ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದ್ವೇಷವೆಂಬ ವಿಶ್ವವ್ಯಾಪಿ ಸಾಂಕ್ರಾಮಿಕ ರೋಗ

ದ್ವೇಷವೆಂಬ ವಿಶ್ವವ್ಯಾಪಿ ಸಾಂಕ್ರಾಮಿಕ ರೋಗ

ದ್ವೇಷವೆಂಬ ವಿಶ್ವವ್ಯಾಪಿ ಸಾಂಕ್ರಾಮಿಕ ರೋಗ

ಒಂದು ಪೆಡಂಭೂತವು ಬಂಧನದಿಂದ ತಪ್ಪಿಸಿಕೊಂಡು ಸ್ವಚ್ಛಂದವಾಗಿ ಓಡಾಡುತ್ತಿದೆ. ಆ ಪೆಡಂಭೂತದ ಹೆಸರು ದ್ವೇಷ ಎಂದಾಗಿದೆ. ಮತ್ತು ಇದು ಭೂಮಿಯಾದ್ಯಂತ ವ್ಯಾಪಕವಾಗಿ ಓಡಾಡುತ್ತಿದೆ.

ಬಾಲ್ಕನ್‌ ಪ್ರದೇಶದ ಒಂದು ಪ್ರಾಂತವು, ಇತ್ತೀಚೆಗೆ ನಡೆದ ಕುಲಸಂಬಂಧಿತ ಹತ್ಯಾಕಾಂಡದ ಕಾರ್ಯಾಚರಣೆಯ ಪರಿಣಾಮವಾಗಿ ಕಷ್ಟಾನುಭವವನ್ನು ಅನುಭವಿಸುತ್ತಿದೆ. ಅಲ್ಲಿನ ಶತಮಾನಗಳಷ್ಟು ಹಳೆಯ ಹಗೆತನವು, ಸಾಮೂಹಿಕ ಹತ್ಯೆ, ಬಲಾತ್ಕಾರ ಸಂಭೋಗ, ಉಚ್ಚಾಟನೆಗಳು, ಮನೆಗಳು ಹಾಗೂ ಹಳ್ಳಿಗಳ ದಹನ ಮತ್ತು ಲೂಟಿಮಾಡುವಿಕೆ, ಬೆಳೆಗಳು ಹಾಗೂ ದನಕರುಗಳ ವಿನಾಶ, ಹಸಿವೆ ಮತ್ತು ಹೊಟ್ಟೆಗಿಲ್ಲದಿರುವಿಕೆಯಂತಹ ಸಮಸ್ಯೆಗಳಿಗೆ ನಡಿಸಿದೆ. ಹುದುಗಿಟ್ಟ ನೆಲಸಿಡಿಗುಂಡುಗಳು ದೊಡ್ಡ ಸಂಖ್ಯೆಯಲ್ಲಿ ಕಂಡುಬರುತ್ತವೆ.

ಆಗ್ನೇಯ ಏಷಿಯಾದ ಈಸ್ಟ್‌ ಟೀಮಾರ್‌ನಲ್ಲಿ, ಭೀತಿಗೊಂಡಿದ್ದ 7,00,000 ಜನರು ಕೊಲೆಗಳು, ಹೊಡೆತಗಳು, ಗೊತ್ತುಗುರಿಯಿಲ್ಲದ ಗುಂಡುಹೊಡೆತಗಳು ಮತ್ತು ಬಲಾತ್ಕಾರದಿಂದ ಸ್ಥಾನಾಂತರ ಮಾಡಲ್ಪಡುವುದರ ಭೀತಿಯಿಂದ ಪಲಾಯನಮಾಡಬೇಕಾಯಿತು. ಲೂಟಿಮಾಡುತ್ತಿದ್ದ ಅನಧಿಕೃತ ಮಿಲಿಟರಿ ಗುಂಪುಗಳಿಂದ ಧ್ವಂಸಮಾಡಲ್ಪಟ್ಟ ಭೂದೃಶ್ಯವನ್ನು ಮಾತ್ರ ಆ ಜನರು ಹಿಂದೆಬಿಟ್ಟುಹೋದರು. “ಬೇಟೆಯಾಡಲ್ಪಟ್ಟ ಪ್ರಾಣಿಯ ಅನಿಸಿಕೆ ನನಗಾಯಿತು” ಎಂದು ಈ ಹಿಂಸೆಗೆ ಬಲಿಯಾದವರಲ್ಲಿ ಒಬ್ಬನು ಪ್ರಲಾಪಿಸಿದನು.

ಮಾಸ್ಕೋದಲ್ಲಿ, ಭಯೋತ್ಪಾದಕರ ಅತಿ ದೊಡ್ಡ ಬಾಂಬ್‌ ಸ್ಫೋಟದ ಪರಿಣಾಮವಾಗಿ ಒಂದು ಅಪಾರ್ಟ್‌ಮೆಂಟ್‌ ಕಟ್ಟಡವು ಧ್ವಂಸವಾಯಿತು. ಈ ಸ್ಫೋಟನೆಯಿಂದಾಗಿ ಕೆಲವು ಮಕ್ಕಳನ್ನೂ ಸೇರಿಸಿ 94 ಮಂದಿ ಮುಗ್ಧ ಜನರ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. 150ಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡರು. ಇಂತಹ ಘೋರ ಕೃತ್ಯದ ಬಳಿಕ ‘ಮುಂದಿನ ಬಲಿಪಶುಗಳು ಯಾರು?’ ಎಂದು ಜನರು ಕೇಳುತ್ತಾರೆ.

ಕ್ಯಾಲಿಫೋರ್ನಿಯದ ಲಾಸ್‌ ಏಂಜಲಿಸ್‌ನಲ್ಲಿ, ಕುಲವಾದಿಯೊಬ್ಬನು ಯೆಹೂದಿ ಮತಕ್ಕೆ ಸೇರಿದ್ದ ಚಿಕ್ಕ ಮಕ್ಕಳ ಒಂದು ಗುಂಪಿನ ಮೇಲೆ ಗುಂಡುಹಾರಿಸಿದನು ಮತ್ತು ತದನಂತರ ಫಿಲಿಪ್ಪೀನ್ಸ್‌ ಮೂಲದ ಒಬ್ಬ ಅಂಚೆಯವನನ್ನು ಕೊಂದುಬಿಟ್ಟನು.

ಖಂಡಿತವಾಗಿಯೂ ದ್ವೇಷವನ್ನು ವಿಶ್ವವ್ಯಾಪಿ ಸಾಂಕ್ರಾಮಿಕ ರೋಗ ಎಂದು ಯೋಗ್ಯವಾಗಿಯೇ ವರ್ಣಿಸಸಾಧ್ಯವಿದೆ. ಕುಲಸಂಬಂಧಿತ, ಜಾತೀಯ ಅಥವಾ ಧಾರ್ಮಿಕ ಹಗೆತನಗಳು ನಿಯಮರಾಹಿತ್ಯದೊಂದಿಗೆ ಜೊತೆಗೂಡುವಾಗ ಏನು ಸಂಭವಿಸುತ್ತದೆ ಎಂಬುದನ್ನು ಬಹುಮಟ್ಟಿಗೆ ಪ್ರತಿ ದಿನದ ವಾರ್ತಾ ವರದಿಗಳು ಪ್ರಕಟಪಡಿಸುತ್ತವೆ. ರಾಷ್ಟ್ರಗಳು, ಸಮುದಾಯಗಳು ಮತ್ತು ಕುಟುಂಬಗಳು ವಿಭಾಗಗೊಳ್ಳುವುದನ್ನು ನಾವು ನೋಡುತ್ತೇವೆ. ದೇಶಗಳು ಸಾಮೂಹಿಕ ಜನಹತ್ಯೆಯಲ್ಲಿ ಸಿಕ್ಕಿಕೊಂಡಿರುವುದನ್ನು ನಾವು ನೋಡುತ್ತೇವೆ. ಕೆಲವು ಜನರು ಕೇವಲ “ಭಿನ್ನರು” ಆಗಿರುವ ಕಾರಣದಿಂದಾಗಿಯೇ ಅವರ ಮೇಲೆ ಅತಿ ಘೋರವಾದ ಅಮಾನುಷ ಕೃತ್ಯಗಳು ನಡೆಸಲ್ಪಡುವುದನ್ನು ನಾವು ನೋಡುತ್ತೇವೆ.

ದ್ವೇಷವೆಂದು ಕರೆಯಲ್ಪಡುವ ಪೆಡಂಭೂತವನ್ನು ಎಂದಾದರೂ ಬಂಧಿಸಬೇಕಾಗಿರುವಲ್ಲಿ, ಮೊದಲು ಅಂತಹ ದ್ವೇಷಭರಿತ ಹಿಂಸಾಚಾರದ ಮೂಲವೇನು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ದ್ವೇಷವು ಮಾನವ ವಂಶವಾಹಿಗಳಲ್ಲಿ ಬೇರೂರಿದೆಯೋ? ದ್ವೇಷವು ಕ್ರಮೇಣ ಕಲಿಯಲ್ಪಡುವಂಥ ಒಂದು ನಡವಳಿಕೆಯಾಗಿದೆಯೋ? ದ್ವೇಷದ ಚಕ್ರಗತಿಯನ್ನು ನಿಲ್ಲಿಸಸಾಧ್ಯವಿದೆಯೋ?(g01 8/8)

[ಪುಟ 3ರಲ್ಲಿರುವ ಚಿತ್ರ ಕೃಪೆ]

Kemal Jufri/Sipa Press