ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಂದರವಾದ ಪತಂಗ

ಸುಂದರವಾದ ಪತಂಗ

ಸುಂದರವಾದ ಪತಂಗ

ಒಂದು ಸೊಗಸಾದ ಸಂಜೆ, ಪತಂಗವೊಂದು ಸಕಲ ವಿಧವಾದ ಸುಖಸೌಕರ್ಯಗಳಿರುವ ಒಂದು ರೆಸ್ಟರೆಂಟ್‌ನೊಳಗೆ ಹಾರಿಬಂತು. ಅದು ಒಬ್ಬ ಹೆಂಗಸಿನ ಮೇಜಿನ ಹತ್ತಿರ ಪಟಪಟನೆ ಹಾರಾಡುತ್ತಿರುವಾಗ, ಅಲ್ಲಿ ಊಟಮಾಡುತ್ತಿದ್ದ ಅವಳು ಯಾವುದೋ ರೋಗಸೋಂಕಿತ ಸೊಳ್ಳೆಯೊಂದರಿಂದ ಆಕ್ರಮಿಸಲ್ಪಟ್ಟವಳಂತೆ ಆ ಪತಂಗವನ್ನು ಉದ್ರೇಕದಿಂದ ಉಷ್‌ ಎಂದು ಓಡಿಸಿಬಿಟ್ಟಳು! ಪತಂಗವು ಇನ್ನೊಂದು ಮೇಜಿನ ಕಡೆಗೆ ಸಾಗಿತು, ಕೊನೆಗೆ ಒಬ್ಬ ಮನುಷ್ಯನ ಹಿಮ್ಮಡಿಚಿದ ಕೋಟಿನ ಎದೆಯ ಭಾಗದ ಮೇಲೆ ಎರಗಿತು. ಆದರೆ ಈ ಮನುಷ್ಯನು ಮತ್ತು ಅವನ ಹೆಂಡತಿಯು ಸಂಪೂರ್ಣವಾಗಿ ಭಿನ್ನವಾದ ರೀತಿಯಲ್ಲಿ ಪ್ರತಿಕ್ರಿಯಿಸಿದರು​—⁠ಪತಂಗದ ಸೌಂದರ್ಯವನ್ನು ಹಾಗೂ ಅದು ನಿರಪಾಯಕಾರಿಯಾಗಿರುವುದನ್ನೂ ವಿಸ್ಮಯದಿಂದ ನೋಡಿದರು.

“ಪತಂಗಗಳು ತೀರ ನಿರಪಾಯಕಾರಿ ಜೀವಿಗಳು,” ಎಂಬುದಾಗಿ ಕನೆಟಿಕಟ್‌ ಚಿಟ್ಟೆ ಸಂಘದ ಜೊತೆಸ್ಥಾಪಕರಾದ ಜಾನ್‌ ಹಿಮಲ್‌ಮಾನ್‌ ವಿವರಿಸುತ್ತಾರೆ. “ಅವುಗಳ ಬಾಯಿಯಲ್ಲಿ ಕಚ್ಚುವ ಯಾವುದೇ ಭಾಗಗಳಿಲ್ಲ, ಮತ್ತು ಸುಪ್ರಸಿದ್ಧ ಲೂನ ಹುಳುವಿನಂತಹ ಪತಂಗಗಳು ತಿನ್ನುವುದೇ ಇಲ್ಲ. ಅವು ರೇಬೀಸ್‌ ಅಥವಾ ಬೇರಾವ ರೋಗಗಳನ್ನೂ ಕೊಂಡೊಯ್ಯುವುದಿಲ್ಲ, ಅವು ಕೊಂಡಿಯಿಂದ ಕುಟುಕುವುದಿಲ್ಲ . . . ವಾಸ್ತವವಾಗಿ, ಚಿಟ್ಟೆಗಳು ದಿನದಲ್ಲಿ ಹಾರಾಡುವ ಪತಂಗಗಳೇ ಎಂಬುದನ್ನು ಅನೇಕ ಜನರು ಗ್ರಹಿಸುವುದಿಲ್ಲ.”

ಪ್ರತಿಯೊಬ್ಬರೂ ಚಿಟ್ಟೆಗಳನ್ನು ಮೆಚ್ಚುಗೆಯಿಂದ ನೋಡುತ್ತಾರಾದರೂ ಪತಂಗದ ಸೌಂದರ್ಯ ಮತ್ತು ವೈವಿಧ್ಯತೆಯನ್ನು ನೋಡಲು ನಿಲ್ಲುವವರು ಕೊಂಚ ಮಂದಿಯೇ. ‘ಸೌಂದರ್ಯವೇ?’ ಎಂದು ನೀವು ಸಂದೇಹಾಸ್ಪದವಾಗಿ ಕೇಳಬಹುದು. ಪತಂಗಗಳು ಕೇವಲ ಸುಂದರವಾದ ಚಿಟ್ಟೆಗಳ ಕಾಂತಿರಹಿತ ಸೋದರಬಂಧುಗಳು ಎಂಬುದಾಗಿ ಕೆಲವರು ನೆನಸಬಹುದಾದರೂ, ಎರಡಕ್ಕೂ ಒಂದೇ ವೈಜ್ಞಾನಿಕ ವರ್ಗೀಕರಣ ಕೊಡಲ್ಪಟ್ಟಿದೆ​—⁠ಲೆಪಡಾಪ್ಟರ, ಅಂದರೆ “ಚೆಕ್ಕೆ ಚೆಕ್ಕೆಯಾದ ರೆಕ್ಕೆಗಳು.” ಈ ರಮ್ಯವಾದ ಸೃಷ್ಟಿಜೀವಿಗಳಲ್ಲಿ ಗಮನಿಸಬಹುದಾದ ವಿಸ್ತಾರವಾದ ವೈವಿಧ್ಯತೆಯು ದಿಗ್ಭ್ರಮೆಗೊಳಿಸುವಂಥದ್ದಾಗಿದೆ. ಲೆಪಡಾಪ್ಟರ ವರ್ಗದಲ್ಲಿ 1,50,000ದಿಂದ 2,00,000 ಜ್ಞಾತ ಜಾತಿಗಳಿವೆ ಎಂಬುದಾಗಿ ದಿ ಎನ್‌ಸೈಕ್ಲೊಪೀಡಿಯ ಆಫ್‌ ಇನ್ಸೆಕ್ಟ್ಸ್‌ ಹೇಳುತ್ತದೆ. ಇವುಗಳಲ್ಲಿ ಕೇವಲ 10 ಪ್ರತಿಶತ ಚಿಟ್ಟೆಗಳಾಗಿದ್ದು, ಉಳಿದವು ಪತಂಗಗಳಾಗಿವೆ!

ಬೇರೆ ಅನೇಕ ಜನರಂತೆಯೇ, ನನ್ನ ಚಳಿಗಾಲದ ಬಟ್ಟೆಗಳನ್ನು ಮುಂದಿನ ಚಳಿಗಾಲಕ್ಕಾಗಿ ಎತ್ತಿಡುವಾಗ ಹಾಗೂ ಬಟ್ಟೆ ಪತಂಗಗಳನ್ನು ವಿಕರ್ಷಿಸಲಿಕ್ಕಾಗಿ ಬಟ್ಟೆಗಳ ಸುತ್ತಲೂ ನುಸಿಗೋಲಿಗಳನ್ನು ಇಡುವಾಗ ಮಾತ್ರವೇ ಹೊರತು ಬೇರೆ ಸಮಯಗಳಲ್ಲಿ ಪತಂಗಗಳ ಕುರಿತು ನಾನು ನೆನಸಿರುವುದು ಅತಿಕಡಿಮೆ. ಪೂರ್ತಿಯಾಗಿ ಬೆಳೆದಿರುವವುಗಳಾಗಿರುವಾಗ, ಪತಂಗಗಳು ವಸ್ತ್ರವನ್ನು ತಿನ್ನುವುದಿಲ್ಲ, ಅವು ಮರಿಹುಳುಗಳಾಗಿ ಇರುವಾಗ ಮಾತ್ರ ಹಾಗೆ ಮಾಡುತ್ತವೆ ಎಂಬುದು ನನಗೆ ಗೊತ್ತಿರಲಿಲ್ಲ. *

ಪತಂಗಗಳೆಡೆಗೆ ಇದ್ದ ನನ್ನ ಹೊರನೋಟವನ್ನು ಯಾವುದು ಬದಲಾಯಿಸಿತು? ಸ್ವಲ್ಪ ಕಾಲದ ಮುಂಚೆ ನಾನು ಮತ್ತು ನನ್ನ ಗಂಡ, ಬಾಬ್‌ ಮತ್ತು ರಾಂಡ ಎಂಬ ನಮ್ಮ ಸ್ನೇಹಿತರಿಗೆ ಭೇಟಿ ನೀಡಿದೆವು. ಪತಂಗಗಳ ಕುರಿತು ಬಾಬ್‌ಗೆ ಸ್ವಲ್ಪ ಗೊತ್ತಿತ್ತು. ಅವನು ನನಗೆ ಒಂದು ಚಿಕ್ಕ ಪೆಟ್ಟಿಗೆಯನ್ನು ತೋರಿಸಿದನು. ಅದರಲ್ಲಿದ್ದದ್ದು ಒಂದು ಸುಂದರವಾದ ಚಿಟ್ಟೆ ಎಂಬುದಾಗಿ ನಾನು ಮೊದಲು ನೆನಸಿದೆ. ಆದರೆ, ಅದು ಸಿಕ್ರೋಪಿಯ ಅಥವಾ ರಾಬಿನ್‌ ಪತಂಗ ಎಂಬುದಾಗಿ ಅವನು ವಿವರಿಸಿದನು. ಇದು ಉತ್ತರ ಅಮೆರಿಕದ ಅತಿದೊಡ್ಡ ಪತಂಗಗಳಲ್ಲಿ ಒಂದಾಗಿದೆ. ಅದರ ರೆಕ್ಕೆಯ ಹರವು 15 ಸೆಂಟಿಮೀಟರ್‌ಗಳಷ್ಟು ಉದ್ದವಾಗಿರಬಲ್ಲದು ಮತ್ತು ಅದಕ್ಕೆ ಒಂದು ವರ್ಷದ ಜೀವನ ಚಕ್ರವಿದೆ. ಪೂರ್ತಿಯಾಗಿ ಬೆಳೆದ ಪತಂಗದೋಪಾದಿ ಅದರ ಜೀವನ 7ರಿಂದ 14 ದಿನಗಳು ಮಾತ್ರ ಎಂಬುದನ್ನು ತಿಳಿದುಕೊಂಡಾಗ ನಾನು ಎಷ್ಟು ಅಚ್ಚರಿಗೊಂಡೆ! ರಮ್ಯವಾದ ಸಿಕ್ರೋಪಿಯದ ನಿಕಟವಾದ ಪರೀಕ್ಷೆಯು ಪತಂಗಗಳ ಕುರಿತಾಗಿ ಸಂಪೂರ್ಣವಾದ ಹೊಸ ದೃಷ್ಟಿಕೋನವನ್ನೇ ನನಗೆ ಕೊಟ್ಟಿತು.

ಬಾಬ್‌ ತನ್ನ ಪೆಟ್ಟಿಗೆಯ ಕೆಳಗಿದ್ದ ಕೆಲವು ಸಣ್ಣದಾದ ಚುಕ್ಕೆಗಳೆಡೆಗೆ ಕೈ ತೋರಿಸಿದನು. “ಈ ಚುಕ್ಕೆಗಳು ಮೊಟ್ಟೆಗಳು, ಮತ್ತು ಇವುಗಳನ್ನು ಪೂರ್ತಿಯಾಗಿ ಬೆಳೆಸಲು ನಾನು ನಿರೀಕ್ಷಿಸುತ್ತೇನೆ” ಎಂದು ಬಾಬ್‌ ವಿವರಿಸಿದನು. ಪತಂಗವನ್ನು ಬೆಳೆಸುವುದೋ? ಈ ವಿಷಯದ ಕುರಿತು ನನ್ನ ಕುತೂಹಲವು ಕೆರಳಿಸಲ್ಪಟ್ಟಿತು. ಆದರೆ, ಈ ಯೋಜನೆಯನ್ನು ಪೂರೈಸುವುದು ಅಷ್ಟು ಸುಲಭವಾಗಿರಲಿಲ್ಲ. ಎರಡು ವಾರಗಳ ವರೆಗೆ ಬಾಬ್‌ ಆ ಮೊಟ್ಟೆಗಳನ್ನು ಮರಿಮಾಡುವ ಪ್ರಯತ್ನದಲ್ಲಿ ಅಸಫಲನಾದನು. ನಂತರ ಅವುಗಳನ್ನು ನೀರಿನಿಂದ ಮಂಜುಗವಿಸಲು ತೀರ್ಮಾನಿಸಿದನು. ಮಂಜುಗವಿಸಿದ ಒಂದು ವಾರದ ನಂತರ, 29 ಮೊಟ್ಟೆಗಳಲ್ಲಿ 26 ಮೊಟ್ಟೆಗಳು ಒಂದೇ ದಿನದಲ್ಲಿ ಒಡೆದವು. ತದನಂತರ ಬಾಬ್‌, ಸೊಳ್ಳೆಯ ಗಾತ್ರದಲ್ಲಿದ್ದ ನವಿರಾದ ಪ್ರತಿಯೊಂದು ಲಾರ್ವಗಳು ಹೊರಗೆ ಹರಿದಾಡಿಕೊಂಡು ಹೋಗದಿರುವಂತೆ ಅವುಗಳನ್ನು ಗೋಳಾಕಾರದ ಶಾಖರೋಧಕ ಪಾತ್ರೆಯಲ್ಲಿಟ್ಟನು.

ಹೊರಬರುತ್ತಿದ್ದ ಲಾರ್ವಗಳು ತಿಂದ ಮೊದಲ ಊಟ ತಮ್ಮ ಸ್ವಂತ ಮೊಟ್ಟೆಗಳ ಚಿಪ್ಪುಗಳೇ. ಅದರ ನಂತರ, ಬಾಬ್‌ ಆಹಾರವನ್ನು ಒದಗಿಸಬೇಕಾಗಿತ್ತು. ಇದು ಸ್ವಲ್ಪ ಮಟ್ಟಿಗೆ ಒಂದು ಪಂಥಾಹ್ವಾನವಾಗಿತ್ತು. ಸ್ವಲ್ಪ ಸಂಶೋಧನೆಯನ್ನು ಮಾಡಿದ ಬಳಿಕ, ಅವನು ಅವುಗಳಿಗೆ ಮೇಪಲ್‌ ಎಲೆಗಳನ್ನು ಉಣಿಸಲು ಪ್ರಯತ್ನಿಸಿದನು. ಲಾರ್ವಗಳು ಎಲೆಗಳ ಮೇಲೆ ಹರಿದುಬಂದರೂ ಅವುಗಳನ್ನು ತಿನ್ನಲಿಲ್ಲ. ಆದರೆ, ಬಾಬ್‌ ಅವುಗಳಿಗೆ ಚೆರಿ ಮತ್ತು ಬರ್ಚ್‌ಮರದ ಎಲೆಗಳನ್ನು ನೀಡಿದಾಗ, ಅವು ಅವುಗಳನ್ನು ಕಷ್ಟವಿಲ್ಲದೆ ತಿಂದುಬಿಟ್ಟವು.

ಚಿಕ್ಕದಾದ ಲಾರ್ವಗಳು ಮರಿಹುಳುಗಳಾಗಿ ಬೆಳೆದಾಗ, ಬಾಬ್‌ ಅವುಗಳನ್ನು ಜಾಲರಿಯ ಮುಚ್ಚಳವಿದ್ದ ಗಾಜು ಪೆಟ್ಟಿಗೆ (ಟೆರಾರಿಯಮ್‌)ಗೆ ಸ್ಥಳಾಂತರಿಸಿದನು. ಗಾಜು ಪೆಟ್ಟಿಗೆಯು ಮರಿಹುಳುಗಳಿಗೆ ಮತ್ತು ಎಲೆಗಳಿಗೆ ಬೇಕಾದ ಸರಿಯಾದ ಸಮತೂಕವುಳ್ಳ ತೇವವನ್ನು ಒದಗಿಸಿತು. ಮರಿಹುಳುಗಳನ್ನು ತಡೆದುಕೊಳ್ಳಲು ಕೂಡ ಇದು ಉಪಯುಕ್ತವಾಗಿತ್ತು, ಏಕೆಂದರೆ ಅವು ಹರಿದಾಡಲು ಶಕ್ತವಾದ ಕೂಡಲೇ ಸುತ್ತಾಡುವ ಆಸೆಯನ್ನು ಬೆಳೆಸಿಕೊಂಡವು.

ಹಸಿದಿರುವ 26 ಮರಿಹುಳುಗಳಿಗೆ ಆಹಾರವನ್ನು ಒದಗಿಸುವುದು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಕೆಲಸವನ್ನು ಅಗತ್ಯಪಡಿಸಿತು. ಪ್ರತಿಸಾರಿ ಬಾಬ್‌ ಗಾಜು ಪೆಟ್ಟಿಗೆಯನ್ನು ಎಲೆಗಳಿಂದ ತುಂಬಿಸಿದಾಗ, ಮರಿಹುಳುಗಳು ಆ ಇಡೀ ಸರಬರಾಯಿಯನ್ನು ಎರಡೇ ದಿನಗಳಲ್ಲಿ ಕಬಳಿಸಿಬಿಡುತ್ತಿದ್ದವು. ಈ ಹಂತದಲ್ಲಿ ಬೆಳೆಯುತ್ತಿದ್ದ ಮರಿತಂಡವನ್ನು ನೋಡಿಕೊಳ್ಳುವುದರಲ್ಲಿ ಮತ್ತು ಪೋಷಿಸುವುದರಲ್ಲಿ ಭಾಗವಹಿಸಲು, ಅವನು ತನ್ನ ತಂಗಿ ಮತ್ತು ಇಬ್ಬರು ಎಳೆಯ ಮಿತ್ರರ, ಒಬ್ಬ ಹುಡುಗ ಮತ್ತು ಒಬ್ಬ ಹುಡುಗಿಯ ಸಹಾಯವನ್ನು ಪಡೆದುಕೊಂಡನು.

ಮರಿಹುಳು ದೊಡ್ಡ ಪ್ರಮಾಣದಲ್ಲಿ ಆಹಾರವನ್ನು ತೆಗೆದುಕೊಳ್ಳುವುದು, ಕೇವಲ ಅವುಗಳ ಲಾರ್ವ ಹಂತದ ಬೆಳವಣಿಗೆಗಾಗಿ ಮಾತ್ರವಲ್ಲದೆ, ಅವು ಪೂರ್ತಿಯಾಗಿ ಬೆಳೆದವುಗಳಾಗುವಾಗ ಪೌಷ್ಟಿಕತೆಗಾಗಿ ಕೂಡ ಅತ್ಯಾವಶ್ಯಕ. ಏಕೆಂದರೆ, ಪೂರ್ತಿಯಾಗಿ ಬೆಳೆದ ಸಿಕ್ರೋಪಿಯ ಪತಂಗಕ್ಕೆ ಕೆಲಸಮಾಡುವಂತಹ ಬಾಯಿಯ ಭಾಗಗಳು ಇರುವುದಿಲ್ಲ, ಮತ್ತು ಅದು ತಿನ್ನುವುದೇ ಇಲ್ಲ! ಪೂರ್ತಿಯಾಗಿ ಬೆಳೆದಿರುವ ಪತಂಗದೋಪಾದಿ ಅದರ ಸಂಕ್ಷಿಪ್ತವಾದ ಜೀವನದ ಸಮಯದಲ್ಲಿ ಪೋಷಣೆಗಾಗಿ, ಅದು ಲಾರ್ವ ಹಂತದಲ್ಲಿದ್ದಾಗ ತೆಗೆದುಕೊಂಡ ಆಹಾರದ ಮೇಲೆ ಸಂಪೂರ್ಣವಾಗಿ ಆತುಕೊಳ್ಳುತ್ತದೆ.

ಹೊಸ ಪೊರೆಗಳನ್ನು ಪಡೆದುಕೊಳ್ಳುವುದು

ಮರಿಹುಳುಗಳು ಬೆಳೆಯುತ್ತಿರುವಾಗ, ಅವು ಅನೇಕಬಾರಿ ಪೊರೆಯನ್ನು ಕಳಚಿದವು, ಅಥವಾ ಅವುಗಳಿಗೆ ಪೊರೆಯುರ್ಚುವಿಕೆಯಾಯಿತು. ಮರಿಹುಳುವಿನ ಪೊರೆಯುರ್ಚುವಿಕೆಗಳ ನಡುವಿನ ಜೀವಿತದ ಹಂತಗಳನ್ನು ಅವಾಂತರ ರೂಪಗಳು ಎಂದು ಕರೆಯಲಾಗುತ್ತದೆ.

ಸಿಕ್ರೋಪಿಯ ಮರಿಹುಳುವಿನ ಪೊರೆ ಬೆಳೆಯುವುದಿಲ್ಲ. ಆದುದರಿಂದ ಮರಿಹುಳು ದೊಡ್ಡದಾಗಿ, ಅದರ ಪೊರೆ ಪೂರ್ತಿಯಾಗಿ ಹಿಗ್ಗಿಹೋಗಿರುವಾಗ ಅದು ಪೊರೆಬಿಡುವ ಸಮಯವಾಗಿದೆ. ಇದು ಯಾವಾಗ ಸಂಭವಿಸಲಿದೆಯೆಂದು ಬಾಬ್‌ ಹೇಳಶಕ್ತನು, ಏಕೆಂದರೆ ಆಗ ಮರಿಹುಳುಗಳು ತಿನ್ನುವುದನ್ನು ನಿಲ್ಲಿಸುತ್ತವೆ. ಮರಿಹುಳುಗಳು ರೇಷ್ಮೆಯ ಫಲಕವನ್ನು ಹೆಣೆದು ಅದಕ್ಕೆ ತಮ್ಮನ್ನು ಅಂಟಿಸಿಕೊಂಡ ಬಳಿಕ, ಅವುಗಳ ಹೊಸ ಪೊರೆ ಬೆಳೆಯುತ್ತಿರುವಾಗ ಅನೇಕ ದಿನಗಳ ವರೆಗೆ ನಿಶ್ಚಲವಾಗಿದ್ದವು. ಹೊಸ ಪೊರೆ ತಯಾರಾದ ತಕ್ಷಣ, ಮರಿಹುಳುಗಳು ರೇಷ್ಮೆ ಫಲಕಕ್ಕೆ ಅಂಟಿಕೊಂಡಿದ್ದ ತಮ್ಮ ಹಳೇ ಪೊರೆಗಳನ್ನು ಹಾಗೆಯೇ ಬಿಟ್ಟು ಅವುಗಳಿಂದ ಹೊರಬಂದವು. ಮರಿಹುಳುಗಳ ಕಡೆಯ ಅವಾಂತರ ರೂಪದಲ್ಲಿ, ಅವು ಎಷ್ಟು ದೊಡ್ಡದಾಗಿ ಬೆಳೆದಿದ್ದವು ಎಂಬುದನ್ನು ನೋಡಿ ನಾನು ವಿಸ್ಮಯಗೊಂಡೆ. ಅದು ಹತ್ತಿರಹತ್ತಿರ 12 ಸೆಂಟಿಮೀಟರ್‌ಗಳಷ್ಟು ಉದ್ದವಾಗಿದ್ದು ಅದರ ಸುತ್ತಳತೆ ನನ್ನ ತೋರುಬೆರಳಿಗಿಂತ ದೊಡ್ಡದಾಗಿತ್ತು.

ರೇಷ್ಮೆಗೂಡನ್ನು ಹೆಣೆಯುವುದು

ಕಡೆಯ ಅವಾಂತರ ರೂಪದ ನಂತರ, ಪ್ರತಿಯೊಂದು ಮರಿಹುಳು ಒಂದು ರೇಷ್ಮೆಗೂಡನ್ನು, ಅಂದರೆ ಒಂದು ಕಡ್ಡಿಗೆ ಅಂಟಿಸಲ್ಪಟ್ಟಿರುವ ಬೂದುಬಣ್ಣದ ನೂಲಿನ ದೊಡ್ಡ ರಾಶಿಯನ್ನು ಹೆಣೆಯಿತು. ಸಿಕ್ರೋಪಿಯಗಳು ಎರಡು ವಿಧವಾದ ರೇಷ್ಮೆಗೂಡುಗಳನ್ನು ಮಾಡುತ್ತವೆ. ಒಂದು ಗೂಡು ದುಂಡನೆಯ ಬುಡವುಳ್ಳದ್ದಾಗಿದ್ದು, ತುದಿಯು ಚೂಪಾದ ಕತ್ತುಳ್ಳದ್ದಾಗಿದ್ದು ದೊಡ್ಡದಾದ ಸಡಿಲ ಚೀಲದಂತಿರುವ ರಚನೆಯನ್ನು ಹೊಂದಿರುತ್ತದೆ. ಎರಡನೇ ಗೂಡು, ಚಿಕ್ಕದಾದ ಮತ್ತು ಬಿಗಿಯಾಗಿ ಹೆಣೆಯಲ್ಪಟ್ಟ ಹಾಗೂ ಕ್ರಮೇಣ ಕಿರಿದಾಗಿ ಹೋಗುವ ಆಯಾಕಾರದ ರಚನೆಯಾಗಿದೆ. ಎರಡು ವಿಧಗಳ ಗೂಡಿನಲ್ಲಿಯೂ ಗಟ್ಟಿಯಾಗಿ ಹೆಣೆಯಲ್ಪಟ್ಟ ಒಳಗಿನ ರೇಷ್ಮೆಗೂಡು ಇದೆ. ಸಿಕ್ರೋಪಿಯ ರೇಷ್ಮೆಗೂಡುಗಳು ಸಾಧಾರಣವಾಗಿ ಕೆಂಪು ಮಿಶ್ರಿತ ಕಂದು, ನಸುಹಸುರು, ಅಥವಾ ಬೂದುಬಣ್ಣಗಳಲ್ಲಿವೆ. ಉತ್ತರ ಅಮೆರಿಕದ ಬೇರೆ ಜಾತಿಗಳ ರೇಷ್ಮೆಗೂಡುಗಳೊಂದಿಗೆ ಹೋಲಿಸುವಾಗ, ಸಿಕ್ರೋಪಿಯ ಪತಂಗಗಳ ರೇಷ್ಮೆಗೂಡುಗಳು ಬಹುದೊಡ್ಡದಾಗಿವೆ​—⁠ಹತ್ತು ಸೆಂಟಿಮೀಟರ್‌ಗಳಷ್ಟು ಉದ್ದ ಮತ್ತು ಐದರಿಂದ ಆರು ಸೆಂಟಿಮೀಟರ್‌ಗಳಷ್ಟು ಅಗಲ. ಹಾಗೂ ಈ ಅದ್ಭುತಕರವಾದ ಆಕಾರಗಳು ತನ್ನಲ್ಲಿರುವ ನಿವಾಸಿಗಳನ್ನು ಮೈನಸ್‌ 34 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣತೆಯಲ್ಲಿ ಸಂರಕ್ಷಿಸಲು ಶಕ್ತವಾಗಿವೆ.

ಮರಿಹುಳುಗಳು ತಮ್ಮ ರೇಷ್ಮೆಗೂಡುಗಳಲ್ಲಿ ನೆಲೆಸಿದ ನಂತರ, ನಾವು ತಾಳ್ಮೆಯಿಂದ ಕಾಯುವುದನ್ನು ಬಿಟ್ಟರೆ ಮಾಡಲು ಬೇರೇನೂ ಇರಲಿಲ್ಲ. ಮುಂದಿನ ವಸಂತಕಾಲದಲ್ಲಿ, ಅಂದರೆ ಬಾಬ್‌ ಆ ಪೂರ್ತಿಯಾಗಿ ಬೆಳೆದ ಪತಂಗವನ್ನು ಮೊದಲು ಪಡೆದುಕೊಂಡ ಸುಮಾರು ಒಂದು ವರ್ಷದ ನಂತರ, ಕೋಶ ಒಡೆತವು ನಡೆಯಿತು. ರೇಷ್ಮೆಗೂಡುಗಳನ್ನು ಹಿಡಿದುಕೊಂಡಿರುವ ಕಡ್ಡಿಗಳನ್ನು ನೇರವಾಗಿ ನಿಲ್ಲಿಸಲಿಕ್ಕಾಗಿ ಬಾಬ್‌ ಅವುಗಳನ್ನು ಒಂದು ಪ್ಲಾಸ್ಟಿಕ್‌ ಫೋಮ್‌ ತುಂಡಿನಲ್ಲಿ ಇಟ್ಟನು. ಶೀಘ್ರವೇ, ತಾಳ್ಮೆ ಮತ್ತು ಕಠಿನ ಕೆಲಸವನ್ನು ಸಾರ್ಥಕ ಮಾಡುತ್ತಾ, ಒಂದನ್ನು ಬಿಟ್ಟು ಎಲ್ಲಾ ಸಿಕ್ರೋಪಿಯಗಳು ಹೊರಬಂದವು.

ಪತಂಗಗಳೆಡೆಗೆ ಹೆಚ್ಚಿದ ಗಣ್ಯತೆ

ಸಿಕ್ರೋಪಿಯದ ಗಮನಾರ್ಹವಾದ ಜೀವನ ಚಕ್ರವನ್ನು ಕಣ್ಣಾರೆ ನೋಡಿದ್ದು, ದೀಪಗಳ ಸುತ್ತಲೂ ಪಟಪಟನೆ ಹಾರುತ್ತಿರುವ ಮತ್ತು ಕಟ್ಟಡಗಳ ಮೇಲೆ ನಿಶ್ಚಲವಾಗಿರುವ ಪತಂಗಗಳನ್ನು ನಾನು ಹೆಚ್ಚು ಗಮನಕೊಟ್ಟು ನೋಡುವಂತೆ ಮಾಡಿದೆ. ನನ್ನ ಅನುಭವವು, ಮರುಳುಗೊಳಿಸುವಂಥ ಈ ಸೃಷ್ಟಿಜೀವಿಗಳ ಬಗ್ಗೆ ಹೆಚ್ಚಿನದ್ದನ್ನು ಕಂಡುಹಿಡಿಯುವಂತೆಯೂ ಪ್ರೇರೇಪಿಸಿದೆ. ಉದಾಹರಣೆಗಾಗಿ, ಪತಂಗಗಳು ಮತ್ತು ಚಿಟ್ಟೆಗಳು ಅಸಾಮಾನ್ಯ ಹಾರುಗಗಳಾಗಿವೆ ಎಂಬುದನ್ನು ನಾನು ಕಲಿತುಕೊಂಡೆ. ಕೆಲವು ಬಗೆಯ ಪತಂಗಗಳು ಬಹಳಷ್ಟು ದೂರ ವಲಸೆಹೋಗುತ್ತವೆ. ಸಣ್ಣದಾದ ಡೈಮಂಡ್‌ಬ್ಯಾಕ್‌ ಪತಂಗಕ್ಕೆ ಕೇವಲ 2.5 ಸೆಂಟಿಮೀಟರ್‌ಗಳಷ್ಟು ರೆಕ್ಕೆಯ ಹರವಿದ್ದರೂ, ಅದು ಆಗಾಗ ಯೂರೋಪ್‌ ಮತ್ತು ಬ್ರಿಟನ್‌ನ ಮಧ್ಯೆ ಗೊಂದಲಮಯವಾದ ಉತ್ತರ ಸಮುದ್ರದ ಮಾರ್ಗವಾಗಿ ಹಾರುತ್ತಿರುತ್ತದೆ. ಮತ್ತು ಹಮಿಂಗ್‌ಬರ್ಡ್‌ ಎಂಬ ಪಕ್ಷಿಯು ಹೂಗಳ ಮೇಲೆ ಹಾರಾಡುತ್ತ ನಿಲ್ಲುವಂತೆಯೇ, ಸ್ಪಿಂಕ್ಸ್‌ ಪತಂಗವು ಅಥವಾ ಹಾಕ್‌ ಪತಂಗವು ಹಾರಾಡುತ್ತ ನಿಲ್ಲುತ್ತದೆ.

ಸಿಕ್ರೋಪಿಯದ ಜೀವನ ಚಕ್ರವನ್ನು ವೀಕ್ಷಿಸಿದ ಸ್ವಲ್ಪ ಸಮಯದ ನಂತರ, ದೀಪವೊಂದರ ಕೆಳಗೆ ನಿಶ್ಚಲವಾಗಿದ್ದ ಒಂದು ಪತಂಗವನ್ನು ನಾನು ಕಂಡೆ. ಪತಂಗದ ರೆಕ್ಕೆಗಳ ಮೇಲಿರುವ ಚೆಕ್ಕೆಗಳು ಅತಿ ಮೃದುವಾಗಿರುವ ಕಾರಣ, ನೀವು ಎಂದಿಗೂ ಅದನ್ನು ಅದರ ರೆಕ್ಕೆಗಳಿಂದ ಎತ್ತಬಾರದು. ಆದರೆ, ನಿಮ್ಮ ಬಿಚ್ಚಿದ ಕೈಯನ್ನು ಪತಂಗದ ಮುಂದೆ ಇಡುವುದಾದರೆ, ಅದು ನಿಮ್ಮ ಬೆರಳಿನ ಮೇಲೆ ಬರಬಹುದು. ನಾನು ಇದನ್ನು ಪ್ರಯತ್ನಿಸಿದಾಗ, ಈ ರಮ್ಯವಾದ ಸೃಷ್ಟಿಜೀವಿಯು ನನ್ನ ನಡುಬೆರಳಿನ ಮೇಲೆ ಬರುವ ಮೂಲಕ ನನ್ನನ್ನು ಸಂತೋಷಪಡಿಸಿತು. ತದನಂತರ, ಅದು ಮರಗಳ ಮೇಲಿಂದ ಹಾರಿಹೋಯಿತು. ಅದು ಹಾರಿಹೋಗುತ್ತಿರುವಾಗ, ಅದು ಎಷ್ಟರ ಮಟ್ಟಿಗೆ ಚಿಟ್ಟೆಯಂತೆಯೇ ಕಾಣುತ್ತಿತ್ತು ಎಂಬುದರ ಕುರಿತು ನಾನು ಆಲೋಚಿಸಿದೆ. ಮುಂದಿನ ಬಾರಿ ನೀವು ಒಂದು ಚಿಟ್ಟೆಯನ್ನು ನೋಡುತ್ತಿದ್ದೀರಿ ಎಂಬುದಾಗಿ ನಿಮಗೆ ಅನಿಸುವಾಗ, ಎರಡನೇ ಬಾರಿ ನೋಡಿ. ಅದು ವಾಸ್ತವದಲ್ಲಿ ಒಂದು ಸುಂದರವಾದ, ನಿರಪಾಯಕಾರಿ ಪತಂಗವಾಗಿರಬಹುದು.​—⁠ದತ್ತ ಲೇಖನ.(g01 6/8)

[ಪಾದಟಿಪ್ಪಣಿ]

^ ಕೆಲವು ಪತಂಗದ ಮರಿಗಳು ಬೆಳೆಗೆ ಗಮನಾರ್ಹವಾದಷ್ಟು ಹಾನಿಯನ್ನು ಉಂಟುಮಾಡುತ್ತವೆ.

[ಪುಟ 18, 19ರಲ್ಲಿರುವ ಚಿತ್ರಗಳು]

1. ರಾಬಿನ್‌ ಪತಂಗ (ಸಿಕ್ರೋಪಿಯ)

2. ಪಾಲಿಫೀಮಸ್‌ ಪತಂಗ

3. ಸನ್‌ಸೆಟ್‌ ಪತಂಗ

4. ಆ್ಯಟ್ಲಸ್‌ ಪತಂಗ

[ಕೃಪೆ]

Natural Selection© - Bill Welch

A. Kerstitch

[ಪುಟ 20ರಲ್ಲಿರುವ ಚಿತ್ರಗಳು]

ಸಿಕ್ರೋಪಿಯ ಪತಂಗದ ಬೆಳವಣಿಗೆಯಲ್ಲಿ ಒಳಗೂಡಿರುವ ಹಂತಗಳು: 1. ಮೊಟ್ಟೆಗಳು

2. ಮರಿಹುಳು

3. ಪೂರ್ತಿಯಾಗಿ ಬೆಳೆದ ಪತಂಗ

[ಕೃಪೆ]

Natural Selection© - Bill Welch