ದೇವರು ನನ್ನ ಪ್ರಾರ್ಥನೆಗಳನ್ನು ಕೇಳುವನೋ?
ಯುವ ಜನರು ಪ್ರಶ್ನಿಸುವುದು . . .
ದೇವರು ನನ್ನ ಪ್ರಾರ್ಥನೆಗಳನ್ನು ಕೇಳುವನೋ?
“ಯೆಹೋವನು ನನ್ನ ಸ್ನೇಹಿತನಾಗಿರುವ ಕಾರಣ ನಾನು ಪ್ರತಿಯೊಂದು ವಿಷಯದ ಕುರಿತು ಪ್ರಾರ್ಥಿಸುತ್ತೇನೆ, ಮತ್ತು ನನಗೆ ಒಂದು ಸಮಸ್ಯೆ ಇದ್ದರೆ ಆತನು ನನಗೆ ಸಹಾಯಮಾಡುವನು ಎಂಬುದನ್ನು ನಾನು ಬಲ್ಲೆ.”—ಆ್ಯಂಡ್ರೀಯ.
ಯುವತಿ ಆ್ಯಂಡ್ರೀಯಳಿಗೆ ದೇವರು ತನ್ನ ಪ್ರಾರ್ಥನೆಗಳನ್ನು ಕೇಳುತ್ತಾನೆ ಎಂಬುದರ ಕುರಿತು ನಿಶ್ಚಯವಿದೆ. ಆದರೆ ಎಲ್ಲಾ ಯುವಜನರಿಗೂ ಇದೇ ರೀತಿಯ ಭರವಸೆಯಿರುವುದಿಲ್ಲ. ದೇವರನ್ನು ಸಮೀಪಿಸಲು ತಾವು ತುಂಬ ದೂರದಲ್ಲಿದ್ದೇವೆ ಎಂದು ಕೆಲವರು ಭಾವಿಸುತ್ತಾರೆ. ಪ್ರಾರ್ಥನೆಯನ್ನು ಪ್ರಯೋಜನವುಳ್ಳದ್ದಾಗಿ ಮಾಡಲು ದೇವರು ತಮ್ಮ ಕುರಿತು ಸಾಕಷ್ಟು ಚಿಂತಿಸುತ್ತಾನೋ ಎಂದು ಕೂಡ ಅವರು ಯೋಚಿಸಬಹುದು.
ಪ್ರಾರ್ಥನೆಯ ರಹಸ್ಯವೇನು? ಸರಳವಾಗಿ ಹೇಳುವುದಾದರೆ, ದೇವರೊಂದಿಗೆ ಒಂದು ನೈಜವಾದ ಸ್ನೇಹವನ್ನು ಇಟ್ಟುಕೊಳ್ಳುವುದೇ. ಕೀರ್ತನೆಗಾರನು ಪ್ರಾರ್ಥಿಸಿದ್ದು: “ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು.” (ಕೀರ್ತನೆ 9:10) ನಿಮ್ಮ ಕುರಿತಾಗಿ ಏನು? ನೀವು ದೇವರಿಗೆ ಪ್ರಾರ್ಥಿಸಿ, ಆತನು ನಿಮಗೆ ಕಿವಿಗೊಡುವನು ಎಂದು ಭರವಸೆಯಿಡುವಷ್ಟು ಚೆನ್ನಾಗಿ ಆತನನ್ನು ಬಲ್ಲಿರೋ? ನೀವು ಇನ್ನೂ ಮುಂದಕ್ಕೆ ಓದುವ ಮುಂಚೆ, “ನೀವು ದೇವರನ್ನು ಎಷ್ಟು ಚೆನ್ನಾಗಿ ಬಲ್ಲಿರಿ?” ಎಂಬ ರೇಖಾಚೌಕದಲ್ಲಿರುವ ಪ್ರಶ್ನೆಗಳನ್ನು ಉತ್ತರಿಸಲು ದಯವಿಟ್ಟು ಪ್ರಯತ್ನಿಸಿ. ಎಷ್ಟು ಪ್ರಶ್ನೆಗಳನ್ನು ನೀವು ಉತ್ತರಿಸಬಲ್ಲಿರಿ?
ನೀವು ದೇವರನ್ನು ಎಷ್ಟು ಚೆನ್ನಾಗಿ ಬಲ್ಲಿರಿ? ಉತ್ತರಗಳನ್ನು ಪುಟ 13ರಲ್ಲಿ ನೋಡಿ
1. ದೇವರ ಹೆಸರು ಏನು, ಮತ್ತು ಅದರ ಅರ್ಥವೇನು?
2. ದೇವರ ಯಾವ ನಾಲ್ಕು ಪ್ರಮುಖ ಗುಣಗಳನ್ನು ಬೈಬಲ್ ಪ್ರಕಟಪಡಿಸುತ್ತದೆ?
3. ಮಾನವಕುಲಕ್ಕಾಗಿರುವ ದೇವರ ಪ್ರೀತಿಯ ಅತಿ ದೊಡ್ಡ ಅಭಿವ್ಯಕ್ತಿ ಯಾವುದು?
4. ನಾವು ದೇವರೊಂದಿಗೆ ಹೇಗೆ ಸ್ನೇಹವನ್ನು ಅನುಭವಿಸಬಹುದು?
5. ನಾವು ಪ್ರಾರ್ಥಿಸುವಾಗ ಯೋಗ್ಯವಾದ ಯಾವ ಮನೋಭಾವವು ನಮಗಿರಬೇಕು?
ಈ ಲೇಖನದ ಉಳಿದಿರುವ ಭಾಗವನ್ನು ಓದುವ ಮುನ್ನ, ಈಗಲೇ ಕೆಲವು ಪ್ರಶ್ನೆಗಳನ್ನಾದರೂ ಉತ್ತರಿಸಲು ನಿಮಗೆ ಸಾಧ್ಯವಾಗಿದೆಯೋ? ಸಾಧ್ಯವಾಗಿರುವಲ್ಲಿ, ದೇವರ ಕುರಿತು ಅತ್ಯಧಿಕ ಜನರಿಗೆ ಗೊತ್ತಿರುವುದಕ್ಕಿಂತ ಹೆಚ್ಚಿನದ್ದು ನಿಮಗೆ ಗೊತ್ತಿದೆ. ಆದರೆ, ಆತನ ಕುರಿತಾದ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳುವ, ಆತನನ್ನು ಹೆಚ್ಚು ನಿಕಟವಾಗಿ ತಿಳಿದುಕೊಳ್ಳುವ ಆವಶ್ಯಕತೆಯನ್ನೂ ನಿಮ್ಮ ಉತ್ತರಗಳು ಸೂಚಿಸಬಹುದು. (ಯೋಹಾನ 17:3) ಆ ಉದ್ದೇಶದೊಂದಿಗೆ, ‘ಪ್ರಾರ್ಥನೆಯನ್ನು ಕೇಳುವವನ’ ಬಗ್ಗೆ ಬೈಬಲ್ ಏನನ್ನು ಬೋಧಿಸುತ್ತದೆ ಎಂಬುದರ ಕುರಿತಾದ ಕೆಲವು ವಿಷಯಗಳನ್ನು ಪರಿಗಣಿಸೋಣ.—ಕೀರ್ತನೆ 65:2.
ದೇವರು ಒಬ್ಬ ನೈಜ ವ್ಯಕ್ತಿ
ಮೊದಲು, ದೇವರು ವ್ಯಕ್ತಿಸ್ವರೂಪವಿಲ್ಲದ ಒಂದು ಶಕ್ತಿಯಲ್ಲ ಎಂಬುದನ್ನು ಗ್ರಹಿಸಲು ಬೈಬಲ್ ನಮಗೆ ಸಹಾಯಮಾಡುತ್ತದೆ. ಆತನು ಯೆಹೋವ ಎಂಬ ನಾಮವುಳ್ಳ ಒಬ್ಬ ವ್ಯಕ್ತಿಯಾಗಿದ್ದಾನೆ. (ಕೀರ್ತನೆ 83:18) ಹೀಬ್ರು ಭಾಷೆಯಲ್ಲಿ ಆ ನಾಮದ ಅರ್ಥ “ಆತನು ತನ್ನನ್ನು ಆಗಿಸಿಕೊಳ್ಳುತ್ತಾನೆ” ಎಂಬುದಾಗಿದೆ. ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ಆತನು ಏನಾಗುವ ಅಗತ್ಯವಿದೆಯೊ ಅದಾಗಬಲ್ಲನು. ವ್ಯಕ್ತಿಸ್ವರೂಪವಿಲ್ಲದ ಶಕ್ತಿಯ ಒಂದು ಗಂಟು ಅದನ್ನು ಮಾಡಲು ಸಾಧ್ಯವಿಲ್ಲ! ಆದುದರಿಂದ, ನೀವು ಪ್ರಾರ್ಥಿಸುವಾಗ ಒಂದು ಅಮೂರ್ತ ಶಕ್ತಿಯೊಂದಿಗೆ ಅಥವಾ ಗೋಡೆಯೊಂದಿಗೆ ಮಾತಾಡುತ್ತಿಲ್ಲ ಎಂಬುದರ ಕುರಿತು ನಿಶ್ಚಯದಿಂದಿರಬಹುದು. ಬದಲಾಗಿ, ನಿಮ್ಮ ಪ್ರಾರ್ಥನೆಗಳಿಗೆ ಕಿವಿಗೊಟ್ಟು ಪ್ರತಿಕ್ರಿಯಿಸಬಲ್ಲ ಒಬ್ಬ ವ್ಯಕ್ತಿಯೊಂದಿಗೆ ನೀವು ಮಾತಾಡುತ್ತಿದ್ದೀರಿ.—ಎಫೆಸ 3:20.
ಆದುದರಿಂದ ಡೈಯಾನ ಎಂಬ ಯುವತಿಯು ಹೇಳುವುದು: “ನಾನು ಎಲ್ಲೇ ಇರಲಿ, ಯೆಹೋವನು ನನಗೆ ಕಿವಿಗೊಡುತ್ತಾನೆ ಎಂಬುದು ನನಗೆ ಗೊತ್ತಿದೆ.” ಆ ಭರವಸೆ ಇರಬೇಕಾದರೆ, ದೇವರು ನಿಮಗೆ ನೈಜವಾಗಿರಲೇಬೇಕು! ‘ದೇವರ ಬಳಿಗೆ ಬರುವವನು ದೇವರು ಇದ್ದಾನೆ ಎಂದು ನಂಬುವುದು ಅವಶ್ಯ’ ಎಂದು ಬೈಬಲ್ ಹೇಳುತ್ತದೆ.—ಇಬ್ರಿಯ 11:6.
ವಿವೇಕ ಮತ್ತು ಶಕ್ತಿಯ ಮೂಲ
ದೇವರು ನಮಗೆ ಖಂಡಿತವಾಗಿಯೂ ಸಹಾಯಮಾಡಬಲ್ಲನು, ಏಕೆಂದರೆ ಆತನಲ್ಲಿ ಭಯಚಕಿತಗೊಳಿಸುವಂಥ ಶಕ್ತಿಯಿದೆ. ಆ ಶಕ್ತಿಯು ಮಿತಿಯಿಲ್ಲದ್ದಾಗಿದೆ ಎಂಬುದನ್ನು ಈ ಐಹಿಕ ವಿಶ್ವದ ಗಾತ್ರ ಮತ್ತು ಜಟಿಲತೆಯು ರುಜುಪಡಿಸುತ್ತದೆ. ಅಸಂಖ್ಯಾತ ಕೋಟಿಗಟ್ಟಲೆ ಸಂಖ್ಯೆಯಲ್ಲಿರುವ ನಕ್ಷತ್ರಗಳಲ್ಲಿ ಪ್ರತಿಯೊಂದು ನಕ್ಷತ್ರದ ಹೆಸರು ಯೆಹೋವನಿಗೆ ಗೊತ್ತಿದೆ ಎಂದು ಬೈಬಲ್ ಹೇಳುತ್ತದೆ. ಅದಕ್ಕಿಂತ ಮಿಗಿಲಾಗಿ, ಆ ನಕ್ಷತ್ರಗಳಲ್ಲಿ ತುಂಬಿರುವ ಎಲ್ಲಾ ಶಕ್ತಿಗೆ ಆತನೇ ಮೂಲನಾಗಿದ್ದಾನೆ. (ಯೆಶಾಯ 40:25, 26) ಇದು ಬೆರಗುಗೊಳಿಸುವ ವಿಷಯವಲ್ಲವೋ? ಈ ನಿಜಾಂಶಗಳು ಎಷ್ಟೇ ವಿಸ್ಮಯಕರವಾಗಿರಲಿ, “ದೇವರ ಶಕ್ತಿಯುತವಾದ ಕಾರ್ಯಗಳಲ್ಲಿ ಇವು ಕೇವಲ ಒಂದು ಚಿಕ್ಕ ಭಾಗವಾಗಿವೆ” ಎಂದು ಬೈಬಲ್ ಹೇಳುತ್ತದೆ.—ಯೋಬ 26:14, ಪರಿಶುದ್ಧ ಬೈಬಲ್. *
ಯೆಹೋವನ ಅಪರಿಮಿತ ವಿವೇಕವನ್ನೂ ಪರಿಗಣಿಸಿರಿ. ಆತನ ಆಲೋಚನೆಗಳು “ಅಶೋಧ್ಯವಾಗಿವೆ” ಎಂದು ಬೈಬಲ್ ಹೇಳುತ್ತದೆ. (ಕೀರ್ತನೆ 92:5) ಆತನು ಮನುಷ್ಯರನ್ನು ಉಂಟುಮಾಡಿದನು, ಆದುದರಿಂದ ನಾವು ನಮ್ಮನ್ನೇ ಅರ್ಥಮಾಡಿಕೊಳ್ಳುವುದಕ್ಕಿಂತಲೂ ಹೆಚ್ಚು ಉತ್ತಮವಾಗಿ ಆತನು ನಮ್ಮನ್ನು ಅರ್ಥಮಾಡಿಕೊಳ್ಳುತ್ತಾನೆ. (ಕೀರ್ತನೆ 100:3) “ಯುಗಯುಗಾಂತರಗಳಲ್ಲಿಯೂ” ಆತನು ಜೀವಿಸುವುದರಿಂದ, ಆತನಿಗೆ ಅಪರಿಮಿತ ಅನುಭವವಿದೆ. (ಕೀರ್ತನೆ 90:1, 2) ಆತನ ತಿಳುವಳಿಕೆಗೆ ಮೀರುವಂಥದ್ದು ಯಾವುದೂ ಇಲ್ಲ.—ಯೆಶಾಯ 40:13, 14.
ಆ ಎಲ್ಲಾ ಶಕ್ತಿ ಮತ್ತು ವಿವೇಕವನ್ನು ಯೆಹೋವನು ಹೇಗೆ ಉಪಯೋಗಿಸುತ್ತಾನೆ? 2 ಪೂರ್ವಕಾಲವೃತ್ತಾಂತ 16:9 ಹೇಳುವುದು: “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.” ದೇವರು ಪರಿಹರಿಸಲಾಗದ ಅಥವಾ ನೀವು ನಿಭಾಯಿಸಿಕೊಂಡು ಹೋಗುವಂತೆ ಸಹಾಯಮಾಡಲಾಗದಂಥ ಯಾವುದೇ ಸಮಸ್ಯೆಯು ಇರುವುದಿಲ್ಲ. ಕೇಲ ಎಂಬ ಯುವತಿ ಜ್ಞಾಪಿಸಿಕೊಳ್ಳುವುದು: “ಇತ್ತೀಚೆಗೆ, ನಾನು ಮತ್ತು ನನ್ನ ಕುಟುಂಬವು ಒಂದು ಕಷ್ಟಕರ ಪರಿಸ್ಥಿತಿಯಲ್ಲಿದ್ದಾಗ, ನಾನು ಯೆಹೋವನಿಗೆ ಪ್ರಾರ್ಥಿಸಿದೆ. ಒಂದುವೇಳೆ ಹೀಗೆ ಮಾಡಿರದಿದ್ದಲ್ಲಿ ಸಹಿಸಲಾರದಷ್ಟು ಭಾರವಾಗಿ ಪರಿಣಮಿಸಬಹುದಾಗಿದ್ದ ಆ ಸನ್ನಿವೇಶಗಳನ್ನು, ಸಮಸ್ಯೆಗಳನ್ನು ಹಾಗೂ ಅನಿಸಿಕೆಗಳನ್ನು ನಿಭಾಯಿಸಲು ಬೇಕಾದ ಸಹಾಯವನ್ನು ಆತನು ಒದಗಿಸಿದನು ಎಂದು ನನಗನಿಸುತ್ತದೆ.” ನೀವು ದೇವರೊಂದಿಗೆ ಮಾತಾಡುವಾಗ, ವಿವೇಕದ ಮೂಲದೆಡೆಗೆ ಹೋಗುತ್ತೀರಿ. ಇದಕ್ಕಿಂತ ಉತ್ತಮವಾದ ಸಂಗತಿಯನ್ನು ನೀವು ಮಾಡಲಾರಿರಿ!
ನ್ಯಾಯ ಮತ್ತು ಪ್ರೀತಿಯ ದೇವರು
ದೇವರು ನಿಮಗೆ ಸಹಾಯಮಾಡಲು ಬಯಸುತ್ತಾನೆ ಎಂಬುದನ್ನು ನೀವು ಹೇಗೆ ತಿಳಿದುಕೊಳ್ಳುವಿರಿ? ಹೇಗೆಂದರೆ ಯೆಹೋವನು ತನ್ನ ಅಪರಿಮಿತವಾದ ಶಕ್ತಿಯಿಂದ ಅಥವಾ ತನ್ನ ಆಳವಾದ ವಿವೇಕದಿಂದ ಇಲ್ಲವೇ ತನ್ನ ಅಚಲವಾದ ನ್ಯಾಯದಿಂದ ತನ್ನನ್ನು ಗುರುತಿಸಿಕೊಳ್ಳಲು ಆರಿಸಿಕೊಂಡಿಲ್ಲ. ಬದಲಿಗೆ, ಯೆಹೋವನು ಪ್ರಧಾನವಾಗಿ ತನ್ನ ಪ್ರೀತಿಯೆಂಬ ಗುಣಕ್ಕೆ ಪ್ರಖ್ಯಾತನಾಗಿದ್ದಾನೆ. “ದೇವರು ಪ್ರೀತಿಸ್ವರೂಪಿ” (ಓರೆ ಅಕ್ಷರಗಳು ನಮ್ಮವು.) ಎಂದು 1 ಯೋಹಾನ 4:8 ಹೇಳುತ್ತದೆ. ಮತ್ತು ಆ ಮಹಾ ಪ್ರೀತಿಯಿಂದಾಗಿಯೇ ಪ್ರಾರ್ಥನೆಗೆ ಶಕ್ತಿಯಿದೆ. ನಾವು ನಿತ್ಯಜೀವವನ್ನು ಅನುಭವಿಸಲಿಕ್ಕಾಗಿ ದೇವರು ತನ್ನ ಒಬ್ಬನೇ ಮಗನನ್ನು ಪ್ರಾಯಶ್ಚಿತ್ತ ಯಜ್ಞವಾಗಿ ಕೊಟ್ಟದ್ದೇ ಆತನ ಪ್ರೀತಿಯ ಅತಿದೊಡ್ಡ ಅಭಿವ್ಯಕ್ತಿಯಾಗಿತ್ತು.—ಯೋಹಾನ 3:16; 1 ಯೋಹಾನ 4:9, 10.
ದೇವರು ಪ್ರೀತಿಸ್ವರೂಪಿಯಾಗಿರುವುದರಿಂದ, ಆತನು ನಿಮ್ಮನ್ನು ಅಲಕ್ಷಿಸಿಬಿಡುವನೋ ಅಥವಾ ನಿಮ್ಮನ್ನು ಅನ್ಯಾಯದಿಂದ ನಡೆಸಿಕೊಳ್ಳುವನೋ ಎಂದು ನೀವು ಎಂದೂ ಭಯಪಡುವ ಆವಶ್ಯಕತೆಯಿಲ್ಲ. “ಆತನು ನಡಿಸುವದೆಲ್ಲಾ ನ್ಯಾಯ,” ಎಂದು ಧರ್ಮೋಪದೇಶಕಾಂಡ 32:4 ಹೇಳುತ್ತದೆ. ನಿಮಗಾಗಿ ದೇವರಿಗಿರುವ ಪ್ರೀತಿಯು, ಆತನು ನಿಮಗೆ ಗಮನಕೊಟ್ಟು ಕೇಳುತ್ತಾನೆ ಎಂಬ ಆಶ್ವಾಸನೆಯನ್ನು ಕೊಡುತ್ತದೆ. ಇದು, ನಮ್ಮ ಅತಿ ವೈಯಕ್ತಿಕವಾದ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ನಾವು ಆತನೊಂದಿಗೆ ಹಂಚಿಕೊಳ್ಳಬಹುದೆಂಬ ಭರವಸೆಯ ಅನಿಸಿಕೆಯನ್ನು ಕೊಡುತ್ತದೆ.—ಫಿಲಿಪ್ಪಿ 4:6, 7.
ದೇವರೊಂದಿಗೆ ಸ್ನೇಹ
ವಾಸ್ತವದಲ್ಲಿ, ತನ್ನೊಂದಿಗೆ ಮಾತಾಡುವಂತೆ ಯೆಹೋವನು ನಮ್ಮನ್ನು ಆಮಂತ್ರಿಸುತ್ತಾನೆ. ಆತನು ನಮಗೆ ಒಬ್ಬ ಅಪರಿಚಿತ ವ್ಯಕ್ತಿಯಾಗಿರಲು ಬಯಸುವುದಿಲ್ಲ. ಬದಲಾಗಿ, ಮಾನವ ಇತಿಹಾಸದಾದ್ಯಂತ ಯೆಹೋವನು, ಜನರನ್ನು ತನ್ನ ಸ್ನೇಹಿತರಾಗಿರಲು ಆಮಂತ್ರಿಸಿದ್ದಾನೆ. ದೇವರ ಸ್ನೇಹವನ್ನು ಆನಂದಿಸಿದವರಲ್ಲಿ, ಆತನ ಹೃದಯಕ್ಕೆ ಪ್ರಿಯರಾಗಿದ್ದವರಲ್ಲಿ, ಸ್ತ್ರೀಪುರುಷರು ಮತ್ತು ಆಬಾಲವೃದ್ಧರೂ ಒಳಗೂಡಿದ್ದರು. ಈ ಜನರಲ್ಲಿ ಅಬ್ರಹಾಮ, ರಾಜ ದಾವೀದ, ಮತ್ತು ಯೇಸುವಿನ ತಾಯಿಯಾಗಿದ್ದ ಮರಿಯಳು ಮುಂತಾದವರು ಸೇರಿದ್ದರು.—ಯೆಶಾಯ 41:8; ಲೂಕ 1:26-38; ಅ. ಕೃತ್ಯಗಳು 13:22.
ನೀವೂ ಯೆಹೋವನ ಸ್ನೇಹಿತರಲ್ಲಿ ಒಬ್ಬರಾಗಿರಬಹುದು. ಆದರೆ ಇಂತಹ ಸ್ನೇಹವು, ನೀವು ದೇವರನ್ನು ನಿಮಗೆ ಯಾವುದೇ ಒಂದು ಕೋರಿಕೆಯಿರುವಾಗ ಅಥವಾ ಸಮಸ್ಯೆಯಿರುವಾಗ ಮಾತ್ರ ಕರೆಯಿಸಿಕೊಳ್ಳುವಂಥ ಅಲ್ಲಾವುದ್ದೀನ್ ಕಥೆಯಲ್ಲಿನ ಜೀನಿಯಂತೆ ಪರಿಗಣಿಸಬೇಕೆಂಬುದನ್ನು ಅರ್ಥೈಸುವುದಿಲ್ಲ ಎಂಬುದಂತೂ ಖಂಡಿತ. ಪ್ರಾರ್ಥನೆಗಳು ಕೇವಲ ನಮ್ಮ ಅಗತ್ಯಗಳ ಮೇಲೆಯೇ ಕೇಂದ್ರೀಕೃತವಾಗಿರಬಾರದು. ನಮಗೆ ದೇವರ ಸ್ನೇಹವು ಬೇಕಾಗಿದ್ದರೆ, ನಾವು ಕೇವಲ ನಮ್ಮ ಚಿತ್ತದಲ್ಲಿ ಅಲ್ಲ, ಆತನ ಚಿತ್ತದಲ್ಲಿಯೂ ಆಸಕ್ತಿಯನ್ನು ತೋರಿಸಬೇಕು ಮತ್ತು ನಾವು ನಿಜವಾಗಿಯೂ ದೇವರ ಚಿತ್ತದಂತೆ ನಡೆಯಬೇಕು. (ಮತ್ತಾಯ 7:21) ಆದುದರಿಂದ, ತನ್ನ ಶಿಷ್ಯರು ದೇವರಿಗೆ ಮುಖ್ಯವಾಗಿರುವ ವಿಷಯಗಳ ಮೇಲೆ ತಮ್ಮ ಪ್ರಾರ್ಥನೆಗಳನ್ನು ಕೇಂದ್ರೀಕರಿಸಬೇಕೆಂದು ಯೇಸು ಬೋಧಿಸಿದನು. ಅವನು ಹೇಳಿದ್ದು: “ಆದದರಿಂದ ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು—ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:9, 10) ನಮ್ಮ ಪ್ರಾರ್ಥನೆಗಳು ದೇವರಿಗೆ ಕೃತಜ್ಞತಾಸ್ತುತಿಗಳಿಂದಲೂ ತುಂಬಿರಬೇಕು!—ಕೀರ್ತನೆ 56:13; 150:6.
ಆದರೂ, ನಮ್ಮ ಅಗತ್ಯಗಳು ಮತ್ತು ಚಿಂತೆಗಳು ತುಂಬ ಅಲ್ಪವಾದವು ಅಥವಾ ಕ್ಷುಲ್ಲಕವಾದವುಗಳಾಗಿರುವುದರಿಂದ ಅವುಗಳ ಕುರಿತು ಪ್ರಾರ್ಥಿಸಲಾರೆವು ಎಂದು ನಾವು ಎಂದಿಗೂ ನೆನಸಬಾರದು. “ನಾನು ದೇವರೊಂದಿಗೆ ಬಿಚ್ಚುಮನಸ್ಸಿನಿಂದ ಮಾತಾಡಲು ಪ್ರಯತ್ನಿಸುವುದಾದರೂ, ಕೆಲವು ಅನಾವಶ್ಯಕ ವಿಷಯಗಳಿಂದ ಆತನನ್ನು ತೊಂದರೆಪಡಿಸಬಾರದು ಎಂದು ನನಗೆ ಕೆಲವೊಮ್ಮೆ ಅನಿಸುತ್ತದೆ” ಎಂದು ಸ್ಟೀವ್ ಹೇಳುತ್ತಾನೆ. ನಿಮಗೆ ಆ ರೀತಿಯ ಅನಿಸಿಕೆಯಾದಾಗಲೆಲ್ಲ, ಯೇಸು ತನ್ನ ಶಿಷ್ಯರಿಗೆ ಏನನ್ನು ಬೋಧಿಸಿದನೋ ಅದನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿ: “ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲಾ? ಆದಾಗ್ಯೂ ಅವುಗಳಲ್ಲಿ ಒಂದಾದರೂ ದೇವರಿಗೆ ಮರೆತುಹೋಗುವದಿಲ್ಲ. . . . ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” (ಲೂಕ 12:6, 7) ಇದು ಪುನರಾಶ್ವಾಸನೆಯನ್ನು ನೀಡುವುದಿಲ್ಲವೋ?
ಆದುದರಿಂದ, ಯೆಹೋವನ ಕುರಿತು ನೀವು ಹೆಚ್ಚು ತಿಳಿದುಕೊಳ್ಳುವುದರಿಂದ, ಆತನನ್ನು ಪ್ರಾರ್ಥನೆಯಲ್ಲಿ ಸಮೀಪಿಸಲು ಹೆಚ್ಚು ಮನಸ್ಸುಮಾಡುವಿರಿ ಹಾಗೂ ಯೆಹೋವನು ಸಹಾಯಮಾಡಲು ಶಕ್ತನಾಗಿದ್ದಾನೆ ಮತ್ತು ಹಾಗೆಯೇ ಮಾಡುವನು ಎಂಬ ಹೆಚ್ಚಿನ ಭರವಸೆ ನಿಮಗಿರುವುದು ಎಂಬುದು ನಿಮಗೆ ಈಗ ಸುಲಭವಾಗಿ ಅರ್ಥವಾಗುತ್ತಿರಬಹುದು. ಆದಕಾರಣ, ಪ್ರಾರ್ಥನೆಯಲ್ಲಿ ನೀವು ದೇವರನ್ನು ಸಮೀಪಿಸುವಾಗ ನಿಮ್ಮ ಮನೋಭಾವವು ಹೇಗಿರಬೇಕು? ನೀವು ಗೌರವಪೂರ್ಣರೂ, ನಮ್ರರೂ ಮತ್ತು ನಿಸ್ವಾರ್ಥಭಾವದವರೂ ಆಗಿರುವ ಅಗತ್ಯವಿದೆ. ಲೋಕದ ಯಾವನೇ ಉಚ್ಚ ಅಧಿಕಾರಿಯ ಮುಂದೆ ನೀವು ಜಂಬದಿಂದ ಅಥವಾ ಅಗೌರವದಿಂದ ಒಂದು ಕೋರಿಕೆಯನ್ನು ಮಾಡುವುದಾದರೆ, ಅವನು ನಿಮಗೆ ಕಿವಿಗೊಡುವನು ಎಂದು ನೀವು ನೆನಸುತ್ತೀರೋ? ಆದುದರಿಂದ, ನಿಮ್ಮ ಪ್ರಾರ್ಥನೆಗಳನ್ನು ಉತ್ತರಿಸುವ ಮುಂಚೆ, ನೀವು ಮೊದಲು ಆತನನ್ನು ಮತ್ತು ಆತನ ಮಟ್ಟಗಳನ್ನು ಗೌರವಿಸುವಂತೆ ಯೆಹೋವನೂ ನಿರೀಕ್ಷಿಸುತ್ತಾನೆ ಎಂಬ ವಿಷಯವು ನಿಮ್ಮನ್ನು ಆಶ್ಚರ್ಯಗೊಳಿಸಬಾರದು.—ಜ್ಞಾನೋಕ್ತಿ 15:29.
ದೇವಭಯವುಳ್ಳ ಸಾವಿರಗಟ್ಟಲೆ ಯುವಜನರು ದೇವರ ಮುಂದೆ ತಮ್ಮ ಹೃದಯಗಳನ್ನು ಬಿಚ್ಚಿ ಪ್ರಾರ್ಥಿಸಲು ಕಲಿತಿದ್ದಾರೆ. (ಕೀರ್ತನೆ 62:8) ಬ್ರೆಟ್ ಹೇಳುವುದು: “ಯೆಹೋವನು ನನ್ನ ಪ್ರಾರ್ಥನೆಗಳಿಗೆ ಉತ್ತರಿಸುವಾಗ, ಆತನು ಇನ್ನೂ ನನ್ನ ಸ್ನೇಹಿತನಾಗಿದ್ದಾನೆಂದು ಅದು ನನ್ನನ್ನು ಪ್ರೋತ್ಸಾಹಿಸುತ್ತದೆ.” ನಿಮ್ಮ ಕುರಿತಾಗಿ ಏನು? ದೇವರೊಂದಿಗೆ ಇದೇ ರೀತಿಯ ಸ್ನೇಹವನ್ನು ನೀವು ಹೇಗೆ ಅನುಭವಿಸಸಾಧ್ಯವಿದೆ? ಇಬ್ಬರು ಕ್ರೈಸ್ತ ಯುವತಿಯರು ಈ ಕೆಳಗಿನ ಹೇಳಿಕೆಗಳನ್ನು ಕೊಟ್ಟರು:
ರೇಚಲ್: “ಯೆಹೋವನಿಗೆ ಹತ್ತಿರವಾಗಿ ಉಳಿಯಲು, ಆತನ ವಾಕ್ಯದ ಗಾಢವಾದ ಅಭ್ಯಾಸ ಮಾಡಬೇಕೆಂಬ ಮನವರಿಕೆ ನನಗಾಗುತ್ತದೆ, ಮತ್ತು ಇಂತಹ ಅಭ್ಯಾಸಕ್ಕಾಗಿ ಬಯಕೆಯನ್ನು ಬೆಳೆಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ.”—1 ಪೇತ್ರ 2:2.
ಜೆನಿ: “ನನ್ನ ಅನಿಸಿಕೆಯೇನೆಂದರೆ, ಯೆಹೋವನ ಸೇವೆಯಲ್ಲಿ ನಾವು ಎಷ್ಟು ಹೆಚ್ಚಾಗಿ ಒಳಗೂಡಿರುತ್ತೇವೋ, ಆತನಿಗೆ ಅಷ್ಟೇ ಹೆಚ್ಚು ಹತ್ತಿರವಾಗುತ್ತೇವೆ.”—ಯಾಕೋಬ 4:8.
ಒಂದು ಪ್ರಾರ್ಥನೆಯನ್ನು ಮಾಡುವುದು ಎಷ್ಟು ಒಳಿತನ್ನು ಮಾಡುತ್ತದೆ ಎಂಬುದರ ಕುರಿತು ನೀವು ಎಂದಾದರೂ ಯೋಚಿಸಿದ್ದೀರೋ? ಒಬ್ಬ ಕ್ರೈಸ್ತ ಯುವತಿ ಹೇಳುವುದು: “ದೇವರು ನನ್ನೊಂದಿಗೆ ಮಾತಾಡುವುದಾದರೆ ಅಥವಾ ಒಂದು ಸಂದೇಶವನ್ನು ಕಳುಹಿಸುವುದಾದರೆ ನಾನು ಆತನಿಗೆ ಹೆಚ್ಚು ಹತ್ತಿರವಾಗಿದ್ದೇನೆ ಎಂಬ ಅನಿಸಿಕೆ ನನಗಾಗುವುದು.” ಆದರೆ ನಾವು ಪ್ರಾರ್ಥಿಸುವಾಗ ಯೆಹೋವನು ನಮ್ಮ ಕಿವಿಗೆ ಕೇಳಿಸುವ ಹಾಗೆ ಉತ್ತರಿಸದಿರುವ ಕಾರಣ, ಪ್ರಾರ್ಥನೆಯು ನಿಜವಾಗಿಯೂ ನಮಗೆ ಹೇಗೆ ಸಹಾಯಮಾಡಬಲ್ಲದು? ಈ ವಿಷಯವು ಮುಂದಿನ ಒಂದು ಲೇಖನದಲ್ಲಿ ಚರ್ಚಿಸಲ್ಪಡುವುದು.
(g01 6/22)
[ಪಾದಟಿಪ್ಪಣಿ]
^ Taken from the HOLY BIBLE: Kannada EASY-TO-READ VERSION © 1997 by World Bible Translation Center. Inc. and used by permission.
[ಪುಟ 13ರಲ್ಲಿರುವ ಚೌಕ]
ಪುಟ 11ರಲ್ಲಿರುವ ಪ್ರಶ್ನೆಗಳಿಗೆ ಉತ್ತರ
1. ಯೆಹೋವ. ಅದರ ಅರ್ಥ “ಆತನು ತನ್ನನ್ನು ಆಗಿಸಿಕೊಳ್ಳುತ್ತಾನೆ” ಎಂದಾಗಿದೆ.
2. ಪ್ರೀತಿ, ಶಕ್ತಿ, ನ್ಯಾಯ, ಮತ್ತು ವಿವೇಕ.
3. ಆತನು ತನ್ನ ಏಕಜಾತ ಪುತ್ರನಾದ ಯೇಸುವನ್ನು ನಮ್ಮ ಪರವಾಗಿ ಸಾಯಲು ಕಳುಹಿಸಿಕೊಟ್ಟನು.
4. ನಮ್ಮ ಅಗತ್ಯಗಳ ಕುರಿತಾಗಿಯೇ ಚಿಂತಿಸುತ್ತಿರುವ ಬದಲು, ದೇವರ ಚಿತ್ತದಲ್ಲಿ ಆಸಕ್ತಿಯನ್ನು ತೋರಿಸಿ, ಅದರಂತೆ ನಡೆಯುವ ಮೂಲಕ.
5. ನಾವು ಗೌರವಪೂರ್ಣರೂ, ನಮ್ರರೂ ಮತ್ತು ನಿಸ್ವಾರ್ಥಭಾವದವರೂ ಆಗಿರಬೇಕು.
[ಪುಟ 12ರಲ್ಲಿರುವ ಚಿತ್ರಗಳು]
ಬೈಬಲನ್ನು ಅಭ್ಯಾಸಿಸುವುದು ಮತ್ತು ಸೃಷ್ಟಿಯಿಂದ ಕಲಿತುಕೊಳ್ಳುವುದು, ನೀವು ದೇವರನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಲು ಸಹಾಯಮಾಡುವುದು