ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೀತಿರಹಿತ ದಾಂಪತ್ಯದಲ್ಲಿ ಸಿಕ್ಕಿಕೊಂಡಿರುವುದು

ಪ್ರೀತಿರಹಿತ ದಾಂಪತ್ಯದಲ್ಲಿ ಸಿಕ್ಕಿಕೊಂಡಿರುವುದು

ಪ್ರೀತಿರಹಿತ ದಾಂಪತ್ಯದಲ್ಲಿ ಸಿಕ್ಕಿಕೊಂಡಿರುವುದು

“ವಿವಾಹ ವಿಚ್ಛೇದದ ಸಂಖ್ಯೆಯು ಅತ್ಯಧಿಕವಾಗಿರುವ ಸಮಾಜದಲ್ಲಿ, ಅಸಂತುಷ್ಟ ವಿವಾಹಗಳು ಹೆಚ್ಚಾಗಿ ವಿಚ್ಛೇದದಲ್ಲಿ ಕೊನೆಗೊಳ್ಳುತ್ತಿವೆ. ಮಾತ್ರವಲ್ಲ, ಇನ್ನೂ ಅನೇಕ ವಿವಾಹಗಳು ಅಸಂತೋಷದಿಂದ ಮುಂದುವರಿಯುವ ಸಂಭವನೀಯತೆ ಇದೆ.”​—⁠ಅಮೆರಿಕದಲ್ಲಿರುವ ಕುಟುಂಬಗಳ ಸಮಿತಿ.

ಜೀವನದಲ್ಲಿ ಒಂದೇ ಮೂಲದಿಂದ ಸಂತೋಷವನ್ನೂ ಸಂಕಟವನ್ನೂ ಅನುಭವಿಸಸಾಧ್ಯವಿದೆ ಎಂದು ಹೇಳಲಾಗುತ್ತದೆ. ಅದು ಒಬ್ಬನ ವಿವಾಹವೇ ಆಗಿದೆ. ಜೀವನದಲ್ಲಿ ಬಹಳಷ್ಟು ಆನಂದವನ್ನು, ಅದೇ ಸಮಯದಲ್ಲಿ ಸಾಕಷ್ಟು ಸಂಕಟವನ್ನು ಉಂಟುಮಾಡುವಂತಹ ವಿಷಯಗಳು ತುಂಬ ಕಡಿಮೆಯಿವೆ ಎಂಬುದಂತೂ ಖಂಡಿತ. ಈ ಲೇಖನದಲ್ಲಿರುವ ರೇಖಾಚೌಕವು ಸೂಚಿಸುವಂತೆ, ಅನೇಕ ದಂಪತಿಗಳು ತಮ್ಮ ದಾಂಪತ್ಯದಲ್ಲಿ ಹೇಳಲಾರದಷ್ಟು ಸಂಕಟವನ್ನು ಅನುಭವಿಸುತ್ತಿದ್ದಾರೆ.

ಆದರೆ ವಿವಾಹ ವಿಚ್ಛೇದದ ಸಂಖ್ಯಾಸಂಗ್ರಹಣಗಳು, ಸಮಸ್ಯೆಯ ಚಿಕ್ಕ ಭಾಗವನ್ನು ಬಯಲುಪಡಿಸುತ್ತವೆ. ಮುಳುಗಿಹೋಗುವಂತಹ ಪ್ರತಿಯೊಂದು ವಿವಾಹಕ್ಕೆ ಹೋಲಿಸುವಾಗ, ಇನ್ನಿತರ ಅಸಂಖ್ಯಾತ ವಿವಾಹಗಳು ಹಡಗಿನಂತೆ ತೇಲುತ್ತಿವೆಯಾದರೂ, ಮರಳದಂಡೆಯಲ್ಲಿ ಅಥವಾ ಕೊಚ್ಚೆಯಲ್ಲಿ ಸಿಕ್ಕಿಕೊಂಡಿವೆ. 30 ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ದಾಂಪತ್ಯ ಜೀವನವನ್ನು ನಡೆಸುತ್ತಿರುವ ಒಬ್ಬ ಸ್ತ್ರೀಯು ಹೇಳಿದ್ದು: “ನಮ್ಮ ಕುಟುಂಬ ಜೀವನವು ತುಂಬ ಸಂತೋಷಭರಿತವಾಗಿತ್ತು, ಆದರೆ ಕಳೆದ 12 ವರ್ಷಗಳಿಂದ ಅದು ನಿಜವಾಗಿಯೂ ಭಯಾನಕವಾಗಿದೆ. ನನ್ನ ಪತಿ ನನ್ನ ಭಾವನೆಗಳಿಗೆ ಬೆಲೆಯೇ ಕೊಡುವುದಿಲ್ಲ. ಭಾವನೆಗಳ ವಿಷಯದಲ್ಲಿ ಅವರು ನಿಜವಾಗಿಯೂ ನನ್ನ ಶತ್ರುವಾಗಿ ಪರಿಣಮಿಸಿದ್ದಾರೆ.” ತದ್ರೀತಿಯಲ್ಲಿ, 25 ವರ್ಷಗಳಿಂದ ಪತಿಯಾಗಿರುವ ಒಬ್ಬ ವ್ಯಕ್ತಿಯು ಪ್ರಲಾಪಿಸಿದ್ದು: “ಈಗ ನಾನು ನಿನ್ನನ್ನು ಪ್ರೀತಿಸುತ್ತಿಲ್ಲ ಎಂದು ನನ್ನ ಪತ್ನಿಯೇ ನನಗೆ ಹೇಳಿದ್ದಾಳೆ. ಒಂದುವೇಳೆ ನಾವಿಬ್ಬರೂ ಮನೆಯಲ್ಲಿ ಕೇವಲ ಜೊತೆವಾಸಿಗಳಂತೆ ಜೀವಿಸುತ್ತಿದ್ದು, ನಮ್ಮ ಬಿಡುವಿನ ಸಮಯವನ್ನು ಇಷ್ಟಬಂದಂತೆ ಸ್ವತಂತ್ರವಾಗಿ ಕಳೆಯಲು ಸಾಧ್ಯವಿರುವಲ್ಲಿ, ಈ ಸನ್ನಿವೇಶವನ್ನು ನಿಭಾಯಿಸಬಹುದು ಎಂದು ಅವಳು ಹೇಳುತ್ತಾಳೆ.”

ಇಂತಹ ಪರಿಸ್ಥಿತಿಯ ಕೆಳಗಿರುವ ಕೆಲವರು ತಮ್ಮ ದಾಂಪತ್ಯವನ್ನು ಕೊನೆಗೊಳಿಸಲು ನಿರ್ಧರಿಸುತ್ತಾರೆ ಎಂಬುದಂತೂ ಖಂಡಿತ. ಕೆಲವರಿಗೆ ದಾಂಪತ್ಯ ಜೀವನದಲ್ಲಿ ಸಮಸ್ಯೆಯಿರುವುದಾದರೂ ಅವರಿಗೆ ವಿಚ್ಛೇದದ ಪ್ರಶ್ನೆಯೇ ಏಳುವುದಿಲ್ಲ. ಏಕೆ? ಡಾ. ಕರ್‌ಅನ್‌ ಕೈಸರ್‌ ಅವರಿಗನುಸಾರ, ದಾಂಪತ್ಯದಲ್ಲಿ ಪ್ರೀತಿಯಿಲ್ಲದಿರುವುದಾದರೂ, ಮಕ್ಕಳು, ಸಮಾಜದಲ್ಲಿ ಕಳಂಕ, ಹಣಕಾಸು, ಸ್ನೇಹಿತರು, ಸಂಬಂಧಿಕರು, ಹಾಗೂ ಧಾರ್ಮಿಕ ನಂಬಿಕೆಗಳಂತಹ ಅಂಶಗಳಿಂದಾಗಿ ದಂಪತಿಗಳು ಒಟ್ಟಿಗೆ ಜೀವಿಸಬೇಕಾಗಬಹುದು. ಅವರು ಮುಂದುವರಿಸುತ್ತಾ ಹೇಳಿದ್ದು: “ಈ ದಂಪತಿಗಳು ಕಾನೂನುಬದ್ಧವಾಗಿ ವಿಚ್ಛೇದವನ್ನು ಪಡೆದುಕೊಳ್ಳುವುದಕ್ಕೆ ಬದಲಾಗಿ, ತಾವು ಯಾರನ್ನು ಭಾವನಾತ್ಮಕವಾಗಿ ವಿಚ್ಛೇದಿಸಿದ್ದಾರೋ ಅಂತಹ ಸಂಗಾತಿಯೊಂದಿಗೆ ಜೀವಿಸುವುದನ್ನು ಮುಂದುವರಿಸಲು ಆಯ್ಕೆಮಾಡುತ್ತಾರೆ.”

ದಾಂಪತ್ಯ ಜೀವನದಲ್ಲಿ ತೊಂದರೆಯನ್ನು ಅನುಭವಿಸುತ್ತಿರುವ ಗಂಡಹೆಂಡತಿಯರು, ತಮ್ಮನ್ನು ಅತೃಪ್ತ ಬದುಕಿಗೆ ಹೊಂದಿಸಿಕೊಳ್ಳಬೇಕೋ? ವಿವಾಹ ವಿಚ್ಛೇದಕ್ಕೆ ಬದಲಿಯಾಗಿರುವಂತಹ ಏಕಮಾತ್ರ ಮಾರ್ಗವು ಪ್ರೀತಿರಹಿತ ದಾಂಪತ್ಯವೇ ಆಗಿದೆಯೋ? ತೊಂದರೆಗೊಳಗಾಗಿರುವಂತಹ ಅನೇಕ ವಿವಾಹಗಳನ್ನು, ದಾಂಪತ್ಯದ ಒಡೆತದಿಂದ ಉಂಟಾಗುವ ಬೇಗುದಿಯಿಂದ ಮಾತ್ರವಲ್ಲ, ಪ್ರೀತಿರಹಿತ ದಾಂಪತ್ಯದ ದುರವಸ್ಥೆಯಿಂದಲೂ ರಕ್ಷಿಸಸಾಧ್ಯವಿದೆ ಎಂಬುದನ್ನು ಅನುಭವವು ರುಜುಪಡಿಸುತ್ತದೆ. (g01 1/8)

[ಪುಟ 3ರಲ್ಲಿರುವ ಚೌಕ]

ಲೋಕದಾದ್ಯಂತ ವಿವಾಹ ವಿಚ್ಛೇದ

ಆಸ್ಟ್ರೇಲಿಯ: 1960ಗಳ ಆರಂಭದಿಂದ ವಿವಾಹ ವಿಚ್ಛೇದದ ಪ್ರಮಾಣವು ಹೆಚ್ಚುಕಡಿಮೆ ನಾಲ್ಕು ಪಟ್ಟು ಹೆಚ್ಚಿದೆ.

ಬ್ರಿಟನ್‌: ಮುಂತಿಳಿಸಲ್ಪಟ್ಟಿರುವಂತೆ, 10ರಲ್ಲಿ 4 ವಿವಾಹಗಳು ವಿಚ್ಛೇದದಲ್ಲಿ ಕೊನೆಗೊಳ್ಳಲಿವೆ.

ಕೆನಡ ಮತ್ತು ಜಪಾನ್‌: ಸುಮಾರು ಮೂರನೇ ಒಂದು ಭಾಗದಷ್ಟು ವಿವಾಹಗಳು ವಿಚ್ಛೇದದಿಂದ ಬಾಧಿಸಲ್ಪಡುತ್ತಿವೆ.

ಅಮೆರಿಕ: 1970ರಿಂದ, ವಿವಾಹವಾಗುತ್ತಿರುವ ದಂಪತಿಗಳು ಒಟ್ಟಿಗೆ ಜೀವಿಸುವ ಸಂಭವನೀಯತೆಯು ಕೇವಲ 50-50 ಆಗಿದೆ.

ಸಿಂಬಾಬ್ವೆ: ಪ್ರತಿ 5 ವಿವಾಹಗಳಲ್ಲಿ ಸುಮಾರು 2 ವಿವಾಹಗಳು ವಿಚ್ಛೇದದಲ್ಲಿ ಕೊನೆಗೊಳ್ಳುತ್ತಿವೆ.