ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ಪ್ರಾಪಗ್ಯಾಂಡ ನಾನು ಜುಲೈ-ಸೆಪ್ಟೆಂಬರ್‌ 2000ದ ಸಂಚಿಕೆಯನ್ನು ಈಗಷ್ಟೇ ಓದಿಮುಗಿಸಿದೆ, ಮತ್ತು “ನೀವು ಕೇಳಿಸಿಕೊಳ್ಳುವ ಪ್ರತಿಯೊಂದು ವಿಷಯವನ್ನು ನಂಬಬೇಕೋ?” ಎಂಬ ಲೇಖನಮಾಲೆಗಾಗಿ ನಿಮಗೆ ತುಂಬ ಉಪಕಾರಗಳು. ನಾನು ವಾಸಿಸುತ್ತಿರುವಂಥ ಸ್ಥಳದಲ್ಲಿ, ಜಿಪ್ಸಿ (ರಾಮನಿ)ಗಳ ಬಗ್ಗೆ ಅಪಹಾಸ್ಯಮಾಡುವುದು ಒಂದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಅವರು ಹೇಗೆ ಕಳ್ಳತನಮಾಡುತ್ತಾರೆ ಎಂಬ ವಿಷಯದಲ್ಲಿ ಜನರು ತುಂಬ ಜೋಕ್‌ ಮಾಡುತ್ತಾರೆ. ಈ ಲೇಖನಗಳ ಸಹಾಯದಿಂದ, ಅಂತಹ ಜೋಕ್‌ಗಳನ್ನು ಮಾಡುವುದು ಒಳ್ಳೇದಲ್ಲ ಎಂಬುದನ್ನು ನಾನು ಮನಗಂಡಿದ್ದೇನೆ ಮತ್ತು ಇನ್ನು ಮುಂದೆ ಇತರರ ಜೊತೆ ಸೇರಿಕೊಂಡು ಜೋಕ್‌ ಮಾಡುವುದರಲ್ಲಿ ಒಳಗೂಡುವುದಿಲ್ಲ ಎಂದು ನಿರ್ಧರಿಸಿದ್ದೇನೆ.

ಕೆ. ಎಮ್‌., ಚೆಕ್‌ ರಿಪಬ್ಲಿಕ್‌ (g01 3/8)

ವಿದೇಶದಲ್ಲಿ ವಾಸಿಸುವುದು “ಯುವಜನರು ಪ್ರಶ್ನಿಸುವುದು . . . ನಾನು ವಿದೇಶಕ್ಕೆ ಹೋಗಬೇಕೋ?” (ಜುಲೈ-ಸೆಪ್ಟೆಂಬರ್‌, 2000) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರಗಳು. ಈ ಲೇಖನಗಳನ್ನು ನಾನು ಕ್ರಮವಾಗಿ ಓದುತ್ತೇನೆ. ಆದರೆ ನೀವು ಈ ಲೇಖನದಲ್ಲಿ ವಿವರಿಸಿದಂತಹ ಅಪಾಯಗಳಲ್ಲಿ ಕೆಲವು ತುಂಬ ಅತಿಶಯಿಸಿ ವರ್ಣಿಸಲ್ಪಟ್ಟಿದ್ದವು ಎಂದು ಅನೇಕಬಾರಿ ನನಗನಿಸಿತು. ಆದರೆ ಕಳೆದ ವರ್ಷ, ನನ್ನ ವಿಶ್ವವಿದ್ಯಾನಿಲಯ ಹಾಗೂ ಇನ್ನೊಂದು ವಿಶ್ವವಿದ್ಯಾನಿಲಯದ ನಡುವಿನ ಸಾಂಸ್ಕೃತಿಕ ವಿಚಾರ ವಿನಿಮಯಕ್ಕಾಗಿ ನಾನು ವಿದೇಶಕ್ಕೆ ಹೋಗಿದ್ದೆ. ಅದು ಒಂದು ಆಸಕ್ತಿಕರ ಅನುಭವವಾಗಿತ್ತಾದರೂ, ಆತ್ಮಿಕ ದೃಷ್ಟಿಕೋನದಿಂದ ನೋಡುವಾಗ ಅಷ್ಟೇನೂ ಪ್ರಯೋಜನದಾಯಕವಾಗಿರಲಿಲ್ಲ.

ಎಮ್‌. ಪಿ., ಇಟಲಿ

ಈ ಲೇಖನ ಹಾಗೂ “ಯುವಜನರು ಪ್ರಶ್ನಿಸುವುದು . . . ನಾನು ವಿದೇಶದಲ್ಲಿ ಜೀವಿಸುತ್ತಿರುವಾಗ ನನ್ನ ಜೀವನವನ್ನು ಹೇಗೆ ಯಶಸ್ವಿಕರವಾಗಿ ಮಾಡಬಲ್ಲೆ?” (ಜುಲೈ 22, 2000, ಇಂಗ್ಲಿಷ್‌) ಎಂಬ ಲೇಖನವು, ನನಗೆ ‘ಹೊತ್ತುಹೊತ್ತಿಗೆ’ ಕೊಡಲ್ಪಟ್ಟ ‘ಆಹಾರ’ದಂತಿತ್ತು. (ಮತ್ತಾಯ 24:45) ವಿದೇಶೀ ಭಾಷೆಯೊಂದನ್ನು ಕಲಿಯುವ ಸಲುವಾಗಿ ವಿದೇಶದಲ್ಲಿ ಒಂದು ವರ್ಷವನ್ನು ಕಳೆಯಲು ನಾನು ಈಗಾಗಲೇ ನಿರ್ಧರಿಸಿದ್ದೆ. ಆದುದರಿಂದ, ಈ ಸಲಹೆಗಳು ಮತ್ತು ಪ್ರಾಯೋಗಿಕ ಸೂಚನೆಗಳಿಗಾಗಿ ನಾನು ನಿಜವಾಗಿಯೂ ಕೃತಜ್ಞಳಾಗಿದ್ದೇನೆ.

ಐ. ಝಡ್‌., ಸ್ವಿಟ್ಸರ್ಲೆಂಡ್‌ (g01 3/8)

ನಗುಮುಖ “ನಗುಮುಖದಿಂದಿರಿ​—⁠ಅದು ನಿಮಗೆ ಒಳ್ಳೆಯದು!” (ಜುಲೈ-ಸೆಪ್ಟೆಂಬರ್‌, 2000) ಎಂಬ ಅಮೂಲ್ಯ ಲೇಖನಕ್ಕಾಗಿ ನಿಮಗೆ ತುಂಬ ಉಪಕಾರಗಳು. ಈ ಲೇಖನವು ಹೇಳುವಂಥ ವಿಷಯಗಳನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ನನ್ನ ನಗುವನ್ನು ಸಹಜವಾಗಿರಿಸಲಿಕ್ಕಾಗಿ ಯಾವಾಗಲೂ ಸಕಾರಾತ್ಮಕವಾಗಿ ಆಲೋಚಿಸುವಂತೆ ಇದು ನನಗೆ ನೆನಪುಹುಟ್ಟಿಸುತ್ತದೆ. ಹೌದು, ನಗುಮುಖವು ನನಗೆ ಇತರರ ಸ್ನೇಹವನ್ನು ಸಂಪಾದಿಸಲು ಸಹಾಯ ಮಾಡುತ್ತದೆ. ಮಾನಸಿಕ ಒತ್ತಡಗಳನ್ನು ದೂರಮಾಡಲು ಸಹ ಇದು ನೆರವು ನೀಡುತ್ತದೆ.

ಪಿ. ಸಿ., ಚೈನ (g01 3/8)

ನೆಕ್‌ಟೈಗಳು “ನೆಕ್‌ಟೈಗಳು​—⁠ಹಿಂದೆ ಮತ್ತು ಈಗ” (ಜುಲೈ-ಸೆಪ್ಟೆಂಬರ್‌, 2000) ಎಂಬ ಆಸಕ್ತಿಕರ ಲೇಖನಕ್ಕಾಗಿ ನಾನು ಗಣ್ಯತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನಾನು ಮೂರು ಮಕ್ಕಳ ತಾಯಿಯಾಗಿದ್ದು, ಯೆಹೋವನನ್ನು ಪ್ರೀತಿಸುವಂತೆ ಅವರಿಗೆ ಕಲಿಸುತ್ತಿದ್ದೇನೆ. ನನ್ನ ಹಿರಿಯ ಮಗನಿಗೆ 13 ವರ್ಷ ಪ್ರಾಯವಾಗಿದೆ. ಅವನು ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿನ ತನ್ನ ನೇಮಕಗಳನ್ನು ಮಾಡುವಾಗ, ನೆಕ್‌ಟೈಯನ್ನು ಹೇಗೆ ಕಟ್ಟಿಕೊಳ್ಳುವುದು ಎಂಬುದು ನನಗಾಗಲಿ ಅವನಿಗಾಗಲಿ ಗೊತ್ತಿರಲಿಲ್ಲ. ನನ್ನ ಪತಿ ಅವಿಶ್ವಾಸಿಯಾಗಿದ್ದು, ಅವರೆಂದೂ ನೆಕ್‌ಟೈಯನ್ನು ಕಟ್ಟಿಕೊಂಡಿಲ್ಲ. ಇಷ್ಟೊಂದು ಸರಳವಾದ ರೀತಿಯಲ್ಲಿ ನೆಕ್‌ಟೈಯನ್ನು ಕಟ್ಟುವ ವಿಧವನ್ನು ತೋರಿಸಿದ್ದಕ್ಕಾಗಿ ನಿಮಗೆ ತುಂಬ ಉಪಕಾರ.

ಎಮ್‌. ಬಿ., ಅಮೆರಿಕ

ನನಗೆ 11 ವರ್ಷವಾಗಿದೆ. ನೆಕ್‌ಟೈ ಲೇಖನದಲ್ಲಿ ಕೊಡಲ್ಪಟ್ಟ ಚಿತ್ರಗಳಿಂದ ನಾನು ಕೊನೆಗೂ ಟೈಯನ್ನು ಕಟ್ಟುವ ವಿಧವನ್ನು ಕಲಿತುಕೊಂಡೆ ಎಂಬ ಹೇಳಿಕೆಯು ನಿಮಗೆ ವಿಚಿತ್ರವಾಗಿ ತೋರಬಹುದು. ಈಗ ಬೀರುವಿನಲ್ಲಿರುವ ನನ್ನ ಎಲ್ಲ ಟೈಗಳನ್ನು ನಾನು ಉಪಯೋಗಿಸಸಾಧ್ಯವಿದೆ!

ಎ. ಪಿ., ಇಟಲಿ (g01 2/22)

ಹೆಬ್ಬಾವುಗಳು ಹೆಬ್ಬಾವುಗಳು ಇರುವಂತಹ ಒಂದು ಪ್ರದೇಶದಲ್ಲಿ ನಾನು ವಾಸಿಸುತ್ತಿದ್ದೇನೆ. ಈ ಹಾವುಗಳ ಬಗ್ಗೆ ಜನರು ಅನೇಕ ಕಥೆಗಳನ್ನು ಹೇಳುತ್ತಾರೆ, ಆದರೆ ಅವುಗಳನ್ನು ನಂಬಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವುದು ತುಂಬ ಕಷ್ಟಕರವಾಗಿದೆ. “ಹೆಬ್ಬಾವುಗಳು​—⁠ಕೆಲವೊಂದು ರಹಸ್ಯಗಳನ್ನು ಬಯಲುಪಡಿಸುತ್ತಿವೆಯೋ?” ಎಂಬ ನಿಮ್ಮ ಲೇಖನವು (ಜೂನ್‌ 8, 2000), ಯಾವುದು ವಾಸ್ತವಾಂಶವಾಗಿದೆ ಹಾಗೂ ಯಾವುದು ಕಲ್ಪನಾಕಥೆಯಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡಿತು. ಅಷ್ಟುಮಾತ್ರವಲ್ಲ, ಸೃಷ್ಟಿಯ ಈ ಅದ್ಭುತ ಜೀವಿಯ ಕುರಿತಾದ ನನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿತು.

ಜೆ. ಎಸ್‌. ಪಿ., ಬ್ರಸಿಲ್‌ (g01 2/8)