ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೂಟನ್‌ಬರ್ಗ್‌—ಜಗತ್ತನ್ನು ಸಂಪದ್ಭರಿತಗೊಳಿಸಿದ ವಿಧ!

ಗೂಟನ್‌ಬರ್ಗ್‌—ಜಗತ್ತನ್ನು ಸಂಪದ್ಭರಿತಗೊಳಿಸಿದ ವಿಧ!

ಗೂಟನ್‌ಬರ್ಗ್‌—ಜಗತ್ತನ್ನು ಸಂಪದ ರಿತಗೊಳಿಸಿದ ವಿಧ!

ಜರ್ಮನಿಯ ಎಚ್ಚರ! ಸುದ್ದಿಗಾರರಿಂದ

ಕಳೆದ ಸಾವಿರ ವರುಷಗಳ ಯಾವ ಕಂಡುಹಿಡಿತವು ನಿಮ್ಮ ಜೀವನದ ಮೇಲೆ ಅತಿ ಹೆಚ್ಚಿನ ಪ್ರಭಾವವನ್ನು ಬೀರಿದೆ? ಟೆಲಿಫೋನೊ, ಟೆಲಿವಿಷನ್ನೊ, ಅಥವಾ ಕಾರೊ? ಪ್ರಾಯಶಃ ಇವುಗಳಲ್ಲಿ ಯಾವುದೂ ಇಲ್ಲದಿರಬಹುದು. ಅನೇಕ ಪರಿಣತರಿಗನುಸಾರ, ಅದು ಯಂತ್ರೀಕರಿಸಲ್ಪಟ್ಟಿರುವ ಮುದ್ರಣವೇ ಆಗಿದೆ. ಇದರ ಪ್ರಥಮ ಪ್ರಾಯೋಗಿಕ ವಿಧಾನದ ಕಂಡುಹಿಡಿತಕ್ಕಾಗಿರುವ ಕೀರ್ತಿಯನ್ನು ಯೋಹಾನಸ್‌ ಗೂಟನ್‌ಬರ್ಗ್‌ ಎಂದು ಹೆಚ್ಚು ಪ್ರಸಿದ್ಧನಾಗಿರುವ ಯೋಹಾನಸ್‌ ಜೆನ್ಸ್‌ಫ್ಲೈಶ್‌ ಟ್ಸೂರ್‌ ಲಾಡನ್‌ ಎಂಬವನಿಗೆ ಸಲ್ಲಿಸಲಾಗುತ್ತದೆ. ಅವನು ಒಂದು ಕುಲೀನ ಹಿನ್ನೆಲೆಯಿಂದ ಬಂದವನಾಗಿದ್ದುದರಿಂದ, ಕ್ರಮವಾದ ಅಪ್ರೆಂಟಿಸ್‌ ಆಗಿ ಕೆಲಸಮಾಡಬೇಕೆಂದಿರಲಿಲ್ಲ.

ಗೂಟನ್‌ಬರ್ಗ್‌ನ ಪ್ರತಿಭೆಯ ಫಲವಾಗಿ ಹುಟ್ಟಿದ ಈ ಶಿಶುವನ್ನು “ನಾಗರಿಕತೆಗೆ ಜರ್ಮನಿಯ ಮಹಾ ಕಾಣಿಕೆ” ಎಂದು ವರ್ಣಿಸಲಾಗಿದೆ. ಅವನ ಮುದ್ರಣ ನಾಯಕಕೃತಿಯಲ್ಲಿ ಪಾರಾಗಿ ಉಳಿದಿರುವ, 42 ಪಂಕ್ತಿಗಳ ಗೂಟನ್‌ಬರ್ಗ್‌ ಬೈಬಲ್‌ ಎಂದು ಕರೆಯಲ್ಪಡುವ ಒಂದೊಂದು ಪ್ರತಿಯ ಬೆಲೆಯು ದೊಡ್ಡ ನಿಧಿಗೆ ಸಮಾನವಾಗಿದೆ.

ಗೋಲ್ಡನ್‌ ಮೈಂಟ್ಸ್‌

ಇಸವಿ 1397ರಲ್ಲಿ ಅಥವಾ ಅದರ ಸುಮಾರಿಗೆ ಗೂಟನ್‌ಬರ್ಗ್‌ ಮೈಂಟ್ಸ್‌ನಲ್ಲಿ ಜನಿಸಿದನು. ರೈನ್‌ ನದೀ ತೀರದಲ್ಲಿದ್ದ ಮೈಂಟ್ಸ್‌, ಆಗ ಸುಮಾರು 6,000 ನಿವಾಸಿಗಳಿದ್ದ ಒಂದು ಪಟ್ಟಣವಾಗಿತ್ತು. ಪ್ರಬಲವಾಗಿದ್ದ ನಗರ ಒಕ್ಕೂಟಗಳ ಕೇಂದ್ರವಾಗಿದ್ದ ಮೈಂಟ್ಸ್‌ ಆಗ ಗೋಲ್ಡನ್‌ ಮೈಂಟ್ಸ್‌ ಎಂದು ಪ್ರಸಿದ್ಧವಾಗಿತ್ತು. ಮೈಂಟ್ಸ್‌ನ ಆರ್ಚ್‌ಬಿಷಪರು ಪವಿತ್ರ ರೋಮನ್‌ ಸಾಮ್ರಾಜ್ಯದ ಮತದಾರರಾಗಿದ್ದರು. ಮೈಂಟ್ಸ್‌ ತನ್ನ ಅಕ್ಕಸಾಲಿಗರಿಗಾಗಿಯೂ ಪ್ರಸಿದ್ಧವಾಗಿತ್ತು. ಯುವ ಯೋಹಾನಸ್‌ ಲೋಹದ ಕೆಲಸದ ಕುರಿತು ಅತ್ಯಧಿಕ ವಿಷಯಗಳನ್ನು ಕಲಿತನು; ಲೋಹದಲ್ಲಿ ಉಬ್ಬಚ್ಚಿನ ಅಕ್ಷರಗಳನ್ನು ಮಾಡುವ ವಿಧವೂ ಇದರಲ್ಲಿ ಒಳಗೂಡಿತ್ತು. ಆದರೆ ರಾಜಕೀಯ ಕಚ್ಚಾಟಗಳ ಕಾರಣ ಕೆಲವು ವರ್ಷಗಳ ವರೆಗೆ ಅವನನ್ನು ಸ್ಟ್ರಾಸ್‌ಬುರ್ಗ್‌ಗೆ ಗಡೀಪಾರುಮಾಡಲಾಯಿತು. ಅಲ್ಲಿ ಅವನು ರತ್ನ ಕೆತ್ತುವ ಕೆಲಸದಲ್ಲಿ ಭಾಗವಹಿಸಿ, ಅದರ ಶಿಕ್ಷಕನೂ ಆದನು. ಆದರೆ ಹೆಚ್ಚಿನ ಸಮಯ ಒಂದು ಹೊಸ ಕಂಡುಹಿಡಿತದ ರಹಸ್ಯ ಕೆಲಸದಲ್ಲಿ ಅವನು ತನ್ನನ್ನು ನಿರತನಾಗಿಸಿಕೊಂಡನು. ಗೂಟನ್‌ಬರ್ಗ್‌ ಯಂತ್ರೀಕರಿಸಲ್ಪಟ್ಟ ಮುದ್ರಣಕಲೆಯನ್ನು ಉತ್ತಮಗೊಳಿಸಲು ಪ್ರಯತ್ನಿಸಿದನು.

ಗೂಟನ್‌ಬರ್ಗ್‌ನ ಪ್ರತಿಭೆ ಮತ್ತು ಫುಸ್ಟ್‌ನ ಹಣದ ಬೆಂಬಲ

ಗೂಟನ್‌ಬರ್ಗ್‌ ಮೈಂಟ್ಸ್‌ಗೆ ಹಿಂದಿರುಗಿದನು ಮತ್ತು ತನ್ನ ಪ್ರಯೋಗಗಳನ್ನು ಮುಂದುವರಿಸಿದನು. ಹಣದ ಬೆಂಬಲಕ್ಕಾಗಿ ಅವನು ಯೋಹಾನ್‌ ಫುಸ್ಟ್‌ನನ್ನು ವಿನಂತಿಸಿಕೊಂಡದ್ದರಿಂದ, ಅವನು 1,600 ಗೂಲ್ಡನ್‌ಗಳನ್ನು ಸಾಲವಾಗಿ ಕೊಟ್ಟನು. ಒಬ್ಬ ನುರಿತ ಕುಶಲಕರ್ಮಿಯು ಒಂದು ವರ್ಷಕ್ಕೆ ಕೇವಲ 30 ಗೂಲ್ಡನ್‌ಗಳನ್ನು ಪಡೆಯುತ್ತಿದ್ದ ಸಮಯದಲ್ಲಿ ಅದು ರಾಜಾರ್ಹವಾದ ಹಣವಾಗಿತ್ತು. ಫುಸ್ಟ್‌ ಚುರುಕು ಬುದ್ಧಿಯ ವ್ಯಾಪಾರಸ್ಥನಾಗಿದ್ದು, ಈ ವ್ಯಾಪಾರೋದ್ಯಮದಲ್ಲಿ ಲಾಭವಿರುವುದನ್ನು ಕಂಡನು. ಆದರೆ ಗೂಟನ್‌ಬರ್ಗ್‌ನ ಮನಸ್ಸಿನಲ್ಲಿ ಯಾವ ರೀತಿಯ ಉದ್ಯಮವಿತ್ತು?

ಕೆಲವು ನಿರ್ದಿಷ್ಟ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದ್ದು, ಒಂದು ಇನ್ನೊಂದಕ್ಕೆ ಪ್ರತಿರೂಪವಾಗಿರುವುದನ್ನು ಗೂಟನ್‌ಬರ್ಗ್‌ನ ಚುರುಕು ದೃಷ್ಟಿಯು ಅವಲೋಕಿಸಿತು. ಉದಾಹರಣೆಗೆ, ನಾಣ್ಯಗಳನ್ನು ಟಂಕಿಸಲಾಗುತ್ತಿತ್ತು ಮತ್ತು ಬಂದೂಕಿನ ಗುಂಡುಗಳನ್ನು ಲೋಹದಲ್ಲಿ ಅಚ್ಚೊತ್ತಲಾಗುತ್ತಿತ್ತು. ಹಾಗಾದರೆ ಬರಹದ ನೂರಾರು ಏಕಪ್ರಕಾರವಾದ ಪುಟಗಳನ್ನು ಏಕೆ ಮುದ್ರಿಸಬಾರದು ಮತ್ತು ಆ ಪುಟಗಳನ್ನು ಸಂಖ್ಯಾಕ್ರಮವಾಗಿ ಒಟ್ಟುಸೇರಿಸಿ, ಏಕರೂಪದ ಪುಸ್ತಕಗಳಾಗಿ ಏಕೆ ಮಾಡಬಾರದು? ಆದರೆ ಯಾವ ಪುಸ್ತಕಗಳು? ಅವನಿಗೆ ಬೈಬಲ್‌ ಮನಸ್ಸಿಗೆ ಬಂತು. ಆ ಗ್ರಂಥವು ಎಷ್ಟು ಬೆಲೆಯುಳ್ಳದ್ದಾಗಿತ್ತೆಂದರೆ, ಸೌಲಭ್ಯವುಳ್ಳ ಕೆಲವೇ ಜನರ ಬಳಿ ಅವರ ಸ್ವಂತ ಪ್ರತಿಗಳಿದ್ದವು. ತದ್ರೂಪದ ಬೈಬಲುಗಳನ್ನು ಅಧಿಕ ಸಂಖ್ಯೆಯಲ್ಲಿ ಉತ್ಪಾದಿಸುವುದು ಗೂಟನ್‌ಬರ್ಗ್‌ನ ಗುರಿಯಾಗಿತ್ತು. ಏಕೆಂದರೆ ಆಗ ಅವು ಹಸ್ತಪ್ರತಿಗಳಿಗಿಂತ ತುಂಬ ಕಡಿಮೆ ಬೆಲೆಯದ್ದಾಗಿರುವವು ಮಾತ್ರವಲ್ಲ, ಹಸ್ತಪ್ರತಿಗಳ ಸೌಂದರ್ಯವನ್ನೂ ತ್ಯಾಗಮಾಡಬೇಕಾಗಿರುವುದಿಲ್ಲ. ಆದರೆ ಅದನ್ನು ತಯಾರಿಸುವುದು ಹೇಗೆ?

ಆಗ ಹೆಚ್ಚಿನ ಪುಸ್ತಕಗಳನ್ನು ಕೈಯಿಂದ ಬರೆದು ನಕಲು ಮಾಡಲಾಗುತ್ತಿತ್ತು. ಇದಕ್ಕೆ ಶ್ರದ್ಧೆ ಮತ್ತು ಸಮಯದ ಅಗತ್ಯವಿತ್ತು. ಕೈಯಿಂದ ಕೆತ್ತಿದ ಮರದ ಪಡಿಯಚ್ಚಿನಿಂದ ಮುದ್ರಣ ಮಾಡುವುದನ್ನು ಈ ಮೊದಲು ಪ್ರಯತ್ನಿಸಲಾಗಿತ್ತು. ಪ್ರತಿ ಪಡಿಯಚ್ಚಿನಲ್ಲಿ ಬರಹದ ಒಂದು ಪುಟವಿತ್ತು. ಬೀ ಷೆಂಗ್‌ ಎಂಬ ಹೆಸರಿನ ಚೀನೀ ವ್ಯಕ್ತಿಯು, ಮುದ್ರಣದಲ್ಲಿ ಉಪಯೋಗಿಸಲಿಕ್ಕಾಗಿ ಮಣ್ಣಿನಿಂದ ಪ್ರತ್ಯೇಕ ಅಕ್ಷರಗಳನ್ನು ಸಹ ಮಾಡಿದ್ದನು. ಕೊರಿಯದಲ್ಲಿ, ಸರಕಾರೀ ಮುದ್ರಣಾಲಯವೊಂದರಲ್ಲಿ ತಾಮ್ರದಿಂದ ಮಾಡಲ್ಪಟ್ಟ ಅಕ್ಷರಗಳನ್ನು ಉಪಯೋಗಿಸಲಾಗಿತ್ತು. ಆದರೆ ಚಲಿಸಬಲ್ಲ ಅಚ್ಚುಮೊಳೆಯಿಂದ ಮುದ್ರಿಸಬೇಕಾದರೆ, ಅಂದರೆ ಪ್ರತಿಯೊಂದು ಹೊಸ ಪುಟಕ್ಕೆ ಪುನಃ ಜೋಡಿಸಸಾಧ್ಯವಿದ್ದ ಪ್ರತ್ಯೇಕ ಅಕ್ಷರಗಳಿಂದ ಮುದ್ರಿಸಬೇಕಾದರೆ, ಅಕ್ಷರಗಳು ಅತ್ಯಧಿಕ ಸಂಖ್ಯೆಯಲ್ಲಿ ದೊರೆಯಬೇಕಾಗುತ್ತಿತ್ತು ಮತ್ತು ಅದುವರೆಗೆ ಯಾರೂ ಅವುಗಳನ್ನು ಹಾಗೆ ಉತ್ಪಾದಿಸುವ ರೀತಿಯನ್ನು ವಿಕಸಿಸಿರಲಿಲ್ಲ. ಇದು ಗೂಟನ್‌ಬರ್ಗ್‌ಗಾಗಿ ಕಾದಿರಿಸಲ್ಪಟ್ಟಿತ್ತು.

ಅನುಭವಸ್ಥ ಲೋಹ ಕರ್ಮಚಾರಿಯಾಗಿದ್ದ ಅವನು, ಇಂತಹ ಮುದ್ರಣವನ್ನು ಮಣ್ಣು ಅಥವಾ ಮರದಿಂದಲ್ಲ, ಬದಲಾಗಿ ಲೋಹದಿಂದ ಮಾಡಿದ ಚಲಿಸಸಾಧ್ಯವಿರುವ ಅಕ್ಷರಗಳಿಂದ ಸಾಧಿಸಸಾಧ್ಯವಿದೆ ಎಂದು ಗ್ರಹಿಸಿದನು. ಅವನ್ನು ಕೆತ್ತಿ ಅಥವಾ ಕುಲುಮೆಯಲ್ಲಿ ಕಾಯಿಸಿ ಮಾಡುವುದಲ್ಲ, ಅಚ್ಚಿನಲ್ಲಿ ಎರಕ ಹೊಯ್ದು ಮಾಡಬೇಕಾಗಿತ್ತು. ಇಂಗ್ಲಿಷ್‌ ಅಕ್ಷರಮಾಲೆಯ ಎಲ್ಲ 26 ಅಕ್ಷರಗಳನ್ನು, ಅವುಗಳ ಸಣ್ಣಕ್ಷರ, ದೊಡ್ಡಕ್ಷರ, ಎರಡಕ್ಷರ, ವಿರಾಮ ಚಿಹ್ನೆಗಳು, ಸಂಕೇತಗಳು ಮತ್ತು ಅಂಕೆಗಳು​—⁠ಇವೆಲ್ಲವನ್ನೂ ಎರಕ ಹೊಯ್ಯಲು ಗೂಟನ್‌ಬರ್ಗ್‌ಗೆ ಅಚ್ಚುಗಳ ಆವಶ್ಯಕತೆಯಿತ್ತು. ಒಟ್ಟಿಗೆ, 290 ವಿವಿಧ ಅಕ್ಷರಸಂಕೇತಗಳು ಆವಶ್ಯಕವೆಂದು ಅವನು ಲೆಕ್ಕಹಾಕಿದನು. ಅವುಗಳಲ್ಲಿ ಪ್ರತಿಯೊಂದು ಅಕ್ಷರಸಂಕೇತದ ಹತ್ತಾರು ಪ್ರತಿಕೃತಿಗಳನ್ನು ನಿರ್ಮಿಸಬೇಕಾಗಿತ್ತು.

ಕಾರ್ಯಾರಂಭ

ತನ್ನ ಪುಸ್ತಕಕ್ಕೆ ಗೂಟನ್‌ಬರ್ಗ್‌ ಲ್ಯಾಟಿನ್‌ ಭಾಷೆಯ ಗಾಥಿಕ್‌ ಲಿಪಿಯ ಶೈಲಿಯನ್ನು ಆರಿಸಿಕೊಂಡನು. ಇದನ್ನು ಕ್ರೈಸ್ತ ಸಂನ್ಯಾಸಿಗಳು ಬೈಬಲನ್ನು ನಕಲುಮಾಡಲು ಉಪಯೋಗಿಸುತ್ತಿದ್ದರು. ತನ್ನ ಲೋಹದ ಕೆಲಸದ ಅನುಭವವನ್ನು ಉಪಯೋಗಿಸುತ್ತ, ಅವನು ಒಂದು ಚಿಕ್ಕ ಉಕ್ಕಿನ ದಿಮ್ಮಿಯ ಮೇಲೆ ಪ್ರತಿಯೊಂದು ಅಕ್ಷರದ ಮತ್ತು ಸಂಕೇತದ ಉಬ್ಬು ಕನ್ನಡಿ ಬಿಂಬವನ್ನು, ಅಂದರೆ ಉಕ್ಕಿನ ಮೇಲ್ಮೈಯಲ್ಲಿ ಉಬ್ಬು ಚಿತ್ರಣ ಬಿಂಬವನ್ನು ಕೆತ್ತಿದನು. (ಚಿತ್ರ 1) ಈ ಉಕ್ಕಿನ ಮುದ್ರೆಯನ್ನು, ಆ ಬಳಿಕ ಸ್ವಲ್ಪ ಮೃದು ಲೋಹವಾಗಿದ್ದ ತಾಮ್ರ ಅಥವಾ ಕಂಚಿನ ಸಣ್ಣ ತುಂಡಿನ ಮೇಲೆ ಬಿಂಬವನ್ನೊತ್ತಲು ಉಪಯೋಗಿಸಲಾಯಿತು. ಇದರ ಫಲಿತಾಂಶವು, ಮೃದು ಲೋಹದೊಳಕ್ಕೆ ಒತ್ತಿದ್ದ ಅಕ್ಷರದ ಅಚ್ಚು ಅಥವಾ ಮ್ಯಾಟ್ರಿಕ್ಸ್‌ ಎಂದು ಕರೆಯಲ್ಪಡುವ ನಿಜ ಬಿಂಬವಾಗಿತ್ತು.

ಮುಂದಿನ ಹಂತದಲ್ಲಿ ಗೂಟನ್‌ಬರ್ಗ್‌ನ ಪ್ರತಿಭಾವಂತ ಶಕ್ತಿಯ ಉತ್ಪನ್ನವಾದ ಎರಕ ಹೊಯ್ಯುವ ಅಚ್ಚು ಒಳಗೂಡಿತ್ತು. ಈ ಅಚ್ಚು ಮನುಷ್ಯನ ಮುಷ್ಟಿಯ ಗಾತ್ರದ್ದಾಗಿದ್ದು, ಮೇಲ್ಭಾಗದಲ್ಲಿಯೂ ಕೆಳಭಾಗದಲ್ಲಿಯೂ ತೆರೆದಿತ್ತು. ಒಂದು ಅಕ್ಷರದ ಅಚ್ಚನ್ನು ಎರಕ ಹೊಯ್ಯುವ ಅಚ್ಚಿನ ಕೆಳಭಾಗದಲ್ಲಿ ಜೋಡಿಸಿ, ಮೇಲಿನಿಂದ ಕರಗಿಸಿದ ಮಿಶ್ರಲೋಹವನ್ನು ಹೊಯ್ಯಲಾಯಿತು. (ಚಿತ್ರ 2) ತವರ, ಸೀಸ, ಆ್ಯಂಟಿಮನಿ ಧಾತು ಮತ್ತು ಬಿಸ್ಮತ್‌ ಧಾತು ಸೇರಿದ ಈ ಮಿಶ್ರಲೋಹವು ಬೇಗನೆ ತಣ್ಣಗಾಗಿ ಗಟ್ಟಿಯಾಯಿತು.

ಅಚ್ಚಿನಿಂದ ತೆಗೆದ ಮಿಶ್ರಲೋಹದ ಒಂದು ಕೊನೆಯಲ್ಲಿ, ಆ ಅಕ್ಷರದ ಅಚ್ಚಿನ ಮೊಳೆಯೆಂದು ಕರೆಯಲ್ಪಟ್ಟ ಉಬ್ಬು ಕನ್ನಡಿ ಬಿಂಬವಿತ್ತು. ಆ ಅಕ್ಷರದ ಸಾಕಷ್ಟು ಸಂಖ್ಯೆಯು ಉತ್ಪಾದಿಸಲ್ಪಡುವ ತನಕ ಆ ಕ್ರಮವಿಧಾನವನ್ನು ಪುನರಾವರ್ತಿಸಲಾಯಿತು. ಬಳಿಕ ಆ ನಿಜ ಬಿಂಬವನ್ನು ಅಚ್ಚಿನಿಂದ ತೆಗೆದು ಮುಂದಿನ ಅಕ್ಷರದ ನಿಜ ಬಿಂಬವನ್ನು ಸೇರಿಸಲಾಯಿತು. ಹೀಗೆ, ಪ್ರತಿ ಅಕ್ಷರದ ಮತ್ತು ಸಂಕೇತದ ಎಷ್ಟು ಅಚ್ಚಿನ ಮೊಳೆ ಬೇಕಾಗುವುದಾದರೂ ಅದನ್ನು ಸ್ವಲ್ಪ ಸಮಯದಲ್ಲಿಯೇ ತಯಾರಿಸಸಾಧ್ಯವಿತ್ತು. ಗೂಟನ್‌ಬರ್ಗ್‌ ಬಯಸಿದಂತೆಯೇ, ಎಲ್ಲ ಅಚ್ಚಿನ ಮೊಳೆಗಳೂ ಸಮಾನ ಎತ್ತರದವುಗಳಾಗಿದ್ದವು.

ಈಗ ಮುದ್ರಣವನ್ನು ಆರಂಭಿಸಸಾಧ್ಯವಿತ್ತು. ಬೈಬಲಿನ ಒಂದು ಚಿಕ್ಕ ಭಾಗವನ್ನು ನಕಲುಮಾಡಲು ಗೂಟನ್‌ಬರ್ಗ್‌ ನಿಶ್ಚಯಿಸಿದನು. ಅವನು ಮೊಳೆ ಹಿಡಿಕೆಯನ್ನು ಹಿಡಿದುಕೊಂಡು ಪದಗಳನ್ನು ಅಕ್ಷರಕ್ಷರವಾಗಿ ಜೋಡಿಸಲು ಅಚ್ಚುಮೊಳೆಯನ್ನು ಉಪಯೋಗಿಸಿ, ಪದಗಳನ್ನು ಗ್ರಂಥಪಾಠದ ಸಾಲುಗಳಾಗಿ ರೂಪಿಸಿದನು. (ಚಿತ್ರ 3) ಪ್ರತಿಯೊಂದು ಪಂಕ್ತಿಯನ್ನು ಸರಿಹೊಂದಿಸಲಾಯಿತು, ಅಂದರೆ ಅವುಗಳ ಉದ್ದ ಏಕಪ್ರಕಾರವಾಗಿರುವಂತೆ ಮಾಡಲಾಯಿತು. ಗ್ಯಾಲಿ ತಟ್ಟೆಯನ್ನು ಉಪಯೋಗಿಸಿ ಅವನು ಪಂಕ್ತಿಗಳನ್ನು ಗ್ರಂಥಪಾಠದ ಅಂಕಣಗಳಾಗಿ, ಒಂದು ಪುಟಕ್ಕೆ ಎರಡು ಅಂಕಣಗಳಾಗಿ ಜೋಡಿಸಿದನು. (ಚಿತ್ರ 4)

ಗ್ರಂಥಪಾಠದ ಈ ಪುಟವನ್ನು ಅವನು ಮುದ್ರಣ ಯಂತ್ರದ ಅಚ್ಚುಹಲಗೆಯ ಮೇಲೆ ತಕ್ಕ ಸ್ಥಾನದಲ್ಲಿ ಬಿಗಿಯಾಗಿ ಕಟ್ಟಿ, ಬಳಿಕ ಅದಕ್ಕೆ ಕಪ್ಪು ಶಾಯಿಯನ್ನು ಹಚ್ಚಿದನು. (ಚಿತ್ರ 5) ದ್ರಾಕ್ಷಾಮದ್ಯವನ್ನು ಮಾಡುವ ಗಾಣದಂತಹ ಒತ್ತುಯಂತ್ರವು ಶಾಯಿಯನ್ನು ಅಚ್ಚುಮೊಳೆಯಿಂದ ಕಾಗದಕ್ಕೆ ಸ್ಥಾನಾಂತರಿಸಿತು. ಇದರ ಫಲಿತಾಂಶವೇ ಮುದ್ರಿತ ಪುಟವಾಯಿತು. ಇನ್ನೂ ಹೆಚ್ಚು ಶಾಯಿ ಮತ್ತು ಕಾಗದವನ್ನು ಉಪಯೋಗಿಸಿ ಸಾಕಷ್ಟು ಪ್ರತಿಗಳು ಮುದ್ರಣಗೊಳ್ಳುವ ತನಕ ಈ ವಿಧಾನವನ್ನು ಪುನರಾವರ್ತಿಸಲಾಯಿತು. ಚಲಿಸಸಾಧ್ಯವಿದ್ದ ಅಚ್ಚುಮೊಳೆ ಇದಾಗಿದ್ದುದರಿಂದ, ಇನ್ನೊಂದು ಪುಟದ ಅಕ್ಷರಗಳನ್ನು ಜೋಡಿಸಲಿಕ್ಕಾಗಿ ಇದನ್ನು ಪುನಃ ಉಪಯೋಗಿಸಸಾಧ್ಯವಿತ್ತು.

ಮುದ್ರಣಕಲೆಯ ನಾಯಕಕೃತಿ

ಗೂಟನ್‌ಬರ್ಗ್‌ನ 15ರಿಂದ 20 ಜನ ಕೆಲಸಕ್ಕಿದ್ದ ಕಾರ್ಖಾನೆಯು 1455ರಲ್ಲಿ ತನ್ನ ಪ್ರಥಮ ಮುದ್ರಿತ ಬೈಬಲನ್ನು ಮುಗಿಸಿತು. ಸುಮಾರು 180 ಪ್ರತಿಗಳು ತಯಾರಿಸಲ್ಪಟ್ಟವು. ಪ್ರತಿ ಬೈಬಲಿನಲ್ಲಿ 1,282 ಪುಟಗಳೂ, ಒಂದು ಪುಟದಲ್ಲಿ 42 ಸಾಲುಗಳೂ ಎರಡು ಅಂಕಣಗಳೂ ಇದ್ದವು. ಪ್ರತಿ ಬೈಬಲಿಗೆ ಎರಡು ಸಂಪುಟಗಳಿದ್ದ ಈ ಗ್ರಂಥಗಳಿಗೆ ಬೈಂಡಿಂಗ್‌ ಮಾಡುವ ಕೆಲಸವನ್ನು ಮತ್ತು ಶಿರೋನಾಮಗಳ ಹಾಗೂ ಪ್ರತಿ ಅಧ್ಯಾಯದ ಪ್ರಥಮಾಕ್ಷರದ ಆಲಂಕಾರಿಕ ಕೈಚಿತ್ರಿತ ಚಿತ್ರಗಳನ್ನು ತರುವಾಯ ಗೂಟನ್‌ಬರ್ಗ್‌ನ ಕಾರ್ಖಾನೆಯ ಹೊರಗೆ ಮಾಡಿಸಲಾಯಿತು.

ಬೈಬಲನ್ನು ಮುದ್ರಿಸಲು ಎಷ್ಟು ಅಚ್ಚುಮೊಳೆಗಳ ಆವಶ್ಯಕತೆಯಿತ್ತೆಂದು ನಾವು ಊಹಿಸಿಕೊಳ್ಳಸಾಧ್ಯವಿದೆಯೋ? ಪ್ರತಿಯೊಂದು ಪುಟದಲ್ಲಿ 2,600 ಅಕ್ಷರಗಳು ಒಳಗೂಡಿವೆ. ಗೂಟನ್‌ಬರ್ಗ್‌ ಬಳಿ ಆರು ಮಂದಿ ಅಚ್ಚುಮೊಳೆ ಜೋಡಿಸುವವರಿದ್ದರೆಂದು ನೆನಸೋಣ. ಅವರಲ್ಲಿ ಪ್ರತಿಯೊಬ್ಬನು ಒಂದು ಸಲಕ್ಕೆ ಮೂರು ಪುಟಗಳ ಕೆಲಸವನ್ನು ಮಾಡಿದರೂ, 46,000 ಅಚ್ಚುಮೊಳೆಗಳ ಆವಶ್ಯಕತೆ ಅವರಿಗಿತ್ತು. ಹಾಗಾದರೆ, ಚಲಿಸಸಾಧ್ಯವಾದ ಅಕ್ಷರಗಳಿಂದ ಮುದ್ರಿಸುವುದರ ಕೀಲಿ ಕೈ, ಗೂಟನ್‌ಬರ್ಗ್‌ನ ಎರಕ ಹೊಯ್ಯುವ ಅಚ್ಚಿನಲ್ಲಿತ್ತು ಎಂಬುದನ್ನು ನಾವು ಸುಲಭವಾಗಿ ತಿಳಿಯಸಾಧ್ಯವಿದೆ.

ಜನರು ಆ ಬೈಬಲುಗಳನ್ನು ಹೋಲಿಸಿ ನೋಡಿದಾಗ ಬೆರಗಾದರು; ಏಕೆಂದರೆ ಆ ಪ್ರತಿಗಳ ಪ್ರತಿಯೊಂದು ಪದವು ಎಲ್ಲ ಪ್ರತಿಗಳಲ್ಲೂ ಒಂದೇ ಸ್ಥಾನದಲ್ಲಿತ್ತು. ಕೈಬರಹದ ಕಾಗದಪತ್ರಗಳಲ್ಲಿ ಹಾಗಿರುವುದು ಅಸಾಧ್ಯವಾಗಿತ್ತು. ಗೂಂಟರ್‌ ಎಸ್‌. ವೇಗ್‌ನರ್‌ 42-ಸಾಲುಗಳ ಈ ಬೈಬಲಿನ ಕುರಿತು, “ಅದರಲ್ಲಿ ಎಷ್ಟೊಂದು ಏಕರೂಪತೆ, ಸಮಪ್ರಮಾಣತೆ, ಸಾಮರಸ್ಯ ಮತ್ತು ಸೌಂದರ್ಯವಿತ್ತೆಂದರೆ, ಶತಮಾನಗಳಾದ್ಯಂತ ಮುದ್ರಣಕಾರರು ಈ ನಾಯಕಕೃತಿಯನ್ನು ನೋಡಿ ಬೆರಗಾಗಿದ್ದಾರೆ.”

ಆರ್ಥಿಕ ನಷ್ಟ

ಆದರೆ ಫುಸ್ಟ್‌ ಹಣಮಾಡುವುದರಲ್ಲಿ ಆಸಕ್ತನಾಗಿದ್ದನು, ನಾಯಕಕೃತಿಯನ್ನು ಮಾಡುವುದರಲ್ಲಲ್ಲ. ಅವನು ಹಾಕಿದ ಬಂಡವಾಳದಿಂದ ಆದಾಯ ಬರಲು, ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ಹಿಡಿಯಿತು. ಈ ಕಾರಣದಿಂದ ಈ ಸಹಭಾಗಿಗಳಲ್ಲಿ ಸ್ನೇಹಭಂಗವಾಯಿತು. ಮತ್ತು 1455ರಲ್ಲಿ, ಇನ್ನೇನು ಬೈಬಲುಗಳ ಕೆಲಸ ಮುಗಿಯಿತು ಎನ್ನುವಷ್ಟರೊಳಗೆ ಫುಸ್ಟ್‌ ಸಾಲದ ಹಕ್ಕನ್ನು ರದ್ದುಗೊಳಿಸಿದನು. ಗೂಟನ್‌ಬರ್ಗ್‌ಗೆ ಹಣ ಹಿಂದಿರುಗಿಸಲು ಸಾಧ್ಯವಾಗಲಿಲ್ಲ ಮತ್ತು ಅವನು ಕೋರ್ಟ್‌ನಲ್ಲಿ ನಡೆದ ಮೊಕದ್ದಮೆಯಲ್ಲಿಯೂ ಸೋತುಹೋದನು. ಅವನು ತನ್ನ ಮುದ್ರಣ ಸಲಕರಣೆಗಳಲ್ಲಿ ಕೆಲವನ್ನು ಮತ್ತು ಬೈಬಲಿನ ಅಚ್ಚುಮೊಳೆಗಳಲ್ಲಿ ಕೆಲವನ್ನು ಫುಸ್ಟ್‌ಗೆ ಕೊಡುವಂತೆ ನಿರ್ಬಂಧಿಸಲ್ಪಟ್ಟನು. ಆಗ ಫುಸ್ಟ್‌, ಗೂಟನ್‌ಬರ್ಗ್‌ನ ಕುಶಲ ಕೆಲಸಗಾರನಾಗಿದ್ದ ಪೀಟರ್‌ ಶೋಫರ್‌ ಎಂಬುವವನ ಜೊತೆಗೆ ತನ್ನ ಸ್ವಂತ ಮುದ್ರಣಾಲಯವನ್ನು ತೆರೆದನು. ಫುಸ್ಟ್‌ ಆ್ಯಂಡ್‌ ಶೋಫರ್‌ ಎಂಬ ಹೆಸರಿನ ಅವರ ವ್ಯಾಪಾರ ಸಂಸ್ಥೆಯು, ಗೂಟನ್‌ಬರ್ಗ್‌ ಸಂಪಾದಿಸಿದ್ದ ಒಳ್ಳೆಯ ಹೆಸರಿನ ಫಲವನ್ನು ಕೊಯ್ಯುತ್ತಾ, ಜಗತ್ತಿನ ಪ್ರಥಮ ಜಯಪ್ರದ ವ್ಯಾಪಾರೋದ್ಯಮ ಮುದ್ರಣಾಲಯವಾಗಿ ಪರಿಣಮಿಸಿತು.

ಗೂಟನ್‌ಬರ್ಗ್‌ ಇನ್ನೊಂದು ಮುದ್ರಣಾಲಯವನ್ನು ಸ್ಥಾಪಿಸುವ ಮೂಲಕ ತನ್ನ ಕೆಲಸವನ್ನು ಮುಂದುವರಿಸಲು ಪ್ರಯತ್ನಿಸಿದನು. 15ನೆಯ ಶತಮಾನದಷ್ಟು ಹಿಂದಿನದ್ದೆನ್ನಲಾದ ಕೆಲವು ಮುದ್ರಿತ ವಿಷಯಗಳನ್ನು ಕೆಲವು ವಿದ್ವಾಂಸರು ಗೂಟನ್‌ಬರ್ಗ್‌ಗೆ ಸೇರಿದ್ದೆಂದು ಹೇಳುತ್ತಾರಾದರೂ, ಆ 42-ಸಾಲುಗಳ ಬೈಬಲಿಗಿದ್ದ ಘನತೆ ಮತ್ತು ವೈಭವವು ಇನ್ನಾವುದಕ್ಕೂ ಇರಲಿಲ್ಲ. ಮತ್ತು 1462ರಲ್ಲಿ ಇನ್ನೊಮ್ಮೆ ಆಪತ್ತು ಬಡಿಯಿತು. ಕ್ಯಾಥೊಲಿಕ್‌ ಪಾದ್ರಿಪ್ರಭುತ್ವದಲ್ಲಿ ನಡೆದ ಅಧಿಕಾರದ ಹೋರಾಟದ ಫಲವಾಗಿ, ಮೈಂಟ್ಸ್‌ ನಗರವು ಸುಡಲ್ಪಟ್ಟು ಸೂರೆಮಾಡಲ್ಪಟ್ಟಿತು. ಹೀಗೆ ಗೂಟನ್‌ಬರ್ಗ್‌ ತನ್ನ ಕಾರ್ಖಾನೆಯನ್ನು ಎರಡನೆಯ ಸಲ ಕಳೆದುಕೊಂಡನು. ಆರು ವರುಷಗಳ ಬಳಿಕ, 1468ರ ಫೆಬ್ರವರಿಯಲ್ಲಿ ಅವನು ನಿಧನನಾದನು.

ಗೂಟನ್‌ಬರ್ಗ್‌ನ ಪರಂಪರೆ

ಗೂಟನ್‌ಬರ್ಗ್‌ನ ಕಂಡುಹಿಡಿತವು ಶೀಘ್ರವಾಗಿ ವ್ಯಾಪಿಸತೊಡಗಿತು. ವರುಷ 1500ರಷ್ಟಕ್ಕೆ 60 ಜರ್ಮನ್‌ ನಗರಗಳಲ್ಲಿ ಮತ್ತು 12 ಇತರ ಯೂರೋಪಿಯನ್‌ ದೇಶಗಳಲ್ಲಿ ಮುದ್ರಣಾಲಯಗಳಿದ್ದವು. ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ಈ ಮುದ್ರಣ ವಿಕಸನವು ಸಂಪರ್ಕ ಸಾಧನದ ಚಳುವಳಿಯಾಗಿ ಪರಿಣಮಿಸಿತು. ಮುಂದಿನ 500 ವರ್ಷಗಳಲ್ಲಿ ಮುದ್ರಣದ ಯಂತ್ರೀಕರಣದಲ್ಲಿ ಎಷ್ಟೋ ಅಭಿವೃದ್ಧಿಗಳನ್ನು ಮಾಡಲಾಯಿತಾದರೂ, ಪ್ರಾಥಮಿಕ ಕಾರ್ಯವಿಧಾನವು ಹೆಚ್ಚುಕಡಿಮೆ ಮೊದಲಿದ್ದಂತೆಯೇ ಉಳಿಯಿತು.”

ಮುದ್ರಣವು ಯೂರೋಪಿನ ಜನಜೀವನವನ್ನು ರೂಪಾಂತರಿಸಿತು. ಈಗ ಜ್ಞಾನವು ಕೇವಲ ಸವಲತ್ತಿದ್ದವರ ರಕ್ಷಿತ ಕ್ಷೇತ್ರವಾಗಿರಲಿಲ್ಲ. ಸುದ್ದಿ ಮತ್ತು ಮಾಹಿತಿಗಳು ಜನಸಾಮಾನ್ಯರಿಗೆ ತಲಪತೊಡಗಿದವು. ಅವರು ತಮ್ಮ ಸುತ್ತಲೂ ನಡೆಯುತ್ತಿದ್ದ ವಿಷಯಗಳ ಪ್ರಜ್ಞೆಯುಳ್ಳವರಾದರು. ಮುದ್ರಣವು, ಪ್ರತಿಯೊಂದು ರಾಷ್ಟ್ರೀಯ ಭಾಷೆಗೆ ಎಲ್ಲರೂ ಅರ್ಥಮಾಡಿಕೊಳ್ಳಬಲ್ಲ ಒಂದು ಆದರ್ಶ ಬರವಣಿಗೆಯ ರೂಪವನ್ನು ಕೊಡುವಂತೆ ಮಾಡಿತು. ಆ ಕಾರಣದಿಂದ, ಇಂಗ್ಲಿಷ್‌, ಫ್ರೆಂಚ್‌ ಮತ್ತು ಜರ್ಮನ್‌ ಭಾಷೆಗಳಿಗೆ ಒಂದು ಆದರ್ಶ ಬರಹ ರೂಪವು ಕೊಡಲ್ಪಟ್ಟು, ಅವುಗಳನ್ನು ಕಾದಿರಿಸಲಾಯಿತು. ವಾಚನ ಸಾಮಗ್ರಿಗಳಿಗೆ ಬೇಡಿಕೆಯು ಬೃಹತ್‌ ಸಂಖ್ಯೆಯಲ್ಲಿ ಹೆಚ್ಚಿತು. ಗೂಟನ್‌ಬರ್ಗ್‌ಗೆ ಮುಂಚಿತವಾಗಿ ಯೂರೋಪಿನಲ್ಲಿ ಕೆಲವು ಸಾವಿರ ಹಸ್ತಪ್ರತಿಗಳಿದ್ದವು; ಆದರೆ ಅವನ ಮರಣಾನಂತರ 50 ವರುಷಗಳಲ್ಲಿ ದಶಲಕ್ಷಾಂತರ ಪುಸ್ತಕಗಳು ಕಂಡುಬಂದವು.

ಯಂತ್ರೀಕೃತ ಮುದ್ರಣವಿಲ್ಲದಿರುತ್ತಿದ್ದಲ್ಲಿ 16ನೆಯ ಶತಮಾನದ ಮತಸುಧಾರಣೆಯು ಖಂಡಿತ ಯಶಸ್ವಿಯಾಗುತ್ತಿರಲಿಲ್ಲ. ಆಗ ಬೈಬಲು ಇಂಗ್ಲಿಷ್‌, ಇಟ್ಯಾಲಿಯನ್‌, ಚೆಕ್‌, ಜರ್ಮನ್‌, ಡಚ್‌, ಪೋಲಿಶ್‌, ಫ್ರೆಂಚ್‌ ಮತ್ತು ರಷ್ಯನ್‌ ಭಾಷೆಗಳಿಗೆ ತರ್ಜುಮೆಗೊಂಡಿತು ಮತ್ತು ಮುದ್ರಣ ಯಂತ್ರಗಳು ಇದರ ಹತ್ತಾರು ಸಾವಿರ ಪ್ರತಿಗಳನ್ನು ಪ್ರಕಟಿಸುವುದನ್ನು ಸುಲಭವಾಗಿ ಮಾಡಿದವು. ತನ್ನ ಸಂದೇಶವನ್ನು ಹಬ್ಬಿಸುವುದರಲ್ಲಿ ಮಾರ್ಟಿನ್‌ ಲೂಥರ್‌ ಮುದ್ರಣ ಯಂತ್ರದ ಸದುಪಯೋಗ ಮಾಡಿದನು. ಗೂಟನ್‌ಬರ್ಗ್‌ನ ಮುದ್ರಣ ಯಂತ್ರದ ಕಂಡುಹಿಡಿತಕ್ಕೆ ಮುಂಚೆ ಜೀವಿಸಿದ್ದ ಇತರರು ಇದರಲ್ಲಿ ವಿಫಲರಾಗಿದ್ದರೂ, ಲೂಥರ್‌ ತನ್ನ ಪ್ರಯತ್ನಗಳಲ್ಲಿ ಜಯಹೊಂದಿದನು. ಮುದ್ರಣ ಯಂತ್ರವು “ಸತ್ಯ ಧರ್ಮವನ್ನು ಜಗತ್ತಿನಲ್ಲೆಲ್ಲ ಹರಡಿಸಲು” ದೇವರು ತೆರೆದ ಮಾರ್ಗವೆಂದು ಲೂಥರ್‌ ವರ್ಣಿಸಿದ್ದು ಆಶ್ಚರ್ಯಕರವೇನಲ್ಲ!

ಗೂಟನ್‌ಬರ್ಗ್‌ ಬೈಬಲಿನ ಪಾರಾಗಿ ಉಳಿದಿರುವ ಪ್ರತಿಗಳು

ಗೂಟನ್‌ಬರ್ಗ್‌ ಬೈಬಲುಗಳಲ್ಲಿ ಎಷ್ಟು ಉಳಿದಿವೆ? ಇಷ್ಟರ ತನಕ ಇದರ ಸಂಖ್ಯೆ 48 ಎಂದು ನಂಬಲಾಗುತ್ತಿತ್ತು. ಇವುಗಳಲ್ಲಿ ಕೆಲವು ಅಸಂಪೂರ್ಣವಾದ ಬೈಬಲುಗಳಾಗಿದ್ದು, ಅವು ಯೂರೋಪ್‌ ಮತ್ತು ಉತ್ತರ ಅಮೆರಿಕದಲ್ಲಿ ಚದರಿವೆ. ಇದರ ಅತಿ ಸುಸಂಸ್ಕೃತ ಪ್ರತಿಗಳಲ್ಲಿ ಒಂದು, ವಾಷಿಂಗ್ಟನ್‌ ಡಿ.ಸಿ.ಯ ಲೈಬ್ರರಿ ಆಫ್‌ ಕಾಂಗ್ರೆಸ್‌ನಲ್ಲಿರುವ ಚರ್ಮಕಾಗದದ ಪ್ರತಿಯಾಗಿದೆ. ಆದರೆ 1996ರಲ್ಲಿ, ಗೂಟನ್‌ಬರ್ಗ್‌ ಬೈಬಲಿನ ಇನ್ನೊಂದು ಭಾಗವು, ಜರ್ಮನಿಯ ರೆಂಡ್ಸ್‌ಬರ್ಗ್‌ನ ಚರ್ಚ್‌ ದಫ್ತರಖಾನೆಯಲ್ಲಿ ಕಂಡುಹಿಡಿಯಲ್ಪಟ್ಟಿತು.​—⁠1998, ಫೆಬ್ರವರಿ 8ರ ಎಚ್ಚರ! ಪತ್ರಿಕೆಯ 29ನೆಯ ಪುಟವನ್ನು ನೋಡಿ.

ಬೈಬಲು ಈಗ ಎಲ್ಲರಿಗೂ ಸುಲಭವಾಗಿ ದೊರೆಯಸಾಧ್ಯವಿರುವುದಕ್ಕಾಗಿ ನಾವೆಷ್ಟು ಕೃತಜ್ಞರಾಗಿರಬಲ್ಲೆವು! ಆದರೆ ಇದರ ಅರ್ಥವು, ನಾವೀಗ ಹೋಗಿ 42-ಸಾಲುಗಳ ಒಂದು ಗೂಟನ್‌ಬರ್ಗ್‌ ಬೈಬಲನ್ನು ಕೊಂಡುಕೊಳ್ಳಬಹುದು ಎಂದಾಗಿರುವುದಿಲ್ಲ ನಿಶ್ಚಯ! ಅದರ ಬೆಲೆ ಎಷ್ಟಿರಬಹುದು? ಮೈಂಟ್ಸ್‌ನಲ್ಲಿರುವ ಗೂಟನ್‌ಬರ್ಗ್‌ ವಸ್ತುಸಂಗ್ರಹಾಲಯವು, 1978ರಲ್ಲಿ ಇದರ ಒಂದು ಪ್ರತಿಯನ್ನು 37 ಲಕ್ಷ ಡಾಯ್ಚ್‌ ಮಾರ್ಕ್‌ಗಳನ್ನು (ಇಂದು ಸುಮಾರು 20 ಲಕ್ಷ ಡಾಲರ್‌ಗಳು) ಕೊಟ್ಟು ಪಡೆದುಕೊಂಡಿತು. ಅದೇ ಬೈಬಲಿಗೆ ಈಗ ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಬೆಲೆಯಿದೆ.

ಈ ಗೂಟನ್‌ಬರ್ಗ್‌ ಬೈಬಲನ್ನು ಅಷ್ಟೊಂದು ಅದ್ವಿತೀಯವಾಗಿ ಮಾಡುವ ಸಂಗತಿ ಯಾವುದು? ಗೂಟನ್‌ಬರ್ಗ್‌ ಮ್ಯೂಸಿಯಮ್‌ನ ಮಾಜಿ ಡೈರೆಕ್ಟರರಾದ ಹೆಲ್ಮೂಟ್‌ ಪ್ರೆಸರ್‌ ಮೂರು ಕಾರಣಗಳನ್ನು ಸೂಚಿಸುತ್ತಾರೆ. ಒಂದನೆಯದಾಗಿ, ಗೂಟನ್‌ಬರ್ಗ್‌ ಬೈಬಲು ಪಾಶ್ಚಾತ್ಯ ದೇಶಗಳಲ್ಲಿ ಚಲನಸಾಧ್ಯ ಅಕ್ಷರಗಳಲ್ಲಿ ಮುದ್ರಿಸಲ್ಪಟ್ಟ ಪ್ರಥಮ ಗ್ರಂಥವಾಗಿದೆ. ಎರಡನೆಯದಾಗಿ, ಮುದ್ರಿಸಲ್ಪಟ್ಟ ಬೈಬಲುಗಳಲ್ಲಿ ಇದು ಮೊದಲನೆಯದ್ದಾಗಿದೆ. ಮೂರನೆಯದಾಗಿ, ಇದು ಬೆರಗುಗೊಳಿಸುವಷ್ಟು ಸುಂದರವಾಗಿದೆ. ಗೂಟನ್‌ಬರ್ಗ್‌ ಬೈಬಲಿನಲ್ಲಿ, “ಗಾಥಿಕ್‌ ಬರವಣಿಗೆಯು ತುತ್ತತುದಿಗೇರಿರುವುದನ್ನು” ನಾವು ನೋಡುತ್ತೇವೆ ಎಂದು ಪ್ರೊಫೆಸರ್‌ ಪ್ರೆಸರ್‌ ಬರೆಯುತ್ತಾರೆ.

ಗೂಟನ್‌ಬರ್ಗ್‌ನ ಪ್ರತಿಭೆಗೆ ಸಕಲ ಸಂಸ್ಕೃತಿಗಳ ಜನರು ಋಣಿಗಳಾಗಿದ್ದಾರೆ. ಅವನು ಎರಕ ಹೊಯ್ಯುವ ಅಚ್ಚು, ಮಿಶ್ರಲೋಹ, ಶಾಯಿ ಮತ್ತು ಮುದ್ರಣ ಯಂತ್ರ​—⁠ಇವೆಲ್ಲವನ್ನೂ ಸಂಯೋಜಿಸಿದನು. ಅವನು ಮುದ್ರಣವನ್ನು ಯಂತ್ರೀಕರಿಸಿ ಜಗತ್ತನ್ನು ಸಂಪದ್ಭರಿತಗೊಳಿಸಿದನು.(g98 11/8)

[ಪುಟ 16, 17ರಲ್ಲಿರುವ ಚಿತ್ರಗಳು]

1. ತಾಮ್ರದ ಅಚ್ಚಿನೊಳಗೆ ಅಕ್ಷರದ ನಿಜ ಬಿಂಬವನ್ನು ನಾಟಿಸಲು ಉಕ್ಕಿನ ಒತ್ತನ್ನು ಉಪಯೋಗಿಸಲಾಯಿತು

2. ಕರಗಿಸಿದ ಮಿಶ್ರಲೋಹವನ್ನು ಎರಕದ ಅಚ್ಚಿನೊಳಗೆ ಹೊಯ್ಯಲಾಯಿತು. ಮಿಶ್ರಲೋಹವು ಗಟ್ಟಿಯಾದಾಗ, ತೆಗೆಯಲ್ಪಟ್ಟ ಅಚ್ಚುಮೊಳೆಯಲ್ಲಿ ಆ ಅಕ್ಷರದ ಕನ್ನಡಿ ಬಿಂಬವಿತ್ತು

3. ಪದಗಳ ಅಕ್ಷರಗಳನ್ನು ಜೋಡಿಸಿ ಗ್ರಂಥಪಾಠದ ಸಾಲನ್ನು ರೂಪಿಸಲಿಕ್ಕಾಗಿ, ಅಚ್ಚುಮೊಳೆಯನ್ನು ಮೊಳೆ ಹಿಡಿಕೆಯಲ್ಲಿ ಇಡಲಾಯಿತು

4. ಸಾಲುಗಳನ್ನು ಒಂದು ಗ್ಯಾಲಿ ತಟ್ಟೆಯಲ್ಲಿ ಅಂಕಣಗಳಾಗಿ ಜೋಡಿಸಲಾಯಿತು

5. ಗ್ರಂಥಪಾಠದ ಪುಟವನ್ನು ಮುದ್ರಣ ಯಂತ್ರದ ಅಚ್ಚುಹಲಗೆಯ ಮೇಲೆ ಇಡಲಾಯಿತು

6. ಗೂಟನ್‌ಬರ್ಗ್‌ ಕೆತ್ತಿದ ಒಂದು ತಾಮ್ರದ ಫಲಕವು, 1584ರಷ್ಟು ಹಿಂದಿನದ್ದಾಗಿದೆ

7. ಇಂದು, ಗೂಟನ್‌ಬರ್ಗ್‌ ಬೈಬಲಿನ ಒಂದು ಪ್ರತಿಯ ಬೆಲೆ ದಶಲಕ್ಷಾಂತರ ಡಾಲರುಗಳಷ್ಟಾಗಿದೆ

[ಕೃಪೆ]

ಚಿತ್ರಗಳು 1-4, 6, ಮತ್ತು 7: Gutenberg-​Museum Mainz; ಚಿತ್ರ 5: Courtesy American Bible Society

[ಪುಟ 16ರಲ್ಲಿರುವ ಚಿತ್ರ ಕೃಪೆ]