ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೆಡಿಟರೇನಿಯನ್‌ ಮಂಕ್‌ ಸೀಲ್‌ಗಳು ಅವು ಪಾರಾಗಿ ಉಳಿಯುವವೋ?

ಮೆಡಿಟರೇನಿಯನ್‌ ಮಂಕ್‌ ಸೀಲ್‌ಗಳು ಅವು ಪಾರಾಗಿ ಉಳಿಯುವವೋ?

ಮೆಡಿಟರೇನಿಯನ್‌ ಮಂಕ್‌ ಸೀಲ್‌ಗಳು ಅವು ಪಾರಾಗಿ ಉಳಿಯುವವೋ?

ಗ್ರೀಸ್‌ನ ಎಚ್ಚರ! ಲೇಖಕನಿಂದ

ಹೋಮರ್‌ ತನ್ನ ಮಹಾಕಾವ್ಯವಾದ ಓಡಿಸಿಯಲ್ಲಿ, ಗ್ರೀಸ್‌ನ ಬಿಸಿಲೇರಿರುವ ತೀರಗಳಲ್ಲಿ ಹಾಯಾಗಿ ಬಿಸಿಲು ಕಾಯಿಸಿಕೊಳ್ಳುತ್ತಿರುವಂತೆ ಅವುಗಳನ್ನು ವರ್ಣಿಸಿದನು. ಪುರಾತನ ಏಷ್ಯಾ ಮೈನರಿನ ಒಂದು ಪಟ್ಟಣವು ಅವುಗಳ ಚಿತ್ರವಿದ್ದ ನಾಣ್ಯಗಳನ್ನು ಟಂಕಿಸಿತು. ಮೆಡಿಟರೇನಿಯನ್‌ ಮತ್ತು ಕಪ್ಪು ಸಮುದ್ರಗಳ ನೀರು ಅವುಗಳಿಂದ ತುಂಬಿತುಳುಕುತ್ತಿತ್ತು. ಆದರೆ ಇಂದು, ನೀವು ಈ ಅಂಜುಬುರುಕ ಜೀವಿಗಳಲ್ಲಿ ಒಂದನ್ನಾದರೂ ಕಾಣುವುದು ಕಷ್ಟಕರ. ಇವು ಮೆಡಿಟರೇನಿಯನ್‌ ಮಂಕ್‌ ಸೀಲ್‌ಗಳೇ ಆಗಿವೆ.

ತುಪ್ಪುಳು ಇರುವ ಜಲಚರ ಸಸ್ತನಿಗಳಲ್ಲಿ ಹೆಚ್ಚಿನವು, 18 ಹಾಗೂ 19ನೆಯ ಶತಮಾನಗಳಲ್ಲಿ ಬೇಟೆಯಾಡಲ್ಪಟ್ಟಂತೆಯೇ, ಮೆಡಿಟರೇನಿಯನ್‌ ಮಂಕ್‌ ಸೀಲ್‌ಗಳು ಸಹ ವ್ಯಾಪಕವಾಗಿ ಬೇಟೆಯಾಡಲ್ಪಟ್ಟವು. ತುಪ್ಪುಳು, ಎಣ್ಣೆ ಹಾಗೂ ಮಾಂಸಕ್ಕಾಗಿ ಸಾವಿರಾರು ಮಂಕ್‌ ಸೀಲ್‌ಗಳು ಹತಿಸಲ್ಪಟ್ಟವು.

ಇದರಿಂದುಂಟಾದ ಹಾನಿಯು, ಈಗ ತುಂಬ ಸ್ಪಷ್ಟವಾಗಿ ಕಂಡುಬರುತ್ತಿದೆ. 379ರಿಂದ 530 ಮೆಡಿಟರೇನಿಯನ್‌ ಮಂಕ್‌ ಸೀಲ್‌ಗಳು ಮಾತ್ರ ಉಳಿದಿವೆ ಎಂದು ಅಂದಾಜುಮಾಡಲಾಗಿದೆ. ಅವು ವಿನಾಶದ ಅಂಚಿನಲ್ಲಿವೆ. ಆದರೂ, ಈ ಜೀವಿಗಳ ಸಂಖ್ಯೆಯ ಅಂದಾಜುಗಳು “ವೈಜ್ಞಾನಿಕ ರೀತಿಯಲ್ಲಿ ಅಸಾಧಾರಣವಾಗಿ ಅನಿಷ್ಕೃಷ್ಟವಾಗಿವೆ” ಎಂದು ಮೊನಾಕಸ್‌ ಗಾರ್ಡಿಯನ್‌ ವಾರ್ತಾಪತ್ರಿಕೆಯು ವರದಿಸುತ್ತದೆ.

ಪರಿಸ್ಥಿತಿಯು ಸರಿಪಡಿಸಲಾರದಷ್ಟು ಕೈಮೀರಿ ಹೋಗಿದೆಯೋ? ಮಂಕ್‌ ಸೀಲ್‌ಗಳನ್ನು ಸಂರಕ್ಷಿಸಲು ಯಾವ ಪ್ರಯತ್ನಗಳು ಕೈಗೊಳ್ಳಲ್ಪಟ್ಟಿವೆ?

ಕಷ್ಟಕರವಾದ ಹೋರಾಟ

ಮಂಕ್‌ ಸೀಲ್‌ನ ಮೇಲ್ಹೊದಿಕೆಯ ವಿಶಿಷ್ಟವಾದ ಬಣ್ಣವು, ಕೆಲವು ಧಾರ್ಮಿಕ ಪಂಗಡಗಳ ತೊಡಿಗೆಗೆ ಸದೃಶವಾಗಿರುವ ಕಾರಣ ಇದನ್ನು ಮಂಕ್‌ ಸೀಲೆಂದು ಕರೆಯಲಾಗಿದೆ. ಈಜಿಯನ್‌ ಸಮುದ್ರದಲ್ಲಿ ಉತ್ತರ ಸ್ಪೋರೇಡ್ಸ್‌ ದ್ವೀಪಗಳಿವೆ. ಈ ದ್ವೀಪಗಳ, ತಲಪಲು ಕಷ್ಟಕರವಾದ ಬಂಡೆಗಳ ಮಧ್ಯೆ ಹಾಗೂ ಸಮುದ್ರದ ಗವಿಗಳಲ್ಲಿ ಇವು ಹೆಚ್ಚಾಗಿ ಜೀವಿಸುತ್ತವೆ. ವಾಯವ್ಯ ಆಫ್ರಿಕ ಮತ್ತು ಪೋರ್ಚುಗಲ್‌ನ ಡಸರ್‌ಟಾಶ್‌ ದ್ವೀಪಗಳ ತೀರಗಳಲ್ಲಿ ಈ ಪ್ರಾಣಿಗಳ ಚಿಕ್ಕ ಗುಂಪುಗಳನ್ನು ಕಾಣಬಹುದು. 3 ಮೀಟರ್‌ಗಳಷ್ಟು ಉದ್ದದ ಈ ಮಂಕ್‌ ಸೀಲ್‌ 275 ಕಿಲೋಗ್ರ್ಯಾಮ್‌ಗಳಷ್ಟು ತೂಕವುಳ್ಳದ್ದಾಗಿದ್ದು, ಲೋಕದಲ್ಲಿರುವ ಸೀಲ್‌ಗಳ ಜಾತಿಯಲ್ಲಿ ಅತಿ ದೊಡ್ಡದೆಂದೆನಿಸಿಕೊಳ್ಳುವ ಸೀಲ್‌ಗಳಲ್ಲಿ ಒಂದಾಗಿದೆ.

ಬೆಳ್ಳಿಬಣ್ಣದ ತುಪ್ಪುಳುಗಳಿಂದ ತುಂಬಿರುವ ಬಲ್ಬ್‌ ಆಕಾರದ ತಲೆ, ಕಡುಗಪ್ಪು ಬಣ್ಣದ ಕಣ್ಣುಗಳು, ದೊಡ್ಡ ಹೊಳ್ಳೆಗಳುಳ್ಳ ಮೂಗು, ಚಿಕ್ಕ ಸೀಳಿನಂತಿರುವ ಕಿವಿಗಳು, ದಟ್ಟವಾಗಿದ್ದು ಇಳಿಬಿದ್ದಿರುವ ಮೀಸೆ ಮತ್ತು ಗಿಡ್ಡವಾಗಿಯೂ ದಪ್ಪವಾಗಿಯೂ ಇರುವ ಗದ್ದಗಳು ಇವುಗಳ ವಿಶೇಷ ವೈಶಿಷ್ಟ್ಯಗಳಾಗಿವೆ. ದೇಹದ ಮೇಲೆ ಚಿಕ್ಕದಾಗಿರುವ ಕಪ್ಪು ಅಥವಾ ಕಂದು ಬಣ್ಣದ ಕೂದಲು ತುಂಬಿದ್ದು, ಕೆಳಭಾಗವು ತೆಳುಬಣ್ಣಗಳಿಂದ ತುಂಬಿರುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಹೊಸದಾಗಿ ಜನಿಸಿದ ಸೀಲ್‌ ಮರಿಗಳ ದೇಹದ ಹಿಂಭಾಗವು ಉದ್ದವಾದ ಕಪ್ಪು ಕೂದಲಿನಿಂದ ತುಂಬಿರುತ್ತದೆ ಮತ್ತು ಅದರ ಹೊಟ್ಟೆಯ ಮೇಲೆ ಬಿಳಿಬಣ್ಣದ ಮಚ್ಚೆಗಳಿರುತ್ತವೆ.

ಮಂಕ್‌ ಸೀಲ್‌ಗಳ ಸಂತಾನೋತ್ಪತ್ತಿಯ ಪ್ರಮಾಣವು ತೀರ ಕಡಿಮೆಯಾಗಿರುವುದರಿಂದ, ಅವುಗಳು ಪಾರಾಗಿ ಉಳಿಯುವುದು ಇನ್ನೂ ಕಷ್ಟಕರವಾಗಿದೆ. ಹೆಣ್ಣು ಸೀಲ್‌ಗಳು ವರ್ಷಕ್ಕೆ ಒಂದು ಮರಿಯನ್ನು ಮಾತ್ರ ಹಾಕುತ್ತವೆ. ಇನ್ನೂ ವಿಷಾದಕರ ಸಂಗತಿಯೇನೆಂದರೆ, ಪೂರ್ತಿ ಬೆಳವಣಿಗೆ ಹೊಂದಿರುವ ಎಲ್ಲ ಹೆಣ್ಣು ಸೀಲ್‌ಗಳು ಪ್ರತಿ ವರ್ಷ ಸಂತಾನೋತ್ಪತ್ತಿ ಮಾಡುವುದಿಲ್ಲ.

ಕಡಿಮೆ ಜನನ ಪ್ರಮಾಣವು ತಾನೇ ಇವುಗಳಿಗೆ ಅಪಾಯವನ್ನೊಡ್ಡುವ ಏಕಮಾತ್ರ ಕಾರಣವಾಗಿಲ್ಲ. ನ್ಯೂ ಯಾರ್ಕ್‌ ಅಕ್ವೇರಿಯಂ ಫಾರ್‌ ವೈಲ್ಡ್‌ಲೈಫ್‌ ಕನ್‌ಸರ್ವೇಷನ್‌ನ ಮೇಲ್ವಿಚಾರಕರಾದ ಡಾ. ಡೆನ್ನಿಸ್‌ ಥೋನೆ ಹೇಳುವುದು: “ಮೆಡಿಟರೇನಿಯನ್‌ ಮಂಕ್‌ ಸೀಲ್‌ನ ಸಂತಾನೋತ್ಪತ್ತಿ ಪ್ರಮಾಣವು ನಿಧಾನವಾಗಿದ್ದರೂ, ಇದರಷ್ಟೇ ಸಂತಾನೋತ್ಪತ್ತಿ ಪ್ರಮಾಣವಿರುವ ರೇವು ಸೀಲ್‌ (ಹಾರ್ಬರ್‌ ಸೀಲ್‌)ನ ಸಂಖ್ಯೆಯು ಕಡಿಮೆಯಾಗಿಲ್ಲ. ಆದುದರಿಂದ, ಮಂಕ್‌ ಸೀಲ್‌ಗಳ ಸಾವನ್ನುಂಟುಮಾಡುತ್ತಿರುವ ಬೇರೆ ಅಂಶಗಳು ಖಂಡಿತವಾಗಿಯೂ ಇವೆ.”

ಆಕ್ರಮಣಕ್ಕೊಳಗಾಗಿದೆ

ಬೆಂಕಿಯು ನಿಮ್ಮ ಮನೆಯನ್ನು ಸುಟ್ಟುಹಾಕುವಲ್ಲಿ ಉಂಟಾಗುವ ವಿನಾಶವನ್ನು ಸ್ವಲ್ಪ ಊಹಿಸಿನೋಡಿ. ನಿಮ್ಮ ಎಲ್ಲ ಸ್ವತ್ತುಗಳನ್ನು, ಅಂದರೆ ಪೀಠೋಪಕರಣ, ಬಟ್ಟೆಬರೆ, ವೈಯಕ್ತಿಕ ಸಂಪತ್ತು ಮತ್ತು ಇನ್ನಿತರ ಸ್ಮರಣೀಯ ವಸ್ತುಗಳೆಲ್ಲವನ್ನೂ ಕಳೆದುಕೊಳ್ಳುವಿರಿ. ನಿಮ್ಮ ಜೀವನವು ಸಂಪೂರ್ಣವಾಗಿ ಬದಲಾಗುವುದು. ಮೆಡಿಟರೇನಿಯನ್‌ ಮಂಕ್‌ ಸೀಲ್‌ನ ಮನೆಗೆ ಇದೇ ಸಂಭವಿಸಿದೆ. ಮಾಲಿನ್ಯ, ಪ್ರವಾಸಿಗರ ಭೇಟಿ, ಕೈಗಾರಿಕೆ ಮತ್ತು ಮಾನವನ ಇನ್ನಿತರ ಕಾರ್ಯಕಲಾಪಗಳು, ಮಂಕ್‌ ಸೀಲ್‌ನ ನೈಸರ್ಗಿಕ ಇರುನೆಲೆಯ ಹೆಚ್ಚಿನ ಭಾಗದ ಅಳಿವಿಗೆ ಕಾರಣವಾಗಿವೆ.

ಅಷ್ಟುಮಾತ್ರವಲ್ಲದೆ, ವಿಪರೀತವಾದ ಮೀನುಗಾರಿಕೆಯ ಕಾರಣ ಮಂಕ್‌ ಸೀಲ್‌ನ ಆಹಾರದ ಸರಬರಾಯಿ ಅಧಿಕವಾಗಿ ಕಡಿಮೆಗೊಳಿಸಲ್ಪಟ್ಟಿದೆ. ಪ್ರಾಣಿಶಾಸ್ತ್ರಜ್ಞರಾದ ಡಾ. ಸೂಸನ್‌ ಕೆನಡಿ-ಸ್ಟಾಸ್‌ಕಾಫ್‌ ಹೇಳುವುದು: “ಸೀಲ್‌ಗಳ ಆಹಾರಕ್ಕಾಗಿರುವ ಬೇಟೆ ಜೀವಿಗಳು ಕಡಿಮೆಯಿರುವಾಗ, ತಮ್ಮನ್ನು ಪೋಷಿಸಿಕೊಳ್ಳಲು ಅವು ಹೆಚ್ಚಿನ ಶಕ್ತಿಯನ್ನು ಉಪಯೋಗಿಸಬೇಕಾಗಿರುತ್ತದೆ.” ಆದುದರಿಂದ, ಮಂಕ್‌ ಸೀಲ್‌ಗಳು ತಮ್ಮ ಇರುನೆಲೆ ಅಥವಾ ಮನೆಯ ವಿಷಯದಲ್ಲಿ ಮಾತ್ರ ಗಂಭೀರವಾದ ನಷ್ಟವನ್ನು ಅನುಭವಿಸಿಲ್ಲ, ಮೇಲಾಗಿ ತಮ್ಮ ಆಹಾರಕ್ಕಾಗಿ ಕೂಡ ಅವು ಹೋರಾಡಬೇಕಾಗಿದೆ!

ವಿಪರೀತವಾದ ಮೀನುಗಾರಿಕೆಯ ಮತ್ತೊಂದು ಪರಿಣಾಮವೇನೆಂದರೆ, ಆಗಿಂದಾಗ್ಗೆ ಸೀಲ್‌ಗಳು ಮೀನಿನ ಬಲೆಗಳಲ್ಲಿ ಸಿಕ್ಕಿಕೊಂಡು ಮುಳುಗಿಹೋಗುತ್ತವೆ. ಆದರೂ, ಅನೇಕ ಬಾರಿ ಸೀಲ್‌ಗಳು ಮೀನುಗಾರರಿಂದಲೇ ಕೊಲ್ಲಲ್ಪಡುತ್ತವೆ. ಏಕೆ? ಏಕೆಂದರೆ ಸೀಲ್‌ಗಳು ಮೀನಿನ ಬಲೆಯಿಂದ ಆಹಾರವನ್ನು ಕದಿಯಲು ಕಲಿತುಕೊಂಡಿದ್ದು, ಈ ಕಾರ್ಯಾಚರಣೆಯಲ್ಲಿ ಬಲೆಗಳನ್ನು ಹಾಳುಮಾಡುತ್ತಿದ್ದವು. ಕಡಿಮೆಯಾಗುತ್ತಿರುವ ಮೀನಿಗಾಗಿರುವ ಸ್ಪರ್ಧೆಯಲ್ಲಿ ಮಾನವನು ಮೃಗಗಳ ವಿರುದ್ಧ ಪ್ರತಿಸ್ಪರ್ಧಿಯಾಗಿದ್ದಾನೆ. ಈ ಅಸಮತೂಕ ಹೋರಾಟವು, ಮಂಕ್‌ ಸೀಲ್‌ಗಳು ಅಳಿವಿನ ಅಂಚಿಗೆ ತಲಪುವಂತೆ ಮಾಡಿದೆ.

ಆಹಾರ ಸರಪಳಿಯ ಹೆಚ್ಚುಕಡಿಮೆ ಮೇಲಿನ ಶ್ರೇಣಿಯಲ್ಲಿ ಮಂಕ್‌ ಸೀಲ್‌ ಇರುವುದರಿಂದ, ಸಮುದ್ರದ ಈ ಸಸ್ತನಿಯು “ಸೂಚಕ ಜಾತಿ”ಯಾಗಿದೆ ಎಂದು ಕೆಲವು ವಿಜ್ಞಾನಿಗಳು ಹೇಳುತ್ತಾರೆ. ಇವುಗಳು ಜೀವಿಸುತ್ತಿರುವ ಪರಿಸ್ಥಿತಿ ಸರಿಯಾಗಿಲ್ಲವೆಂದರೆ, ಆಹಾರ ಸರಪಳಿಯ ಉಳಿದಿರುವ ಜೀವಿಗಳ ಸ್ಥಿತಿಯೂ ಹದಗೆಡುತ್ತಿದೆ ಎಂಬುದಕ್ಕೆ ಇದು ವಿಶ್ವಾಸಾರ್ಹ ಸೂಚಕವಾಗಿದೆ ಎಂಬುದೇ ಇದರ ಅರ್ಥ. ಮಂಕ್‌ ಸೀಲ್‌ ಯೂರೋಪಿನ ಅತಿ ಅಪಾಯಕ್ಕೊಳಗಾಗಿರುವ ಜೀವಿಯಾಗಿರುವುದರಿಂದ, ಮೆಡಿಟರೇನಿಯನ್‌ನ ಪರಿಸರವ್ಯವಸ್ಥೆಯನ್ನು ಸಂರಕ್ಷಿಸಲು ಪರಿಸ್ಥಿತಿಯು ಅನುಕೂಲಕರವಾಗಿಲ್ಲವೆಂಬುದು ಗೊತ್ತಾಗುತ್ತದೆ.

ಅವು ಪಾರಾಗಿ ಉಳಿಯುವವೋ?

ಹಾಸ್ಯಕರ ಸಂಗತಿಯೇನೆಂದರೆ, ಮನುಷ್ಯರೇ ಮೆಡಿಟರೇನಿಯನ್‌ ಮಂಕ್‌ ಸೀಲ್‌ನ ಅಸ್ತಿತ್ವಕ್ಕೆ ಅತಿದೊಡ್ಡ ಬೆದರಿಕೆಯಾಗಿದ್ದಾರೆ ಮತ್ತು ಅದೇ ಸಮಯದಲ್ಲಿ ಅವುಗಳ ಸಂರಕ್ಷಣೆಗೆ ಅತಿ ಹೆಚ್ಚು ಬೆಂಬಲವನ್ನು ನೀಡುವವರಾಗಿದ್ದಾರೆ. ಸೀಲ್‌ಗಳ ಸಂರಕ್ಷಣೆಗಾಗಿ ಖಾಸಗಿ ಹಾಗೂ ಸರಕಾರಿ ಸೇವಾಸಂಸ್ಥೆಗಳು ನಿರ್ಮಿಸಲ್ಪಟ್ಟಿವೆ. ಅವುಗಳಿಗಾಗಿ ಪ್ರತ್ಯೇಕ ರಕ್ಷಣಾ ಕ್ಷೇತ್ರಗಳು ರಚಿಸಲ್ಪಟ್ಟಿವೆ. ಈ ಅಪೂರ್ವ ಪ್ರಾಣಿಗಳಿಗೆ ಹೇಗೆ ನೆರವು ನೀಡಬಹುದು ಎಂಬುದನ್ನು ಕಲಿಯಲಿಕ್ಕಾಗಿ, ಇವುಗಳ ಇರುನೆಲೆಯಲ್ಲಿ ಹಲವಾರು ಅಧ್ಯಯನಗಳು ನಡೆಸಲ್ಪಟ್ಟಿವೆ.

ಹೆಲಿನಿಕ್‌ ಸೊಸೈಟಿ ಫಾರ್‌ ದ ಸ್ಟಡಿ ಆ್ಯಂಡ್‌ ಪ್ರೊಟೆಕ್ಷನ್‌ ಆಫ್‌ ದ ಮೆಡಿಟರೇನಿಯನ್‌ ಮಂಕ್‌ ಸೀಲ್‌ (MOm) 1988ರಲ್ಲಿ ಸ್ಥಾಪಿಸಲ್ಪಟ್ಟಿತು. MOmನ ಸಂಶೋಧಕರು ಮಂಕ್‌ ಸೀಲ್‌ನ ತವರಿಗೆ ಕ್ರಮವಾಗಿ ಭೇಟಿನೀಡಿ, ಅವುಗಳ ಸಂಖ್ಯೆಯ ಮೇಲೆ ನಿಗಾ ಇಡುತ್ತಾರೆ ಹಾಗೂ ಅವುಗಳ ಸಂರಕ್ಷಣೆಗಾಗಿ ಬೇಕಾಗಿರುವ ಇನ್ನಿತರ ಮಾಹಿತಿಯನ್ನು ಸಂಗ್ರಹಿಸುತ್ತಾರೆ.

ಕಾವಲಿಗಾಗಿ ಇಡಲ್ಪಟ್ಟಿರುವ ತಂಡವು, ವೇಗವಾಗಿ ಚಲಿಸುವ ದೋಣಿಗಳನ್ನು ಉಪಯೋಗಿಸಿ ಸಂರಕ್ಷಿಸಲ್ಪಟ್ಟಿರುವ ಕ್ಷೇತ್ರಗಳಲ್ಲಿ ಗಸ್ತುತಿರುಗುತ್ತದೆ. ಈ ತಂಡವು, ಉತ್ತರ ಸ್ಪೋರೇಡ್ಸ್‌ ದ್ವೀಪಗಳಲ್ಲಿ, ಆಲೋನಿಸೋಸ್‌ನಲ್ಲಿರುವ ಗ್ರೀಸ್‌ನ ರಾಷ್ಟ್ರೀಯ ಕಡಲ ಉದ್ಯಾನವನಕ್ಕೆ ಪ್ರಯಾಣ ಬೆಳೆಸುವ ಪ್ರವಾಸಿಗರಿಗೆ ಹಾಗೂ ಮೀನುಗಾರರಿಗೆ ಅಗತ್ಯವಿರುವ ಮಾಹಿತಿಯನ್ನು ಮತ್ತು ಸಲಹೆಯನ್ನು ಸಹ ಒದಗಿಸುತ್ತದೆ. ಅಸ್ವಸ್ಥವಾದ ಹಾಗೂ ಗಾಯಗೊಂಡಿರುವ ಸೀಲ್‌ಗಳನ್ನು ಕಂಡುಕೊಳ್ಳುವಲ್ಲಿ, ಈ ತಂಡವು ಅವುಗಳಿಗೆ ಬೇಕಾಗಿರುವ ಯಾವುದೇ ಚಿಕಿತ್ಸೆಯನ್ನು ನೀಡುತ್ತದೆ ಮಾತ್ರವಲ್ಲ MOmನ ರೀಹಬಿಲಿಟೇಷನ್‌ ವಿಭಾಗಕ್ಕೆ ಈ ಸೀಲ್‌ಗಳನ್ನು ತಲಪಿಸಲು ಬೇಕಾದ ಸಾರಿಗೆ ವ್ಯವಸ್ಥೆಯನ್ನೂ ಒದಗಿಸುತ್ತದೆ.

ದ ಸೀಲ್‌ ಟ್ರೀಟ್ಮೆಂಟ್‌ ಆ್ಯಂಡ್‌ ರೀಹಬಿಲಿಟೇಷನ್‌ ಸೆಂಟರ್‌, ತಬ್ಬಲಿಯಾಗಿರುವ, ರೋಗಗ್ರಸ್ತ ಇಲ್ಲವೆ ಗಾಯಗೊಂಡಿರುವ ಮರಿಗಳನ್ನು ಪರಾಮರಿಸಲು ಬೇಕಾದ ಅನುಕೂಲಗಳನ್ನು ಹೊಂದಿದೆ. ಇಂಥ ಸೀಲ್‌ಗಳು ಚಿಕಿತ್ಸೆಗೊಳಗಾಗಿ ತಾವಾಗಿಯೇ ಜೀವಿಸಲು ಶಕ್ತವಾಗುವ ವರೆಗೂ ಪರಾಮರಿಸಲ್ಪಡುತ್ತವೆ. ಇಷ್ಟರ ತನಕ ಫಲಿತಾಂಶಗಳು ಭರವಸೆ ನೀಡುವಂಥ ರೀತಿಯಲ್ಲಿವೆ. ಹಲವಾರು ವರ್ಷಗಳ ತ್ವರಿತವಾದ ಇಳಿತದ ನಂತರ, ಉತ್ತರ ಸ್ಪೋರೇಡ್ಸ್‌ನಲ್ಲಿರುವ ಮಂಕ್‌ ಸೀಲ್‌ಗಳ ಸಂಖ್ಯೆಯು ಚೇತರಿಸಿಕೊಳ್ಳುತ್ತಿರುವ ಮೊದಲ ಸೂಚನೆಯನ್ನು ತೋರಿಸುತ್ತಿದೆ.

ಈ ಪ್ರಯತ್ನಗಳು ಮುಂದೆಯೂ ಯಶಸ್ವಿಕರವಾಗುವವೋ? ಕಾಲವೇ ಉತ್ತರವನ್ನು ಕೊಡುವುದು. ಆದರೂ, ಬೆದರಿಕೆಗೊಳಗಾಗಿರುವ ಈ ಜೀವಿಗಳ ಸಂರಕ್ಷಣೆಗಾಗಿ ಇನ್ನೂ ಹೆಚ್ಚು ಕೆಲಸದ ಆವಶ್ಯಕತೆಯಿದೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಸ್ಮಿತ್‌ಸೋನಿಯನ್‌ ಇನ್‌ಸ್ಟಿಟ್ಯೂಟ್‌ನ ಡಾ. ಡೇವಿಡ್‌ ವೈಲ್ಡ್‌ ಎಚ್ಚರ!ಕ್ಕೆ ಹೇಳಿದ್ದು: “ಒಟ್ಟಿನಲ್ಲಿ, ಜಲಚರಗಳ ಜೀವನವು ಸುಸ್ಥಿತಿಯಲ್ಲಿಲ್ಲ. ಸಮಸ್ಯೆಯೇನೆಂದರೆ, ಸಾಗರದಲ್ಲಿ ಏನಾಗುತ್ತಿದೆ ಎಂಬುದು ನಮಗೆ ನಿಜವಾಗಿಯೂ ಗೊತ್ತಿಲ್ಲ, ಮತ್ತು ಅದನ್ನು ಹೇಗೆ ಸಂರಕ್ಷಿಸುವುದು ಎಂಬುದು ನಮಗೆ ಇನ್ನೂ ನಿಶ್ಚಿತವಾಗಿ ಗೊತ್ತಿಲ್ಲ.”(g01 3/8)

[ಪುಟ 17ರಲ್ಲಿರುವ ಚೌಕ]

ಸೋದರಬಂಧುಗಳು ಪ್ರಾಣಾಪಾಯದಲ್ಲಿವೆ

ಮಂಕ್‌ ಸೀಲ್‌ಗಳು ಲೋಕದಾದ್ಯಂತ ಇರುವ ಇನ್ನಿತರ ಸಾಗರಗಳಲ್ಲಿಯೂ ಕಂಡುಬರುತ್ತವೆ. ಆದರೆ, ಈ ಸೀಲ್‌ಗಳೂ ಅಪಾಯಕ್ಕೊಳಗಾಗಿವೆ. ಕ್ಯಾರಿಬಿಯನ್‌ ಅಥವಾ ವೆಸ್ಟ್‌ ಇಂಡಿಯನ್‌ ಮಂಕ್‌ ಸೀಲ್‌, “ನ್ಯೂ ವರ್ಲ್ಡ್‌ [ಉತ್ತರ ಹಾಗೂ ದಕ್ಷಿಣ ಅಮೆರಿಕಗಳನ್ನು ಸೇರಿಸಿ ಹೇಳುವ ಹೆಸರು]ನಲ್ಲಿ ಕೊಲಂಬಸ್‌ ನೋಡಿದ ಮೊದಲನೇ ಸೀಲ್‌” ಆಗಿತ್ತು ಎಂದು ನ್ಯಾಷನಲ್‌ ಜೀಅಗ್ರ್ಯಾಫಿಕ್‌ ಪತ್ರಿಕೆಯು ತಿಳಿಸುತ್ತದೆ. “ಸಮುದ್ರ ತೀರವನ್ನು ಪ್ರೀತಿಸುವ ಹಾಗೂ ತುಂಬ ಪ್ರಯೋಜನಾರ್ಹವಾದ ಮಂಕ್‌ ಸೀಲ್‌ಗಳು, ಅತಿ ಬೇಗನೆ ಹಿಂಡುಹಿಂಡಾಗಿ ಹತಿಸಲ್ಪಟ್ಟವು. . . . ವರದಿಗನುಸಾರ, ಕೊನೆಯ ಬಾರಿಗೆ ಕ್ಯಾರಿಬಿಯನ್‌ ಮಂಕ್‌ ಸೀಲ್‌ ಕಣ್ಣಿಗೆ ಬಿದ್ದದ್ದು 1952ರಲ್ಲೇ.”

ಹವಾಯಿಯನ್‌ ದ್ವೀಪಸಮೂಹಗಳ ರಾಷ್ಟ್ರೀಯ ವನ್ಯಜೀವಿ ಆಶ್ರಯಸ್ಥಾನದಲ್ಲಿರುವ ಫ್ರೆಂಚ್‌ ಫ್ರಿಗೇಟ್‌ ಶೋಅಲ್ಸ್‌, ಹವಾಯಿಯನ್‌ ಅಥವಾ ಲೇಯ್‌ಸನ್‌ ಮಂಕ್‌ ಸೀಲ್‌ಗಳ ಕೊನೆಯ ಆಶ್ರಯದಾಣವಾಗಿ ಪರಿಣಮಿಸಬಹುದು. ಆದರೂ, ಈಗ ಉಳಿದಿರುವ ಹೆಚ್ಚುಕಡಿಮೆ 1,300 ಸೀಲ್‌ಗಳನ್ನು ಸಂರಕ್ಷಿಸಲು ಶ್ರದ್ಧಾಪೂರ್ವಕವಾದ ಪ್ರಯತ್ನಗಳನ್ನು ಮಾಡುತ್ತಿರುವುದಾದರೂ, ಅವು “ಸಮಸ್ಯೆಗಳಿಂದಾಗಿ ಉಪದ್ರವವನ್ನು ಅನುಭವಿಸುತ್ತಿವೆ.”

ಇಸವಿ 1997ರ ವಸಂತಕಾಲದಿಂದ ಪ್ರಾರಂಭಿಸಿ, ಪಶ್ಚಿಮ ಆಫ್ರಿಕದ ಮೌರಿಟೇನಿಯನ್‌ ತೀರದಲ್ಲಿ ವಾಸಿಸುತ್ತಿದ್ದ 270 ಮೆಡಿಟರೇನಿಯನ್‌ ಮಂಕ್‌ ಸೀಲ್‌ಗಳಲ್ಲಿ ಸುಮಾರು ಮುಕ್ಕಾಲು ಭಾಗದಷ್ಟು ಸೀಲ್‌ಗಳು ಒಂದು ಸೋಂಕುರೋಗದಿಂದ ನಾಶವಾದವು. ಸಯನ್ಸ್‌ ನ್ಯೂಸ್‌ ಪತ್ರಿಕೆಯ ಒಂದು ವರದಿಗನುಸಾರ, ಪರೀಕ್ಷಿಸಲ್ಪಟ್ಟ ಸೀಲ್‌ಗಳಲ್ಲಿ ಹೆಚ್ಚಿನವು, “ನಾಯಿಗಳಲ್ಲಿ ಬೇನೆಯನ್ನು ಉಂಟುಮಾಡುವಂತಹದ್ದೇ ರೀತಿಯ ಡಾಲ್ಫಿನ್‌ ಮೋರ್‌ಬಿಲಿವೈರಸ್‌”ನಿಂದ ಸೋಂಕಿತವಾಗಿದ್ದವು.

[ಪುಟ 16ರಲ್ಲಿರುವ ಚಿತ್ರಗಳು]

ಬಲ್ಬ್‌ ಆಕಾರದ ತಲೆ ಮತ್ತು ದೊಡ್ಡ ಹೊಳ್ಳೆಗಳುಳ್ಳ ಮೂಗಿನಂತಹ ಅನೇಕ ವಿಶೇಷ ಗುಣಲಕ್ಷಣಗಳು ಮಂಕ್‌ ಸೀಲ್‌ಗಳಿಗಿವೆ

ಸೀಲ್‌ಗಳ ಸಂರಕ್ಷಣೆಗಾಗಿ ಸೇವಾಸಂಸ್ಥೆಗಳು ನಿರ್ಮಿಸಲ್ಪಟ್ಟಿವೆ

[ಕೃಪೆ]

Panos Dendrinos/HSSPMS

[ಪುಟ 17ರಲ್ಲಿರುವ ಚಿತ್ರಗಳು]

ಹಲವಾರು ವರ್ಷಗಳ ತ್ವರಿತವಾದ ಇಳಿತದ ನಂತರ, ಉತ್ತರ ಸ್ಪೋರೇಡ್ಸ್‌ನಲ್ಲಿರುವ ಮಂಕ್‌ ಸೀಲ್‌ಗಳ ಸಂಖ್ಯೆಯು ಚೇತರಿಸಿಕೊಳ್ಳುತ್ತಿರುವ ಮೊದಲ ಸೂಚನೆಯನ್ನು ತೋರಿಸುತ್ತಿದೆ

[ಕೃಪೆ]

P. Dendrinos/MOm

D. Kanellos/MOm

[ಪುಟ 17ರಲ್ಲಿರುವ ಚಿತ್ರಗಳು]

ಹವಾಯಿಯನ್‌ ಮಂಕ್‌ ಸೀಲ್‌

[ಪುಟ 15ರಲ್ಲಿರುವ ಚಿತ್ರ ಕೃಪೆ]

◀ Panos Dendrinos/HSSPMS ▼