ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೂಕಲಿಪ್ಟಸ್‌ ಮರ ಎಷ್ಟು ಪ್ರಯೋಜನದಾಯಕ?

ಯೂಕಲಿಪ್ಟಸ್‌ ಮರ ಎಷ್ಟು ಪ್ರಯೋಜನದಾಯಕ?

ಯೂಕಲಿಪ್ಟಸ್‌ ಮರ ಎಷ್ಟು ಪ್ರಯೋಜನದಾಯಕ?

ಆಸ್ಟ್ರೇಲಿಯದ ಎಚ್ಚರ! ಲೇಖಕನಿಂದ

ಕೆಲವು ಮರಗಳು ದೈತ್ಯಾಕಾರದವುಗಳಾಗಿವೆ ಮತ್ತು 300 ಅಡಿಗಳಿಗಿಂತಲೂ ಎತ್ತರವಾಗಿವೆ. ಜಗತ್ತಿನಲ್ಲೇ ಅತ್ಯಂತ ಎತ್ತರವಾದ ಮರಗಳ ಗುಂಪಿಗೆ ಇವು ಸೇರಿವೆ. ಇನ್ನಿತರ ಮರಗಳು ಗಿಡ್ಡವಾಗಿದ್ದು, ಒಣಭೂಮಿಯ ಮೇಲೆ ಸ್ವಲ್ಪವೇ ಎತ್ತರಕ್ಕೆ ವಕ್ರವಾಗಿ ಬೆಳೆದು ನಿಂತಿರುತ್ತವೆ. ಅವುಗಳ ಎಲೆಗಳು ಸುಂದರವಾದ ವಿನ್ಯಾಸದಿಂದ ಕೂಡಿವೆ ಮತ್ತು ಅವುಗಳ ಹೂವು ಕಣ್ಣಿಗೆ ಮುದನೀಡುತ್ತವೆ. ಒಂದಲ್ಲ ಒಂದು ವಿಧದಲ್ಲಿ ನೀವು ಸಹ ಈ ಮರದ ಕೆಲವೊಂದು ಭಾಗವನ್ನು ಉಪಯೋಗಿಸಿರಬಹುದು.

ಇವುಗಳಲ್ಲಿ ಕೆಲವು ಮರಗಳಿಗೆ ಆ್ಯಲ್ಪೈನ್‌ ಆ್ಯಶ್‌ ಮತ್ತು ಟಾಸ್ಮೇನಿಯನ್‌ ಓಕ್‌ ಎಂಬಂಥ ವಿಶೇಷ ಹೆಸರುಗಳಿವೆಯಾದರೂ, ಹೆಚ್ಚಿನ ಮರಗಳು ಸಾಮಾನ್ಯವಾಗಿ ಗೋಂದು ಮರ (ಗಮ್‌ ಟ್ರೀ) ಎಂದು ಪ್ರಸಿದ್ಧವಾಗಿವೆ. ನಿಜವಾಗಿ ಹೇಳುವುದಾದರೆ, ಕಾರ್ಬೋಹೈಡ್ರೇಟ್‌ಗಳಿಂದ ಮಾಡಲ್ಪಟ್ಟು ನೀರಿನಲ್ಲಿ ಕರಗುವಂಥ ಒಂದು ವಸ್ತುವೇ ಗೋಂದಾಗಿದೆ. ಆದರೆ ಯಾವ ಯೂಕಲಿಪ್ಟಸ್‌ (ನೀಲಗಿರಿ) ಮರವೂ ಗೋಂದನ್ನು ಉತ್ಪಾದಿಸುವುದಿಲ್ಲ. ಆದುದರಿಂದ, ಗೋಂದು ಮರ ಎಂಬುದು ನಿಜವಾಗಿಯೂ ಒಂದು ತಪ್ಪು ಹೆಸರಾಗಿದೆ. ಈ ಮರಗಳು ಯೂಕಲಿಪ್ಟಸ್‌ ಜಾತಿ ಎಂದು ಗುರುತಿಸಲ್ಪಟ್ಟಿರುವುದು ಸೂಕ್ತವಾದದ್ದಾಗಿದೆ. ಮತ್ತು ಮೂಲತಃ ಆಸ್ಟ್ರೇಲಿಯದ ಈ ವೃಕ್ಷ ಕುಟುಂಬದಲ್ಲಿ 600ಕ್ಕಿಂತಲೂ ಹೆಚ್ಚಿನ ಪ್ರಭೇದಗಳಿವೆ.

ಆಸ್ಟ್ರೇಲಿಯದ ಉತ್ತರ ಭಾಗದ ಉಷ್ಣವಲಯದಲ್ಲಿ ಹಾಗೂ ಹಿನ್ನಾಡುಗಳ ಶುಷ್ಕ (ನಿರ್ಜಲ) ಬಯಲುಗಳಲ್ಲಿ ಯೂಕಲಿಪ್ಟಸ್‌ ಮರಗಳು ಚೆನ್ನಾಗಿ ಬೆಳೆಯುತ್ತವೆ. ಆದರೆ ದಕ್ಷಿಣ ಟಾಸ್ಮೇನಿಯದ ಧ್ರುವಪ್ರದೇಶದ ಮಾರುತಗಳ ಮಧ್ಯೆಯೂ ಹಾಗೂ ಕರಾವಳಿಯ ಪರ್ವತಮಯ ಸ್ಥಳಗಳಲ್ಲಿರುವ ಮಂಜಿನ ವಾತಾವರಣದಲ್ಲಿಯೂ ಅವು ಹುಲುಸಾಗಿ ಬೆಳೆಯುತ್ತವೆ. ಈ ಮರಗಳು ಎಷ್ಟು ವ್ಯಾಪಕವಾಗಿವೆಯೆಂದರೆ, 19ನೆಯ ಶತಮಾನದ ಒಬ್ಬ ಪರಿಶೋಧಕನೂ ಪ್ರಾಣಿಶಾಸ್ತ್ರಜ್ಞನೂ ಹೇಳಿದ್ದು: “ಕಣ್ಣುಹಾಯಿಸಿದಷ್ಟು ದೂರದ ವರೆಗೂ ಬರೀ ಗೋಂದು ಮರಗಳನ್ನೇ ನೋಡಸಾಧ್ಯವಿದೆ: ಅನೇಕ [ಕಿಲೋಮೀಟರುಗಳಷ್ಟು] ದೂರ ಸಾಗುವುದಾದರೂ ಎಲೆಗಳಲ್ಲಿ ಸ್ವಲ್ಪವೂ ಬದಲಾವಣೆ ಕಂಡುಬರುವುದಿಲ್ಲ.”

ಹತ್ತೊಂಬತ್ತನೆಯ ಶತಮಾನದಲ್ಲಿ ಅನೇಕ ಜನರು ಯೂರೋಪಿನಿಂದ ಬಂದು ಆಸ್ಟ್ರೇಲಿಯದಲ್ಲಿ ನೆಲೆಸಿದಾಗ, ಯೂಕಲಿಪ್ಟಸ್‌ ಬೆಳೆಯು ತುಂಬ ಹಾನಿಯನ್ನು ಅನುಭವಿಸಿತು. ಆಗ ಸುಮಾರು 3,00,000 ಚದರ ಕಿಲೊಮೀಟರುಗಳಷ್ಟು ಭೂಪ್ರದೇಶದಲ್ಲಿದ್ದ ಯೂಕಲಿಪ್ಟಸ್‌ ಮರಗಳನ್ನು ಬುಡಸಮೇತ ಕಿತ್ತುಹಾಕಲಾಯಿತು. ಏಕೆಂದರೆ ಈ ಮರಗಳು ಪ್ರಗತಿಗೆ ತಡೆಯಾಗಿವೆ ಎಂದು ನೆನಸಲಾಗಿತ್ತು. ಆದರೂ, ಈ ಅಮೂಲ್ಯ ಸಂಪನ್ಮೂಲದ ವಿಷಯದಲ್ಲಿ ಎಲ್ಲರಿಗೂ ಇದೇ ದೃಷ್ಟಿಕೋನವಿರಲಿಲ್ಲ. 19ನೆಯ ಶತಮಾನದಲ್ಲಿ, ಯೂಕಲಿಪ್ಟಸ್‌ ಕುಟುಂಬವು ಲೋಕವನ್ನು ಜಯಿಸಲು ಆರಂಭಿಸಿತು.

ಒಬ್ಬ ಚಕ್ರವರ್ತಿ ಮತ್ತು ಒಬ್ಬ ವೈದ್ಯ

ಇಸವಿ 1880ಗಳಲ್ಲಿ, ಇಂದು ಇಥಿಯೋಪಿಯ ಎಂದು ಕರೆಯಲ್ಪಡುವ ಅಬಿಸ್ಸಿನಿಯದ IIನೆಯ ಮೆನೆಲಿಕ್‌ ಎಂಬ ಚಕ್ರವರ್ತಿಗೆ, ನೆರಳನ್ನು ನೀಡುವ ಮರಗಳು ಹಾಗೂ ಅಡಿಸ್‌ ಅಬಾಬಾದ ಬೆಂಗಾಡಿನಲ್ಲಿದ್ದ ಅವನ ಹೊಸ ರಾಜಧಾನಿಗಾಗಿ ಕಟ್ಟಿಗೆಯ ಆವಶ್ಯಕತೆಯುಂಟಾಯಿತು. ಮರಗಾಡು ಇಲ್ಲದಿದ್ದಂತಹ ಈ ಪ್ರದೇಶದಲ್ಲಿ ಆಫ್ರಿಕದ ಯಾವುದೇ ಮರವು ನೆಡಲು ಸೂಕ್ತವಾದದ್ದಾಗಿ ಕಂಡುಬರಲಿಲ್ಲ. ಆದುದರಿಂದ, ಚಕ್ರವರ್ತಿಯ ಪರಿಣತರು, ತಾವು ವಾಸಿಸುತ್ತಿರುವಂತಹ ಪ್ರದೇಶದಲ್ಲಿ ಉರಿಯುವ ಬಿಸಿಲಿನಲ್ಲಿ ಹುಲುಸಾಗಿ ಬೆಳೆಯಸಾಧ್ಯವಿರುವಂತಹ ಒಂದು ಮರಕ್ಕಾಗಿ ಬೇರೆ ಕಡೆಗಳಲ್ಲಿ ಹುಡುಕಲಾರಂಭಿಸಿದರು. “ಅಡಿಸ್‌ ಅಬಾಬಾ” ಅಂದರೆ “ಹೊಸ ಹೂವು” ಎಂದರ್ಥ. ಯೂಕಲಿಪ್ಟಸ್‌ ಮರದ ಗೌರವಾರ್ಥವಾಗಿ ಆ ಸ್ಥಳಕ್ಕೆ ಈ ಹೆಸರು ಕೊಡಲ್ಪಟ್ಟಿರಬಹುದು. ಇಥಿಯೋಪಿಯಕ್ಕೆ ಆಮದು ಮಾಡಿಕೊಳ್ಳಲ್ಪಟ್ಟ ಈ ಲಾಭದಾಯಕ ಮರವು, ಇಲ್ಲಿನ ಆರ್ಥಿಕವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಾರಂಭಿಸಿತು.

ಆಧುನಿಕ ಸಮಯದಲ್ಲಿ ಯೂಕಲಿಪ್ಟಸ್‌ ಮರವನ್ನು ಬೇರೆ ದೇಶಕ್ಕೆ ಕಳುಹಿಸುವುದರಲ್ಲಿ ಸಹಾಯ ಮಾಡಿರುವ ಇನ್ನೊಬ್ಬ ವ್ಯಕ್ತಿ, ಡಾ. ಎಡ್‌ಮುಂಡೂ ನಾವಾರೂ ಡ ಆ್ಯಂಡ್ರಾಡೇ ಆಗಿದ್ದಾರೆ. ಬ್ರಸಿಲ್‌ನಲ್ಲಿ ತೀವ್ರಗತಿಯಿಂದ ಅವನತಿಹೊಂದುತ್ತಿದ್ದ ಅರಣ್ಯವನ್ನು ಪುನಃ ಅಭಿವೃದ್ಧಿಗೊಳಿಸುವ ಉದ್ದೇಶದಿಂದ, 1910ರಲ್ಲಿ ಅವರು ಆಸ್ಟ್ರೇಲಿಯದಿಂದ ಯೂಕಲಿಪ್ಟಸ್‌ ಮರಗಳನ್ನು ಆಮದುಮಾಡಿಕೊಳ್ಳಲು ಆರಂಭಿಸಿದರು. ಸುಮಾರು 3.8 ಕೋಟಿಗಳಷ್ಟು ಯೂಕಲಿಪ್ಟಸ್‌ ಮರಗಳನ್ನು ನೆಡಲು ಇವರೇ ಕಾರಣರಾಗಿದ್ದರು. ಇಂದು 200 ಕೋಟಿಗಿಂತಲೂ ಹೆಚ್ಚು ಮರಗಳನ್ನು ಬ್ರಸಿಲ್‌ನಲ್ಲಿ ನೋಡಿಕೊಳ್ಳಲಾಗುತ್ತಿದೆ.

ಹೀಗೆ, ಸ್ವಂತ ಮಳೆಕಾಡುಗಳ ಜೊತೆಗೆ, ಆಸ್ಟ್ರೇಲಿಯವನ್ನು ಬಿಟ್ಟರೆ ಅತಿ ಹೆಚ್ಚು ಸಂಖ್ಯೆಯ ಯೂಕಲಿಪ್ಟಸ್‌ ಮರಗಳನ್ನು ಹೊಂದಿರುವ ಕೀರ್ತಿಯೂ ಬ್ರಸಿಲ್‌ ದೇಶಕ್ಕಿದೆ. ಇದರಿಂದ ಬ್ರಸಿಲ್‌ನ ಆರ್ಥಿಕವ್ಯವಸ್ಥೆಗೆ ಎಷ್ಟು ಪ್ರಯೋಜನವಾಗಿದೆಯೆಂದರೆ, ಇಂತಹ ಅಮೂಲ್ಯ ಆಸ್ತಿಯನ್ನು ಈ ದೇಶಕ್ಕೆ ಪರಿಚಯಿಸಿದಂತಹ ಅಪೂರ್ವ ಸೇವೆಗಾಗಿ, ಡಾ. ನಾವಾರೂ ಅವರಿಗೆ ಒಂದು ವಿಶೇಷ ಪದಕವನ್ನು ಕೊಟ್ಟು ಸನ್ಮಾನಿಸಲಾಯಿತು.

ಜೀವವೃಕ್ಷ

ಮ್ಯಾಲಿಯಂತಹ ಯೂಕಲಿಪ್ಟಸ್‌ ಮರಗಳು, ತಮ್ಮ ಬೇರುಗಳಲ್ಲಿ ಅಧಿಕ ಪ್ರಮಾಣದ ನೀರನ್ನು ಸಂಗ್ರಹಿಸುವ ಮೂಲಕ ಶುಷ್ಕ ಭೂಮಿಯಲ್ಲಿಯೂ ಬೆಳೆಯಲು ಪ್ರಯತ್ನಿಸುತ್ತವೆ. ಆಸ್ಟ್ರೇಲಿಯದ ಮೂಲನಿವಾಸಿಗಳು ಹಾಗೂ ಆರಂಭದ ಪರಿಶೋಧಕರು, ನೆಲದ ಕೆಳಗಿರುವ ಈ ನೀರಿನ ಬುದ್ದಲಿಗಳನ್ನು ಉಪಯೋಗಿಸುವ ಮೂಲಕ ಬಂಜರು ಹಿನ್ನಾಡುಗಳಲ್ಲಿ ಬದುಕಿ ಉಳಿದರು. ಮೇಲೆ ಮೇಲೆ ಕಂಡುಬರುವ ಈ ಮರದ ಬೇರುಗಳನ್ನು ಅಗೆದು, ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಲಾಯಿತು. ಈ ತುಂಡುಗಳ ಒಂದು ತುದಿಯಿಂದ ಗಾಳಿಯನ್ನು ಊದಿದಾಗ, ನಸುಗಂದು ದ್ರವವು ಅದರಿಂದ ಹೊರಬರಸಾಧ್ಯವಿದೆ. ಇದು ಅಷ್ಟೇನೂ ರುಚಿಕರವಾದ ಪಾನೀಯವಲ್ಲದಿರುವುದಾದರೂ, 30 ಅಡಿ ಉದ್ದದ ಬೇರಿನಿಂದ ಸುಮಾರು 1.5 ಲೀಟರ್‌ಗಳಷ್ಟು ಜೀವರಕ್ಷಕ ದ್ರವವನ್ನು ಹೊರತೆಗೆಯಸಾಧ್ಯವಿದೆ ಎಂದು ಅಂದಾಜುಮಾಡಲಾಗಿದೆ.

ಯೂಕಲಿಪ್ಟಸ್‌ ಕುಟುಂಬದ ಇನ್ನಿತರ ಮರಗಳು, ಕೊಚ್ಚೆ ಮಣ್ಣಿನ ನೀರನ್ನು ಸಂಪೂರ್ಣವಾಗಿ ಹೀರಿಕೊಳ್ಳುವ ಮೂಲಕ ಜವುಗು ಪ್ರದೇಶದಲ್ಲಿ ಹುಲುಸಾಗಿ ಬೆಳೆಯುತ್ತವೆ. ಇಟಲಿಯ ಜನರು ಯೂಕಲಿಪ್ಟಸ್‌ ಮರದ ಈ ವಿಶೇಷ ಸಾಮರ್ಥ್ಯವನ್ನು ಉಪಯೋಗಿಸಿಕೊಂಡರು. ಒಂದುಕಾಲದಲ್ಲಿ ಸೊಳ್ಳೆಗಳಿಂದ ತುಂಬಿದ್ದ ಪೊಂಟಿನ್‌ ಜವುಗು ಪ್ರದೇಶಗಳನ್ನು ಒಣಗಿಸಲಿಕ್ಕಾಗಿ, ಕೊಳಚೆ ನೆಲದಲ್ಲಿ ಹುಲುಸಾಗಿ ಬೆಳೆಯುವಂತಹ ಯೂಕಲಿಪ್ಟಸ್‌ ಅನ್ನು ನೆಟ್ಟರು. ಈಗ ಈ ಪ್ರದೇಶವು ತುಂಬ ಅಮೂಲ್ಯವಾದ ಜಮೀನಾಗಿ ಮಾರ್ಪಟ್ಟಿದೆ.

ಆಫ್ರಿಕ, ಅಮೆರಿಕ, ಏಷಿಯ, ಹಾಗೂ ಯೂರೋಪಿನಾದ್ಯಂತ ಇರುವ 50ಕ್ಕಿಂತಲೂ ಹೆಚ್ಚು ದೇಶಗಳು, ತಮ್ಮ ವಾಣಿಜ್ಯ ಹಾಗೂ ಸೌಂದರ್ಯೋಪಾಸಕ ಮೌಲ್ಯಕ್ಕಾಗಿ ಯೂಕಲಿಪ್ಟಸ್‌ ಅನ್ನು ಉಪಯೋಗಿಸುತ್ತಿವೆ. ಪೀಠೋಪಕರಣಗಳನ್ನು ಮಾಡುವವರು ಈ ಮರದ ಕಡುಗೆಂಪು ಹಾಗೂ ಹೊಂಬಣ್ಣದ ದಿಮ್ಮಿಗಳನ್ನು ಬೆಲೆಬಾಳುವಂಥದ್ದಾಗಿ ಪರಿಗಣಿಸುತ್ತಾರೆ. ಒಬ್ಬ ಅಧಿಕಾರಿಯು ಹೇಳುವುದು: “ಯೂಕಲಿಪ್ಟಸ್‌ ಮರಗಳು ಅತಿ ಭಾರವಾದ, ಬಹಳ ಗಟ್ಟಿಯಾದ, ಹಾಗೂ ತುಂಬ ಬಾಳಿಕೆಬರುವಂಥ ದಿಮ್ಮಿಗಳನ್ನು ಉತ್ಪಾದಿಸುತ್ತವೆ. ಇದರ ದಿಮ್ಮಿಗಳ ಅತ್ಯುತ್ತಮ ಗುಣಮಟ್ಟ ಹಾಗೂ ಇದರ ತೀವ್ರಗತಿಯ ಬೆಳವಣಿಗೆಯ ಪ್ರಮಾಣವು . . . , ಈ ಮರವನ್ನು ಜಗತ್ತಿನಲ್ಲಿ ಸಿಗುವ ಗಟ್ಟಿಮರದ ಅತ್ಯಮೂಲ್ಯ ಮೂಲವಾಗಿ ಮಾಡುತ್ತದೆ.”

ಈ ಮರದ ಜಲನಿರೋಧಕ ಜಾತಿಗಳನ್ನು, ಹಡಗುಗಳು, ಹಡಗು ಕಟ್ಟೆಗಳು, ಟೆಲಿಫೋನ್‌ ಕಂಭಗಳು, ಬೇಲಿಗಳ ನಿರ್ಮಾಣದಲ್ಲಿ ಹಾಗೂ ತೊಲೆಹಾಸುಗಳಾಗಿ ಉಪಯೋಗಿಸಲಾಗುತ್ತದೆ. ಇದಲ್ಲದೆ, ಎಲ್ಲೊ ಬಾಕ್ಸ್‌ ಹಾಗೂ ಐರನ್‌ಬಾರ್ಕ್‌ ಎಂದು ಕರೆಯಲ್ಪಡುವಂತಹ ಜಾತಿಯ ಮರಗಳಲ್ಲಿ ಗಟ್ಟಿಯಾದ ಕರಟಕಾಯಿಯಂತೆ ಕಾಣುವ ಮೊಗ್ಗಿನಿಂದ ಸುಂದರವಾದ ಹೂವುಗಳು ಅರಳುತ್ತವೆ. ಈ ಹೂವುಗಳು ಮಧುರವಾದ ಮಕರಂದವನ್ನು ಉತ್ಪಾದಿಸುತ್ತವೆ; ಜೇನುನೊಣಗಳು ಇದನ್ನು ತುಂಬ ಸ್ವಾದಿಷ್ಟಕರವಾದ ಜೇನುತುಪ್ಪವಾಗಿ ಪರಿವರ್ತಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ, 45 ಲಕ್ಷ ಟನ್ನುಗಳಷ್ಟು ಯೂಕಲಿಪ್ಟಸ್‌ ಮರದ ಚಕ್ಕೆಗಳನ್ನು ಆಸ್ಟ್ರೇಲಿಯದಿಂದ ರಫ್ತುಮಾಡಲಾಗಿದ್ದು, ಇದರಿಂದ ವರ್ಷಕ್ಕೆ ಸುಮಾರು 25 ಕೋಟಿ ಡಾಲರುಗಳಷ್ಟು ಆದಾಯವು ಸಿಗುತ್ತಿದೆ.

ಕೀನೊ, ತೈಲ ಹಾಗೂ ಟ್ಯಾನಿನ್‌

ಕೀನೊ ಎಂದು ಕರೆಯಲ್ಪಡುವ ರಕ್ತಗೆಂಪು ಬಣ್ಣದ ಗೋಂದಿನಂತಹ ವಸ್ತುವು, ಯೂಕಲಿಪ್ಟಸ್‌ ಮರದ ತೊಗಟೆ ಹಾಗೂ ದಿಮ್ಮಿಯಿಂದ ನಿಧಾನವಾಗಿ ತೊಟ್ಟಿಕ್ಕುತ್ತದೆ. ಕೆಲವು ರೀತಿಯ ಕೀನೊವನ್ನು, ಹಡಗುಗಳನ್ನು ಕೀಟಗಳಿಂದ ಸಂರಕ್ಷಿಸಲಿಕ್ಕಾಗಿ ಉಪಯೋಗಿಸಲಾಗುತ್ತದೆ. ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡುವಂತಹ ಔಷಧವನ್ನು ತಯಾರಿಸುವುದರಲ್ಲಿ ಕೀನೊವನ್ನು ಉಪಯೋಗಿಸಲಾಗುತ್ತದೆ. ಇನ್ನಿತರ ಯೂಕಲಿಪ್ಟಸ್‌ ಮರಗಳ ತೊಗಟೆಯಲ್ಲಿ ಟ್ಯಾನಿನ್‌ ಎಂಬ ವಸ್ತು ದೊರಕುತ್ತದೆ. ಚರ್ಮವನ್ನು ಹದಮಾಡಲು ಹಾಗೂ ಬಟ್ಟೆಗಳಿಗೆ ಬಣ್ಣಹಾಕಲು ಇದನ್ನು ಉಪಯೋಗಿಸಲಾಗುತ್ತದೆ.

ಈ ಮರದ ಎಲೆಗಳ ವಿನ್ಯಾಸವು ತುಂಬ ಅದ್ಭುತಕರವಾದದ್ದಾಗಿದೆ ಮತ್ತು ಇವು ಅಮೂಲ್ಯ ತೈಲದ ಭಂಡಾರವಾಗಿವೆ. ಶಕ್ತಿಗುಂದಿರುವ ಒಂದು ಕೈಯಲ್ಲಿರುವ ಅಸಂಖ್ಯಾತ ನಿರ್ಜೀವ ಬೆರಳುಗಳಂತೆ ಅವು ಇಳಿಬಿದ್ದಿರುತ್ತವೆ. ಎಲೆಗಳ ತುದಿಯು ಕೆಳಮುಖವಾಗಿ ಬಾಗಿರುತ್ತದೆ. ಈ ವಿನ್ಯಾಸವು, ಎಲೆಗಳು ಒಂದು ದೊಡ್ಡ ಆಲಿಕೆಯಂತೆ ಕಾರ್ಯನಡಿಸಲು ಸಹಾಯಮಾಡುತ್ತದೆ. ಅಮೂಲ್ಯ ತೇವಾಂಶವು ಎಲೆಗಳ ಮೇಲೆ ಶೇಖರವಾಗುತ್ತದೆ, ಮತ್ತು ಅವುಗಳ ತೊಗಲಿನಂಥ ತುದಿಯ ಮೂಲಕ ತೊಟ್ಟಿಕ್ಕುತ್ತಾ ಹೋಗಿ ನೀರಿಗಾಗಿ ಕಾದಿರುವ ಬೇರುಗಳನ್ನು ತಲಪುತ್ತದೆ.

ತುಂಬ ತೀಕ್ಷ್ಣವಾದ, ಚೈತನ್ಯದಾಯಕ ಪರಿಮಳದಿಂದ ಕೂಡಿದ ಯೂಕಲಿಪ್ಟಸ್‌ ತೈಲವನ್ನು, ಎಲೆಯ ಬಾಷ್ಪೀಕರಣ ಹಾಗೂ ಬಟ್ಟಿಯಿಳಿಸುವಿಕೆಯ ಪ್ರಕ್ರಿಯೆಯ ಮೂಲಕ ತೆಗೆಯಲಾಗುತ್ತದೆ. ಈ ತೈಲವು ತುಂಬ ವ್ಯಾಪಕವಾಗಿ ಉಪಯೋಗಿಸಲ್ಪಡುತ್ತದೆ. ಉದಾಹರಣೆಗಾಗಿ, ಸುಗಂಧದ್ರವ್ಯಗಳಲ್ಲಿ, ಸೋಪುಗಳಲ್ಲಿ, ಔಷಧಗಳಲ್ಲಿ, ಮಿಠಾಯಿಗಳಲ್ಲಿ, ಹಾಗೂ ಸ್ವಚ್ಛಗೊಳಿಸುವಂತಹ ಉತ್ಪನ್ನಗಳಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಸಹಜ ಸನ್ನಿವೇಶದಲ್ಲಿ, ಇದರ ಎಲೆಗಳಿಂದ ತೈಲವು ಆವಿಯಾಗಿ ಹೋಗಿ, ಗಾಳಿಯನ್ನು ಚಿಕ್ಕ ಚಿಕ್ಕ ಹನಿಗಳಿಂದ ತುಂಬಿಸುತ್ತದೆ; ಸೂರ್ಯನ ಬೆಳಕು ಈ ಹನಿಗಳ ಮೇಲೆ ಬಿದ್ದಾಗ, ಇವು ಸೂರ್ಯರಶ್ಮಿಯ ಪಥವನ್ನು ಬೇರೆ ದಿಕ್ಕಿಗೆ ತಿರುಗಿಸುತ್ತವೆ. ಆಗ ಯೂಕಲಿಪ್ಟಸ್‌ ವನವು ವಿಶೇಷವಾದ ನೀಲಿ ಛಾಯೆಯಿಂದ ಕಂಗೊಳಿಸುತ್ತದೆ. ಸಿಡ್ನಿ ನಗರದ ಪಶ್ಚಿಮ ಭಾಗವನ್ನು ಸ್ಫುಟಗೊಳಿಸುವ ಬ್ಲೂ ಮೌಂಟೆನ್ಸ್‌ಗೆ ಈ ಅಸಾಮಾನ್ಯ ಹೆಸರು ಬಂದಿರಲು ಇದೇ ಕಾರಣ.

ಅತಿ ನಾಜೂಕಿನ ಪ್ರಾಣಿಗಳ ಇರುನೆಲೆ

ಯೂಕಲಿಪ್ಟಸ್‌ ಅರಣ್ಯದಲ್ಲಿ ವಾಸಮಾಡುವ ಅತಿ ಪ್ರಸಿದ್ಧ ಪ್ರಾಣಿಯು, ಆಕರ್ಷಕವಾದ ಉಣ್ಣೆಯ ದೇಹವನ್ನು ಹೊಂದಿರುವ ಕೋಲವೇ ಆಗಿದೆ. ಅತಿನಾಜೂಕಿನ ಈ ಸಸ್ಯಾಹಾರಿಯು, 12 ರೀತಿಯ ಯೂಕಲಿಪ್ಟಸ್‌ ಎಲೆಗಳ ತುದಿಗಳನ್ನು ತಿನ್ನಲು ಇಷ್ಟಪಡುತ್ತದೆ. ಅಧಿಕಾಂಶ ಪ್ರಾಣಿಗಳಿಗೆ ಈ ರೀತಿಯ ಆಹಾರವು ತುಂಬ ಮಾರಕವಾಗಿರುವುದಾದರೂ, ಕೋಲಕ್ಕೆ ಇದರಿಂದ ಯಾವ ಹಾನಿಯೂ ಇಲ್ಲ. ಇದಕ್ಕೆ ಕಾರಣವೇನು?

ಕೋಲದ ದೇಹದಲ್ಲಿ ವಿಶೇಷವಾಗಿ ರಚಿಸಲ್ಪಟ್ಟಿರುವ ಪಚನಕ್ರಿಯೆಯೇ ಇದಕ್ಕೆ ಕಾರಣವಾಗಿದೆ. ಇದರಲ್ಲಿ ಕರುಳುಬಾಲವೂ ಒಳಗೊಂಡಿದ್ದು, ಇದು ಆರರಿಂದ ಎಂಟು ಅಡಿಗಳಷ್ಟು ಉದ್ದವಿರುತ್ತದೆ. ಹೋಲಿಕೆಯಲ್ಲಿ, ಮಾನವರ ಕರುಳುಬಾಲವು ಕೇವಲ ಮೂರರಿಂದ ಆರು ಇಂಚುಗಳಷ್ಟು ಉದ್ದವಿರುತ್ತದೆ. ಕೋಲದ ಈ ಅಸಾಮಾನ್ಯ ಕರುಳುಬಾಲವು, ಯೂಕಲಿಪ್ಟಸ್‌ ಎಲೆಗಳಿಂದ ತನಗೆ ಅಗತ್ಯವಿರುವ ಎಲ್ಲ ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್‌ಗಳು, ಹಾಗೂ ಕೊಬ್ಬನ್ನು ಪಡೆದುಕೊಳ್ಳುವಂತೆ ಈ ಚಿಕ್ಕ ಪ್ರಾಣಿಗೆ ಸಹಾಯಮಾಡುತ್ತದೆ.

ಕೋಲದಂತೆಯೇ ಯೂಕಲಿಪ್ಟಸ್‌ ಎಲೆಗಳನ್ನು ಮಾತ್ರ ತಿನ್ನುವ ಇನ್ನೊಂದು ಪ್ರಾಣಿಯು ಆಸ್ಟ್ರೇಲಿಯದಲ್ಲಿದೆಯಾದರೂ, ಅದು ಅಷ್ಟೇನೂ ಪ್ರಸಿದ್ಧವಾದದ್ದಲ್ಲ. ಇದು ಸರಿದುಹೋಗುವ ಓಪೊಸಮ್‌ಗಳಲ್ಲೇ ಅತಿ ದೊಡ್ಡದಾಗಿದೆ. ಹೊಟ್ಟೆ ಚೀಲವುಳ್ಳ ಈ ಉಣ್ಣೆಭರಿತ ಪ್ರಾಣಿಯು, ಗಾತ್ರದಲ್ಲಿ ಒಂದು ಸಾಕುಬೆಕ್ಕಿನಷ್ಟು ದೊಡ್ಡದಿರುತ್ತದೆ. ಒಂದೂವರೆ ಅಡಿಯಷ್ಟು ಉದ್ದದ ಪೊದೆಗೂದಲಿನ ಬಾಲ ಅದಕ್ಕಿರುತ್ತದೆ ಮತ್ತು ಅದರ ಮುಂದಿನ ಪಂಜಗಳಿಂದ ಹಿಡಿದು ಹಿಂದಿನ ಪಂಜಗಳ ವರೆಗೆ ಚರ್ಮದ ರೆಕ್ಕೆಗಳಿವೆ. ಈ ಮಾಂಸಲ ರೆಕ್ಕೆಗಳನ್ನು ಉಪಯೋಗಿಸುತ್ತಾ, ಒಂದು ಓಪೊಸಮ್‌ ಒಂದು ಕೊಂಬೆಯಿಂದ ಜಿಗಿದು, ಸುಮಾರು 100 ಗಜಗಳ ವರೆಗೆ ನಿಧಾನವಾಗಿ ಹಾರುತ್ತದೆ, ಮತ್ತು ಹೀಗೆ ಹಾರುತ್ತಿರುವಾಗ 90 ಡಿಗ್ರಿ ಲಾಗಹಾಕುತ್ತಾ ಮುಂದಿನ ಕೊಂಬೆಯನ್ನು ಸುರಕ್ಷಿತವಾಗಿ ಹಿಡಿದುಕೊಳ್ಳುತ್ತದೆ.

ಕಾಡ್ಕಿಚ್ಚು ಮತ್ತು ಪುನಃ ಬೆಳೆಯುವಿಕೆ

ಕಾಡ್ಕಿಚ್ಚನ್ನು ಆಸ್ಟ್ರೇಲಿಯದಲ್ಲಿ ಬುಷ್‌ಫೈಅರ್‌ ಎಂದು ಕರೆಯಲಾಗುತ್ತದೆ; ಇದು ಯೂಕಲಿಪ್ಟಸ್‌ ಅರಣ್ಯಕ್ಕೇ ಒಂದು ಬೆದರಿಕೆಯಾಗಿದೆ. ಆದರೆ, ಈ ಮರಗಳು ಕಾಡ್ಕಿಚ್ಚನ್ನು ಪಾರಾಗುವಂತೆ ವಿನ್ಯಾಸಿಸಲಾಗಿವೆ. ಹೇಗೆ?

ಒಂದು ಮರದ ತೊಗಟೆಯ ಸ್ವಲ್ಪ ಕೆಳಗೆ, ಕಾಂಡ ಹಾಗೂ ರೆಂಬೆಗಳ ಉದ್ದಕ್ಕೂ ಸುಪ್ತ ಎಲೆ ಮೊಗ್ಗುಗಳು ಹುದುಗಿರುತ್ತವೆ. ಬೆಂಕಿಯು ಹೊತ್ತಿಕೊಂಡು ಆ ಮರದ ತೊಗಟೆ ಹಾಗೂ ಎಲೆಗಳು ಬೋಳಾದಾಗ, ಮೊಗ್ಗುಗಳು ಬೆಳೆಯಲಾರಂಭಿಸುತ್ತವೆ. ಇವು, ಆ ಮರದ ಸುಟ್ಟು ಕರಕಲಾಗಿರುವ ಕಾಂಡದ ಮೇಲೆ ಹೊಸ ಹಸಿರು ಎಲೆಗಳ ಮೇಲಂಗಿಯನ್ನು ಹೊದಿಸುತ್ತವೆ. ಇದರ ಫಲಿತಾಂಶವಾಗಿ, ಈ ಮೂಲ ವೃಕ್ಷವು ಬದುಕಿ ಉಳಿಯುತ್ತದೆ. ಅಷ್ಟುಮಾತ್ರವಲ್ಲ, ಅನೇಕವೇಳೆ ನೆಲದ ಮೇಲೆ ಸುಪ್ತವಾಗಿ ಬಿದ್ದಿರುವಂತಹ ಈ ಮರದ ಬೀಜಗಳು ಸಹ ಈ ಸಂದರ್ಭದಲ್ಲಿ ಮೊಳಕೆಯೊಡೆಯುತ್ತವೆ ಮತ್ತು ಹೊಸ ಬೆಳೆಯು ಫಲಿಸುತ್ತದೆ.

ಅಮೂಲ್ಯವಾಗಿ ಪರಿಗಣಿಸಲ್ಪಡಬೇಕಾದ ಒಂದು ಮರ

ಯೂಕಲಿಪ್ಟಸ್‌ನಿಂದ ತಯಾರಿಸಲ್ಪಟ್ಟಂಥ ಒಂದು ಔಷಧದಿಂದ ನಿಮ್ಮ ಗಂಟಲು ನೋವು ಉಪಶಮನವಾಗಿದೆಯೋ ಅಥವಾ ಯೂಕಲಿಪ್ಟಸ್‌ ಜೇನಿನಿಂದ ಸಿದ್ಧಗೊಳಿಸಲ್ಪಟ್ಟಂಥ ಸಿಹಿತಿಂಡಿಯನ್ನು ನೀವು ಆಸ್ವಾದಿಸಿದ್ದೀರೋ? ಈ ಮರದ ದಿಮ್ಮಿಗಳಿಂದ ಮಾಡಲ್ಪಟ್ಟ ಒಂದು ದೋಣಿಯಲ್ಲಿ ನೀವು ಪ್ರಯಾಣಿಸಿದ್ದೀರೋ ಅಥವಾ ಆ ಮರದಿಂದ ಕಟ್ಟಲ್ಪಟ್ಟ ಮನೆಯಲ್ಲಿ ವಾಸಿಸಿದ್ದೀರೋ? ಯೂಕಲಿಪ್ಟಸ್‌ ಮರದ ಕಟ್ಟಿಗೆಯಿಂದ ಬೆಂಕಿಕಾಯಿಸಿಕೊಂಡಿದ್ದೀರೋ? ಈ ಅಸಾಧಾರಣವಾದ ಮರದಿಂದ ನೀವು ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನವನ್ನು ಪಡೆದುಕೊಂಡಿರಬಹುದು. ಆದುದರಿಂದ, ಮುಂದಿನ ಸಲ ನೀವು ತುಪ್ಪುಳು ಇರುವ ಒಂದು ಕೋಲವನ್ನು ನೋಡುವಾಗ ಅಥವಾ ಆ ಪ್ರಾಣಿಯನ್ನು ಚಿತ್ರದಲ್ಲಿ ನೋಡಿ ಪ್ರಶಂಸಿಸುವಾಗ, ಅದು ಕೋಲದ ಇರುನೆಲೆಯಾಗಿರುವಂಥ ಮರದ ರಚನೆಯ ಅದ್ಭುತವನ್ನು ನಿಮ್ಮ ಮನಸ್ಸಿಗೆ ತರಲಿ.

ಬಹುಮುಖ ಸಾಮರ್ಥ್ಯವುಳ್ಳದ್ದಾಗಿದ್ದು, ತುಂಬ ಗಟ್ಟಿಯಾಗಿರುವಂಥ ಯೂಕಲಿಪ್ಟಸ್‌ ಮರವು ನಿಜವಾಗಿಯೂ ಅನೇಕ ರೀತಿಯಲ್ಲಿ ಪ್ರಯೋಜನಾರ್ಹವಾಗಿದೆ.

(g01 2/22)

[ಪುಟ 22, 23ರಲ್ಲಿರುವ ಚಿತ್ರ]

ಯೂಕಲಿಪ್ಟಸ್‌ ಮರಗಳು ಜಗತ್ತಿನಲ್ಲೇ ಅತ್ಯಂತ ಎತ್ತರವಾದ ಮರಗಳ ಗುಂಪಿಗೆ ಸೇರಿವೆ

[ಪುಟ 23ರಲ್ಲಿರುವ ಚಿತ್ರ]

ತುಂಬ ರುಚಿಕರವಾದ ಜೇನನ್ನು ಉತ್ಪಾದಿಸಲಿಕ್ಕಾಗಿ ಜೇನುನೊಣಗಳು ಯೂಕಲಿಪ್ಟಸ್‌ ಮಕರಂದವನ್ನು ಉಪಯೋಗಿಸುತ್ತವೆ

[ಪುಟ 24ರಲ್ಲಿರುವ ಚಿತ್ರ]

ಯೂಕಲಿಪ್ಟಸ್‌ ಮರಗಳು “ಅತಿ ಭಾರವಾದ, ಬಹಳ ಗಟ್ಟಿಯಾದ, ಹಾಗೂ ತುಂಬ ಬಾಳಿಕೆಬರುವಂಥ ದಿಮ್ಮಿಗಳನ್ನು ಉತ್ಪಾದಿಸುತ್ತವೆ”

[ಪುಟ 24ರಲ್ಲಿರುವ ಚಿತ್ರಗಳು]

ಕೋಲಗಳು (ಎಡಭಾಗದಲ್ಲಿ) ಹಾಗೂ ತುಂಬ ದೂರ ಹಾರುವಂತಹ ಓಪೊಸಮ್‌ಗಳು (ಮೇಲೆ) ಯೂಕಲಿಪ್ಟಸ್‌ ಮರದ ಎಲೆಗಳನ್ನು ತಿನ್ನುತ್ತವೆ

[ಪುಟ 24ರಲ್ಲಿರುವ ಚಿತ್ರಗಳು]

© Alan Root/Okapia/PR

[ಪುಟ 22ರಲ್ಲಿರುವ ಚಿತ್ರ ಕೃಪೆ]

Geoff Law/The Wilderness Society

[ಪುಟ 23ರಲ್ಲಿರುವ ಚಿತ್ರ ಕೃಪೆ]

Courtesy of the Mount Annan Botanic Gardens