ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಈ ಸಲ ಅವರು ಬದಲಾಗಬಹುದು”

“ಈ ಸಲ ಅವರು ಬದಲಾಗಬಹುದು”

“ಈ ಸಲ ಅವರು ಬದಲಾಗಬಹುದು”

ರೊಕ್ಸಾನಾ * ಚೈತನ್ಯದಿಂದ ಚಿಮ್ಮುತ್ತಿರುವ ಆಕರ್ಷಕ ಸ್ತ್ರೀಯಾಗಿದ್ದು, ನಾಲ್ಕು ಮಕ್ಕಳ ತಾಯಿಯಾಗಿದ್ದಾಳೆ. ಇವಳು ದಕ್ಷಿಣ ಅಮೆರಿಕದಲ್ಲಿರುವ ಒಬ್ಬ ಗೌರವಾನ್ವಿತ ಶಸ್ತ್ರಚಿಕಿತ್ಸಕರನ್ನು ವಿವಾಹವಾಗಿದ್ದಾಳೆ. “ನನ್ನ ಪತಿ ಸ್ತ್ರೀಯರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಾರೆ ಮತ್ತು ಪುರುಷರ ಮಧ್ಯೆ ಜನಪ್ರಿಯರಾಗಿದ್ದಾರೆ” ಎಂದು ಅವಳನ್ನುತ್ತಾಳೆ. ಆದರೆ ರೊಕ್ಸಾನಾಳ ಸಂಗಾತಿಗೆ ಇನ್ನೊಂದು ಕರಾಳ ಮುಖವೂ ಇದೆ; ಇದು ಅವರ ಆಪ್ತ ಸ್ನೇಹಿತರ ಕಣ್ಣಿಗೂ ಗೋಚರವಾಗುವುದಿಲ್ಲ. “ಮನೆಯಲ್ಲಿ ಅವರು ತುಂಬ ಭಯಾನಕ ವ್ಯಕ್ತಿಯಾಗಿದ್ದಾರೆ. ತುಂಬ ಮತ್ಸರಭರಿತರು ಕೂಡ.”

ರೊಕ್ಸಾನಾ ತನ್ನ ದಾರುಣ ಕಥೆಯನ್ನು ಮುಂದುವರಿಸುತ್ತಿರುವಾಗ, ಅವಳ ಮುಖದ ಮೇಲೆ ಚಿಂತೆಯ ಕಾರ್ಮೋಡವು ಸ್ಪಷ್ಟವಾಗಿ ಕಂಡುಬರುತ್ತದೆ. “ನಮ್ಮ ಮದುವೆಯಾಗಿ ಕೆಲವೇ ವಾರಗಳ ನಂತರ ಈ ಸಮಸ್ಯೆಯು ಆರಂಭವಾಯಿತು. ನನ್ನ ತಮ್ಮಂದಿರು ಮತ್ತು ತಾಯಿಯವರು ನಮ್ಮನ್ನು ಭೇಟಿಯಾಗಲು ಬಂದಿದ್ದರು, ಮತ್ತು ನಾನು ಅವರೊಂದಿಗೆ ಮಾತಾಡುತ್ತಾ ನಗುತ್ತಾ ಖುಷಿಯಾಗಿ ಸಮಯವನ್ನು ಕಳೆದೆ. ಆದರೆ ಅವರು ಹೋದ ಮೇಲೆ, ನನ್ನ ಪತಿ ಕೋಪದಿಂದ ಕುದಿಯುತ್ತಾ, ಹಿಂಸಾತ್ಮಕ ರೀತಿಯಲ್ಲಿ ನನ್ನನ್ನು ಸೋಫಾದ ಮೇಲೆ ತಳ್ಳಿಬಿಟ್ಟರು. ಆಗ ಏನು ಸಂಭವಿಸುತ್ತಿದೆ ಎಂಬುದನ್ನು ನನಗೆ ನಂಬಲಿಕ್ಕೇ ಆಗಲಿಲ್ಲ.”

ದುಃಖಕರವಾಗಿ, ಅದು ರೊಕ್ಸಾನಾಳ ಉಗ್ರ ಪರೀಕ್ಷೆಯ ಆರಂಭವಾಗಿತ್ತಷ್ಟೇ. ಏಕೆಂದರೆ, ಅಂದಿನಿಂದ ಹಿಡಿದು ಅನೇಕ ವರ್ಷಗಳಿಂದ ಅವಳು ಪುನಃ ಪುನಃ ಪತಿಯಿಂದ ಸದೆಬಡಿಯಲ್ಪಟ್ಟಿದ್ದಾಳೆ. ಶಾರೀರಿಕ ಹಾಗೂ ಮಾತಿನ ಹಿಂಸೆಯು ಮುಂತಿಳಿಸಲ್ಪಡಸಾಧ್ಯವಿರುವಂಥ ಚಕ್ರಗತಿಯಲ್ಲಿ ನಡೆಯುತ್ತಿರುವಂತೆ ತೋರುತ್ತದೆ. ರೊಕ್ಸಾನಾಳ ಪತಿ ಅವಳಿಗೆ ತುಂಬ ಹೊಡೆಯುತ್ತಾರೆ, ನಂತರ ಎಷ್ಟೋ ಬಾರಿ ಕ್ಷಮೆಯಾಚಿಸುತ್ತಾರೆ ಮತ್ತು ಪುನಃ ಹೀಗೆಂದೂ ಮಾಡುವುದಿಲ್ಲ ಎಂದು ಮಾತು ಕೊಡುತ್ತಾರೆ. ತದನಂತರ ಅವರ ನಡತೆಯು ಸ್ವಲ್ಪ ಉತ್ತಮಗೊಳ್ಳುತ್ತದೆ, ಮತ್ತು ಸ್ವಲ್ಪ ಸಮಯದ ವರೆಗೆ ಹೀಗೆಯೇ ಮುಂದುವರಿಯುತ್ತದೆ. ಆದರೆ ಇದ್ದಕ್ಕಿದ್ದಂತೆ ಆ ಘೋರ ಕೃತ್ಯವು ಮತ್ತೆ ಆರಂಭವಾಗುತ್ತದೆ. “ಈ ಸಲ ಅವರು ಬದಲಾಗಬಹುದು ಎಂದು ನಾನು ಪ್ರತಿ ಸಾರಿ ನೆನಸುತ್ತೇನೆ. ಒಂದುವೇಳೆ ನಾನು ತಪ್ಪಿಸಿಕೊಂಡು ಹೋದರೂ, ಯಾವಾಗಲೂ ನನ್ನ ಪತಿಯ ಬಳಿಗೇ ಹಿಂದಿರುಗುತ್ತೇನೆ” ಎಂದು ರೊಕ್ಸಾನಾ ಹೇಳುತ್ತಾಳೆ.

ಒಂದಲ್ಲ ಒಂದು ದಿನ ತನ್ನ ಪತಿಯ ಹಿಂಸಾಚಾರವು ಇನ್ನಷ್ಟು ತೀವ್ರಗೊಳ್ಳುವುದು ಎಂಬ ಭಯ ರೊಕ್ಸಾನಾಳಿಗಿದೆ. ಅವಳು ಹೇಳುವುದು: “ಅವರು ನನ್ನನ್ನು, ಮಕ್ಕಳನ್ನು ಮತ್ತು ಸ್ವತಃ ತಮ್ಮನ್ನೇ ಕೊಂದುಕೊಳ್ಳುವ ಬೆದರಿಕೆಯನ್ನು ಹಾಕಿದ್ದಾರೆ. ಒಂದು ಸಲ ಅವರು ನನ್ನ ಗಂಟಲಿಗೆ ಕತ್ತರಿಯನ್ನು ಹಾಕಿದ್ದರು. ಇನ್ನೊಂದು ಸಲ ಅವರು ಬಂದೂಕನ್ನು ನನ್ನ ಕಿವಿಗೆ ಗುರಿಯಿಟ್ಟು ಬೆದರಿಸಿದರು, ಮತ್ತು ಟ್ರಿಗರನ್ನು ಎಳೆದುಬಿಟ್ಟರು! ಪುಣ್ಯವಶಾತ್‌, ಆ ಬಂದೂಕಿನಲ್ಲಿ ಗುಂಡು ಇರಲಿಲ್ಲ, ಆದರೆ ಭಯದಿಂದ ನನ್ನ ಜೀವವೇ ಹಾರಿಹೋಗುವುದರಲ್ಲಿತ್ತು.”

ಪಾರಂಪರಾಗತವಾಗಿ ಬಂದ ಮೌನ

ರೊಕ್ಸಾನಾಳಂತೆ, ಲೋಕದಾದ್ಯಂತ ಇರುವ ಕೋಟಿಗಟ್ಟಲೆ ಸ್ತ್ರೀಯರು ಹಿಂಸಾತ್ಮಕ ಪುರುಷರ ಕೈಗಳಲ್ಲಿ ಕಷ್ಟವನ್ನು ಅನುಭವಿಸುತ್ತಿದ್ದಾರೆ. * ಅವರಲ್ಲಿ ಅನೇಕರು ತಮ್ಮ ಕಠಿನ ಪರೀಕ್ಷೆಯನ್ನು ಮೌನವಾಗಿ ತಾಳಿಕೊಳ್ಳುತ್ತಾರೆ. ಇದರ ಬಗ್ಗೆ ಅಧಿಕಾರಿಗಳಿಗೆ ದೂರು ಹೇಳುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಅವರು ವಾದಿಸುತ್ತಾರೆ. ಏನೇ ಆದರೂ, ಪತ್ನಿಯರ ಮೇಲೆ ದೌರ್ಜನ್ಯ ನಡೆಸುವ ಅನೇಕ ಗಂಡಂದಿರು, “ನನ್ನ ಪತ್ನಿ ಸುಲಭವಾಗಿ ಉದ್ರೇಕಗೊಳ್ಳುವ ಸ್ವಭಾವದವಳು” ಅಥವಾ “ಅವಳು ಚಿಕ್ಕ ವಿಷಯವನ್ನು ತುಂಬ ದೊಡ್ಡದು ಮಾಡುವ ಪ್ರವೃತ್ತಿಯುಳ್ಳವಳು” ಎಂಬ ಹೇಳಿಕೆಗಳನ್ನು ಉಪಯೋಗಿಸಿ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ.

ಎಲ್ಲಿ ಅತ್ಯಂತ ಸುರಕ್ಷಿತ ಭಾವನೆಯು ಇರಬೇಕೋ, ಅಂತಹ ಸ್ಥಳವಾದ ತಮ್ಮ ಸ್ವಂತ ಮನೆಗಳಲ್ಲೇ ಅನೇಕ ಸ್ತ್ರೀಯರು ಆಕ್ರಮಣದ ಸತತವಾದ ಭಯದೊಂದಿಗೆ ಜೀವಿಸುತ್ತಾರೆ ಎಂಬುದು ದುಃಖಕರ ಸಂಗತಿಯಾಗಿದೆ. ಆದರೂ, ಅನೇಕವೇಳೆ ಇಂತಹ ಹಿಂಸೆಗೆ ಬಲಿಯಾದ ವ್ಯಕ್ತಿಗೆ ಬದಲಾಗಿ ದುಷ್ಕರ್ಮಿಗೇ ಸಹಾನುಭೂತಿ ತೋರಿಸಲ್ಪಡುತ್ತದೆ. ವಾಸ್ತವದಲ್ಲಿ, ತುಂಬ ಗೌರವಾರ್ಹ ನಾಗರಿಕನಾಗಿ ಕಂಡುಬರುವಂಥ ಒಬ್ಬ ವ್ಯಕ್ತಿಯು, ತನ್ನ ಪತ್ನಿಯನ್ನು ಹೊಡೆಯುತ್ತಾನೆ ಎಂಬುದನ್ನು ನಂಬುವುದು ಕೆಲವರಿಗೆ ತುಂಬ ಅಸಾಧ್ಯವಾಗಿ ತೋರುತ್ತದೆ. ಆನೀಟಾ ಎಂಬ ಹೆಸರಿನ ಸ್ತ್ರೀಯು, ಅವಳ ಗೌರವಾನ್ವಿತ ಪತಿಯು ಅವಳ ಮೇಲೆ ನಡೆಸುತ್ತಿದ್ದ ದೌರ್ಜನ್ಯದ ಕುರಿತು ಮುಚ್ಚುಮರೆಯಿಲ್ಲದೆ ಮಾತಾಡಿದಾಗ ಏನು ಸಂಭವಿಸಿತು ಎಂಬುದನ್ನು ಪರಿಗಣಿಸಿರಿ. “ನಮ್ಮ ಪರಿಚಯಸ್ಥರಲ್ಲಿ ಒಬ್ಬರು ನನಗೆ ಹೇಳಿದ್ದು: ‘ಅಷ್ಟು ಒಳ್ಳೆಯ ವ್ಯಕ್ತಿಯ ಮೇಲೆ ನೀನು ಹೇಗೆ ತಾನೇ ಆರೋಪ ಹೊರಿಸುತ್ತೀ?’ ನಾನೇ ನನ್ನ ಪತಿಯ ಕೋಪವನ್ನು ಕೆರಳಿಸುತ್ತಿದ್ದಿರಬಹುದು ಎಂದು ಇನ್ನೊಬ್ಬ ವ್ಯಕ್ತಿಯು ಹೇಳಿದನು! ನನ್ನ ಪತಿಯ ಗುಟ್ಟು ಬಯಲಾದ ಬಳಿಕ, ನನ್ನ ಮಿತ್ರರಲ್ಲಿ ಕೆಲವರು ನನ್ನಿಂದ ದೂರವಾಗತೊಡಗಿದರು. ‘ಅದು ಪುರುಷರ ಸಹಜ ನಡತೆಯಾಗಿದೆ,’ ಆದುದರಿಂದ ನಾನು ನನ್ನ ಪತಿಯ ಕಿರುಕುಳವನ್ನು ಸಹಿಸಿಕೊಳ್ಳಬೇಕಾಗಿತ್ತು ಎಂಬುದು ಅವರ ಅಭಿಪ್ರಾಯವಾಗಿತ್ತು.”

ಆನೀಟಾಳ ಅನುಭವವು ತೋರಿಸುವಂತೆ, ಪತ್ನಿಯರ ಮೇಲೆ ನಡೆಸಲ್ಪಡುವ ದೌರ್ಜನ್ಯದ ಘೋರ ಸತ್ಯವನ್ನು ಅರ್ಥಮಾಡಿಕೊಳ್ಳುವುದು ಅನೇಕರಿಗೆ ತುಂಬ ಕಷ್ಟಕರವಾಗಿರಬಹುದು. ಒಬ್ಬ ಪುರುಷನು ತಾನು ಪ್ರೀತಿಸುವುದಾಗಿ ಹೇಳಿಕೊಳ್ಳುವ ಸ್ತ್ರೀಯೊಂದಿಗೆ ಇಷ್ಟೊಂದು ಕ್ರೂರ ರೀತಿಯಲ್ಲಿ ವರ್ತಿಸಲು ಕಾರಣವೇನು? ಈ ಹಿಂಸಾಚಾರಕ್ಕೆ ಗುರಿಯಾಗಿರುವ ಬಲಿಪಶುಗಳಿಗೆ ಹೇಗೆ ಸಹಾಯಮಾಡಸಾಧ್ಯವಿದೆ? (g01 11/8)

[ಪಾದಟಿಪ್ಪಣಿಗಳು]

^ ಈ ಲೇಖನಮಾಲೆಯಲ್ಲಿ ಹೆಸರುಗಳು ಬದಲಾಯಿಸಲ್ಪಟ್ಟಿವೆ.

^ ಪುರುಷರು ಸಹ ಹಿಂಸಾಚಾರಕ್ಕೆ ಬಲಿಬೀಳುತ್ತಾರೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಬಹಳಷ್ಟು ಗಂಭೀರವಾಗಿರುವ ಗಾಯಗಳನ್ನು ಸ್ತ್ರೀಯರು ಅನುಭವಿಸುವುದು ಹೆಚ್ಚು ಸಂಭವನೀಯ ಎಂದು ಸಂಶೋಧನೆಗಳು ತೋರಿಸುತ್ತವೆ. ಆದುದರಿಂದ, ಈ ಲೇಖನಗಳು ದೌರ್ಜನ್ಯಕ್ಕೆ ಬಲಿಯಾಗಿರುವ ಸ್ತ್ರೀಯರ ಕುರಿತು ಚರ್ಚಿಸುತ್ತವೆ.

[ಪುಟ 4ರಲ್ಲಿರುವ ಚೌಕ/ಚಿತ್ರ]

ಗೃಹ ಹಿಂಸಾಚಾರದ ವಿಶಾಲ ಹರವು

ಸ್ತ್ರೀಯರ ವಿರುದ್ಧವಾದ ಹಿಂಸಾಚಾರದ ನಿರ್ಮೂಲನದ ವಿಷಯದಲ್ಲಿ ವಿಶ್ವ ಸಂಸ್ಥೆಯು ಮಾಡಿದ ಪ್ರಕಟನೆಗನುಸಾರ, “ಸ್ತ್ರೀಯರ ವಿರುದ್ಧ ಹಿಂಸಾಚಾರ” ಎಂಬ ವಾಕ್ಸರಣಿಯು, “ಸಾರ್ವಜನಿಕ ಅಥವಾ ಖಾಸಗಿ ಜೀವನದಲ್ಲಿ, ಸ್ತ್ರೀಯರಿಗೆ ಶಾರೀರಿಕ, ಲೈಂಗಿಕ ಅಥವಾ ಮಾನಸಿಕ ಹಾನಿ ಮತ್ತು ಕಷ್ಟಾನುಭವವನ್ನು ಉಂಟುಮಾಡುವ ಇಲ್ಲವೆ ಉಂಟುಮಾಡಬಹುದಾದಂಥ ಕೃತ್ಯಗಳ ಬೆದರಿಕೆಗಳು, ದಬ್ಬಾಳಿಕೆ ಅಥವಾ ನಿರ್ಬಂಧಿತ ಸ್ವಾತಂತ್ರ್ಯಾಪಹರಣದಂಥ ಬೆದರಿಕೆಗಳನ್ನೂ ಒಳಗೊಂಡು, ಲಿಂಗಜಾತಿಯ ಮೇಲಾಧಾರಿತವಾದ ಹಿಂಸಾಚಾರದ ಯಾವುದೇ ಕೃತ್ಯ”ಕ್ಕೆ ಸೂಚಿಸಸಾಧ್ಯವಿದೆ. ಈ ಹಿಂಸಾಚಾರದಲ್ಲಿ, “ಹೊಡೆಯುವುದು, ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು, ವರದಕ್ಷಿಣೆಗೆ ಸಂಬಂಧಿಸಿದ ಹಿಂಸಾಚಾರ, ವೈವಾಹಿಕ ಬಲಾತ್ಕಾರ, ಸ್ತ್ರೀ ಜನನಾಂಗಗಳ ಅಂಗಹೀನಮಾಡುವಿಕೆ ಹಾಗೂ ಸ್ತ್ರೀಯರಿಗೆ ಹಾನಿಕರವಾಗಿರುವ ಇನ್ನಿತರ ಸಾಂಪ್ರದಾಯಿಕ ರೂಢಿಗಳನ್ನೂ ಸೇರಿಸಿ, ಕುಟುಂಬದಲ್ಲಿ ಹಾಗೂ ಸಾಮಾನ್ಯ ಸಮುದಾಯದಲ್ಲಿ ನಡೆಯುವ ಶಾರೀರಿಕ, ಲೈಂಗಿಕ ಮತ್ತು ಮಾನಸಿಕ ಹಿಂಸಾಚಾರವು ಒಳಗೂಡಿದೆ.”