ಈಗಷ್ಟೇ ಆರಂಭವಾಗಿದೆ ಎಂಬುದು ಅವರಿಗೆ ಗೊತ್ತೇ ಇರಲಿಲ್ಲ. ಏಕೆಂದರೆ, ಅದೇ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದಾಗ, ಹೂವುಗಳಿಂದ ಕಂಗೊಳಿಸುತ್ತಿದ್ದ ಇನ್ನೊಂದು ಗ್ವಾಯಕನ್‌ ಮರವು ಕಣ್ಣಿಗೆ ಬಿತ್ತು ಮತ್ತು ಇನ್ನೂ ಸ್ವಲ್ಪ ದೂರ ಹೋದಾಗ ಇನ್ನೊಂದು ಮರವು ಕಾಣತೊಡಗಿತು. ಬೆಟ್ಟಗುಡ್ಡಗಳ ಮೇಲೆಲ್ಲ ಹೊಂಬಣ್ಣದ ಸೂರ್ಯಪ್ರಕಾಶವು ಹೊರಹೊಮ್ಮಿದೆಯೋ ಎಂಬಂತೆ ಅದು ತೋರುತ್ತಿತ್ತು! ಇದು ಗ್ವಾಯಕನ್‌ ಮರವು ಹೂಬಿಡುವಂಥ ಕಾಲವಾಗಿತ್ತು, ಅಂದರೆ ವರ್ಣರಹಿತ ಅರಣ್ಯಗಳು ಬೇರೆ ಬೇರೆ ಬಣ್ಣದ ಪುಷ್ಪಗಳಿಂದ ನಳನಳಿಸುವ ಸಮಯವಾಗಿತ್ತು.

ಆದರೂ, ಸುಂದರವಾದ ಹೂಗಳಿಂದ ಕಂಗೊಳಿಸುವ ಈ ಮರವು ಒಂದೇ ದೇಶಕ್ಕೆ ಸೀಮಿತವಾಗಿಲ್ಲ. ವಾಸ್ತವದಲ್ಲಿ, ದಕ್ಷಿಣ ಹಾಗೂ ಮಧ್ಯ ಅಮೆರಿಕದ ಅನೇಕ ಭಾಗಗಳಲ್ಲಿ ಈ ಮರವು ಸ್ವಾಭಾವಿಕವಾಗಿ ಬೆಳೆಯುತ್ತದೆ. ಅರಗ್ವಾನಿ, ಗ್ವಾಯಕನ್‌ ಆ್ಯಮರಿಲ್ಲೊ, ಗೋಲ್ಡನ್‌ ಟ್ರಂಪೆಟ್‌ ಮತ್ತು ಟ್ರಂಪೆಟ್‌ ಮರ ಎಂಬ ಹೆಸರುಗಳೂ ಇದಕ್ಕಿವೆ. ಇದು ಹೊಂಬಣ್ಣದ ತುತೂರಿಯ ಆಕಾರದಲ್ಲಿರುವ ಹೂವುಗಳಿಗೆ ಸೂಚಿತವಾಗಿದೆ. ಟಬೆಬ್ಯುಯ ಕ್ರಿಸ್ಯಾಂಥ ಎಂಬುದು ಇದರ ವೈಜ್ಞಾನಿಕ ಹೆಸರಾಗಿದೆ.

ಗ್ವಾಯಕನ್‌ನಿಂದ ನಯವಾದ ಪದರವುಳ್ಳ ಮರವು ಸಹ ದೊರಕುತ್ತದೆ. ಮತ್ತು ಅನೇಕ ವರ್ಷಗಳಿಂದ ಈ ಮರವನ್ನು ಅತ್ಯುತ್ತಮ ಗುಣಮಟ್ಟದ ಪೀಠೋಪಕರಣಗಳಿಗಾಗಿ ಉಪಯೋಗಿಸಲಾಗುತ್ತಿದೆ. ಈ ಕಾರಣದಿಂದ ಗ್ವಾಯಕನ್‌ ಮರವು ತುಂಬ ವಿರಳವಾಗುತ್ತಿದೆ. ಆದುದರಿಂದ, ಈ ಮರಗಳನ್ನು ಕಡಿಯದಿರುವಂತೆ ಕೆಲವು ದೇಶಗಳಲ್ಲಿ ಸುರಕ್ಷತಾ ನಿಯಮಗಳನ್ನು ಜಾರಿಗೆ ತರುವ ಅಗತ್ಯ ಉಂಟಾಗಿದೆ. ಈ ಸುರಕ್ಷೆಯ ಕಾರಣದಿಂದ, ಈ ಮರವು ವರ್ಷಕ್ಕೆ ಒಮ್ಮೆ ಹಾಗೂ ಕೆಲವೇ ದಿನಗಳ ವರೆಗೆ ಹೂವುಗಳೊಂದಿಗೆ ಕಂಗೊಳಿಸುವುದಾದರೂ, ಸ್ಥಳೀಯರು ಹಾಗೂ ಸಂದರ್ಶಕರು ಇದರ ಅಪೂರ್ವ ಸೌಂದರ್ಯವನ್ನು ಆಸ್ವಾದಿಸುವಂತಾಗಿದೆ.

ನಮ್ಮ ಮಹಾನ್‌ ಸೃಷ್ಟಿಕರ್ತನೂ, ನಾವು ಜೀವಿಸುತ್ತಿರುವಂತಹ ಈ ಅದ್ಭುತಕರ ಭೂಮಿಯ ವಾಸ್ತುಶಿಲ್ಪಿಯೂ, ಮಹಾನ್‌ ಕಲಾವಿದನೂ ಆಗಿರುವಾತನಿಗೆ, ಗ್ವಾಯಕನ್‌ ಮರವು ನಿಜವಾಗಿಯೂ ಜೀವಂತ ಅರ್ಪಣೆಯಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. (g01 3/8)