ನಾನು ಇಷ್ಟೊಂದು ಚಿಂತಿಸುವುದನ್ನು ಹೇಗೆ ನಿಲ್ಲಿಸಬಲ್ಲೆ?
ಯುವ ಜನರು ಪ್ರಶ್ನಿಸುವುದು . . .
ನಾನು ಇಷ್ಟೊಂದು ಚಿಂತಿಸುವುದನ್ನು ಹೇಗೆ ನಿಲ್ಲಿಸಬಲ್ಲೆ?
“ಒಬ್ಬ ಯುವ ವ್ಯಕ್ತಿಗೆ ಅತ್ಯಂತ ಒತ್ತಡಭರಿತ ವಿಷಯಗಳಲ್ಲಿ ಒಂದು, ಭವಿಷ್ಯತ್ತಿನ ಕುರಿತಾದ ಚಿಂತೆಯಾಗಿರಸಾಧ್ಯವಿದೆ. ನೀವು ನಿಮ್ಮ ಕುರಿತಾಗಿಯೇ ಚಿಂತಿಸುತ್ತೀರಿ. ನಾನು ಮನೆ ಬಿಟ್ಟುಹೋಗಬೇಕೋ? ಶಾಲೆಗೆ ಹೋಗಬೇಕೋ? ಪೂರ್ಣ-ಸಮಯದ ಸೇವೆಯನ್ನು ಆರಂಭಿಸಬೇಕೋ? ಮದುವೆಮಾಡಿಕೊಳ್ಳಬೇಕೋ? ಇಷ್ಟೊಂದು ಆಯ್ಕೆಗಳಿರುವುದೇ ಒಂದು ಭೀತಿದಾಯಕ ಸಂಗತಿಯಾಗಿದೆ.” —ಶೇನ್, 20 ವರ್ಷ ಪ್ರಾಯ.
ನೀವು ತುಂಬ ಚಿಂತಿಸುತ್ತೀರೋ? ಅನೇಕ ಯುವ ಜನರು ಹಾಗೆ ಮಾಡುತ್ತಾರೆ, ಅದೂ ಬೇರೆ ಬೇರೆ ಕಾರಣಗಳಿಗಾಗಿ. ಹೆತ್ತವರಿಗೆ ಮಾರ್ಗದರ್ಶನವನ್ನು ನೀಡಲಿಕ್ಕಾಗಿ ಪ್ರಕಾಶಿಸಲ್ಪಟ್ಟ ಒಂದು ವಾರ್ತಾಪತ್ರವು ಹೀಗೆ ವರದಿಸಿತು: “41 ದೇಶಗಳಲ್ಲಿ 15ರಿಂದ 18ರ ವರೆಗಿನ ಪ್ರಾಯದ ಹದಿವಯಸ್ಕರ ಬಗ್ಗೆ ನಡೆಸಿದ ಇತ್ತೀಚಿನ ಒಂದು ಲೋಕವ್ಯಾಪಕ ಸಮೀಕ್ಷೆಯು, ತುಂಬ ಸಂತೃಪ್ತಿಕರವಾದ ಹಾಗೂ ಒಳ್ಳೇ ಸಂಬಳವು ಸಿಗುವಂತಹ ಉದ್ಯೋಗವನ್ನು ಪಡೆದುಕೊಳ್ಳುವುದೇ ಇಂದಿನ ಹದಿವಯಸ್ಕರಿಗಿರುವ ಪರಮೋಚ್ಚ ಚಿಂತೆ ಎಂದು ಪ್ರಕಟಪಡಿಸಿತು.” ತದನಂತರದ ಚಿಂತೆಯು ತಮ್ಮ ಹೆತ್ತವರ ಆರೋಗ್ಯದ ಕುರಿತಾಗಿತ್ತು. ತಾವು ಪ್ರೀತಿಸುತ್ತಿರುವಂತಹ ಯಾರಾದರೊಬ್ಬರನ್ನು ಕಳೆದುಕೊಳ್ಳುವುದರ ಕುರಿತಾದ ಭಯವು ಸಹ ಚಿಂತೆಯ ಮುಖ್ಯ ಕಾರಣಗಳಲ್ಲಿ ಒಂದಾಗಿತ್ತು.
ಅಮೆರಿಕದ ಒಂದು ಶಿಕ್ಷಣ ಇಲಾಖೆಯ ಸಮೀಕ್ಷೆಯು ಕಂಡುಕೊಂಡಿದ್ದೇನೆಂದರೆ, ಅಮೆರಿಕದಲ್ಲಿರುವ ಅನೇಕ ಯುವ ಜನರಿಗೆ “ಅತ್ಯುತ್ತಮ ಅಂಕಗಳನ್ನು ಗಳಿಸುವ ಒತ್ತಡವು” ಒಂದು ಪ್ರಮುಖ ಚಿಂತೆಯಾಗಿತ್ತು. ಅನೇಕ ಯುವ ಜನರಿಗೆ ಶೇನ್‌ನಿಗಿದ್ದ (ಆರಂಭದಲ್ಲಿ ಉಲ್ಲೇಖಿಸಿರುವ) ಅಭಿಪ್ರಾಯವೇ ಇತ್ತು ಎಂದು ಅದೇ ಸಮೀಕ್ಷೆಯು ಪ್ರಕಟಪಡಿಸಿತು. ಆ್ಯಶ್ಲೀ ಎಂಬ ಹೆಸರಿನ ಯುವತಿಯು ಹೇಳುವುದು: “ನಾನು ನನ್ನ ಭವಿಷ್ಯತ್ತಿನ ಕುರಿತು ಚಿಂತಿಸುತ್ತಿದ್ದೇನೆ.”
ಇನ್ನಿತರ ಯುವ ಜನರು ತಮ್ಮ ಶಾರೀರಿಕ ಸುರಕ್ಷೆಯ ಕುರಿತು ಚಿಂತಿಸುತ್ತಾರೆ. 1996ರ ಒಂದು ಸಮೀಕ್ಷೆಗನುಸಾರ, ತಮ್ಮ ಶಾಲೆಯು ಹೆಚ್ಚೆಚ್ಚು ಹಿಂಸಾತ್ಮಕವಾಗಿ ಪರಿಣಮಿಸುತ್ತಿತ್ತು ಎಂದು ಅಮೆರಿಕದಲ್ಲಿರುವ ಯುವ ಜನರಲ್ಲಿ ಹೆಚ್ಚುಕಡಿಮೆ 50 ಪ್ರತಿಶತ ಮಂದಿಗೆ ಅನಿಸಿತು. ಬಂದೂಕಿನಿಂದ ಗಾಯಗೊಳಿಸಲ್ಪಟ್ಟ ಅಥವಾ ಕೊಲ್ಲಲ್ಪಟ್ಟ ಯಾರೊಬ್ಬರ ಕುರಿತಾದರೂ ತಮಗೆ ಗೊತ್ತಿತ್ತು ಎಂದು 80 ಲಕ್ಷಕ್ಕಿಂತಲೂ ಹೆಚ್ಚು ಹದಿವಯಸ್ಕರು (37 ಪ್ರತಿಶತ) ವರದಿಸಿದರು!
ಆದರೂ, ಎಲ್ಲ ಚಿಂತೆಗಳು ಅಷ್ಟೊಂದು ಕರಾಳವಾಗಿರುವುದಿಲ್ಲ. ಅನೇಕ ಯುವ ಜನರಿಗಾದರೋ ಅವರ ಅತಿ ದೊಡ್ಡ ಚಿಂತೆಗಳಲ್ಲಿ ಹೆಚ್ಚಿನವು ಅವರ ಸಾಮಾಜಿಕ ಜೀವನವನ್ನು ಒಳಗೂಡಿರುತ್ತವೆ. ಹೆತ್ತವರಿಗೆ ನಿರ್ದೇಶಿಸಲ್ಪಟ್ಟ ಒಂದು ಆನ್-ಲೈನ್ ಪತ್ರಿಕೆಯು ಹೇಳುವುದು: “ಹದಿವಯಸ್ಕರು ಒಬ್ಬ ಪ್ರಿಯತಮನನ್ನು ಅಥವಾ ಪ್ರಿಯತಮೆಯನ್ನು ಪಡೆದುಕೊಳ್ಳುವುದರ ಕುರಿತು ಚಿಂತಿಸುತ್ತಾರೆ ನಿಜ, ಆದರೆ ಹೆಚ್ಚಾಗಿ ಅವರು ಸ್ನೇಹಿತರೇ ಇಲ್ಲದಿರುವುದರ ಬಗ್ಗೆ ಚಿಂತಿಸುತ್ತಾರೆ.” ಮೇಗನ್ ಎಂಬ ಹೆಸರಿನ ಒಬ್ಬ ಹದಿಪ್ರಾಯದ ಹುಡುಗಿಯು ಪ್ರಲಾಪಿಸುವುದು: “ನಾನು ಸ್ನೇಹಿತರನ್ನು ಪಡೆಯುವ ಉದ್ದೇಶದಿಂದ ಹೇಗೆ ಸಭ್ಯಳಾಗಿ ಕಂಡುಬರಬಲ್ಲೆ ಮತ್ತು ವರ್ತಿಸಬಲ್ಲೆ?” ತದ್ರೀತಿಯಲ್ಲಿ, ನಾಟಾನಾಎಲ್ ಎಂಬ ಹೆಸರಿನ 15 ವರ್ಷ ಪ್ರಾಯದ ಒಬ್ಬ ಯುವಕನು ಹೇಳಿದ್ದು: “ಶಾಲೆಯಲ್ಲಿ ಹುಡುಗರು ಸ್ಟೈಲ್‌ನ ಬಗ್ಗೆ ಚಿಂತಿಸುತ್ತಾರೆ. ತಾವು ಹೇಗೆ ನಡೆಯುತ್ತೇವೆ, ಹೇಗೆ ಮಾತಾಡುತ್ತೇವೆ ಮತ್ತು ಇತರರಿಗೆ ಹೇಗೆ ತೋರುತ್ತೇವೆ ಎಂಬುದರ ಕುರಿತು ಅವರು ಚಿಂತಿಸುತ್ತಾರೆ. ತಾವು ಮೂರ್ಖರಾಗಿ ತೋರುವುದರ ಕುರಿತು ಅವರು ಭಯಪಡುತ್ತಾರೆ.”
ಸಮಸ್ಯೆಗಳು ಜೀವಿತದ ಭಾಗವಾಗಿವೆ
ಚಿಂತಾರಹಿತವಾದ ಜೀವನವನ್ನು ನಡೆಸಲು ನಾವು ಶಕ್ತರಾಗಿರುವಲ್ಲಿ ಅದು ತುಂಬ ಒಳ್ಳೇದು. ಆದರೂ ಬೈಬಲು ಹೇಳುವುದು: “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು.” (ಯೋಬ 14:1) ಆದುದರಿಂದ, ಸಮಸ್ಯೆಗಳು ಮತ್ತು ಅವುಗಳ ಜೊತೆಯಲ್ಲೇ ಬರುವ ಚಿಂತೆಗಳು ಜೀವಿತದ ಭಾಗವಾಗಿವೆ. ಆದರೆ ಚಿಂತೆಗಳು ಹಾಗೂ ವ್ಯಾಕುಲತೆಗಳು ನಿಮ್ಮ ಆಲೋಚನೆಯ ಮೇಲೆ ಅಧಿಕಾರ ನಡೆಸುವಂತೆ ನೀವು ಬಿಡುವಲ್ಲಿ, ನೀವು ನಿಮಗೇ ಹಾನಿಮಾಡಿಕೊಳ್ಳುತ್ತೀರಿ. ಬೈಬಲು ಎಚ್ಚರಿಸುವುದು: “ಕಳವಳವು ಮನಸ್ಸನ್ನು ಕುಗ್ಗಿಸುವದು.”—ಜ್ಞಾನೋಕ್ತಿ 12:25.
ಅನಗತ್ಯವಾದ ಚಿಂತೆಯನ್ನು ದೂರಮಾಡುವ ಒಂದು ವಿಧವು, ನಿಮ್ಮ ಸ್ವಂತ ನಡವಳಿಕೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದೇ ಆಗಿದೆ. ಹದಿನಾರು ವರ್ಷ ಪ್ರಾಯದ ಆ್ಯನಾ ಹೇಳುವುದು: “ನನ್ನ ಸಹಪಾಠಿಗಳಲ್ಲಿ ಅನೇಕರು, ಗರ್ಭವತಿಯರಾಗುವ ಅಥವಾ ಒಂದು ರತಿರವಾನಿತ ರೋಗವನ್ನು ಪಡೆಯುವುದರ ಕುರಿತು ಚಿಂತಿತರಾಗಿದ್ದಾರೆ.” ಆದರೆ ಬೈಬಲಿನ ನೈತಿಕ ಮಟ್ಟಗಳಿಗೆ ಭದ್ರವಾಗಿ ಅಂಟಿಕೊಳ್ಳುವ ಮೂಲಕ ನೀವು ಇಂತಹ ಚಿಂತೆಗಳನ್ನು ದೂರಮಾಡಸಾಧ್ಯವಿದೆ. (ಗಲಾತ್ಯ 6:7) ಹಾಗಿದ್ದರೂ, ನಿಮ್ಮ ಎಲ್ಲ ಸಮಸ್ಯೆಗಳನ್ನು ಇಷ್ಟೊಂದು ಸುಲಭವಾಗಿ ಬಗೆಹರಿಸಸಾಧ್ಯವಿರುವುದಿಲ್ಲ. ಆದರೆ ಇಷ್ಟೊಂದು ಚಿಂತಿಸುವುದನ್ನು ನೀವು ಹೇಗೆ ನಿಲ್ಲಿಸಬಲ್ಲಿರಿ?
“ವಿವೇಕಯುತವಾಗಿ ಚಿಂತಿಸಿರಿ”
ಚಿಂತೆಯು ತಮ್ಮನ್ನು ತೀರ ಹತಾಶರನ್ನಾಗಿ ಮಾಡುವಂತೆ ಕೆಲವರು ಅನುಮತಿಸುತ್ತಾರೆ. ಹದಿವಯಸ್ಕರಿಗಾಗಿರುವ ಒಂದು ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದು, ಚಿಂತೆಯನ್ನು ರಚನಾತ್ಮಕ ಕ್ರಿಯೆಯಾಗಿ ಮಾರ್ಪಡಿಸುವ ಮೂಲಕ ಒಬ್ಬನು “ವಿವೇಕಯುತವಾಗಿ ಚಿಂತಿಸ”ಸಾಧ್ಯವಿದೆ ಎಂದು ಸೂಚಿಸಿತು! ಹೀಗೆ ಮಾಡಲಿಕ್ಕಾಗಿ ನಿಮಗೆ ಸಹಾಯಮಾಡಲು ಬೈಬಲಿನಲ್ಲಿ ಅನೇಕ ಮೂಲತತ್ತ್ವಗಳಿವೆ. ಜ್ಞಾನೋಕ್ತಿ 21:5ನ್ನು ಪರಿಗಣಿಸಿರಿ: “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ.” ಉದಾಹರಣೆಗೆ, ಸಭೆಯಲ್ಲಿ ಕೆಲವು ಸ್ನೇಹಿತರು ಒಟ್ಟುಗೂಡಿ ಒಂದು ಪಾರ್ಟಿಯನ್ನು ನಡೆಸಲು ಬಯಸುತ್ತೀರಿ ಎಂದಿಟ್ಟುಕೊಳ್ಳಿ. ಒಳ್ಳೆಯ ರೀತಿಯಲ್ಲಿ ಯೋಜನೆಯನ್ನು ಮಾಡುವ ಮೂಲಕ ನೀವು ಹೆಚ್ಚು ಚಿಂತಿಸಬೇಕಾಗಿರುವುದಿಲ್ಲ. ಸ್ವತಃ ಹೀಗೆ ಕೇಳಿಕೊಳ್ಳಿ, ‘ನಿರ್ದಿಷ್ಟವಾಗಿ ಯಾರು ಆಮಂತ್ರಿಸಲ್ಪಡುವರು? ಅವರು ಯಾವಾಗ ಆಗಮಿಸಬೇಕೆಂದು ನಾನು ಬಯಸುತ್ತೇನೆ? ಅವರು ಯಾವಾಗ ಹಿಂದಿರುಗಬೇಕೆಂದು ನಾನು ಇಷ್ಟಪಡುತ್ತೇನೆ? ಲಘು ಉಪಾಹಾರಗಳಿಗಾಗಿ ನನಗೆ ಯಾವುದರ ಅಗತ್ಯವಿದೆ? ಪ್ರತಿಯೊಬ್ಬರೂ ಆನಂದಿಸುವಂತೆ ಮಾಡಬಲ್ಲ ಮನೋರಂಜನಾ ಚಟುವಟಿಕೆಗಳಲ್ಲಿ ಕೆಲವು ಯಾವುವು?’ ವಿಷಯಗಳನ್ನು ನೀವು ಹೆಚ್ಚು ಜಾಗರೂಕತೆಯಿಂದ ಪರಿಗಣಿಸಿದಷ್ಟೂ ನಿಮ್ಮ ಪಾರ್ಟಿಯು ಹೆಚ್ಚು ಸುಗಮವಾಗಿ ನಡೆಯಬಲ್ಲದು.
ಆದರೂ, ವಿಷಯಗಳು ತುಂಬ ಜಟಿಲವಾಗುವಂತೆ ಬಿಡುವ ಮೂಲಕ ನೀವು ಚಿಂತೆಯನ್ನು ಉತ್ಪಾದಿಸಸಾಧ್ಯವಿದೆ. ತನ್ನ ಅತಿಥಿಗಳನ್ನು ಸತ್ಕರಿಸುವುದರಲ್ಲಿ ಅಗತ್ಯವಿರುವುದಕ್ಕಿಂತ ಹೆಚ್ಚು ತೊಂದರೆಯನ್ನು ತೆಗೆದುಕೊಳ್ಳುತ್ತಿದ್ದ ಒಬ್ಬ ಸ್ತ್ರೀಗೆ ಯೇಸು ಕ್ರಿಸ್ತನು, “ಕೆಲವು ಮಾತ್ರ ಬೇಕಾದದ್ದು, ಅಥವಾ ಒಂದೇ” ಎಂದು ಬುದ್ಧಿವಾದ ನೀಡಿದನು. (ಲೂಕ 10:42) ಆದುದರಿಂದ ಸ್ವತಃ ಹೀಗೆ ಕೇಳಿಕೊಳ್ಳಿ, ‘ಈ ಪಾರ್ಟಿಯನ್ನು ಯಶಸ್ವಿಗೊಳಿಸಲು ಯಾವುದು ನಿಜವಾಗಿಯೂ ಪ್ರಾಮುಖ್ಯವಾದದ್ದಾಗಿದೆ?’ ವಿಷಯಗಳನ್ನು ಸರಳವಾಗಿಡುವುದು ನೀವು ನಿಶ್ಚಿಂತರಾಗಿರಲು ಸಹಾಯಮಾಡಬಹುದು.
ಚಿಂತೆಯ ಇನ್ನೊಂದು ಮೂಲವು, ಶಾಲೆಯಲ್ಲಿನ ನಿಮ್ಮ ಸುರಕ್ಷೆಯಾಗಿರಬಹುದು. ಅಲ್ಲಿನ ಸನ್ನಿವೇಶವನ್ನು ಬದಲಾಯಿಸಲು ನೀವು ಹೆಚ್ಚನ್ನು ಮಾಡಸಾಧ್ಯವಿಲ್ಲದಿರಬಹುದು. ಆದರೆ ನಿಮ್ಮನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿ ನೀವು ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳಸಾಧ್ಯವಿದೆ. “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು” ಎಂದು ಜ್ಞಾನೋಕ್ತಿ 22:3 ಹೇಳುತ್ತದೆ. ಪ್ರತ್ಯೇಕವಾಗಿರುವಂತಹ ಅಪಾಯಕರ ಸ್ಥಳಗಳಿಂದ ದೂರವಿರುವುದು ಮಾತ್ರವಲ್ಲ, ಸಾಮಾನ್ಯವಾಗಿ ಪುಂಡರು ಒಟ್ಟುಗೂಡುವಂತಹ ಮೇಲ್ವಿಚಾರಣೆಯಿಲ್ಲದ ಕ್ಷೇತ್ರದಿಂದ ದೂರವಿರುವುದು ಸಹ, ಒಂದು ಅಪಾಯಕರ ಸನ್ನಿವೇಶವನ್ನು ಎದುರಿಸುವುದರ ಸಂಭವನೀಯತೆಯನ್ನು ಕಡಿಮೆಗೊಳಿಸಸಾಧ್ಯವಿದೆ.
ಶಾಲಾಕೆಲಸವು ಸಹ ಇನ್ನೊಂದು ರೀತಿಯ ಚಿಂತೆಯಾಗಿರಬಲ್ಲದು. ನಿಮಗೆ ಬಹಳಷ್ಟು ಹೋಮ್‌ವರ್ಕ್ ಅನ್ನು ಮಾಡಲಿಕ್ಕಿರಬಹುದು ಮತ್ತು ನೀವು ಅದನ್ನು ಸಾಕಷ್ಟು ಬೇಗನೆ ಮಾಡಿಮುಗಿಸಲಾರಿರಿ ಎಂಬ ಅನಿಸಿಕೆಯಿಂದ ನೀವು ಚಿಂತಿತರಾಗಿರಬಹುದು. ಹಾಗಿರುವಲ್ಲಿ, ಫಿಲಿಪ್ಪಿ 1:10ರಲ್ಲಿರುವ (NW) ಮೂಲತತ್ತ್ವವು ಸಹಾಯಕರವಾಗಿರುವುದು: “ಹೆಚ್ಚು ಪ್ರಾಮುಖ್ಯವಾದ ಸಂಗತಿಗಳು ಯಾವುವೆಂಬುದನ್ನು ಖಚಿತಪಡಿಸಿಕೊಳ್ಳಿರಿ.” ಹೌದು, ಕೆಲಸಗಳಿಗೆ ಆದ್ಯತೆ ನೀಡುವುದನ್ನು ಕಲಿತುಕೊಳ್ಳಿರಿ! ಯಾವ ನೇಮಕವನ್ನು ಅತಿ ಬೇಗನೆ ಮುಗಿಸಬೇಕಾಗಿದೆ ಎಂಬುದನ್ನು ಕಂಡುಹಿಡಿಯಿರಿ ಮತ್ತು ಅದನ್ನು ಮೊದಲು ಮಾಡಿರಿ. ತದನಂತರ, ಮುಂದಿನ ನೇಮಕಕ್ಕೆ ಮುಂದುವರಿಯಿರಿ. ಹೀಗೆ ಮಾಡುವಲ್ಲಿ, ಕ್ರಮೇಣ ನಿಮ್ಮ ಸನ್ನಿವೇಶವು ನಿಯಂತ್ರಣದಲ್ಲಿರುವಂತೆ ನಿಮಗೆ ಅನಿಸಲಾರಂಭಿಸುವುದು.
ಸಲಹೆಯನ್ನು ಪಡೆದುಕೊಳ್ಳಿ
ಆ್ಯರನ್ ಒಬ್ಬ ಯುವಕನಾಗಿದ್ದಾಗ, ತನ್ನ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣನಾಗುವುದರ ಕುರಿತು ಎಷ್ಟು ಚಿಂತಿತನಾಗಿದ್ದನೆಂದರೆ, ಅವನಿಗೆ ಎದೆ ನೋವು ಬಂದಿತ್ತು. ಅವನು ಜ್ಞಾಪಿಸಿಕೊಳ್ಳುವುದು: “ಈ ವಿಷಯವನ್ನು ನಾನು ಹೆತ್ತವರಿಗೆ ತಿಳಿಸಿದೆ, ಮತ್ತು ಅವರು ನನ್ನನ್ನು ವೈದ್ಯರ ಬಳಿಗೆ ಕಳುಹಿಸಿದರು. ವೈದ್ಯರು ಆ ಕೂಡಲೆ ನನ್ನನ್ನು ಪರೀಕ್ಷಿಸಿ, ನನ್ನ ಹೃದಯದಲ್ಲಿ ಏನೂ ತೊಂದರೆಯಿಲ್ಲ ಎಂದು ಹೇಳಿದರು. ಮತ್ತು ಚಿಂತೆಯು ಒಬ್ಬನ ದೇಹದ ಮೇಲೆ ಹೇಗೆ ಪ್ರಭಾವ ಬೀರಸಾಧ್ಯವಿದೆ ಎಂದು ಅವರು ವಿವರಿಸಿದರು. ನನ್ನ ಪರೀಕ್ಷೆಗಳಿಗೆ ಸಿದ್ಧತೆಯಲ್ಲಿ ನನ್ನಿಂದ ಸಾಧ್ಯವಿರುವುದನ್ನೆಲ್ಲಾ ನಾನು ಮಾಡಿದ್ದೇನೆ ಮತ್ತು ಈಗ ಸ್ವತಃ ನನ್ನ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನ್ನ ಹೆತ್ತವರು ನನಗೆ ಸಹಾಯಮಾಡಿದರು. ನನ್ನ ಚಿಂತೆಯು
ಕಡಿಮೆಯಾಯಿತು, ಎದೆ ನೋವು ಹೊರಟುಹೋಯಿತು, ಮತ್ತು ನಾನು ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಬರೆದೆ.”ಅತಿಯಾದ ಚಿಂತೆಯಿಂದ ನಿಮ್ಮ ಮನಸ್ಸು ಭಾರವಾಗಿದೆಯೆಂದು ನಿಮಗನಿಸುವಲ್ಲಿ, ಮೌನವಾಗಿ ಕಷ್ಟಾನುಭವಿಸಬೇಡಿ. ಈ ಮುಂಚೆ ಅರ್ಧ ಭಾಗವನ್ನು ಮಾತ್ರ ಉದ್ಧರಿಸಲಾಗಿದ್ದ ಜ್ಞಾನೋಕ್ತಿ 12:25ನೆಯ ವಚನದ ಇಡೀ ಭಾಗವು ಹೇಳುವುದು: “ಕಳವಳವು ಮನಸ್ಸನ್ನು ಕುಗ್ಗಿಸುವದು; ಕನಿಕರದ ಮಾತು ಅದನ್ನು ಹಿಗ್ಗಿಸುವದು.” ನಿಮ್ಮ “ಕಳವಳ”ದ ಕುರಿತು ನೀವು ಮನಬಿಚ್ಚಿ ಮಾತಾಡುವಲ್ಲಿ ಮಾತ್ರ ಉತ್ತೇಜನದ “ಮಾತು” ನಿಮಗೆ ಸಿಕ್ಕುವುದು!
ಮೊದಲಾಗಿ, ನೀವು ವಿಷಯಗಳನ್ನು ನಿಮ್ಮ ಹೆತ್ತವರೊಂದಿಗೆ ಚರ್ಚಿಸಲು ಬಯಸಬಹುದು; ಅವರು ಕೆಲವೊಂದು ಒಳ್ಳೇ ಸಲಹೆಗಳನ್ನು ಕೊಡಬಹುದು. ನಿಮ್ಮ ಸ್ಥಳಿಕ ಕ್ರೈಸ್ತ ಸಭೆಯಲ್ಲಿರುವ ಆತ್ಮಿಕವಾಗಿ ಪ್ರೌಢರಾದ ವ್ಯಕ್ತಿಗಳು ಸಹ ಬೆಂಬಲದ ಇನ್ನೊಂದು ಮೂಲವಾಗಿದ್ದಾರೆ. ಹದಿನೈದು ವರ್ಷ ಪ್ರಾಯದ ಜೆನೆಲ್ ಹೇಳುವುದು: “ಪ್ರೌಢ ಶಾಲೆಗೆ ಹೋಗುವುದರ ಕುರಿತು ನಾನು ತುಂಬ ಚಿಂತಿತಳಾಗಿದ್ದೆ. ಅಮಲೌಷಧ, ಸೆಕ್ಸ್, ಹಿಂಸಾಚಾರದಂತಹ ವಿಷಯಗಳನ್ನು ಎದುರಿಸಲು ಭಯಪಟ್ಟಿದ್ದೆ. ಆದರೆ ನಾನು ಒಬ್ಬ ಸಭಾ ಹಿರಿಯರೊಂದಿಗೆ ಮಾತಾಡಿದೆ. ಅವರು ಅನೇಕ ಪ್ರಾಯೋಗಿಕ ಸಲಹೆಗಳನ್ನು ಕೊಟ್ಟರು. ಆ ಕೂಡಲೆ ನನಗೆ ಹಾಯಾದ ಅನಿಸಿಕೆಯಾಯಿತು, ಏಕೆಂದರೆ ನಾನು ಈ ಸನ್ನಿವೇಶವನ್ನು ನಿಭಾಯಿಸಬಲ್ಲೆ ಎಂದು ಆಗ ನನಗೆ ಮನವರಿಕೆಯಾಯಿತು.”
ವಿಳಂಬಿಸದಿರಿ
ಕೆಲವೊಮ್ಮೆ ನಮಗೆ ಏನೋ ಮಾಡುವ ಅಗತ್ಯವಿರುತ್ತದೆ, ಆದರೆ ಅದು ನಮಗೆ ಸಮ್ಮತವಾಗಿ ಕಂಡುಬರದ ಕಾರಣ ನಾವು ಅದನ್ನು ಮುಂದೂಡುತ್ತೇವೆ. ಉದಾಹರಣೆಗೆ, ಹತ್ತೊಂಬತ್ತು ವರ್ಷ ಪ್ರಾಯದ ಶವೋನ್‌ಳಿಗೆ ಜೊತೆ ಕ್ರೈಸ್ತನೊಬ್ಬನೊಂದಿಗೆ ವೈಯಕ್ತಿಕ ಭಿನ್ನಾಭಿಪ್ರಾಯವಿತ್ತು. ತಾನು ಈ ವಿಷಯವನ್ನು ಅವನೊಂದಿಗೆ ಚರ್ಚಿಸಬೇಕು ಎಂಬುದು ಅವಳಿಗೆ ಗೊತ್ತಿತ್ತು, ಆದರೆ ಅವಳು ಅದನ್ನು ಮುಂದೂಡಿದಳು. “ನಾನು ಹಾಗೆ ಮಾಡಲು ಮುಂದೂಡಿದಷ್ಟೂ ಅದು ಮಾನಸಿಕವಾಗಿ ನನ್ನನ್ನು ಹಿಂಸಿಸಿತು” ಎಂದು ಅವಳು ಒಪ್ಪಿಕೊಳ್ಳುತ್ತಾಳೆ. ಮತ್ತಾಯ 5:23, 24ರಲ್ಲಿರುವ ಯೇಸುವಿನ ಮಾತುಗಳನ್ನು ಶವೋನ್ ಜ್ಞಾಪಿಸಿಕೊಂಡಳು. ಅದು ಇಂತಹ ಸಮಸ್ಯೆಗಳನ್ನು ಆ ಕೂಡಲೆ ಬಗೆಹರಿಸುವಂತೆ ಕ್ರೈಸ್ತರನ್ನು ಉತ್ತೇಜಿಸುತ್ತದೆ. “ಕೊನೆಗೂ ನಾನು ಹಾಗೆ ಮಾಡಿದಾಗ ನನಗೆ ಸಮಾಧಾನವಾಯಿತು” ಎಂದು ಶವೋನ್ ನೆನಪಿಸಿಕೊಳ್ಳುತ್ತಾಳೆ.
ನೀವು ಸಹ ನಿಮಗೆ ಇಷ್ಟವಿಲ್ಲದಂಥ ನೇಮಕವನ್ನು ಅಥವಾ ಒಬ್ಬರೊಂದಿಗೆ ಮುಖಾಮುಖಿಯಾಗಿ ಮಾತಾಡುವ ಮುಜುಗರಗೊಳಿಸಬಹುದಾದ ಅವಕಾಶವನ್ನು ಮುಂದೂಡುತ್ತಿದ್ದೀರೋ? ಹಾಗಾದರೆ, ಆ ಕೂಡಲೆ ಅದನ್ನು ಬಗೆಹರಿಸಲು ನಿಶ್ಚೈಸಿರಿ ಮತ್ತು ಆಗ ನಿಮ್ಮ ಚಿಂತೆಗಳಲ್ಲಿ ಒಂದು ಕಡಿಮೆಯಾಗುವುದು.
ಗಂಭೀರ ಸನ್ನಿವೇಶಗಳು
ಎಲ್ಲ ಸನ್ನಿವೇಶಗಳನ್ನು ಇಷ್ಟೊಂದು ಸುಲಭವಾಗಿ ಬಗೆಹರಿಸಸಾಧ್ಯವಿಲ್ಲ. ಆಬ್‌ಡೂರ್ ಎಂಬ ಯೌವನಸ್ಥನನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಅವನ ತಾಯಿಗೆ ಕ್ಯಾನ್ಸರ್ ಇದೆ, ಮತ್ತು ಅವನು ಅವಳನ್ನೂ ತನ್ನ ತಮ್ಮನನ್ನೂ ಸಾಕಬೇಕಾಗಿತ್ತು. ಸಹಜವಾಗಿಯೇ ಆಬ್‌ಡೂರ್ ತನ್ನ ತಾಯಿಯ ಸ್ಥಿತಿಯ ಕುರಿತು ಚಿಂತಿಸುತ್ತಾನೆ. ಆದರೆ ಅವನು ಹೇಳುವುದು: “‘ಚಿಂತೆ ಮಾಡಿಮಾಡಿ ಒಂದು ಮೊಳ ಉದ್ದ ಬೆಳೆಯುವದು ನಿಮ್ಮಲ್ಲಿ ಯಾರಿಂದಾದೀತು?’ ಎಂಬ ಯೇಸುವಿನ ಮಾತುಗಳಿಂದ ನಾನು ಪ್ರೇರೇಪಣೆ ಪಡೆಯುತ್ತೇನೆ. ಚಿಂತಿಸಿ ತೀರ ಬಳಲುವುದಕ್ಕೆ ಬದಲಾಗಿ, ಸನ್ನಿವೇಶವನ್ನು ಪರಿಗಣಿಸಲು ಮತ್ತು ಯಾವುದು ಅತ್ಯುತ್ತಮ ಫಲಿತಾಂಶಗಳನ್ನು ತರುವುದು ಎಂಬುದನ್ನು ನಿರ್ಧರಿಸಲು ಪ್ರಯತ್ನಿಸುತ್ತೇನೆ.”—ಮತ್ತಾಯ 6:27.
ಒಂದು ದುರವಸ್ಥೆಯ ಸಮಯದಲ್ಲಿ ಶಾಂತರಾಗಿರುವುದು ಅಷ್ಟೇನೂ ಸುಲಭವಾದದ್ದಲ್ಲ. ಕೆಲವರು ಎಷ್ಟು ಹತಾಶರಾಗುತ್ತಾರೆಂದರೆ, ಅವರು ಸ್ವತಃ ತಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ ಮತ್ತು ಊಟಮಾಡುವುದೂ ಇಲ್ಲ. ಆದರೂ, ಒತ್ತಡದೊಂದಿಗೆ ವ್ಯವಹರಿಸುವಂತೆ ನಿಮ್ಮ ಹದಿವಯಸ್ಕರಿಗೆ ಸಹಾಯಮಾಡುವುದು (ಇಂಗ್ಲಿಷ್) ಎಂಬ ಪುಸ್ತಕವು ಎಚ್ಚರಿಕೆ ನೀಡುವುದೇನೆಂದರೆ, ಮೂಲಭೂತ ಪೋಷಣೆಯನ್ನೇ ನೀವು ಪಡೆದುಕೊಳ್ಳದಿರುವಾಗ, “ಒತ್ತಡದ ಮಾರಕ ಪರಿಣಾಮಗಳನ್ನು ತಾಳಿಕೊಳ್ಳಲು ನೀವು ತೀರ ಅಸಮರ್ಥರಾಗುತ್ತೀರಿ ಮತ್ತು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೂ ಸುಲಭವಾಗಿ ಬಲಿಬೀಳುತ್ತೀರಿ.” ಆದುದರಿಂದ, ಶಾರೀರಿಕವಾಗಿ ನಿಮ್ಮ ಜಾಗ್ರತೆ ವಹಿಸಿ. ಸಾಕಷ್ಟು ವಿಶ್ರಾಂತಿ ಮತ್ತು ಪೋಷಣೆಯನ್ನು ಪಡೆದುಕೊಳ್ಳಿ.
ಬೈಬಲಿನ ಬುದ್ಧಿವಾದವನ್ನು ಅನುಸರಿಸುವ ಮೂಲಕ ನೀವು ಅತ್ಯಧಿಕ ನೆಮ್ಮದಿಯನ್ನು ಕಂಡುಕೊಳ್ಳಸಾಧ್ಯವಿದೆ: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” (ಕೀರ್ತನೆ 55:22) ಈ ಲೇಖನದ ಆರಂಭದಲ್ಲಿ ತಿಳಿಸಲ್ಪಟ್ಟ ಶೇನ್ ತನ್ನ ಭವಿಷ್ಯತ್ತಿನ ಕುರಿತು ಚಿಂತಿತನಾಗಿದ್ದನು. ಅವನು ಜ್ಞಾಪಿಸಿಕೊಳ್ಳುವುದು: “ನಾನು ದೇವರ ವಾಕ್ಯ ಮತ್ತು ಆತನ ಉದ್ದೇಶದ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಲು ಆರಂಭಿಸಿದೆ.” ತನ್ನ ಜೀವಿತವನ್ನು ಯೆಹೋವನ ಸೇವೆಯಲ್ಲಿ ಉಪಯೋಗಿಸುವುದಾದರೆ ತನ್ನ ಭವಿಷ್ಯತ್ತು ಸಂತೋಷಭರಿತವಾಗಿರುವುದು ಎಂಬುದನ್ನು ಅವನು ಕೂಡಲೆ ಗ್ರಹಿಸಿದನು. (ಪ್ರಕಟನೆ 4:11) ಶೇನ್ ಹೇಳುವುದು: “ನನ್ನ ಕುರಿತಾಗಿಯೇ ಚಿಂತಿಸುವುದನ್ನು ನಾನು ನಿಲ್ಲಿಸಿಬಿಟ್ಟೆ. ಈಗ ನನಗೆ ಚಿಂತಿಸಲು ಇನ್ನೂ ಹೆಚ್ಚು ಪ್ರಾಮುಖ್ಯವಾದ ವಿಷಯವಿತ್ತು.”
ಆದುದರಿಂದ, ಒಂದುವೇಳೆ ನೀವು ತುಂಬ ಚಿಂತಿತರಾಗಿರುವಲ್ಲಿ, ನಿಮ್ಮ ಸಮಸ್ಯೆಯೊಂದಿಗೆ ವ್ಯವಹರಿಸುವ ರಚನಾತ್ಮಕ ವಿಧಗಳನ್ನು ಪ್ರಯತ್ನಿಸಿ ನೋಡಿರಿ. ಪ್ರೌಢ ವ್ಯಕ್ತಿಗಳ ಸಲಹೆ ಪಡೆಯಿರಿ. ಎಲ್ಲಕ್ಕಿಂತಲೂ ಮಿಗಿಲಾಗಿ, ನಿಮ್ಮ ಚಿಂತೆಗಳನ್ನು ಯೆಹೋವನ ಮುಂದೆ ವ್ಯಕ್ತಪಡಿಸಿರಿ, ಏಕೆಂದರೆ “ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ಆತನ ಸಹಾಯದಿಂದ ನೀವು ಇಷ್ಟೊಂದು ಚಿಂತಿಸುವುದನ್ನು ನಿಲ್ಲಿಸಬಹುದು.(g01 9/22)
[ಪುಟ 13ರಲ್ಲಿರುವ ಚಿತ್ರ]
ನಿಮ್ಮ ಚಿಂತೆಗಳ ಕುರಿತು ನಿಮ್ಮ ಹೆತ್ತವರೊಂದಿಗೆ ಚರ್ಚಿಸಿರಿ
[ಪುಟ 14ರಲ್ಲಿರುವ ಚಿತ್ರ]
ಎಷ್ಟು ಬೇಗನೆ ನೀವು ಸಮಸ್ಯೆಗಳನ್ನು ನಿರ್ವಹಿಸುತ್ತೀರೋ ಅಷ್ಟೇ ಬೇಗನೆ ನೀವು ಚಿಂತಿಸುವುದನ್ನು ನಿಲ್ಲಿಸಬಲ್ಲಿರಿ