ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದ್ವೇಷದ ಚಕ್ರಗತಿಯನ್ನು ಮುರಿಯುವುದು

ದ್ವೇಷದ ಚಕ್ರಗತಿಯನ್ನು ಮುರಿಯುವುದು

ದ್ವೇಷದ ಚಕ್ರಗತಿಯನ್ನು ಮುರಿಯುವುದು

“ನಿಮ್ಮ ವೈರಿಗಳನು ಪ್ರೀತಿಸಿರಿ.”​—⁠ಮತ್ತಾಯ 5:⁠44.

ಅನೇಕ ದಿವಸಗಳ ವರೆಗೆ ಎರಡು ವಿರೋಧಿ ರಾಷ್ಟ್ರಗಳ ನಾಯಕರು ಬಹಳ ಗಹನವಾದ ಶಾಂತಿ ಸಮಾಲೋಚನೆಗಳನ್ನು ನಡೆಸಿದರು. ಪ್ರಬಲವಾದ ಔದ್ಯೋಗೀಕೃತ ದೇಶವೊಂದರ ಅಧ್ಯಕ್ಷರು ಸಹ ಈ ಚರ್ಚೆಗಳ ಸಮಯದಲ್ಲಿ ಉಪಸ್ಥಿತರಿದ್ದರು. ತಮಗಿರುವ ಗಮನಾರ್ಹ ಮಟ್ಟದ ಪ್ರಭಾವ ಹಾಗೂ ರಾಜತಾಂತ್ರಿಕ ಕೌಶಲಗಳನ್ನು ಉಪಯೋಗಿಸುತ್ತಾ, ಈ ಇಬ್ಬರು ನಾಯಕರನ್ನು ಒಂದುಗೂಡಿಸಲು ಆ ಅಧ್ಯಕ್ಷರು ಪ್ರಯತ್ನಿಸಿದರು. ಈ ಪ್ರಯಾಸಕರ ಪ್ರಯತ್ನಗಳ ಅಂತಿಮ ಫಲವು, ಇನ್ನಷ್ಟು ಸಂಕಟದಾಯಕವಾಗಿತ್ತು. ಕೆಲವೇ ವಾರಗಳೊಳಗೆ ಈ ಎರಡು ರಾಷ್ಟ್ರಗಳು, “ಎರಡು ದಶಕಗಳಲ್ಲೇ ಆ ರಾಷ್ಟ್ರಗಳ ನಡುವೆ ನಡೆದ ಅತ್ಯಂತ ಭೀಕರ ಹಿಂಸಾಚಾರ” ಎಂದು ನ್ಯೂಸ್‌ವೀಕ್‌ ಪತ್ರಿಕೆಯು ಯಾವುದನ್ನು ಕರೆಯಿತೋ ಅದರಲ್ಲಿ ಒಳಗೂಡಿದ್ದವು.

ರಾಷ್ಟ್ರೀಯ ನಾಯಕರು ಅತ್ಯುತ್ತಮವಾದ ಪ್ರಯತ್ನಗಳನ್ನು ಮಾಡುತ್ತಿರುವುದಾದರೂ, ಲೋಕದಾದ್ಯಂತ ಬೇರೆ ಬೇರೆ ಕುಲಗಳು ಮತ್ತು ರಾಷ್ಟ್ರೀಯ ಗುಂಪುಗಳ ನಡುವೆ ಇರುವ ದ್ವೇಷ ಮತ್ತು ಹಗೆತನಗಳು ಕೊನೆಗೊಳ್ಳುತ್ತಲೇ ಇಲ್ಲ. ಅಜ್ಞಾನ, ಅಂಧಾಭಿಮಾನ, ಮತ್ತು ಪ್ರಾಪಗ್ಯಾಂಡದಿಂದ ಉತ್ತೇಜಿಸಲ್ಪಟ್ಟು, ದ್ವೇಷವನ್ನು ವ್ಯಕ್ತಪಡಿಸುವ ಘಟನೆಗಳು ಇನ್ನಷ್ಟು ತೀವ್ರತೆಯಿಂದ ಮತ್ತು ಆಗಿಂದಾಗ್ಗೆ ಪುನರಾವರ್ತಿಸಲ್ಪಡುತ್ತಿವೆ. ಅದೇ ಸಮಯದಲ್ಲಿ ಇಂದಿನ ನಾಯಕರು ನವನವೀನ ಪರಿಹಾರಗಳಿಗಾಗಿ ವ್ಯರ್ಥವಾಗಿ ತಡಕಾಡುತ್ತಿದ್ದಾರೆ. ಆದರೆ ಇದಕ್ಕಿರುವ ಅತ್ಯುತ್ತಮ ಪರಿಹಾರವು ತೀರ ಹಳೆಯದ್ದಾಗಿದೆ, ಅಂದರೆ ಪರ್ವತ ಪ್ರಸಂಗದಷ್ಟು ಹಳೆಯದ್ದಾಗಿದೆ ಎಂಬುದನ್ನು ಪರಿಗಣಿಸಲು ಅವರು ತಪ್ಪಿಹೋಗಿದ್ದಾರೆ. ಆ ಪರ್ವತ ಪ್ರಸಂಗದ ಸಮಯದಲ್ಲಿ ಯೇಸು ಕ್ರಿಸ್ತನು, ದೇವರ ಮಾರ್ಗಗಳಿಗೆ ತಮ್ಮನ್ನು ಅಧೀನಪಡಿಸಿಕೊಳ್ಳುವಂತೆ ತನ್ನ ಕೇಳುಗರನ್ನು ಉತ್ತೇಜಿಸಿದನು. ಆ ಸಂದರ್ಭದಲ್ಲಿ ಅವನು ಈ ಮೇಲೆ ಕೊಡಲ್ಪಟ್ಟಿರುವಂತೆ “ನಿಮ್ಮ ವೈರಿಗಳನ್ನು ಪ್ರೀತಿಸಿರಿ” ಎಂಬ ಹೇಳಿಕೆಯನ್ನು ಮಾಡಿದನು. ಆ ಬುದ್ಧಿವಾದವು, ದ್ವೇಷ ಮತ್ತು ಪೂರ್ವಕಲ್ಪಿತ ಅಭಿಪ್ರಾಯದ ಸಮಸ್ಯೆಗೆ ಅತ್ಯುತ್ತಮವಾದ ಪರಿಹಾರವಾಗಿದೆ ಮಾತ್ರವಲ್ಲ, ಕಾರ್ಯಸಾಧಕವಾಗಿರುವ ಏಕಮಾತ್ರ ಪರಿಹಾರವೂ ಆಗಿದೆ!

ಒಬ್ಬನು ತನ್ನ ವೈರಿಗಳನ್ನು ಪ್ರೀತಿಸುವ ವಿಚಾರವನ್ನು ಸಂದೇಹವಾದಿಗಳು, ತೀರ ಆಶಾರಹಿತವಾದ ಉದಾತ್ತ ಧ್ಯೇಯ ಅಥವಾ ಪ್ರಾಯೋಗಿಕವಲ್ಲದ ಸಂಗತಿಯೆಂದು ಕಡೆಗಣಿಸುತ್ತಾರೆ. ಆದರೂ, ಜನರು ದ್ವೇಷಿಸಲು ಕಲಿಯಸಾಧ್ಯವಿರುವುದಾದರೆ, ಅವರು ದ್ವೇಷಿಸದಿರುವಂತೆಯೂ ಕಲಿಯಸಾಧ್ಯವಿದೆ ಎಂದು ನೆನಸುವುದು ಸಮಂಜಸವಲ್ಲವೋ? ಹೀಗೆ ಯೇಸುವಿನ ಮಾತುಗಳು ಮಾನವಕುಲಕ್ಕಾಗಿ ನಿಜವಾದ ನಿರೀಕ್ಷೆಯನ್ನು ನೀಡುತ್ತವೆ. ತುಂಬ ದೀರ್ಘ ಸಮಯದಿಂದ ಇರುವಂತಹ ಹಗೆತನಗಳನ್ನು ಸಹ ಕೊನೆಗೊಳಿಸುವ ಸಾಧ್ಯತೆಯಿದೆ ಎಂಬುದನ್ನು ಅವು ತೋರಿಸುತ್ತವೆ.

ಯೇಸುವಿನ ದಿನದಲ್ಲಿ ಅವನ ಯೆಹೂದಿ ಕೇಳುಗರ ನಡುವೆ ಇದ್ದ ಸನ್ನಿವೇಶವನ್ನು ಪರಿಗಣಿಸಿರಿ. ಅವರು ತಮ್ಮ ವೈರಿಗಳನ್ನು ಕಂಡುಕೊಳ್ಳಲು ಬಹಳ ದೂರ ಹೋಗಬೇಕಾಗಿರಲಿಲ್ಲ. ಅವರ ಪ್ರಾಂತದ ಮೇಲೆ ರೋಮನ್‌ ಸೈನ್ಯಗಳು ಅಧಿಕಾರ ನಡೆಸುತ್ತಿದ್ದವು. ಅವು ಯೆಹೂದ್ಯರನ್ನು ಒತ್ತಾಯದ ಕಂದಾಯಕ್ಕೆ ಒಳಪಡಿಸುತ್ತಿದ್ದವು, ರಾಜಕೀಯ ಕುತಂತ್ರವನ್ನು ನಡೆಸುತ್ತಿದ್ದವು, ದುರುಪಚರಿಸುತ್ತಿದ್ದವು ಮತ್ತು ಅವರನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದವು. (ಮತ್ತಾಯ 5:​39-42) ಹಾಗಿದ್ದರೂ, ಕೆಲವರು ತಮ್ಮ ಜೊತೆ ಯೆಹೂದ್ಯರನ್ನೇ ವೈರಿಗಳಾಗಿ ಪರಿಗಣಿಸಸಾಧ್ಯವಿತ್ತು. ಏಕೆಂದರೆ ಬಗೆಹರಿಸದೆ ಬಿಡಲ್ಪಟ್ಟ ಹಾಗೂ ತೀರ ಕಹಿಮನೋಭಾವವನ್ನು ಉಂಟುಮಾಡುವಂತೆ ಅನುಮತಿಸಲ್ಪಟ್ಟ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳು ಅವರ ನಡುವೆ ಇದ್ದವು. (ಮತ್ತಾಯ 5:​21-24) ತನ್ನ ಕೇಳುಗರಿಗೆ ನೋವು ಹಾಗೂ ವೇದನೆಯನ್ನು ಉಂಟುಮಾಡಿದಂತಹ ವ್ಯಕ್ತಿಗಳನ್ನು ಅವರು ಪ್ರೀತಿಸುವಂತೆ ಯೇಸು ನಿಜವಾಗಿಯೂ ನಿರೀಕ್ಷಿಸಿದ್ದನೋ?

“ಪ್ರೀತಿ”ಯ ಅರ್ಥ

ಮೊದಲಾಗಿ, “ಪ್ರೀತಿ” ಎಂದು ಯೇಸು ಹೇಳಿದಾಗ, ಇಬ್ಬರು ಆಪ್ತ ಸ್ನೇಹಿತರ ಮಧ್ಯೆ ಇರುವಂತಹ ರೀತಿಯ ಅಕ್ಕರೆಯು ಅವನ ಮನಸ್ಸಿನಲ್ಲಿರಲಿಲ್ಲ ಎಂಬುದನ್ನು ಗ್ರಹಿಸಿರಿ. ಮತ್ತಾಯ 5:44ರಲ್ಲಿ ಉಪಯೋಗಿಸಲ್ಪಟ್ಟಿರುವ ಪ್ರೀತಿಗಾಗಿರುವ ಗ್ರೀಕ್‌ ಶಬ್ದವು, ಅಗಾಪೆ ಎಂಬ ಶಬ್ದದಿಂದ ಬಂದದ್ದಾಗಿದೆ. ಈ ಶಬ್ದದ ಅರ್ಥ, ಮೂಲತತ್ತ್ವದಿಂದ ಮಾರ್ಗದರ್ಶಿಸಲ್ಪಟ್ಟ ಅಥವಾ ನಿಯಂತ್ರಿಸಲ್ಪಟ್ಟ ಪ್ರೀತಿ ಎಂದಾಗಿದೆ. ಇದರಲ್ಲಿ ಆದರಣೀಯ ಮಮತೆಯು ಒಳಗೂಡಿರಬೇಕೆಂದೇನಿಲ್ಲ. ಇಂತಹ ಪ್ರೀತಿಯು ನೀತಿಯ ಮೂಲತತ್ತ್ವಗಳಿಂದ ಮಾರ್ಗದರ್ಶಿಸಲ್ಪಡುವುದರಿಂದ, ಇತರರ ಒಳಿತನ್ನು ಬಯಸುವಂತೆ ಒಬ್ಬನನ್ನು ಪ್ರೇರೇಪಿಸುತ್ತದೆ. ಹೀಗೆ ಅಗಾಪೆ ಪ್ರೀತಿಯು ವೈಯಕ್ತಿಕ ವೈರತ್ವಗಳನ್ನೂ ಜಯಿಸಬಲ್ಲದು. ಯೇಸು ತಾನೇ ಇಂತಹ ಪ್ರೀತಿಯನ್ನು ತೋರಿಸಿದನು. ತನ್ನನ್ನು ಶೂಲಕ್ಕೇರಿಸಿದ ರೋಮನ್‌ ಸೈನಿಕರಿಗೆ ಕೇಡನ್ನು ಹಾರೈಸುವುದಕ್ಕೆ ಬದಲಾಗಿ ಅವನು ಪ್ರಾರ್ಥಿಸಿದ್ದು: “ತಂದೆಯೇ, ಅವರಿಗೆ ಕ್ಷಮಿಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು.”​—⁠ಲೂಕ 23:⁠34.

ಲೋಕವು ವ್ಯಾಪಕ ಮಟ್ಟದಲ್ಲಿ ಯೇಸುವಿನ ಬೋಧನೆಗಳನ್ನು ಸ್ವೀಕರಿಸಿ ಅವುಗಳಿಗನುಸಾರ ನಡೆಯುವುದು ಮತ್ತು ಜನರು ಪರಸ್ಪರ ಪ್ರೀತಿಸಲಾರಂಭಿಸುವರು ಎಂದು ನಿರೀಕ್ಷಿಸುವುದು ವಾಸ್ತವಿಕವಾದದ್ದಾಗಿದೆಯೋ? ಇಲ್ಲ. ಏಕೆಂದರೆ ಈ ಲೋಕವು ವಿಪತ್ತಿನ ಕಡೆಗೆ ರಭಸದಿಂದ ಧಾವಿಸುವುದನ್ನು ಮುಂದುವರಿಸುವುದು ಎಂದು ಬೈಬಲು ತೋರಿಸುತ್ತದೆ. “ದುಷ್ಟರೂ ವಂಚಕರೂ . . . ಹೆಚ್ಚಾದ ಕೆಟ್ಟತನಕ್ಕೆ ಹೋಗುವರು” ಎಂದು 2 ತಿಮೊಥೆಯ 3:13 ಮುಂತಿಳಿಸುತ್ತದೆ. ಆದರೂ, ಬೈಬಲಿನ ಅಧ್ಯಯನದ ಮೂಲಕ ನೀತಿಯ ಮೂಲತತ್ತ್ವಗಳಲ್ಲಿ ಸಮಗ್ರ ಶಿಕ್ಷಣವನ್ನು ಪಡೆದುಕೊಳ್ಳುವುದರಿಂದ ಒಬ್ಬೊಬ್ಬ ವ್ಯಕ್ತಿಯೂ ದ್ವೇಷದ ಚಕ್ರಗತಿಯನ್ನು ಮುರಿಯಸಾಧ್ಯವಿದೆ. ಹೀಗೆ ಅನೇಕರು ತಮ್ಮ ಸುತ್ತಲೂ ಸುಳಿಸುತ್ತುತ್ತಿರುವ ದ್ವೇಷದ ಪ್ರವಾಹವನ್ನು ಪ್ರತಿರೋಧಿಸಲು ಕಲಿತಿದ್ದಾರೆ ಎಂಬುದನ್ನು ದಾಖಲಿತ ವಾಸ್ತವಾಂಶಗಳು ಸ್ಪಷ್ಟವಾಗಿ ತೋರಿಸುತ್ತವೆ. ನಿಜ ಜೀವನದ ಕೆಲವೊಂದು ಉದಾಹರಣೆಗಳನ್ನು ಪರಿಗಣಿಸಿರಿ.

ಪ್ರೀತಿಸಲು ಕಲಿಯುವುದು

ಹೋಸೇ 13 ವರ್ಷ ಪ್ರಾಯದವನಾಗಿದ್ದಾಗ, ಅವನು ಒಂದು ಭಯೋತ್ಪಾದಕರ ಗುಂಪಿನ ಸದಸ್ಯನೋಪಾದಿ ಗೆರಿಲ್ಲ ಯುದ್ಧದಲ್ಲಿ ಒಳಗೂಡಿದ್ದನು. * ಅವನು ತನ್ನ ಸುತ್ತಲೂ ನೋಡಿದ ಅನ್ಯಾಯಕ್ಕೆ ಕಾರಣರೆಂದು ಆಪಾದಿಸಲ್ಪಟ್ಟಿದ್ದ ಜನರನ್ನು ದ್ವೇಷಿಸುವಂತೆ ಅವನಿಗೆ ಕಲಿಸಲಾಗಿತ್ತು. ಸಾಧ್ಯವಿರುವಲ್ಲಿ, ಅವರೆಲ್ಲರನ್ನು ನಿರ್ಮೂಲಮಾಡುವುದು ಅವನ ಗುರಿಯಾಗಿತ್ತು. ತನ್ನ ಸಂಗಡಿಗರಲ್ಲಿ ಅನೇಕರು ಸಾಯುತ್ತಿರುವುದನ್ನು ನೋಡಿ ಹೋಸೇಯ ಮನಸ್ಸಿನಲ್ಲಿಯೂ ಹಗೆತನ ಹಾಗೂ ಪ್ರತೀಕಾರದ ಭಾವನೆಗಳು ತುಂಬಿಕೊಂಡವು. ಅವನು ಕೈಬಾಂಬುಗಳನ್ನು ಮಾಡುತ್ತಿರುವಾಗ ಸ್ವತಃ ಹೀಗೆ ಕೇಳಿಕೊಳ್ಳುತ್ತಿದ್ದನು, ‘ಏಕೆ ಇಷ್ಟೊಂದು ಕಷ್ಟಾನುಭವವಿದೆ? ಒಂದುವೇಳೆ ಒಬ್ಬ ದೇವರಿರುವುದಾದರೆ, ಆತನು ಇದನ್ನು ಗಮನಿಸುವುದೂ ಇಲ್ಲವೇ?’ ಅನೇಕಬಾರಿ ಅವನು ಅತ್ತನು, ತಬ್ಬಿಬ್ಬುಗೊಂಡನು ಮತ್ತು ಖಿನ್ನನಾದನು.

ಕಾಲಕ್ರಮೇಣ ಹೋಸೇ ಯೆಹೋವನ ಸಾಕ್ಷಿಗಳ ಒಂದು ಸ್ಥಳಿಕ ಸಭೆಯನ್ನು ಸಂಪರ್ಕಿಸಿದನು. ಅವನ ಮೊದಲ ಸಭಾ ಕೂಟದಲ್ಲಿ, ಅಲ್ಲಿನ ಜನರ ಮಧ್ಯೆಯಿದ್ದ ಪ್ರೀತಿಯ ವಾತಾವರಣವನ್ನು ಅವನು ಗಮನಿಸಿದನು. ಪ್ರತಿಯೊಬ್ಬರೂ ಅವನನ್ನು ಆದರಣೀಯವಾಗಿ ಮತ್ತು ಸ್ನೇಹಪರ ರೀತಿಯಲ್ಲಿ ಅಭಿವಂದಿಸಿದರು. ತದನಂತರ, “ದೇವರು ದುಷ್ಟತನವನ್ನು ಏಕೆ ಅನುಮತಿಸುತ್ತಾನೆ?” ಎಂಬ ವಿಷಯದ ಕುರಿತಾದ ಒಂದು ಚರ್ಚೆಯು, ಅವನು ಯಾವಾಗಲೂ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಿತು. *

ಸಕಾಲದಲ್ಲಿ, ಬೈಬಲಿನಿಂದ ಪಡೆದುಕೊಂಡ ಹೆಚ್ಚಿನ ಜ್ಞಾನವು, ಹೋಸೇ ತನ್ನ ಜೀವನದಲ್ಲಿ ಮತ್ತು ತನ್ನ ಆಲೋಚನಾ ರೀತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಪ್ರಚೋದಿಸಿತು. “ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ. . . . ದ್ವೇಷಿಸುವವನು ಕೊಲೆಗಾರನಾಗಿದ್ದಾನೆ, ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವದಿಲ್ಲ” ಎಂಬುದನ್ನು ಅವನು ತಿಳಿದುಕೊಂಡನು.​—⁠1 ಯೋಹಾನ 3:​14, 15.

ಆದರೂ, ತನ್ನ ಭಯೋತ್ಪಾದಕ ಸಂಗಡಿಗರೊಂದಿಗಿನ ಸಂಬಂಧವನ್ನು ಮುರಿಯುವುದು ಅವನಿಗೆ ಪಂಥಾಹ್ವಾನದಾಯಕವಾಗಿ ಪರಿಣಮಿಸಿತು. ಪ್ರತಿ ಬಾರಿ ಅವನು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಹೋಗುತ್ತಿದ್ದಾಗ, ಅವನ ಸಂಗಡಿಗರು ಅವನನ್ನು ಹಿಂಬಾಲಿಸಿದರು. ಹೋಸೇಯಲ್ಲಿ ಯಾವುದು ಇಂತಹ ಬದಲಾವಣೆಯನ್ನು ತಂದಿತೆಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ಅವನ ಮಾಜಿ ಸಹವಾಸಿಗಳಲ್ಲಿ ಕೆಲವರು ಕೆಲವೊಂದು ಕೂಟಗಳಿಗೂ ಹಾಜರಾದರು. ಅವನು ತಮಗೆ ವಿಶ್ವಾಸಘಾತುಕನಾಗುವುದಿಲ್ಲ ಅಥವಾ ತಮಗೆ ಅಪಾಯವನ್ನು ಒಡ್ಡುವುದಿಲ್ಲ ಎಂಬುದನ್ನು ತಿಳಿದು ತೃಪ್ತರಾದ ಬಳಿಕ, ಅವರು ಅವನ ತಂಟೆಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟರು. 17 ವರ್ಷ ಪ್ರಾಯದಲ್ಲಿ, ಹೋಸೇ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೋಪಾದಿ ದೀಕ್ಷಾಸ್ನಾನವನ್ನು ಪಡೆದುಕೊಂಡನು. ಸ್ವಲ್ಪದರಲ್ಲೇ ಅವನು ಪೂರ್ಣ ಸಮಯದ ಸಾರುವಿಕೆಯನ್ನು ಆರಂಭಿಸಿದನು. ಈಗ ಅವನು ಜನರನ್ನು ಕೊಲ್ಲುವುದಕ್ಕಾಗಿ ಒಳಸಂಚನ್ನು ಮಾಡುವುದಕ್ಕೆ ಬದಲಾಗಿ, ಅವರಿಗೆ ಪ್ರೀತಿ ಮತ್ತು ನಿರೀಕ್ಷೆಯ ಸಂದೇಶವನ್ನು ಕೊಂಡೊಯ್ಯುತ್ತಾನೆ!

ಕುಲಸಂಬಂಧಿತ ತಡೆಗಟ್ಟುಗಳನ್ನು ಕಡಿದುಹಾಕುವುದು

ಕುಲಸಂಬಂಧಿತ ಗುಂಪುಗಳ ಸದಸ್ಯರು ತಮ್ಮನ್ನು ಪ್ರತ್ಯೇಕಿಸುವಂತಹ ದ್ವೇಷದ ತಡೆಗಟ್ಟುಗಳನ್ನು ಕಿತ್ತುಹಾಕಬಲ್ಲರೋ? ಇಂಗ್ಲೆಂಡ್‌ನ ಲಂಡನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಆ್ಯಮ್‌ಹಾರಿಕ್‌ ಭಾಷೆಯನ್ನು ಮಾತಾಡುವ ಗುಂಪನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಸುಮಾರು 35 ವ್ಯಕ್ತಿಗಳು ಆ ಗುಂಪಿನಲ್ಲಿದ್ದು, ಅವರಲ್ಲಿ 20 ಮಂದಿ ಇಥಿಯೋಪಿಯದವರಾಗಿದ್ದಾರೆ ಮತ್ತು 15 ಮಂದಿ ಎರಿಟ್ರಿಯದವರಾಗಿದ್ದಾರೆ. ಇತ್ತೀಚಿಗೆ ಆಫ್ರಿಕದಲ್ಲಿ ಎರಿಟ್ರಿಯದವರು ಮತ್ತು ಇಥಿಯೋಪಿಯದವರು ತೀವ್ರ ಹಗೆತನದಿಂದ ಕಾದಾಡಿದರಾದರೂ, ಈ ಗುಂಪಿನವರು ಮಾತ್ರ ಒಟ್ಟಿಗೆ ಶಾಂತಿಯಿಂದ ಹಾಗೂ ಐಕ್ಯಭಾವದಿಂದ ಆರಾಧಿಸುತ್ತಾರೆ.

ಇಥಿಯೋಪಿಯದ ಒಬ್ಬ ಸಾಕ್ಷಿಗೆ ಅವನ ಕುಟುಂಬದವರು ಹೀಗೆ ಹೇಳಿದ್ದರು: ‘ಎರಿಟ್ರಿಯದವರನ್ನು ಎಂದೂ ನಂಬಬೇಡ!’ ಆದರೆ ಈಗ ಅವನು ಎರಿಟ್ರಿಯದವರಾದ ಜೊತೆ ಕ್ರೈಸ್ತರನ್ನು ನಂಬುತ್ತಾನೆ ಮಾತ್ರವಲ್ಲ ಅವರನ್ನು ಸಹೋದರ ಸಹೋದರಿಯರೆಂದು ಕರೆಯುತ್ತಾನೆ ಸಹ! ಎರಿಟ್ರಿಯದ ಈ ಜನರು ಸಾಮಾನ್ಯವಾಗಿ ಟಿಗ್ರೀನ್ಯ ಭಾಷೆಯನ್ನು ಮಾತಾಡುತ್ತಾರಾದರೂ, ಇಥಿಯೋಪಿಯದ ತಮ್ಮ ಸಹೋದರರ ಭಾಷೆಯಾದ ಆ್ಯಮ್‌ಹಾರಿಕ್‌ ಭಾಷೆಯನ್ನು ಕಲಿಯುವ ಆಯ್ಕೆಯನ್ನು ಅವರು ಮಾಡುತ್ತಾರೆ. ಅವರೊಂದಿಗೆ ಬೈಬಲ್‌ ಅಧ್ಯಯನವನ್ನು ನಡಿಸಸಾಧ್ಯವಾಗುವುದು ಎಂಬ ಕಾರಣದಿಂದಲೇ ಅವರು ಆ ಭಾಷೆಯನ್ನು ಕಲಿಯುತ್ತಾರೆ. “ಸಮಸ್ತವನ್ನು ಸಂಪೂರ್ಣಮಾಡುವ ಬಂಧ”ವಾಗಿರುವ ದೈವಿಕ ಪ್ರೀತಿಯಲ್ಲಿ ಬಲವಿದೆ ಎಂಬುದಕ್ಕೆ ಇದು ಎಂತಹ ಅದ್ಭುತಕರ ಪುರಾವೆಯಾಗಿದೆ!​—⁠ಕೊಲೊಸ್ಸೆ 3:⁠14.

ಹಿಂದಿನದ್ದನ್ನು ಮರೆತುಬಿಡುವುದು

ಒಬ್ಬನು ನಿರ್ದಯವಾದ ರೀತಿಯಲ್ಲಿ ಉಪಚರಿಸಲ್ಪಟ್ಟಿರುವಲ್ಲಿ ಆಗೇನು? ಯಾರು ನಿರ್ದಯವಾಗಿ ವರ್ತಿಸುತ್ತಾರೋ ಅವರ ಕಡೆಗೆ ಹಗೆತನವನ್ನು ಬೆಳೆಸಿಕೊಳ್ಳುವುದು ಸಹಜವಲ್ಲವೋ? ಜರ್ಮನಿಯ ಒಬ್ಬ ಸಾಕ್ಷಿಯಾಗಿರುವ ಮಾನ್‌ಫ್ರೇಟ್‌ನ ಉದಾಹರಣೆಯನ್ನು ತೆಗೆದುಕೊಳ್ಳಿ. ಇವನು ಯೆಹೋವನ ಸಾಕ್ಷಿಯಾಗಿದ್ದ ಏಕಮಾತ್ರ ಕಾರಣಕ್ಕಾಗಿ, ತನ್ನ ಜೀವಿತದ ಆರು ವರ್ಷಗಳನ್ನು ಒಂದು ಕಮ್ಯೂನಿಸ್ಟ್‌ ಸೆರೆಮನೆಯಲ್ಲಿ ಕಳೆದನು. ಅವನು ಎಂದಾದರೂ ತನ್ನ ಮೇಲೆ ದಬ್ಬಾಳಿಕೆ ನಡೆಸಿದವರ ಕಡೆಗೆ ದ್ವೇಷವನ್ನು ಬೆಳೆಸಿಕೊಂಡನೋ ಅಥವಾ ಅವರಿಗೆ ಮುಯ್ಯಿತೀರಿಸುವ ಬಯಕೆ ಅವನಲ್ಲಿ ಉಂಟಾಯಿತೋ? “ಖಂಡಿತವಾಗಿಯೂ ಇಲ್ಲ” ಎಂದು ಅವನು ಉತ್ತರಿಸಿದನು. ಸಾರ್‌ಬ್ರೂಕರ್‌ ಟ್ಸೈಟುಂಗ್‌ ಎಂಬ ಜರ್ಮನ್‌ ವಾರ್ತಾಪತ್ರಿಕೆಗನುಸಾರ, ಮಾನ್‌ಫ್ರೇಟ್‌ ವಿವರಿಸಿದ್ದು: “ಅನ್ಯಾಯಮಾಡುವುದು ಅಥವಾ ಮುಯ್ಯಿತೀರಿಸುವುದು . . . ಪುನಃ ಪುನಃ ಹೊಸ ಅನ್ಯಾಯಕ್ಕೆ ನಡಿಸುವಂತಹ ಒಂದು ಚಕ್ರಗತಿಯನ್ನು ಸ್ಥಾಪಿಸುತ್ತದೆ.” ಮಾನ್‌ಫ್ರೇಟ್‌ ಈ ಮುಂದಿನ ಬೈಬಲ್‌ ಮಾತುಗಳನ್ನು ಸ್ಪಷ್ಟವಾಗಿಯೇ ಅನ್ವಯಿಸಿದನು: “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. . . . ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.”​—⁠ರೋಮಾಪುರ 12:​17, 18.

ದ್ವೇಷವೇ ಇಲ್ಲದಿರುವಂತಹ ಒಂದು ಲೋಕ!

ಈ ವಿಷಯದಲ್ಲಿ ತಾವು ಪರಿಪೂರ್ಣರು ಎಂದು ಯೆಹೋವನ ಸಾಕ್ಷಿಗಳು ಹೇಳಿಕೊಳ್ಳುವುದಿಲ್ಲ. ಅನೇಕವೇಳೆ ಹಳೆಯ ಹಗೆತನಗಳನ್ನು ಮತ್ತು ದ್ವೇಷಗಳನ್ನು ಬದಿಗೊತ್ತುವುದು ಅಷ್ಟೇನೂ ಸುಲಭವಾದದ್ದಲ್ಲ ಎಂದು ಅವರಿಗೂ ಅನಿಸುತ್ತದೆ. ಇದು ಒಬ್ಬನು ತನ್ನ ಜೀವಿತದಲ್ಲಿ ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳಲು ಸತತವಾದ ಹಾಗೂ ಶ್ರದ್ಧಾಪೂರ್ವಕವಾದ ಪ್ರಯತ್ನಗಳನ್ನು ಮಾಡುವುದನ್ನು ಅಗತ್ಯಪಡಿಸುತ್ತದೆ. ಆದರೆ, ಒಟ್ಟಿನಲ್ಲಿ ಹೇಳುವುದಾದರೆ, ಯೆಹೋವನ ಸಾಕ್ಷಿಗಳು ದ್ವೇಷದ ಚಕ್ರಗತಿಯನ್ನು ಮುರಿಯುವುದರ ಕುರಿತಾದ ಬೈಬಲಿನ ಶಕ್ತಿಯ ಜೀವಂತ ಉದಾಹರಣೆಯಾಗಿದ್ದಾರೆ. ಮನೆ ಬೈಬಲ್‌ ಅಧ್ಯಯನಗಳ ಕಾರ್ಯಕ್ರಮದ ಮೂಲಕ, ಪ್ರತಿ ವರ್ಷ ಸಾವಿರಾರು ಜನರು ಜಾತಿವಾದ ಹಾಗೂ ಅಂಧಾಭಿಮಾನದ ಸಂಕೋಲೆಗಳಿಂದ ಮುಕ್ತರಾಗುವಂತೆ ಸಾಕ್ಷಿಗಳು ಅವರಿಗೆ ಸಹಾಯಮಾಡುತ್ತಿದ್ದಾರೆ. * (“ಬೈಬಲ್‌ ಸಲಹೆಯು ದ್ವೇಷವನ್ನು ಹೋಗಲಾಡಿಸಲು ಸಹಾಯಮಾಡುತ್ತದೆ” ಎಂಬ ರೇಖಾಚೌಕವನ್ನು ನೋಡಿ.) ಈ ಯಶಸ್ಸು, ಅತಿಬೇಗನೆ ದ್ವೇಷವನ್ನು ಮತ್ತು ಅದರ ಮೂಲಕಾರಣಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಹಾಯಮಾಡಲಿರುವ ಲೋಕವ್ಯಾಪಕ ಶೈಕ್ಷಣಿಕ ಕಾರ್ಯಕ್ರಮದ ಫಲಿತಾಂಶಗಳ ಒಂದು ಮುನ್ನೋಟವಾಗಿದೆ. ಈ ಭಾವಿ ಶೈಕ್ಷಣಿಕ ಕಾರ್ಯಕ್ರಮವು ದೇವರ ರಾಜ್ಯದ ಅಥವಾ ಭೌಗೋಲಿಕ ಸರಕಾರದ ಮೇಲ್ವಿಚಾರಣೆಯ ಕೆಳಗೆ ನಡೆಯಲಿರುವುದು. “ನಿನ್ನ ರಾಜ್ಯವು ಬರಲಿ” ಎಂದು ಯೇಸು ಹೇಳಿದಾಗ, ಕರ್ತನ ಪ್ರಾರ್ಥನೆಯಲ್ಲಿ ಆ ರಾಜ್ಯಕ್ಕಾಗಿ ಪ್ರಾರ್ಥಿಸುವಂತೆ ಅವನು ನಮಗೆ ಕಲಿಸಿದನು.​—⁠ಮತ್ತಾಯ 6:​9, 10.

ಈ ಸ್ವರ್ಗೀಯ ಸರಕಾರದ ಮೇಲ್ವಿಚಾರಣೆಯ ಕೆಳಗೆ “ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು” ಎಂದು ಬೈಬಲ್‌ ವಾಗ್ದಾನಿಸುತ್ತದೆ. (ಯೆಶಾಯ 11:9; 54:13) ಆಗ, ಪ್ರವಾದಿಯಾದ ಯೆಶಾಯನ ಅನೇಕಬಾರಿ ಉಲ್ಲೇಖಿಸಲ್ಪಟ್ಟಿರುವ ಮಾತುಗಳು ಭೂವ್ಯಾಪಕವಾಗಿ ನೆರವೇರಿಸಲ್ಪಡುವವು: “[ದೇವರು] ದೇಶದೇಶಗಳ ವ್ಯಾಜ್ಯಗಳನ್ನು ವಿಚಾರಿಸುವನು, ಬಹು ರಾಷ್ಟ್ರದವರಿಗೆ ನ್ಯಾಯತೀರಿಸುವನು; ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.” (ಯೆಶಾಯ 2:⁠4) ಹೀಗೆ, ದ್ವೇಷದ ವಿಷಮ ಚಕ್ರಗತಿಯನ್ನು ಸ್ವತಃ ದೇವರೇ ಸಂಪೂರ್ಣವಾಗಿ ಮತ್ತು ಸದಾಕಾಲಕ್ಕೂ ನಿಲ್ಲಿಸಿಬಿಡುವನು.(g01 8/8)

[ಪಾದಟಿಪ್ಪಣಿಗಳು]

^ ಇದು ಅವನ ನಿಜವಾದ ಹೆಸರಲ್ಲ.

^ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ “ದೇವರು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ?” ಎಂಬ 8ನೆಯ ಅಧ್ಯಾಯವನ್ನು ನೋಡಿ.

^ ಸ್ಥಳಿಕವಾಗಿ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸುವ ಮೂಲಕ ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಪತ್ರವನ್ನು ಬರೆಯುವ ಮೂಲಕ, ನಿಮ್ಮ ಮನೆಯಲ್ಲೇ ಉಚಿತವಾಗಿ ಬೈಬಲನ್ನು ಅಧ್ಯಯನಮಾಡುವುದಕ್ಕಾಗಿ ಏರ್ಪಾಡನ್ನು ಮಾಡಸಾಧ್ಯವಿದೆ.

[ಪುಟ 11ರಲ್ಲಿರುವ ಚೌಕ]

ಬೈಬಲ್‌ ಸಲಹೆಯು ದ್ವೇಷವನ್ನು ಹೋಗಲಾಡಿಸಲು ಸಹಾಯಮಾಡುತ್ತದೆ

“ನಿಮ್ಮಲ್ಲಿ ಯುದ್ಧಗಳೂ ಕಾದಾಟಗಳೂ ಎಲ್ಲಿಂದ ಹುಟ್ಟುತ್ತವೆ? ನಿಮ್ಮ ಇಂದ್ರಿಯಗಳಲ್ಲಿ ಹೋರಾಡುವ ಭೋಗಾಶೆಗಳಿಂದಲೇ ಅಲ್ಲವೇ”? (ಯಾಕೋಬ 4:⁠1) ಒಂದುವೇಳೆ ನಾವು ಸ್ವಾರ್ಥಾಭಿಲಾಷೆಗಳನ್ನು ನಿಯಂತ್ರಿಸಲು ಕಲಿಯುವಲ್ಲಿ, ಅನೇಕವೇಳೆ ಇತರರೊಂದಿಗಿನ ಕಾದಾಟಗಳನ್ನು ದೂರಮಾಡಸಾಧ್ಯವಿದೆ.

“ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.” (ಫಿಲಿಪ್ಪಿ 2:⁠4) ನಮ್ಮ ಸ್ವಂತ ಅಭಿರುಚಿಗಳಿಗಿಂತಲೂ ಹೆಚ್ಚಾಗಿ ಇತರರ ಅಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡುವ ಮೂಲಕ ಸಹ ಅನಗತ್ಯವಾದ ಕಾದಾಟಗಳನ್ನು ದೂರಮಾಡಸಾಧ್ಯವಿದೆ.

“ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು. ಉರಿಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು.” (ಕೀರ್ತನೆ 37:⁠8) ನಾವು ವಿನಾಶಕರ ಪ್ರವೃತ್ತಿಗಳನ್ನು ನಿಯಂತ್ರಿಸಸಾಧ್ಯವಿದೆ ಮತ್ತು ನಿಯಂತ್ರಿಸಲೇಬೇಕು.

‘ದೇವರು . . . ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ, ಭೂಮಂಡಲದಲ್ಲೆಲ್ಲಾ ವಾಸಿಸುವಂತೆ ಮಾಡಿದ್ದಾನೆ.’ (ಅ. ಕೃತ್ಯಗಳು 17:​24, 26) ನಾವೆಲ್ಲರೂ ಒಂದೇ ಮಾನವ ಕುಟುಂಬದ ಸದಸ್ಯರಾಗಿರುವುದರಿಂದ, ಇನ್ನೊಂದು ಜಾತಿಯ ಜನರಿಗಿಂತಲೂ ತಾವು ಶ್ರೇಷ್ಠರು ಎಂದು ಭಾವಿಸುವುದು ತರ್ಕಹೀನವಾದ ಸಂಗತಿಯಾಗಿದೆ.

“ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.” (ಫಿಲಿಪ್ಪಿ 2:3) ನಮ್ಮಲ್ಲಿರದಂತಹ ಅಪೇಕ್ಷಿತ ಗುಣಗಳು ಮತ್ತು ಸಾಮರ್ಥ್ಯಗಳು ಇತರರಲ್ಲಿರುವಾಗ, ಅವರಿಗೆ ಅಗೌರವ ತೋರಿಸುವುದು ಕೆಟ್ಟ ಮನೋಭಾವವಾಗಿದೆ. ಯಾವುದೇ ಒಂದು ಜಾತಿ ಅಥವಾ ಸಂಸ್ಕೃತಿಗೆ ಎಲ್ಲಾ ಒಳ್ಳೇ ವಿಷಯಗಳ ಮೇಲೆ ಪೂರ್ಣಾಧಿಕಾರವಿದೆ ಎಂದು ಹೇಳಸಾಧ್ಯವಿಲ್ಲ.

“ಆದದರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ.” (ಗಲಾತ್ಯ 6:10) ಬೇರೆಯವರ ಜಾತಿ ಅಥವಾ ಸಂಸ್ಕೃತಿಯು ಯಾವುದೇ ಆಗಿರಲಿ, ಅವರೊಂದಿಗೆ ಸ್ನೇಹದಿಂದಿರಲು ಮತ್ತು ಅವರಿಗೆ ಸಹಾಯಮಾಡಲು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವುದು, ಸಂವಾದದ ಅಂತರವನ್ನು ಮುಚ್ಚಲು ಹಾಗೂ ತಪ್ಪಭಿಪ್ರಾಯಗಳನ್ನು ಇಲ್ಲವಾಗಿಸಲು ಮಹತ್ತರವಾದ ರೀತಿಯಲ್ಲಿ ಸಹಾಯಮಾಡಬಲ್ಲದು.

[ಪುಟ 8, 9ರಲ್ಲಿರುವ ಚಿತ್ರಗಳು]

ಇಥಿಯೋಪಿಯದ ಸಾಕ್ಷಿಗಳು ಹಾಗೂ ಎರಿಟ್ರಿಯದ ಸಾಕ್ಷಿಗಳು ಶಾಂತಿಯಿಂದ ಒಟ್ಟಿಗೆ ಆರಾಧಿಸುತ್ತಾರೆ

[ಪುಟ 10ರಲ್ಲಿರುವ ಚಿತ್ರ]

ಕಮ್ಯೂನಿಸ್ಟ್‌ ಸೆರೆಮನೆಯಿಂದ ಪಾರಾಗಿ ಬಂದ ಮಾನ್‌ಫ್ರೇಟ್‌ ದ್ವೇಷಕ್ಕೆ ಮಣಿಯಲು ನಿರಾಕರಿಸಿದನು

[ಪುಟ 10ರಲ್ಲಿರುವ ಚಿತ್ರ]

ಜನರನ್ನು ಬೇರ್ಪಡಿಸುವಂತಹ ತಡೆಗಳನ್ನು ಕಿತ್ತುಹಾಕಲು ಬೈಬಲು ಸಹಾಯಮಾಡಬಲ್ಲದು