ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತವಿರೋಧಿ ಯಾರು?

ಕ್ರಿಸ್ತವಿರೋಧಿ ಯಾರು?

ಬೈಬಲಿನ ದೃಷ್ಟಿಕೋನ

ಕ್ರಿಸ್ತವಿರೋಧಿ ಯಾರು?

“ಕ್ರಿಸ್ತವಿರೋಧಿ ಬರುತ್ತಾನೆಂದು ನೀವು ಕೇಳಿದ್ದೀರಷ್ಟೆ.”​—⁠1 ಯೋಹಾನ 2:18.

ಅಪಾಯಕಾರಿಯಾದ ಪಾತಕಿಯೊಬ್ಬನು ನಿಮ್ಮ ನೆರೆಹೊರೆಯ ಕಡೆಗೆ ಹೊರಟಿದ್ದಾನೆಂಬ ಎಚ್ಚರಿಕೆ ನಿಮಗೆ ದೊರೆಯುವಲ್ಲಿ ನೀವೇನು ಮಾಡುವಿರಿ? ಪ್ರಾಯಶಃ ಅವನು ಹೇಗೆ ತೋರುತ್ತಾನೆ ಮತ್ತು ಹೇಗೆ ಕಾರ್ಯನಡೆಸುತ್ತಾನೆಂಬುದರ ಬಗ್ಗೆ ನಿಷ್ಕೃಷ್ಟ ವಿವರಗಳನ್ನು ಕೇಳಿ ತಿಳಿದುಕೊಳ್ಳುವಿರಿ. ನೀವು ಹುಷಾರಾಗಿರುವಿರಿ.

ಇಂದು, ಇದೇ ರೀತಿಯ ಸನ್ನಿವೇಶ ಬಂದೆರಗಿದೆ. ಅಪೊಸ್ತಲ ಪೌಲನ ಮಾತುಗಳು ನಮ್ಮನ್ನು ಹೀಗೆ ಎಚ್ಚರಿಸಿವೆ: “ಯೇಸುವನ್ನು ಒಪ್ಪದೆ ಇರುವ ಆತ್ಮವು ದೇವರಿಂದ ಪ್ರೇರಿತವಾದದ್ದಲ್ಲ; ಅದು ಕ್ರಿಸ್ತವಿರೋಧಿಯ ಆತ್ಮವಾಗಿದೆ. ಅದು ಬರುವದೆಂಬದನ್ನು ನೀವು ಕೇಳಿದ್ದೀರಲ್ಲಾ; ಈಗಲೂ ಲೋಕದಲ್ಲಿ ಅದೆ.” (1 ಯೋಹಾನ 4:⁠3) ಇಂತಹ ಕ್ರಿಸ್ತವಿರೋಧಿ, ದೇವವೈರಿ ಮತ್ತು ಮಾನವ ವಂಚಕನೊಬ್ಬನು ಇಂದು ಸಕಲ ಮಾನವಕುಲದ ಹಿತವನ್ನು ಅಪಾಯಕ್ಕೊಡ್ಡುತ್ತಿದ್ದಾನೆಯೆ?

ಯೋಹಾನನು ತನ್ನ ಎರಡು ಪತ್ರಿಕೆಗಳ ಮೂಲ ಬರಹಗಳಲ್ಲಿ “ಕ್ರಿಸ್ತವಿರೋಧಿ” ಎಂಬ ಪದವನ್ನು ಐದು ಬಾರಿ ಉಪಯೋಗಿಸಿದನು. ಇದು, ಬೈಬಲು ಯೇಸು ಕ್ರಿಸ್ತನ ಕುರಿತು ಏನನ್ನು ಕಲಿಸುತ್ತದೊ ಅದನ್ನು ವಿರೋಧಿಸುವ ಯಾರನ್ನಾದರೂ ಅಥವಾ ಏನನ್ನಾದರೂ ಸೂಚಿಸಿ, ಯಾರು ತಮ್ಮನ್ನು ಕ್ರಿಸ್ತರೆಂದು ಅಥವಾ ಅವನಿಂದ ಕಳುಹಿಸಲ್ಪಟ್ಟವರೆಂದು ಹೇಳಿಕೊಳ್ಳುತ್ತಾರೊ ಅಂತಹ ವಂಚಕರನ್ನು ಒಳಗೊಂಡಿರುತ್ತದೆ. ಈ ಕ್ರಿಸ್ತವಿರೋಧಿಯ ಕುರಿತು ವಿಶ್ವಾಸಾರ್ಹವಾದ ಮಾಹಿತಿಯನ್ನು ಬೈಬಲು ನೀಡುತ್ತದೆ. ಆದರೆ ಘೋರಕರ್ಮಿಗಳ ಸಂಬಂಧದಲ್ಲಿ ಕೆಲವೊಮ್ಮೆ ನಡೆಯುವಂತೆ, ಈ ನಿಗೂಢವಾದ ಗುಂಪಿನ ಕುರಿತಾದ ಆಧಾರವಿಲ್ಲದ ವರದಿಗಳು ಸತ್ಯಕ್ಕಿಂತಲೂ ಹೆಚ್ಚು ಗಮನಕ್ಕೀಡಾಗಿವೆ.

ತಪ್ಪಾದ ಗುರುತಿಸುವಿಕೆ

ಅಪೊಸ್ತಲ ಯೋಹಾನನ ದಿನಗಳಿಂದ ಹಿಡಿದು, ಕ್ರಿಸ್ತವಿರೋಧಿಯ ವಿಷಯದಲ್ಲಿ ಯೋಹಾನನು ಹೇಳಿದ ಮಾತುಗಳು ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಸೂಚಿಸುತ್ತವೆಂದು ಜನರು ವಾದಿಸಿದ್ದಾರೆ. ಜನರು ಅನೇಕ ಅಭ್ಯರ್ಥಿಗಳ ಹೆಸರನ್ನು ಸೂಚಿಸಿದ್ದಾರೆ. ಶತಮಾನಗಳ ಹಿಂದೆ, ರೋಮನ್‌ ಸಮ್ರಾಟ ನೀರೋ ಈ ಕ್ರಿಸ್ತವಿರೋಧಿಯೆಂದು ಅನೇಕರು ನಂಬಿದರು. ತರುವಾಯ, ಆ್ಯಡಲ್ಫ್‌ ಹಿಟ್ಲರನು ತೋರಿಸಿದ ದ್ವೇಷ ಮತ್ತು ಭೀತಿಯು, ಅವನೇ ಈ ಕ್ರಿಸ್ತವಿರೋಧಿಯೆಂದು ಅನೇಕರು ದೃಢವಾಗಿ ನಂಬುವಂತೆ ಮಾಡಿತು. ಈ ಹೆಸರನ್ನು ಜರ್ಮನ್‌ ತತ್ತ್ವಜ್ಞಾನಿ ಫ್ರೀಡ್ರಿಕ್‌ ನೀಚೀ ಎಂಬುವವನಿಗೂ ಅನ್ವಯಿಸಲಾಯಿತು. ಇನ್ನು ಕೆಲವರು, ಕ್ರಿಸ್ತವಿರೋಧಿಯು ಬರುವ ಸಮಯ ಮುಂದಕ್ಕಿದೆಯೆಂದೂ ಅವನು ಜಾಣನೂ ಕ್ರೂರಿಯೂ ಆದ, ಲೋಕವನ್ನು ಆಳಬಯಸುವ ರಾಜಕಾರಣಿಯೆಂದು ನಂಬುತ್ತಾರೆ. ಪ್ರಕಟನೆ 13ನೆಯ ಅಧ್ಯಾಯದಲ್ಲಿ ತಿಳಿಸಲ್ಪಟ್ಟಿರುವ ಕಾಡುಮೃಗವು ಯೋಹಾನನಿಂದ ಉಲ್ಲೇಖಿಸಲ್ಪಟ್ಟಿರುವ ಕ್ರಿಸ್ತವಿರೋಧಿಗೆ ಪ್ರತ್ಯೇಕ ಸೂಚನೆಯಾಗಿದೆಯೆಂಬುದು ಅವರ ನಂಬಿಕೆ. ದುಷ್ಟತ್ವದ ಈ ಭಾವೀ ವೀರನನ್ನು 666 ಎಂಬ ಗುರುತು ಹೇಗೊ ಗುರುತಿಸಲಿದೆ ಎಂದು ಅವರು ಹೇಳುತ್ತಾರೆ.

ಈ ವಿಚಾರಗಳನ್ನು ಪ್ರವರ್ಧಿಸುವವರು, ಒಬ್ಬನೇ ಒಬ್ಬ ಕ್ರಿಸ್ತವಿರೋಧಿಯನ್ನು ಯೋಹಾನನು ಸೂಚಿಸಿದನೆಂದು ಭಾವಿಸುತ್ತಾರೆ. ಆದರೆ ಅವನ ಮಾತುಗಳು ಏನು ತೋರಿಸುತ್ತವೆ? 1 ಯೋಹಾನ 2:18ನ್ನು ನೋಡಿರಿ: “ಕ್ರಿಸ್ತವಿರೋಧಿ ಬರುತ್ತಾನೆಂದು ನೀವು ಕೇಳಿದ್ದೀರಷ್ಟೆ; ಈಗಲೂ ಕ್ರಿಸ್ತವಿರೋಧಿಗಳು ಬಹುಮಂದಿ ಎದ್ದಿದ್ದಾರೆ.” ಹೌದು, ಒಬ್ಬನಲ್ಲ, ‘ಬಹುಮಂದಿ ಕ್ರಿಸ್ತವಿರೋಧಿಗಳು’ ಆ ಒಂದನೆಯ ಶತಮಾನದ ಆತ್ಮಿಕ ತೊಂದರೆಗಳಿಗೆ ಕಾರಣರಾಗಿದ್ದರು. ಇಂದು ಸಹ ಒಬ್ಬನಲ್ಲ, ಬದಲಾಗಿ ಕ್ರಿಸ್ತವಿರೋಧಿ ವರ್ಗವನ್ನು ರೂಪಿಸುವ ಅನೇಕರಿದ್ದಾರೆ. ಇವರು ಸಾಮೂಹಿಕವಾಗಿ, ಮಾನವಕುಲದ ಮೇಲೆ ಆತ್ಮಿಕ ಧ್ವಂಸವನ್ನು ಹೇರಿದ್ದಾರೆ. (2 ತಿಮೊಥೆಯ 3:​1-5, 13) ಈ ಕ್ರಿಸ್ತವಿರೋಧಿಯಲ್ಲಿ ಯಾರೆಲ್ಲ ಸೇರಿದ್ದಾರೆ?

ಈಗ ನಾವು ಪ್ರಕಟನೆ 13ನೆಯ ಅಧ್ಯಾಯದ ಮೃಗವು ಕ್ರಿಸ್ತವಿರೋಧಿಯಾಗಿರುವ ಸಾಧ್ಯತೆಯನ್ನು ಪರೀಕ್ಷಿಸೋಣ. ಅಪೊಸ್ತಲ ಯೋಹಾನನು ಬರೆದುದು: “ನಾನು ಕಂಡ ಮೃಗವು ಚಿರತೆಯಂತಿತ್ತು; ಅದರ ಕಾಲುಗಳು ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಂತೆಯೂ ಇದ್ದವು.” (ಪ್ರಕಟನೆ 13:⁠2, ಓರೆ ಅಕ್ಷರಗಳು ನಮ್ಮವು.) ಈ ಮೃಗಗಳು ಏನನ್ನು ಸೂಚಿಸುತ್ತವೆ?

ಪ್ರಕಟನೆ 13 ಮತ್ತು ದಾನಿಯೇಲ 7ನೆಯ ಅಧ್ಯಾಯಗಳ ಮಧ್ಯೆ ಇರುವ ಸಂಬಂಧವನ್ನು ಬೈಬಲ್‌ ವಿದ್ವಾಂಸರು ಗಮನಿಸಿದ್ದಾರೆ. ದೇವರು ದಾನಿಯೇಲನಿಗೆ ಚಿರತೆ, ಕರಡಿ ಮತ್ತು ಸಿಂಹಗಳಿದ್ದ ಸಾಂಕೇತಿಕ ಮೃಗಗಳ ಒಂದು ದರ್ಶನವನ್ನು ಕೊಟ್ಟನು. (ದಾನಿಯೇಲ 7:​2-6) ದೇವರ ಪ್ರವಾದಿಯು ಅವುಗಳ ಅರ್ಥವೇನೆಂದು ಹೇಳಿದನು? ಆ ಕಾಡುಮೃಗಗಳು ಭೂರಾಜರನ್ನು ಅಥವಾ ಸರಕಾರಗಳನ್ನು ಚಿತ್ರಿಸಿದವೆಂದು ಅವನು ಬರೆದನು. (ದಾನಿಯೇಲ 7:17) ಹೀಗೆ, ಪ್ರಕಟನೆಯ ಕಾಡುಮೃಗವು ಮಾನವ ಸರಕಾರಗಳನ್ನು ಪ್ರತಿನಿಧಿಸುತ್ತದೆಂದು ನಾವು ನ್ಯಾಯಸಮ್ಮತವಾಗಿ ತೀರ್ಮಾನಿಸಬಲ್ಲೆವು. ಮತ್ತು ಈ ಸರಕಾರಗಳು ದೇವರ ರಾಜ್ಯವನ್ನು ವಿರೋಧಿಸುವುದರಿಂದ, ಅವು ಕ್ರಿಸ್ತವಿರೋಧಿಯ ಒಂದು ಭಾಗವಾಗಿವೆ.

ಇನ್ನೂ ಯಾರು ಕ್ರಿಸ್ತವಿರೋಧಿಯ ಭಾಗವಾಗಿದ್ದಾರೆ?

ದೇವಕುಮಾರನಾದ ಕ್ರಿಸ್ತನು ಭೂಮಿಯ ಮೇಲಿದ್ದಾಗ ಅವನಿಗೆ ಅನೇಕ ಮಂದಿ ವೈರಿಗಳಿದ್ದರು. ಈಗ ಅವನು ಭೌತಿಕವಾಗಿ ನಿಲುಕುವುದಿಲ್ಲವಾದರೂ, ಅವನಿಗೆ ಆಧುನಿಕ ದಿನದ ವಿರೋಧಿಗಳಿದ್ದಾರೆ. ಅವರಲ್ಲಿ ಯಾರೆಲ್ಲ ಸೇರಿದ್ದಾರೆಂಬುದನ್ನು ಗಮನಿಸಿರಿ.

ಅಪೊಸ್ತಲ ಯೋಹಾನನು ಹೇಳಿದ್ದು: “ಯೇಸುವು ಕ್ರಿಸ್ತನಲ್ಲ ಎನ್ನುವವನು ಸುಳ್ಳುಗಾರನಲ್ಲವಾದರೆ ಸುಳ್ಳುಗಾರನು ಬೇರೆ ಎಲ್ಲಿದ್ದಾನೆ? ಯಾವನಾದರೂ ತಾನು ತಂದೆಯನ್ನೂ ಮಗನನ್ನೂ ಅರಿಯೆನು ಎಂದು ಹೇಳಿದರೆ ಅವನೇ ಕ್ರಿಸ್ತವಿರೋಧಿ.” (1 ಯೋಹಾನ 2:22) ಧರ್ಮಭ್ರಷ್ಟರು ಮತ್ತು ಮಿಥ್ಯಾರಾಧನೆಯ ನಾಯಕರು, ಯೇಸುವಿನ ಸ್ಪಷ್ಟವಾದ ಬೋಧನೆಗಳಿಗೆ ಅಪಾರ್ಥ ಕಲ್ಪಿಸಿ, ಅವುಗಳನ್ನು ಧಾರ್ಮಿಕ ವಂಚನೆಯ ಗಂಟುಗಳಾಗಿ ಮಾಡಿದ್ದಾರೆ. ಇಂಥವರು ಬೈಬಲ್‌ ಸತ್ಯವನ್ನು ತಳ್ಳಿಹಾಕಿ, ದೇವರ ಮತ್ತು ಕ್ರಿಸ್ತನ ಹೆಸರಿನಲ್ಲಿ ಸುಳ್ಳುಗಳನ್ನು ಹಬ್ಬಿಸುತ್ತಾರೆ. ಅವರು ತಮ್ಮ ತ್ರಯೈಕ್ಯ ಸಿದ್ಧಾಂತದ ಮೂಲಕ ತಂದೆ ಮತ್ತು ಮಗನ ಮಧ್ಯೆ ಇರುವ ನಿಜ ಸಂಬಂಧವನ್ನು ಅಲ್ಲಗಳೆಯುತ್ತಾರೆ. ಈ ಕಾರಣದಿಂದಾಗಿ, ಅವರೂ ಕ್ರಿಸ್ತವಿರೋಧಿಯ ಭಾಗವಾಗಿರುತ್ತಾರೆ.

ಲೂಕ 21:12ರಲ್ಲಿ ಯೇಸು ತನ್ನ ಶಿಷ್ಯರನ್ನು ಹೀಗೆ ಮುಂದಾಗಿಯೇ ಎಚ್ಚರಿಸಿದನು: “ಅವರು ನಿಮ್ಮನ್ನು ಹಿಡಿದು ಸಭಾಮಂದಿರಗಳ ಮತ್ತು ಸೆರೆಮನೆಗಳ ಅಧಿಕಾರಸ್ಥರ ವಶಕ್ಕೆ ಕೊಟ್ಟು ನನ್ನ ಹೆಸರಿನ ನಿಮಿತ್ತವಾಗಿ . . . ಹಿಂಸೆಪಡಿಸುವರು.” ಒಂದನೆಯ ಶತಮಾನದಿಂದಲೂ ಸತ್ಯ ಕ್ರೈಸ್ತರು ಭಯಂಕರ ಹಿಂಸೆಯನ್ನು ಸಹಿಸಿಕೊಂಡಿದ್ದಾರೆ. (2 ತಿಮೊಥೆಯ 3:12) ಇಂತಹ ಹಿಂಸೆಯನ್ನು ಚಿತಾಯಿಸುವವರು ಕ್ರಿಸ್ತನ ವಿರುದ್ಧ ಕೆಲಸಮಾಡುವವರಾಗಿದ್ದಾರೆ. ಆದಕಾರಣ ಅವರೂ ಕ್ರಿಸ್ತವಿರೋಧಿಯ ಭಾಗವಾಗಿರುತ್ತಾರೆ.

“ನನ್ನ ಪಕ್ಷ ಹಿಡಿಯದವನು ನನಗೆ ವಿರೋಧಿ; ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದರಿಸುವವನಾಗುತ್ತಾನೆ.” (ಲೂಕ 11:23) ಇಲ್ಲಿ, ತನ್ನನ್ನೂ ತಾನು ಬೆಂಬಲಿಸುವ ದೈವಿಕ ಉದ್ದೇಶಗಳನ್ನೂ ವಿರೋಧಿಸುವವರು, ಕ್ರಿಸ್ತವಿರೋಧಿಯ ವರ್ಗದವರಾಗುತ್ತಾರೆಂದು ಯೇಸು ಹೇಳುತ್ತಾನೆ. ಇವರಿಗೆ ಯಾವ ಅಂತ್ಯಫಲವು ಕಾದಿರುತ್ತದೆ?

ಕ್ರಿಸ್ತವಿರೋಧಿಗಳಿಗೆ ಏನು ಕಾದಿದೆ?

“ಸುಳ್ಳುಹೇಳುವವರನ್ನು ನಾಶಮಾಡುವಿ; ಯೆಹೋವನೇ, ನರಹತ್ಯಮಾಡುವವರೂ ಕಪಟಿಗಳೂ ನಿನಗೆ ಹೇಯವಾಗಿದ್ದಾರೆ,” ಎನ್ನುತ್ತದೆ ಕೀರ್ತನೆ 5:⁠6. ಇದು ಕ್ರಿಸ್ತವಿರೋಧಿಗಳಿಗೆ ಅನ್ವಯಿಸುತ್ತದೋ? ಹೌದು. ಅಪೊಸ್ತಲ ಯೋಹಾನನು ಬರೆದುದು: “ಮನುಷ್ಯನಾಗಿ ಬಂದಿರುವ ಯೇಸು ಕ್ರಿಸ್ತನನ್ನು ಒಪ್ಪದೆ ಇರುವ ಮೋಸಗಾರರು ಅನೇಕ ಮಂದಿ ಹೊರಟು ಲೋಕದೊಳಗೆ ಹೋಗಿದ್ದಾರೆ. ಯೇಸುವನ್ನು ಒಪ್ಪದವನು ಮೋಸಗಾರನೂ ಕ್ರಿಸ್ತವಿರೋಧಿಯೂ ಆಗಿದ್ದಾನೆ.” (2 ಯೋಹಾನ 7) ಕ್ರಿಸ್ತವಿರೋಧಿಗಳ ಸುಳ್ಳು ಮತ್ತು ವಂಚನೆಗಾಗಿ ಸರ್ವಶಕ್ತನಾದ ದೇವರು ಅವರ ಮೇಲೆ ನಾಶನವನ್ನು ಬರಮಾಡುವನು.

ಆ ಶಿಕ್ಷಾವಿಧಿ ಹತ್ತರಿಸುತ್ತಿರುವಾಗ, ಸತ್ಯ ಕ್ರೈಸ್ತರು ಧರ್ಮಭ್ರಷ್ಟರಿಂದ ಬರುವ ಈ ಕ್ರೈಸ್ತವಿರೋಧಿ ವಂಚನೆ ಮತ್ತು ಒತ್ತಡವು ತಮ್ಮ ನಂಬಿಕೆಯನ್ನು ದುರ್ಬಲಗೊಳಿಸುವಂತೆ ಬಿಡಬಾರದು. ಈ ವಿಷಯದಲ್ಲಿ ಯೋಹಾನನ ಎಚ್ಚರಿಕೆ ತುರ್ತಿನದ್ದಾಗಿದೆ: “ನಾವು ಪ್ರಯಾಸಪಟ್ಟು ಮಾಡಿದವುಗಳನ್ನು ನೀವು ಕಳಕೊಳ್ಳದೆ ಪೂರ್ಣಫಲವನ್ನು ಹೊಂದುವಂತೆ ಜಾಗರೂಕರಾಗಿರಿ.”​—⁠2 ಯೋಹಾನ 8.(g01 8/8)

[ಪುಟ 20ರಲ್ಲಿರುವ ಚಿತ್ರ ಕೃಪೆ]

20ನೆಯ ಪುಟದಲ್ಲಿರುವ ನೀರೋ: Courtesy of the Visitors of the Ashmolean Museum, Oxford