ದ್ವೇಷದ ಮೂಲಗಳು
ದ್ವೇಷದ ಮೂಲಗಳು
ದ್ವೇಷವು ಮಾನವ ಇತಿಹಾಸದ ಆರಂಭದಲ್ಲಿಯೇ ಗೋಚರವಾಯಿತು. ಆದಿಕಾಂಡ 4:8ರಲ್ಲಿರುವ ಬೈಬಲ್ ವೃತ್ತಾಂತವು ಹೇಳುವುದು: “ಅಡವಿಗೆ ಬಂದಾಗ ಕಾಯಿನನು ತನ್ನ ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು.” “ಯಾವ ಕಾರಣದಿಂದ ಅವನನ್ನು ಕೊಂದುಹಾಕಿದನು?” ಎಂದು ಬೈಬಲ್ ಬರಹಗಾರನಾದ ಯೋಹಾನನು ಕೇಳುತ್ತಾನೆ. “ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ನೀತಿಗೆ ಸರಿಯಾದವುಗಳೂ ಆಗಿದ್ದದರಿಂದಲೇ.” (1 ಯೋಹಾನ 3:12) ದ್ವೇಷದ ಅತಿ ಸಾಮಾನ್ಯ ಕಾರಣಗಳಲ್ಲಿ ಒಂದಾದ ಮತ್ಸರಕ್ಕೆ ಹೇಬೆಲನು ಬಲಿಪಶುವಾದನು. “ಮತ್ಸರವು ಪತಿಗೆ ಕ್ರೋಧವನ್ನು ಉಂಟುಮಾಡುತ್ತದೆ” ಎಂದು ಜ್ಞಾನೋಕ್ತಿ 6:34 ಹೇಳುತ್ತದೆ. ಇಂದು ಸಾಮಾಜಿಕ ಅಂತಸ್ತು, ಐಶ್ವರ್ಯ, ಸಂಪನ್ಮೂಲಗಳು ಮತ್ತು ಇತರ ಲಾಭಗಳ ವಿಷಯದಲ್ಲಿ ಉಂಟಾಗುವ ಮತ್ಸರವು, ಜನರು ಪರಸ್ಪರ ವಿರೋಧಿಸುತ್ತಾ ಮುಂದುವರಿಯುವಂತೆ ಮಾಡುತ್ತದೆ.
ಅಜ್ಞಾನ ಮತ್ತು ಭಯ
ಆದರೆ ಮತ್ಸರವು ದ್ವೇಷದ ಅನೇಕ ಕಾರಣಗಳಲ್ಲಿ ಕೇವಲ ಒಂದು ಕಾರಣವಾಗಿದೆ. ಕೆಲವೊಮ್ಮೆ, ಅಜ್ಞಾನ ಮತ್ತು ಭಯವು ಸಹ ದ್ವೇಷವನ್ನು ಉಂಟುಮಾಡುತ್ತದೆ. “ನಾನು ದ್ವೇಷಿಸಲು ಕಲಿಯುವುದಕ್ಕೆ ಮೊದಲೇ ಭಯಪಡಲು ಕಲಿತೆ” ಎಂದು ಹಿಂಸಾತ್ಮಕ ಜಾತಿವಾದಿ ಗುಂಪಿನ ಸದಸ್ಯನೊಬ್ಬನು ಹೇಳಿದನು. ಅನೇಕವೇಳೆ ಇಂತಹ ಭಯವು ಅಜ್ಞಾನದಲ್ಲಿ ಬೇರೂರಿರುತ್ತದೆ. ದ ವರ್ಲ್ಡ್ ಬುಕ್ ಎನ್‌ಸೈಕ್ಲೊಪೀಡಿಯಕ್ಕನುಸಾರ, ಪೂರ್ವಕಲ್ಪಿತ ಅಭಿಪ್ರಾಯವುಳ್ಳ ಜನರ ಅಭಿಪ್ರಾಯಗಳು “ಲಭ್ಯವಿರುವ ಮಾಹಿತಿಗೆ ಪರಿಗಣನೆ ತೋರಿಸುವಂಥವುಗಳಾಗಿರುವುದಿಲ್ಲ. . . . ಪೂರ್ವಕಲ್ಪಿತ ಅಭಿಪ್ರಾಯವುಳ್ಳ ಜನರು, ತಮ್ಮ ಪೂರ್ವನಿರ್ಧಾರಿತ ಅಭಿಪ್ರಾಯಗಳಿಗೆ ವಿರುದ್ಧವಾಗಿರುವ ವಾಸ್ತವಾಂಶಗಳನ್ನು ತಿರುಚುವ, ಅಪಾರ್ಥಮಾಡುವ, ತಪ್ಪಾಗಿ ನಿರೂಪಿಸುವ ಅಥವಾ ತಳ್ಳಿಹಾಕುವ ಪ್ರವೃತ್ತಿಯುಳ್ಳವರಾಗಿರುತ್ತಾರೆ.”
ಈ ಅಭಿಪ್ರಾಯಗಳು ಎಲ್ಲಿಂದ ಬರುತ್ತವೆ? ಮಾಹಿತಿಯ ಒಂದು ಮೂಲವು ಹೀಗೆ ಹೇಳುತ್ತದೆ: “ಅನೇಕ ಸಾಂಸ್ಕೃತಿಕ ವಿಚಾರಗಳಿಗೆ ಇತಿಹಾಸವು ಕಾರಣವಾಗಿದೆ, ಆದರೆ ನಮ್ಮ ಅನೇಕ ಪ್ರವೃತ್ತಿಗಳಿಗೆ ನಮ್ಮ ವೈಯಕ್ತಿಕ ಹಿನ್ನೆಲೆಯೇ ಕಾರಣವಾಗಿದೆ.”
ಉದಾಹರಣೆಗೆ, ಅಮೆರಿಕದಲ್ಲಿ ಗುಲಾಮ ವ್ಯಾಪಾರವು ಅನೇಕ ಬಿಳಿಯರು ಮತ್ತು ಆಫ್ರಿಕನ್ ವಂಶದ ಜನರ ಮಧ್ಯೆ ಪರಂಪರಾಗತವಾದ ಬಿಕ್ಕಟ್ಟುಗಳನ್ನು ಬಿಟ್ಟುಹೋಗಿದೆ. ಈ ಬಿಕ್ಕಟ್ಟುಗಳು ಇಂದಿಗೂ ಮುಂದುವರಿಯುತ್ತಿವೆ. ಅನೇಕವೇಳೆ, ಒಂದು ನಿರ್ದಿಷ್ಟ ಜಾತಿಯ ಜನರ ಕುರಿತಾದ ವಿರೋಧಾತ್ಮಕ ಅಭಿಪ್ರಾಯಗಳು ಹೆತ್ತವರಿಂದ ಮಕ್ಕಳಿಗೆ ದಾಟಿಸಲ್ಪಡುತ್ತವೆ. “ಕರಿಯ ಜನರೊಂದಿಗೆ ಎಂದೂ ಯಾವುದೇ ರೀತಿಯ ಸಂಪರ್ಕವನ್ನು ಬೆಳೆಸದಿದ್ದರೂ” ತಾನು ಅವರ ಕುರಿತು ನಕಾರಾತ್ಮಕವಾದ ಅಭಿಪ್ರಾಯಗಳನ್ನು ಬೆಳೆಸಿಕೊಂಡೆ ಎಂದು ಒಬ್ಬ ಬಿಳಿಯ ಜಾತಿವಾದಿಯು ತಾನಾಗಿಯೇ ಒಪ್ಪಿಕೊಂಡನು.
ಇದಲ್ಲದೆ, ತಮಗಿಂತ ಭಿನ್ನರಾಗಿರುವ ಇತರ ಜನರು ಪ್ರಯೋಜನವಿಲ್ಲದವರೆಂದು ನಂಬುವವರೂ ಇದ್ದಾರೆ. ಬೇರೊಂದು ಜಾತಿಯ ಅಥವಾ ಸಂಸ್ಕೃತಿಯ ಯಾರೊಂದಿಗಾದರೂ ಆಗಿರುವ ಅಹಿತಕರ ಅನುಭವದ ಮೇಲೆ ಈ ಅಭಿಪ್ರಾಯವು ಆಧಾರಿತವಾಗಿರಬಹುದು. ಈ ಅನುಭವದಿಂದಾಗಿ ಅವರು, ಆ ಜಾತಿಗೆ ಅಥವಾ ಸಂಸ್ಕೃತಿಗೆ ಸೇರಿದ ಪ್ರತಿಯೊಬ್ಬನಲ್ಲಿಯೂ ಅನಪೇಕ್ಷಿತ ಪ್ರವೃತ್ತಿಗಳಿವೆ ಎಂಬ ತೀರ್ಮಾನಕ್ಕೆ ಬರುತ್ತಾರೆ.
ವೈಯಕ್ತಿಕ ಮಟ್ಟದಲ್ಲಿ ನೋಡುವಾಗಲೇ ಈ ಅಂಧಾಭಿಮಾನವು ಸಾಕಷ್ಟು ಆಕ್ಷೇಪಣೀಯವಾಗಿ ಕಂಡುಬರುವಾಗ, ಇಡೀ ಜನಾಂಗ ಅಥವಾ ಜಾತಿಯ ಮೇಲೆ ಇದು ಬೀರುವ ಪರಿಣಾಮವು ನಿಜಕ್ಕೂ ವಿನಾಶಕರವಾಗಿರಸಾಧ್ಯವಿದೆ. ಒಬ್ಬನ ರಾಷ್ಟ್ರೀಯತೆ, ಬಣ್ಣ, ಸಂಸ್ಕೃತಿ ಅಥವಾ ಭಾಷೆಯು ಒಬ್ಬನನ್ನು ಇತರರಿಗಿಂತ ಉತ್ಕೃಷ್ಟನನ್ನಾಗಿ ಮಾಡುತ್ತದೆ ಎಂಬ ನಂಬಿಕೆಯು, ಅಂಧಾಭಿಮಾನವನ್ನೂ ವಿದೇಶೀಯರ ಭಯವನ್ನೂ (ವಿದೇಶೀಯವಾಗಿರುವ ಯಾವುದನ್ನೂ ಅಥವಾ ಯಾವನನ್ನೂ ತಿರಸ್ಕರಿಸುವುದು) ಉಂಟುಮಾಡಬಲ್ಲದು. 20ನೆಯ ಶತಮಾನದಲ್ಲಿ, ಇಂತಹ ಅಂಧಾಭಿಮಾನವು ಅನೇಕವೇಳೆ ತುಂಬ ಹಿಂಸಾತ್ಮಕ ರೀತಿಯಲ್ಲಿ ವ್ಯಕ್ತಪಡಿಸಲ್ಪಟ್ಟಿತು.
ಆಸಕ್ತಿಕರವಾಗಿಯೇ, ದ್ವೇಷ ಮತ್ತು ಅಂಧಾಭಿಮಾನಗಳು ಕೇವಲ ಚರ್ಮದ ಬಣ್ಣ ಅಥವಾ ರಾಷ್ಟ್ರೀಯತೆಯ ಕುರಿತಾಗಿಯೇ ಇರಬೇಕೆಂದೇನಿಲ್ಲ. ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ಸಂಶೋಧಕರಾದ ಕ್ಲಾರ್ಕ್ ಮಕಾಲೀಯವರು ಬರೆಯುವುದೇನೆಂದರೆ, “ಕೇವಲ ಒಂದು ನಾಣ್ಯವನ್ನು ಮೇಲಕ್ಕೆ ಚಿಮ್ಮಿಸುವ ಮೂಲಕ ಜನರನ್ನು ಎರಡು ಗುಂಪುಗಳಾಗಿ ವಿಭಾಗಿಸಿದರೆ ಸಾಕು, ಅವರಲ್ಲಿ ತಮ್ಮ ಗುಂಪಿನ ಕುರಿತಾದ ಅಭಿಮಾನವು ತಾನಾಗಿಯೇ ಮೂಡುತ್ತದೆ.” ಮೂರನೇ ತರಗತಿಯ ಒಬ್ಬ ಶಿಕ್ಷಕಿಯು, ಪ್ರಸಿದ್ಧ ಪ್ರಯೋಗದ ಒಂದು ಭಾಗದೋಪಾದಿ ಇದನ್ನು ರುಜುಪಡಿಸಿದಳು. ಅವಳು ತನ್ನ ತರಗತಿಯನ್ನು ನೀಲಿ ಕಣ್ಣುಗಳುಳ್ಳ ಮಕ್ಕಳ ಮತ್ತು ಕಂದು ಕಣ್ಣುಗಳುಳ್ಳ ಮಕ್ಕಳ ಎರಡು ಗುಂಪುಗಳಾಗಿ ವಿಭಾಗಿಸಿದಳು. ಅಲ್ಪಾವಧಿಯಲ್ಲೇ, ಈ ಎರಡು ಗುಂಪುಗಳ ನಡುವೆ ಹಗೆತನವು ಬೆಳೆಯಿತು. ಜನರ ನಡುವೆ ಒಂದೇ ಕ್ರೀಡಾ ತಂಡವನ್ನು ಇಷ್ಟಪಡುವಂತಹ
ಕ್ಷುಲ್ಲಕ ವಿಷಯದ ಕುರಿತಾಗಿ ಒಪ್ಪಂದವನ್ನು ಮಾಡುವುದು ಸಹ, ಹಿಂಸಾತ್ಮಕ ಘರ್ಷಣೆಗಳನ್ನು ಉಂಟುಮಾಡಸಾಧ್ಯವಿದೆ.ಇಷ್ಟೊಂದು ಹಿಂಸಾಚಾರ ಏಕಿದೆ?
ಆದರೆ ಇಂತಹ ಹಗೆತನಗಳು ಅನೇಕವೇಳೆ ಹಿಂಸಾತ್ಮಕ ವಿಧಗಳಲ್ಲಿ ಏಕೆ ವ್ಯಕ್ತಪಡಿಸಲ್ಪಡುತ್ತವೆ? ಸಂಶೋಧಕರು ಇಂತಹ ವಿವಾದಾಂಶಗಳನ್ನು ಆಳವಾಗಿ ಪರೀಕ್ಷಿಸಿದ್ದಾರಾದರೂ, ಇಷ್ಟರ ತನಕ ಕೇವಲ ಸಿದ್ಧಾಂತಗಳನ್ನು ಮಾತ್ರ ನೀಡಶಕ್ತರಾಗಿದ್ದಾರೆ. ಕ್ಲಾರ್ಕ್ ಮಕಾಲೀಯವರು, ಮಾನವ ಹಿಂಸಾಚಾರ ಮತ್ತು ಆಕ್ರಮಣಶೀಲತೆಯ ಬಗ್ಗೆ ನಡೆಸಲ್ಪಟ್ಟ ಸಂಶೋಧನೆಯ ವಿಸ್ತಾರವಾದ ಗ್ರಂಥಸೂಚಿಯನ್ನು ಸಂಗ್ರಹಿಸಿದರು. “ಯುದ್ಧ ಹೂಡುವುದು ಮತ್ತು ಅವುಗಳಲ್ಲಿ ಜಯಪಡೆದುಕೊಳ್ಳುವುದರೊಂದಿಗೆ ಹಿಂಸಾತ್ಮಕ ದುಷ್ಕೃತ್ಯವು ಸಂಬಂಧಿಸಿದೆ” ಎಂದು ಒಂದು ಅಧ್ಯಯನವು ಸೂಚಿಸುವುದನ್ನು ಅವರು ಎತ್ತಿತೋರಿಸುತ್ತಾರೆ. “Iನೆಯ ಲೋಕ ಯುದ್ಧ ಮತ್ತು IIನೆಯ ಲೋಕ ಯುದ್ಧದಲ್ಲಿ ಒಳಗೂಡಿದ ರಾಷ್ಟ್ರಗಳು, ಅದರಲ್ಲೂ ವಿಶೇಷವಾಗಿ ಈ ಯುದ್ಧಗಳಲ್ಲಿ ಗೆಲ್ಲುವ ಪಕ್ಷದಲ್ಲಿದ್ದ ರಾಷ್ಟ್ರಗಳು, ಯುದ್ಧವು ಮುಗಿದ ಬಳಿಕದ ನರಹತ್ಯೆಯಲ್ಲಿ ಹೆಚ್ಚಳವನ್ನು ತೋರಿಸುತ್ತವೆ” ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಬೈಬಲಿಗನುಸಾರ, ನಾವು ಯುದ್ಧಗಳು ನಡೆಯುವಂತಹ ಒಂದು ಯುಗದಲ್ಲಿ ಜೀವಿಸುತ್ತಿದ್ದೇವೆ. (ಮತ್ತಾಯ 24:6) ಇನ್ನಿತರ ರೀತಿಯ ಹಿಂಸಾಚಾರಗಳು ಅಧಿಕಗೊಳ್ಳಲು ಇಂತಹ ಯುದ್ಧಗಳೇ ಕಾರಣವಾಗಿವೆಯೆಂದು ಹೇಳಸಾಧ್ಯವಿದೆಯೋ?
ಇನ್ನಿತರ ಸಂಶೋಧಕರು, ಮಾನವ ಆಕ್ರಮಣ ಪ್ರವೃತ್ತಿಯ ಕುರಿತಾಗಿ ಜೀವಶಾಸ್ತ್ರೀಯ ವಿವರಣೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಒಂದು ಸಂಶೋಧನಾ ಅಧ್ಯಯನವು, ಕೆಲವೊಂದು ರೀತಿಯ ಆಕ್ರಮಣ ಪ್ರವೃತ್ತಿಗಳನ್ನು “ಮಿದುಳಿನಲ್ಲಿರುವ ಸಿರಟೋನಿನ್‌ನ ಕಡಿಮೆ ಮಟ್ಟಗಳೊಂದಿಗೆ” ಸಂಬಂಧಿಸಲು ಪ್ರಯತ್ನಿಸಿತು. ಆಕ್ರಮಣ ಪ್ರವೃತ್ತಿಯು ನಮ್ಮ ವಂಶವಾಹಿಗಳ ಮೂಲಕ ರವಾನಿಸಲ್ಪಡುತ್ತದೆ ಎಂಬುದು ಜನಪ್ರಿಯವಾದ ಇನ್ನೊಂದು ಕಲ್ಪನೆಯಾಗಿದೆ. “[ದ್ವೇಷದ] ಬಹುಭಾಗವು ಆನುವಂಶಿಕವಾಗಿಯೂ ಬಂದಿರಬಹುದು” ಎಂದು ಒಬ್ಬ ರಾಜ್ಯಶಾಸ್ತ್ರಜ್ಞನು ವಾದಿಸಿದನು.
ಅಪರಿಪೂರ್ಣ ಮಾನವರು ಜನಿಸುವಾಗಲೇ ಕೆಟ್ಟ ಪ್ರವೃತ್ತಿಗಳನ್ನು ಹಾಗೂ ಕುಂದುಕೊರತೆಗಳನ್ನು ಪಡೆದುಕೊಂಡಿದ್ದಾರೆ ಎಂದು ಬೈಬಲು ತಾನೇ ಹೇಳುತ್ತದೆ. (ಆದಿಕಾಂಡ 6:5; ಧರ್ಮೋಪದೇಶಕಾಂಡ 32:5) ಆ ಮಾತುಗಳು ಎಲ್ಲಾ ಮಾನವರಿಗೂ ಅನ್ವಯವಾಗುತ್ತವೆ ಎಂಬುದಂತೂ ಖಂಡಿತ. ಆದರೆ ಎಲ್ಲಾ ಮಾನವರು ಇತರರ ಕಡೆಗೆ ಅಸಂಬದ್ಧವಾದ ದ್ವೇಷವನ್ನು ಹೊಂದಿದ್ದಾರೆ ಎಂಬುದು ಇದರರ್ಥವಲ್ಲ. ಇದು ಕಲಿಯಲ್ಪಡುವಂತಹ ಒಂದು ಪ್ರವೃತ್ತಿಯಾಗಿದೆ. ಹೀಗೆ, ಸುಪ್ರಸಿದ್ಧ ಮನಶ್ಶಾಸ್ತ್ರಜ್ಞರಾದ ಗೋರ್ಡನ್ ಡಬ್ಲ್ಯೂ. ಆಲ್ಪಾರ್ಟ್ ಅವರು ಗಮನಿಸಿದ್ದೇನೆಂದರೆ, ಶಿಶುಗಳು “ವಿನಾಶಕರ ಪ್ರವೃತ್ತಿಗಳ ಪುರಾವೆಯನ್ನು . . . ಸ್ವಲ್ಪವೂ ನೀಡುವುದಿಲ್ಲ. . . . ಬಹುಮಟ್ಟಿಗೆ ಪ್ರತಿಯೊಂದು ರೀತಿಯ ಪ್ರಚೋದನೆಯನ್ನೂ, ಪ್ರತಿಯೊಂದು ರೀತಿಯ ವ್ಯಕ್ತಿಯನ್ನೂ ಸಮೀಪಿಸುತ್ತಾ, ಮಗುವು ಯಾವಾಗಲೂ ಆಶಾವಾದವುಳ್ಳದ್ದಾಗಿರುತ್ತದೆ.” ಇಂತಹ ವೀಕ್ಷಣೆಗಳು, ಆಕ್ರಮಣ ಪ್ರವೃತ್ತಿ, ಪೂರ್ವಕಲ್ಪಿತ ಅಭಿಪ್ರಾಯ ಮತ್ತು ದ್ವೇಷಗಳು, ಮೂಲತಃ ಕಲಿತ ವರ್ತನೆಗಳಾಗಿವೆ ಎಂಬ ಅಭಿಪ್ರಾಯವನ್ನು ಬೆಂಬಲಿಸುತ್ತವೆ! ದ್ವೇಷಿಸಲು ಕಲಿಯುವಂತಹ ಮಾನವರ ಈ ಸುವ್ಯಕ್ತ ಸಾಮರ್ಥ್ಯವನ್ನು, ದ್ವೇಷಿಸಲು ಕಲಿಸುವವರು ಆಕ್ರಮಣಶೀಲ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ.
ಮನಸ್ಸುಗಳನ್ನು ಭ್ರಷ್ಟಗೊಳಿಸುವುದು
ನಿಯೊ ನಾಸಿ ಸ್ಕಿನ್‌ಹೆಡ್ಸ್ ಮತ್ತು ಕು ಕ್ಲಕ್ಸ್ ಕ್ಲಾನ್‌ರಂತಹ, ವಿವಿಧ ದ್ವೇಷ ಗುಂಪುಗಳ ಮುಖಂಡರು ಇದರ ಆಗ್ರಸ್ಥಾನದಲ್ಲಿದ್ದಾರೆ. ಅನೇಕವೇಳೆ ಈ ಗುಂಪುಗಳು, ಸಮಸ್ಯೆಗಳಿರುವಂತಹ ಕುಟುಂಬಗಳಿಂದ ಬಂದಿರುವ, ಸುಲಭವಾಗಿ ಪ್ರಭಾವಕ್ಕೊಳಗಾಗಸಾಧ್ಯವಿರುವ ಯುವ ಜನರ ಮನವೊಲಿಸುವ ಮೂಲಕ ತಮ್ಮ ಕಾರ್ಯಾಚರಣೆಗಳಲ್ಲಿ ಸೇರಿಸಿಕೊಳ್ಳಲು ಪ್ರಯತ್ನಿಸುತ್ತವೆ. ಅಸುರಕ್ಷೆ ಮತ್ತು ಕೀಳು ಮನೋಭಾವದಿಂದ ಬಾಧಿಸಲ್ಪಟ್ಟಿರುವ ಯುವ ಜನರಿಗೆ, ದ್ವೇಷದ ಗುಂಪುಗಳು ತಮಗೆ ಆಪ್ತವಾದ ಸಂಬಂಧವನ್ನು ಒದಗಿಸುತ್ತವೆ ಎಂಬ ಅನಿಸಿಕೆಯುಂಟಾಗಬಹುದು.
ದ್ವೇಷವನ್ನು ಉತ್ತೇಜಿಸುವುದರಲ್ಲಿ ವರ್ಲ್ಡ್ ವೈಡ್ ವೆಬ್ ಇಂಟರ್‌ನೆಟ್ ಒಂದು ಪ್ರಬಲ ಸಾಧನವಾಗಿರುವುದರಿಂದ, ಕೆಲವರು ಇದನ್ನು ಸಹ ಉಪಯೋಗಿಸಿದ್ದಾರೆ. ಇತ್ತೀಚಿನ ಎಣಿಕೆಗನುಸಾರ, ಇಂಟರ್‌ನೆಟ್‌ನಲ್ಲಿ ಸುಮಾರು 1,000ದಷ್ಟು ದ್ವೇಷ-ಉತ್ತೇಜಕ ವೆಬ್ ಸೈಟ್‌ಗಳು ಇರಬಹುದು. ದಿ ಇಕಾನಮಿಸ್ಟ್ ಎಂಬ ಪತ್ರಿಕೆಯು, ದ್ವೇಷದ ಒಂದು ವೆಬ್ ಸೈಟ್‌ನ ಯಜಮಾನನು ಹೀಗೆ ಜಂಬಕೊಚ್ಚಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿತು: “ನಮ್ಮ ದೃಷ್ಟಿಕೋನವನ್ನು ಸಾವಿರಾರು ಜನರ ಗಮನಕ್ಕೆ ತರಲು ಈ ಇಂಟರ್‌ನೆಟ್ ನಮಗೆ ಸದವಕಾಶವನ್ನು ಒದಗಿಸಿದೆ.” ಅವನ ವೆಬ್ ಸೈಟ್‌ನಲ್ಲಿ “ಕಿಡ್ಸ್ ಪೇಜ್” ಸಹ ಒಳಗೂಡಿದೆ.
ಹದಿವಯಸ್ಕರು ಸಂಗೀತಕ್ಕಾಗಿ ಇಂಟರ್‌ನೆಟ್‌ನಲ್ಲಿ ಕಣ್ಣುಹಾಯಿಸುವಾಗ, ದ್ವೇಷವನ್ನು ಉತ್ತೇಜಿಸುವಂತಹ ಸಂಗೀತವಿರುವ ವೆಬ್
ಸೈಟ್‌ಗಳನ್ನು ಅವರು ಆಕಸ್ಮಿಕವಾಗಿ ಕಂಡುಕೊಳ್ಳಬಹುದು. ಸಾಮಾನ್ಯವಾಗಿ ಅಂತಹ ಸಂಗೀತದ ಧ್ವನಿ ಗಟ್ಟಿಯಾಗಿರುತ್ತದೆ ಮತ್ತು ಹಿಂಸಾತ್ಮಕವಾಗಿರುತ್ತದೆ. ಅದರ ಭಾವಗೀತೆಗಳು ಜಾತಿಸಂಬಂಧವಾಗಿ ಪ್ರಬಲವಾದ ಸಂದೇಶಗಳನ್ನು ವ್ಯಕ್ತಪಡಿಸುವಂತಿರುತ್ತವೆ. ಅಷ್ಟುಮಾತ್ರವಲ್ಲ, ಈ ವೆಬ್ ಸೈಟ್‌ಗಳು ದ್ವೇಷವನ್ನು ಉತ್ತೇಜಿಸುವಂತಹ ಬೇರೆ ವಾರ್ತಾಗುಂಪುಗಳು, ಚ್ಯಾಟ್ ರೂಮ್‌ಗಳು ಅಥವಾ ಇತರ ವೆಬ್ ಸೈಟ್‌ಗಳಿಗೆ ಸಂಪರ್ಕ ಸಾಧ್ಯತೆಯನ್ನು ಮಾಡಿಕೊಡುತ್ತವೆ.ದ್ವೇಷದ ಕೆಲವೊಂದು ವೆಬ್ ಸೈಟ್‌ಗಳು, ಯುವ ಜನರಿಗಾಗಿರುವ ಆಟಗಳು ಮತ್ತು ಚಟುವಟಿಕೆಗಳನ್ನು ಒಳಗೊಂಡಿರುವ ವಿಶೇಷ ವಿಭಾಗಗಳನ್ನು ಒದಗಿಸುತ್ತವೆ. ಒಂದು ನಿಯೋ-ನಾಸಿ ವೆಬ್ ಸೈಟ್, ಜಾತಿವಾದವನ್ನು ಹಾಗೂ ಯೆಹೂದ್ಯರನ್ನು ದ್ವೇಷಿಸುವುದನ್ನು ಸಮರ್ಥಿಸಲಿಕ್ಕಾಗಿ ಬೈಬಲನ್ನು ಉಪಯೋಗಿಸಲು ಪ್ರಯತ್ನಿಸುತ್ತದೆ. ಜಾತಿವಾದಿಗಳ ಹೇಳಿಕೆಗಳುಳ್ಳ ಪದಬಂಧಗಳನ್ನು ಒದಗಿಸುವಂತಹ ವೆಬ್ ಪೇಜನ್ನು ಸಹ ಈ ಗುಂಪು ರಚಿಸಿದೆ. ಅದರ ಉದ್ದೇಶವೇನು? “ಬಿಳಿಯ ಜಾತಿಯ ಯುವ ಸದಸ್ಯರು, ನಮ್ಮ ನಿಯೋ-ನಾಸಿ ಗುಂಪಿನ ಹೋರಾಟದ ಗುರಿಯನ್ನು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿಯೇ.”
ಆದರೆ ದ್ವೇಷದ ಉತ್ತೇಜಕರೆಲ್ಲರೂ ಅತಿರೇಕವಾದಿಗಳ ಗುಂಪಿನಿಂದ ಬಂದವರಾಗಿರುವುದಿಲ್ಲ. ಬಾಲ್ಕನ್‌ನಲ್ಲಿ ಇತ್ತೀಚೆಗೆ ನಡೆದ ಹೋರಾಟಗಳ ಕುರಿತು ಬರೆದ ಒಬ್ಬ ಸಮಾಜವಿಜ್ಞಾನಿಯು, ಕೆಲವೊಂದು ಹೆಸರುವಾಸಿ ಲೇಖಕರು ಹಾಗೂ ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳ ಬಗ್ಗೆ ಹೇಳಿದ್ದು: “[ಅವರು] ಯಾವುದೇ ವರ್ತನೆಯು ನೈತಿಕವಾಗಿ ನಿಷೇಧಾತ್ಮಕವಾಗಿರುವುದಿಲ್ಲ ಎಂದು ಪರಿಗಣಿಸುವಂತೆ ತಮ್ಮ ದೇಶಬಾಂಧವರನ್ನು ಉತ್ತೇಜಿಸುವ ಮೂಲಕ . . . , ಮತ್ತು ವಾಸ್ತವಿಕತೆಯನ್ನು ತಪ್ಪಾಗಿ ಪ್ರತಿನಿಧಿಸುವ ಮೂಲಕ, ತಮ್ಮ ದೇಶಬಾಂಧವರ ತುಚ್ಛ ಪ್ರವೃತ್ತಿಗಳನ್ನು ತೃಪ್ತಿಪಡಿಸುವ, ಅವರ ಭಾವೋದ್ರಿಕ್ತ ದ್ವೇಷವನ್ನು ಅಧಿಕಗೊಳಿಸುವ, ಅವರ ತೀರ್ಮಾನವನ್ನು ಜಡಗೊಳಿಸುವಂತಹ ರೀತಿಯ ಬರವಣಿಗೆ ಶೈಲಿಗೆ ಹೊಂದಿಕೊಳ್ಳುತ್ತಿರುವುದನ್ನು ನೋಡಿ ನಾನು ತಬ್ಬಿಬ್ಬಾದೆ.”
ಈ ವಿಷಯದಲ್ಲಿ ಪಾದ್ರಿ ವರ್ಗದವರ ಪಾತ್ರವನ್ನು ಒಬ್ಬನು ಕಡೆಗಣಿಸಬಾರದಾಗಿದೆ. ಪವಿತ್ರ ದ್ವೇಷ: 90ಗಳ ಧಾರ್ಮಿಕ ಹೋರಾಟಗಳು (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ, ಅದರ ಲೇಖಕನಾದ ಜೇಮ್ಸ್ ಎ. ಹಾಟ್ ಈ ಆಘಾತಕರವಾದ ಹೇಳಿಕೆಯನ್ನು ನೀಡುತ್ತಾನೆ: “1990ಗಳ ದೊಡ್ಡ ಅಸಂಬದ್ಧತೆ ಏನೆಂದರೆ, ದಯಾಭಾವ ಹಾಗೂ ಮಾನವ ಹಿತಾಸಕ್ತಿಯ ಮೂಲವಾಗಿರಬೇಕಾಗಿದ್ದ ಧರ್ಮವು, ದ್ವೇಷ, ಯುದ್ಧ ಮತ್ತು ಭಯೋತ್ಪಾದನೆಯನ್ನು ಪ್ರಚೋದಿಸುವ ಅಗ್ರಗಣ್ಯ ಮೂಲವಾಗಿದೆ.”
ಹೀಗೆ, ದ್ವೇಷದ ಕಾರಣಗಳು ಅನೇಕವಾಗಿವೆ ಮತ್ತು ಜಟಿಲವಾಗಿವೆ ಎಂಬುದನ್ನು ಒಬ್ಬನು ತಿಳಿದುಕೊಳ್ಳಸಾಧ್ಯವಿದೆ. ಮಾನವಕುಲವು ದ್ವೇಷದಿಂದ ತುಂಬಿರುವ ಇತಿಹಾಸದ ಮೂರ್ಖ ಕೃತ್ಯಗಳನ್ನು ಪುನರಾವರ್ತಿಸುವುದನ್ನು ನಿಲ್ಲಿಸಲು ಅದಕ್ಕೆ ಯಾವುದೇ ಮಾರ್ಗವಿಲ್ಲ ಎಂಬುದು ಇದರ ಅರ್ಥವೋ? ಅಪಾರ್ಥ, ಅಜ್ಞಾನ, ಮತ್ತು ದ್ವೇಷವನ್ನು ಉಂಟುಮಾಡುವಂತಹ ಭಯವನ್ನು ಜಯಿಸಲು ವೈಯಕ್ತಿಕ ಮಟ್ಟದಲ್ಲಿ ಹಾಗೂ ಭೂವ್ಯಾಪಕ ಮಟ್ಟದಲ್ಲಿ ಏನನ್ನಾದರೂ ಮಾಡಸಾಧ್ಯವಿದೆಯೋ?(g01 8/8)
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
ಪೂರ್ವಕಲ್ಪಿತ ಅಭಿಪ್ರಾಯ ಮತ್ತು ದ್ವೇಷಗಳು ಕಲಿತ ವರ್ತನೆಗಳಾಗಿವೆ!
[ಪುಟ 4, 5ರಲ್ಲಿರುವ ಚಿತ್ರ]
ನಾವು ಜನ್ಮತಃ . . .
. . . ದ್ವೇಷಿಗಳಲ್ಲ ಹಾಗೂ ಅಂಧಾಭಿಮಾನಿಗಳಲ್ಲ
[ಪುಟ 7ರಲ್ಲಿರುವ ಚಿತ್ರ]
ದ್ವೇಷದ ಗುಂಪುಗಳು, ಯುವ ಜನರನ್ನು ತಮ್ಮ ಕಾರ್ಯಾಚರಣೆಯಲ್ಲಿ ಸೇರಿಸಿಕೊಳ್ಳಲು ಇಂಟರ್‌ನೆಟ್ ಅನ್ನು ಉಪಯೋಗಿಸುತ್ತಿವೆ
[ಪುಟ 7ರಲ್ಲಿರುವ ಚಿತ್ರ]
ಅನೇಕವೇಳೆ ಧರ್ಮವು ಹೋರಾಟವನ್ನು ಬೆಂಬಲಿಸಿದೆ
[ಕೃಪೆ]
AP Photo