ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಕಿರಣ ಧೂಳಿಪಾತದ ಪರಿಣಾಮಗಳು ಚಿಂತೆಯ ವಿಷಯ

ವಿಕಿರಣ ಧೂಳಿಪಾತದ ಪರಿಣಾಮಗಳು ಚಿಂತೆಯ ವಿಷಯ

ವಿಕಿರಣ ಧೂಳಿಪಾತದ ಪರಿಣಾಮಗಳು ಚಿಂತೆಯ ವಿಷಯ

ಸುಮಾರು 1950ಗಳಲ್ಲಿ ನ್ಯೂಕ್ಲಿಯರ್‌ ಶಸ್ತ್ರಾಸ್ತ್ರಗಳ ಪರೀಕ್ಷೆಗಳನ್ನು ನಡೆಸಿದ ಬಳಿಕ, ನ್ಯೂಕ್ಲಿಯರ್‌ ರಾಸಾಯನಿಕ ಕ್ರಿಯೆಯ ಉಪಪದಾರ್ಥವಾದ ಸ್ಟ್ರಾನ್‌ಷಿಯಮ್‌ 90 (Sr90), ಶಿಶುಗಳ ಹಲ್ಲುಗಳಲ್ಲಿ ಕಂಡುಬಂತು ಎಂದು ಕೆನಡದ ಗ್ಲೋಬ್‌ ಆ್ಯಂಡ್‌ ಮೆಯ್ಲ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಆ ಸಮಯದಲ್ಲಿ, ಮಕ್ಕಳ ನಡುವೆ ಕ್ಯಾನ್ಸರ್‌ ರೋಗವು ಹೆಚ್ಚುತ್ತಿರುವುದಕ್ಕೆ ಇದೇ ಕಾರಣವಾಗಿತ್ತೆಂದು ಹೇಳಲಾಯಿತು.

ಈಗ, ಅಂದರೆ ಅನೇಕ ದಶಕಗಳ ನಂತರ, ಅಮೆರಿಕದ ವಿಕಿರಣ ಹಾಗೂ ಸಾರ್ವಜನಿಕ ಆರೋಗ್ಯ ಕಾರ್ಯಯೋಜನೆಯೊಂದಿಗೆ ಜೊತೆಗೂಡಿರುವ ವಿಜ್ಞಾನಿಗಳು ಪುನಃ ಚಿಂತಿತರಾಗಿದ್ದಾರೆ. ಈ ಕಾರ್ಯಯೋಜನೆಯೊಂದಿಗೆ ಕೆಲಸಮಾಡುತ್ತಿದ್ದು, ಆಂತರಿಕ-ವೈದ್ಯಕೀಯ ಸ್ಪೆಶಲಿಸ್ಟ್‌ ಆಗಿರುವ ಡಾ. ಜನಟ್‌ ಶರ್ಮನ್‌ ಹೀಗೆ ವಿವರಿಸುತ್ತಾರೆ: “1990ರಿಂದ ಹುಟ್ಟಿರುವ ಮಕ್ಕಳ ಹಾಲುಹಲ್ಲುಗಳಲ್ಲಿರುವ Sr90 ಮಟ್ಟಗಳು, ನೆಲದ ಮೇಲೆ ನ್ಯೂಕ್ಲಿಯರ್‌ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತಿದ್ದ ವರ್ಷಗಳಲ್ಲಿ ಎಷ್ಟಿದ್ದವೋ ಅಷ್ಟೇ ಮಟ್ಟವನ್ನು ತಲಪುತ್ತಿವೆ.”

ಈ Sr90 ಉಪಪದಾರ್ಥವು ಎಲ್ಲಿಂದ ಬರುತ್ತಿದೆ? ಕೆಲವು ವಿಜ್ಞಾನಿಗಳಿಗನುಸಾರ, ಗತ ಸಮಯದಲ್ಲಿ ಸಂಭವಿಸಿರುವ ದುರಂತಗಳು, ಸರಿಯಾಗಿ ಕೆಲಸಮಾಡುತ್ತಿರುವ ನ್ಯೂಕ್ಲಿಯರ್‌ ಕಾರ್ಖಾನೆಗಳಿಂದ ಬರುವ ವಿಕಿರಣ ಅಥವಾ ಅನೇಕ ವರ್ಷಗಳ ಹಿಂದೆ ನಡೆಸಲ್ಪಟ್ಟ ಬಾಂಬ್‌ ಪರೀಕ್ಷೆಗಳೇ ಇದಕ್ಕೆ ಕಾರಣವಾಗಿರಸಾಧ್ಯವಿದೆ. * ಇದರ ಮೂಲವು ಏನೇ ಆಗಿರಲಿ, ಕಲುಷಿತಗೊಂಡಿರುವ ಸಸ್ಯಗಳಿಂದ ತಯಾರಾದ ಆಹಾರವನ್ನು ತಿನ್ನುವ ಮೂಲಕ ಹಾಗೂ ಕಲುಷಿತಗೊಂಡ ಹುಲ್ಲನ್ನು ತಿಂದಿರುವ ಹಸುಗಳ ಹಾಲನ್ನು ಕುಡಿಯುವ ಮೂಲಕ ಮಾನವರು Sr90ನ್ನು ಸೇವಿಸುತ್ತಾರೆ. ರಾಸಾಯನಿಕ ರೀತಿಯಲ್ಲಿ Sr90 ಕ್ಯಾಲ್ಸಿಯಮ್‌ಗೆ ಸಮಾನವಾಗಿರುವುದರಿಂದ, ಮಾನವರು ಈ ವಿಕಿರಣ ವಸ್ತುವನ್ನು ತಮ್ಮ ಮೂಳೆಗಳಲ್ಲಿ ಶೇಖರಿಸುತ್ತಾರೆ. ಇದರ ಪರಿಣಾಮವಾಗಿ ಮೂಳೆಯ ಕ್ಯಾನ್ಸರ್‌ ಹಾಗೂ ಲ್ಯುಕೀಮಿಯದ ಅಪಾಯವು ಅತ್ಯಧಿಕಗೊಳ್ಳುತ್ತಿದೆ.

ಭವಿಷ್ಯತ್ತಿನ ಸಂತತಿಗಳವರು ವಿಕಿರಣಕ್ಕೆ ಒಡ್ಡಲ್ಪಡುವುದರ ಕುರಿತು ಸಹ ಗ್ಲೋಬ್‌ ಚಿಂತೆಯನ್ನು ವ್ಯಕ್ತಪಡಿಸುತ್ತದೆ. ಅದೇ ವಾರ್ತಾಪತ್ರಿಕೆಯು ವಿವರಿಸುವುದು: “[ನ್ಯೂಕ್ಲಿಯರ್‌ ಹಿಪ್ಪೆ]ಯನ್ನು ರಿಯಾಕ್ಟರ್‌ ಕೋರ್‌ನಿಂದ ಹೊರತೆಗೆದಾಗ, ಅದು ಮೊದಲು ರಿಯಾಕ್ಟರ್‌ ಕೋರ್‌ಗೆ ತುಂಬಿಸಲ್ಪಟ್ಟಾಗ ಎಷ್ಟು ವಿಕಿರಣ ಶಕ್ತಿಯುಳ್ಳದ್ದಾಗಿತ್ತೋ ಅದಕ್ಕಿಂತ ಸುಮಾರು ಹತ್ತು ಲಕ್ಷ ಪಟ್ಟು ಹೆಚ್ಚು ವಿಕಿರಣವುಳ್ಳದ್ದಾಗಿರುತ್ತದೆ. ಉಪಯೋಗಿಸಿದ ನಂತರ ಆಗಷ್ಟೇ ರಿಯಾಕ್ಟರ್‌ ಕೋರ್‌ನಿಂದ ಹೊರತೆಗೆಯಲ್ಪಟ್ಟಿರುವ ಇಂಧನವು ಎಷ್ಟು ಮಾರಕವಾಗಿರುತ್ತದೆಂದರೆ, ಕೇವಲ ಒಂದು ಮೀಟರಿನಷ್ಟು [ಮೂರು ಅಡಿಗಳಷ್ಟು] ದೂರದಲ್ಲಿ ನಿಂತಿರುವ ಒಬ್ಬ ವ್ಯಕ್ತಿಯು ವಿಕಿರಣ ವಿಷದಿಂದ ಒಂದೇ ತಾಸಿನಲ್ಲಿ ಸಾವನ್ನಪ್ಪಸಾಧ್ಯವಿದೆ ಎಂದು ಅಂದಾಜುಮಾಡಲಾಗಿದೆ.”

ವಿಕಿರಣ ಧೂಳಿಪಾತದ ಪರಿಣಾಮಗಳು ಮಾನವಕುಲಕ್ಕೆ ಬೆದರಿಕೆಯನ್ನು ಒಡ್ಡುತ್ತಿರುವಾಗ, ಒಂದು ಭದ್ರವಾದ ಭವಿಷ್ಯತ್ತನ್ನು ನಿರೀಕ್ಷಿಸುವುದು ವಾಸ್ತವಿಕವಾದದ್ದಾಗಿದೆಯೋ? ಮೊದಲಾಗಿ ಭೂಮಿ ಹಾಗೂ ಅದರಲ್ಲಿರುವ ಜೀವಿಗಳು ಸೃಷ್ಟಿಸಲ್ಪಟ್ಟಾಗ, ಎಲ್ಲವೂ “ಬಹು ಒಳ್ಳೇದಾಗಿತ್ತು” ಎಂದು ಬೈಬಲು ನಮಗೆ ಹೇಳುತ್ತದೆ. (ಆದಿಕಾಂಡ 1:31) ಅತಿ ಬೇಗನೆ ನಮ್ಮ ಭೂಗ್ರಹವು ಒಂದು ಪರದೈಸವಾಗುವುದು ಎಂಬ ಬೈಬಲಿನ ವಾಗ್ದಾನದಲ್ಲಿ ನಾವು ದೃಢಭರವಸೆಯನ್ನಿಡಸಾಧ್ಯವಿದೆ. ಆಗ, ವಿಕಿರಣದಿಂದ ಆಹಾರ ಹಾಗೂ ನೀರು ಕಲುಷಿತಗೊಳಿಸಲ್ಪಡುವುದು, ಖಂಡಿತವಾಗಿಯೂ ಒಂದು ಗತ ವಿಷಯವಾಗಿರುವುದು.​—⁠ಕೀರ್ತನೆ 65:​9-13; ಪ್ರಕಟನೆ 21:​1-4.

(g01 2/22)

[ಪಾದಟಿಪ್ಪಣಿ]

^ 1986ರಲ್ಲಿ ಯುಕ್ರೇನ್‌ನ ಚೆರ್ನೊಬಿಲ್‌ನಲ್ಲಾದ ನ್ಯೂಕ್ಲಿಯರ್‌ ಕಾರ್ಖಾನೆಯ ದುರಂತದ ಬಳಿಕ, ಜರ್ಮನಿಯ ಮಕ್ಕಳ ಹಾಲುಹಲ್ಲುಗಳಲ್ಲಿನ Sr90ನ ಮಟ್ಟಗಳು ಹತ್ತುಪಟ್ಟು ಹೆಚ್ಚಾದವು.

[ಪುಟ 21ರಲ್ಲಿರುವ ಚಿತ್ರ ಕೃಪೆ]

ಚಿತ್ರ: U. S. Department of Energy photograph