ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಕ್ರೈಸ್ತ ಕೂಟಗಳಿಗೆ ಹೋಗಬೇಕೋ?

ನಾವು ಕ್ರೈಸ್ತ ಕೂಟಗಳಿಗೆ ಹೋಗಬೇಕೋ?

ಬೈಬಲಿನ ದೃಷ್ಟಿಕೋನ

ನಾವು ಕ್ರೈಸ್ತ ಕೂಟಗಳಿಗೆ ಹೋಗಬೇಕೋ?

“ನಾನು ಮೊದಲು ಧಾರ್ಮಿಕ ಕೂಟಗಳಿಗೆ ಹೋಗುತ್ತಿದ್ದೆ, ಆದರೆ ಈಗ ಹೋಗುವುದಿಲ್ಲ.” “ನನಗನಿಸುತ್ತದೆ ದೇವರನ್ನು ಎಲ್ಲಿ ಬೇಕಾದರೂ ಆರಾಧಿಸಬಹುದು. ಚರ್ಚಿನಲ್ಲೇ ಆರಾಧಿಸಬೇಕು ಎಂದೇನಿಲ್ಲ.” “ನನಗೆ ದೇವರಲ್ಲಿ ಮತ್ತು ಬೈಬಲಿನಲ್ಲಿ ನಂಬಿಕೆಯಿದೆ. ಆದರೆ ಚರ್ಚಿಗೆ ಹೋಗಿ ದೇವರನ್ನು ಆರಾಧಿಸುವುದರಲ್ಲಿ ನನಗೆ ನಂಬಿಕೆಯಿಲ್ಲ.” ಈ ರೀತಿಯಾಗಿ ಹೇಳುವುದನ್ನು ನೀವು ಕೇಳಿಸಿಕೊಂಡಿದ್ದೀರೋ? ಇಂದು, ವಿಶೇಷವಾಗಿ ಪಾಶ್ಚಾತ್ಯ ದೇಶಗಳಲ್ಲಿ ಕ್ರೈಸ್ತರೆನಿಸಿಕೊಳ್ಳುವ ಹೆಚ್ಚೆಚ್ಚು ಜನರು ಈ ರೀತಿ ಹೇಳುತ್ತಾರೆ. ಒಂದು ಸಮಯದಲ್ಲಿ ಚರ್ಚಿಗೆ ಹೋಗುತ್ತಿದ್ದವರು ಕೂಡ, ಈಗ ಅದರ ಅಗತ್ಯವಿಲ್ಲ ಎಂದು ನೆನಸುತ್ತಾರೆ. ಚರ್ಚಿಗೆ ಹೋಗುವುದರ ಕುರಿತಾಗಿ ಬೈಬಲ್‌ ಏನು ಹೇಳುತ್ತದೆ? “ತಮ್ಮ ಆರಾಧನೆಯು ದೇವರಿಗೆ ಸ್ವೀಕಾರಾರ್ಹವಾಗಿರಲು ಕ್ರೈಸ್ತರು ಒಂದು ನಿರ್ದಿಷ್ಟ ಸ್ಥಳಕ್ಕೋ ಅಥವಾ ಕಟ್ಟಡಕ್ಕೋ ಹೋಗಬೇಕೋ?”

ಇಸ್ರಾಯೇಲ್‌ ಜನಾಂಗದಲ್ಲಿದ್ದ ಆರಾಧನೆ

ಯೆಹೂದಿ ಪುರುಷರೆಲ್ಲರೂ ಮೂರು ವಾರ್ಷಿಕ ಹಬ್ಬಗಳಿಗಾಗಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಕೂಡಿಬರುವುದನ್ನು ಮೋಶೆಯ ಧರ್ಮಶಾಸ್ತ್ರವು ಅಗತ್ಯಪಡಿಸಿತು. ಅನೇಕ ಮಹಿಳೆಯರು ಮತ್ತು ಮಕ್ಕಳು ಕೂಡ ಅಲ್ಲಿ ಹಾಜರಿರುತ್ತಿದ್ದರು. (ಧರ್ಮೋಪದೇಶಕಾಂಡ 16:16; ಲೂಕ 2:​41-44) ಕೆಲವು ಸಂದರ್ಭಗಳಲ್ಲಿ ಯಾಜಕರು ಮತ್ತು ಲೇವಿಯರು, ಕೂಡಿಬಂದಿರುವ ಗುಂಪಿಗೆ ದೇವರ ಧರ್ಮಶಾಸ್ತ್ರವನ್ನು ಓದುವ ಮೂಲಕ ಕಲಿಸಿದರು. ಅವರು ‘ಸ್ಪಷ್ಟವಾಗಿ ಓದುತ್ತಾ ಅದರ ತಾತ್ಪರ್ಯವನ್ನು ವಿವರಿಸಿದರು.’ (ನೆಹೆಮೀಯ 8:⁠8) ಸಬ್ಬತ್‌ ವರ್ಷಗಳಿಗಾಗಿ ದೇವರು ಮಾರ್ಗದರ್ಶಿಸಿದ್ದು: “ಜನರೆಲ್ಲರೂ ಈ ಧರ್ಮಶಾಸ್ತ್ರವನ್ನು ಕೇಳಿ ತಿಳಿದುಕೊಳ್ಳುವಂತೆ ಸ್ತ್ರೀಪುರುಷರನ್ನೂ ಮಕ್ಕಳನ್ನೂ ನಿಮ್ಮ ಊರುಗಳಲ್ಲಿರುವ ಅನ್ಯರನ್ನೂ ಕೂಡಿಸಬೇಕು. ಆಗ ಅವರು ತಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಿ ನಡೆಯುವರು.”​—⁠ಧರ್ಮೋಪದೇಶಕಾಂಡ 31:⁠12.

ಆದರೆ ಒಬ್ಬ ವ್ಯಕ್ತಿಯು ಯೆರೂಸಲೇಮಿನ ದೇವಾಲಯದಲ್ಲಿ ಮಾತ್ರ ದೇವರಿಗೆ ಯಜ್ಞಗಳನ್ನು ಅರ್ಪಿಸಸಾಧ್ಯವಿತ್ತು ಹಾಗೂ ಯಾಜಕರಿಂದ ಬೋಧನೆಯನ್ನು ಪಡೆದುಕೊಳ್ಳಸಾಧ್ಯವಿತ್ತು. (ಧರ್ಮೋಪದೇಶಕಾಂಡ 12:​5-7; 2 ಪೂರ್ವಕಾಲವೃತ್ತಾಂತ 7:12) ಸ್ವಲ್ಪ ಸಮಯದೊಳಗಾಗಿ, ಸಭಾಮಂದಿರಗಳೆಂದು ಕರೆಯಲ್ಪಡುವ ಇತರ ಆರಾಧನಾ ಸ್ಥಳಗಳನ್ನು ಸ್ಥಾಪಿಸಲಾಯಿತು. ಇವು ಶಾಸ್ತ್ರವಚನಗಳನ್ನು ಓದುವ ಹಾಗೂ ಪ್ರಾರ್ಥಿಸುವ ಸ್ಥಳಗಳಾಗಿದ್ದವು. ಹಾಗಿದ್ದರೂ ಯೆರೂಸಲೇಮಿನಲ್ಲಿದ್ದ ಆಲಯವು ಆರಾಧನೆಯ ಮುಖ್ಯ ಸ್ಥಳವಾಗಿತ್ತು. ಇದನ್ನು ಬೈಬಲ್‌ ಲೇಖಕನಾದ ಲೂಕನ ವರದಿಯಿಂದ ದೃಷ್ಟಾಂತಿಸಲಾಗಿದೆ. ಅನ್ನ ಎಂಬ ಒಬ್ಬ ವೃದ್ಧ ಮಹಿಳೆಯು ‘ದೇವಾಲಯವನ್ನು ಬಿಟ್ಟುಹೋಗದೆ ಉಪವಾಸ ವಿಜ್ಞಾಪನೆಗಳಿಂದ ರಾತ್ರಿ ಹಗಲೂ . . . ಸೇವೆಯನ್ನು ಮಾಡುತ್ತಿದ್ದಳು’ ಎಂಬುದಾಗಿ ಅವನು ತಿಳಿಸುತ್ತಾನೆ. (ಲೂಕ 2:​36, 37) ಇತರ ಸಮರ್ಪಿತ ವ್ಯಕ್ತಿಗಳೊಂದಿಗೆ ಆರಾಧಿಸುವುದು ಅನ್ನಳ ಜೀವನದ ಕೇಂದ್ರಬಿಂದುವಾಗಿತ್ತು. ದೇವಭಕ್ತಿಯುಳ್ಳ ಇತರ ಯೆಹೂದ್ಯರು ತದ್ರೀತಿಯ ವಿಧಾನವನ್ನು ಅನುಸರಿಸಿದರು.

ಯೇಸುವಿನ ಮರಣದ ನಂತರ ಸತ್ಯಾರಾಧನೆ

ಯೇಸುವಿನ ಮರಣದ ನಂತರ, ಅವನ ಹಿಂಬಾಲಕರಿಗೆ ಇನ್ನು ಮುಂದೆ ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವ ಇಲ್ಲವೇ ದೇವಾಲಯದಲ್ಲಿ ಆರಾಧಿಸುವ ಅಗತ್ಯವಿರಲಿಲ್ಲ. (ಗಲಾತ್ಯ 3:​23-25) ಆದರೂ, ಅವರು ದೇವರ ವಾಕ್ಯವನ್ನು ಅಭ್ಯಾಸಿಸಲು ಮತ್ತು ಪ್ರಾರ್ಥನೆ ಮಾಡಲು ಒಟ್ಟುಗೂಡುವುದನ್ನು ಮುಂದುವರಿಸಿದರು. ಅವರ ಬಳಿ ವಿಸ್ತಾರವಾದ ಕಟ್ಟಡಗಳಿರಲಿಲ್ಲ, ಬದಲಿಗೆ ಖಾಸಗಿ ಮನೆಗಳನ್ನು ಹಾಗೂ ಸಾರ್ವಜನಿಕ ಸ್ಥಳಗಳನ್ನು ಅವರು ಉಪಯೋಗಿಸುತ್ತಿದ್ದರು. (ಅ. ಕೃತ್ಯಗಳು 2:​1, 2; 12:12; 19:9; ರೋಮಾಪುರ 16:​4, 5) ಅವು ಮತಾಸಂಸ್ಕಾರಗಳು ಮತ್ತು ಆಡಂಬರಗಳಿಂದ ಮುಕ್ತವಾಗಿದ್ದವು. ಪ್ರಥಮ ಶತಮಾನದ ಆ ಕ್ರೈಸ್ತ ಕೂಟಗಳು ಸರಳವಾಗಿದ್ದರೂ ಚೈತನ್ಯದಾಯಕವಾಗಿದ್ದವು.

ರೋಮನ್‌ ಸಾಮ್ರಾಜ್ಯದ ವಿಷಾದಕರ ನೈತಿಕ ಪರಿಸ್ಥಿತಿಗಳ ಮಧ್ಯೆಯೂ ಆ ಕೂಟಗಳಲ್ಲಿ ಕಲಿಸಲಾಗುತ್ತಿದ್ದ ಬೈಬಲಿನ ಮೂಲತತ್ವಗಳು ವಜ್ರದಂತೆ ಹೊಳೆಯುತ್ತಿದ್ದವು. ಮೊದಲ ಬಾರಿ ಕೂಟಗಳಿಗೆ ಹಾಜರಾದ ಅವಿಶ್ವಾಸಿಗಳು, “ಖಂಡಿತವಾಗಿಯೂ ದೇವರು ನಿಮ್ಮ ಮಧ್ಯೆ ಇದ್ದಾನೆ” ಎಂದು ಹೇಳದೆ ಇರಲು ಸಾಧ್ಯವಾಗಲಿಲ್ಲ. (1 ಕೊರಿಂಥ 14:​24, 25) ಹೌದು, ನಿಜವಾಗಿಯೂ ದೇವರು ಅವರೊಂದಿಗೆ ಇದ್ದನು. “ಸಭೆಗಳು ಕ್ರಿಸ್ತನಂಬಿಕೆಯಲ್ಲಿ ದೃಢವಾಗುತ್ತಾ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ ಬಂದವು.”​—⁠ಅ. ಕೃತ್ಯಗಳು 16:⁠5.

ಆ ಸಮಯದಲ್ಲಿದ್ದ ಒಬ್ಬ ಕ್ರೈಸ್ತನು, ವಿಧರ್ಮಿ ದೇವಾಲಯಗಳಲ್ಲಿ ಇಲ್ಲವೆ ಒಂಟಿಯಾಗಿ ತನ್ನಷ್ಟಕ್ಕೇ ಆರಾಧನೆಯನ್ನು ಸಲ್ಲಿಸುವ ಮೂಲಕ ದೇವರ ಅಂಗೀಕಾರವನ್ನು ಪಡೆದುಕೊಳ್ಳಸಾಧ್ಯವಿತ್ತೋ? ಈ ವಿಷಯದ ಕುರಿತು ಬೈಬಲ್‌ ಸ್ಪಷ್ಟವಾದ ಮಾರ್ಗದರ್ಶನವನ್ನು ನೀಡುತ್ತದೆ: ಅಂಗೀಕರಿಸಲ್ಪಟ್ಟ ಆರಾಧಕರು ಒಂದು ನಿಜವಾದ ಸಭೆಯ ಭಾಗವಾಗಿರಬೇಕಾಗಿತ್ತು. ಅವರು “ಒಂದೇ ದೇಹಕ್ಕೆ” ಸೇರಿದ ನಿಜ ಆರಾಧಕರಾಗಿದ್ದರು. ಇವರೇ ಕ್ರೈಸ್ತರೆಂದು ಹೆಸರುವಾಸಿಯಾಗಿದ್ದ ಯೇಸುವಿನ ಶಿಷ್ಯರಾಗಿದ್ದರು.​—⁠ಎಫೆಸ 4:​4, 5; ಅ. ಕೃತ್ಯಗಳು 11:⁠26.

ನಮ್ಮ ದಿನದ ಕುರಿತೇನು?

ಒಂದು ನಿರ್ದಿಷ್ಟ ಕಟ್ಟಡದಲ್ಲಿ ಆರಾಧಿಸುವಂತೆ ನಮ್ಮನ್ನು ಪ್ರೋತ್ಸಾಹಿಸುವುದರ ಬದಲು, ‘ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸುವ’ ಜನರೊಂದಿಗೆ, ಅಂದರೆ ‘ಜೀವಸ್ವರೂಪನಾದ ದೇವರ ಸಭೆಯೊಂದಿಗೆ’ ಆರಾಧಿಸುವಂತೆ ಬೈಬಲ್‌ ನಮ್ಮನ್ನು ಪ್ರೋತ್ಸಾಹಿಸುತ್ತದೆ. (1 ತಿಮೊಥೆಯ 3:15; ಯೋಹಾನ 4:24) ದೇವರಿಂದ ಅಂಗೀಕರಿಸಲ್ಪಟ್ಟ ಧಾರ್ಮಿಕ ಕೂಟಗಳು, ಜನರು “ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿ” ಇರುವಂತೆ ಅವರಿಗೆ ಕಲಿಸಬೇಕು. (2 ಪೇತ್ರ 3:11) ಹಾಜರಾಗುವವರು ಪ್ರೌಢ ಕ್ರೈಸ್ತರಾಗುವಂತೆ ಅವರಿಗೆ ಸಹಾಯಮಾಡಬೇಕು. ಹೀಗೆ, “ಇದು ಒಳ್ಳೇದು ಅದು ಕೆಟ್ಟದ್ದು” ಎಂಬುದರ ಭೇದವನ್ನರಿಯಲು ಅವರು ಶಕ್ತರಾಗುವರು.​—⁠ಇಬ್ರಿಯ 5:⁠14.

ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತರ ಮಾದರಿಯನ್ನು ಅನುಸರಿಸಲು ಯೆಹೋವನ ಸಾಕ್ಷಿಗಳು ಪ್ರಯಾಸಪಡುತ್ತಾರೆ. ಲೋಕವ್ಯಾಪಕವಾಗಿರುವ 91,400ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ ಬೈಬಲನ್ನು ಅಭ್ಯಾಸಮಾಡಲು ಮತ್ತು ಒಬ್ಬರನ್ನೊಬ್ಬರು ಉತ್ತೇಜಿಸಲು ಅವರು ಕ್ರಮಬದ್ಧವಾಗಿ ಒಟ್ಟುಗೂಡುತ್ತಾರೆ. ಇದನ್ನು ಅವರು ರಾಜ್ಯ ಸಭಾಗೃಹಗಳಲ್ಲಿ, ಖಾಸಗಿ ಮನೆಗಳಲ್ಲಿ ಮತ್ತು ಇನ್ನಿತರ ಸ್ಥಳಗಳಲ್ಲಿ ಮಾಡುತ್ತಾರೆ. ಇದು, ‘ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸಭೆಯಾಗಿ ಕೂಡಿಕೊಳ್ಳುವುದನ್ನು ಬಿಟ್ಟುಬಿಡದಿರುವಂತೆಯೂ’ ತಿಳಿಸಲ್ಪಟ್ಟಿರುವ ಪೌಲನ ಮಾತುಗಳಿಗೆ ಹೊಂದಿಕೆಯಲ್ಲಿದೆ.​—⁠ಇಬ್ರಿಯ 10:​24, 25. (g01 3/8)