ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಕೂದಲನ್ನು ಹೆಚ್ಚು ನಿಕಟವಾಗಿ ಪರೀಕ್ಷಿಸುವುದು

ನಿಮ್ಮ ಕೂದಲನ್ನು ಹೆಚ್ಚು ನಿಕಟವಾಗಿ ಪರೀಕ್ಷಿಸುವುದು

ನಿಮ್ಮ ಕೂದಲನ್ನು ಹೆಚ್ಚು ನಿಕಟವಾಗಿ ಪರೀಕ್ಷಿಸುವುದು

“ಪ್ರತಿಯೊಂದು ಯುಗ ಮತ್ತು ಸಂಸ್ಕಾರದಲ್ಲಿ, ಕೂದಲು ಅದರ ಕೆಳಗಿರುವ ವ್ಯಕ್ತಿಯ ಕುರಿತಾಗಿ ಸ್ವಲ್ಪವನ್ನಾದರೂ ವ್ಯಕ್ತಪಡಿಸುತ್ತದೆ,” ಎಂದು ಒಂದು ಕೃತಿಯು ಹೇಳುತ್ತದೆ. ಆದುದರಿಂದಲೇ, ಅನೇಕರು ತಮ್ಮ ಕೂದಲನ್ನು ಆರೋಗ್ಯಕರವಾಗಿ ಹಾಗೂ ಆಕರ್ಷಕವಾಗಿಡುವುದರಲ್ಲಿ ತೀವ್ರಾಸಕ್ತರಾಗಿದ್ದಾರೆ ಎಂಬುದು ಆಶ್ಚರ್ಯಕರವೇನಲ್ಲ.

ಎಚ್ಚರ! ಪತ್ರಿಕೆಯು, ನಾಲ್ಕು ಅನುಭವೀ ಕೇಶವಿನ್ಯಾಸಕರೊಂದಿಗೆ ಕೂದಲಿನ ರಚನೆ ಹಾಗೂ ಆರೈಕೆಯ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳನ್ನು ಕೇಳಿತು. ಇದರಿಂದ ವ್ಯಕ್ತವಾಗುವ ಪ್ರಕಾರ, ನಿಮ್ಮ ಕೂದಲಿನಲ್ಲಿ ನಿಮ್ಮ ಕಣ್ಣಿಗೆ ಕಾಣಿಸುವುದಕ್ಕಿಂತ ಹೆಚ್ಚಿನದ್ದು ಒಳಗೂಡಿದೆ.

ಕೂದಲ ಬೆಳವಣಿಗೆ ಮತ್ತು ಕೂದಲ ನಷ್ಟ

ಪ್ರ: ಕೂದಲು ಯಾವುದರಿಂದ ರಚಿಸಲ್ಪಟ್ಟಿದೆ?

ಉ: ಕೂದಲಿನಲ್ಲಿ ಕೆರಾಟಿನ್‌ ಎಂಬ ನಾರಿನಂಥ ಪ್ರೋಟೀನ್‌ ಇದೆ. ಪ್ರತಿಯೊಂದು ಕೂದಲು, ಕೋಶಕ ಎಂದು ಕರೆಯಲ್ಪಡುವ, ನೆತ್ತಿಯಲ್ಲಿರುವ ಒಂದು ಕಚ್ಚಿನಿಂದ ಬೆಳೆಯುತ್ತದೆ. ಪ್ರತಿಯೊಂದು ಕೋಶಕದ ಅಡಿಭಾಗದಲ್ಲಿ, ರಕ್ತದ ಸಮೃದ್ಧವಾದ ಸರಬರಾಯಿಯನ್ನು ಪಡೆದುಕೊಳ್ಳುವ ಪಪಿಲ ಇದೆ. ಈ ಪಪಿಲ, ಕೋಶಕವು ಮೇಲೆ ಹೋಗುವಂತೆ ಒತ್ತಾಯಿಸುವ ಕೂದಲಿನ ಕೋಶಗಳನ್ನು ಉತ್ಪಾದಿಸುತ್ತದೆ ಮತ್ತು ಇವು ಒಟ್ಟುಗೂಡಿ ಗಟ್ಟಿಯಾಗಿ ಕೂದಲಾಗುತ್ತವೆ.

ಪ್ರ: ಕೂದಲು ಕತ್ತರಿಸಲ್ಪಟ್ಟರೆ ವೇಗವಾಗಿ ಬೆಳೆಯುತ್ತದೆ ಎಂದು ಹೆಚ್ಚಾಗಿ ನಂಬಲಾಗುತ್ತದೆ. ಇದು ನಿಜವೋ?

ಉ: ಇಲ್ಲ. ಮರದ ಕೊಂಬೆಗಳು ಹೇಗೆ ಕಾಂಡದಿಂದ ಪೋಷಿಸಲ್ಪಡುತ್ತವೋ ಅದೇ ರೀತಿಯಲ್ಲಿ ಕೂದಲು ದೇಹದಿಂದ ಪೋಷಿಸಲ್ಪಡುತ್ತದೆ ಎಂಬುದಾಗಿ ಕೆಲವು ಜನರು ನೆನಸುತ್ತಾರೆ. ಆದರೆ ಒಮ್ಮೆ ಕೂದಲು ನೆತ್ತಿಯಿಂದ ಬೆಳೆದು ಹೊರಬಂದರೆ, ಅದು ಸತ್ತ ವಸ್ತುವಾಗಿದೆ. ಆದುದರಿಂದ ಕೂದಲನ್ನು ಟ್ರಿಮ್‌ ಮಾಡಿಸುವುದು, ಅದರ ಬೆಳವಣಿಗೆಯನ್ನು ಬಾಧಿಸುವುದಿಲ್ಲ.

ಪ್ರ: ಕೂದಲು ಏಕೆ ನರೆಯುತ್ತದೆ?

ಉ: ಕೂದಲಿನ ಒಳಗಿನ ಪದರದಲ್ಲಿ, ಕೂದಲಿಗೆ ಬಣ್ಣವನ್ನು ಕೊಡುವ ಒಂದು ವರ್ಣದ್ರವ್ಯವಿದೆ. ವರ್ಣದ್ರವ್ಯದ ಕೋಶಗಳು ಸತ್ತುಹೋಗುವಾಗ, ನರೆಗೂದಲು ಉಂಟಾಗುತ್ತದೆ; ಇದು ವಯಸ್ಸಾಗುವಿಕೆಯ ಒಂದು ಭಾಗವಾಗಿದೆ. ಕಾಲಕ್ಕಿಂತ ಮುಂಚಿತವಾಗಿ ನರೆಗೂದಲು ಬರುವುದು ಆನುವಂಶಿಕವಾಗಿದೆ ಅಥವಾ ಅಸ್ವಸ್ಥತೆಯಿಂದ ಉಂಟಾಗುತ್ತದೆ. ಹಾಗಿದ್ದರೂ, ಕೂದಲು ಒಂದೇ ರಾತ್ರಿಯಲ್ಲಿ ನರೆಯುತ್ತದೆ ಎಂಬುದು ಮಿಥ್ಯೆಯಾಗಿದೆ. ವರ್ಣದ್ರವ್ಯವು ನೆತ್ತಿಯ ಕೆಳಗೆ ಶೇಖರಿತವಾಗಿರುತ್ತದೆ. ಆದುದರಿಂದ ನರೆಗೂದಲು (ತಿಂಗಳಿಗೆ ಸರಿಸುಮಾರು 1.25 ಸೆಂಟಿಮೀಟರ್‌) ಬೆಳೆದು, ತಲೆಯ ಮೇಲ್ಮೈಯಲ್ಲಿ ಕಾಣಿಸಿಕೊಳ್ಳಲು ಸಮಯವು ಬೇಕಾಗುತ್ತದೆ.

ಪ್ರ: ಕೂದಲು ನಷ್ಟಕ್ಕೆ ಕಾರಣಗಳೇನು?

ಉ: ಕೂದಲಿನ ನಷ್ಟ, ಕೂದಲಿನ ನೈಸರ್ಗಿಕ ಚಕ್ರದ ಭಾಗವಾಗಿದೆ. ಸರಾಸರಿಯಾಗಿ, ದಿನಾಲೂ ಪ್ರತಿಯೊಬ್ಬ ವ್ಯಕ್ತಿಯ 50ರಿಂದ 80 ಕೂದಲುಗಳು ಉದುರಿಹೋಗುತ್ತವೆ. ಆದರೆ ಪುರುಷರಿಗಾಗುವ ಬೋಳಿಗೆ ಆನುವಂಶಿಕ ಹಿನ್ನೆಲೆ ಮತ್ತು ಹಾರ್ಮೋನ್‌ ಅಸಮತೆಯು ಕಾರಣವಾಗಿರುವಂತೆ ತೋರುತ್ತದೆ. ಇದು ನಿರಂತರವಾದ ಕೂದಲು ನಷ್ಟದಲ್ಲಿ ಪರಿಣಮಿಸುತ್ತದೆ. ಅತ್ಯಧಿಕವಾದ ಕೂದಲಿನ ನಷ್ಟವು ಆ್ಯಲಪೀಶಿಯ ಎಂದು ಕರೆಯಲ್ಪಡುತ್ತದೆ. *

ಪ್ರ: ಕೂದಲು ಒಬ್ಬ ವ್ಯಕ್ತಿಯ ಆರೋಗ್ಯದ ಕನ್ನಡಿ ಎಂದು ಕೆಲವರು ಹೇಳುತ್ತಾರೆ. ಇದನ್ನು ನೀವು ಗಮನಿಸಿದ್ದೀರೋ?

ಉ: ಹೌದು. ನೆತ್ತಿಯ ಕೆಳಗೆ, ರಕ್ತವು ಕೂದಲನ್ನು ಪೋಷಿಸುತ್ತದೆ. ಆದುದರಿಂದ, ಆರೋಗ್ಯಕರವಾದ ಕೂದಲು ಸುಪೋಷಿತ ರಕ್ತದ ಸರಬರಾಯಿಯನ್ನು ಪ್ರತಿಬಿಂಬಿಸಬಹುದು. ಆದರೆ, ನ್ಯೂನವಾಗಿ ತಿನ್ನುವವನ ಅಥವಾ ಮಿತಿಮೀರಿ ಮದ್ಯಪಾನಮಾಡುವವನ ರಕ್ತವು ಅವನ ಕೂದಲನ್ನು ಸರಿಯಾಗಿ ಪೋಷಿಸಲು ಸಾಧ್ಯವಾಗದ ಕಾರಣ, ಅವನ ಕೂದಲು ದುರ್ಬಲಗೊಳ್ಳುತ್ತಿರುವುದನ್ನು ಮತ್ತು ಸುಲಭವಾಗಿ ಒಡೆದುಹೋಗುತ್ತಿರುವುದನ್ನು ಕಂಡುಕೊಳ್ಳಬಹುದು. ಕೂದಲಿನ ನಷ್ಟ ಅಥವಾ ದುರ್ಬಲವಾದ ಕೂದಲು, ಪ್ರಾಯಶಃ ಅಸ್ವಸ್ಥತೆಯ ಅಥವಾ ಗರ್ಭಧಾರಣೆಯ ಮುನ್‌ಸೂಚನೆಯಾಗಿಯೂ ಇರಬಹುದು.

ನಿಮ್ಮ ನೆತ್ತಿ ಮತ್ತು ಕೂದಲನ್ನು ಆರೋಗ್ಯಕರವಾಗಿಡುವುದು

ಪ್ರ: ಕೂದಲು ಮತ್ತು ನೆತ್ತಿಯನ್ನು ಹೇಗೆ ಶಾಂಪೂ ಮಾಡುವುದು ಎಂಬುದನ್ನು ವಿವರಿಸಿ.

ಉ: ಒಣ ನೆತ್ತಿಯ ಸಮಸ್ಯೆಗಳಿರುವ ಅಧಿಕ ಜನರು ತಮ್ಮ ನೆತ್ತಿಯನ್ನು ತೀರ ಹೆಚ್ಚು ಬಾರಿ ಶಾಂಪೂ ಮಾಡುತ್ತಾರೆ ಎಂಬುದನ್ನು ಅನುಭವವು ಸೂಚಿಸಿದೆ. ಅನೇಕಬಾರಿ ನಿಮ್ಮ ಕೂದಲಲ್ಲಿರುವ ಎಣ್ಣೆಯು, ಕೊಳೆಯನ್ನು ಹಾಗೂ ಚರ್ಮದ ಸತ್ತ ಕೋಶಗಳನ್ನು ಆಕರ್ಷಿಸಿ, ಕೋಶಕಗಳಿಗೆ ನಡೆಸುವ ಎಣ್ಣೆಯ ನಾಳಗಳನ್ನು ಮುಚ್ಚಿಬಿಡುತ್ತದೆ ಎಂಬುದು ನಿಜ. ಆದುದರಿಂದ ಕ್ರಮವಾಗಿ ಶಾಂಪೂ ಮಾಡುವುದು ಆವಶ್ಯಕವಾಗಿದೆ. ಆದರೆ ಈ ನೈಸರ್ಗಿಕ ಎಣ್ಣೆಗಳು ಹಾನಿಕಾರಕ ಬ್ಯಾಕ್ಟೀರಿಯಾದ ವಿರುದ್ಧ ನಿಮ್ಮ ಚರ್ಮವನ್ನು ರಕ್ಷಿಸುತ್ತವೆ ಮತ್ತು ಆವಶ್ಯಕವಾದ ತೇವವನ್ನು ಒಳಗೆಯೇ ಬಂಧಿಸಿಡುತ್ತವೆ. ತೀರ ಹೆಚ್ಚು ಸಲ ಶಾಂಪೂ ಮಾಡುವುದು, ನಿಮ್ಮ ನೆತ್ತಿಯಿಂದ ಈ ರಕ್ಷಣಾತ್ಮಕ ಪದರವನ್ನು ತೆಗೆದುಹಾಕುತ್ತದೆ ಮತ್ತು ಒಣ ನೆತ್ತಿಯಂಥ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಒಬ್ಬನ ನೆತ್ತಿ ಅಥವಾ ಕೂದಲು ಕೊಳೆಯಾಗಿರುವಾಗ ಮಾತ್ರ ಶಾಂಪೂ ಮಾಡಬೇಕೆಂದು ಹೆಚ್ಚಿನ ನಿಪುಣರು ಶಿಫಾರಸ್ಸುಮಾಡುತ್ತಾರೆ. ಸಹಜವಾದ ಅಥವಾ ಒಣ ಕೂದಲಿರುವವರಿಗಿಂತ ಎಣ್ಣೆ ಕೂದಲಿರುವ ಜನರು ಹೆಚ್ಚು ಬಾರಿ ಶಾಂಪೂ ಮಾಡಬೇಕು.

ನೀವು ಶಾಂಪೂ ಮಾಡುವಾಗ, ನಿಮ್ಮ ನೆತ್ತಿಯನ್ನು ಮಾಲೀಸು ಮಾಡಿ. ಹೀಗೆ ಮಾಡುವುದು ನೆತ್ತಿಯಿಂದ ಸತ್ತ ಕಣಗಳನ್ನು ತೆಗೆಹಾಕುತ್ತದೆ ಹಾಗೂ ನಿಮ್ಮ ಕೂದಲನ್ನು ಪೋಷಿಸುವ ಸರಿಯಾದ ರಕ್ತದ ಚಲನೆಯನ್ನು ಹೆಚ್ಚಿಸುತ್ತದೆ. ಆದರೆ ನೀರಿನಿಂದ ಚೆನ್ನಾಗಿ ತೊಳೆಯಬೇಕೆಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ! ನಿಮ್ಮ ಕೈಗಳಿಗೆ ಸಾಬೂನು ಹಚ್ಚಿದ ನಂತರ ಚೆನ್ನಾಗಿ ತೊಳೆಯಲಿಲ್ಲವಾದರೆ, ನಿಮ್ಮ ಚರ್ಮ ಒಣಗಿ, ಒಡೆದುಹೋಗುತ್ತದೆ. ಹಾಗೆಯೇ, ಶಾಂಪೂವನ್ನು ಚೆನ್ನಾಗಿ ಜಾಲಿಸಿ ತೊಳೆಯದಿರುವಲ್ಲಿ, ನಿಮ್ಮ ನೆತ್ತಿ ಒಣಗಿ, ಅದರಲ್ಲಿ ಪೊರೆಯೇಳಬಹುದು.

ಪ್ರ: ಒಣ ನೆತ್ತಿಯನ್ನು ಹೇಗೆ ಪರಾಮರಿಸಬಹುದು?

ಉ: ಹೆಚ್ಚು ನೀರು ಕುಡಿಯಿರಿ, ಮತ್ತು ಪೌಷ್ಟಿಕ ಆಹಾರವನ್ನು ತಿನ್ನಿರಿ. ಇದು ನಿಮ್ಮ ಚರ್ಮಕ್ಕೆ ನೀರುಗೂಡಿಸುತ್ತದೆ ಮತ್ತು ರಕ್ತದ ಸರಬರಾಯಿಯನ್ನು ಹೆಚ್ಚಿಸುತ್ತದೆ. ಸೌಮ್ಯವಾದ ಶಾಂಪೂವನ್ನು ಉಪಯೋಗಿಸಿ ಮತ್ತು ನಿಮ್ಮ ನೆತ್ತಿಯನ್ನು ಕ್ರಮವಾಗಿ ಮಾಲೀಸು ಮಾಡಿ. ಕೆಲವರು ತಮ್ಮ ನೆತ್ತಿಯನ್ನು ತೇವಗೊಳಿಸಲು, ಜಾಲಿಸದೆ ಕೂದಲಲ್ಲೇ ಬಿಡುವ ಕಂಡಿಷನರ್‌ ಮತ್ತು ಲೋಷನ್‌ಗಳನ್ನೂ ಉಪಯೋಗಿಸುತ್ತಾರೆ.

ಕೇಶವಿನ್ಯಾಸ ಮಾಡುವುದು

ಪ್ರ: ಕೇಶವಿನ್ಯಾಸಕನನ್ನು ಭೇಟಿಯಾಗುವಾಗ ಒಬ್ಬ ವ್ಯಕ್ತಿ ಏನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?

ಉ: ನಿಮ್ಮ ಕೇಶಾಲಂಕಾರವನ್ನು ಬದಲಾಯಿಸಲು ನೀವು ಇಷ್ಟಪಡುವುದಾದರೆ, ನಿಮಗೆ ಇಷ್ಟವಿರುವ ಸ್ಟೈಲಿನ ಮತ್ತು ಒಂದುವೇಳೆ ನಿಮಗೆ ಇಷ್ಟವಿಲ್ಲದ ಸ್ಟೈಲಿನ ಒಂದು ಛಾಯಾಚಿತ್ರವನ್ನು ತೆಗೆದುಕೊಂಡು ಬನ್ನಿ. ನಿಮ್ಮ ಬಯಕೆಗಳನ್ನು ಮತ್ತು ಕೇಶಾರೈಕೆಗಾಗಿ ನೀವು ಎಷ್ಟು ಸಮಯವನ್ನು ಕಳೆಯಬಹುದು ಎಂಬುದನ್ನು ಮುಚ್ಚುಮರೆಯಿಲ್ಲದೆ ವ್ಯಕ್ತಪಡಿಸಿ. ಏಕೆಂದರೆ, ಕೆಲವು ಸ್ಟೈಲ್‌ಗಳು ಇತರ ಸ್ಟೈಲ್‌ಗಳಿಗಿಂತ ಹೆಚ್ಚಿನ ಗಮನವನ್ನು ಕೇಳಿಕೊಳ್ಳುತ್ತವೆ. ಒಬ್ಬ ಕೇಶವಿನ್ಯಾಸಕನಿಗೆ ನಿಮ್ಮ ಕೂದಲಿನ ಬಗ್ಗೆ ತಿಳಿದುಕೊಳ್ಳಲು ಹಾಗೂ ನಿಮ್ಮೊಂದಿಗೆ ಒಳ್ಳೆಯ ಸಂಪರ್ಕವನ್ನು ಸ್ಥಾಪಿಸಲು ಸಾಧಾರಣವಾಗಿ ಎರಡು ಅಥವಾ ಮೂರು ಭೇಟಿಗಳು ಬೇಕಾಗುತ್ತವೆ ಎಂಬುದನ್ನು ಮನಸ್ಸಿನಲ್ಲಿಡಿ. ಆದುದರಿಂದ ನಿರಾಶರಾಗಿ ನಿಮ್ಮ ಕೇಶವಿನ್ಯಾಸಕನನ್ನು ತುಂಬ ಬೇಗನೇ ಬದಲಾಯಿಸಬೇಡಿ!

ನಿಮ್ಮ ಕೂದಲು ಏನನ್ನು ವ್ಯಕ್ತಪಡಿಸುತ್ತದೆ?

ಕೇಶಾರೈಕೆ ಮತ್ತು ಕೇಶವಿನ್ಯಾಸಗಳು ವ್ಯಕ್ತಿತ್ವದ ರೂಪಗಳಾಗಿವೆ. ಫ್ಯಾಷನ್‌ನ ಪ್ರವೃತ್ತಿಗಳು, ಧಾರ್ಮಿಕ ನಂಬಿಕೆಗಳು, ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ಅಜೆಂಡಗಳನ್ನು ಪೂರೈಸಲಿಕ್ಕಾಗಿಯೂ ಕೂದಲನ್ನು ಕತ್ತರಿಸಲಾಗಿದೆ, ಅದನ್ನು ಉದ್ದವಾಗಿ ಬಿಡಲಾಗಿದೆ, ನೆಟ್ಟಗೆ ಮಾಡಲಾಗಿದೆ, ಸುರುಳಿಗೊಳಿಸಲಾಗಿದೆ, ಬಣ್ಣ ಹಾಕಿಸಲಾಗಿದೆ ಮತ್ತು ಹಲವಾರು ರೀತಿಗಳಲ್ಲಿ ಅಲಂಕರಿಸಲಾಗಿದೆ. ನಿಮ್ಮ ಕೂದಲನ್ನು ಹೆಚ್ಚು ನಿಕಟವಾಗಿ ನೋಡಿ. ನಿಮ್ಮ ಕುರಿತಾಗಿ ಅದು ಏನನ್ನು ತಿಳಿಯಪಡಿಸುತ್ತದೆ? ಲಕ್ಷಣವಾಗಿ ಅಲಂಕೃತವಾದ ಆರೋಗ್ಯಕರ ಕೂದಲುಳ್ಳವನಿಗೆ ಅದು ಭೂಷಣದಂತಿದೆ ಮತ್ತು ಬೇರೆಯವರ ಮೆಚ್ಚುಗೆಗೆ ಪಾತ್ರವಾಗುತ್ತದೆ.(g01 4/8)

[ಪಾದಟಿಪ್ಪಣಿ]

^ ಹೆಚ್ಚಿನ ಮಾಹಿತಿಗಾಗಿ, 1991, ಏಪ್ರಿಲ್‌ 22ರ ಅವೇಕ್‌! ಸಂಚಿಕೆಯಲ್ಲಿರುವ “ಆ್ಯಲಪೀಶಿಯ​—⁠ಕೂದಲು ನಷ್ಟದೊಂದಿಗೆ ಮೌನವಾಗಿ ಜೀವಿಸುವುದು,” ಎಂಬ ಲೇಖನವನ್ನು ನೋಡಿ.

[ಪುಟ 24ರಲ್ಲಿರುವ ಚಿತ್ರಗಳು]

ಪೌಷ್ಟಿಕ ಆಹಾರವನ್ನು ಸೇವಿಸುವುದು ಮತ್ತು ಹೆಚ್ಚೆಚ್ಚು ನೀರನ್ನು ಕುಡಿಯುವುದು ಒಣ ನೆತ್ತಿಯನ್ನು ಗುಣಪಡಿಸಲು ಸಹಾಯಮಾಡಬಹುದು

[ಪುಟ 24ರಲ್ಲಿರುವ ಚಿತ್ರ]

ನರೆಗೂದಲು ವಯಸ್ಸಾಗುವಿಕೆಯ ಸಹಜ ಭಾಗವಾಗಿದೆ

[ಪುಟ 24ರಲ್ಲಿರುವ ಚಿತ್ರ]

ತೀರ ಹೆಚ್ಚು ಸಲ ಶಾಂಪೂ ಮಾಡುವುದು ನಿಮ್ಮ ನೆತ್ತಿಯಿಂದ ರಕ್ಷಣಾತ್ಮಕ ಎಣ್ಣೆಗಳನ್ನು ತೆಗೆದುಹಾಕಸಾಧ್ಯವಿದೆ