ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ದಾಂಪತ್ಯವನ್ನು ರಕ್ಷಿಸಸಾಧ್ಯವಿದೆ!

ನಿಮ್ಮ ದಾಂಪತ್ಯವನ್ನು ರಕ್ಷಿಸಸಾಧ್ಯವಿದೆ!

ನಿಮ್ಮ ದಾಂಪತ್ಯವನ್ನು ರಕ್ಷಿಸಸಾಧ್ಯವಿದೆ!

ಪತಿಪತ್ನಿಯರಿಗೆ ಪ್ರಯೋಜನದಾಯಕವಾದ ಪ್ರಾಯೋಗಿಕ ಸಲಹೆಯು ಬೈಬಲಿನಲ್ಲಿ ಸಾಕಷ್ಟಿದೆ. ಈ ವಿಷಯವು ಖಂಡಿತವಾಗಿಯೂ ಆಶ್ಚರ್ಯಕರವಾದದ್ದೇನಲ್ಲ. ಏಕೆಂದರೆ ಬೈಬಲನ್ನು ಬರೆಯುವಂತೆ ಪ್ರೇರೇಪಿಸಿದಾತನೇ ವೈವಾಹಿಕ ಏರ್ಪಾಡಿನ ಮೂಲನಾಗಿದ್ದಾನೆ.

ಬೈಬಲು ವಿವಾಹವನ್ನು ವಾಸ್ತವಿಕವಾದ ರೀತಿಯಲ್ಲಿ ವರ್ಣಿಸುತ್ತದೆ. ಪತಿಪತ್ನಿಯರು “ಕಷ್ಟ”ವನ್ನು ಎದುರಿಸುತ್ತಾರೆ, ಅಂದರೆ ನೋವು ಹಾಗೂ ದುಃಖವನ್ನು ಅನುಭವಿಸುತ್ತಾರೆ ಎಂಬುದನ್ನು ಅದು ಒಪ್ಪಿಕೊಳ್ಳುತ್ತದೆ. (1 ಕೊರಿಂಥ 7:28) ಆದರೂ, ವಿವಾಹವು ಸಂತೋಷವನ್ನು ಉಂಟುಮಾಡಸಾಧ್ಯವಿದೆ ಮತ್ತು ಉಂಟುಮಾಡಬೇಕು, ಅತ್ಯಾನಂದವನ್ನು ತರಬೇಕು ಎಂದು ಸಹ ಬೈಬಲು ಹೇಳುತ್ತದೆ. (ಜ್ಞಾನೋಕ್ತಿ 5:​18, 19) ಈ ಎರಡೂ ವಿಷಯಗಳು ಅಸಂಗತವಾದ ವಿಷಯಗಳೇನಲ್ಲ. ದಾಂಪತ್ಯದಲ್ಲಿ ಗಂಭೀರವಾದ ಸಮಸ್ಯೆಗಳಿರುವುದಾದರೂ, ದಂಪತಿಗಳು ಆಪ್ತವಾದ ಹಾಗೂ ಪ್ರೀತಿಯ ಸಂಬಂಧದಲ್ಲಿ ಆನಂದಿಸಸಾಧ್ಯವಿದೆ ಎಂಬುದನ್ನು ಅವು ತೋರಿಸುತ್ತವೆ.

ನಿಮ್ಮ ದಾಂಪತ್ಯದಲ್ಲಿ ಇದರ ಕೊರತೆಯಿದೆಯೋ? ಈ ಮುಂಚೆ ಅನ್ಯೋನ್ಯತೆ ಹಾಗೂ ಸಂತೋಷದಿಂದ ಕೂಡಿದ್ದ ನಿಮ್ಮ ದಾಂಪತ್ಯದಲ್ಲಿ ಈಗ ನೋವು ಹಾಗೂ ನಿರಾಶೆಯ ಛಾಯೆಯು ಕವಿದಿದೆಯೋ? ಅನೇಕ ವರ್ಷಗಳಿಂದ ನಿಮ್ಮ ದಾಂಪತ್ಯವು ಪ್ರೀತಿರಹಿತ ಸ್ಥಿತಿಯಲ್ಲಿರುವುದಾದರೂ, ಏನನ್ನು ಕಳೆದುಕೊಳ್ಳಲಾಗಿದೆಯೋ ಅದನ್ನು ಪುನಃ ಪಡೆದುಕೊಳ್ಳಸಾಧ್ಯವಿದೆ. ಆದರೆ ನೀವು ಮಾತ್ರ ವಾಸ್ತವಿಕ ನೋಟವುಳ್ಳವರಾಗಿರಬೇಕು. ಅಪರಿಪೂರ್ಣರಾಗಿರುವ ಯಾವ ಸ್ತ್ರೀಪುರುಷರೂ ಒಂದು ಪರಿಪೂರ್ಣ ದಾಂಪತ್ಯವನ್ನು ಸಾಧಿಸಶಕ್ತರಲ್ಲ. ಆದರೂ, ನಕಾರಾತ್ಮಕ ಪ್ರವೃತ್ತಿಗಳನ್ನು ಬದಲಾಯಿಸಲಿಕ್ಕಾಗಿ ನೀವು ತೆಗೆದುಕೊಳ್ಳಸಾಧ್ಯವಿರುವಂತಹ ಸೂಕ್ತಕ್ರಮಗಳು ಇವೆ.

ಈ ಮಾಹಿತಿಯನ್ನು ಓದುತ್ತಿರುವಾಗ, ನಿಮ್ಮ ದಾಂಪತ್ಯಕ್ಕೆ ಯಾವ ಅಂಶಗಳು ವಿಶೇಷವಾಗಿ ಅನ್ವಯವಾಗುತ್ತವೆ ಎಂಬುದನ್ನು ಗುರುತಿಸಲು ಪ್ರಯತ್ನಿಸಿರಿ. ನಿಮ್ಮ ಸಂಗಾತಿಯ ಕುಂದುಕೊರತೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದಕ್ಕೆ ಬದಲಾಗಿ, ನೀವು ಕಾರ್ಯರೂಪಕ್ಕೆ ತರಸಾಧ್ಯವಿರುವ ಕೆಲವು ಸಲಹೆಗಳನ್ನು ಆರಿಸಿಕೊಳ್ಳಿರಿ ಮತ್ತು ಶಾಸ್ತ್ರೀಯ ಸಲಹೆಯನ್ನು ಅನ್ವಯಿಸಿರಿ. ಆಗ, ನಿಮ್ಮ ದಾಂಪತ್ಯದ ಬಗ್ಗೆ ನೀವು ನೆನಸಿದ್ದಕ್ಕಿಂತಲೂ ಹೆಚ್ಚಿನ ನಿರೀಕ್ಷೆಯಿದೆ ಎಂಬುದು ನಿಮ್ಮ ಅನುಭವಕ್ಕೆ ಬರುವುದು.

ಮೊದಲಾಗಿ ನಾವು ಮನೋಭಾವದ ಕುರಿತು ಚರ್ಚೆಮಾಡೋಣ. ಏಕೆಂದರೆ ವಿವಾಹದ ಬದ್ಧತೆಯ ಕುರಿತಾದ ನಿಮ್ಮ ದೃಷ್ಟಿಕೋನ ಹಾಗೂ ನಿಮ್ಮ ಸಂಗಾತಿಯ ಕಡೆಗಿನ ನಿಮ್ಮ ಭಾವನೆಗಳು ಅತಿ ಪ್ರಾಮುಖ್ಯವಾದವುಗಳಾಗಿವೆ.

ವಿವಾಹ ಬದ್ಧತೆಯ ಕುರಿತಾದ ದೃಷ್ಟಿಕೋನ

ನೀವು ನಿಮ್ಮ ದಾಂಪತ್ಯವನ್ನು ಸರಿಪಡಿಸಲು ಪ್ರಯತ್ನಿಸುತ್ತಿರುವಲ್ಲಿ, ದೀರ್ಘಾವಧಿಯ ನೋಟವಿರುವುದು ಅತ್ಯಾವಶ್ಯಕವಾದದ್ದಾಗಿದೆ. ಎಷ್ಟೆಂದರೂ, ಇಬ್ಬರು ಮಾನವರನ್ನು ಅಗಲಿಸಲಾರದಂತಹ ರೀತಿಯಲ್ಲಿ ಒಟ್ಟುಗೂಡಿಸಲಿಕ್ಕಾಗಿಯೇ ದೇವರು ವೈವಾಹಿಕ ಏರ್ಪಾಡನ್ನು ಮಾಡಿದನು. (ಆದಿಕಾಂಡ 2:24; ಮತ್ತಾಯ 19:​4, 5) ಆದುದರಿಂದ, ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು, ಇಷ್ಟವಿಲ್ಲದಿರುವಲ್ಲಿ ಬಿಟ್ಟುಬಿಡಬಹುದಾದ ಒಂದು ಉದ್ಯೋಗದಂತಿರುವುದಿಲ್ಲ. ಅಥವಾ ಮನೆಯನ್ನು ಭೋಗ್ಯಹಾಕಿಕೊಂಡಿದ್ದರೂ, ಮಧ್ಯದಲ್ಲೇ ಹಣವನ್ನು ಹಿಂದಕ್ಕೆ ಪಡೆದುಕೊಂಡು ಆ ಮನೆಯನ್ನು ಬಿಟ್ಟುಹೋಗುವಂತಿರುವುದಿಲ್ಲ. ಅದಕ್ಕೆ ಬದಲಾಗಿ, ಮದುವೆಯ ಸಮಯದಲ್ಲಿ ನೀವು, ಯಾವುದೇ ಪರಿಸ್ಥಿತಿಯು ಎದುರಾಗುವುದಾದರೂ ತಮ್ಮ ಸಂಗಾತಿಯೊಂದಿಗೇ ಉಳಿಯುತ್ತೇವೆ ಎಂದು ಗಂಭೀರವಾಗಿ ವಚನಕೊಟ್ಟಿರಿ. ವಿವಾಹ ಬದ್ಧತೆಯ ಕುರಿತಾದ ಆಳವಾದ ಪರಿಜ್ಞಾನವು, ಸುಮಾರು 2,000 ವರ್ಷಗಳ ಹಿಂದೆ ಯೇಸು ಏನು ಹೇಳಿದನೋ ಅದಕ್ಕೆ ಅನುರೂಪವಾಗಿದೆ: “ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.”​—⁠ಮತ್ತಾಯ 19:⁠6.

‘ನಾವಿಬ್ಬರು ಈಗಲೂ ಒಟ್ಟಿಗೆ ಜೀವಿಸುತ್ತಿದ್ದೇವೆ. ನಮಗೂ ವಿವಾಹ ಬದ್ಧತೆಯ ಪರಿಜ್ಞಾನವಿದೆ ಎಂಬುದಕ್ಕೆ ಇದು ರುಜುವಾತಾಗಿಲ್ಲವೋ?’ ಎಂದು ಕೆಲವರು ಹೇಳಬಹುದು. ಇರಬಹುದು. ಆದರೂ, ಈ ಲೇಖನಮಾಲೆಯ ಆರಂಭದಲ್ಲಿ ತಿಳಿಸಲ್ಪಟ್ಟಂತೆ, ಒಟ್ಟಿಗೆ ಜೀವಿಸುತ್ತಿರುವ ಕೆಲವು ದಂಪತಿಗಳು ಮರಳದಂಡೆಯಲ್ಲಿ ಅಥವಾ ಕೊಚ್ಚೆಯಲ್ಲಿ ಸಿಕ್ಕಿಕೊಂಡಿದ್ದಾರೆ; ಅಂದರೆ ಪ್ರೀತಿರಹಿತ ದಾಂಪತ್ಯವನ್ನು ನಡೆಸುತ್ತಿದ್ದಾರೆ. ನಿಮ್ಮ ದಾಂಪತ್ಯ ಜೀವನವನ್ನು ಪ್ರೀತಿರಹಿತವಾಗಿ ಮುಂದುವರಿಸಿಕೊಂಡು ಹೋಗುವುದಲ್ಲ, ಬದಲಾಗಿ ಅದನ್ನು ಆನಂದದಾಯಕವಾದದ್ದಾಗಿ ಮಾಡುವುದು ನಿಮ್ಮ ಗುರಿಯಾಗಿದೆ. ವಿವಾಹ ಬದ್ಧತೆಯು ಕೇವಲ ಮದುವೆಯ ಪದ್ಧತಿಗೆ ಮಾತ್ರವಲ್ಲ, ನೀವು ಯಾರನ್ನು ಪ್ರೀತಿಸುವ ಮತ್ತು ಪಾಲನೆಮಾಡುವ ಪ್ರತಿಜ್ಞೆಯನ್ನು ಮಾಡಿದ್ದೀರೋ ಆ ವ್ಯಕ್ತಿಗೆ ಸಹ ನಿಷ್ಠೆಯನ್ನು ಪ್ರತಿಬಿಂಬಿಸಬೇಕು.​—⁠ಎಫೆಸ 5:⁠33.

ನಿಮ್ಮ ಸಂಗಾತಿಗೆ ನೀವು ಏನು ಹೇಳುತ್ತೀರೋ ಅದು, ನಿಮ್ಮ ವಿವಾಹ ಬದ್ಧತೆಯು ಎಷ್ಟು ಗಹನವಾದದ್ದಾಗಿದೆ ಎಂಬುದನ್ನು ಪ್ರಕಟಪಡಿಸಸಾಧ್ಯವಿದೆ. ಉದಾಹರಣೆಗೆ, ತೀವ್ರ ವಾಗ್ವಾದವಾಗುತ್ತಿರುವಾಗ ಕೆಲವು ಪತಿಪತ್ನಿಯರು, “ನಾನು ನಿನ್ನನ್ನು ಬಿಟ್ಟುಬಿಡುತ್ತೇನೆ!” ಅಥವಾ “ನನ್ನನ್ನು ಗಣ್ಯಮಾಡುವಂತಹ ಒಬ್ಬ ವ್ಯಕ್ತಿಯನ್ನು ನಾನು ಹುಡುಕುತ್ತೇನೆ!” ಎಂಬಂಥ ಕಠೋರ ಮಾತುಗಳನ್ನು ಆಡುತ್ತಾರೆ. ಇದು ಅವರು ಅಕ್ಷರಾರ್ಥಕವಾಗಿ ಹಾಗೆ ಮಾಡುತ್ತಾರೆ ಎಂಬುದನ್ನು ಅರ್ಥೈಸದಿದ್ದರೂ, ಅವರ ಮಾತುಗಳು ವಿವಾಹ ಬದ್ಧತೆಗೆ ಬೆದರಿಕೆಯನ್ನೊಡ್ಡಬಲ್ಲವು. ಅಂದರೆ, ಹೀಗೆ ಹೇಳುವ ವ್ಯಕ್ತಿಯು ಯಾವಾಗ ಬೇಕಾದರೂ ಸಂಗಾತಿಯಿಂದ ಪ್ರತ್ಯೇಕವಾಗಲು ಅಥವಾ ಸಂಗಾತಿಯನ್ನು ಬಿಟ್ಟುಬಿಡಲು ಸಿದ್ಧನಿದ್ದಾನೆ/ಳೆ ಎಂಬರ್ಥವನ್ನು ಕೊಡಬಲ್ಲದು.

ನಿಮ್ಮ ದಾಂಪತ್ಯದಲ್ಲಿ ಪುನಃ ಪ್ರೀತಿಯು ಚಿಗುರಬೇಕಾದರೆ, ನಿಮ್ಮ ಸಂಭಾಷಣೆಯಲ್ಲಿ ಇಂತಹ ಬೆದರಿಕೆ ಮಾತುಗಳನ್ನು ಉಪಯೋಗಿಸಬೇಡಿರಿ. ಏನೇ ಆಗಲಿ, ಒಂದಲ್ಲ ಒಂದು ದಿನ ನೀವು ಒಂದು ಮನೆಯನ್ನು ಬಿಟ್ಟುಹೋಗುತ್ತೀರಿ ಎಂಬುದು ನಿಮಗೆ ಮುಂಚಿತವಾಗಿಯೇ ಗೊತ್ತಿರುವಲ್ಲಿ ನೀವು ಅದನ್ನು ಅಲಂಕರಿಸುತ್ತೀರೋ? ಹಾಗಾದರೆ, ಹೆಚ್ಚು ಕಾಲ ಬಾಳದಿರುವಂತಹ ಒಂದು ದಾಂಪತ್ಯಕ್ಕಾಗಿ ನಿಮ್ಮ ಸಂಗಾತಿಯು ಕಾರ್ಯನಡಿಸುವಂತೆ ಏಕೆ ನಿರೀಕ್ಷಿಸಬೇಕು? ಸಮಸ್ಯೆಗಳನ್ನು ಬಗೆಹರಿಸಲು ನೀವು ಮನಃಪೂರ್ವಕವಾಗಿ ಪ್ರಯತ್ನಿಸುವಿರಿ ಎಂಬುದನ್ನು ನಿರ್ಧರಿಸಿರಿ.

ತನ್ನ ಗಂಡನೊಂದಿಗೆ ಗೊಂದಲಮಯ ಸ್ಥಿತಿಯನ್ನು ಅನುಭವಿಸಿದ ಬಳಿಕ ಒಬ್ಬ ಹೆಂಡತಿಯು ಇದನ್ನೇ ಮಾಡಿದಳು. ಅವಳು ಹೇಳುವುದು: “ಕೆಲವೊಮ್ಮೆ ನಾನು ಅವರ ಮೇಲೆ ಎಷ್ಟೇ ಕೋಪಗೊಂಡರೂ, ಅವರೊಂದಿಗಿನ ಸಂಬಂಧವನ್ನು ಕೊನೆಗೊಳಿಸುವ ಯೋಚನೆಯನ್ನೇ ಮಾಡಲಿಲ್ಲ. ಏನೇ ತಪ್ಪಾದರೂ ನಾವು ಹೇಗೋ ಅದನ್ನು ಸರಿಪಡಿಸಲಿದ್ದೆವು. ಆದುದರಿಂದ, ವಿಪರೀತ ಕಷ್ಟತೊಂದರೆಗಳಿಂದ ಕೂಡಿದ ಎರಡು ವರ್ಷಗಳ ಬಳಿಕ, ಅಂದರೆ ಈಗ ಪುನಃ ನಾವಿಬ್ಬರೂ ಒಟ್ಟಿಗೆ ಸಂತೋಷದಿಂದ ಜೀವಿಸುತ್ತಿದ್ದೇವೆ ಎಂದು ನಾನು ಪ್ರಾಮಾಣಿಕವಾಗಿ ಹೇಳಬಲ್ಲೆ.”

ಹೌದು, ವಿವಾಹ ಬದ್ಧತೆಯೆಂದರೆ ಒಟ್ಟುಗೂಡಿ ಕೆಲಸಮಾಡುವುದೇ ಆಗಿದೆ. ಇದರ ಅರ್ಥ ಕೇವಲ ಒಟ್ಟಿಗೆ ಜೀವಿಸುವುದಲ್ಲ, ಬದಲಾಗಿ ಒಂದೇ ಗುರಿಯನ್ನು ಸಾಧಿಸಲು ಒಟ್ಟಿಗೆ ಕಾರ್ಯನಡಿಸುವುದೇ ಆಗಿದೆ. ಆದರೂ, ಈ ಹಂತದಲ್ಲಿ ನಿಮ್ಮ ದಾಂಪತ್ಯವನ್ನು ಒಟ್ಟಿಗೆ ಮುಂದುವರಿಸುವುದು ಕೇವಲ ಕರ್ತವ್ಯಪ್ರಜ್ಞೆಯಾಗಿದೆ ಎಂದು ನೀವು ಭಾವಿಸಬಹುದು. ಹೀಗನಿಸುವಲ್ಲಿ, ಹತಾಶರಾಗಬೇಡಿ. ನಿಮ್ಮ ದಾಂಪತ್ಯದಲ್ಲಿ ಪ್ರೀತಿಯನ್ನು ಪುನಸ್ಸ್ಥಾಪಿಸುವ ಸಾಧ್ಯತೆಯಿದೆ. ಹೇಗೆ?

ನಿಮ್ಮ ಪತಿ/ಪತ್ನಿಗೆ ಗೌರವ ತೋರಿಸುವುದು

ಬೈಬಲು ಹೇಳುವುದು: “ವಿವಾಹ ಸಂಬಂಧವು ಎಲ್ಲರಲ್ಲೂ ಗೌರವಯೋಗ್ಯವಾಗಿರಲಿ.” (ಇಬ್ರಿಯ 13:​4, NW; ರೋಮಾಪುರ 12:10) ಇಲ್ಲಿ “ಗೌರವಯೋಗ್ಯ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಶಬ್ದದ ರೂಪಗಳು, ಬೈಬಲಿನಲ್ಲಿ ಬೇರೆ ಕಡೆಗಳಲ್ಲಿ “ನೆಚ್ಚಿನ,” “ಮಾನ್ಯತೆಯುಳ್ಳ,” ಹಾಗೂ “ಅಮೂಲ್ಯ” ಎಂಬುದಾಗಿ ತರ್ಜುಮೆಮಾಡಲ್ಪಟ್ಟಿವೆ. ಒಂದು ವಸ್ತುವನ್ನು ನಾವು ತುಂಬ ಅಮೂಲ್ಯವಾಗಿ ಪರಿಗಣಿಸುವಾಗ, ಅದನ್ನು ಚೆನ್ನಾಗಿ ನೋಡಿಕೊಳ್ಳಲಿಕ್ಕಾಗಿ ನಾವು ತುಂಬ ಪ್ರಯತ್ನಗಳನ್ನು ಮಾಡುತ್ತೇವೆ. ತುಂಬ ದುಬಾರಿಯಾದ ಒಂದು ಹೊಸ ಕಾರನ್ನು ಕೊಂಡುಕೊಂಡಿರುವ ಒಬ್ಬ ವ್ಯಕ್ತಿಯ ವಿಷಯದಲ್ಲಿ ಇದು ಸತ್ಯವೆಂಬುದನ್ನು ನೀವು ಗಮನಿಸಿರಬಹುದು. ಅವನು ತನ್ನ ಅಮೂಲ್ಯ ಕಾರು ಹೊಳೆಯುತ್ತಿರುವಂತೆ ಹಾಗೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತಾನೆ. ಒಂದುವೇಳೆ ಆ ವಾಹನದ ಮೇಲೆ ಒಂದು ಚಿಕ್ಕ ಗೀರಾಗುವುದಾದರೂ, ಅವನಿಗೆ ಅದು ಒಂದು ದೊಡ್ಡ ದುರಂತದಂತೆ ತೋರುತ್ತದೆ! ಇನ್ನಿತರರು ತಮ್ಮ ಆರೋಗ್ಯದ ಬಗ್ಗೆ ಈ ರೀತಿಯ ಕಾಳಜಿ ವಹಿಸುತ್ತಾರೆ. ಏಕೆ? ಏಕೆಂದರೆ ಅವರು ತಮ್ಮ ಹಿತಕ್ಷೇಮವನ್ನು ಅಮೂಲ್ಯವಾಗಿ ಪರಿಗಣಿಸುತ್ತಾರೆ ಮತ್ತು ಅದನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ.

ನಿಮ್ಮ ದಾಂಪತ್ಯದ ವಿಷಯದಲ್ಲಿಯೂ ಇದೇ ರೀತಿಯ ಮನೋಭಾವವನ್ನು ತೋರಿಸಿ. ಪ್ರೀತಿಯು “ಎಲ್ಲವನ್ನೂ ನಿರೀಕ್ಷಿಸುತ್ತದೆ” ಎಂದು ಬೈಬಲು ಹೇಳುತ್ತದೆ. (1 ಕೊರಿಂಥ 13:⁠7) “ನಿಜವಾಗಿಯೂ ನಾವಿಬ್ಬರೂ ಎಂದೂ ಪರಸ್ಪರ ಪ್ರೀತಿಸಲಿಲ್ಲ,” “ತೀರ ಚಿಕ್ಕ ಪ್ರಾಯದಲ್ಲೇ ನಾವು ಮದುವೆಯಾದೆವು,” ಅಥವಾ “ನಾವೇನು ಮಾಡುತ್ತಿದ್ದೇವೆ ಎಂಬುದು ನಮಗೆ ಗೊತ್ತಿರಲಿಲ್ಲ” ಎಂದು ಹೇಳುತ್ತಾ, ಇನ್ನೆಂದೂ ಸಂಬಂಧವನ್ನು ಉತ್ತಮಗೊಳಿಸುವ ಸಾಧ್ಯತೆಯೇ ಇಲ್ಲ ಎಂದು ನೀವು ಸೋಲೊಪ್ಪಿಕೊಳ್ಳುವುದು ಸರಿಯಲ್ಲ. ಅದಕ್ಕೆ ಬದಲಾಗಿ, ಮುಂದೆ ಒಳ್ಳೇದಾಗುತ್ತದೆ ಎಂಬ ನಿರೀಕ್ಷೆಯುಳ್ಳವರಾಗಿದ್ದು, ಸಂಬಂಧವನ್ನು ಉತ್ತಮಗೊಳಿಸಲಿಕ್ಕಾಗಿ ಕಾರ್ಯನಡಿಸುತ್ತಾ, ಫಲಿತಾಂಶಗಳಿಗಾಗಿ ತಾಳ್ಮೆಯಿಂದ ಕಾಯುತ್ತಾ ಇರಬಾರದೇಕೆ? ಒಬ್ಬ ವಿವಾಹ ಸಲಹೆಗಾರ್ತಿ (ಕೌನ್ಸೆಲರ್‌)ಯು ಹೇಳುವುದು: “ನನ್ನ ಹತ್ತಿರ ಬರುವ ಗಿರಾಕಿಗಳಲ್ಲಿ ಅನೇಕರು ‘ಸಾಕಾಯಿತು, ಇನ್ನು ಹೆಚ್ಚು ನನ್ನಿಂದ ಸಹಿಸಿಕೊಳ್ಳಲು ಆಗುವುದಿಲ್ಲ!’ ಎಂದು ಹೇಳುವುದನ್ನು ನಾನು ಕೇಳಿಸಿಕೊಂಡಿದ್ದೇನೆ. ತಮ್ಮ ವಿವಾಹ ಸಂಬಂಧದ ಯಾವ ಕ್ಷೇತ್ರದಲ್ಲಿ ತಾವು ಪ್ರಗತಿಯನ್ನು ಮಾಡುವ ಆವಶ್ಯಕತೆಯಿದೆ ಎಂಬುದನ್ನು ಸವಿಸ್ತಾರವಾಗಿ ಪರೀಕ್ಷಿಸಿ ನೋಡುವುದಕ್ಕೆ ಬದಲಾಗಿ, ಅವರು ಆತುರದಿಂದ ಇಡೀ ವೈವಾಹಿಕ ಏರ್ಪಾಡನ್ನೇ ತೊರೆದುಬಿಡಲು ನಿರ್ಧರಿಸುತ್ತಾರೆ. ಏಕೆಂದರೆ ದಾಂಪತ್ಯವನ್ನು ಕಾಪಾಡಿಕೊಳ್ಳಲು ತುಂಬ ಪ್ರಯಾಸಪಡಬೇಕಾಗುತ್ತದೆ ಎಂಬುದು ಅವರ ಅನಿಸಿಕೆ. ಆದುದರಿಂದ ಅವರು ಇಷ್ಟರ ತನಕ ತಾವಿಬ್ಬರೂ ಹಂಚಿಕೊಂಡಿರುವ ವಿಷಯಗಳು, ಮನಸ್ಸಿನಲ್ಲಿ ಜೋಪಾನವಾಗಿ ಕಾಪಾಡಿಕೊಂಡಿರುವ ಹಿಂದಿನ ನೆನಪುಗಳು, ಹಾಗೂ ಭವಿಷ್ಯತ್ತಿನ ಯಾವುದೇ ಸಂಭವನೀಯತೆಗಳನ್ನು ತೊರೆಯಲು ಸಿದ್ಧರಿರುತ್ತಾರೆ.”

ನಿಮ್ಮ ಸಂಗಾತಿಯೊಂದಿಗೆ ಯಾವ ಗತ ಅನುಭವಗಳ ಬಗ್ಗೆ ನೀವು ಮಾತಾಡಸಾಧ್ಯವಿದೆ? ನಿಮ್ಮ ದಾಂಪತ್ಯದಲ್ಲಿ ಯಾವುದೇ ತೊಂದರೆಗಳಿರಲಿ, ಖಂಡಿತವಾಗಿಯೂ ನೀವು ಸಂತೋಷದಿಂದ ಕಳೆದ ಕ್ಷಣಗಳು, ನೀವು ಮಾಡಿದ ಸಾಧನೆಗಳು, ನೀವಿಬ್ಬರೂ ಒಟ್ಟಿಗೆ ಎದುರಿಸಿದ ಪಂಥಾಹ್ವಾನಗಳ ಕುರಿತು ಆಲೋಚಿಸಸಾಧ್ಯವಿದೆ. ಈ ಸಂದರ್ಭಗಳನ್ನು ಪುನಃ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿರಿ. ಹಾಗೂ ನಿಮ್ಮ ಸಂಬಂಧವನ್ನು ಉತ್ತಮಗೊಳಿಸಲು ಪ್ರಾಮಾಣಿಕವಾದ ಪ್ರಯತ್ನಗಳನ್ನು ಮಾಡುವ ಮೂಲಕ, ನಿಮ್ಮ ವಿವಾಹವನ್ನು ಹಾಗೂ ನಿಮ್ಮ ವಿವಾಹ ಸಂಗಾತಿಯನ್ನು ಗೌರವಿಸುತ್ತೀರಿ ಎಂಬುದನ್ನು ರುಜುಪಡಿಸಿರಿ. ವಿವಾಹಿತ ದಂಪತಿಗಳು ಪರಸ್ಪರ ಹೇಗೆ ವ್ಯವಹರಿಸುತ್ತಾರೆ ಎಂಬ ವಿಷಯದಲ್ಲಿ ಯೆಹೋವ ದೇವರು ತುಂಬ ಆಸಕ್ತಿವಹಿಸುತ್ತಾನೆ ಎಂದು ಬೈಬಲು ತೋರಿಸುತ್ತದೆ. ಉದಾಹರಣೆಗೆ, ಪ್ರವಾದಿಯಾದ ಮಲಾಕಿಯನ ದಿನದಲ್ಲಿ, ತಮ್ಮ ಪತ್ನಿಯರಿಗೆ ವಿಚ್ಛೇದನ ನೀಡುವ ಮೂಲಕ ಅವರಿಗೆ ದ್ರೋಹವೆಸಗಿದ ಇಸ್ರಾಯೇಲ್ಯ ಗಂಡಂದಿರನ್ನು ಯೆಹೋವನು ಖಂಡಿಸಿದನು. (ಮಲಾಕಿಯ 2:​13-16) ತಮ್ಮ ದಾಂಪತ್ಯವು ಯೆಹೋವ ದೇವರಿಗೆ ಕೀರ್ತಿಯನ್ನು ತರಬೇಕೆಂದು ಕ್ರೈಸ್ತರು ಬಯಸುತ್ತಾರೆ.

ಜಗಳ​—⁠ಎಷ್ಟು ಗಂಭೀರ?

ಪ್ರೀತಿರಹಿತ ದಾಂಪತ್ಯಗಳಲ್ಲಿರುವ ಒಂದು ಪ್ರಾಮುಖ್ಯ ಅಂಶವು, ಪತಿಪತ್ನಿಯರು ತಮ್ಮ ನಡುವಿನ ಜಗಳವನ್ನು ನಿಭಾಯಿಸಲು ಅಸಮರ್ಥರಾಗಿರುವುದೇ ಆಗಿದೆ. ಇಬ್ಬರು ವ್ಯಕ್ತಿಗಳು ಎಂದೂ ಒಂದೇ ರೀತಿ ಇಲ್ಲದಿರುವುದರಿಂದ ಎಲ್ಲ ವಿವಾಹಗಳಲ್ಲಿಯೂ ಕೆಲವೊಮ್ಮೆ ಮನಸ್ತಾಪಗಳೇಳುತ್ತವೆ. ಆದರೆ, ಆಗಿಂದಾಗ್ಗೆ ಮನಸ್ತಾಪಗಳನ್ನು ಎದುರಿಸುವ ದಂಪತಿಗಳಿಗೆ, ಕಾಲಕ್ರಮೇಣ ತಮ್ಮ ಪ್ರೀತಿಯು ತುಂಬ ಕಡಿಮೆಯಾಗಿದೆ ಎಂದೆನಿಸಬಹುದು. ‘ನಮ್ಮಿಬ್ಬರಲ್ಲಿ ಸ್ವಲ್ಪವೂ ಹೊಂದಾಣಿಕೆಯಿಲ್ಲ. ನಾವು ಯಾವಾಗಲೂ ಜಗಳವಾಡುತ್ತಿರುತ್ತೇವೆ!’ ಎಂಬ ತೀರ್ಮಾನಕ್ಕೆ ಸಹ ಅವರು ಬರಬಹುದು.

ಆದರೂ, ವಿವಾಹದಲ್ಲಾಗುವ ಜಗಳಗಳೇ ದಾಂಪತ್ಯದ ಅಂತ್ಯಕ್ಕೆ ಕಾರಣವಾಗಬೇಕೆಂದೇನಿಲ್ಲ. ಈಗ ಎಬ್ಬಿಸಲ್ಪಡುವ ಪ್ರಶ್ನೆಯೇನೆಂದರೆ, ಜಗಳವನ್ನು ಹೇಗೆ ನಿಭಾಯಿಸಸಾಧ್ಯವಿದೆ? ಒಬ್ಬ ವೈದ್ಯರು ಹೇಳುವಂತೆ, ಯಶಸ್ವಿಕರವಾದ ಒಂದು ದಾಂಪತ್ಯದಲ್ಲಿ, ಪತಿಪತ್ನಿಯರು “ಆತ್ಮೀಯ ಶತ್ರು”ಗಳಾಗಿರದೇ ತಮ್ಮ ಸಮಸ್ಯೆಗಳ ಕುರಿತು ಪರಸ್ಪರ ಮಾತಾಡಿಕೊಳ್ಳಲು ಕಲಿತುಕೊಳ್ಳುತ್ತಾರೆ.

“ನಾಲಿಗೆಯ ಹಿಡಿತ”

ನಿಮ್ಮ ಸಮಸ್ಯೆಗಳ ಕುರಿತು ಪರಸ್ಪರ ಹೇಗೆ ಮಾತಾಡುವುದು ಎಂಬುದು ನಿಮಗೆ ಹಾಗೂ ನಿಮ್ಮ ಸಂಗಾತಿಗೆ ತಿಳಿದಿದೆಯೋ? ಇಬ್ಬರೂ ಅವುಗಳ ಬಗ್ಗೆ ಮಾತಾಡಲು ಮನಃಪೂರ್ವಕವಾಗಿ ಸಿದ್ಧರಿರಬೇಕು. ಇದು ಸಹ ಒಂದು ಕಲೆಯಾಗಿದೆ ಎಂಬುದು ನಿಜ. ಇದನ್ನು ಕಲಿಯುವುದು ತುಂಬ ಪಂಥಾಹ್ವಾನದಾಯಕವಾಗಿರಬಲ್ಲದು. ಏಕೆ? ಒಂದು ಕಾರಣವೇನೆಂದರೆ, ನಾವೆಲ್ಲರೂ ಅಪರಿಪೂರ್ಣರಾಗಿರುವುದರಿಂದ ಅನೇಕಬಾರಿ ‘ಮಾತಿನಲ್ಲಿ ತಪ್ಪುತ್ತೇವೆ.’ (ಯಾಕೋಬ 3:⁠2) ಅಷ್ಟುಮಾತ್ರವಲ್ಲ, ಯಾವಾಗಲೂ ಹೆತ್ತವರು ಪರಸ್ಪರ ಕೋಪದಿಂದಲೇ ವ್ಯವಹರಿಸುವಂತಹ ಮನೆಗಳಲ್ಲಿ ಕೆಲವರು ಬೆಳೆದು ದೊಡ್ಡವರಾಗಿದ್ದಾರೆ. ಒಂದರ್ಥದಲ್ಲಿ, ಹಠಾತ್ತನೆ ಕೋಪವನ್ನು ತೋರಿಸುವುದು ಹಾಗೂ ನಿಂದಾತ್ಮಕವಾಗಿ ಮಾತಾಡುವುದು ತೀರ ಸಾಮಾನ್ಯವಾದ ಸಂಗತಿಯಾಗಿದೆ ಎಂದು ಅವರು ತೀರ ಚಿಕ್ಕ ಪ್ರಾಯದಿಂದಲೇ ನಂಬುವಂಥಾಗಿದೆ. ಇಂತಹ ಪರಿಸರದಲ್ಲಿ ಬೆಳೆಯುವಂತಹ ಒಬ್ಬ ಹುಡುಗನು ‘ಕೋಪಿಷ್ಟನಾಗಿ’ ಮತ್ತು ‘ಕ್ರೋಧಶೀಲನಾಗಿ’ ಪರಿಣಮಿಸಬಹುದು. (ಜ್ಞಾನೋಕ್ತಿ 29:22) ತದ್ರೀತಿಯಲ್ಲಿ, ಇಂತಹ ವಾತಾವರಣದಲ್ಲಿ ಬೆಳೆಯುವ ಒಬ್ಬ ಹುಡುಗಿಯು “ನಿಷ್ಠುರವಾಗಿ ಮಾತಾಡುವವಳೂ ಮುಂಗೋಪಿಯೂ ಆದ ಸ್ತ್ರೀ”ಯಾಗಬಹುದು. (ಜ್ಞಾನೋಕ್ತಿ 21:​19, ದ ಬೈಬಲ್‌ ಇನ್‌ ಬೇಸಿಕ್‌ ಇಂಗ್ಲಿಷ್‌) ಆಳವಾಗಿ ಬೇರೂರಿರುವಂಥ ಆಲೋಚನಾ ವಿಧಾನಗಳು ಹಾಗೂ ಮಾತುಕತೆಯನ್ನು ಬೇರುಸಮೇತ ಕಿತ್ತುಹಾಕುವುದು ತುಂಬ ಕಷ್ಟಕರವಾಗಿರಸಾಧ್ಯವಿದೆ. *

ಆದುದರಿಂದ, ಒಬ್ಬನು ಜಗಳವನ್ನು ನಿಭಾಯಿಸಬೇಕಾದರೆ, ಅವನು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹೊಸ ವಿಧಾನಗಳನ್ನು ಕಲಿಯುವ ಅಗತ್ಯವಿದೆ. ಇದು ತೀರ ಚಿಕ್ಕ ವಿಷಯವೇನಲ್ಲ. ಏಕೆಂದರೆ ಬೈಬಲ್‌ ಜ್ಞಾನೋಕ್ತಿಯು ಹೇಳುವುದು: “ಜೀವಮರಣಗಳು ನಾಲಿಗೆಯ ಹಿಡಿತದಲ್ಲಿವೆ.” (ಜ್ಞಾನೋಕ್ತಿ 18:​21, NW) ಹೌದು, ಇದು ತುಂಬ ಸರಳವಾಗಿ ತೋರುವುದಾದರೂ, ನಿಮ್ಮ ಪತಿ ಅಥವಾ ಪತ್ನಿಯೊಂದಿಗೆ ನೀವು ಮಾತಾಡುವ ವಿಧವು, ನಿಮ್ಮ ವೈವಾಹಿಕ ಸಂಬಂಧವನ್ನು ಹಾಳುಮಾಡಸಾಧ್ಯವಿದೆ ಅಥವಾ ಆ ಸಂಬಂಧವನ್ನು ಪುನಃ ಉಜ್ಜೀವಿಸಸಾಧ್ಯವಿದೆ. ಈ ವಿಷಯದಲ್ಲಿ ಇನ್ನೊಂದು ಬೈಬಲ್‌ ಜ್ಞಾನೋಕ್ತಿಯು ಹೇಳುವುದು: “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು; ಮತಿವಂತರ ಮಾತೇ ಮದ್ದು.”​—⁠ಜ್ಞಾನೋಕ್ತಿ 12:⁠18.

ಈ ವಿಷಯದಲ್ಲಿ ನಿಮ್ಮ ಸಂಗಾತಿಯೇ ತಪ್ಪಿತಸ್ಥನಾಗಿ/ಳಾಗಿ ಕಂಡುಬರುವುದಾದರೂ, ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವಂತಹ ಸಂದರ್ಭದಲ್ಲಿ ನೀವು ಹೇಳುವ ಮಾತುಗಳ ಬಗ್ಗೆ ಸರಿಯಾಗಿ ಯೋಚಿಸಿರಿ. ನಿಮ್ಮ ಮಾತುಗಳು ನೋವನ್ನುಂಟುಮಾಡುತ್ತವೋ ಅಥವಾ ದುಃಖೋಪಶಮನಮಾಡುತ್ತವೋ? ಅವು ಕೋಪವನ್ನು ಕೆರಳಿಸುತ್ತವೋ ಅಥವಾ ಶಾಂತಗೊಳಿಸುತ್ತವೋ? “ಬಿರುನುಡಿಯು ಸಿಟ್ಟನ್ನೇರಿಸುವದು” ಎಂದು ಬೈಬಲು ಹೇಳುತ್ತದೆ. ಇದಕ್ಕೆ ತದ್ವಿರುದ್ಧವಾಗಿ, “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು.” (ಜ್ಞಾನೋಕ್ತಿ 15:⁠1) ನೋವನ್ನುಂಟುಮಾಡುವಂಥ ಮಾತುಗಳನ್ನು ಎಷ್ಟೇ ಶಾಂತವಾದ ರೀತಿಯಲ್ಲಿ ಆಡುವುದಾದರೂ, ಅದು ಸನ್ನಿವೇಶವನ್ನು ಇನ್ನೂ ಹೆಚ್ಚು ಉದ್ವೇಗಕ್ಕೆ ಒಳಪಡಿಸಬಲ್ಲದು.

ಯಾವುದೇ ಸಂಗತಿಯು ನಿಮಗೆ ಚಿಂತೆಯನ್ನು ಉಂಟುಮಾಡುವಲ್ಲಿ, ನಿಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಿದೆ ಎಂಬುದಂತೂ ಖಂಡಿತ. (ಆದಿಕಾಂಡ 21:​9-12) ಆದರೆ ನಿಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವಾಗ, ಚುಚ್ಚು ನುಡಿಗಳು, ಕೆಣಕು ಮಾತುಗಳು, ಹಾಗೂ ಅಪಮಾನಕರವಾದ ಹೇಳಿಕೆಗಳನ್ನು ಉಪಯೋಗಿಸಬೇಡಿರಿ. ನೀವು ಏನನ್ನು ಹೇಳಲಿದ್ದೀರೋ ಅದಕ್ಕೆ ಇತಿಮಿತಿಯಿರುವುದು ಒಳ್ಳೇದು. “ನಾನು ನಿನ್ನನ್ನು ದ್ವೇಷಿಸುತ್ತೇನೆ” ಅಥವಾ “ನಾವು ಮದುವೆಯಾಗದಿದ್ದರೇ ಒಳ್ಳೇದಿತ್ತು” ಎಂಬಂಥ ಮಾತುಗಳನ್ನು ನಿಮ್ಮ ಸಂಗಾತಿಗೆ ಹೇಳಬಾರದು ಎಂದು ಮನಸ್ಸಿನಲ್ಲೇ ನಿರ್ಧರಿಸಿಕೊಳ್ಳಿರಿ. ಇದಲ್ಲದೆ ಕ್ರೈಸ್ತ ಅಪೊಸ್ತಲ ಪೌಲನು ನಿರ್ದಿಷ್ಟವಾಗಿ ವಿವಾಹದ ಕುರಿತು ಚರ್ಚಿಸುತ್ತಿರಲಿಲ್ಲವಾದರೂ, “ವಾಗ್ವಾದಗಳು” ಹಾಗೂ “ಚಿಕ್ಕಪುಟ್ಟ ವಿಷಯಗಳ ಕುರಿತಾದ ಕಚ್ಚಾಟಗಳು” (NW) ಎಂದು ಅವನು ಯಾವುದನ್ನು ಕರೆದನೋ ಅದರಲ್ಲಿ ಸಿಕ್ಕಿಹಾಕಿಕೊಳ್ಳದಿರುವುದು ವಿವೇಕಯುತವಾದದ್ದಾಗಿದೆ. * (1 ತಿಮೊಥೆಯ 6:​4, 5) ಒಂದುವೇಳೆ ನಿಮ್ಮ ಸಂಗಾತಿಯು ಆ ರೀತಿಯಲ್ಲಿ ಮಾತಾಡುವುದಾದರೆ, ನೀವು ಸಹ ಅದೇ ರೀತಿ ಮಾತಾಡಬೇಕೆಂದಿಲ್ಲ. ನಿಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಸಮಾಧಾನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿರಿ.​—⁠ರೋಮಾಪುರ 12:​17, 18; ಫಿಲಿಪ್ಪಿ 2:⁠14.

ಕೋಪವು ಭಗ್ಗನೆ ಹೊತ್ತಿಕೊಳ್ಳುವಾಗ, ಒಬ್ಬನು ತನ್ನ ಮಾತುಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು ತುಂಬ ಕಷ್ಟಕರ ಎಂಬುದು ಒಪ್ಪತಕ್ಕ ವಿಷಯವೇ. ಬೈಬಲ್‌ ಬರಹಗಾರನಾದ ಯಾಕೋಬನು ಹೇಳುವುದು: “ನಾಲಿಗೆಯೂ ಕಿಚ್ಚೇ. . . . ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು. ಅದು ಸುಮ್ಮನಿರಲಾರದ ಕೆಡುಕಾಗಿದೆ; ಮರಣಕರವಾದ ವಿಷದಿಂದ ತುಂಬಿ ಇದೆ.” (ಯಾಕೋಬ 3:​6, 8) ಹಾಗಾದರೆ, ಕೋಪವು ಹೆಚ್ಚಾಗುತ್ತಾ ಹೋಗುವಾಗ ನೀವು ಏನು ಮಾಡಸಾಧ್ಯವಿದೆ? ಜಗಳವನ್ನು ಹೆಚ್ಚಿಸುವುದಕ್ಕೆ ಬದಲಾಗಿ ಅದನ್ನು ಶಾಂತಗೊಳಿಸುವಂತಹ ರೀತಿಯಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಹೇಗೆ ಮಾತಾಡಸಾಧ್ಯವಿದೆ?

ಸ್ಫೋಟಕ ವಾಗ್ವಾದಗಳನ್ನು ಶಾಂತಗೊಳಿಸುವುದು

ತಮ್ಮ ಸಂಗಾತಿಯ ಪ್ರತಿಕ್ರಿಯೆಗಳಿಗೆ ಬದಲಾಗಿ ತಮ್ಮ ಸ್ವಂತ ಭಾವನೆಗಳಿಗೆ ಹೆಚ್ಚು ಮಹತ್ವವನ್ನು ನೀಡುವುದಾದರೆ, ಕೋಪವನ್ನು ತಗ್ಗಿಸಲು ಹಾಗೂ ವಾಗ್ವಾದಕ್ಕೆ ಒಳಗಾಗಿರುವ ವಿಷಯವನ್ನು ಸ್ಪಷ್ಟಪಡಿಸಲು ಸುಲಭವಾಗುತ್ತದೆ ಎಂದು ಕೆಲವರು ಕಂಡುಕೊಂಡಿದ್ದಾರೆ. ಉದಾಹರಣೆಗೆ, “ನೀವು ನನ್ನ ಮನಸ್ಸನ್ನು ನೋಯಿಸಿದಿರಿ” ಅಥವಾ “ನೀವು ಏನು ಹೇಳುತ್ತೀರಿ ಎಂಬುದು ನಿಮಗೆ ಸರಿಯಾಗಿ ಗೊತ್ತಿರಬೇಕು” ಎಂದು ಹೇಳುವುದಕ್ಕಿಂತಲೂ, “ನೀವು ಹೇಳಿದ ಮಾತಿನಿಂದ ನನಗೆ ತುಂಬ ದುಃಖವಾಗಿದೆ” ಎಂದು ಹೇಳುವುದು ಹೆಚ್ಚು ಪರಿಣಾಮಕಾರಿಯಾಗಿದೆ. ನಿಮಗೆ ಹೇಗನಿಸುತ್ತದೆ ಎಂಬುದನ್ನು ವ್ಯಕ್ತಪಡಿಸುವಾಗ, ನಿಮ್ಮ ಸ್ವರದಲ್ಲಿ ಕಹಿ ಮನೋಭಾವ ಅಥವಾ ತಿರಸ್ಕಾರವು ಒಳಗೂಡಿರಬಾರದು ಎಂಬುದಂತೂ ನಿಶ್ಚಯ. ವ್ಯಕ್ತಿಯ ಮೇಲೆಯೇ ಹಲ್ಲೆಮಾಡುವುದಕ್ಕಿಂತಲೂ ಆ ವ್ಯಕ್ತಿಯ ಸಮಸ್ಯೆಯನ್ನು ಎತ್ತಿತೋರಿಸುವುದೇ ನಿಮ್ಮ ಮುಖ್ಯ ಉದ್ದೇಶವಾಗಿರಬೇಕು.​—⁠ಆದಿಕಾಂಡ 27:​46–28:⁠1.

ಇದಲ್ಲದೆ, “ಸುಮ್ಮನಿರುವ ಸಮಯ, ಮಾತಾಡುವ ಸಮಯ” ಇದೆ ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿರಿ. (ಪ್ರಸಂಗಿ 3:⁠7) ಇಬ್ಬರೂ ವ್ಯಕ್ತಿಗಳು ಏಕಕಾಲದಲ್ಲಿ ಮಾತಾಡುತ್ತಿರುವುದಾದರೆ, ಅವರಲ್ಲಿ ಯಾರೂ ಒಬ್ಬರ ಮಾತನ್ನು ಇನ್ನೊಬ್ಬರು ಕೇಳಿಸಿಕೊಳ್ಳುವುದಿಲ್ಲ ಮತ್ತು ಇದರಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಆದುದರಿಂದ, ನೀವು ಕಿವಿಗೊಡಬೇಕಾದಂಥ ಸಂದರ್ಭ ಬಂದಾಗ, “ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ” ಇರಿ. ಹಾಗೂ “ಕೋಪಿಸುವದರಲ್ಲಿಯೂ ನಿಧಾನವಾಗಿ”ರುವುದು ಅಷ್ಟೇ ಪ್ರಾಮುಖ್ಯವಾಗಿದೆ. (ಯಾಕೋಬ 1:19) ನಿಮ್ಮ ಸಂಗಾತಿಯು ಕೋಪದಿಂದ ಹೇಳುವಂತಹ ಪ್ರತಿ ಮಾತನ್ನು ಅಕ್ಷರಾರ್ಥವಾಗಿ ತೆಗೆದುಕೊಳ್ಳಬೇಡಿ, ಮತ್ತು “ನಿಮ್ಮ ಮನಸ್ಸು ಕೋಪಕ್ಕೆ ಆತುರಪಡದಿರಲಿ.” (ಪ್ರಸಂಗಿ 7:⁠9) ಅದಕ್ಕೆ ಬದಲಾಗಿ, ನಿಮ್ಮ ಸಂಗಾತಿಯ ಮಾತುಗಳ ಹಿಂದಿರುವ ಭಾವನೆಗಳನ್ನು ಗ್ರಹಿಸಲು ಪ್ರಯತ್ನಿಸಿರಿ. ಬೈಬಲು ಹೇಳುವುದು: “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ; [ಪರರ] ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ.” (ಜ್ಞಾನೋಕ್ತಿ 19:11) ಮನಸ್ತಾಪದ ಹಿಂದೆ ಯಾವ ಕಾರಣವಿದೆ ಎಂಬುದನ್ನು ವಿವೇಚಿಸಿ ನೋಡುವಂತೆ ಒಳನೋಟವು ಒಬ್ಬ ಪತಿಗೆ ಅಥವಾ ಪತ್ನಿಗೆ ಸಹಾಯ ಮಾಡಬಲ್ಲದು.

ಉದಾಹರಣೆಗೆ, ತನ್ನ ಪತಿಯು ತನ್ನೊಂದಿಗೆ ಹೆಚ್ಚು ಸಮಯವನ್ನು ಕಳೆಯುವುದಿಲ್ಲ ಎಂದು ಒಬ್ಬ ಪತ್ನಿಯು ಆಪಾದಿಸುವಲ್ಲಿ, ಅವಳು ಕೇವಲ ತಾಸುಗಳು ಹಾಗೂ ನಿಮಿಷಗಳ ಬಗ್ಗೆ ಮಾತಾಡುತ್ತಿಲ್ಲದಿರಬಹುದು. ಅವಳ ಭಾವನೆಗಳನ್ನು ಪತಿಯು ನಿರ್ಲಕ್ಷಿಸುತ್ತಿದ್ದಾನೆ ಅಥವಾ ಅವಳಿಗೆ ಪರಿಗಣನೆ ತೋರಿಸುತ್ತಿಲ್ಲ ಎಂಬುದನ್ನು ಅದು ಅರ್ಥೈಸಬಹುದು. ತದ್ರೀತಿಯಲ್ಲಿ, ಒಬ್ಬ ಪತ್ನಿಯು ಹಿಂದೆಮುಂದೆ ನೋಡದೆ ಕೈಗೆ ಸಿಕ್ಕಂತಹ ವಸ್ತುಗಳನ್ನು ಖರೀದಿಸಿರುವುದನ್ನು ನೋಡಿ ಪತಿಯು ಅಸಮಾಧಾನಗೊಳ್ಳಬಹುದು. ಆದರೆ ಅವನು ಅಸಮಾಧಾನಗೊಂಡಿರುವುದು ಅವಳು ಹಣವನ್ನು ವ್ಯಯಿಸಿದ್ದಕ್ಕಾಗಿ ಮಾತ್ರವಲ್ಲ, ನಿರ್ಧಾರವನ್ನು ಮಾಡುವ ವಿಷಯದಲ್ಲಿ ತನ್ನ ಭಾವನೆಗೆ ಪತ್ನಿಯು ಬೆಲೆಯನ್ನು ಕೊಡಲಿಲ್ಲವಲ್ಲ ಎಂಬ ಅನಿಸಿಕೆಯಿಂದಲೂ ಆಗಿರಬಹುದು. ಒಳನೋಟವಿರುವ ಪತಿ ಅಥವಾ ಪತ್ನಿಯು ಸಮಸ್ಯೆಯ ಮೇಲ್ಮೈಗಿಂತಲೂ ಆಳವಾಗಿ ಪರಿಶೋಧಿಸುತ್ತಾರೆ ಮತ್ತು ಅದರ ಕಾರಣವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ.​—⁠ಜ್ಞಾನೋಕ್ತಿ 16:⁠23.

ಇದನ್ನು ಹೇಳುವುದು ಸುಲಭ, ಆದರೆ ಹೀಗೆ ಮಾಡುವುದು ತುಂಬ ಕಷ್ಟ ಅಲ್ಲವೇ? ಖಂಡಿತವಾಗಿಯೂ ಹೌದು! ಕೆಲವೊಮ್ಮೆ ಎಷ್ಟು ಪ್ರಯತ್ನಿಸಿದರೂ ನಿರ್ದಯವಾದ ಮಾತುಗಳು ಬಾಯಿಂದ ಬಂದುಬಿಡುತ್ತವೆ ಮತ್ತು ಕೋಪವು ಭಗ್ಗನೆ ಹೊತ್ತಿಕೊಳ್ಳುತ್ತದೆ. ಹೀಗೆ ಸಂಭವಿಸಲು ಆರಂಭವಾಗುವಾಗ, ಜ್ಞಾನೋಕ್ತಿ 17:14ರಲ್ಲಿ ಕೊಡಲ್ಪಟ್ಟಿರುವ ಬುದ್ಧಿವಾದವನ್ನು ನೀವು ಅನುಸರಿಸಬೇಕಾಗಬಹುದು: “ಸಿಟ್ಟೇರುವದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು.” ನಿಮ್ಮ ಕೋಪದ ಅನಿಸಿಕೆಗಳು ಶಮನವಾಗುವ ತನಕ ಚರ್ಚೆಯನ್ನು ಮುಂದೂಡುವುದರಲ್ಲಿ ತಪ್ಪೇನಿಲ್ಲ. ಒಂದುವೇಳೆ ಕೋಪವನ್ನು ನಿಯಂತ್ರಿಸಿಕೊಂಡು ಮಾತಾಡುವುದು ಅತ್ಯಂತ ಕಷ್ಟಕರವಾಗಿರುವಲ್ಲಿ, ನಿಮ್ಮಿಬ್ಬರೊಂದಿಗೆ ಇನ್ನೊಬ್ಬ ಪ್ರೌಢ ಸ್ನೇಹಿತನೂ ಕುಳಿತುಕೊಂಡು, ನಿಮ್ಮ ಮನಸ್ತಾಪಗಳನ್ನು ಸರಿಪಡಿಸಲು ಸಹಾಯ ಮಾಡುವುದು ಸೂಕ್ತವಾಗಿರಬಹುದು. *

ವಾಸ್ತವಿಕ ಹೊರನೋಟವನ್ನು ಕಾಪಾಡಿಕೊಳ್ಳಿರಿ

ಮದುವೆಗೆ ಮುಂಚೆ ಪರಸ್ಪರ ಭೇಟಿಯಾಗುತ್ತಿದ್ದಾಗ ನೀವು ನೆನಸಿದ್ದಂತೆ ನಿಮ್ಮ ದಾಂಪತ್ಯ ಜೀವನವು ಸಾಗುತ್ತಿಲ್ಲದಿರುವಲ್ಲಿ, ನಿರಾಶರಾಗಬೇಡಿ. ಪರಿಣತರ ಒಂದು ತಂಡವು ಹೇಳುವುದು: “ಅಧಿಕಾಂಶ ಜನರಿಗೆ ವಿವಾಹವು ಸತತವಾಗಿ ಪರಮ ಸುಖ ನೀಡುವ ಸಂಗತಿಯಾಗಿರುವುದಿಲ್ಲ. ಕೆಲವೊಮ್ಮೆ ಅದು ತುಂಬ ಅದ್ಭುತಕರವಾಗಿರುತ್ತದೆ ಮತ್ತು ಇನ್ನಿತರ ಸಮಯಗಳಲ್ಲಿ ಅದು ತುಂಬ ಕಷ್ಟಮಯವಾಗಿರುತ್ತದೆ.”

ಹೌದು, ದಾಂಪತ್ಯವು ಕಥೆಪುಸ್ತಕದಲ್ಲಿ ಬರುವ ರಂಜಕ ಕಥೆಯಂತಿಲ್ಲದಿರಬಹುದು. ಆದರೆ ಅದೇ ಸಮಯದಲ್ಲಿ ದಾಂಪತ್ಯವು ಒಂದು ದುರಂತವಾಗಿರಬೇಕೆಂದೇನಿಲ್ಲ. ನೀವು ಹಾಗೂ ನಿಮ್ಮ ಸಂಗಾತಿಯು ಪರಸ್ಪರ ಹೊಂದಿಕೊಂಡು ಹೋಗಬೇಕಾದ ಸಂದರ್ಭಗಳು ಇರುತ್ತವಾದರೂ, ನೀವು ನಿಮ್ಮ ಮನಸ್ತಾಪಗಳನ್ನು ಬದಿಗೊತ್ತಿ, ಒಬ್ಬರು ಇನ್ನೊಬ್ಬರ ಸಾಮೀಪ್ಯದಲ್ಲಿ ಆನಂದಿಸಿ, ವಿನೋದದಿಂದ ಕಾಲಕಳೆಯುತ್ತಾ, ಸ್ನೇಹಿತರಂತೆ ಪರಸ್ಪರ ಮಾತಾಡುತ್ತಾ ಇರಸಾಧ್ಯವಿರುವ ಸಂದರ್ಭಗಳೂ ಇರುವವು. (ಎಫೆಸ 4:2; ಕೊಲೊಸ್ಸೆ 3:13) ಇಂತಹ ಸಮಯಗಳಲ್ಲಿಯೇ ನೀವು ಕಡಿಮೆಯಾಗಿರುವಂತಹ ಪ್ರೀತಿಯನ್ನು ಪುನಃ ಅನುಭವಿಸಲು ಶಕ್ತರಾಗಿರಸಾಧ್ಯವಿದೆ.

ಇಬ್ಬರು ಅಪರಿಪೂರ್ಣ ಮಾನವರು ಸೇರಿಕೊಂಡು ಒಂದು ಪರಿಪೂರ್ಣ ದಾಂಪತ್ಯವನ್ನು ನಡೆಸುವುದು ಅಸಾಧ್ಯ ಎಂಬುದು ನೆನಪಿರಲಿ. ಆದರೂ ತಮ್ಮ ದಾಂಪತ್ಯದಲ್ಲೇ ಅವರು ತಕ್ಕಷ್ಟು ಸಂತೋಷವನ್ನು ಕಂಡುಕೊಳ್ಳಸಾಧ್ಯವಿದೆ. ಕಷ್ಟತೊಂದರೆಗಳಿದ್ದಾಗ್ಯೂ, ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವಿನ ಸಂಬಂಧವು ಅಪಾರ ಸಂತೃಪ್ತಿಯ ಸೆಲೆಯಾಗಿರಸಾಧ್ಯವಿದೆ ಎಂಬುದಂತೂ ಖಂಡಿತ. ಒಂದು ವಿಷಯವಂತೂ ನಿಶ್ಚಯ: ಒಂದುವೇಳೆ ನೀವು ಹಾಗೂ ನಿಮ್ಮ ಸಂಗಾತಿಯು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುವಲ್ಲಿ, ಪರಸ್ಪರ ಮಣಿಯಲು ಸಿದ್ಧರಿರುವಲ್ಲಿ ಹಾಗೂ ಇನ್ನೊಬ್ಬರ ಒಳಿತನ್ನು ಬಯಸುವುದಾದಲ್ಲಿ, ನಿಮ್ಮ ದಾಂಪತ್ಯವನ್ನು ರಕ್ಷಿಸಸಾಧ್ಯವಿದೆ ಎಂಬುದನ್ನು ನಂಬಲು ಸಕಾರಣವಿದೆ.​—⁠1 ಕೊರಿಂಥ 10:⁠24. (g01 1/8)

[ಪಾದಟಿಪ್ಪಣಿಗಳು]

^ ಹೆತ್ತವರ ಪ್ರಭಾವವು, ಒಬ್ಬನು ತನ್ನ ಸಂಗಾತಿಯೊಂದಿಗೆ ನಿಷ್ಠುರವಾಗಿ ಮಾತಾಡುವುದಕ್ಕೆ ವಿನಾಯಿತಿ ನೀಡುವುದಿಲ್ಲ. ಆದರೂ, ಅಂತಹ ಪ್ರವೃತ್ತಿಯು ಆಳವಾಗಿ ಬೇರೂರಲು ಹೇಗೆ ಸಾಧ್ಯ ಮತ್ತು ಬುಡಸಮೇತ ಕಿತ್ತುಹಾಕಲು ಕಷ್ಟಕರವೇಕೆಂಬುದನ್ನು ವಿವರಿಸಲು ಇದು ಸಹಾಯಕಾರಿಯಾಗಿದೆ.

^ “ಚಿಕ್ಕಪುಟ್ಟ ವಿಷಯಗಳ ಕುರಿತು ಹಿಂಸಾತ್ಮಕವಾದ ಜಗಳಗಳು” ಎಂದು ಭಾಷಾಂತರಿಸಲ್ಪಟ್ಟಿರುವ ಮೂಲ ಗ್ರೀಕ್‌ ಶಬ್ದವನ್ನು, “ಪರಸ್ಪರ ವಾಗ್ವಾದಮಾಡುವುದು” ಎಂದು ಸಹ ತರ್ಜುಮೆಮಾಡಸಾಧ್ಯವಿದೆ.

^ ಯೆಹೋವನ ಸಾಕ್ಷಿಗಳಿಗೆ ಸಭಾ ಹಿರಿಯರ ಸಹಾಯವಿದೆ. ವಿವಾಹಿತ ದಂಪತಿಗಳ ವೈಯಕ್ತಿಕ ವಿಚಾರಗಳಲ್ಲಿ ತಲೆಹಾಕುವುದು ಅವರ ಜವಾಬ್ದಾರಿಯಲ್ಲವಾದರೂ, ತೊಂದರೆಯಲ್ಲಿರುವ ದಂಪತಿಗಳಿಗೆ ಹಿರಿಯರು ಚೈತನ್ಯದಾಯಕ ಸಹಾಯವನ್ನು ನೀಡಬಲ್ಲರು.​—⁠ಯಾಕೋಬ 5:​14, 15.

[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಿಮ್ಮ ಮಾತುಗಳು ನೋವನ್ನುಂಟುಮಾಡುತ್ತವೋ ಅಥವಾ ದುಃಖೋಪಶಮನ​ಮಾಡುತ್ತವೋ?

[ಪುಟ 10ರಲ್ಲಿರುವ ಚೌಕ/ಚಿತ್ರಗಳು]

ಚೆಂಡನ್ನು ಮೆಲ್ಲಗೆ ಎಸೆಯಿರಿ

ಬೈಬಲು ಹೇಳುವುದು: “ನಿಮ್ಮ ಸಂಭಾಷಣೆಯು ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.” (ಕೊಲೊಸ್ಸೆ 4:⁠6) ಖಂಡಿತವಾಗಿಯೂ ವಿವಾಹದಲ್ಲಿ ಇದು ಚೆನ್ನಾಗಿ ಅನ್ವಯವಾಗುತ್ತದೆ! ದೃಷ್ಟಾಂತಕ್ಕಾಗಿ: ಚೆಂಡಾಟವನ್ನು ಆಡುವಾಗ, ಸುಲಭವಾಗಿ ಹಿಡಿಯಸಾಧ್ಯವಾಗುವಂತಹ ರೀತಿಯಲ್ಲಿ ನೀವು ಅದನ್ನು ಎಸೆಯುತ್ತೀರಿ. ನಿಮ್ಮ ಜೊತೆ ಆಡುತ್ತಿರುವ ವ್ಯಕ್ತಿಗೆ ಘಾಸಿಯಾಗುವಷ್ಟು ರಭಸವಾಗಿ ನೀವು ಅದನ್ನು ಎಸೆಯುವುದಿಲ್ಲ ಎಂಬುದಂತೂ ಖಂಡಿತ. ನಿಮ್ಮ ವಿವಾಹ ಸಂಗಾತಿಯೊಂದಿಗೆ ಮಾತಾಡುವಾಗಲೂ ಇದೇ ತತ್ವವನ್ನು ಅನ್ವಯಿಸಿರಿ. ಪರಸ್ಪರ ಆರೋಪಗಳನ್ನು ಹೊರಿಸುತ್ತಾ ಕಟುನುಡಿಗಳನ್ನಾಡುವುದು ದಾಂಪತ್ಯಕ್ಕೆ ಹಾನಿಯನ್ನು ಉಂಟುಮಾಡುವುದು. ಅದಕ್ಕೆ ಬದಲಾಗಿ, ನೀವು ಹೇಳುತ್ತಿರುವ ಮಾತಿನ ಅಂಶವೇನು ಎಂಬುದನ್ನು ನಿಮ್ಮ ಸಂಗಾತಿಯು ಅರ್ಥಮಾಡಿಕೊಳ್ಳಸಾಧ್ಯವಾಗುವಂತೆ ವಿನಯಶೀಲತೆಯಿಂದ ಮೃದುವಾಗಿ ಮಾತಾಡಿರಿ.

[ಪುಟ 11ರಲ್ಲಿರುವ ಚೌಕ/ಚಿತ್ರ]

ಹಳೆಯ ಸಂಗತಿಗಳನ್ನು ನೆನಪುಮಾಡಿಕೊಳ್ಳುವುದು

ಹಳೆಯ ಪತ್ರಗಳು ಹಾಗೂ ಕಾರ್ಡ್‌ಗಳನ್ನು ಓದಿರಿ. ಫೋಟೋಗಳನ್ನು ನೋಡಿರಿ. ನಿಮ್ಮಷ್ಟಕ್ಕೆ ನೀವು ಹೀಗೆ ಪ್ರಶ್ನಿಸಿಕೊಳ್ಳಿರಿ, ‘ಯಾವ ಕಾರಣಕ್ಕಾಗಿ ನಾನು ನನ್ನ ಸಂಗಾತಿಯ ಕಡೆಗೆ ಆಕರ್ಷಿತಳಾದೆ/ನಾದೆ? ಅವನ ಅಥವಾ ಅವಳ ಯಾವ ಗುಣಗಳನ್ನು ನಾನು ತುಂಬ ಇಷ್ಟಪಟ್ಟೆ? ನಾವಿಬ್ಬರೂ ಒಟ್ಟಿಗೆ ಯಾವೆಲ್ಲ ಚಟುವಟಿಕೆಗಳಲ್ಲಿ ಒಳಗೂಡಿದ್ದೆವು? ಯಾವುದು ನಮಗೆ ತುಂಬ ನಗುಬರಿಸುತ್ತಿತ್ತು?’ ತದನಂತರ ಈ ಸವಿನೆನಪುಗಳ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತಾಡಿರಿ. “ಒಂದು ಸಮಯದಲ್ಲಿ . . . ನಿಮಗೆ ನೆನಪಿದೆಯೋ?” ಎಂಬ ಮಾತುಗಳಿಂದ ಕೂಡಿದ ಸಂಭಾಷಣೆಯು, ನಿಮಗೆ ಹಾಗೂ ನಿಮ್ಮ ಸಂಗಾತಿಗೆ ಈ ಮುಂಚೆ ಪರಸ್ಪರ ಯಾವ ಭಾವನೆಗಳಿದ್ದವೋ ಅದನ್ನು ಪುನಃ ಅನುಭವಿಸಲು ಸಹಾಯ ಮಾಡಬಹುದು.

[ಪುಟ 12ರಲ್ಲಿರುವ ಚೌಕ]

ಹೊಸ ಜೀವನ ಸಂಗಾತಿ, ಆದರೆ ಹಳೇ ಸಮಸ್ಯೆಗಳು

ಪ್ರೀತಿರಹಿತ ದಾಂಪತ್ಯದಲ್ಲಿ ಸಿಕ್ಕಿಕೊಂಡಿದ್ದೇವೆ ಎಂದು ಭಾವಿಸುವ ಕೆಲವು ದಂಪತಿಗಳು, ಒಬ್ಬ ಹೊಸ ಸಂಗಾತಿಯೊಂದಿಗೆ ಪುನಃ ವೈವಾಹಿಕ ಜೀವನವನ್ನು ಆರಂಭಿಸುವ ಶೋಧನೆಗೆ ಒಳಗಾಗುತ್ತಾರೆ. ಆದರೆ ಬೈಬಲು ವ್ಯಭಿಚಾರವನ್ನು ಖಂಡಿಸುತ್ತದೆ. ಈ ರೀತಿಯ ಪಾಪದಲ್ಲಿ ಒಳಗೂಡುವ ಒಬ್ಬ ವ್ಯಕ್ತಿಯು “ಬುದ್ಧಿಶೂನ್ಯನು [“ಬುದ್ಧಿಯಿಲ್ಲದ ಮೂರ್ಖನು,” ನ್ಯೂ ಇಂಗ್ಲಿಷ್‌ ಬೈಬಲ್‌]” ಮತ್ತು ಇವನು “ತನ್ನನ್ನೇ ನಾಶಪಡಿಸಿಕೊಳ್ಳುವನು” ಎಂದು ಅದು ಹೇಳುತ್ತದೆ. (ಜ್ಞಾನೋಕ್ತಿ 6:32) ಅಂತಿಮವಾಗಿ, ಪಶ್ಚಾತ್ತಾಪವನ್ನು ತೋರಿಸದಿರುವಂತಹ ವ್ಯಭಿಚಾರಿಯು ದೇವರ ಅನುಗ್ರಹವನ್ನು ಕಳೆದುಕೊಳ್ಳುತ್ತಾನೆ; ಇದು ಇದ್ದುದರಲ್ಲಿಯೇ ಅತ್ಯಂತ ಹೀನ ರೀತಿಯ ಅವನತಿಯಾಗಿದೆ.​—⁠ಇಬ್ರಿಯ 13:⁠4.

ವ್ಯಭಿಚಾರಿ ಜೀವನ ರೀತಿಯ ಮಹಾ ಮೂರ್ಖತನವನ್ನು ಬೇರೆ ವಿಧಗಳಲ್ಲಿಯೂ ತೋರಿಸಲಾಗಿದೆ. ಒಂದು ವಿಷಯವೇನೆಂದರೆ, ಒಬ್ಬ ಹೊಸ ಸಂಗಾತಿಯನ್ನು ಮದುವೆಯಾಗುವ ವ್ಯಭಿಚಾರಿಯು, ತನ್ನ ಮೊದಲ ದಾಂಪತ್ಯವನ್ನು ಕೊನೆಗೊಳಿಸಿದ ಅದೇ ಸಮಸ್ಯೆಗಳನ್ನು ಈ ಸಂಬಂಧದಲ್ಲಿಯೂ ಎದುರಿಸಬಹುದು. ಡಾ. ಡೈಆನ್‌ ಮೆಡ್‌ವೆಡ್‌ ಅವರು ಇನ್ನೊಂದು ಅಂಶವನ್ನು ಬೆಳಕಿಗೆ ತರುತ್ತಾ ಹೇಳಿದ್ದು: “ಎಲ್ಲಕ್ಕಿಂತಲೂ ಮೊದಲಾಗಿ ನಿಮ್ಮ ಸಂಗಾತಿಯು ನಿಮ್ಮ ಕುರಿತು ತಿಳಿದುಕೊಂಡಿರುವ ವಿಷಯವೇನೆಂದರೆ, ನೀವು ದಾಂಪತ್ಯದಲ್ಲಿ ಅಪನಂಬಿಗಸ್ತರಾಗಿರಲು ಸಿದ್ಧರಿರುತ್ತೀರಿ. ನೀವು ಯಾರನ್ನು ಗೌರವಿಸುವ ಪ್ರತಿಜ್ಞೆಮಾಡಿದ್ದೀರೋ ಅವರಿಗೆ ನೀವು ಖಂಡಿತವಾಗಿಯೂ ದ್ರೋಹಮಾಡಸಾಧ್ಯವಿದೆ ಎಂಬುದು ಅವನಿಗೆ ಅಥವಾ ಅವಳಿಗೆ ಗೊತ್ತಿರುತ್ತದೆ. ನೆಪಗಳನ್ನು ನೀಡುವುದರಲ್ಲಿ ನೀವು ನಿಸ್ಸೀಮರು; ಕೊಟ್ಟ ಮಾತಿಗೆ ನೀವು ಸುಲಭವಾಗಿ ತಪ್ಪಿಹೋಗುತ್ತೀರಿ; ಇಂದ್ರಿಯ ಭೋಗಕ್ಕೆ ಅಥವಾ ಸ್ವಂತ ಸುಖಾನುಭವಕ್ಕೆ ನೀವು ಸುಲಭವಾಗಿ ಬಲಿಬೀಳುತ್ತೀರಿ ಎಂಬುದು ಸಹ ಅವರಿಗೆ ತಿಳಿದಿರುತ್ತದೆ. . . . ಪುನಃ ಒಮ್ಮೆ ನೀವು ಇಂತಹ ಆಕರ್ಷಣೆಗೆ ಒಳಗಾಗುವುದಿಲ್ಲ ಎಂದು ನಿಮ್ಮ ಹೊಸ ಪತಿ ಅಥವಾ ಪತ್ನಿಯು ಹೇಗೆ ನಂಬಸಾಧ್ಯವಿದೆ?”

[ಪುಟ 14ರಲ್ಲಿರುವ ಚೌಕ]

ಬೈಬಲ್‌ ಜ್ಞಾನೋಕ್ತಿಗಳಿಂದ ವಿವೇಕದ ನುಡಿಗಳು

ಜ್ಞಾನೋಕ್ತಿ 10:19: “ಮಾತಾಳಿಗೆ ಪಾಪ ತಪ್ಪದು; ಮೌನಿಯು ಮತಿವಂತ.”

ನಿಮಗೆ ತುಂಬ ಕೋಪ ಬಂದಾಗ ನೀವು ಬಾಯಿಗೆ ಬಂದಂತೆ ಮಾತಾಡಬಹುದು ಮತ್ತು ಸಮಯಾನಂತರ ಅದರ ಬಗ್ಗೆ ವಿಷಾದಿಸಬಹುದು.

ಜ್ಞಾನೋಕ್ತಿ 15:18: “ಕೋಪಿಷ್ಠನು ವ್ಯಾಜ್ಯವನ್ನೆಬ್ಬಿಸುವನು; ದೀರ್ಘಶಾಂತನು ಜಗಳವನ್ನು ಶಮನಪಡಿಸುವನು.”

ನೀವು ಮನಸ್ಸಿಗೆ ನೋವನ್ನುಂಟುಮಾಡುವ ನಿಂದಾತ್ಮಕ ಮಾತುಗಳನ್ನಾಡುವಾಗ ನಿಮ್ಮ ಸಂಗಾತಿಯೂ ನಿಮ್ಮನ್ನು ಕಟುನುಡಿಗಳಿಂದ ಖಂಡಿಸುವ ಸಾಧ್ಯತೆಯಿದೆ. ಆದರೆ ನೀವಿಬ್ಬರೂ ತಾಳ್ಮೆಯಿಂದ ಪರಸ್ಪರ ಕಿವಿಗೊಡುವಾಗ, ಸಮಸ್ಯೆಯನ್ನು ಬಗೆಹರಿಸಲು ಕಾರ್ಯನಡಿಸುವಂತೆ ಅದು ಸಹಾಯ ಮಾಡುವುದು.

ಜ್ಞಾನೋಕ್ತಿ 17:27: “ಹಿಡಿದು ಮಾತಾಡುವವನು ಜ್ಞಾನಿ. ಶಾಂತಾತ್ಮನು ವಿವೇಕಿ.”

ನಿಮ್ಮ ಕೋಪವು ಅತ್ಯಧಿಕಗೊಳ್ಳುತ್ತಿದೆ ಎಂಬುದು ನಿಮಗೆ ಗೊತ್ತಾಗುವಾಗ, ಬಾಯಿಮುಚ್ಚಿಕೊಂಡು ಸುಮ್ಮನಿರುವುದು ಒಳ್ಳೇದು. ಇದರಿಂದ ತೀವ್ರ ವಾಗ್ವಾದವಾಗದಂತೆ ತಡೆಯಸಾಧ್ಯವಿದೆ.

ಜ್ಞಾನೋಕ್ತಿ 29:11: “ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು; ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು.”

ಆತ್ಮನಿಯಂತ್ರಣವು ಅತ್ಯಾವಶ್ಯಕವಾದದ್ದಾಗಿದೆ. ಥಟ್ಟನೆ ಬಾಯಿಗೆ ಬಂದಂತೆ ನಿರ್ದಯವಾಗಿ ಮಾತಾಡುವುದು, ನಿಮ್ಮ ಸಂಗಾತಿಯನ್ನು ನಿಮ್ಮಿಂದ ದೂರಮಾಡಿಬಿಡುವುದು.