ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹವಾಮಾನ ಮುನ್‌ಸೂಚನೆಯ ಕಲೆ ಮತ್ತು ವಿಜ್ಞಾನ

ಹವಾಮಾನ ಮುನ್‌ಸೂಚನೆಯ ಕಲೆ ಮತ್ತು ವಿಜ್ಞಾನ

ಹವಾಮಾನ ಮುನ್‌ಸೂಚನೆಯ ಕಲೆ ಮತ್ತು ವಿಜ್ಞಾನ

ಬ್ರಿಟನ್‌ನ ಎಚ್ಚರ! ಲೇಖಕನಿಂದ

ಇಸವಿ 1987, ಅಕ್ಟೋಬರ್‌ 15ರಂದು, ಒಬ್ಬ ಮಹಿಳೆಯು ಬ್ರಿಟನ್‌ನ ಒಂದು ಟಿವಿ ಕೇಂದ್ರಕ್ಕೆ ಫೋನ್‌ಮಾಡಿ, ಒಂದು ಚಂಡಮಾರುತವು ಬರುತ್ತಿದೆ ಎಂಬುದನ್ನು ತಾನು ಕೇಳಿಸಿಕೊಂಡಿದ್ದೇನೆಂದು ವರದಿಸಿದಳು. ಹವಾಮಾನ ಮುನ್‌ಸೂಚಕನು ತನ್ನ ಕೇಳುಗರಿಗೆ ಪುನರಾಶ್ವಾಸನೆಯಿಂದ ಹೇಳಿದ್ದು: “ಚಿಂತಿಸಬೇಡಿ. ಅದು ಬರುತ್ತಿಲ್ಲ.” ಆದರೆ ಆ ರಾತ್ರಿ, 150 ಲಕ್ಷ ಮರಗಳನ್ನು ಉರುಳಿಸಿದ, 19 ಮರಣಗಳನ್ನು ಉಂಟುಮಾಡಿದ, ಮತ್ತು 1.4 ಶತಕೋಟಿ ಡಾಲರುಗಳ ನಷ್ಟಕ್ಕೆ ಕಾರಣವಾದ ಒಂದು ಚಂಡಮಾರುತವು ದಕ್ಷಿಣ ಇಂಗ್ಲೆಂಡನ್ನು ಅಪ್ಪಳಿಸಿತು.

ಪ್ರತಿ ಬೆಳಗ್ಗೆ, ನಮ್ಮಲ್ಲಿ ಕೋಟ್ಯಂತರ ಮಂದಿ ನಮ್ಮ ರೇಡಿಯೋ ಮತ್ತು ಟೆಲಿವಿಷನ್‌ಗಳ ಮೂಲಕ ಹವಾಮಾನ ಮುನ್‌ಸೂಚನೆಯನ್ನು ಕೇಳಿಸಿಕೊಳ್ಳುತ್ತೇವೆ. ಮೋಡಕವಿದ ಆಕಾಶಗಳು ಮಳೆಯನ್ನು ತರುವವೋ? ದಿನದ ಆರಂಭದಲ್ಲಿದ್ದ ಸೂರ್ಯನ ಪ್ರಕಾಶವು ಇಡೀ ದಿನ ಇರುವುದೋ? ಹೆಚ್ಚುತ್ತಿರುವ ತಾಪಮಾನವು ಹಿಮ ಮತ್ತು ನೀರ್ಗಲ್ಲನ್ನು ಕರಗಿಸುವುದೋ? ಮುನ್‌ಸೂಚನೆಯನ್ನು ಕೇಳಿಸಿಕೊಂಡ ನಂತರವೇ, ಯಾವ ಬಟ್ಟೆಯನ್ನು ಧರಿಸಬೇಕು ಮತ್ತು ಕೊಡೆಯನ್ನು ಕೊಂಡೊಯ್ಯಬೇಕೋ ಬೇಡವೋ ಎಂಬುದನ್ನು ನಾವು ತೀರ್ಮಾನಿಸುತ್ತೇವೆ.

ಆದರೂ, ಆಗಿಂದಾಗ್ಗೆ ಹವಾಮಾನ ಮುನ್‌ಸೂಚನೆಗಳು ಪ್ರತ್ಯಕ್ಷವಾದ ರೀತಿಯಲ್ಲಿ ಅನಿಷ್ಕೃಷ್ಟವಾಗಿರುತ್ತವೆ. ಹೌದು, ಇತ್ತೀಚಿನ ವರ್ಷಗಳಲ್ಲಿ ಮುನ್‌ಸೂಚನೆಗಳ ನಿಷ್ಕೃಷ್ಟತೆಯು ಗಮನಾರ್ಹವಾಗಿ ಹೆಚ್ಚಿರುವುದಾದರೂ, ಹವಾಮಾನವನ್ನು ಮುಂತಿಳಿಸುವುದು ಕಲೆ ಮತ್ತು ವಿಜ್ಞಾನದ ಮರುಳುಗೊಳಿಸುವಂಥ ಮಿಶ್ರಣವಾಗಿದ್ದು, ತಪ್ಪಾಗಲು ಆಸ್ಪದವಿಲ್ಲ ಎಂದು ಹೇಳಲಾಗದು. ಹವಾಮಾನವನ್ನು ಮುಂತಿಳಿಸುವುದರಲ್ಲಿ ಏನು ಒಳಗೂಡಿದೆ, ಮತ್ತು ಹವಾಮಾನದ ಮುನ್‌ಸೂಚನೆಗಳು ಎಷ್ಟು ವಿಶ್ವಾಸಾರ್ಹವಾಗಿವೆ? ಇದಕ್ಕೆ ಉತ್ತರವಾಗಿ, ಮೊದಲು ಹವಾಮಾನ ಮುನ್‌ಸೂಚನೆ ಹೇಗೆ ವಿಕಾಸಗೊಂಡಿತು ಎಂಬುದನ್ನು ಪರಿಶೋಧಿಸಿ ನೋಡೋಣ.

ಹವಾಮಾನವನ್ನು ಅಳೆಯುವುದು

ಬೈಬಲ್‌ ಕಾಲಗಳಲ್ಲಿ ಹವಾಮಾನವನ್ನು ಮುನ್‌ಸೂಚಿಸುವುದು ಬರೀ ಕಣ್ಣಿನಿಂದ ಮಾಡಲ್ಪಡುವ ವೀಕ್ಷಣೆಗಳ ಮೇಲೆ ಪ್ರಧಾನವಾಗಿ ಆಧಾರಿತವಾಗಿತ್ತು. (ಮತ್ತಾಯ 16:2, 3) ಇಂದು ಪವನಶಾಸ್ತ್ರಜ್ಞರ ಬಳಿ ಅನೇಕಾನೇಕ ಜಟಿಲ ಸಾಧನಗಳಿವೆ. ಇವುಗಳಲ್ಲಿ ಅತಿ ಮೂಲಭೂತವಾದ ಸಾಧನಗಳು ವಾಯುಭಾರ, ಉಷ್ಣತೆ, ತೇವಾಂಶ, ಮತ್ತು ಗಾಳಿಯನ್ನು ಅಳೆಯುತ್ತವೆ.

ಇಸವಿ 1643ರಲ್ಲಿ, ಇಟ್ಯಾಲಿಯನ್‌ ಭೌತಶಾಸ್ತ್ರಜ್ಞ ಎವಾಂಜೆಲೀಸ್ಟಾ ಟೊರಿಸೆಲಿಯು ವಾಯುಭಾರವನ್ನು ಅಳೆಯುವ ಒಂದು ಸಾಧಾರಣ ಉಪಕರಣವಾದ ವಾಯುಭಾರಮಾಪಕವನ್ನು ಕಂಡುಹಿಡಿದನು. ಹವಾಮಾನ ಬದಲಾಗುವಾಗ ವಾಯುಭಾರದಲ್ಲಿ ಏರಿಳಿತವಾಗುತ್ತದೆ ಎಂಬುದು ಶೀಘ್ರವೇ ಗಮನಿಸಲ್ಪಟ್ಟಿತು, ಮತ್ತು ಭಾರದಲ್ಲಿ ಇಳಿತವು ಅನೇಕವೇಳೆ ಒಂದು ಚಂಡಮಾರುತವನ್ನು ಸೂಚಿಸುತ್ತಿತ್ತು. ವಾಯುವಿನಲ್ಲಿರುವ ತೇವಾಂಶವನ್ನು ಅಳೆಯುವಂಥ ಆರ್ದ್ರಮಾಪಕವು 1664ರಲ್ಲಿ ರೂಪಿಸಲ್ಪಟ್ಟಿತು. ಮತ್ತು 1714ರಲ್ಲಿ, ಜರ್ಮನ್‌ ಭೌತಶಾಸ್ತ್ರಜ್ಞ ದಾನ್‌ಯೆಲ್‌ ಫೆರನ್‌ಹೈಟ್‌ ಪಾದರಸ ಶಾಖಮಾಪಕವನ್ನು ರೂಪಿಸಿದನು. ಈಗ ಹವಾಮಾನವನ್ನು ನಿಷ್ಕೃಷ್ಟವಾಗಿ ಅಳೆಯಲು ಸಾಧ್ಯವಿತ್ತು.

ಸುಮಾರು 1765ರಲ್ಲಿ, ಫ್ರೆಂಚ್‌ ವಿಜ್ಞಾನಿಯಾದ ಆಂಟ್ವಾಂ-ಲೊರಾಂ ಲಾವಾಸೀಯೆ, ವಾಯುಭಾರ, ತೇವಾಂಶದ ಪ್ರಮಾಣ, ಮತ್ತು ಗಾಳಿಯ ವೇಗ ಹಾಗೂ ಮಾರ್ಗವನ್ನು ಪ್ರತಿನಿತ್ಯ ಅಳೆಯಬೇಕು ಎಂದು ಸಲಹೆ ನೀಡಿದನು. “ಈ ಎಲ್ಲಾ ಮಾಹಿತಿಯಿಂದ ಹೆಚ್ಚುಕಡಿಮೆ ಎಲ್ಲ ಸಮಯಗಳಲ್ಲಿ ಒಂದು ಅಥವಾ ಎರಡು ದಿನಗಳಿಗೆ ಮುಂಚಿತವಾಗಿ ನ್ಯಾಯಸಮ್ಮತವಾದ ನಿಷ್ಕೃಷ್ಟತೆಯೊಂದಿಗೆ ಹವಾಮಾನವನ್ನು ಮುನ್‌ಸೂಚಿಸಲು ಸಾಧ್ಯವಾಗುವುದು” ಎಂದು ಅವನು ಘೋಷಿಸಿದನು. ಅಸಂತೋಷಕರವಾಗಿ, ಹೀಗೆ ಮಾಡುವುದು ಸುಲಭವಾಗಿರಲಿಲ್ಲ.

ಹವಾಮಾನವನ್ನು ಪತ್ತೆಹಚ್ಚುತ್ತಾ ಹೋಗುವುದು

ಇಸವಿ 1854ರಲ್ಲಿ, ಕ್ರಿಮಿಯದ ಬಾಲಕ್ಲಾವ ಬಂದರಿನಾಚೆಯ ಸಮುದ್ರದಲ್ಲಿ ಬೀಸಿದ ಒಂದು ಪ್ರಚಂಡವಾದ ಚಂಡಮಾರುತದಲ್ಲಿ, ಒಂದು ಫ್ರೆಂಚ್‌ ಯುದ್ಧನೌಕೆ ಮತ್ತು 38 ವ್ಯಾಪಾರಿ ನಾವೆಗಳು ಮುಳುಗಿಹೋದವು. ಪ್ಯಾರಿಸ್‌ ವೀಕ್ಷಣಾಲಯದ ಡೈರಕ್ಟರ್‌ ಉರ್‌ಬಾಂ ಸಾನ್‌ ಸೋಸೆಫ್‌ ಲವೇರ್‌ಯೆ ಇದನ್ನು ತನಿಖೆಮಾಡುವಂತೆ ಫ್ರೆಂಚ್‌ ಅಧಿಕಾರಿಗಳು ಕೇಳಿಕೊಂಡರು. ಪವನಶಾಸ್ತ್ರೀಯ ದಾಖಲೆಗಳನ್ನು ಪರಿಶೀಲಿಸುವ ಮೂಲಕ, ಈ ಚಂಡಮಾರುತವು ಎರಡು ದಿನಗಳಿಗೆ ಮುಂಚಿತವಾಗಿ ರೂಪಗೊಂಡಿತ್ತು ಮತ್ತು ಯೂರೋಪಿನ ವಾಯವ್ಯ ದಿಕ್ಕಿನಿಂದ ಆಗ್ನೇಯ ದಿಕ್ಕಿಗೆ ಬೀಸಿಬಂದಿತ್ತು ಎಂಬುದನ್ನು ಅವನು ಕಂಡುಹಿಡಿದನು. ಚಂಡಮಾರುತಗಳ ಚಲನೆಯನ್ನು ಪತ್ತೆಹಚ್ಚುವ ಸಾಧನವು ಅಸ್ತಿತ್ವದಲ್ಲಿರುತ್ತಿದ್ದಲ್ಲಿ, ಆ ನೌಕೆಗಳಿಗೆ ಮುಂಚಿತವಾಗಿಯೇ ಎಚ್ಚರಿಕೆಯನ್ನು ಕೊಡಬಹುದಾಗಿತ್ತು. ಆದುದರಿಂದ, ಫ್ರಾನ್ಸ್‌ನಲ್ಲಿ ಒಂದು ರಾಷ್ಟ್ರೀಯ ಚಂಡಮಾರುತ-ಎಚ್ಚರಿಕೆ ಸೇವೆಯು ರೂಪುಗೊಂಡಿತು. ಹೀಗೆ ಆಧುನಿಕ ಪವನಶಾಸ್ತ್ರವು ಜನ್ಮತಾಳಿತು.

ಆದರೂ, ಬೇರೆ ಸ್ಥಳಗಳಿಂದ ಹವಾಮಾನ ದತ್ತಾಂಶವನ್ನು ಶೀಘ್ರವಾಗಿ ಪಡೆದುಕೊಳ್ಳುವ ವಿಧಾನವು ವಿಜ್ಞಾನಿಗಳಿಗೆ ಬೇಕಾಗಿತ್ತು. ಸ್ವಲ್ಪ ಸಮಯದ ಹಿಂದೆ ಸಾಮ್‌ಯೆಲ್‌ ಮಾರ್ಸ್‌ನಿಂದ ಕಂಡುಹಿಡಿಯಲ್ಪಟ್ಟ ಇಲೆಕ್ಟ್ರಿಕ್‌ ಟೆಲಿಗ್ರಾಫ್‌ ಇದಕ್ಕೆ ಬೇಕಾಗಿದ್ದ ಸೂಕ್ತ ವಿಧಾನವಾಗಿತ್ತು. ಇದರಿಂದಾಗಿ 1863ರಲ್ಲಿ ಪ್ಯಾರಿಸ್‌ ವೀಕ್ಷಣಾಲಯವು ಮೊದಲ ಹವಾಮಾನದ ನಕ್ಷೆಗಳನ್ನು ಆಧುನಿಕ ಶೈಲಿಯಲ್ಲಿ ಪ್ರಕಟಿಸುವುದನ್ನು ಆರಂಭಿಸಲು ಸಾಧ್ಯವಾಯಿತು. 1872ರಷ್ಟಕ್ಕೆ, ಬ್ರಿಟನ್‌ನ ಪವನಶಾಸ್ತ್ರದ ಕಚೇರಿಯು ಸಹ ಇದನ್ನೇ ಮಾಡುತ್ತಿತ್ತು.

ಪವನಶಾಸ್ತ್ರಜ್ಞರು ದತ್ತಾಂಶವನ್ನು ಎಷ್ಟು ಹೆಚ್ಚು ಪಡೆದುಕೊಂಡರೋ, ಅಷ್ಟು ಹೆಚ್ಚಾಗಿ ಹವಾಮಾನದ ವಿಪರೀತ ಜಟಿಲತೆಯು ಅವರ ಅರಿವಿಗೆ ಬಂತು. ಹವಾಮಾನದ ನಕ್ಷೆಗಳು ಹೆಚ್ಚಿನ ಮಾಹಿತಿಯನ್ನು ನೀಡುವಂತೆ ಹೊಸ ರೇಖಾಚಿತ್ರ ಸಾಧನಗಳು ರೂಪಿಸಲ್ಪಟ್ಟವು. ಉದಾಹರಣೆಗೆ, ಸಮವಾಯುಭಾರ ರೇಖೆಗಳು, ಒಂದೇ ಸಮವಾಗಿರುವ ವಾಯುಭಾರಮಾಪಕ ಒತ್ತಡವುಳ್ಳ ಬಿಂದುಗಳನ್ನು ಜೋಡಿಸಲಿಕ್ಕಾಗಿ ಬರೆಯಲ್ಪಡುವ ರೇಖೆಗಳಾಗಿವೆ. ಸಮಾನವಾದ ಉಷ್ಣತೆಯಿರುವ ಸ್ಥಳಗಳನ್ನು ಸಮತಾಪಿರೇಖೆಗಳು ಜೋಡಿಸುತ್ತವೆ. ಹವಾಮಾನದ ನಕ್ಷೆಗಳು ಬಿಸಿ ಮತ್ತು ಶೀತ ವಾಯುಪುಂಜಗಳ ಕೂಡುವಿಕೆಯನ್ನು ಚಿತ್ರಿಸುವ ರೇಖೆಗಳೊಂದಿಗೆ, ವಾಯುವಿನ ದಿಕ್ಕು ಮತ್ತು ಒತ್ತಡವನ್ನು ತೋರಿಸುವ ಸಂಕೇತಗಳನ್ನೂ ಉಪಯೋಗಿಸುತ್ತವೆ.

ಜಟಿಲವಾದ ಉಪಕರಣವು ಕೂಡ ರೂಪಿಸಲ್ಪಟ್ಟಿದೆ. ಈಗಿನ ಕಾಲಗಳಲ್ಲಿ ಲೋಕವ್ಯಾಪಕವಾಗಿರುವ ನೂರಾರು ಹವಾಮಾನ ಕೇಂದ್ರಗಳು ರೇಡಿಯೋಅನ್ವೇಷಕಗಳನ್ನು ಹೊಂದಿರುವ ಬಲೂನ್‌ಗಳನ್ನು ಕಳುಹಿಸುತ್ತವೆ. ಈ ರೇಡಿಯೋಅನ್ವೇಷಕಗಳು ವಾಯುಮಂಡಲದ ಪರಿಸ್ಥಿತಿಗಳನ್ನು ಅಳೆದು, ನಂತರ ಆ ಸುದ್ದಿಯನ್ನು ರೇಡಿಯೋ ಮೂಲಕ ಕಳುಹಿಸುವ ಸಾಧನಗಳಾಗಿವೆ. ರೇಡಾರ್‌ ಕೂಡ ಉಪಯೋಗಿಸಲ್ಪಡುತ್ತದೆ. ಮೇಘಗಳಲ್ಲಿರುವ ಮಳೆಹನಿ ಮತ್ತು ನೀರ್ಗಲ್ಲಿನಿಂದ ರೇಡಿಯೋ ತರಂಗಗಳನ್ನು ಪುಟನೆಗೆಸುವ ಮೂಲಕ, ಪವನಶಾಸ್ತ್ರಜ್ಞರು ಚಂಡಮಾರುತಗಳ ಚಲನೆಯನ್ನು ಪತ್ತೆಹಚ್ಚುತ್ತಾ ಹೋಗಲು ಸಾಧ್ಯವಾಗುತ್ತದೆ.

ಇಸವಿ 1960ರಲ್ಲಿ, ಟಿವಿ ಕ್ಯಾಮರದೊಂದಿಗೆ ಸಜ್ಜಿತವಾಗಿದ್ದ ಲೋಕದ ಮೊದಲ ಹವಾಮಾನ ಉಪಗ್ರಹ ಟೈರೋಸ್‌ I, ಆಕಾಶದೆಡೆಗೆ ರಾಕೆಟ್‌ನ ಮೂಲಕ ಕಳುಹಿಸಲ್ಪಟ್ಟಾಗ, ಹವಾಮಾನದ ನಿಷ್ಕೃಷ್ಟ ವೀಕ್ಷಣೆಯಲ್ಲಿ ಒಂದು ದೊಡ್ಡ ಪ್ರಗತಿಯಾಯಿತು. ಈಗ ಹವಾಮಾನದ ಉಪಗ್ರಹಗಳು ಧ್ರುವದಿಂದ ಧ್ರುವಕ್ಕೆ ಸುತ್ತುತ್ತಿರುವಾಗ, ಭೂಸ್ಥಾಯೀ ಉಪಗ್ರಹಗಳು ಭೂಗೋಳದ ಮೇಲ್ಮೈಗಿಂತಲೂ ಮೇಲೆ ಒಂದು ನಿರ್ದಿಷ್ಟ ಸ್ಥಾನದಲ್ಲಿ ಇದ್ದು, ಯಾವ ಕ್ಷೇತ್ರವು ಅದರ ದೃಷ್ಟಿವ್ಯಾಪ್ತಿಯೊಳಗೆ ಬರುತ್ತದೋ, ಭೂಗೋಳದ ಆ ಭಾಗವನ್ನು ಸದಾ ಎಚ್ಚರಿಕೆಯಿಂದ ಗಮನಿಸುತ್ತಾ ಇರುತ್ತವೆ. ಈ ಎರಡೂ ಉಪಕರಣಗಳು ಮೇಲಿನಿಂದ ವೀಕ್ಷಿಸುವ ಹವಾಮಾನದ ಚಿತ್ರಗಳನ್ನು ಭೂಮಿಗೆ ಕಳುಹಿಸುತ್ತವೆ.

ಹವಾಮಾನವನ್ನು ಮುನ್‌ಸೂಚಿಸುವುದು

ಹವಾಮಾನವು ಈಗ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವುದು ಒಂದು ವಿಷಯವಾಗಿದೆ, ಆದರೆ ಅದು ಒಂದು ಗಂಟೆ, ಒಂದು ದಿನ, ಅಥವಾ ಒಂದು ವಾರದ ನಂತರ ಹೇಗಿರುವುದು ಎಂಬುದನ್ನು ಮುಂತಿಳಿಸುವುದು ಮತ್ತೊಂದು ವಿಷಯವಾಗಿದೆ. Iನೇ ಲೋಕ ಯುದ್ಧದ ಸ್ವಲ್ಪಕಾಲದ ನಂತರ, ವಾಯುಮಂಡಲವು ಭೌತಶಾಸ್ತ್ರದ ನಿಯಮಗಳನ್ನು ಅನುಸರಿಸುವುದರಿಂದ, ಹವಾಮಾನವನ್ನು ಮುಂತಿಳಿಸಲು ತಾನು ಗಣಿತಶಾಸ್ತ್ರವನ್ನು ಉಪಯೋಗಿಸಬಲ್ಲೆ ಎಂದು ಬ್ರಿಟಿಷ್‌ ಪವನಶಾಸ್ತ್ರಜ್ಞನಾದ ಲೂಅಸ್‌ ರಿಚರ್ಡ್‌ಸನ್‌ ಯೋಚಿಸಿದನು. ಆದರೆ ಅದರ ಸೂತ್ರಗಳು ಎಷ್ಟು ಜಟಿಲವಾಗಿದ್ದವು ಮತ್ತು ಲೆಕ್ಕಿಸುವ ವಿಧಾನವು ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತಿತ್ತೆಂದರೆ, ಮುನ್‌ಸೂಚಕರು ತಮ್ಮ ಲೆಕ್ಕಗಳನ್ನು ಪೂರೈಸುವ ಮುನ್ನ ಹವಾಮಾನದ ಚಲನೆಗಳು ಬದಲಾಗಿಹೋಗುತ್ತಿದ್ದವು. ಮಾತ್ರವಲ್ಲದೆ, ರಿಚರ್ಡ್‌ಸನ್‌ ಆರು-ತಾಸುಗಳ ಅಂತರದಲ್ಲಿ ತೆಗೆಯಲ್ಪಟ್ಟ ಹವಾಮಾನದ ದಾಖಲೆಗಳನ್ನು ಉಪಯೋಗಿಸಿದನು. “ಮುನ್‌ಸೂಚನೆಯು ಹೆಚ್ಚುಕಡಿಮೆ ಯಶಸ್ವಿಕರವಾಗಿರಬೇಕಾದರೆ, ಅದು ಕಡಿಮೆಪಕ್ಷ ಮೂವತ್ತು ನಿಮಿಷಗಳ ಅಂತರದಲ್ಲಿ ತೆಗೆಯಲ್ಪಡಬೇಕು,” ಎಂದು ಫ್ರೆಂಚ್‌ ಪವನಶಾಸ್ತ್ರಜ್ಞನಾದ ರನೆ ಶಾಬೂ ಗಮನಿಸಿದನು.

ಆದರೆ, ಕಂಪ್ಯೂಟರ್‌ಗಳ ಆಗಮನದೊಂದಿಗೆ, ಆ ದೀರ್ಘವಾದ ಲೆಕ್ಕಗಳನ್ನು ವೇಗವಾಗಿ ಮಾಡಲು ಸಾಧ್ಯವಾಯಿತು. ಜಟಿಲ ಸಂಖ್ಯಾತ್ಮಕ ನಮೂನೆಯನ್ನು, ಅಂದರೆ ಹವಾಮಾನವನ್ನು ನಿಯಂತ್ರಿಸುವ ಜ್ಞಾತ ಭೌತ ನಿಯಮಗಳನ್ನು ಆವರಿಸುವ ಗಣಿತಶಾಸ್ತ್ರೀಯ ಸಮೀಕರಣಗಳನ್ನು ವಿಕಸಿಸಲಿಕ್ಕಾಗಿ ಪವನಶಾಸ್ತ್ರಜ್ಞರು ರಿಚರ್ಡ್‌ಸನ್‌ನ ಲೆಕ್ಕಗಳನ್ನು ಉಪಯೋಗಿಸಿದರು.

ಈ ಸಮೀಕರಣಗಳನ್ನು ಉಪಯೋಗಕ್ಕೆ ತರಲು, ಪವನಶಾಸ್ತ್ರಜ್ಞರು ಭೂಮಿಯ ಮೇಲ್ಮೈಯನ್ನು ಒಂದು ರೇಖಾಜಾಲರಿಯಾಗಿ ವಿಭಾಗಿಸುತ್ತಾರೆ. ಸದ್ಯದಲ್ಲಿ, ಬ್ರಿಟನ್‌ನ ಪವನಶಾಸ್ತ್ರ ಕಚೇರಿಯು ಉಪಯೋಗಿಸುವ ಭೂಗೋಳದ ಆಕೃತಿಯಲ್ಲಿ, 80 ಕಿಲೊಮೀಟರ್‌ಗಳ ಅಂತರದಲ್ಲಿ ಜಾಲರಿ ಬಿಂದುಗಳಿವೆ. ಪ್ರತಿಯೊಂದು ಚೌಕದ ಮೇಲಿರುವ ವಾತಾವರಣವನ್ನು ಒಂದು ಬಾಕ್ಸ್‌ ಎಂದು ಕರೆಯಲಾಗುತ್ತದೆ, ಮತ್ತು ವಾಯುಮಂಡಲದ ಗಾಳಿ, ವಾಯುಭಾರ, ಉಷ್ಣತೆ, ಹಾಗೂ ತೇವಾಂಶದ ಅವಲೋಕನಗಳು ಭೂಮಟ್ಟದಿಂದ ಮೇಲಕ್ಕೆ 20 ವಿಭಿನ್ನ ಮಟ್ಟಗಳಲ್ಲಿ ದಾಖಲಿಸಲ್ಪಡುತ್ತವೆ. ಲೋಕದಾದ್ಯಂತವಿರುವ 3,500ಕ್ಕೂ ಹೆಚ್ಚಿನ ವೀಕ್ಷಣಾ ಕೇಂದ್ರಗಳಿಂದ ಪಡೆದುಕೊಳ್ಳುವ ದತ್ತಾಂಶವನ್ನು ಕಂಪ್ಯೂಟರ್‌ ಪರಿಶೀಲಿಸುತ್ತದೆ ಮತ್ತು ಮುಂದಿನ 15 ನಿಮಿಷಗಳಲ್ಲಿ ಲೋಕದಾದ್ಯಂತ ಹವಾಮಾನವು ಏನಾಗಿರುವುದೋ ಅದರ ಮುನ್‌ಸೂಚನೆಯನ್ನು ನೀಡುತ್ತದೆ. ಇದು ಮುಗಿದಾಕ್ಷಣವೇ, ಮುಂದಿನ 15 ನಿಮಿಷಗಳಿಗಾಗಿರುವ ಮುನ್‌ಸೂಚನೆಯು ತ್ವರಿತವಾಗಿ ತಯಾರಿಸಲ್ಪಡುತ್ತದೆ. ಈ ವಿಧಾನವನ್ನು ಅನೇಕಬಾರಿ ಪುನರಾವರ್ತಿಸುತ್ತಾ, ಒಂದು ಕಂಪ್ಯೂಟರ್‌ 15 ನಿಮಿಷಗಳಲ್ಲಿ ಆರು ದಿನಗಳ ಭೌಗೋಳಿಕ ಮುನ್‌ಸೂಚನೆಯನ್ನು ನೀಡಬಲ್ಲದು.

ಸ್ಥಳಿಕ ಮುನ್‌ಸೂಚನೆಯಲ್ಲಿ ಅಧಿಕವಾದ ವಿವರ ಹಾಗೂ ನಿಷ್ಕೃಷ್ಟತೆಗಾಗಿ ಬ್ರಿಟಿಷ್‌ ಪವನಶಾಸ್ತ್ರ ಕಚೇರಿಯು, ಲಿಮಿಟೆಡ್‌ ಏರಿಯ ಮಾಡೆಲ್‌ ಎಂಬ ಉತ್ತರ ಅಟ್ಲಾಂಟಿಕ್‌ ಮತ್ತು ಯೂರೋಪಿಯನ್‌ ಕ್ಷೇತ್ರಗಳನ್ನು ಒಳಗೊಂಡಿರುವ ಆಕೃತಿಯನ್ನು ಉಪಯೋಗಿಸುತ್ತದೆ. 50 ಕಿಲೊಮೀಟರ್‌ಗಳ ಅಂತರದಲ್ಲಿಡಲ್ಪಟ್ಟಿರುವ ಜಾಲರಿ ಬಿಂದುಗಳನ್ನು ಇದು ಉಪಯೋಗಿಸುತ್ತದೆ. ಬ್ರಿಟಿಷ್‌ ದ್ವೀಪಗಳನ್ನು ಮತ್ತು ಸುತ್ತಲಿರುವ ಸಮುದ್ರಗಳನ್ನು ಮಾತ್ರ ಆವರಿಸುವ ಮತ್ತೊಂದು ಆಕೃತಿಯೂ ಇದೆ. ಇದರಲ್ಲಿ 15 ಕಿಲೊಮೀಟರ್‌ಗಳ ಅಂತರದಲ್ಲಿರುವ 2,62,384 ಜಾಲರಿ ಬಿಂದುಗಳು ಮತ್ತು 31 ಲಂಬ ಸಮಮಟ್ಟಗಳಿವೆ!

ಮುನ್‌ಸೂಚಕನ ಪಾತ್ರ

ಆದರೂ, ಹವಾಮಾನವನ್ನು ಮುಂತಿಳಿಸುವ ಕೆಲಸವು, ಸಂಪೂರ್ಣವಾಗಿ ವಿಜ್ಞಾನದ ಮೇಲೆ ಆಧಾರಿತವಾಗಿಲ್ಲ. ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ಹೇಳುವ ಪ್ರಕಾರ, “ವಾತಾವರಣದ ವರ್ತನೆಯನ್ನು ವರ್ಣಿಸಲು ಕಂಪ್ಯೂಟರ್‌ನಿಂದ ಉಪಯೋಗಿಸಲ್ಪಡುವ ಸೂತ್ರಗಳು ಕೇವಲ ಸರಿಸುಮಾರಾದ ವರ್ಣನೆಗಳಾಗಿವೆ.” ಮಾತ್ರವಲ್ಲದೆ, ಒಂದು ದೊಡ್ಡ ಕ್ಷೇತ್ರಕ್ಕಾಗಿರುವ ನಿಷ್ಕೃಷ್ಟವಾದ ಮುನ್‌ಸೂಚನೆಯು, ಸ್ಥಳಿಕ ಭೂಪ್ರದೇಶವು ವಾತಾವರಣದ ಮೇಲೆ ಬೀರುವ ಪ್ರಭಾವವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಇರಬಹುದು. ಆದುದರಿಂದ ಒಂದಿಷ್ಟು ಮಟ್ಟದ ಕಲೆಯು ಆವಶ್ಯಕವಾಗಿದೆ. ಈ ಹಂತದಲ್ಲೇ ಒಬ್ಬ ಹವಾಮಾನ ಮುನ್‌ಸೂಚಕನು ತನ್ನ ಪಾತ್ರವನ್ನು ವಹಿಸುತ್ತಾನೆ. ಅವನು ತನ್ನ ಅನುಭವ ಮತ್ತು ವಿವೇಚನಾಶಕ್ತಿಯನ್ನು ಉಪಯೋಗಿಸಿ, ತಾನು ಪಡೆದುಕೊಳ್ಳುವ ದತ್ತಾಂಶದ ಮೌಲ್ಯವನ್ನು ನಿರ್ಧರಿಸಬೇಕು. ಇದು ಅವನು ಇನ್ನಷ್ಟು ನಿಷ್ಕೃಷ್ಟವಾದ ಮುನ್‌ಸೂಚನೆಯನ್ನು ಕೊಡುವಂತೆ ಮಾಡುತ್ತದೆ.

ಉದಾಹರಣೆಗಾಗಿ, ಉತ್ತರ ಸಮುದ್ರದಿಂದ ತಣ್ಣಗಾಗಿಸಲ್ಪಟ್ಟ ವಾಯು, ಯೂರೋಪ್‌ ಭೂಖಂಡದ ಮೇಲೆ ಬರುವಾಗ, ತೆಳುವಾದ ಮೇಘ ಪದರವು ರೂಪುಗೊಳ್ಳುತ್ತದೆ. ಈ ಮೇಘ ಪದರವು ಯೂರೋಪ್‌ ಭೂಖಂಡದ ಮೇಲೆ ಮರುದಿನದ ಮಳೆಯನ್ನು ಸೂಚಿಸುತ್ತದೋ ಅಥವಾ ಅದು ಸೂರ್ಯನ ಶಾಖದಲ್ಲಿ ಆವಿಯಾಗಿ ಹೋಗುತ್ತದೋ ಎಂಬುದು, ತಾಪಮಾನದಲ್ಲಿ ಒಂದು ಡಿಗ್ರಿಯ ಕೆಲವೇ ದಶಾಂಶಗಳಷ್ಟು ವ್ಯತ್ಯಾಸದ ಮೇಲೆ ಹೊಂದಿಕೊಂಡಿದೆ. ಮುನ್‌ಸೂಚಕನ ದತ್ತಾಂಶ, ಮತ್ತು ತದ್ರೀತಿಯ ಗತ ಸನ್ನಿವೇಶಗಳ ಕುರಿತಾದ ಅವನ ಜ್ಞಾನವು, ಒಳ್ಳೆಯ ಸಲಹೆಯನ್ನು ನೀಡಲು ಅವನನ್ನು ಶಕ್ತಗೊಳಿಸುತ್ತದೆ. ನಿಷ್ಕೃಷ್ಟವಾದ ಮುನ್‌ಸೂಚನೆಗಳನ್ನು ನೀಡುವುದರಲ್ಲಿ ಕಲೆ ಮತ್ತು ವಿಜ್ಞಾನದ ಈ ಮಿಶ್ರಣವು ಅತ್ಯಾವಶ್ಯಕವಾಗಿದೆ.

ಎಷ್ಟು ವಿಶ್ವಾಸಾರ್ಹ?

ಈಗ ಬ್ರಿಟನ್‌ನ ಪವನಶಾಸ್ತ್ರ ಕಚೇರಿಯು ತನ್ನ 24 ಗಂಟೆಯ ಮುನ್‌ಸೂಚನೆಗಳಲ್ಲಿ 86 ಪ್ರತಿಶತ ನಿಷ್ಕೃಷ್ಟತೆಯಿದೆ ಎಂದು ಹೇಳಿಕೊಳ್ಳುತ್ತದೆ. ಯೂರೋಪಿಯನ್‌ ಸೆಂಟರ್‌ ಫಾರ್‌ ಮೀಡಿಯಮ್‌ ರೇಂಜ್‌ ಫೋರ್‌ಕಾಸ್ಟ್ಸ್‌ ಸಂಸ್ಥೆಯ ಐದು ದಿನಗಳ ಅಂದಾಜು 80 ಪ್ರತಿಶತ ನಿಷ್ಕೃಷ್ಟವಾಗಿರುತ್ತದೆ. ಇದು 1970ಗಳ ಆದಿಯಲ್ಲಿ ಮಾಡಲ್ಪಡುತ್ತಿದ್ದ ಎರಡು ದಿನಗಳ ಮುನ್‌ಸೂಚನೆಗಳ ವಿಶ್ವಾಸಾರ್ಹತೆಗಿಂತ ಉತ್ತಮವಾಗಿದೆ. ಇದು ಮನಸ್ಸಿನ ಮೇಲೆ ಪ್ರಭಾವ ಬೀರುವ ವಿಷಯ ಎಂಬುದೇನೋ ನಿಜ, ಆದರೆ ಪರಿಪೂರ್ಣವಾಗಿದೆಯೆಂದು ಹೇಳಲಾರೆವು. ಮುನ್‌ಸೂಚನೆಗಳು ಏಕೆ ಹೆಚ್ಚು ವಿಶ್ವಾಸಾರ್ಹವಾಗಿಲ್ಲ?

ಹವಾಮಾನ ವ್ಯೂಹಗಳು ಅತ್ಯಧಿಕವಾಗಿ ಜಟಿಲವಾಗಿವೆ ಎಂಬುದೇ ಇದಕ್ಕೆ ಸರಳವಾದ ಕಾರಣ. ತಪ್ಪಾಗದಂಥ ಮುಂತಿಳಿಸುವಿಕೆಗಳನ್ನು ನೀಡಲು ಆವಶ್ಯಕವಾಗಿರುವ ಎಲ್ಲಾ ಅಳತೆಗಳನ್ನು ಮಾಡುವುದು ಅಸಾಧ್ಯವಾದ ವಿಷಯ. ಭೂಮಿಯ ಕೇಂದ್ರಗಳಿಗೆ ಉಪಗ್ರಹದ ಮೂಲಕವಾಗಿ ದತ್ತಾಂಶಗಳನ್ನು ಕಳುಹಿಸಲು ಸಾಗರದ ಬೃಹತ್ತಾದ ಕ್ಷೇತ್ರಗಳಲ್ಲಿ ಸಾಗರದ ಹವಾಮಾನ ವೀಕ್ಷಣಾಲಯಗಳಿರುವುದಿಲ್ಲ. ಹವಾಮಾನಾಕೃತಿಯ ಜಾಲರಿ ಬಿಂದುಗಳು ಹವಾಮಾನ ವೀಕ್ಷಣಾಲಯದ ಸ್ಥಳಗಳಿಗೆ ಸರಿಯಾಗಿ ಅನುರೂಪವಾಗಿರುವುದೇ ವಿರಳ. ಅಲ್ಲದೆ, ಹವಾಮಾನವನ್ನು ಪ್ರಭಾವಿಸುವ ಎಲ್ಲಾ ನೈಸರ್ಗಿಕ ಶಕ್ತಿಗಳನ್ನು ವಿಜ್ಞಾನಿಗಳು ಇನ್ನೂ ಅರ್ಥಮಾಡಿಕೊಂಡಿಲ್ಲ.

ಆದರೂ ಹವಾಮಾನ ಮುನ್‌ಸೂಚನೆಯಲ್ಲಿ ಸತತವಾಗಿ ಅಭಿವೃದ್ಧಿಗಳು ಮಾಡಲ್ಪಡುತ್ತಿವೆ. ಉದಾಹರಣೆಗಾಗಿ, ಇತ್ತೀಚೆಗಿನ ವರೆಗೆ, ಹವಾಮಾನ ಮುನ್‌ಸೂಚನೆಯು ಪ್ರಧಾನವಾಗಿ ವಾತಾವರಣದ ವೀಕ್ಷಣೆಗಳ ಮೇಲೆ ಆತುಕೊಂಡಿತ್ತು. ಆದರೆ ಭೂಮಂಡಲದ ಮೇಲ್ಮೈಯ 71 ಪ್ರತಿಶತವು ಸಾಗರವಾಗಿರುವುದರಿಂದ, ಶಕ್ತಿಯು ಸಾಗರದಲ್ಲಿ ಶೇಖರಿಸಿಡಲ್ಪಟ್ಟಿರುವ ಮತ್ತು ವಾಯುವಿಗೆ ಸ್ಥಳಾಂತರಿಸುವ ರೀತಿಯ ಮೇಲೆ ಸಂಶೋಧಕರು ಈಗ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಿದ್ದಾರೆ. ಅತಿದೂರದಲ್ಲಿ ಹವಾಮಾನದ ಮೇಲೆ ಗಮನಾರ್ಹವಾದ ಪರಿಣಾಮಗಳನ್ನು ಉಂಟುಮಾಡಸಾಧ್ಯವಿರುವ, ಒಂದು ಕ್ಷೇತ್ರದ ನೀರಿನ ಉಷ್ಣತೆಯಲ್ಲಿನ ತುಸು ವೃದ್ಧಿಯ ಕುರಿತು ಗ್ಲೋಬಲ್‌ ಓಶನ್‌ ಆಬ್‌ಸರ್ವಿಂಗ್‌ ಸಿಸ್ಟಮ್‌ ಪ್ಲವನ ವ್ಯೂಹಗಳ ಮೂಲಕವಾಗಿ ಮಾಹಿತಿಯನ್ನು ಒದಗಿಸುತ್ತದೆ. *

ಕುಲಪಿತನಾದ ಯೋಬನನ್ನು ಹೀಗೆ ಕೇಳಲಾಯಿತು: “ಮೇಘಗಳ ಹಬ್ಬುಗೆಯನ್ನೂ [ದೇವರ] ಗುಡಾರದಲ್ಲಿನ ಗರ್ಜನೆಗಳನ್ನೂ ಗ್ರಹಿಸಬಹುದೇ?” (ಯೋಬ 36:29) ಹವಾಮಾನದ ರೂಪುಗೊಳ್ಳುವಿಕೆಯ ಕುರಿತು ಇಂದು ಕೂಡ ಮಾನವನು ಸಂಬಂಧಸೂಚಕವಾಗಿ ಕೊಂಚವನ್ನೇ ಅರಿತಿದ್ದಾನೆ. ಹೀಗಿದ್ದರೂ, ಆಧುನಿಕ ಹವಾಮಾನ ಮುನ್‌ಸೂಚನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಾಕಷ್ಟು ಕಾರಣಗಳಿವೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಮುಂದಿನ ಬಾರಿ ಮುನ್‌ಸೂಚಕನು ಮಳೆ ಬರುವ ಸಾಧ್ಯತೆ ಇದೆ ಎಂಬುದಾಗಿ ಹೇಳುವುದಾದರೆ, ನೀವು ಹೊರಗೆ ಹೋಗುವ ಮುಂಚೆ ಪ್ರಾಯಶಃ ತತ್‌ಕ್ಷಣವೇ ಒಂದು ಕೊಡೆಯನ್ನು ತೆಗೆದುಕೊಳ್ಳುವಿರಿ!(g01 4/8)

[ಪಾದಟಿಪ್ಪಣಿ]

^ ಎಲ್‌ ನಿನೋ ಮತ್ತು ಲಾ ನಿನ್ಯಾ, ಪೆಸಿಫಿಕ್‌ ಸಾಗರದಲ್ಲಿ ಉಷ್ಣತೆಯ ವ್ಯತ್ಯಾಸಗಳಿಂದ ಉಂಟುಮಾಡಲ್ಪಟ್ಟ ವಾಯುಗುಣದ ಪ್ರಕೃತಿ ಘಟನೆಗಳಿಗೆ ಕೊಡಲ್ಪಟ್ಟ ಹೆಸರುಗಳಾಗಿವೆ. 2000ದ, ಏಪ್ರಿಲ್‌ 8ರ ಎಚ್ಚರ! ಸಂಚಿಕೆಯ “ಎಲ್‌ ನಿನೋ ಅಂದರೇನು?” ಎಂಬ ಲೇಖನವನ್ನು ದಯವಿಟ್ಟು ನೋಡಿ.

[ಪುಟ 15ರಲ್ಲಿರುವ ಚಿತ್ರಗಳು]

ಟೊರಿಸೆಲಿ

ಲವೇರ್‌ಯೆ

ಆರಂಭಕಾಲದ ಗಾಜಿನ ಉಷ್ಣತಾಮಾಪಕ

ಲಾವಾಸೀಯೆ ತನ್ನ ಪ್ರಯೋಗಶಾಲೆಯಲ್ಲಿ

[ಕೃಪೆ]

ಲವೇರ್‌ಯೆ, ಲಾವಾಸೀಯೆ, ಮತ್ತು ಟೊರಿಸೆಲಿಯ ಚಿತ್ರಗಳು: ಬ್ರೌನ್‌ ಬ್ರದರ್ಸ್‌

ಉಷ್ಣತಾಮಾಪಕ: © G. Tomsich, Science Source/Photo Researchers

[ಪುಟ 17ರಲ್ಲಿರುವ ಚಿತ್ರಗಳು]

ಉಪಗ್ರಹಗಳು, ಹವಾಮಾನ ಬಲೂನ್‌ಗಳು, ಮತ್ತು ಕಂಪ್ಯೂಟರ್‌ಗಳು ಹವಾಮಾನ ಮುನ್‌ಸೂಚಕರ ಕೆಲವೊಂದು ಸಾಧನಗಳಾಗಿವೆ

[ಕೃಪೆ]

ಪುಟ 2 ಮತ್ತು 17: ಉಪಗ್ರಹ: NOAA/Department of Commerce; ಚಂಡಮಾರುತ: NASA photo

ಕಮಾಂಡರ್‌ ಜಾನ್‌ ಬಾರ್ಟ್ನಿಯಕ್‌, NOAA Corps