ಎಲ್ಲಾ ಧರ್ಮಗಳು ದೇವರೆಡೆಗೆ ನಡೆಸುವ ವಿಭಿನ್ನ ದಾರಿಗಳೋ?
ಬೈಬಲಿನ ದೃಷ್ಟಿಕೋನ
ಎಲ್ಲಾ ಧರ್ಮಗಳು ದೇವರೆಡೆಗೆ ನಡೆಸುವ ವಿಭಿನ್ನ ದಾರಿಗಳೋ?
“ಸರ್ವಲೋಕದ ದೇವರು ಕೇವಲ ಒಂದು ಧಾರ್ಮಿಕ ನಂಬಿಕೆಯ ಮೂಲಕ ತನ್ನನ್ನು ಗುರುತಿಸಿಕೊಳ್ಳಲು ಆರಿಸಿಕೊಂಡಿದ್ದಾನೆ ಎಂಬುದು ವಾಸ್ತವದಲ್ಲಿ ನನಗೆ ನಂಬಲಾರದ ವಿಷಯವಾಗಿ ತೋರುತ್ತದೆ,” ಎಂದು ಮಾರ್‌ಕಸ್ ಬೋರ್ಗ್ ತಿಳಿಸಿದರು. ನೋಬೆಲ್ ಶಾಂತಿ ಪಾರಿತೋಷಕ ವಿಜೇತ ಡೆಸ್‌ಮಂಡ್ ಟೂಟೂ ಹೇಳಿದ್ದು: ನಂಬಿಕೆಯ “ರಹಸ್ಯದ ಕುರಿತಾದ ಸಂಪೂರ್ಣ ಸತ್ಯವನ್ನು ಹೊಂದಿರುವುದಾಗಿ ಯಾವುದೇ ಧರ್ಮವು ಹೇಳಸಾಧ್ಯವಿಲ್ಲ.” ಪ್ರಸಿದ್ಧವಾದ ಒಂದು ಬೆಂಗಾಲಿ ಹೇಳಿಕೆಯು, “ಜೊತೊ ಮೊತ್, ತೊತೊ ಪೊತ್” ಎಂದಾಗಿದೆ. ವಿಸ್ತಾರವಾಗಿ ಇದನ್ನು ತರ್ಜುಮೆಮಾಡಿದರೆ ಇದರ ಅರ್ಥ, ಎಲ್ಲಾ ಧರ್ಮಗಳು ಒಂದೇ ಗುರಿಗೆ ನಡೆಸುವ ವಿಭಿನ್ನ ದಾರಿಗಳಾಗಿವೆ. ಬೌದ್ಧಮತದವರಿಗೆ ಕೂಡ ಈ ದೃಷ್ಟಿಕೋನವಿದೆ. ವಾಸ್ತವದಲ್ಲಿ, ಎಲ್ಲಾ ಧರ್ಮಗಳು ದೇವರೆಡೆಗೆ ನಡೆಸುವ ವಿಭಿನ್ನ ದಾರಿಗಳಾಗಿವೆ ಎಂಬುದನ್ನು ಕೋಟ್ಯಂತರ ಜನರು ನಂಬುತ್ತಾರೆ.
ಇತಿಹಾಸಗಾರನಾದ ಜೆಫ್ರಿ ಪ್ಯಾರಿಂಡರ್ ಹೇಳಿದ್ದು: “ಎಲ್ಲಾ ಧರ್ಮಗಳಿಗೂ ಒಂದೇ ಗುರಿಯಿದೆ, ಅಥವಾ ಸತ್ಯಕ್ಕೆ ನಡೆಸುವ ಸಮನಾದ ಮಾರ್ಗಗಳಿವೆ, ಅಥವಾ ಎಲ್ಲವೂ ಒಂದೇ ರೀತಿಯ ತತ್ತ್ವಗಳನ್ನು ಬೋಧಿಸುತ್ತವೆ ಎಂದು ಕೆಲವು ಬಾರಿ ಹೇಳಲಾಗುತ್ತದೆ.” ಧರ್ಮಗಳ ಬೋಧನೆಗಳು, ಸಂಪ್ರದಾಯಗಳು, ಮತ್ತು ದೇವದೇವತೆಗಳು ಪರಸ್ಪರ ಹೋಲುವಂಥವುಗಳಾಗಿವೆ ಎಂಬುದು ನಿಜವೇ. ಅತ್ಯಧಿಕವಾದ ಧರ್ಮಗಳು ಪ್ರೀತಿಯ ಕುರಿತು ಮಾತಾಡುತ್ತವೆ ಮತ್ತು ಕೊಲೆ, ಕಳ್ಳತನ, ಹಾಗೂ ಸುಳ್ಳು ಹೇಳುವುದು ತಪ್ಪು ಎಂಬುದನ್ನು ಬೋಧಿಸುತ್ತವೆ. ಹೆಚ್ಚಿನ ಧಾರ್ಮಿಕ ಗುಂಪುಗಳ ಕೆಲವು ಜನರು ಇತರರಿಗೆ ಸಹಾಯಮಾಡಲು ಯಥಾರ್ಥವಾದ ಪ್ರಯತ್ನಗಳನ್ನು ಮಾಡುತ್ತಾರೆ. ಹಾಗಾದರೆ, ಒಬ್ಬನು ತನ್ನ ನಂಬಿಕೆಗಳಲ್ಲಿ ಯಥಾರ್ಥವಂತನಾಗಿದ್ದು, ಒಳ್ಳೆಯ ನೈತಿಕ ಜೀವನವನ್ನು ಜೀವಿಸಲು ಪ್ರಯತ್ನಿಸುವುದಾದರೆ, ಅವನು ಯಾವ ಧರ್ಮಕ್ಕೆ ಸೇರಿರಬೇಕು ಎಂಬುದು ಚಿಂತಿಸಬೇಕಾದ ವಿಷಯವೋ? ಅಥವಾ ಎಲ್ಲಾ ಧರ್ಮಗಳು ದೇವರೆಡೆಗೆ ನಡೆಸುವ ವಿಭಿನ್ನ ದಾರಿಗಳೋ?
ಯಥಾರ್ಥತೆ ಮಾತ್ರ ಸಾಕೋ?
ಸಮಯಾನಂತರ ಕ್ರೈಸ್ತ ಅಪೊಸ್ತಲ ಪೌಲನಾಗಿ ಪರಿಣಮಿಸಿದ ಮೊದಲನೇ ಶತಮಾನದ ಯೆಹೂದಿ ಸೌಲನನ್ನು ಪರಿಗಣಿಸಿರಿ. ಅವನು ಯೆಹೂದಿ ಧರ್ಮದ ಹುರುಪುಳ್ಳ ಅನುಯಾಯಿಯಾಗಿದ್ದನು ಮತ್ತು ಇದು ಅವನು ಕ್ರಿಸ್ತನ ಹಿಂಬಾಲಕರ ಆರಾಧನೆಯನ್ನು ನಿರ್ಮೂಲಮಾಡಲು ಪ್ರಯತ್ನಿಸುವಂತೆ ನಡೆಸಿತು. ಈ ಆರಾಧನೆಯು ತಪ್ಪೆಂದು ಅವನಿಗೆ ಅನಿಸಿತು. (ಅ. ಕೃತ್ಯಗಳು 8:1-3; ) ಆದರೆ, ತನ್ನಂತೆಯೇ ತುಂಬ ಧಾರ್ಮಿಕರಾದ ಜನರು ದೇವರಿಗಾಗಿ ಹುರುಪನ್ನು ಹೊಂದಿರಬಹುದಾದರೂ, ಎಲ್ಲ ವಾಸ್ತವಾಂಶಗಳನ್ನು ಹೊಂದಿರದ ಕಾರಣ ಅವರು ತಪ್ಪುಮಾಡುತ್ತಿರಬಹುದು ಎಂಬುದನ್ನು ಸೌಲನು ದೇವರ ಕೃಪೆಯ ಮೂಲಕ ಗ್ರಹಿಸಿದನು. ( 9:1, 2ರೋಮಾಪುರ 10:2) ದೇವರ ಚಿತ್ತ ಹಾಗೂ ವ್ಯವಹಾರಗಳ ಕುರಿತು ಸೌಲನು ಹೆಚ್ಚನ್ನು ಕಲಿತಾಗ, ಅವನು ಪರಿವರ್ತನೆಹೊಂದಿ ತಾನು ಯಾರನ್ನು ಹಿಂಸಿಸುತ್ತಿದ್ದನೋ ಆ ಯೇಸು ಕ್ರಿಸ್ತನ ಹಿಂಬಾಲಕರೊಂದಿಗೇ ಆರಾಧಿಸಲು ಆರಂಭಿಸಿದನು.—1 ತಿಮೊಥೆಯ 1:12-16.
ಆರಿಸಿಕೊಳ್ಳಲಿಕ್ಕಾಗಿ ನೂರಾರು ನಂಬಿಕೆಗಳಿವೆ ಮತ್ತು ನಾವು ಯಾವುದನ್ನೇ ಆರಿಸಿಕೊಂಡರೂ ಅದು ದೇವರಿಗೆ ಸಮ್ಮತವಾಗಿದೆ ಎಂದು ಬೈಬಲ್ ಹೇಳುತ್ತದೋ? ಇದಕ್ಕೆ ತದ್ವಿರುದ್ಧವಾದ ಸೂಚನೆಗಳನ್ನು ಪುನರುತ್ಥಾನಗೊಳಿಸಲ್ಪಟ್ಟ ಯೇಸು ಕ್ರಿಸ್ತನಿಂದ ಪೌಲನು ಪಡೆದನು. ಅನ್ಯಜನರು “ಕತ್ತಲೆಯಿಂದ ಬೆಳಕಿಗೂ ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಕೊಂಡು . . . ಅವರ ಕಣ್ಣುಗಳನ್ನು ತೆರೆಯಬೇಕೆಂದು” ಯೇಸು ಅವನನ್ನು ಅವರ ಬಳಿಗೆ ಕಳುಹಿಸಿದನು. (ಅ. ಕೃತ್ಯಗಳು 26:17, 18) ಸ್ಪಷ್ಟವಾಗಿಯೇ, ಧರ್ಮದ ಕುರಿತಾದ ನಮ್ಮ ಆಯ್ಕೆಯು ನಿಜವಾಗಿಯೂ ಚಿಂತಿಸಬೇಕಾದ ವಿಷಯವಾಗಿದೆ. ಪೌಲನು ಯಾವ ಜನರ ಬಳಿಗೆ ಕಳುಹಿಸಲ್ಪಟ್ಟನೋ ಅವರಲ್ಲಿ ಅನೇಕರು ಆಗಲೇ ಒಂದು ಧರ್ಮಕ್ಕೆ ಸೇರಿದವರಾಗಿದ್ದರು. ಆದರೆ ಅವರು ‘ಕತ್ತಲೆಯಲ್ಲಿದ್ದರು.’ ವಾಸ್ತವದಲ್ಲಿ, ಎಲ್ಲಾ ಧರ್ಮಗಳು ನಿತ್ಯಜೀವಕ್ಕೆ ಮತ್ತು ದೇವರ ಅನುಗ್ರಹಕ್ಕೆ ನಡೆಸುವಂಥ ವಿಭಿನ್ನ ದಾರಿಗಳಾಗಿದ್ದರೆ, ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದ ಮತ್ತು ಅದಕ್ಕಾಗಿ ತರಬೇತಿಗೊಳಿಸಿದ ಶಿಷ್ಯರನ್ನಾಗಿ ಮಾಡುವ ಕೆಲಸದ ಆವಶ್ಯಕತೆಯೇ ಏಳುತ್ತಿರಲಿಲ್ಲ.—ಮತ್ತಾಯ 28:19, 20.
ತನ್ನ ಪ್ರಸಿದ್ಧ ಪರ್ವತ ಪ್ರಸಂಗದಲ್ಲಿ ಯೇಸು ಹೇಳಿದ್ದು: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.” (ಮತ್ತಾಯ 7:13, 14) “ಒಂದೇ ನಂಬಿಕೆ”ಯಿದೆ ಎಂಬುದನ್ನು ಬೈಬಲ್ ಸ್ಪಷ್ಟವಾಗಿ ಹೇಳುತ್ತದೆ. (ಎಫೆಸ 4:5, ಪರಿಶುದ್ಧ ಬೈಬಲ್ *) ಸ್ಪಷ್ಟವಾಗಿಯೇ, ‘ಅಗಲವಾದ’ ದಾರಿಯಲ್ಲಿರುವವರಿಗೂ ಒಂದು ಧರ್ಮವಿದೆ. ಆದರೆ ಅವರಿಗೆ ‘ಒಂದೇ ನಂಬಿಕೆಯಿಲ್ಲ.’ ನಿಜವಾದ ಆರಾಧನಾ ರೀತಿಯು ಒಂದೇ ಇರುವುದರಿಂದ, ಆ ನಿಜವಾದ ನಂಬಿಕೆಯನ್ನು ಕಂಡುಕೊಳ್ಳಲು ಆಶಿಸುವವರು, ಅದು ದೊರೆಯುವ ವರೆಗೂ ಅದಕ್ಕಾಗಿ ಹುಡುಕುತ್ತಾ ಇರಬೇಕು.
ಸತ್ಯ ದೇವರಿಗಾಗಿ ಹುಡುಕಿರಿ
ಮಾನವನ ಇತಿಹಾಸದ ಆದಿಯಿಂದಲೇ, ಅವರು ಏನು ಮಾಡಬೇಕೆಂಬುದನ್ನು ದೇವರು ಅವರಿಗೆ ತಿಳಿಸುತ್ತಾ ಬಂದಿದ್ದಾನೆ. (ಆದಿಕಾಂಡ 1:28; 2:15-17; 4:3-5) ಇಂದು ಆತನು ಅಪೇಕ್ಷಿಸುವಂಥ ವಿಷಯಗಳು ಸ್ಪಷ್ಟವಾಗಿ ಬೈಬಲಿನಲ್ಲಿ ವಿವರಿಸಲ್ಪಟ್ಟಿವೆ. ಇದು ಅಂಗೀಕೃತವಾದ ಮತ್ತು ಅನಂಗೀಕೃತವಾದ ಆರಾಧನೆಗಳ ಮಧ್ಯೆಯಿರುವ ವ್ಯತ್ಯಾಸವನ್ನು ಗ್ರಹಿಸಲು ನಮ್ಮನ್ನು ಶಕ್ತಗೊಳಿಸುತ್ತದೆ. (ಮತ್ತಾಯ 15:3-9) ಕೆಲವು ಜನರು ಧರ್ಮವನ್ನು ತಮ್ಮ ಹೆತ್ತವರಿಂದ ಪಡೆದಿರುವಾಗ, ಇನ್ನಿತರರು ಕೇವಲ ಸಮುದಾಯದ ಅಧಿಕಾಂಶ ಮಂದಿಯನ್ನು ಹಿಂಬಾಲಿಸುತ್ತಾ ಹೋಗುತ್ತಾರೆ. ಅನೇಕರಿಗೆ, ಧರ್ಮವೆಂಬುದು ಕೇವಲ ಅವರು ಯಾವಾಗ ಮತ್ತು ಎಲ್ಲಿ ಹುಟ್ಟಿದರು ಎಂಬುದರಿಂದ ನಿರ್ಧರಿಸಲ್ಪಡುವ ವಿಷಯವಾಗಿದೆ. ಆದರೆ, ಧರ್ಮದ ಕುರಿತಾದ ನಿಮ್ಮ ಆಯ್ಕೆ ಆಕಸ್ಮಿಕವಾಗಿರಬೇಕೋ ಅಥವಾ ಈ ಆಯ್ಕೆಯನ್ನು ಇತರರು ನಿಮಗಾಗಿ ಮಾಡುವಂತೆ ನೀವು ಬಿಡಬೇಕೋ?
ಧರ್ಮದ ಕುರಿತಾದ ನಿಮ್ಮ ಆಯ್ಕೆಯು, ಶಾಸ್ತ್ರಗಳನ್ನು ಜಾಗರೂಕತೆಯಿಂದ ಪರೀಕ್ಷಿಸಿ, ಅದರಿಂದ ಸಿಗುವ ತಿಳುವಳಿಕೆಯ ಮೇಲೆ ಆಧಾರಿತವಾಗಿರಬೇಕು. ಧರ್ಮದ ಮೊದಲನೇ ಶತಮಾನದಲ್ಲಿ, ಕೆಲವು ಶಿಕ್ಷಿತ ಜನರು ಪೌಲನ ಮಾತುಗಳನ್ನು ಸುಮ್ಮನೆ ಅಂಗೀಕರಿಸುವುದಕ್ಕಿಂತ ಹೆಚ್ಚಿನದ್ದನ್ನು ಮಾಡಿದರು. ಅವರು, ‘ಹೇಳಲ್ಪಡುತ್ತಿರುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು.’ (ಅ. ಕೃತ್ಯಗಳು 17:11; 1 ಯೋಹಾನ 4:1) ನೀವೂ ಇದನ್ನೇ ಏಕೆ ಮಾಡಬಾರದು?
ವಿಶ್ವದ ದೇವರು ತನ್ನನ್ನು ಸತ್ಯದಿಂದ ಆರಾಧಿಸುವಂತಹ ಜನರಿಗಾಗಿ ಹುಡುಕುತ್ತಿದ್ದಾನೆಂಬುದಾಗಿ ಬೈಬಲ್ ವಿವರಿಸುತ್ತದೆ. ಯೋಹಾನ 4:23, 24ರಲ್ಲಿ ದಾಖಲಿಸಲ್ಪಟ್ಟಿರುವ ಪ್ರಕಾರ, ಯೇಸು ವಿವರಿಸಿದ್ದು: “ಸತ್ಯಭಾವದಿಂದ ದೇವಾರಾಧನೆಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ; ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ. ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು.” “ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ” ಮಾತ್ರವೇ ಆತನಿಗೆ ಅಂಗೀಕೃತವಾಗಿದೆ. (ಯಾಕೋಬ 1:27) ಜೀವಕ್ಕೆ ನಡೆಸುವಂಥ ಇಕ್ಕಟ್ಟಾದ ದಾರಿಗಾಗಿರುವ ಲಕ್ಷಾಂತರ ಜನರ ಹುಡುಕಾಟವನ್ನು ದೇವರು ಆಶೀರ್ವದಿಸಿದ್ದಾನೆ. ಆತನು ನಿತ್ಯ ಜೀವವನ್ನು ಉದಾಸೀನ ಭಾವದವರಿಗಲ್ಲ, ಬದಲಿಗೆ ಆತನು ಇಟ್ಟಿರುವ ಇಕ್ಕಟ್ಟಾದ ದಾರಿಯನ್ನು ಕಂಡುಹಿಡಿಯಲಿಕ್ಕಾಗಿ ನಿಜವಾಗಿಯೂ ಶ್ರಮಪಡುವ ಮತ್ತು ಅದನ್ನು ಹಿಂಬಾಲಿಸುವ ಜನರಿಗೆ ಕೊಡುವನು.—ಮಲಾಕಿಯ 3:18.(g01 6/8)
[ಪಾದಟಿಪ್ಪಣಿ]
^ Taken from the HOLY BIBLE: Kannada EASY-TO-READ VERSION © 1997 by World Bible Translation Center. Inc. and used by permission.