ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚಿರಾಪುಂಜಿ—ಭೂಮಿಯ ಅತಿ ಒದ್ದೆಯಾದ ಸ್ಥಳಗಳಲ್ಲೊಂದು

ಚಿರಾಪುಂಜಿ—ಭೂಮಿಯ ಅತಿ ಒದ್ದೆಯಾದ ಸ್ಥಳಗಳಲ್ಲೊಂದು

ಚಿರಾಪುಂಜಿ—ಭೂಮಿಯ ಅತಿ ಒದ್ದೆಯಾದ ಸ್ಥಳಗಳಲ್ಲೊಂದು

ಭಾರತದ ಎಚ್ಚರ! ಲೇಖಕನಿಂದ

ಭೂಮಿಯ ಮೇಲೆ ಅತಿ ಒದ್ದೆಯಾದ ಸ್ಥಳಗಳಲ್ಲೊಂದೊ? ಅದು ಹೇಗೆ ಸಾಧ್ಯ? ಭಾರತದಲ್ಲಿ ನೀರಿನ ಅಭಾವ ತೀರ ಸಾಮಾನ್ಯವಾಗಿದೆ, ಮತ್ತು ಹೆಚ್ಚಿನ ದಿನಗಳಂದು ಒಂದು ಕೊಡೆಯೂ ಬೇಕಾಗಿರುವುದಿಲ್ಲ! ಯಾವ ಕುತೂಹಲಕರವಾದ ಸ್ಥಳದ ಕುರಿತು ನಾವು ವರ್ಣಿಸುತ್ತಿದ್ದೇವೆ? ಚಿರಾಪುಂಜಿ. ಅದು ಭಾರತದ ಈಶಾನ್ಯ ದಿಕ್ಕಿನಲ್ಲಿ ಬಾಂಗ್ಲಾದೇಶದ ಗಡಿಯ ಹತ್ತಿರವಿರುವ ಮೇಘಾಲಯ ರಾಜ್ಯದ ಒಂದು ಪಟ್ಟಣ. ಮೇಘಾಲಯ ಎಷ್ಟು ಸುಂದರವಾಗಿದೆಯೆಂದರೆ, ಅದನ್ನು “ಪೌರಸ್ತ್ಯ ಸ್ಕಾಟ್‌ಲೆಂಡ್‌” ಎಂದು ಕರೆಯಲಾಗುತ್ತದೆ. ಅದರ ಹೆಸರಿನ ಅರ್ಥವೇ “ಮೇಘಗಳ ಬೀಡು” ಎಂದಾಗಿದೆ. ಆದರೆ ಚಿರಾಪುಂಜಿ ಭೂಮಿಯ ಮೇಲೆ ಅತಿ ಒದ್ದೆಯಾದ ಸ್ಥಳಗಳಲ್ಲೊಂದಾಗಿದೆ ಎಂದು ತುಂಬ ಕಾಲದಿಂದ ಎಣಿಸಲ್ಪಡುತ್ತಿರುವುದೇಕೆ? ಈ ಆಸಕ್ತಿಕರವಾದ ನೈಸರ್ಗಿಕ ಅದ್ಭುತದ ಕಡೆಗೆ ಒಂದು ಸಂಕ್ಷಿಪ್ತ ಪಯಣವನ್ನು ಮಾಡೋಣ. *

ನಮ್ಮ ಪ್ರಯಾಣವನ್ನು ಮೇಘಾಲಯ ರಾಜ್ಯದ ರಾಜಧಾನಿಯಾದ ಶಿಲ್ಲಾಂಗ್‌ನಿಂದ ಆರಂಭಿಸುತ್ತೇವೆ. ಒಂದು ಟೂರಿಸ್ಟ್‌ ಬಸ್ಸನ್ನು ಹತ್ತುತ್ತಾ, ನಾವು ದಕ್ಷಿಣ ದಿಕ್ಕಿನೆಡೆಗೆ ಸಾಗುತ್ತೇವೆ. ನಾವು ಏರುತಗ್ಗಿನ ಗುಡ್ಡಗಳನ್ನು ಮತ್ತು ತೆರೆದ ಹುಲ್ಲುಗಾವಲುಗಳನ್ನು ದಾಟಿಹೋಗುತ್ತಿರುವಾಗ, ನಮ್ಮ ಮುಂದೆ ಕಾದಿರುವ ಮೇಘಗಳನ್ನು ನೋಡುತ್ತೇವೆ. ತತ್‌ಕ್ಷಣವೇ ಇದು ನಮಗೆ ಮೇಘಾಲಯ ಎಂಬ ಹೆಸರು ಸೂಕ್ತವಾಗಿಯೇ ಇದೆ ಎಂಬುದನ್ನು ಮರುಜ್ಞಾಪಿಸುತ್ತದೆ.

ನಮ್ಮ ರಸ್ತೆ ಮೇಲೇರುತ್ತಾ ದಟ್ಟವಾಗಿ ಮರಗಳಿಂದ ಆವರಿಸಲ್ಪಟ್ಟಿರುವ ಒಂದು ಆಳವಾದ ಕಮರಿಯ ಮುನ್‌ಚಾಚಿದ ಮೊನೆಯನ್ನು ಸುತ್ತುತ್ತಾ ಹೋಗುತ್ತದೆ. ಜಲಪಾತಗಳು ಅತಿ ಎತ್ತರದಿಂದ ಧುಮುಕುತ್ತಾ, ಕಣಿವೆಯಲ್ಲಿ ಉಕ್ಕಿಹರಿಯುತ್ತಿರುವ ನದಿಯನ್ನು ಪೋಷಿಸುತ್ತವೆ. ನಮ್ಮ ಬಸ್‌ ಮಾವ್‌ಡಕ್‌ನಲ್ಲಿ ನಿಲ್ಲುವಾಗ, ತಗ್ಗಾದ ಮೇಘಗಳು ಗುಡ್ಡಗಳನ್ನು ಕವಿಯುತ್ತಾ ಹೋಗುತ್ತಿರುವುದನ್ನು ನಾವು ನೋಡುತ್ತೇವೆ. ಇವು ಥಟ್ಟನೆ ಒಂದು ಸುಂದರವಾದ ದೃಶ್ಯದ ಸಂಪೂರ್ಣವಾದ ಭಾಗವನ್ನೇ ದೃಷ್ಟಿಯಿಂದ ಮರೆಮಾಡುತ್ತವೆ. ಮತ್ತು ಅಷ್ಟೇ ತ್ವರಿತವಾಗಿ ಮೇಲೇರುವ ಮೂಲಕ ಅದನ್ನು ಪುನಃ ಬಯಲುಗೊಳಿಸುತ್ತವೆ. ಒಂದು ಕ್ಷಣಕ್ಕೆ, ಮೇಘದ ರಾಶಿಯು ನಮ್ಮನ್ನೂ ಆವರಿಸುತ್ತದೆ ಮತ್ತು ನವಿರಾದ ಬಿಳಿ ಹೊದಿಕೆಯಲ್ಲಿ ನಾವು ಕಾಣೆಯಾಗುತ್ತೇವೆ. ಆದರೆ ಶೀಘ್ರವೇ, ಮೇಘಗಳು ಸುಳಿಸುತ್ತುತ್ತ ಹೋಗುತ್ತವೆ, ಮತ್ತು ಸೂರ್ಯನು ಉಸಿರುಗಟ್ಟಿಸುವಂತಹ ಆ ದೃಶ್ಯವನ್ನು ಬೆಳಗಿಸುತ್ತಾನೆ.

ಚಿರಾಪುಂಜಿ ಸಮುದ್ರ ಮಟ್ಟಕ್ಕಿಂತ 4,000 ಅಡಿಗಳಷ್ಟು ಎತ್ತರದಲ್ಲಿದೆ. ನಾವು ಪಟ್ಟಣವನ್ನು ತಲಪಿದಾಗ, ಮಳೆ ಮೇಘಗಳ ಸುಳಿವೇ ಸಿಕ್ಕುವುದಿಲ್ಲ, ಮತ್ತು ಯಾರೊಬ್ಬರೂ ಕೊಡೆಯನ್ನು ಕೊಂಡೊಯ್ಯುತ್ತಿಲ್ಲ. ಪ್ರವಾಸಿಗರಾದ ನಾವು ಮಾತ್ರ ಭಾರಿ ಮಳೆಗಾಗಿ ಸಿದ್ಧರಾಗಿ ಬಂದಿದ್ದೇವೆ! ಹಾಗಾದರೆ ಮಳೆ ಯಾವಾಗ ಬೀಳುತ್ತದೆ?

ಸಾಗರದ ಬೆಚ್ಚಗಿನ ಭಾಗಗಳಿಂದ ಸೂರ್ಯನು ದೊಡ್ಡ ಪ್ರಮಾಣದ ನೀರನ್ನು ಆವಿಯಾಗಿಸುವಾಗ, ಉಷ್ಣವಲಯದ ಪ್ರದೇಶಗಳು ಅಧಿಕವಾದ ಮಳೆಸುರಿತವನ್ನು ಅನುಭವಿಸುತ್ತವೆ. ಹಿಂದೂ ಮಹಾ ಸಾಗರದಿಂದ ಬರುವ ತೇವ-ಸಜ್ಜಿತ ಗಾಳಿಯು, ಹಿಮಾಲಯ ಪರ್ವತಗಳ ದಕ್ಷಿಣ ಇಳಿಜಾರುಗಳನ್ನು ಹೊಡೆದು ಮೇಲಕ್ಕೇರುವಂತೆ ಒತ್ತಾಯಿಸಲ್ಪಡುವಾಗ, ಅದು ಧಾರಾಕಾರವಾದ ಮಳೆಯ ರೂಪದಲ್ಲಿ ತನ್ನ ಭಾರವನ್ನು ಇಳಿಸುತ್ತದೆ. ಈ ಮಳೆಯನ್ನು ಪಡೆದುಕೊಳ್ಳುವ ಒಂದು ಪ್ರಧಾನ ಪ್ರದೇಶವು ಮೇಘಾಲಯದ ಪ್ರಸ್ಥಭೂಮಿಯಾಗಿದೆ. ಅಷ್ಟುಮಾತ್ರವಲ್ಲದೆ, ದಿನದ ಸಮಯದಲ್ಲಿ ಈ ಪ್ರದೇಶವು ಉಷ್ಣವಲಯದ ಸೂರ್ಯನ ಪೂರ್ಣ ತಾಪವನ್ನು ಪಡೆಯುವ ಕಾರಣ, ಮಳೆ ಮೇಘಗಳು ಮೇಲಕ್ಕೇರಿ ಸಾಯಂಕಾಲದ ಹೊತ್ತಿಗೆ ವಾಯು ತಣ್ಣಗಾಗುವ ವರೆಗೂ ಪ್ರಸ್ಥಭೂಮಿಯ ಮೇಲೆ ಸುಳಿದಾಡುತ್ತಿರುವಂತೆ ತೋರುತ್ತದೆ. ಅಧಿಕವಾದ ಮಳೆ ಏಕೆ ರಾತ್ರಿಯಲ್ಲಿ ಬೀಳುತ್ತದೆ ಎಂಬುದನ್ನು ಇದು ವಿವರಿಸಬಹುದು.

ಇಸವಿ 1861ರ ಜುಲೈ ತಿಂಗಳಿನಲ್ಲಿ, ಚಿರಾಪುಂಜಿಯಲ್ಲಿ ಅತ್ಯಾಶ್ಚರ್ಯಕರವಾಗಿ 930 ಸೆಂಟಿಮೀಟರ್‌ ಮಳೆ ಸುರಿಯಿತು! ಮತ್ತು 1860ರ ಆಗಸ್ಟ್‌ 1ರಿಂದ 1861ರ ಜುಲೈ 31ರ ತನಕದ 12 ತಿಂಗಳ ಕಾಲಾವಧಿಯಲ್ಲಿ 2,646 ಸೆಂಟಿಮೀಟರ್‌ ಮಳೆ ಬಿತ್ತು. ಇಂದು ಸರಾಸರಿಯಾಗಿ, ಚಿರಾಪುಂಜಿಯಲ್ಲಿ ಒಂದು ವರ್ಷದ 180 ದಿವಸಗಳಲ್ಲಿ ಮಳೆ ಬೀಳುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ ವರೆಗೆ ಮಳೆ ಅತ್ಯಧಿಕವಾಗಿರುತ್ತದೆ. ಅಧಿಕವಾದ ಮಳೆಯು ರಾತ್ರಿಯಲ್ಲಿ ಬೀಳುವ ಕಾರಣ, ಪ್ರವಾಸಿಗರು ಪ್ರೇಕ್ಷಣಾ ಸ್ಥಳಗಳನ್ನು ಮಳೆಸುರಿತದಿಂದ ನೆನೆಯದೆಯೇ ಆನಂದಿಸಬಹುದು.

ಇಷ್ಟೊಂದು ಮಳೆಯಿರುವ ಕಾರಣ, ಈ ಪ್ರದೇಶವು ಎಂದಾದರೂ ನೀರಿನ ಕೊರತೆಯನ್ನು ಅನುಭವಿಸುತ್ತದೆ ಎಂಬುದನ್ನು ನಂಬುವುದು ಕಷ್ಟಕರವಾಗಿದೆ. ಆದರೆ, ಚಳಿಗಾಲದ ತಿಂಗಳುಗಳಲ್ಲಿ ಅನೇಕಬಾರಿ ಹೀಗೆಯೇ ಆಗುತ್ತದೆ. ಮಳೆಗಾಲದ ಪ್ರವಾಹಗಳು ಎಲ್ಲಿಗೆ ಹೋಗುತ್ತವೆ? ಚಿರಾಪುಂಜಿಯಿಂದ ಸ್ವಲ್ಪ ಆಚೆ ಅತಿಯಾದ ಕಾಡುಕಡಿತದ ಕಾರಣ, ಅಧಿಕವಾದ ಮಳೆ ಎತ್ತರವಾದ ಪ್ರಸ್ಥಭೂಮಿಯಿಂದಾಚೆ ಬೀಳುತ್ತಾ, ಪ್ರಧಾನವಾಗಿ ಬಾಂಗ್ಲಾದೇಶ್‌ಗೆ ಹರಿಯುವ ಸಮತಲ ಭೂಮಿಯ ನದಿಗಳನ್ನು ತುಂಬುತ್ತದೆ. ಪ್ರವಾಹಗಳಿಗೆ ಅಣೆಕಟ್ಟು ಕಟ್ಟುವ ಮತ್ತು ಜಲಾಶಯಗಳನ್ನು ನಿರ್ಮಿಸುವ ಯೋಜನೆಗಳ ಕುರಿತು ಪರಿಗಣಿಸಲಾಗುತ್ತಿದೆ. ಆದರೆ ಮಾಸಿನ್ರಾಂನ ಕುಲದ ರಾಜನಾದ ಜಿ. ಎಸ್‌. ಮ್ಯಾನ್‌ಯಂಗ್‌ಗನುಸಾರ, “ನೀರಿನ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಗಂಭೀರವಾದ ಪ್ರಯತ್ನಗಳು” ಮಾಡಲ್ಪಟ್ಟಿಲ್ಲ.

ಚಿರಾಪುಂಜಿಗೆ ನೀಡಿದ ಭೇಟಿ ರೋಮಾಂಚಕವೂ ಶೈಕ್ಷಣಿಕವೂ ಆಗಿತ್ತು ಎಂಬುದಂತೂ ಖಂಡಿತ. ಈ ಸ್ಥಳದಲ್ಲಿ ಕಣ್ಮನವನ್ನು ಸೂರೆಗೊಳಿಸುವ ಎಂತಹ ದೃಶ್ಯವು ಇದೆ! ಮತ್ತು ಇಲ್ಲಿ ಸುಂದರವಾದ ಹೂವುಗಳು ಇವೆ, ಅದರೊಟ್ಟಿಗೆ ಸುಮಾರು 300 ಜಾತಿಯ ಆರ್ಕಿಡ್‌ ಮತ್ತು ಮಾಂಸಾಹಾರಿ ಹೂಜಿಗಿಡದ ಒಂದು ಅಪೂರ್ವ ಜಾತಿ ಇಲ್ಲಿದೆ. ಮಾತ್ರವಲ್ಲದೆ, ನೋಡಿ ಆನಂದಿಸಲು ವಿಸ್ತಾರವಾದ ವಿಭಿನ್ನ ಬಗೆಯ ವನ್ಯಜೀವರಾಶಿಯಿದೆ, ಮತ್ತು ಸುತ್ತಿನೋಡಲು ಸುಣ್ಣದ ಗುಹೆಗಳಿವೆ ಹಾಗೂ ಪರೀಕ್ಷಿಸಲು ಸ್ಮಾರಕಶಿಲೆಗಳಿವೆ. ಈ ಕ್ಷೇತ್ರದಲ್ಲಿ ವಿಸ್ತಾರವಾದ ಕಿತ್ತಳೆಹಣ್ಣಿನ ತೋಪುಗಳಿವೆ. ಇವು ಈ ಸ್ವಾದಿಷ್ಟ ಹಣ್ಣನ್ನು ಉತ್ಪಾದಿಸುವುದರೊಂದಿಗೆ, ಕಿತ್ತಳೆ ಜೇನಿನ ನೈಸರ್ಗಿಕವಾದ ಉತ್ಪನ್ನವನ್ನು ಸಾಧ್ಯಗೊಳಿಸುತ್ತವೆ. ಇವೆಲ್ಲವೂ ಪ್ರವಾಸಿಗರನ್ನು ಮೇಘಾಲಯಕ್ಕೆ, “ಮೇಘಗಳ ಬೀಡಿಗೆ,” ಮತ್ತು ಭೂಮಿಯ ಅತಿ ಒದ್ದೆಯಾದ ಸ್ಥಳಗಳಲ್ಲೊಂದಾದ ಚಿರಾಪುಂಜಿಗೆ ಆಹ್ವಾನಿಸುತ್ತವೆ. (g01 5/8)

[ಪಾದಟಿಪ್ಪಣಿ]

^ ಹವಾಯಿಯ ಕಾವುಐ ದ್ವೀಪದಲ್ಲಿರುವ ವೈಆಲೇಆಲೇ ಬೆಟ್ಟ ಮತ್ತು ಚಿರಾಪುಂಜಿಯಿಂದ ಸುಮಾರು 16 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಮೌಸಿನ್ರಾಂ ಎಂಬ ಹಳ್ಳಿಯು, ಕೆಲವೊಮ್ಮೆ ಚಿರಾಪುಂಜಿಗಿಂತ ಹೆಚ್ಚಿನ ಪ್ರಮಾಣದ ಮಳೆಸುರಿತವನ್ನು ದಾಖಲಿಸಿದೆ.

[ಪುಟ 22ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಭಾರತ

ಚಿರಾಪುಂಜಿ

[ಕೃಪೆ]

Mountain High Maps® Copyright © 1997 Digital Wisdom, Inc.

[ಪುಟ 29ರಲ್ಲಿರುವ ಚಿತ್ರ]

ಮಾಂಸಾಹಾರಿ ಹೂಜಿಗಿಡದ ಈ ಜಾತಿ, ಭೂಲೋಕದ ಈ ಮೂಲೆಯ ವೈಶಿಷ್ಟ್ಯವಾಗಿದೆ

[ಪುಟ 29ರಲ್ಲಿರುವ ಚಿತ್ರ]

ಕಣಿವೆಯಲ್ಲಿ ಉಕ್ಕಿಹರಿಯುತ್ತಿರುವ ನದಿಯನ್ನು ಜಲಪಾತಗಳು ಪೋಷಿಸುತ್ತವೆ

[ಕೃಪೆ]

Photograph by Matthew Miller