ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಹೆಸರು ನನ್ನ ಜೀವಿತವನ್ನೇ ಬದಲಾಯಿಸಿತು!

ದೇವರ ಹೆಸರು ನನ್ನ ಜೀವಿತವನ್ನೇ ಬದಲಾಯಿಸಿತು!

ದೇವರ ಹೆಸರು ನನ್ನ ಜೀವಿತವನ್ನೇ ಬದಲಾಯಿಸಿತು!

ಸಾಂಡೀ ಯಾಸೀ ಸೋಸೀ ಅವರು ಹೇಳಿದಂತೆ

ಕಣ್ಣುಮುಚ್ಚಾಲೆ ಆಟವನ್ನು ಆಡುತ್ತಾ, ನಾನು ಮತ್ತು ನನ್ನ ತಂಗಿಯರು ಕಿಲಕಿಲನೆ ನಗುತ್ತಾ ಪರಸ್ಪರ ಹೊಡೆದುಕೊಳ್ಳುತ್ತಾ ಮಂಚದ ಕೆಳಗೆ ಆಡುತ್ತಿದ್ದೆವು. ಆಗ ಮಾರ್ಮನ್‌ ಪಂಥದವರೊಬ್ಬರು ನಮ್ಮ ಮನೆ ಬಾಗಿಲನ್ನು ತಟ್ಟಿದರು. * ಕೊನೆಗೂ ನಾನು ಬಂದು ಬಾಗಿಲನ್ನು ತೆರೆದು, ನಾವು ಸಾಂಪ್ರದಾಯಿಕ ನ್ಯಾವಹೋ ಬುಡಕಟ್ಟಿನವರಾಗಿದ್ದೇವೆ ಮತ್ತು ಬಿಳಿಯ ವ್ಯಕ್ತಿಯ ಯಾವುದೇ ಧರ್ಮದ ಕುರಿತು ನೀವು ಮಾತಾಡುವುದನ್ನು ನಾವು ಇಷ್ಟಪಡುವುದಿಲ್ಲ ಎಂದು ಅವರಿಗೆ ಒರಟಾಗಿ ಹೇಳಿಬಿಟ್ಟೆ.

ನಮ್ಮ ಹೆತ್ತವರು ದಿನನಿತ್ಯದ ಬಳಕೆಗಾಗಿ ಆವಶ್ಯಕವಾದ ವಸ್ತುಗಳನ್ನು ಖರೀದಿಸಲಿಕ್ಕಾಗಿ ಅಂಗಡಿಗೆ ಹೋಗಿದ್ದರು. ಅವರು ಸೂರ್ಯಾಸ್ತಮಾನದ ಸಮಯದಲ್ಲಿ ಹಿಂದೆ ಬರಲಿಕ್ಕಿದ್ದರು. ಅವರು ಹಿಂದಿರುಗಿದಾಗ, ಮಾರ್ಮನ್‌ ಪಂಥದ ವ್ಯಕ್ತಿಯೊಂದಿಗೆ ನಾನು ಒರಟಾಗಿ ನಡೆದುಕೊಂಡೆ ಎಂಬುದು ಅವರಿಗೆ ಗೊತ್ತಾಯಿತು. ಇನ್ನೆಂದಿಗೂ ಯಾರೊಂದಿಗೂ ಈ ರೀತಿಯಲ್ಲಿ ಅಗೌರವದಿಂದ ವರ್ತಿಸಬಾರದು ಎಂದು ಅವರು ನನಗೆ ಬುದ್ಧಿವಾದ ಹೇಳಿದರು. ಜನರನ್ನು ಗೌರವ ಹಾಗೂ ದಯೆಯಿಂದ ಉಪಚರಿಸುವಂತೆ ನಮಗೆ ಕಲಿಸಲಾಗಿತ್ತು. ಒಂದು ದಿನ ಅನಿರೀಕ್ಷಿತವಾಗಿ ಒಬ್ಬ ಸಂದರ್ಶಕನು ನಮ್ಮ ಮನೆಗೆ ಬಂದದ್ದು ನನಗೆ ಜ್ಞಾಪಕವಿದೆ. ನನ್ನ ಹೆತ್ತವರು ಮನೆಯ ಹೊರಗೆ ಮಧ್ಯಾಹ್ನದ ಊಟವನ್ನು ಸಿದ್ಧಪಡಿಸಿದ್ದರು. ಮೊದಲು ಅವರು ಆ ಸಂದರ್ಶಕನಿಗೆ ಊಟವನ್ನು ಕೊಟ್ಟರು ಮತ್ತು ನಂತರ ನಾವೆಲ್ಲರೂ ಊಟಮಾಡಿದೆವು.

ಮೀಸಲು ಪ್ರದೇಶದಲ್ಲಿನ ಜೀವನ

ನಾವು ಆ್ಯರಿಸೋನದ ಹೌಅಲ್‌ ಮೇಸ ಎಂಬ ಸ್ಥಳದಲ್ಲಿ ವಾಸಿಸುತ್ತಿದ್ದೆವು. ಇದು ಹೋಪಿ ಇಂಡಿಯನ್‌ ಮೀಸಲು ಪ್ರದೇಶದ ವಾಯವ್ಯ ದಿಕ್ಕಿನಲ್ಲಿ 15 ಕಿಲೊಮೀಟರುಗಳಷ್ಟು ದೂರದಲ್ಲಿದೆ ಮತ್ತು ವಿಪರೀತ ಜನನಿಬಿಡವಾಗಿರುವ ನಗರಗಳು ಹಾಗೂ ಪಟ್ಟಣಗಳಿಂದ ತುಂಬ ದೂರದಲ್ಲಿದೆ. ಇದು ಆಗ್ನೇಯ ಅಮೆರಿಕದಲ್ಲಿದ್ದು, ನಯನಮನೋಹರವಾದ ಮರುಭೂಮಿ ಹಾಗೂ ಮಧ್ಯೆ ಮಧ್ಯೆ ಅಪೂರ್ವವಾದ ಕೆಮ್ಮರಳ ಶಿಲೆಗಳ ರಾಶಿಗಳಿರುವ ಮರುಭೂಮಿಯ ದೃಶ್ಯದಿಂದ ಕೂಡಿದ್ದಾಗಿದೆ. ಇಲ್ಲಿ ಅನೇಕ ಕಡಿದಾದ ಪಕ್ಕಗಳುಳ್ಳ ಎತ್ತರವಾದ ಪ್ರಸ್ತಭೂಮಿಗಳಿವೆ. ಇಲ್ಲಿಂದ ಸುಮಾರು ಎಂಟು ಕಿಲೊಮೀಟರುಗಳಷ್ಟು ದೂರದಲ್ಲಿ ನಮ್ಮ ಕುರಿಗಳು ಮೇಯುತ್ತಿರುವುದನ್ನು ನಾವು ನೋಡಸಾಧ್ಯವಿದೆ. ನನ್ನ ಸ್ವದೇಶವಾಗಿರುವ ಈ ನಾಡಿನ ಪ್ರಶಾಂತತೆಯನ್ನು ನಾನೆಷ್ಟು ಪ್ರೀತಿಸುತ್ತಿದ್ದೆ!

ನಾನು ಪ್ರೌಢ ಶಾಲೆಯಲ್ಲಿ ವ್ಯಾಸಂಗಮಾಡುತ್ತಿರುವಾಗ, ಅಮೆರಿಕನ್‌ ಇಂಡಿಯನ್‌ ಮೂವ್‌ಮೆಂಟ್‌ (ಎಐಎಮ್‌) ಅನ್ನು ಬೆಂಬಲಿಸುತ್ತಿದ್ದ ನನ್ನ ಸೋದರಸಂಬಂಧಿಗಳೊಂದಿಗೆ ತುಂಬ ಆಪ್ತಳಾದೆ. * ನಾನು ಅಮೆರಿಕನ್‌ ಇಂಡಿಯನ್‌ ಎಂಬ ಹೆಮ್ಮೆ ನನಗಿತ್ತು ಮತ್ತು ಅನೇಕ ದಶಕಗಳ ದಬ್ಬಾಳಿಕೆಯ ಕುರಿತು ಬಿಳಿಯರಿಗೆ ನನ್ನ ಅಭಿಪ್ರಾಯಗಳನ್ನು ಧೈರ್ಯವಾಗಿ ವ್ಯಕ್ತಪಡಿಸುತ್ತಿದ್ದೆ. ಬ್ಯೂರೋ ಆಫ್‌ ಇಂಡಿಯನ್‌ ಅಫೇರ್ಸ್‌ (ಬಿಐಎ) ಸಂಸ್ಥೆಯೇ ಇದಕ್ಕೆ ಕಾರಣವಾಗಿತ್ತು ಎಂದು ನಾನು ನಂಬಿದ್ದೆ. ನನ್ನ ಸೋದರಸಂಬಂಧಿಗಳಿಗೆ ಅಸದೃಶವಾಗಿ, ನಾನು ನನ್ನ ದ್ವೇಷವನ್ನು ಮುಕ್ತವಾಗಿ ವ್ಯಕ್ತಪಡಿಸಲಿಲ್ಲ. ನಾನು ಅದನ್ನು ನನ್ನ ಹೃದಯದಲ್ಲಿ ಗುಪ್ತವಾಗಿ ಇರಿಸಿಕೊಂಡಿದ್ದೆ. ಇದು, ಬೈಬಲನ್ನು ಹೊಂದಿರುವ ಯಾರನ್ನೇ ಆಗಲಿ ನಾನು ದ್ವೇಷಿಸುವಂತೆ ಮಾಡಿತು.

ಬೈಬಲಿನ ಕಾರಣದಿಂದಲೇ ಬಿಳಿಯರು ನಮ್ಮ ಪ್ರದೇಶವನ್ನು, ನಮ್ಮ ಹಕ್ಕುಗಳನ್ನು ಮತ್ತು ನಮ್ಮ ಸ್ವಂತ ಮತಸಂಸ್ಕಾರಗಳನ್ನು ನಡೆಸುವ ಸ್ವಾತಂತ್ರ್ಯವನ್ನು ನಮ್ಮಿಂದ ಕಸಿದುಕೊಳ್ಳುವ ಅಧಿಕಾರವನ್ನು ಹೊಂದಿದ್ದರು ಎಂದು ನಾನು ತರ್ಕಿಸುತ್ತಿದ್ದೆ! ನಾನು ಬೋರ್ಡಿಂಗ್‌ ಸ್ಕೂಲಿನಲ್ಲಿ ಓದುತ್ತಿದ್ದ ಸಮಯದಲ್ಲಿ, ಚರ್ಚಿಗೆ ಹಾಜರಾಗುವಂತೆ ನಮ್ಮ ಮೇಲೆ ಒತ್ತಡ ಹೇರಿದಾಗ, ಪ್ರಾಟೆಸ್ಟಂಟ್‌ ಹಾಗೂ ಕ್ಯಾಥೊಲಿಕ್‌ ಧಾರ್ಮಿಕ ಮತಸಂಸ್ಕಾರದಲ್ಲಿ ಭಾಗವಹಿಸುವುದರಿಂದ ತಪ್ಪಿಸಿಕೊಳ್ಳಲಿಕ್ಕಾಗಿ ನಾನು ನನ್ನ ತಂದೆಯ ಸಹಿಯನ್ನೂ ನಕಲುಮಾಡಿದೆ. ಆ ಸ್ಕೂಲ್‌ಗಳು ನಮ್ಮನ್ನು ಒಟ್ಟುಗೂಡಿಸಿ, ನಮ್ಮ ಇಂಡಿಯನ್‌ ಪರಂಪರೆಯನ್ನು ಮರೆಯುವಂತೆ ಮಾಡುವ ಉದ್ದೇಶವುಳ್ಳವುಗಳಾಗಿದ್ದವು. ಅಷ್ಟುಮಾತ್ರವಲ್ಲ, ನಾವು ನಮ್ಮ ಮಾತೃಭಾಷೆಯನ್ನು ಮಾತಾಡಲು ಸಹ ನಮಗೆ ಅನುಮತಿ ಇರಲಿಲ್ಲ!

ನಿಸರ್ಗ ಹಾಗೂ ಸುತ್ತಣ ಪರಿಸರಗಳ ಬಗ್ಗೆ ನಮಗೆ ಗೌರವಭಾವವಿತ್ತು. ಪ್ರತಿ ದಿನ ಬೆಳಗ್ಗೆ ನಾವು ಪೂರ್ವದ ಕಡೆಗೆ ಮುಖಹಾಕಿ ಪ್ರಾರ್ಥನೆಗಳನ್ನು ಮಾಡುತ್ತಿದ್ದೆವು ಮತ್ತು ಮುಸುಕಿನ ಜೋಳದ ಪರಾಗವನ್ನು ಚಿಮುಕಿಸುವ ಮೂಲಕ ಉಪಕಾರವನ್ನು ಸಲ್ಲಿಸುತ್ತಿದ್ದೆವು. * ನ್ಯಾವಹೋ ರೀತಿಯ ಆರಾಧನೆಯಲ್ಲಿ ಇದು ನನಗೆ ಕೊಡಲ್ಪಟ್ಟ ಸಂಪ್ರದಾಯಬದ್ಧ ತರಬೇತಿಯಾಗಿತ್ತು, ಮತ್ತು ನಾನು ಇದನ್ನು ತುಂಬ ಹೆಮ್ಮೆಯಿಂದ ಮನಃಪೂರ್ವಕವಾಗಿ ಅಂಗೀಕರಿಸಿದೆ. ಸ್ವರ್ಗಕ್ಕೆ ಹೋಗುವುದರ ಕುರಿತಾದ ಕ್ರೈಸ್ತಪ್ರಪಂಚದ ಕಲ್ಪನೆಯು ನನಗೆ ಹಿಡಿಸಲಿಲ್ಲ ಮತ್ತು ನರಕದಲ್ಲಿ ಬೆಂಕಿಯ ಯಾತನೆಯಂತಹ ಸಿದ್ಧಾಂತವನ್ನೂ ನಾನು ನಂಬಲಿಲ್ಲ. ಭೂಮಿಯ ಮೇಲೆ ಜೀವಿಸುವುದೇ ನನ್ನ ಅಚ್ಚುಮೆಚ್ಚಿನ ಬಯಕೆಯಾಗಿತ್ತು.

ಸ್ಕೂಲಿನ ರಜೆಯ ಸಮಯದಲ್ಲಿ ನಾನು ನಮ್ಮ ಅನ್ಯೋನ್ಯ ಕುಟುಂಬದ ಸಹವಾಸದಲ್ಲಿ ಆನಂದಿಸಿದೆ. ನಮ್ಮ ನ್ಯಾವಹೋ ವಾಸಸ್ಥಳವಾಗಿದ್ದ ದಿಮ್ಮಿಮನೆ (ಹೋಗನ್‌)ಯನ್ನು ಸ್ವಚ್ಛಮಾಡುವುದು, ಬಟ್ಟೆ ನೇಯುವುದು ಮತ್ತು ಕುರಿಗಳನ್ನು ನೋಡಿಕೊಳ್ಳುವುದು ನನ್ನ ದೈನಂದಿನ ನಿಯತಕ್ರಮವಾಗಿತ್ತು. ನ್ಯಾವಹೋ ಬುಡಕಟ್ಟಿನವರಾದ ನಾವು ಅನೇಕ ಶತಮಾನಗಳಿಂದಲೂ ಕುರುಬರೋಪಾದಿ ಕೆಲಸಮಾಡುತ್ತಿದ್ದೆವು. ಪ್ರತಿ ಬಾರಿ ನಾನು ನಮ್ಮ ದಿಮ್ಮಿಮನೆಯನ್ನು (ಕೆಳಗಿರುವ ಚಿತ್ರವನ್ನು ನೋಡಿ) ಸ್ವಚ್ಛಮಾಡುತ್ತಿದ್ದಾಗ, ಕೆಂಪು ಬಣ್ಣದ ಒಂದು ಚಿಕ್ಕ ಪುಸ್ತಕವು ನನ್ನ ಕಣ್ಣಿಗೆ ಬೀಳುತ್ತಿತ್ತು. ಇದರಲ್ಲಿ ಬೈಬಲಿನ ಕೀರ್ತನೆಗಳು ಪುಸ್ತಕ ಹಾಗೂ “ಹೊಸ ಒಡಂಬಡಿಕೆ”ಯ ಇನ್ನಿತರ ಪುಸ್ತಕಗಳು ಒಳಗೂಡಿದ್ದವು. ನಾನು ಆ ಪುಸ್ತಕವನ್ನು ಯಾವಾಗಲೂ ಅಲ್ಲಿ ಇಲ್ಲಿ ಎಸೆಯುತ್ತಿದ್ದೆ. ಅದರಲ್ಲಿ ಏನಿದೆ ಮತ್ತು ಅದರ ಅರ್ಥವೇನು ಎಂಬುದರ ಕುರಿತು ನಾನೆಂದೂ ಗಮನ ಕೊಡಲೇ ಇಲ್ಲ. ಆದರೆ ನಾನದನ್ನು ಹೊರಗೆ ಎಸೆದುಬಿಡಲಿಲ್ಲ.

ವಿವಾಹ​—⁠ಭ್ರಮೆ ಮತ್ತು ಭ್ರಮನಿರಸನ

ಪ್ರೌಢ ಶಾಲೆಯಿಂದ ಉತ್ತೀರ್ಣಳಾದ ಬಳಿಕ, ನ್ಯೂ ಮೆಕ್ಸಿಕೋದ ಆಲ್ಬಕರ್ಕೀಯಲ್ಲಿರುವ ವೃತ್ತಿ-ಶಿಕ್ಷಣ ಶಾಲೆಗೆ ಸೇರಿಕೊಳ್ಳುವ ಯೋಜನೆಯನ್ನು ನಾನು ಮಾಡಿದೆ. ಆದರೂ, ಅಲ್ಲಿಗೆ ಹೋಗುವ ಮೊದಲು ನಾನು ನನ್ನ ಭಾವೀ ಪತಿಯನ್ನು ಸಂಧಿಸಿದೆ. ತದನಂತರ, ವಿವಾಹಕ್ಕಾಗಿ ನಾನು ರೆಸ್‌ ಎಂದು ನಾವು ಕರೆಯುವಂತಹ ನ್ಯಾವಹೋ ಮೀಸಲು ಪ್ರದೇಶಕ್ಕೆ ಹಿಂದಿರುಗಿದೆ. ನನ್ನ ಹೆತ್ತವರು ಅನೇಕ ವರ್ಷಗಳಿಂದ ವಿವಾಹಿತ ದಂಪತಿಗಳಾಗಿದ್ದರು. ನಾನು ಸಹ ಅವರ ಹೆಜ್ಜೆಜಾಡನ್ನು ಅನುಸರಿಸಲು ಬಯಸಿದೆ. ಆದುದರಿಂದಲೇ ನಾನು ಸಹ ವಿವಾಹವಾದೆ. ನನಗೆ ಮನೆಯನ್ನು ನೋಡಿಕೊಳ್ಳುವುದು ತುಂಬ ಇಷ್ಟದ ಕೆಲಸವಾಗಿತ್ತು ಮತ್ತು ನಮ್ಮ ಗೃಹ ಜೀವನದಲ್ಲಿ ನಾನು ತುಂಬ ಸುಖಿಯಾಗಿದ್ದೆ. ವಿಶೇಷವಾಗಿ ನಮ್ಮ ಮಗನಾದ ಲೈನೆಲ್‌ ಹುಟ್ಟಿದ ನಂತರ ಜೀವನವು ತುಂಬ ಆನಂದಮಯವಾಗಿತ್ತು. ನಾನು ಮತ್ತು ನನ್ನ ಗಂಡ ತುಂಬ ಸಂತೋಷವಾಗಿದ್ದೆವು​—⁠ಆದರೆ ಎದೆಯೊಡೆಯುವಂತಹ ಒಂದು ಸುದ್ದಿಯು ಕೇಳಿಬರುವ ದಿನದ ವರೆಗೆ ಮಾತ್ರ ನಮ್ಮ ಜೀವನ ಈ ರೀತಿ ಇತ್ತು!

ನನ್ನ ಗಂಡನಿಗೆ ಇನ್ನೊಬ್ಬ ಹೆಂಡತಿಯಿದ್ದಳು! ಅವನ ದಾಂಪತ್ಯದ್ರೋಹದಿಂದಾಗಿ ನಮ್ಮ ವಿವಾಹವು ಛಿದ್ರಗೊಂಡಿತು. ನಾನು ಭಾವನಾತ್ಮಕವಾಗಿ ತುಂಬ ವ್ಯಥೆಯನ್ನು ಅನುಭವಿಸಿದೆ ಮತ್ತು ಅವನನ್ನು ತುಂಬ ದ್ವೇಷಿಸತೊಡಗಿದೆ. ಅಷ್ಟುಮಾತ್ರವಲ್ಲ ಅವನ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದೆ! ಆದರೆ ನಮ್ಮ ಮಗ ಹಾಗೂ ಹಣಕಾಸಿನ ಬೆಂಬಲದ ವಿಷಯದಲ್ಲಿ ವಿಚ್ಛೇದದ ಹೋರಾಟಗಳು ನಡೆಯುತ್ತಿರುವಾಗ, ನಾನು ತುಂಬ ದುಃಖಿತಳಾದೆ ಮತ್ತು ನಾನು ಅಯೋಗ್ಯಳೆಂಬ ಅನಿಸಿಕೆ ನನ್ನಲ್ಲಿ ಉಂಟಾಯಿತು. ನಾನು ಎಲ್ಲ ನಿರೀಕ್ಷೆಯನ್ನು ಕಳೆದುಕೊಂಡಿದ್ದೆ. ನನ್ನ ದುಃಖವನ್ನು ಕಡಿಮೆಮಾಡಲಿಕ್ಕಾಗಿ ನಾನು ಅನೇಕ ಕಿಲೊಮೀಟರುಗಳ ವರೆಗೆ ಓಡುತ್ತಿದ್ದೆ. ನಾನು ತುಂಬ ಅತ್ತುಬಿಡುತ್ತಿದ್ದೆ ಮತ್ತು ನನಗೆ ಹಸಿವೆಯೇ ಇಲ್ಲವಾಯಿತು. ನನಗೆ ಸಂಪೂರ್ಣವಾಗಿ ಒಂಟಿಯಾದ ಅನಿಸಿಕೆಯಾಗುತ್ತಿತ್ತು.

ಸ್ವಲ್ಪ ಸಮಯದ ನಂತರ, ನನ್ನಂತಹದ್ದೇ ವೈವಾಹಿಕ ಸಮಸ್ಯೆಗಳಿದ್ದ ಒಬ್ಬ ಪುರುಷನೊಂದಿಗೆ ಸಂಬಂಧವನ್ನು ಬೆಳೆಸಲಾರಂಭಿಸಿದೆ. ನಾವಿಬ್ಬರೂ ಭಾವನಾತ್ಮಕ ನೋವನ್ನು ಅನುಭವಿಸುತ್ತಿದ್ದೆವು. ಅವನು ನನಗೆ ಸಹಾನುಭೂತಿಯನ್ನು ತೋರಿಸಿದನು ಮತ್ತು ನನಗೆ ಅಗತ್ಯವಿದ್ದ ಭಾವನಾತ್ಮಕ ಬೆಂಬಲವನ್ನು ನೀಡಿದನು. ಜೀವಿತದ ಕುರಿತಾದ ನನ್ನ ಆಂತರಿಕ ವಿಚಾರಗಳು ಹಾಗೂ ಭಾವನೆಗಳನ್ನು ನಾನು ಅವನ ಬಳಿ ಹೇಳಿಕೊಂಡೆ. ಅವನು ಕಿವಿಗೊಟ್ಟದ್ದರಿಂದ, ಅವನು ನನ್ನ ಬಗ್ಗೆ ಕಾಳಜಿವಹಿಸುತ್ತಾನೆ ಎಂದು ನನಗನಿಸಿತು. ನಾವಿಬ್ಬರೂ ವಿವಾಹವಾಗಲು ಯೋಜನೆಗಳನ್ನು ಮಾಡಿದೆವು.

ಆದರೆ ಅವನು ಸಹ ಅಪನಂಬಿಗಸ್ತನಾಗಿದ್ದನು ಎಂಬುದು ನನಗೆ ತದನಂತರ ಗೊತ್ತಾಯಿತು! ನಮ್ಮ ಸಂಬಂಧವನ್ನು ಕಡಿಯುವುದು ನನಗೆ ತುಂಬ ಕಷ್ಟಕರವೂ ವೇದನಾಭರಿತವೂ ಆಗಿತ್ತಾದರೂ, ನಾನು ಅವನೊಂದಿಗಿನ ಸಂಬಂಧವನ್ನು ನಿಲ್ಲಿಸಿಬಿಟ್ಟೆ. ನಾನು ತಿರಸ್ಕೃತಳು ಎಂಬ ಅನಿಸಿಕೆ ನನಗಾಯಿತು ಮತ್ತು ನಾನು ತುಂಬ ಖಿನ್ನಳಾದೆ. ನಾನು ತುಂಬ ಕ್ರೋಧಗೊಂಡೆ, ಸೇಡು ತೀರಿಸಿಕೊಳ್ಳುವ ಮನೋಭಾವದವಳಾದೆ ಮತ್ತು ಆತ್ಮಹತ್ಯೆಮಾಡಿಕೊಳ್ಳುವ ಮನಸ್ಸೂ ಮಾಡಿದೆ. ನನ್ನ ಜೀವಿತವನ್ನು ಕೊನೆಗಾಣಿಸಲಿಕ್ಕಾಗಿ ನಾನು ಎರಡು ಬಾರಿ ಪ್ರಯತ್ನಿಸಿದೆ. ನಾನು ಸಾಯಬೇಕು ಎಂಬ ಅನಿಸಿಕೆಯಾಯಿತು.

ಸತ್ಯ ದೇವರ ಕುರಿತಾಗಿ ನನಗೆ ಸಿಕ್ಕಿದ ಮೊದಲ ಸುಳಿವು

ನನಗೆ ಗೊತ್ತಿರದಿದ್ದಂತಹ ಒಬ್ಬ ದೇವರಿಗೆ ನಾನು ಪ್ರಾರ್ಥಿಸುತ್ತಿದ್ದಾಗ, ನಾನು ತುಂಬ ಕಣ್ಣೀರು ಸುರಿಸುತ್ತಿದ್ದೆ. ಆದರೂ ಈ ಭಯಭಕ್ತಿಪ್ರೇರಕ ವಿಶ್ವವನ್ನು ಸೃಷ್ಟಿಸಿದ್ದ ಒಬ್ಬ ದೇವರು ಇದ್ದಾನೆ ಎಂದು ನಾನು ನಂಬುತ್ತಿದ್ದೆ. ಮನೋಹರವಾದ ಸೂರ್ಯಾಸ್ತಮಾನಗಳಿಂದ ನಾನು ಕುತೂಹಲಭರಿತಳಾಗಿದ್ದೆ ಮತ್ತು ಈ ಅದ್ಭುತಗಳನ್ನು ನಾವು ಆನಂದಿಸುವಂತೆ ಯಾರೋ ಒಬ್ಬರು ಅನುಮತಿ ನೀಡಿರುವುದು ಎಷ್ಟು ಅಪೂರ್ವವಾದದ್ದಾಗಿದೆ ಎಂದು ಅದರ ಕುರಿತು ಮನನಮಾಡುತ್ತಿದ್ದೆ. ನನಗೆ ಗೊತ್ತಿರದಿದ್ದಂತಹ ಆ ವ್ಯಕ್ತಿಯನ್ನು ಹೆಚ್ಚೆಚ್ಚು ಪ್ರೀತಿಸುವಂತೆ ನಾನು ಪ್ರಚೋದಿಸಲ್ಪಟ್ಟೆ. ನಾನು ಆತನಿಗೆ ಹೀಗೆ ಹೇಳತೊಡಗಿದೆ: “ದೇವರೇ, ನೀನು ಖಂಡಿತವಾಗಿಯೂ ಅಸ್ತಿತ್ವದಲ್ಲಿರುವುದಾದರೆ ದಯವಿಟ್ಟು ನನಗೆ ಸಹಾಯಮಾಡು, ನನಗೆ ಮಾರ್ಗದರ್ಶನ ನೀಡು ಮತ್ತು ನಾನು ಪುನಃ ಸಂತೋಷಗೊಳ್ಳುವಂತೆ ಮಾಡು.”

ಈ ಮಧ್ಯೆ, ನನ್ನ ಕುಟುಂಬವು ಅದರಲ್ಲೂ ವಿಶೇಷವಾಗಿ ನನ್ನ ತಂದೆಯವರು ನನ್ನ ಬಗ್ಗೆ ತುಂಬ ಚಿಂತಿತರಾಗಿದ್ದರು. ನನ್ನ ಮಾನಸಿಕ ಸ್ಥಿತಿಯನ್ನು ಸರಿಪಡಿಸಲಿಕ್ಕಾಗಿ ನನ್ನ ಹೆತ್ತವರು ಮಂತ್ರವಾದಿಯನ್ನು ಕರೆಸಿಕೊಂಡರು. ಸದ್ಗುಣಿಯಾದ ಹಾಗೂ ಕೌಶಲಭರಿತನಾದ ಒಬ್ಬ ಮಾಂತ್ರಿಕನು ಹಣವನ್ನು ಎಂದೂ ಕೇಳುವುದಿಲ್ಲ ಮತ್ತು ತಾನು ಏನನ್ನು ಸಾರುತ್ತಾನೋ ಅದಕ್ಕನುಸಾರ ಜೀವಿಸುತ್ತಾನೆ ಎಂದು ನನ್ನ ತಂದೆ ಹೇಳುತ್ತಿದ್ದರು. ನನ್ನ ಹೆತ್ತವರ ಸಮಾಧಾನಕ್ಕಾಗಿ ನಾನು ಅನೇಕ ಬಾರಿ ನ್ಯಾವಹೋ ಬ್ಲೆಸಿಂಗ್‌ ವೇ ಧಾರ್ಮಿಕ ಸಂಸ್ಕಾರಗಳಲ್ಲಿ ಪಾಲ್ಗೊಂಡೆ.

ನಾನು ನಮ್ಮ ದಿಮ್ಮಿಮನೆಯಲ್ಲಿ ಅನೇಕ ದಿನಗಳ ವರೆಗೆ ಒಂಟಿಯಾಗಿ ಉಳಿದೆ, ಕೇವಲ ರೇಡಿಯೋ ಮಾತ್ರ ನನ್ನ ಹಾಸಿಗೆಯ ಪಕ್ಕದಲ್ಲಿತ್ತು. ನನ್ನ ಮನಸ್ಸಿನಲ್ಲಿ ನಾನು ಯೇಸುವನ್ನು ಸ್ವೀಕರಿಸದಿದ್ದ ಕಾರಣ, ಒಬ್ಬ ಪಾದ್ರಿಯು ಖಂಡಿಸುತ್ತಿರುವುದನ್ನು ಕೇಳಿ ನನ್ನಲ್ಲಿ ಅತೀವ ಜಿಗುಪ್ಸೆ ಹುಟ್ಟಿತು. ನಾನು ಎಷ್ಟು ಬೇಸರಗೊಂಡಿದ್ದೆ! ಇನ್ನೆಂದಿಗೂ ನಾನು ಬಿಳಿಯರ ಧರ್ಮವನ್ನು ಹಾಗೂ ನನ್ನ ಸ್ವಂತ ಧರ್ಮವನ್ನು ಸಹಿಸಿಕೊಳ್ಳಲಾರದವಳಾಗಿದ್ದೆ! ನನ್ನದೇ ಆದ ರೀತಿಯಲ್ಲಿ ದೇವರನ್ನು ಕಂಡುಕೊಳ್ಳಲು ನಾನು ಮನಸ್ಸುಮಾಡಿದೆ.

ನಾನು ದಿಮ್ಮಿಮನೆಯಲ್ಲಿ ಒಂಟಿಯಾಗಿದ್ದಾಗ, ಆ ಚಿಕ್ಕ ಕೆಂಪು ಪುಸ್ತಕವು ಪುನಃ ನನ್ನ ಕಣ್ಣಿಗೆ ಬಿತ್ತು. ಅದು ಬೈಬಲಿನ ಒಂದು ಭಾಗವಾಗಿತ್ತು ಎಂಬುದನ್ನು ನಾನು ಕಂಡುಕೊಂಡೆ. ಕೀರ್ತನೆಗಳು ಪುಸ್ತಕವನ್ನು ಓದುವ ಮೂಲಕ, ರಾಜ ದಾವೀದನ ಕಷ್ಟಾನುಭವ ಹಾಗೂ ಖಿನ್ನತೆಯ ಕುರಿತು ನಾನು ತಿಳಿದುಕೊಂಡೆ ಮತ್ತು ಇದು ನನ್ನನ್ನು ಸಂತೈಸಿತು. (ಕೀರ್ತನೆ 38:​1-22; 51:​1-19) ಆದರೂ, ನನ್ನಲ್ಲಿ ಅಹಂಕಾರವಿದ್ದದ್ದರಿಂದ, ನಾನು ಓದಿದ ವಿಷಯಗಳನ್ನೆಲ್ಲ ಆ ಕೂಡಲೆ ಮನಸ್ಸಿನಿಂದ ತೆಗೆದುಹಾಕಿದೆ. ಬಿಳಿಯರ ಧರ್ಮವನ್ನು ನಾನೆಂದೂ ಒಪ್ಪಿಕೊಳ್ಳಲು ಸಿದ್ಧಳಿರಲಿಲ್ಲ.

ನಾನು ತುಂಬ ಖಿನ್ನಳಾಗಿದ್ದರೂ, ನನ್ನ ಮಗನನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ. ಅವನು ನನಗೆ ಪ್ರೋತ್ಸಾಹದ ಮೂಲವಾಗಿದ್ದನು. ಪ್ರಾರ್ಥನೆಗಳನ್ನು ಪ್ರಸಾರಮಾಡುತ್ತಿದ್ದ ಧಾರ್ಮಿಕ ಟಿವಿ ಕಾರ್ಯಕ್ರಮಗಳನ್ನು ನಾನು ನೋಡಲಾರಂಭಿಸಿದೆ. ನಾನು ಫೋನನ್ನು ಕೈಗೆತ್ತಿಕೊಂಡು, ಹತಾಶೆಯಿಂದ ನಂಬರ್‌ 800ನ್ನು ಡಯಲ್‌ಮಾಡಿ ಸಹಾಯವನ್ನು ಕೋರಿದೆ. ಆದರೆ 50 ಅಥವಾ 100 ಅಮೆರಿಕನ್‌ ಡಾಲರುಗಳನ್ನು ಕಾಣಿಕೆಯಾಗಿ ನೀಡುವೆನೆಂದು ಮಾತುಕೊಡುವಂತೆ ಫೋನಿನಲ್ಲಿ ನನಗೆ ಹೇಳಲ್ಪಟ್ಟಾಗ ನಾನು ಆ ಕೂಡಲೆ ಫೋನನ್ನು ಕೆಳಗೆ ಕುಕ್ಕಿದೆ!

ವಿಚ್ಛೇದಕ್ಕಾಗಿರುವ ಕೋರ್ಟ್‌ ಮೊಕದ್ದಮೆಗಳು ನನ್ನನ್ನು ತುಂಬ ಖಿನ್ನಳನ್ನಾಗಿ ಮಾಡಿದ್ದವು. ಅದರಲ್ಲೂ ವಿಶೇಷವಾಗಿ ನನ್ನ ಗಂಡನು ನಮ್ಮ ಬುಡಕಟ್ಟಿನ ನ್ಯಾಯಾಧೀಶನಿಗೆ ಸತ್ಯವಾದ ಸಂಗತಿಯನ್ನು ಹೇಳದಿರುವುದನ್ನು ನೋಡಿ ಬೇಸತ್ತುಹೋದೆ. ನಮ್ಮ ಮಗನ ಕಸ್ಟಡಿ ಯಾರಿಗೆ ವಹಿಸಲ್ಪಡುತ್ತದೆಂಬುದರ ಬಗ್ಗೆ ಗಲಾಟೆ ನಡೆಯುತ್ತಿದ್ದದರಿಂದ, ನಮ್ಮ ವಿವಾಹವನ್ನು ಅಂತಿಮಗೊಳಿಸಲು ದೀರ್ಘ ಸಮಯ ಹಿಡಿಯಿತು. ಆದರೆ ನಾನೇ ಗೆದ್ದೆ. ಈ ಪರೀಕ್ಷೆಗಳ ಸಮಯದಲ್ಲಿ ನನ್ನ ತಂದೆಯವರು ಪ್ರೀತಿಯಿಂದ ಎಲ್ಲ ರೀತಿಯ ಬೆಂಬಲವನ್ನು ನೀಡಿದರು. ನನ್ನ ಮನಸ್ಸಿಗೆ ತುಂಬ ನೋವಾಗಿದೆ ಎಂಬುದು ಅವರಿಗೆ ತಿಳಿದಿತ್ತು.

ಸಾಕ್ಷಿಗಳೊಂದಿಗಿನ ನನ್ನ ಮೊದಲ ಸಂಪರ್ಕ

ನಾನು ಕೇವಲ ಸದ್ಯದ ದಿನಕ್ಕಾಗಿ ಮಾತ್ರ ಜೀವಿಸುವ ನಿರ್ಧಾರವನ್ನು ಮಾಡಿದೆ. ಒಂದು ಸಂದರ್ಭದಲ್ಲಿ ಒಂದು ನ್ಯಾವಹೋ ಕುಟುಂಬವು ನನ್ನ ನೆರೆಯವರೊಂದಿಗೆ ಮಾತಾಡುತ್ತಿರುವುದನ್ನು ನಾನು ಗಮನಿಸಿದೆ. ನಾನು ಅವರನ್ನು ಗುಪ್ತವಾಗಿ ಗಮನಿಸುವ ಬಯಕೆಯನ್ನು ಪ್ರತಿರೋಧಿಸದಾದೆ. ಆ ಸಂದರ್ಶಕರು ಒಂದು ರೀತಿಯ ಮನೆಯಿಂದ ಮನೆಯ ಕೆಲಸದಲ್ಲಿ ಒಳಗೂಡಿದ್ದರು. ಅವರು ನನ್ನ ಮನೆಗೂ ಬಂದರು. ನ್ಯಾವಹೋ ಬುಡಕಟ್ಟಿಗೆ ಸೇರಿದ್ದ ಸ್ಯಾಂಡ್ರ, ತಾನು ಒಬ್ಬ ಯೆಹೋವನ ಸಾಕ್ಷಿಯೆಂದು ತನ್ನನ್ನು ಪರಿಚಯಿಸಿಕೊಂಡಳು. ಬೇರೆ ಯಾವುದೇ ವಿಷಯಕ್ಕಿಂತಲೂ ಹೆಚ್ಚಾಗಿ ಯೆಹೋವ ಎಂಬ ಹೆಸರು ನನ್ನ ಗಮನವನ್ನು ಸೆರೆಹಿಡಿಯಿತು. ನಾನು ಹೇಳಿದ್ದು: “ಯೆಹೋವ ಎಂದರೆ ಯಾರು? ನಿಮ್ಮದು ಒಂದು ಹೊಸ ಧರ್ಮವಾಗಿರಬೇಕು. ಚರ್ಚಿನಲ್ಲಿ ಏಕೆ ನನಗೆ ದೇವರ ಹೆಸರು ಕಲಿಸಲ್ಪಡಲಿಲ್ಲ?”

ದಯಾಪೂರ್ಣ ರೀತಿಯಲ್ಲಿ ಅವಳು ತನ್ನ ಬೈಬಲನ್ನು ಕೀರ್ತನೆ 83:18ಕ್ಕೆ ತೆರೆದಳು. ಅದು ಹೀಗೆ ಹೇಳುತ್ತದೆ: “ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.” ದೇವರಿಗೆ ಒಂದು ವೈಯಕ್ತಿಕ ಹೆಸರಿದೆ ಮತ್ತು ಆತನ ಮಗನಾದ ಯೇಸು ಕ್ರಿಸ್ತನು ಯೆಹೋವನಿಗೆ ಸಾಕ್ಷಿಯಾಗಿದ್ದನು ಎಂದು ಅವಳು ವಿವರಿಸಿದಳು. ಯೆಹೋವನ ಕುರಿತು ಮತ್ತು ಯೇಸುವಿನ ಕುರಿತು ನನಗೆ ಕಲಿಸುತ್ತೇನೆಂದು ಅವಳು ಹೇಳಿದಳು ಹಾಗೂ ನಿತ್ಯ ಜೀವಕ್ಕೆ ನಡಿಸುವ ಸತ್ಯವು ಎಂಬ ಪುಸ್ತಕವನ್ನು ನನ್ನ ಬಳಿ ಬಿಟ್ಟುಹೋದಳು. * ರೋಮಾಂಚಿತಳಾದ ನಾನು ಉದ್ಗರಿಸಿದ್ದು: “ಹೌದು, ನಾನು ಈ ಹೊಸ ಧರ್ಮದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುವೆ!”

ದಿನಬೆಳಗಾಗುವುದರೊಳಗೆ ನಾನು ಆ ಪುಸ್ತಕವನ್ನು ಓದಿ ಮುಗಿಸಿದೆ. ಅದರಲ್ಲಿದ್ದ ವಿಷಯಗಳು ಅಪರಿಚಿತವಾಗಿದ್ದವು ಮತ್ತು ಜೀವಿತದಲ್ಲಿ ನನ್ನ ಆಸಕ್ತಿಯನ್ನು ಕೆರಳಿಸಿದವು. ನಾನು ಬೈಬಲ್‌ ಅಧ್ಯಯನವನ್ನು ಆರಂಭಿಸಿದೆ, ಮತ್ತು ನನ್ನ ಆನಂದಕ್ಕೆ ನನ್ನ ಅನೇಕ ಪ್ರಶ್ನೆಗಳು ಬೈಬಲಿನಿಂದಲೇ ಉತ್ತರಿಸಲ್ಪಟ್ಟವು. ನಾನು ಕಲಿತಂಥ ಪ್ರತಿಯೊಂದು ವಿಚಾರವನ್ನು ನಾನು ನಂಬಿದೆ. ಅದು ಅರ್ಥವತ್ತಾಗಿತ್ತು, ಮತ್ತು ಸತ್ಯವಾಗಿರಲೇಬೇಕಿತ್ತು!

ಲೈನೆಲ್‌ ಆರು ವರ್ಷದವನಾಗಿದ್ದಾಗ ನಾನು ಅವನಿಗೆ ಬೈಬಲ್‌ ಸತ್ಯವನ್ನು ಕಲಿಸಲಾರಂಭಿಸಿದೆ. ನಾವಿಬ್ಬರೂ ಒಟ್ಟಿಗೆ ಪ್ರಾರ್ಥನೆ ಮಾಡುತ್ತಿದ್ದೆವು. ಯೆಹೋವನು ನಮ್ಮ ಪರಾಮರಿಕೆಮಾಡುತ್ತಾನೆ ಮತ್ತು ನಾವು ಆತನ ಮೇಲೆ ಭರವಸೆಯಿಡುವ ಆವಶ್ಯಕತೆಯಿದೆ ಎಂಬ ವಿಚಾರದಿಂದ ನಾವು ಪರಸ್ಪರ ಪ್ರೋತ್ಸಾಹಿಸಿಕೊಳ್ಳುತ್ತಿದ್ದೆವು. ಕೆಲವೊಮ್ಮೆ ಸಮಸ್ಯೆಗಳು ಹಾಗೂ ಕಷ್ಟಸಂಕಟಗಳನ್ನು ನಿಭಾಯಿಸಲು ನನ್ನಲ್ಲಿ ತ್ರಾಣವಿಲ್ಲ ಎಂದು ನನಗನಿಸಿದ್ದುಂಟು. ಆದರೂ, ಲೈನೆಲ್‌ ತನ್ನ ಪುಟ್ಟ ಕೈಗಳಿಂದ ನನ್ನನ್ನು ಬಳಸಿ, ದೃಢಭರವಸೆಯಿಂದ ಹಾಗೂ ಪುನರಾಶ್ವಾಸನೆಯಿಂದ “ಮಮ್ಮಿ ಅಳಬೇಡ, ಯೆಹೋವನು ನಮ್ಮನ್ನು ನೋಡಿಕೊಳ್ಳುತ್ತಾನೆ” ಎಂದು ಹೇಳುತ್ತಿದ್ದಾಗ, ತೀರ ಅರ್ಥಗರ್ಭಿತ ಬದಲಾವಣೆ ನನ್ನಲ್ಲಾಗುತ್ತಿತ್ತು. ಆ ಮಾತುಗಳು ನನಗೆ ಎಷ್ಟು ಸಾಂತ್ವನ ನೀಡಿದವು ಮತ್ತು ಬೈಬಲ್‌ ಅಭ್ಯಾಸವನ್ನು ಮುಂದುವರಿಸಲು ದೃಢನಿರ್ಧಾರವನ್ನು ಮಾಡುವಂತೆ ನನ್ನನ್ನು ಪ್ರಚೋದಿಸಿದವು! ಮಾರ್ಗದರ್ಶನಕ್ಕಾಗಿ ನಾನು ಎಡೆಬಿಡದೆ ಪ್ರಾರ್ಥಿಸಿದೆ.

ಕ್ರೈಸ್ತ ಕೂಟಗಳ ಪ್ರಭಾವ

ಯೆಹೋವನಿಗಾಗಿರುವ ನಮ್ಮ ಗಣ್ಯತೆಯು, ಟೂಬ ಸಿಟಿಯಲ್ಲಿರುವ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗಲಿಕ್ಕಾಗಿ ಹೋಗಿಬರಲು ಸುಮಾರು 240 ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸುವಂತೆ ಪ್ರಚೋದಿಸಿತು. ಬೇಸಗೆ ಕಾಲದಲ್ಲಿ ನಾವು ವಾರಕ್ಕೆ ಎರಡು ಬಾರಿ ಮತ್ತು ಚಳಿಗಾಲದ ತಿಂಗಳುಗಳಲ್ಲಿ ಪ್ರತಿಕೂಲ ಹವಾಮಾನದ ಕಾರಣ ಭಾನುವಾರ ಇಡೀ ದಿನ ಕೂಟಗಳಿಗೆ ಹಾಜರಾಗುತ್ತಿದ್ದೆವು. ಕೆಲವೊಮ್ಮೆ ನಮ್ಮ ಕಾರ್‌ ಕೈಕೊಟ್ಟಾಗ, ದಾರಿಹೋಕರ ಮೋಟಾರುವಾಹನಗಳಲ್ಲಿ ಲಿಫ್ಟ್‌ ಕೇಳುವ ಮೂಲಕ ನಾವು ರಾಜ್ಯ ಸಭಾಗೃಹಕ್ಕೆ ಬಂದು ಮುಟ್ಟುತ್ತಿದ್ದೆವು. ದೂರದಿಂದ ಪ್ರಯಾಣಿಸಿ ಬರುವುದು ತುಂಬ ಆಯಾಸಕರವಾಗಿತ್ತಾದರೂ, ಅತ್ಯಂತ ಜರೂರಿಯ ಕೆಲಸದ ಹೊರತು ನಾವೆಂದಿಗೂ ಕೂಟಗಳಿಗೆ ತಪ್ಪಿಸಿಕೊಳ್ಳಬಾರದು ಎಂದು ಒಮ್ಮೆ ಲೈನೆಲ್‌ ಹೇಳಿದ್ದ ಮಾತು, ಯೆಹೋವನಿಂದ ಕೊಡಲ್ಪಡುವ ಆತ್ಮಿಕ ಮಾಹಿತಿಯನ್ನು ಅಲ್ಪವಾಗಿ ಪರಿಗಣಿಸದಿರುವುದರ ಮಹತ್ವವನ್ನು ನನ್ನ ಮನಸ್ಸಿನ ಮೇಲೆ ಅಚ್ಚೊತ್ತಿತು.

ಕೂಟಗಳಲ್ಲಿ ನಾವು ಜೀವಿತದ ಕಷ್ಟಸಂಕಟಗಳಿಲ್ಲದೆ ಸದಾಕಾಲ ಜೀವಿಸುವುದನ್ನು ಒತ್ತಿಹೇಳುವಂತಹ ರಾಜ್ಯ ಗೀತೆಗಳನ್ನು ಹಾಡಿದಾಗ, ನನ್ನ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಯೆಹೋವನ ಸಾಕ್ಷಿಗಳಿಂದ ನಾನು ಸಾಂತ್ವನವನ್ನು ಹಾಗೂ ಉತ್ತೇಜನವನ್ನು ಪಡೆದುಕೊಂಡೆ. ನಮ್ಮನ್ನು ಊಟ ಮತ್ತು ಉಪಾಹಾರಕ್ಕಾಗಿ ತಮ್ಮ ಮನೆಗಳಿಗೆ ಆಮಂತ್ರಿಸುವ ಮೂಲಕ ಅವರು ಅತಿಥಿಸತ್ಕಾರವನ್ನು ತೋರಿಸುತ್ತಿದ್ದರು. ಅಷ್ಟುಮಾತ್ರವಲ್ಲ, ಅವರ ಕುಟುಂಬ ಬೈಬಲ್‌ ಅಧ್ಯಯನಗಳಲ್ಲಿಯೂ ನಾವು ಭಾಗವಹಿಸುತ್ತಿದ್ದೆವು. ಅವರು ನಮ್ಮಲ್ಲಿ ತುಂಬ ಆಸಕ್ತಿಯನ್ನು ವಹಿಸಿದರು ಮತ್ತು ನಮಗೆ ಕಿವಿಗೊಡುತ್ತಿದ್ದರು. ನಮಗೆ ಸಹಾನುಭೂತಿಯನ್ನು ತೋರಿಸುವುದರಲ್ಲಿ ಮತ್ತು ಯೆಹೋವ ದೇವರು ನಮ್ಮ ಪರಾಮರಿಕೆ ಮಾಡುತ್ತಾನೆ ಎಂಬ ನಮ್ಮ ನಿಶ್ಚಿತಾಭಿಪ್ರಾಯವನ್ನು ಬಲಪಡಿಸುವುದರಲ್ಲಿ ಹಿರಿಯರು ವಿಶೇಷವಾಗಿ ಪ್ರಮುಖ ಪಾತ್ರವನ್ನು ವಹಿಸಿದರು. ನಿಜವಾದ ಸ್ನೇಹಿತರು ಸಿಕ್ಕಿದ್ದನ್ನು ನೋಡಿ ನನಗೆ ತುಂಬ ಸಂತೋಷವಾಯಿತು. ಅವರ ಸಹವಾಸ ಚೈತನ್ಯದಾಯಕವಾಗಿತ್ತು ಮತ್ತು ಇನ್ನು ಮುಂದೆ ಸಹಿಸಲಾಗುವುದಿಲ್ಲವೆಂದು ನನಗೆ ಅನಿಸುತ್ತಿದ್ದಾಗ ಅವರು ನನ್ನೊಂದಿಗೆ ಅತ್ತರು ಸಹ.​—⁠ಮತ್ತಾಯ 11:​28-30.

ಎರಡು ದೊಡ್ಡ ನಿರ್ಧಾರಗಳು

ಯೆಹೋವನ ಒದಗಿಸುವಿಕೆಗಳಿಂದ ನಾನು ಸಂತೃಪ್ತಳಾಗಿದ್ದಾಗ, ನನ್ನ ಬಳಿ ಕ್ಷಮೆಯಾಚಿಸಿ ನನ್ನೊಂದಿಗೆ ಪುನಃ ಸಂಬಂಧವನ್ನು ಮುಂದುವರಿಸಲಿಕ್ಕಾಗಿ ನನ್ನ ಪ್ರಿಯತಮನು ಹಿಂದಿರುಗಿದನು. ನಾನು ಈಗಲೂ ಅವನನ್ನು ಪ್ರೀತಿಸುತ್ತಿದ್ದೆ ಮತ್ತು ಅವನ ಬೇಡಿಕೆಯನ್ನು ನಿರಾಕರಿಸದಾದೆ. ನಾವಿಬ್ಬರೂ ವಿವಾಹವಾಗಲು ಯೋಜನೆಗಳನ್ನು ಮಾಡಿದೆವು. ಸತ್ಯವು ಅವನನ್ನು ಬದಲಾಯಿಸಬಹುದು ಎಂದು ನಾನು ನೆನಸಿದೆ. ಇದೇ ನನ್ನ ಜೀವಿತದ ಅತಿ ದೊಡ್ಡ ತಪ್ಪಾಗಿತ್ತು! ನಾನು ಸಂತೋಷವಾಗಿರಲಿಲ್ಲ. ನನ್ನ ಮನಸ್ಸಾಕ್ಷಿಯು ನನ್ನನ್ನು ತುಂಬ ಹಿಂಸಿಸಿತು. ಅವನಿಗೆ ಸತ್ಯವು ಬೇಡವಾಗಿತ್ತು ಎಂಬುದನ್ನು ಕೇಳಿ ನಾನು ತುಂಬ ನಿರುತ್ಸಾಹಗೊಂಡೆ.

ಹಿರಿಯರಲ್ಲಿ ಒಬ್ಬರ ಬಳಿ ನಾನು ಈ ವಿಷಯಗಳನ್ನು ಹೇಳಿದೆ. ಅವರು ಶಾಸ್ತ್ರವಚನಗಳಿಂದ ನನ್ನೊಂದಿಗೆ ತರ್ಕಿಸಿದರು ಮತ್ತು ನನ್ನ ನಿರ್ಧಾರದ ಬಗ್ಗೆ ನನ್ನೊಂದಿಗೆ ಪ್ರಾರ್ಥಿಸಿದರು. ಯೆಹೋವನು ಎಂದೂ ನನಗೆ ನೋವನ್ನು ಅಥವಾ ವೇದನೆಯನ್ನು ಉಂಟುಮಾಡುವುದಿಲ್ಲ, ಆದರೆ ನಾವು ಅಪರಿಪೂರ್ಣ ಜನರನ್ನು ಎಷ್ಟೇ ಭಕ್ತಿವಿಶ್ವಾಸಗಳಿಂದ ಕಂಡರೂ ಅವರು ನಮಗೆ ನೋವನ್ನುಂಟುಮಾಡುತ್ತಾರೆ ಎಂಬ ತೀರ್ಮಾನಕ್ಕೆ ಬಂದೆ. ವಾಸ್ತವದಲ್ಲಿ, ಸಂಪ್ರದಾಯ ನ್ಯಾಯವು ಸಮ್ಮತಿಸಿದ ಮದುವೆಗಳಲ್ಲಿ ಯಾವುದೇ ಭದ್ರತೆಯಿಲ್ಲ ಎಂಬುದು ನನಗೆ ತಿಳಿದುಬಂತು. ನಾನೊಂದು ನಿರ್ಧಾರವನ್ನು ಮಾಡಿದೆ. ಈ ಸಂಬಂಧವನ್ನು ಕೊನೆಗಾಣಿಸುವುದೇ ಆ ನಿರ್ಧಾರವಾಗಿತ್ತು. ಹೀಗೆ ಮಾಡುವುದು ತುಂಬ ಕಷ್ಟಕರವಾಗಿತ್ತು ಮತ್ತು ವೇದನಾಮಯವಾಗಿತ್ತು. ನಾನು ಹಣಕಾಸಿನ ತೊಂದರೆಯನ್ನು ಅನುಭವಿಸಬೇಕಾಗಿತ್ತಾದರೂ, ಪೂರ್ಣ ಹೃದಯದಿಂದ ಯೆಹೋವನ ಮೇಲೆ ಆತುಕೊಳ್ಳಬೇಕಾಗಿತ್ತು.

ನಾನು ಯೆಹೋವನನ್ನು ಪ್ರೀತಿಸುತ್ತಿದ್ದೆ ಮತ್ತು ಆತನ ಸೇವೆಮಾಡುವ ನಿರ್ಧಾರವನ್ನು ಮಾಡಿದೆ. 1984ರ ಮೇ 19ರಂದು, ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವ ದೇವರಿಗೆ ನನ್ನ ಜೀವನದ ಸಮರ್ಪಣೆಯನ್ನು ಸಂಕೇತಿಸಿದೆ. ನನ್ನ ಮಗನಾದ ಲೈನೆಲ್‌ ಸಹ ಯೆಹೋವನ ದೀಕ್ಷಾಸ್ನಾನಿತ ಸಾಕ್ಷಿಯಾದನು. ನನ್ನ ಕುಟುಂಬದಿಂದ ಮತ್ತು ಮಾಜಿ ಪತಿಯಿಂದ ನಾವು ಬಹಳಷ್ಟು ಹಿಂಸೆಯನ್ನು ಅನುಭವಿಸಿದೆವು, ಆದರೆ ನಾವು ಯೆಹೋವನ ಮೇಲೆ ಆತುಕೊಳ್ಳುವುದನ್ನು ಬಿಟ್ಟುಬಿಡಲಿಲ್ಲ. ನಾವು ಆಶಾಭಂಗಗೊಳ್ಳಲಿಲ್ಲ. ನನ್ನ ಕುಟುಂಬವು ಶಾಂತವಾಯಿತು ಮತ್ತು 11 ದೀರ್ಘ ವರ್ಷಗಳ ಬಳಿಕ ನಮ್ಮ ಹೊಸ ಜೀವನ ಮಾರ್ಗವನ್ನು ಅಂಗೀಕರಿಸಿತು.

ನಾನು ನನ್ನ ಕುಟುಂಬದವರನ್ನು ತುಂಬ ಪ್ರೀತಿಸುತ್ತೇನೆ ಮತ್ತು ಅವರು ಸಹ ಸಂತೋಷದಿಂದಿರಲಿಕ್ಕಾಗಿ ಯೆಹೋವನ ಕುರಿತು ಕಲಿಯಬೇಕೆಂಬುದೇ ನನ್ನ ಮನದಾಸೆಯಾಗಿದೆ. ಈ ಮುಂಚೆ ನಾನು ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆಗಾಗಿ ಪ್ರಯತ್ನಿಸಿದ್ದರಿಂದ, ತಾನು ಮಗಳನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ನೆನಸಿ ಹತಾಶರಾಗಿದ್ದ ನನ್ನ ತಂದೆಯವರು, ಧೈರ್ಯದಿಂದ ನನ್ನ ಪರವಾಗಿ ನಿಂತರು. ನಾನು ಪುನಃ ಸಂತೋಷದಿಂದಿರುವುದನ್ನು ನೋಡಿ ಅವರಿಗೆ ಹಾಯೆನಿಸಿತು. ಭಾವನಾತ್ಮಕ ವಾಸಿಯಾಗುವಿಕೆಗಾಗಿ, ಯೆಹೋವನಿಗೆ ಪ್ರಾರ್ಥಿಸುವುದು, ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗುವುದು, ಮತ್ತು ದೇವರ ವಾಕ್ಯವನ್ನು ಅನ್ವಯಿಸುವುದು ಅತ್ಯಾವಶ್ಯಕವಾಗಿದೆ ಎಂಬುದನ್ನು ನಾನು ಕಂಡುಕೊಂಡೆ.

ಭವಿಷ್ಯತ್ತಿಗಾಗಿ ನಿರೀಕ್ಷೆ

ಕಷ್ಟಾನುಭವ, ಅಪರಿಪೂರ್ಣತೆ, ಸುಳ್ಳು ಹಾಗೂ ದ್ವೇಷದ ಎಲ್ಲ ಕುರುಹುಗಳೂ ಸಂಪೂರ್ಣವಾಗಿ ಇಲ್ಲವಾಗಿ ಹೋಗುವಂತಹ ಒಂದು ಸಮಯಕ್ಕಾಗಿ ನಾನು ಎದುರುನೋಡುತ್ತಿದ್ದೇನೆ. ನಮ್ಮ ನ್ಯಾವಹೋ ಪ್ರದೇಶವು ಕಣ್ಣುಹಾಯಿಸುವಷ್ಟು ಉದ್ದಕ್ಕೂ ಸಸ್ಯಜಾತಿಯಿಂದ ನಳನಳಿಸುವುದನ್ನು, ಇಲ್ಲಿ ಇರುತ್ತಿದ್ದಂತಹ ಪೀಚ್‌ ಹಾಗೂ ಏಪ್ರಿಕಾಟ್‌ ಮರಗಳಿಂದ ತುಂಬಿರುವುದನ್ನು ನಾನು ಕಲ್ಪಿಸಿಕೊಳ್ಳುತ್ತೇನೆ. ಬೇರೆ ಬೇರೆ ಬುಡಕಟ್ಟುಗಳ ಜನರು, ನದಿಗಳು ಮತ್ತು ಮಳೆಯ ಸಹಾಯದಿಂದ ತಮ್ಮ ಬಂಜರು ಪ್ರದೇಶಗಳನ್ನು ಸುಂದರವಾದ ಪರದೈಸಾಗಿ ರೂಪಾಂತರಿಸುವುದರಲ್ಲಿ ಪಾಲ್ಗೊಳ್ಳುತ್ತಿರುವಾಗ ಅವರಿಗಾಗುವ ಆನಂದವನ್ನು ಸಹ ನಾನು ಚಿತ್ರಿಸಿಕೊಳ್ಳುತ್ತೇನೆ. ಇತ್ತೀಚಿನ ವರ್ಷಗಳಲ್ಲಿ ನಾವು ಹೇಗೆ ವೈರಿಗಳಾಗಿದ್ದೇವೋ ಹಾಗಿರದೆ, ಹೋಪಿ ನೆರೆಯವರೊಂದಿಗೆ ಮತ್ತು ಇತರ ಬುಡಕಟ್ಟುಗಳ ಜನರೊಂದಿಗೆ ನಮ್ಮ ದೇಶವನ್ನು ಹಂಚಿಕೊಳ್ಳುವುದನ್ನೂ ನಾನು ಚಿತ್ರಿಸಿಕೊಳ್ಳುತ್ತೇನೆ. ದೇವರ ವಾಕ್ಯವು ಹೇಗೆ ಎಲ್ಲ ಜಾತಿಗಳು, ಕುಲಗಳು ಮತ್ತು ಗೋತ್ರಗಳನ್ನು ಒಂದುಗೂಡಿಸುತ್ತದೆ ಎಂಬುದನ್ನು ಈಗ ನಾನು ಗಮನಿಸಿದ್ದೇನೆ. ಭವಿಷ್ಯತ್ತಿನಲ್ಲಿ, ಕುಟುಂಬಗಳು ಮತ್ತು ಸ್ನೇಹಿತರು ಪುನರುತ್ಥಾನದ ಮೂಲಕ ತಮ್ಮ ಮೃತ ಪ್ರಿಯಜನರೊಂದಿಗೆ ಐಕ್ಯರಾಗುವುದನ್ನು ನಾನು ನೋಡಸಾಧ್ಯವಿದೆ. ನಿತ್ಯಜೀವದ ನಿರೀಕ್ಷೆಯಿಂದ ನೋಡುವಾಗ ಇದು ಭಾರಿ ಸಂತೋಷದ ಸಮಯವಾಗಿರುವುದು. ಯಾರೇ ಆಗಲಿ ಅದ್ಭುತಕರವಾದ ಈ ಪ್ರತೀಕ್ಷೆಯ ಕುರಿತು ಕಲಿಯಲು ಬಯಸದಿರುವುದನ್ನು ನಾನು ಊಹಿಸಿಕೊಳ್ಳಲಾರೆ.

ನ್ಯಾವಹೋ ಪ್ರದೇಶದಲ್ಲಿ ದೇವಪ್ರಭುತ್ವ ವಿಸ್ತರಣೆ

ಟೂಬ ಸಿಟಿಯಲ್ಲಿ ಒಂದು ರಾಜ್ಯ ಸಭಾಗೃಹವನ್ನು ನೋಡುವುದು ಮತ್ತು ನ್ಯಾವಹೋ ಹಾಗೂ ಹೋಪಿ ಮೀಸಲು ಪ್ರದೇಶಗಳಲ್ಲಿ ಚಿನ್ಲೀ, ಕೇಯಂಟ, ಟೂಬ ಸಿಟಿ ಮತ್ತು ಕೀಮ್ಸ್‌ ಕ್ಯಾನ್ಯನ್‌ ಎಂಬ ನಾಲ್ಕು ಸಭೆಗಳ ಬೆಳವಣಿಗೆಯನ್ನು ಗಮನಿಸುವುದು ರೋಮಾಂಚನೀಯವಾಗಿದೆ. * 1983ರಲ್ಲಿ ನಾನು ಪ್ರಥಮ ಬಾರಿ ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಭಾಗವಹಿಸಿದಾಗ, ಒಂದಲ್ಲ ಒಂದು ದಿನ ಈ ಶಾಲೆಯು ನ್ಯಾವಹೋ ಭಾಷೆಯಲ್ಲಿ ನಡೆಸಲ್ಪಡುವುದು ಎಂದಷ್ಟೇ ನಾನು ಕಲ್ಪಿಸಿಕೊಂಡಿದ್ದೆ. ಆದರೆ ಸಮಯಾನಂತರ ನನ್ನ ಕಲ್ಪನೆಯು ನಿಜವಾಯಿತು. 1998ರಿಂದ, ಈ ಶಾಲೆಯು ನ್ಯಾವಹೋ ಭಾಷೆಯಲ್ಲಿ ನಡೆಸಲ್ಪಡುತ್ತಿದೆ.

ದೇವರಿಗೆ ಒಂದು ವೈಯಕ್ತಿಕ ಹೆಸರಿದೆ ಎಂಬುದನ್ನು ಇತರರಿಗೆ ಹೇಳುವುದು ಅನಂತ ಆಶೀರ್ವಾದಗಳನ್ನು ತಂದಿದೆ. ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?, ಮತ್ತು ತೀರ ಇತ್ತೀಚೆಗೆ ಲಭ್ಯಗೊಳಿಸಲ್ಪಟ್ಟ ನೀವು ದೇವರ ಸ್ನೇಹಿತರಾಗಿರಸಾಧ್ಯವಿದೆ! ಎಂಬ ಬ್ರೋಷರ್‌ಗಳು ನ್ಯಾವಹೋ ಭಾಷೆಯಲ್ಲಿ ಭಾಷಾಂತರಿಸಲ್ಪಟ್ಟಿದ್ದು, ಇವುಗಳಲ್ಲಿ ಕಂಡುಬರುವ, ನಮ್ಮ ನಂಬಿಕೆಯನ್ನು ಬಲಗೊಳಿಸುವಂಥ ಅಭಿವ್ಯಕ್ತಿಗಳನ್ನು ಓದಲು ಮತ್ತು ಹಂಚಿಕೊಳ್ಳಲು ಶಕ್ತಳಾಗಿರುವುದಕ್ಕಾಗಿ ನನಗಾಗುವ ಆನಂದವನ್ನು ನಾನು ಮಾತುಗಳಿಂದ ವರ್ಣಿಸುವುದು ಅಸಾಧ್ಯ. ಡೀನೇ ಎಂಬ ನ್ಯಾವಹೋ ಜನರನ್ನೂ ಸೇರಿಸಿ, ಎಲ್ಲ ಜನಾಂಗಗಳು ಮತ್ತು ಬುಡಕಟ್ಟುಗಳು ಹಾಗೂ ಭಾಷೆಗಳು ಪ್ರಯೋಜನ ಪಡೆದುಕೊಳ್ಳುವಂತೆ, ಈ ಬೈಬಲ್‌ ಶಿಕ್ಷಣ ಕೆಲಸದಲ್ಲಿ ಮುಂದಾಳತ್ವವನ್ನು ವಹಿಸುತ್ತಿರುವ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗಕ್ಕೆ ನಾನು ಆಭಾರಿಯಾಗಿದ್ದೇನೆ.​—⁠ಮತ್ತಾಯ 24:​45-47.

ನನ್ನ ಪೋಷಣೆಗಾಗಿ ನಾನು ಪೂರ್ಣ ಸಮಯದ ಐಹಿಕ ಕೆಲಸವನ್ನು ಮಾಡುತ್ತೇನೆ. ಆದರೆ, ಕ್ರಮವಾಗಿ ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡುವುದರಲ್ಲಿಯೂ ನಾನು ಆನಂದಿಸುತ್ತೇನೆ. ನನ್ನ ಒಂಟಿತನವನ್ನು ನಾನು ಗಣ್ಯಮಾಡುತ್ತೇನೆ ಮತ್ತು ಯಾವುದೇ ಅಪಕರ್ಷಣೆಗಳಿಲ್ಲದೆ ಯೆಹೋವನ ಸೇವೆಮಾಡಲು ಬಯಸುತ್ತೇನೆ. ನಾನು ಸಂತೃಪ್ತಿಯಿಂದಿದ್ದೇನೆ ಮತ್ತು ನನ್ನ ಜನರಿಗೆ ಹಾಗೂ ಇತರರಿಗೆ, ವಿಶೇಷವಾಗಿ ಹತಾಶ ಸ್ಥಿತಿಯಲ್ಲಿರುವವರಿಗೆ, “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ. ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ” ಎಂದು ಹೇಳಲು ನಾನು ಸಂತೋಷಿಸುತ್ತೇನೆ.​—⁠ಕೀರ್ತನೆ 34:⁠18.

ಬೈಬಲು ಬಿಳಿಯರ ಧರ್ಮವಾಗಿದೆ ಎಂದು ಈಗ ನನಗೆ ಅನಿಸುವುದಿಲ್ಲ. ದೇವರ ವಾಕ್ಯವಾಗಿರುವ ಬೈಬಲು, ಯಾರು ಅದರ ಕುರಿತು ಕಲಿಯಲು ಹಾಗೂ ಅದನ್ನು ತಮ್ಮ ಜೀವಿತಗಳಲ್ಲಿ ಅನ್ವಯಿಸಲು ಬಯಸುತ್ತಾರೋ ಅವರೆಲ್ಲರಿಗಾಗಿದೆ. ಯೆಹೋವನ ಸಾಕ್ಷಿಗಳು ನಿಮ್ಮನ್ನು ಸಂದರ್ಶಿಸುವಾಗ, ನಿಜವಾಗಿಯೂ ಸಂತೋಷದಿಂದಿರಲು ಹೇಗೆ ಸಾಧ್ಯವಿದೆ ಎಂಬುದನ್ನು ಅವರು ನಿಮಗೆ ತೋರಿಸುವಂತೆ ಅನುಮತಿಸಿರಿ. ಅವರು ಯೆಹೋವ ಎಂಬ ದೇವರ ಹೆಸರಿನ, ನನ್ನ ಜೀವಿತವನ್ನೇ ಬದಲಾಯಿಸಿದ ಹೆಸರಿನ ಕುರಿತಾದ ಸುವಾರ್ತೆಯನ್ನು ನಿಮಗಾಗಿ ತರುತ್ತಿದ್ದಾರೆ! “ಹೌದು, ದೇವರ ಹೆಸರು ಯೆಹೋವ ಎಂದಾಗಿದೆ.”(g01 7/8)

[ಪಾದಟಿಪ್ಪಣಿಗಳು]

^ ಮಾರ್ಮನ್‌ ಧರ್ಮದ ಕುರಿತಾದ ವಿವರವಾದ ಮಾಹಿತಿಗಾಗಿ, 1995, ನವೆಂಬರ್‌ 8ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯನ್ನು ನೋಡಿ.

^ ಎಐಎಮ್‌ ಎಂಬುದು ಒಂದು ನಾಗರಿಕ ಹಕ್ಕುಗಳ ಸಂಸ್ಥೆಯಾಗಿದ್ದು, ಇದು 1968ರಲ್ಲಿ ಒಬ್ಬ ಅಮೆರಿಕನ್‌ ಇಂಡಿಯನ್‌ನಿಂದ ಸ್ಥಾಪಿಸಲ್ಪಟ್ಟಿತು. ತೋರಿಕೆಗಾಗಿ ರಾಷ್ಟ್ರೀಯ ಇಂಡಿಯನ್ನರ ಹಿತಕ್ಷೇಮವನ್ನು ಉತ್ತೇಜಿಸುವಂತಹದ್ದಾಗಿದ್ದು, 1824ರಲ್ಲಿ ಸ್ಥಾಪಿಸಲ್ಪಟ್ಟ ಸರಕಾರೀ ಏಜೆನ್ಸಿಯಾದ ಬಿಐಎ ಸಂಸ್ಥೆಯ ವಿರುದ್ಧ ಇದು ಅನೇಕವೇಳೆ ಟೀಕಾತ್ಮಕವಾಗಿತ್ತು. ಅನೇಕಬಾರಿ ಬಿಐಎ ಸಂಸ್ಥೆಯು ಮೀಸಲು ಪ್ರದೇಶದ ಖನಿಜಸಂಪತ್ತುಗಳು, ನೀರು ಹಾಗೂ ಇನ್ನಿತರ ಹಕ್ಕುಗಳನ್ನು ಅಮೆರಿಕನ್‌ ಇಂಡಿಯನ್ನರಲ್ಲದ ಜನರಿಗೆ ಗುತ್ತಿಗೆಗೆ ಕೊಟ್ಟಿತು.​—⁠ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ.

^ ಪರಾಗವನ್ನು ಪವಿತ್ರ ವಸ್ತುವಾಗಿ ಪರಿಗಣಿಸಲಾಗುತ್ತಿತ್ತು ಮತ್ತು ಜೀವನ ಹಾಗೂ ಪುನರುಜ್ಜೀವನವನ್ನು ಸಂಕೇತಿಸುವ ಇದನ್ನು ಪ್ರಾರ್ಥನೆಯಲ್ಲಿ ಮತ್ತು ಮತಸಂಸ್ಕಾರಗಳಲ್ಲಿ ಉಪಯೋಗಿಸಲಾಗುತ್ತಿತ್ತು. ಒಬ್ಬನು ಪರಾಗವು ಚೆಲ್ಲಲ್ಪಟ್ಟಿರುವ ಹಾದಿಯಲ್ಲಿ ಪ್ರಯಾಣಿಸುವಲ್ಲಿ ಅವನ ದೇಹವು ಪವಿತ್ರವಾಗುತ್ತದೆ ಎಂದು ನ್ಯಾವಹೋ ಜನರು ನಂಬುತ್ತಾರೆ.​—⁠ದಿ ಎನ್‌ಸೈಕ್ಲೊಪೀಡಿಯ ಆಫ್‌ ನೇಟಿವ್‌ ಅಮೆರಿಕನ್‌ ರಿಲಿಜಿಯನ್ಸ್‌.

^ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿದ್ದು, ಈಗ ಮುದ್ರಿಸಲ್ಪಡುತ್ತಿಲ್ಲ.

^ ಇದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ, 1996, ಸೆಪ್ಟೆಂಬರ್‌ 8ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ “ಅಮೆರಿಕನ್‌ ಇಂಡಿಯನ್ನರು​—⁠ಇವರಿಗೆ ಯಾವ ಭವಿಷ್ಯತ್ತು ಕಾದಿದೆ?” ಎಂಬ ಲೇಖನಮಾಲೆಯನ್ನು ನೋಡಿ.

[ಪುಟ 27ರಲ್ಲಿರುವ ಚಿತ್ರ]

ಒಂದು ನ್ಯಾವಹೋ ದಿಮ್ಮಿಮನೆ

[ಪುಟ 27ರಲ್ಲಿರುವ ಚಿತ್ರ]

ನನ್ನ ಮಗನಾದ ಲೈನೆಲ್‌ನೊಂದಿಗೆ

[ಪುಟ 29ರಲ್ಲಿರುವ ಚಿತ್ರ]

1993ರಲ್ಲಿ ಮಾಸ್ಕೋದಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ರಷ್ಯನ್‌ ಸ್ನೇಹಿತರೊಂದಿಗೆ

[ಪುಟ 30ರಲ್ಲಿರುವ ಚಿತ್ರ]

ಆ್ಯರಿಸೋನದ ಕೇಯಂಟ ಸಭೆಯಲ್ಲಿನ ನನ್ನ ಆತ್ಮಿಕ ಕುಟುಂಬದೊಂದಿಗೆ