ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೀತಿಯು ಕಡಿಮೆಯಾಗಲು ಕಾರಣವೇನು?

ಪ್ರೀತಿಯು ಕಡಿಮೆಯಾಗಲು ಕಾರಣವೇನು?

ಪ್ರೀತಿಯು ಕಡಿಮೆಯಾಗಲು ಕಾರಣವೇನು?

“ಯಾರನ್ನಾದರೂ ಪ್ರೀತಿಸುವುದು ತುಂಬ ಸುಲಭ, ಆದರೆ ಅದೇ ವ್ಯಕ್ತಿಯನ್ನು ಪ್ರೀತಿಸುತ್ತಾ ಮುಂದುವರಿಯುವುದು ತುಂಬ ಕಷ್ಟವಾಗಿ ತೋರುತ್ತದೆ.”​—⁠ಡಾ. ಕರ್‌ಅನ್‌ ಕೈಸರ್‌.

ಪ್ರೀತಿರಹಿತ ದಾಂಪತ್ಯಗಳು ತೀವ್ರಗತಿಯಲ್ಲಿ ಹೆಚ್ಚುತ್ತಿರುವುದು ಆಶ್ಚರ್ಯಕರ ಸಂಗತಿಯೇನಲ್ಲ. ವಿವಾಹವು ಒಂದು ಜಟಿಲ ಮಾನವ ಸಂಬಂಧವಾಗಿದ್ದು, ಯಾವುದೇ ಮುನ್‌ತಯಾರಿಯಿಲ್ಲದೆ ಅನೇಕರು ಈ ಸಂಬಂಧದೊಳಗೆ ಪ್ರವೇಶಿಸುತ್ತಾರೆ. ಈ ವಿಷಯದಲ್ಲಿ ಡಾ. ಡೀನ್‌ ಈಡೆಲ್‌ ಹೇಳಿದ್ದು: “ಡ್ರೈವಿಂಗ್‌ ಲೈಸನ್ಸನ್ನು ಪಡೆದುಕೊಳ್ಳಬೇಕಾದರೆ ನಾವು ಸ್ವಲ್ಪಮಟ್ಟಿಗಿನ ಕಾರ್ಯದಕ್ಷತೆಯನ್ನು ತೋರಿಸುವ ಅಗತ್ಯವಿರುತ್ತದೆ. ಆದರೆ ವಿವಾಹದ ಲೈಸನ್ಸ್‌ ಅನ್ನು ಪಡೆದುಕೊಳ್ಳಲಿಕ್ಕಾಗಿ ಕೇವಲ ಒಂದು ಸಹಿ ಸಾಕು.”

ಆದುದರಿಂದ, ಕೆಲವು ದಾಂಪತ್ಯಗಳು ಚೆನ್ನಾಗಿ ಏಳಿಗೆಹೊಂದಿ ಸಂತೋಷದಿಂದಿರುವಾಗ, ಇನ್ನೂ ಅನೇಕ ದಾಂಪತ್ಯಗಳು ಬಿಕ್ಕಟ್ಟಿನಲ್ಲಿವೆ. ವಿವಾಹಕ್ಕೆ ಮೊದಲು ಗಂಡ ಅಥವಾ ಹೆಂಡತಿಯು ಅತಿಯಾದ ಆಸೆಆಕಾಂಕ್ಷೆಗಳನ್ನು ಇಟ್ಟುಕೊಂಡಿರಬಹುದು, ಆದರೆ ದೀರ್ಘಕಾಲದ ಸಂಬಂಧವನ್ನು ಕಾಪಾಡಿಕೊಳ್ಳಲು ಬೇಕಾಗಿರುವ ಕೌಶಲಗಳು ಅವರಲ್ಲಿ ಇಲ್ಲದಿರಬಹುದು. ಡಾ. ಹ್ಯಾರೀ ರೈಸ್‌ ವಿವರಿಸುವುದು: “ಆರಂಭದಲ್ಲಿ ಜೋಡಿಗಳು ಪರಸ್ಪರ ಹತ್ತಿರವಾಗುವಾಗ, ತಾವು ಅನುರೂಪವಾದ ಜೋಡಿಯೆಂಬ ಬಲವಾದ ಅನಿಸಿಕೆ ಅವರಿಗಾಗುತ್ತದೆ. ಇಡೀ ಜಗತ್ತಿನಲ್ಲಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳುವ ಇನ್ನೊಬ್ಬ ವ್ಯಕ್ತಿಯೆಂದರೆ ತಮ್ಮ ಸಂಗಾತಿಯೇ ಎಂದು ಅವರಿಗನಿಸುತ್ತದೆ. ಆದರೆ ಆ ಅನಿಸಿಕೆಯು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗೆ ಪ್ರೀತಿಯು ಮರೆಯಾಗುತ್ತಾ ಹೋದಾಗ, ಇದು ದಾಂಪತ್ಯಕ್ಕೆ ತುಂಬ ಅಪಾಯವನ್ನು ಒಡ್ಡಸಾಧ್ಯವಿದೆ.”

ಅನೇಕ ದಾಂಪತ್ಯಗಳು ಈ ಹಂತಕ್ಕೆ ಬರುವುದಿಲ್ಲ ಎಂಬುದು ಸಂತೋಷಕರ ಸಂಗತಿಯೇ. ಆದರೆ, ಕೆಲವು ದಾಂಪತ್ಯಗಳಲ್ಲಿ ಪ್ರೀತಿಯನ್ನು ಕಡಿಮೆಮಾಡಿರುವಂಥ ಅಂಶಗಳಲ್ಲಿ ಕೆಲವನ್ನು ನಾವು ಸಂಕ್ಷಿಪ್ತವಾಗಿ ಪರಿಗಣಿಸೋಣ.

ನಿರಾಶೆ​—⁠“ಹೀಗಾಗುತ್ತದೆಂದು ನಾನು ನೆನಸಿರಲಿಲ್ಲ”

ರೋಸ್‌ ಹೇಳುವುದು: “ನಾನು ಜಿಮ್‌ನನ್ನು ಮದುವೆಯಾದಾಗ ಏನೇನೋ ಕನಸುಗಳನ್ನು ಕಂಡಿದ್ದೆ. ಕಥೆಕಾದಂಬರಿಗಳಲ್ಲಿ ಬರುವಂತಹ ಕಥಾನಾಯಕ ಹಾಗೂ ನಾಯಕಿಯಂತೆ ನಾವಿರುತ್ತೇವೆ. ಯಾವಾಗಲೂ ಪ್ರೀತಿ, ಪ್ರಣಯದಲ್ಲೇ ಮುಳುಗಿರುತ್ತೇವೆ ಮತ್ತು ಪರಸ್ಪರ ಪರಿಗಣನೆ ತೋರಿಸುತ್ತೇವೆ ಎಂದು ನೆನಸಿದ್ದೆ.” ಆದರೂ, ಮದುವೆಯಾದ ಮೇಲೆ ರೋಸ್‌ಳ “ಕಥಾನಾಯಕ”ನು ಅವಳು ನೆನಸಿದಷ್ಟು ಮೋಹಕನಾಗಿ ಕಂಡುಬರಲಿಲ್ಲ. “ಅವನಿಂದಾಗಿ ನನ್ನ ಕನಸೆಲ್ಲ ನುಚ್ಚುನೂರಾಯಿತು” ಎಂದು ಅವಳು ಹೇಳುತ್ತಾಳೆ.

ಅನೇಕ ಚಲನ ಚಿತ್ರಗಳು, ಪುಸ್ತಕಗಳು ಹಾಗೂ ಜನಪ್ರಿಯ ಸಂಗೀತಗಳಲ್ಲಿ ಪ್ರೀತಿಯನ್ನು ತುಂಬ ಅವಾಸ್ತವಿಕವಾದ ರೀತಿಯಲ್ಲಿ ವರ್ಣಿಸಲಾಗುತ್ತದೆ. ಪ್ರೀತಿಸುತ್ತಿರುವ ಒಂದು ಜೋಡಿಯು ವಿವಾಹಕ್ಕೆ ಮುನ್ನ ಪರಸ್ಪರ ಭೇಟಿಯಾಗುವಾಗ, ತಾವು ಕಂಡಂಥ ಕನಸು ನನಸಾಗುತ್ತಿದೆ ಎಂದು ನೆನಸಬಹುದು; ಆದರೆ ಕೆಲವು ವರ್ಷಗಳ ದಾಂಪತ್ಯ ಜೀವನದ ಬಳಿಕ, ನಿಜವಾಗಿಯೂ ಇಷ್ಟರ ತನಕ ತಾವು ಕಾಣುತ್ತಿದ್ದದ್ದು ಕೇವಲ ಕನಸಿದ್ದಿರಬೇಕು ಎಂಬ ತೀರ್ಮಾನಕ್ಕೆ ಅವರು ಬರುತ್ತಾರೆ! ಒಬ್ಬನ ದಾಂಪತ್ಯವು ಪ್ರೇಮ ಕಥೆಗಳಲ್ಲಿ ವರ್ಣಿಸಲ್ಪಡುವಂತಹ ನಿರೀಕ್ಷೆಗಳನ್ನು ಪೂರೈಸದಿರುವಾಗ, ಆ ದಾಂಪತ್ಯವು ಸಂಪೂರ್ಣ ಸೋಲಾಗಿ ಕಂಡುಬರಬಹುದು.

ವೈವಾಹಿಕ ಜೀವನದಲ್ಲಿ ಕೆಲವು ನಿರೀಕ್ಷೆಗಳಿರುವುದು ಯೋಗ್ಯವಾದದ್ದೇ ಎಂಬುದಂತೂ ಒಪ್ಪತಕ್ಕ ವಿಷಯವೇ. ಉದಾಹರಣೆಗೆ, ಒಬ್ಬಳು ತನ್ನ ಸಂಗಾತಿಯಿಂದ ಪ್ರೀತಿ, ಗಮನ ಹಾಗೂ ಬೆಂಬಲವನ್ನು ನಿರೀಕ್ಷಿಸುವುದು ಸೂಕ್ತವಾದದ್ದೇ. ಆದರೂ, ಕೆಲವೊಮ್ಮೆ ಈ ನಿರೀಕ್ಷೆಗಳು ಸಹ ಪೂರೈಸಲ್ಪಡುವುದಿಲ್ಲ. ಭಾರತದ ಒಬ್ಬ ಯುವ ವಧು ಮೀನಾ ಹೇಳುವುದು: “ನನಗೆ ಇನ್ನೂ ಮದುವೆಯೇ ಆಗಿಲ್ಲ ಎಂದು ಅನಿಸುತ್ತದೆ. ನಾನು ಒಂಟಿ, ನನ್ನ ಆವಶ್ಯಕತೆ ಯಾರಿಗೂ ಇಲ್ಲ ಎಂದನಿಸುತ್ತದೆ.”

ಹೊಂದಾಣಿಕೆಯಿಲ್ಲದಿರುವುದು—⁠“ನಮ್ಮಿಬ್ಬರಲ್ಲೂ ಯಾವುದೇ ಸಮಾನ ಅಭಿರುಚಿಗಳಿಲ್ಲ”

“ಕಾರ್ಯತಃ ಪ್ರತಿಯೊಂದು ವಿಷಯದಲ್ಲಿ ನನ್ನ ಯಜಮಾನರಿಗೂ ನನಗೂ ತೀರ ಭಿನ್ನವಾದ ಅಭಿಪ್ರಾಯಗಳಿವೆ. ಅವನನ್ನು ಮದುವೆಯಾಗಲು ನಿರ್ಧರಿಸಿದ್ದಕ್ಕಾಗಿ ನಾನು ವಿಷಾದಪಡದಂತಹ ದಿನವೇ ಇಲ್ಲ. ನಮ್ಮಿಬ್ಬರ ಜೋಡಿಯಲ್ಲಿ ಸ್ವಲ್ಪವೂ ಹೊಂದಾಣಿಕೆಯೇ ಇಲ್ಲ” ಎಂದು ಒಬ್ಬ ಸ್ತ್ರೀ ಹೇಳುತ್ತಾಳೆ.

ಪ್ರಣಯಾಚರಣೆಯ ಸಮಯದಲ್ಲಿ ತಾವು ನೆನಸಿದ ಪ್ರಕಾರ ತಮ್ಮಲ್ಲಿ ಸಮಾನ ಗುಣಗಳಿಲ್ಲ ಎಂದು ಕಂಡುಹಿಡಿಯಲು ವಿವಾಹಿತ ದಂಪತಿಗಳಿಗೆ ಹೆಚ್ಚು ಕಾಲ ಹಿಡಿಯುವುದಿಲ್ಲ. “ದಂಪತಿಗಳು ಅವಿವಾಹಿತರಾಗಿದ್ದಾಗ ಅವರ ಅರಿವಿಗೆ ಬಾರದಿದ್ದಂತಹ ಗುಣಗಳು, ವಿವಾಹದ ನಂತರ ಬಯಲಿಗೆ ಬರುತ್ತವೆ” ಎಂದು ಡಾ. ನೀನಾ ಎಸ್‌. ಫೀಲ್‌ಡ್ಸ್‌ ಬರೆಯುತ್ತಾರೆ.

ಇದರ ಫಲಿತಾಂಶವಾಗಿ, ವಿವಾಹದ ನಂತರ ಕೆಲವು ದಂಪತಿಗಳು, ತಮ್ಮ ದಾಂಪತ್ಯವು ಸಂಪೂರ್ಣವಾಗಿ ಹೊಂದಾಣಿಕೆಯಿಲ್ಲದ್ದಾಗಿದೆ ಎಂಬ ತೀರ್ಮಾನಕ್ಕೆ ಬರುತ್ತಾರೆ. “ಅಧಿಕಾಂಶ ಜನರು ದಾಂಪತ್ಯ ಜೀವನವನ್ನು ಪ್ರವೇಶಿಸುವಾಗ ಅವರ ಇಷ್ಟಾನಿಷ್ಟಗಳು ಹಾಗೂ ವ್ಯಕ್ತಿತ್ವದಲ್ಲಿ ಕೆಲವೊಂದು ಸಮಾನ ಅಭಿರುಚಿಗಳಿರುವುದಾದರೂ, ಅವರ ಜೀವನ ಶೈಲಿ, ಹವ್ಯಾಸಗಳು ಹಾಗೂ ಮನೋಭಾವಗಳಲ್ಲಿ ಬಹಳಷ್ಟು ಭಿನ್ನಾಭಿಪ್ರಾಯಗಳಿರುತ್ತವೆ” ಎಂದು ಡಾ. ಆರನ್‌ ಟಿ. ಬೆಕ್‌ ಹೇಳುತ್ತಾರೆ. ಆ ಭಿನ್ನಾಭಿಪ್ರಾಯಗಳನ್ನು ಹೇಗೆ ಬಗೆಹರಿಸಬೇಕು ಎಂಬುದು ಅನೇಕ ದಂಪತಿಗಳಿಗೆ ಗೊತ್ತಿರುವುದಿಲ್ಲ.

ಜಗಳ​—⁠“ಯಾವಾಗಲೂ ನಮ್ಮಿಬ್ಬರ ನಡುವೆ ವಾಗ್ವಾದಗಳಾಗುತ್ತವೆ”

ತನ್ನ ವಿವಾಹದ ಆರಂಭದ ದಿನಗಳನ್ನು ನೆನಸಿಕೊಳ್ಳುತ್ತಾ ಸಿಂಡೀ ಹೇಳುವುದು: “ಆಗ ನಾವೆಷ್ಟು ಜಗಳವಾಡುತ್ತಿದ್ದೆವು ಎಂಬುದನ್ನು ನೆನಸಿಕೊಂಡು ನಮಗೇ ಆಶ್ಚರ್ಯವಾಗುತ್ತದೆ. ನಾವಿಬ್ಬರೂ ಪರಸ್ಪರ ಅರಚಾಡಿಕೊಳ್ಳುತ್ತಿದ್ದೆವು. ಅದಕ್ಕೂ ಮಿಗಿಲಾಗಿ, ನಾವಿಬ್ಬರೂ ಕೋಪದಿಂದ ಕುದಿಯುತ್ತಿದ್ದದರಿಂದ ಅನೇಕ ದಿನಗಳ ವರೆಗೆ ನಮ್ಮ ಮಧ್ಯೆ ಮಾತುಕತೆಯೇ ಇರುತ್ತಿರಲಿಲ್ಲ.”

ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ಅನಿವಾರ್ಯ ಎಂಬುದು ನಿಜ. ಆದರೆ ಅವುಗಳನ್ನು ಹೇಗೆ ದೂರಮಾಡಸಾಧ್ಯವಿದೆ? ಈ ವಿಷಯದಲ್ಲಿ ಡಾ. ಡ್ಯಾನ್ಯಲ್‌ ಗೋಲ್ಮನ್‌ ಬರೆಯುವುದು: “ದಾಂಪತ್ಯ ಜೀವನವು ಒಳ್ಳೆಯ ರೀತಿಯಲ್ಲಿ ಸಾಗುತ್ತಿರುವ ವಿವಾಹದಲ್ಲಿ, ಪತಿಪತ್ನಿಯರು ತಮ್ಮ ದೂರುಗಳನ್ನು ನೇರವಾಗಿ ಹೇಳುವ ಅವಕಾಶವಿರುತ್ತದೆ. ಆದರೆ, ಅನೇಕವೇಳೆ ದಂಪತಿಗಳು ತಮ್ಮ ದೂರುಗಳನ್ನು ಕೋಪೋದ್ರೇಕದ ಸಮಯದಲ್ಲಿ ಖಂಡನಾತ್ಮಕವಾಗಿ ವ್ಯಕ್ತಪಡಿಸುತ್ತಾ, ತಮ್ಮ ಸಂಗಾತಿಯ ಚಾರಿತ್ರ್ಯ ವಧೆಯನ್ನು ಮಾಡುತ್ತಾರೆ.”

ಇದು ಸಂಭವಿಸಿದಾಗ, ದಂಪತಿಗಳ ಮಧ್ಯೆ ಸಂಭಾಷಣೆಯು ಒಂದು ರಣರಂಗವಾಗಿ ಪರಿಣಮಿಸುತ್ತದೆ; ತಮ್ಮ ತಮ್ಮ ದೃಷ್ಟಿಕೋನಗಳನ್ನು ದೃಢವಾಗಿ ಸಮರ್ಥಿಸಿಕೊಳ್ಳುತ್ತಾರೆ. ಮತ್ತು ಮಾತುಕತೆಯು ಸಂವಾದದ ಸಾಧನವಾಗುವುದಕ್ಕೆ ಬದಲಾಗಿ ಒಬ್ಬರು ಇನ್ನೊಬ್ಬರನ್ನು ಇರಿಯುವ ಆಯುಧವಾಗಿ ಪರಿಣಮಿಸುತ್ತದೆ. ಈ ವಿಷಯದಲ್ಲಿ ಪರಿಣತರ ಒಂದು ತಂಡವು ಹೇಳುವುದು: “ಹದ್ದುಮೀರಿ ಹೋಗುತ್ತಿರುವ ವಾಗ್ವಾದದ ವಿಷಯದಲ್ಲಿ ತುಂಬ ಹಾನಿಕರ ಸಂಗತಿಯೇನೆಂದರೆ, ಸಂಗಾತಿಗಳು ತಮ್ಮ ದಾಂಪತ್ಯದ ಜೀವಸತ್ವಕ್ಕೇ ಬೆದರಿಕೆಯನ್ನೊಡ್ಡುವಂತಹ ರೀತಿಯ ಮಾತುಗಳನ್ನು ಆಡುವುದೇ ಆಗಿದೆ.”

ಉದಾಸೀನತೆ​—⁠“ನಾವು ಆಸೆಯನ್ನು ಬಿಟ್ಟುಬಿಟ್ಟಿದ್ದೇವೆ”

ಐದು ವರ್ಷಗಳ ದಾಂಪತ್ಯದ ಬಳಿಕ ಒಬ್ಬ ಸ್ತ್ರೀ ಹೇಳಿದ್ದು: “ನಮ್ಮ ದಾಂಪತ್ಯವನ್ನು ಪುನಃ ಸರಿಪಡಿಸುವ ಪ್ರಯತ್ನವನ್ನೇ ಕೈಬಿಟ್ಟಿದ್ದೇನೆ. ಈಗಂತೂ ಅದನ್ನು ಖಂಡಿತವಾಗಿಯೂ ಸರಿಪಡಿಸಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತು. ಆದುದರಿಂದ ಈಗ ನಾನು ಚಿಂತೆಮಾಡುವುದು ನನ್ನ ಮಕ್ಕಳ ಬಗ್ಗೆ ಮಾತ್ರ.”

ಪ್ರೀತಿಗೆ ತದ್ವಿರುದ್ಧವಾದದ್ದು ದ್ವೇಷವಲ್ಲ, ಬದಲಾಗಿ ಉದಾಸೀನತೆಯೇ ಆಗಿದೆ ಎಂದು ಹೇಳಲಾಗುತ್ತದೆ. ಆದುದರಿಂದ, ಒಂದು ದಾಂಪತ್ಯದಲ್ಲಿ ತಾತ್ಸಾರಭಾವವನ್ನು ತೋರಿಸುವುದು, ಹಗೆತನದಷ್ಟೇ ಹಾನಿಕರವಾಗಿರಸಾಧ್ಯವಿದೆ ಎಂಬುದಂತೂ ನಿಜ.

ಆದರೂ, ಕೆಲವು ದಂಪತಿಗಳು ಪ್ರೀತಿರಹಿತ ದಾಂಪತ್ಯಕ್ಕೆ ಎಷ್ಟು ಒಗ್ಗಿಹೋಗಿರುತ್ತಾರೆಂದರೆ, ಒಂದಲ್ಲ ಒಂದು ದಿನ ತಮ್ಮ ಜೀವಿತದಲ್ಲಿ ಯಾವುದಾದರೂ ಬದಲಾವಣೆಯಾಗುತ್ತದೆ ಎಂಬ ಆಸೆಯನ್ನೇ ಅವರು ಬಿಟ್ಟುಬಿಟ್ಟಿರುತ್ತಾರೆ ಎಂಬುದು ದುಃಖಕರ ಸಂಗತಿಯಾಗಿದೆ. ಉದಾಹರಣೆಗೆ, 23 ವರ್ಷಗಳ ವರೆಗೆ ನಡೆಸಿದ ತನ್ನ ವೈವಾಹಿಕ ಬದುಕು, “ಸ್ವಲ್ಪವೂ ಇಷ್ಟವಿಲ್ಲದಿರುವಂತಹ ಒಂದು ಉದ್ಯೋಗವನ್ನು ಮಾಡುತ್ತಿರುವುದಕ್ಕೆ” ಸಮಾನವಾಗಿದೆ ಎಂದು ಒಬ್ಬ ಗಂಡನು ಹೇಳಿದನು. ಅವನು ಇನ್ನೂ ಹೇಳಿದ್ದು: “ಈ ಸನ್ನಿವೇಶದಲ್ಲಿ ನೀವು ನಿಮ್ಮಿಂದ ಸಾಧ್ಯವಿರುವ ಸರ್ವ ಪ್ರಯತ್ನವನ್ನೂ ಮಾಡುತ್ತೀರಿ.” ತದ್ರೀತಿಯಲ್ಲಿ, ಏಳು ವರ್ಷಗಳಿಂದ ವೈವಾಹಿಕ ಜೀವನವನ್ನು ನಡೆಸುತ್ತಿರುವ ವೆಂಡೀ ಎಂಬ ಹೆಸರಿನ ಸ್ತ್ರೀಯು, ಗಂಡನೊಂದಿಗಿನ ತನ್ನ ಸಂಬಂಧವು ಎಂದಾದರೂ ಸರಿಹೋಗುತ್ತದೆ ಎಂಬ ಆಸೆಯನ್ನೇ ಕೈಬಿಟ್ಟಿದ್ದಾಳೆ. ಅವಳು ಹೇಳುವುದು: “ನಮ್ಮ ಸಂಬಂಧವನ್ನು ಸರಿಪಡಿಸಲು ನಾನು ಅನೇಕಬಾರಿ ಪ್ರಯತ್ನಿಸಿದೆ, ಆದರೆ ನನ್ನ ಪತಿ ನನಗೆ ಯಾವಾಗಲೂ ನಿರಾಶೆಯನ್ನುಂಟುಮಾಡುತ್ತಿದ್ದರು. ಇದರಿಂದಾಗಿ ನಾನು ತುಂಬ ಖಿನ್ನಳಾದೆ. ಆದುದರಿಂದ, ನಾನು ಪುನಃ ಈ ಸ್ಥಿತಿಯನ್ನು ಅನುಭವಿಸಲಾರೆ. ಒಂದುವೇಳೆ ನಾನು ಇನ್ನೂ ಏನಾದರೂ ಆಸೆಗಳನ್ನಿಟ್ಟುಕೊಂಡಿರುವಲ್ಲಿ, ಅದರಿಂದ ಮಾನಸಿಕ ಹಿಂಸೆಯನ್ನು ಅನುಭವಿಸಬೇಕಾಗುವುದು. ಅದಕ್ಕೆ ಬದಲಾಗಿ ನಾನು ಏನನ್ನೂ ಬಯಸದಿರುವುದೇ ಮೇಲು. ಈ ನಿರ್ಧಾರದಿಂದ ನನಗೆ ಸಂತೋಷವೇನೂ ಇಲ್ಲ ನಿಜ, ಆದರೂ ಕೊನೇಪಕ್ಷ ನನಗೆ ನಿರಾಸೆಯಂತೂ ಆಗುವುದಿಲ್ಲ.”

ನಿರಾಶೆ, ಹೊಂದಾಣಿಕೆಯಿಲ್ಲದಿರುವುದು, ಜಗಳ, ಮತ್ತು ಉದಾಸೀನತೆಗಳು, ಪ್ರೀತಿರಹಿತ ದಾಂಪತ್ಯಕ್ಕೆ ಕಾರಣವಾಗಿರುವ ಅನೇಕ ಅಂಶಗಳಲ್ಲಿ ಕೆಲವಾಗಿವೆ. ಅಂದರೆ ಇನ್ನೂ ಅನೇಕ ಅಂಶಗಳಿವೆ ಎಂಬುದು ಸುಸ್ಪಷ್ಟ. ಇವುಗಳಲ್ಲಿ ಕೆಲವನ್ನು 5ನೆಯ ಪುಟದಲ್ಲಿರುವ ರೇಖಾಚೌಕದಲ್ಲಿ ಕೊಡಲಾಗಿದೆ. ಕಾರಣವು ಏನೇ ಇರಲಿ, ಪ್ರೀತಿರಹಿತ ದಾಂಪತ್ಯದಲ್ಲಿ ಸಿಕ್ಕಿಕೊಂಡಿರುವಂತೆ ತೋರುವ ದಂಪತಿಗಳಿಗೆ ಏನಾದರೂ ನಿರೀಕ್ಷೆಯಿದೆಯೋ? (g01 1/8)

[ಪುಟ 5ರಲ್ಲಿರುವ ಚೌಕ/ಚಿತ್ರ]

ಪ್ರೀತಿರಹಿತ ದಾಂಪತ್ಯಗಳಿಗೆ ಕಾರಣವಾಗಿರುವ ಇನ್ನಿತರ ಅಂಶಗಳು

ಹಣ: “ಹಣವನ್ನು ಹೇಗೆ ಖರ್ಚುಮಾಡುವುದೆಂದು ಬಜೆಟ್‌ಮಾಡುವುದು ದಂಪತಿಗಳನ್ನು ಒಂದುಗೂಡಿಸಸಾಧ್ಯವಿದೆ ಎಂದು ಒಬ್ಬನು ನೆನಸಬಹುದು. ಹೀಗೆ ಜೀವನದ ಮೂಲಭೂತ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ತಮ್ಮ ಹಣಕಾಸನ್ನು ಒಟ್ಟಿಗೆ ಹಾಕಿದರೆ ಒಂದುಗೂಡಿ ಕೆಲಸಮಾಡುವ ಸಂದರ್ಭ ದೊರಕುತ್ತದೆ ಮತ್ತು ತಮ್ಮ ದುಡಿಮೆ ಫಲವನ್ನು ಒಟ್ಟಿಗೆ ಅನುಭವಿಸುತ್ತಾ ಐಕ್ಯವಾಗಿರಬಹುದೆಂದು ಕೆಲವರು ನೆನಸುತ್ತಾರೆ. ಆದರೆ ಇಲ್ಲಿ ಯಾವುದು ಗಂಡಹೆಂಡತಿಯರನ್ನು ಒಂದುಗೂಡಿಸಸಾಧ್ಯವಿದೆಯೋ ಅದೇ ವಿಷಯವು ಅವರನ್ನು ದೂರ ದೂರಮಾಡಿಬಿಡುತ್ತದೆ.” ​—⁠ಡಾ. ಆರನ್‌ ಟಿ. ಬೆಕ್‌.

ತಂದೆತಾಯ್ತನ: “ತಮ್ಮ ಮೊದಲ ಮಗು ಹುಟ್ಟಿದ ಬಳಿಕ, ಸುಮಾರು 67 ಪ್ರತಿಶತ ದಂಪತಿಗಳು ತಮ್ಮ ದಾಂಪತ್ಯ ಜೀವನದಲ್ಲಿ ಹೆಚ್ಚು ತೃಪ್ತಿಯನ್ನು ಅನುಭವಿಸುವುದಿಲ್ಲ ಎಂಬುದನ್ನು ನಾವು ಕಂಡುಹಿಡಿದಿದ್ದೇವೆ. ಅಷ್ಟುಮಾತ್ರವಲ್ಲ, ದಂಪತಿಗಳು ಮುಂಚೆಗಿಂತ ಎಂಟುಪಟ್ಟು ಹೆಚ್ಚು ಜಗಳವಾಡುತ್ತಾರೆ. ಇದಕ್ಕೆ ಒಂದು ಕಾರಣವೇನೆಂದರೆ, ಹೆತ್ತವರು ತುಂಬ ಆಯಾಸಗೊಳ್ಳುತ್ತಾರೆ ಮತ್ತು ಅವರಿಗೆ ಬಿಡುವೇ ಸಿಗುವುದಿಲ್ಲ.”​—⁠ಡಾ. ಜಾನ್‌ ಗಾಟ್ಮನ್‌.

ವಂಚನೆ: “ದಾಂಪತ್ಯ ದ್ರೋಹದಲ್ಲಿ ಸಾಮಾನ್ಯವಾಗಿ ವಂಚನೆಯು ಒಳಗೂಡಿರುತ್ತದೆ. ಸರಳವಾಗಿ ಹಾಗೂ ಸ್ಪಷ್ಟವಾಗಿ ಹೇಳುವುದಾದರೆ, ವಂಚನೆಯು ಒಂದು ರೀತಿಯ ವಿಶ್ವಾಸಘಾತಕತನವಾಗಿದೆ. ದೀರ್ಘ ಕಾಲದಿಂದ ಯಶಸ್ವಿಯಾಗಿರುವ ಎಲ್ಲ ದಾಂಪತ್ಯಗಳಲ್ಲಿ ಭರವಸೆಯೇ ಅತಿ ಪ್ರಾಮುಖ್ಯ ಅಂಶವಾಗಿ ಪರಿಗಣಿಸಲ್ಪಟ್ಟಿದೆ. ಆದುದರಿಂದ, ವಂಚನೆಯು ಒಂದು ವೈವಾಹಿಕ ಸಂಬಂಧವನ್ನು ಅಲ್ಲಕಲ್ಲೋಲಗೊಳಿಸಸಾಧ್ಯವಿದೆ ಎಂಬುದರಲ್ಲಿ ಏನಾದರೂ ಆಶ್ಚರ್ಯವಿದೆಯೋ?”​—⁠ಡಾ. ನೀನಾ ಎಸ್‌. ಫೀಲ್‌ಡ್ಸ್‌.

ಲೈಂಗಿಕ ಸಂಬಂಧ (ಸೆಕ್ಸ್‌): “ಸಾಮಾನ್ಯವಾಗಿ ಜನರು ವಿವಾಹ ವಿಚ್ಛೇದಕ್ಕಾಗಿ ಹೆಜ್ಜೆಯನ್ನು ತೆಗೆದುಕೊಳ್ಳುವ ಸಮಯದಷ್ಟಕ್ಕೆ, ದಂಪತಿಗಳ ಮಧ್ಯೆ ದೇಹಸಂಬಂಧವಿಲ್ಲದೆ ಅನೇಕ ವರ್ಷಗಳೇ ಕಳೆದಿರುತ್ತವೆ ಎಂಬುದು ಆಘಾತಕರ ಸಂಗತಿಯಾಗಿದೆ. ಕೆಲವು ಕೇಸುಗಳಲ್ಲಿ ನೋಡುವುದಾದರೆ, ಅವರ ಮಧ್ಯೆ ಲೈಂಗಿಕ ಸಂಬಂಧವೇ ಇರಲಿಲ್ಲ; ಮತ್ತು ಇನ್ನಿತರ ವಿದ್ಯಮಾನಗಳಲ್ಲಾದರೋ ಲೈಂಗಿಕ ಸಂಬಂಧವು ಯಾಂತ್ರಿಕವಾಗಿತ್ತು, ಅಂದರೆ ಕೇವಲ ಸಂಗಾತಿಯ ದೈಹಿಕ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿರುವ ಮಾಧ್ಯಮವಾಗಿತ್ತು.”​—⁠ಜೂಡಥ್‌ ಎಸ್‌. ವಾಲರ್‌ಸ್ಟೈನ್‌, ಚಿಕಿತ್ಸಾಸಂಬಂಧಿತ ಮನಶ್ಶಾಸ್ತ್ರಜ್ಞೆ.

[ಪುಟ 6ರಲ್ಲಿರುವ ಚೌಕ/ಚಿತ್ರ]

ಮಕ್ಕಳ ಮೇಲೆ ಯಾವ ಪರಿಣಾಮವು ಉಂಟಾಗುತ್ತದೆ?

ನಿಮ್ಮ ದಾಂಪತ್ಯದ ಗುಣಮಟ್ಟವು ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರಬಲ್ಲದೋ? ವಿವಾಹಿತ ದಂಪತಿಗಳ ಬಗ್ಗೆ ಸುಮಾರು 20 ವರ್ಷಗಳ ವರೆಗೆ ಸಂಶೋಧನೆ ನಡೆಸಿರುವ ಡಾ. ಜಾನ್‌ ಗಾಟ್ಮನ್‌ರಿಗನುಸಾರ, ಈ ಪ್ರಶ್ನೆಗೆ ಉತ್ತರವು ಹೌದು ಎಂದಾಗಿದೆ. ಅವರು ಹೇಳುವುದು: “ಹತ್ತು ವರ್ಷಗಳ ಎರಡು ಅಧ್ಯಯನಗಳಲ್ಲಿ ನಾವು ಕಂಡುಕೊಂಡಿರುವುದೇನೆಂದರೆ, ದಾಂಪತ್ಯದಲ್ಲಿ ಸಂತೋಷವಿಲ್ಲದಿರುವಂತಹ ಹೆತ್ತವರ ಶಿಶುಗಳ ಹೃದಯ ಬಡಿತವು, ಅವರು ಆಟವಾಡುವ ಸಮಯದಲ್ಲಿ ಅತ್ಯಧಿಕವಾಗಿರುತ್ತದೆ. ಮತ್ತು ಅವು ತಮ್ಮನ್ನು ಸಮಾಧಾನಪಡಿಸಿಕೊಳ್ಳಲು ಅಶಕ್ತವಾಗಿರುತ್ತವೆ. ಸಮಯಾನಂತರ, ಮಕ್ಕಳು ಎಷ್ಟೇ ಬುದ್ಧಿವಂತರಾಗಿರುವುದಾದರೂ, ಮನೆಯಲ್ಲಿ ಹೆತ್ತವರ ಮಧ್ಯೆ ಆಗುವಂತಹ ಜಗಳಗಳ ಕಾರಣದಿಂದ ಅವರು ಶಾಲೆಯಲ್ಲಿ ಒಳ್ಳೆಯ ಅಂಕವನ್ನು ಗಳಿಸುವುದಿಲ್ಲ.” ಇದಕ್ಕೆ ತದ್ವಿರುದ್ಧವಾಗಿ, ಚೆನ್ನಾಗಿ ಹೊಂದಿಕೊಂಡು ಹೋಗುವಂಥ ದಂಪತಿಗಳ ಮಕ್ಕಳು “ವ್ಯಾಸಂಗದಲ್ಲಿ ಹಾಗೂ ಸಾಮಾಜಿಕ ವಿಷಯಗಳಲ್ಲಿ ಅತ್ಯುತ್ತಮರಾಗಿರುತ್ತಾರೆ. ಏಕೆಂದರೆ, ಇತರರನ್ನು ಹೇಗೆ ಗೌರವದಿಂದ ಉಪಚರಿಸುವುದು ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಅವರ ಹೆತ್ತವರು ಅವರಿಗೆ ಕಲಿಸಿರುತ್ತಾರೆ” ಎಂದು ಡಾ. ಗಾಟ್ಮನ್‌ ಹೇಳುತ್ತಾರೆ.