ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೋಳಿ ಜನಪ್ರಿಯ ಹಾಗೂ ಸಮೃದ್ಧ

ಕೋಳಿ ಜನಪ್ರಿಯ ಹಾಗೂ ಸಮೃದ್ಧ

ಕೋಳಿ ಜನಪ್ರಿಯ ಹಾಗೂ ಸಮೃದ್ಧ

ಕೆನ್ಯಾದಲ್ಲಿರುವ ಎಚ್ಚರ! ಲೇಖಕರಿಂದ

ಕೋಳಿಯು ಭೂಮಿಯ ಮೇಲೆ ಬಹುಶಃ ಅತಿ ದೊಡ್ಡ ಸಂಖ್ಯೆಯಲ್ಲಿರುವ ಪಕ್ಷಿಯಾಗಿರಬಹುದು. ಅದರ ಸಂಖ್ಯೆಯು 1,300 ಕೋಟಿಗಿಂತಲೂ ಹೆಚ್ಚಾಗಿದೆ ಎಂದು ಅಂದಾಜುಮಾಡಲಾಗಿದೆ! ಮತ್ತು ಅದರ ಮಾಂಸವನ್ನು ಜನರು ಎಷ್ಟು ಇಷ್ಟಪಡುತ್ತಾರೆಂದರೆ, ಪ್ರತಿ ವರ್ಷಕ್ಕೆ 3,314 ಕೋಟಿಗಿಂತಲೂ ಹೆಚ್ಚು ಕಿಲೊಗ್ರ್ಯಾಮ್‌ ಕೋಳಿಮಾಂಸವನ್ನು ಸೇವಿಸಲಾಗುತ್ತದೆ. ಇದಲ್ಲದೆ, ಲೋಕವ್ಯಾಪಕವಾಗಿ ಕೋಳಿಗಳು ಒಂದು ವರ್ಷಕ್ಕೆ 60,000 ಕೋಟಿ ಮೊಟ್ಟೆಗಳನ್ನು ಇಡುತ್ತವೆ.

ಪಾಶ್ಚಾತ್ಯ ದೇಶಗಳಲ್ಲಿ ಕೋಳಿಮಾಂಸವು ಧಾರಾಳವಾಗಿ ಮತ್ತು ಕಡಿಮೆ ಬೆಲೆಗೆ ಲಭ್ಯವಿದೆ. ಅಮೆರಿಕದಲ್ಲಿ ಕೆಲವು ದಶಕಗಳ ಹಿಂದೆ, ಒಬ್ಬ ನಿರ್ದಿಷ್ಟ ಅಭ್ಯರ್ಥಿಯು ಚುನಾವಣೆಯಲ್ಲಿ ಗೆದ್ದರೆ, ಕೋಳಿಮಾಂಸವು ಪ್ರತಿಯೊಂದು ಕುಟುಂಬದ ಆರ್ಥಿಕ ಸ್ಥಿತಿಗತಿಗೆ ಎಟುಕುವಂಥ ಬೆಲೆಯದ್ದಾಗಿ ಮಾಡಲ್ಪಡುವುದೆಂದು ಮತಹಾಕುವವರಿಗೆ ಮಾತುಕೊಡಲಾಯಿತು. ಆದರೆ ಇಂದು ಕೋಳಿಮಾಂಸವು ಒಂದು ಸುಖಭೋಗದ ವಸ್ತುವಾಗಿರುವುದಿಲ್ಲ, ಅಥವಾ ಕೇವಲ ಧನಿಕರಾಗಿರುವ ಅಲ್ಪಸಂಖ್ಯಾತರಿಗೆ ಮಾತ್ರ ಮೀಸಲಾಗಿಡಲ್ಪಟ್ಟಿರುವ ಮಾಂಸವಾಗಿರುವುದಿಲ್ಲ. ಈ ಅಪೂರ್ವ ಪಕ್ಷಿಯು ಇಷ್ಟು ಹೇರಳವಾಗಿ ಲಭ್ಯವಾದದ್ದು ಮತ್ತು ಜನಪ್ರಿಯವಾದದ್ದು ಹೇಗೆ? ಮತ್ತು ಬಡ ರಾಷ್ಟ್ರಗಳ ಕುರಿತಾಗಿ ಏನು? ಅವುಗಳು ಕೂಡ ಈ ಸಮೃದ್ಧಿಯಲ್ಲಿ ಪಾಲ್ಗೊಳ್ಳುವ ಯಾವುದೇ ಸಂಭಾವ್ಯತೆಯಿದೆಯೊ?

ಈ ಪಕ್ಷಿಯ ದಾಖಲೆ

ಈ ಪಕ್ಷಿಯು, ಏಷಿಯಾ ಖಂಡದ ಕೆಂಪು ಕಾಡುಕೋಳಿಯ ವಂಶದ್ದಾಗಿದೆ. ಕೋಳಿಗಳನ್ನು ಸುಲಭವಾಗಿ ಪಳಗಿಸಬಹುದೆಂದು ಮನುಷ್ಯನು ಬೇಗನೆ ಕಂಡುಹಿಡಿದನು. ಸುಮಾರು 2,000 ವರ್ಷಗಳ ಹಿಂದೆಯೇ, ಯೇಸು ಕ್ರಿಸ್ತನು ಒಂದು ಕೋಳಿ ತನ್ನ ಮರಿಗಳನ್ನು ತನ್ನ ಸಂರಕ್ಷಕ ರೆಕ್ಕೆಗಳ ಕೆಳಗೆ ಕೂಡಿಸುವುದರ ಬಗ್ಗೆ ಸೂಚಿಸಿ ಮಾತಾಡಿದನು. (ಮತ್ತಾಯ 23:37; 26:34) ಅವನು ಈ ದೃಷ್ಟಾಂತವನ್ನು ಉಪಯೋಗಿಸಿದ್ದು, ಸಾಮಾನ್ಯ ಜನರು ಈ ಪಕ್ಷಿಯೊಂದಿಗೆ ಪರಿಚಿತರಾಗಿದ್ದರೆಂಬುದನ್ನು ತೋರಿಸುತ್ತದೆ. ಆದರೆ, ಕೋಳಿಗಳ ಮತ್ತು ಮೊಟ್ಟೆಗಳ ರಾಶಿ ಉತ್ಪಾದನೆಯು ಒಂದು ವ್ಯಾಪಾರೀ ಉದ್ಯಮವಾದದ್ದು 19ನೆಯ ಶತಮಾನದಲ್ಲೇ.

ಇಂದು ಪಕ್ಷಿಮಾಂಸದಲ್ಲಿ ಕೋಳಿಮಾಂಸವೇ ಅತಿ ಜನಪ್ರಿಯವಾದ ಮಾಂಸವಾಗಿಬಿಟ್ಟಿದೆ. ನಗರದಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನೂ ಸೇರಿಸಿ, ಕೋಟಿಗಟ್ಟಲೆ ಕುಟುಂಬಗಳು, ಮನೆ ಬಳಕೆಗಾಗಲಿ ವ್ಯಾಪಾರೀ ಉದ್ದೇಶಗಳಿಗಾಗಲಿ ಕೋಳಿ ಸಾಕಣೆಮಾಡುತ್ತಾರೆ. ನಿಜ ಸಂಗತಿಯೇನೆಂದರೆ, ಕೋಳಿಗಳನ್ನು ಹೇಗೆ ಭೂಲೋಕದ ಅನೇಕ ವಿಭಿನ್ನ ನಿವೇಶನಗಳಲ್ಲಿ ಸಾಕಬಹುದೋ ಆ ರೀತಿಯಲ್ಲಿ ಹೆಚ್ಚಿನ ಫಾರ್ಮ್‌ ಪ್ರಾಣಿಗಳನ್ನು ಸಾಕಲು ಸಾಧ್ಯವಿಲ್ಲ. ಅನೇಕ ದೇಶಗಳು ಕೇವಲ ತಮ್ಮ ದೇಶದ ಹವಾಗುಣಕ್ಕೆ ಮತ್ತು ಅಗತ್ಯಗಳಿಗೆ ಹೊಂದುವಂಥ ತಳಿಯ ಕೋಳಿಗಳನ್ನು ಬೆಳೆಸಿದ್ದಾರೆ. ಇವುಗಳಲ್ಲಿ ಕೆಲವು, ಆಸ್ಟ್ರೇಲಿಯದ ಆಸ್ಟ್ರೋಲಾರ್ಪ್‌; ಮೂಲತಃ ಭೂಮಧ್ಯ ಕ್ಷೇತ್ರದಿಂದ ಬಂದಿರುವುದಾದರೂ, ಅಮೆರಿಕದಲ್ಲಿ ತುಂಬ ಜನಪ್ರಿಯವಾಗಿರುವ ಸುಪ್ರಸಿದ್ಧವಾದ ಲೆಗ್‌ಹಾರ್ನ್‌; ನ್ಯೂ ಹ್ಯಾಂಪ್‌ಷೈರ್‌, ಪ್ಲಿಮತ್‌ ರಾಕ್‌, ರ್ಹೋಡ್‌ ಐಲೆಂಡ್‌ ರೆಡ್‌, ವೈಯಾಂಡಟ್‌, ಇವೆಲ್ಲವೂ ಅಮೆರಿಕದಲ್ಲಿ ಬೆಳೆಸಲ್ಪಡುತ್ತವೆ; ಮತ್ತು ಇಂಗ್ಲೆಂಡಿನ ಮೂಲದವುಗಳು, ಕಾರ್ನಿಷ್‌, ಆರ್ಪಿಂಗ್ಟನ್‌ ಮತ್ತು ಸಸೆಕ್ಸ್‌ ಕೋಳಿಗಳಾಗಿವೆ.

ಪಕ್ಷಿಗಳ ಸಾಕಣೆಯ ಕ್ಷೇತ್ರದಲ್ಲಿ ಅಭಿವೃದ್ಧಿಗೊಂಡಿರುವ ವೈಜ್ಞಾನಿಕ ವಿಧಾನಗಳಿಂದಾಗಿ, ಕೋಳಿ ಸಾಕಣೆಯು ತುಂಬ ಯಶಸ್ವೀ ಕೃಷಿ ಕೈಗಾರಿಕೆಯಾಗಿಬಿಟ್ಟಿದೆ. ಅಮೆರಿಕದಲ್ಲಿ ರೈತರು, ವೈಜ್ಞಾನಿಕ ರೋಗ ನಿರೋಧಕ ಕ್ರಮದೊಂದಿಗೆ, ಉಣಿಸುವ ಮತ್ತು ಗೂಡುಗಳಲ್ಲಿಡುವ ಜಾಗರೂಕ ಪೋಷಣಾ ವಿಧಾನಗಳನ್ನು ಬಳಸುತ್ತಾರೆ. ಈ ರಾಶಿ ಉತ್ಪಾದನೆ ತಂತ್ರಗಳನ್ನು ಅನೇಕ ಜನರು ಕ್ರೂರವಾದದ್ದೆಂದು ಖಂಡಿಸುತ್ತಾರೆ. ಆದರೆ ಇದು, ಈ ಪಕ್ಷಿಗಳ ತಳಿಯನ್ನು ಬೆಳೆಸುವುದರ ಹೆಚ್ಚೆಚ್ಚು ಪರಿಣಾಮಕಾರಿ ವಿಧಗಳನ್ನು ವಿಕಸಿಸುವುದರಿಂದ ರೈತರನ್ನು ತಡೆಗಟ್ಟಿಲ್ಲ. ಆಧುನಿಕ ವಿಧಾನಗಳಿಂದಾಗಿ, ಈಗ ಕೇವಲ ಒಬ್ಬ ವ್ಯಕ್ತಿಯು 25,000ದಿಂದ ಹಿಡಿದು 50,000ದಷ್ಟು ಕೋಳಿಗಳನ್ನು ನೋಡಿಕೊಳ್ಳಬಲ್ಲನು. ಕೇವಲ ಮೂರೇ ತಿಂಗಳುಗಳಲ್ಲಿ ಈ ಕೋಳಿಗಳು ಮಾರಾಟಕ್ಕಾಗಿ ಬೇಕಾಗುವ ತೂಕವನ್ನು ಪಡೆದುಕೊಳ್ಳುತ್ತವೆ. *

ಮಾಂಸದ ಮೂಲ

ನೀವು ಯಾವುದೇ ಹೋಟೆಲ್‌, ರೆಸ್ಟರಾಂಟ್‌, ಅಥವಾ ಹಳ್ಳಿಯಲ್ಲಿನ ಖಾನಾವಳಿಗೆ ಹೋದರೂ, ಅವುಗಳ ಮೆನುವಿನಲ್ಲಿ ಈ ಸಾಕು ಪಕ್ಷಿಯ ಮಾಂಸವನ್ನು ತಪ್ಪದೇ ಕಾಣುವಿರಿ. ಲೋಕದಲ್ಲೆಲ್ಲ ಇರುವ ಫಾಸ್ಟ್‌ ಫುಡ್‌ ರೆಸ್ಟರಾಂಟ್‌ಗಳಲ್ಲಿ, ಕೋಳಿಮಾಂಸದ ವಿಶೇಷ ಭಕ್ಷ್ಯಗಳು ಇರುತ್ತವೆ. ವಿಶೇಷವಾದ ಸಮಾರಂಭಗಳಿಗಾಗಿ ಕೋಳಿಮಾಂಸವು ಖಂಡಿತವಾಗಿಯೂ ಇರಲೇಬೇಕಾದ ಸಮಾಜಗಳು ಈಗಲೂ ಇವೆ. ಮತ್ತು ಕೆಲವೊಂದು ದೇಶಗಳಲ್ಲಿ, ಉದಾಹರಣೆಗೆ ಭಾರತದಲ್ಲಿ ಈ ಪಕ್ಷಿಯನ್ನು ತಟ್ಟೆಯ ಮೇಲೆ ಬಡಿಸುವ ಅತ್ಯಾಕರ್ಷಕ ವಿಧಾನಗಳನ್ನು ವಿಕಸಿಸಲಾಗಿದೆ. ಲಾಲ್‌ ಮುರ್ಗಿಯಂಥ ಕೆಂಪು ಮೆಣಸಿನಿಂದ ಲೇಪಿತ ಕೋಳಿಮಾಂಸ, ಕುರ್ಗಿ ಮುರ್ಗಿ ಎಂಬ ಚೂರುಚೂರು ಮಾಡಲ್ಪಟ್ಟಿರುವ ಕೋಳಿಮಾಂಸ, ಅದ್ರಕ್‌ ಮುರ್ಗಿ ಎಂಬ ಶುಂಠಿಯೊಂದಿಗೆ ಬೇಯಿಸಲ್ಪಟ್ಟಿರುವ ಕೋಳಿಮಾಂಸವು, ನಾಲಗೆ ಚಪ್ಪರಿಸುವಂತೆ ಮಾಡುತ್ತವೆ!

ಕೋಳಿಮಾಂಸವನ್ನು ಜನರು ಏಕೆ ಇಷ್ಟೊಂದು ಇಷ್ಟಪಡುತ್ತಾರೆ? ಒಂದು ಕಾರಣವೇನೆಂದರೆ, ಅದರಂತೆ ಭಿನ್ನಭಿನ್ನ ಮಸಾಲೆಗಳೊಂದಿಗೆ ಬೆರೆಯುವ ಆಹಾರಗಳು ತುಂಬ ಕಡಿಮೆ. ನೀವು ಅದನ್ನು ಹೇಗೆ ತಿನ್ನಲು ಇಷ್ಟಪಡುತ್ತೀರಿ? ಹುರಿದದ್ದೋ, ಸುಡಲ್ಪಟ್ಟದ್ದೋ, ಬೇಯಿಸಿದ್ದೋ, ಮೇಲೆ ಕೆಳಗೆ ಕೆಂಡ ಹಾಕಿ ಬೇಯಿಸಿದಂಥದ್ದೋ ಅಥವಾ ಸಾರು ಮಾಡಿದ್ದೋ? ಯಾವುದೇ ಪಾಕಪುಸ್ತಕವನ್ನು ತೆರೆದರೂ ಅದರಲ್ಲಿ ಕೋಳಿಮಾಂಸದ ಪ್ರತಿಯೊಂದು ತುಂಡನ್ನು ತುಂಬ ರುಚಿಕರವನ್ನಾಗಿ ಮಾಡಲು ವಿನ್ಯಾಸಿಸಲ್ಪಟ್ಟಿರುವ ಹತ್ತಾರು ಪಾಕ ವಿಧಾನಗಳನ್ನು ನೀವು ಕಂಡುಕೊಳ್ಳಬಹುದು.

ಕೋಳಿಮಾಂಸವು ಅನೇಕ ದೇಶಗಳಲ್ಲಿ ಲಭ್ಯವಿರುವುದರಿಂದ, ತುಲನಾತ್ಮಕವಾಗಿ ಅದು ಕಡಿಮೆ ಬೆಲೆಯದ್ದೂ ಆಗಿದೆ. ಪೌಷ್ಟಿಕಾಂಶಗಳ ತಜ್ಞರು ಸಹ ಅದನ್ನು ಇಷ್ಟಪಡುತ್ತಾರೆ. ಯಾಕೆಂದರೆ ಒಬ್ಬ ವ್ಯಕ್ತಿಯ ದೇಹಕ್ಕೆ ಅತ್ಯಾವಶ್ಯಕವಾಗಿರುವ ಸಸಾರಜನಕಗಳು, ಜೀವಸತ್ವಗಳು ಮತ್ತು ಖನಿಜ ಪದಾರ್ಥಗಳು ಅದರಲ್ಲಿವೆ. ಮತ್ತು ಕೋಳಿಮಾಂಸದಲ್ಲಿ ಕ್ಯಾಲೊರಿಗಳು, ಸ್ವಾಭಾವಿಕ ಕೊಬ್ಬುಗಳು, ಹಾಗೂ ಇತರ ಕೊಬ್ಬುಗಳು ತುಂಬ ಕಡಿಮೆ ಇವೆ.

ಅಭಿವೃದ್ಧಿಶೀಲ ದೇಶಗಳಿಗೆ ಉಣಿಸುವುದು

ಎಲ್ಲ ದೇಶಗಳಲ್ಲೂ ಈ ಕೋಳಿ ಉತ್ಪಾದನೆಗಳು ಹೇರಳವಾಗಿ ಲಭ್ಯವಿಲ್ಲ ಎಂಬುದು ನಿಜ. ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಕೆಲಸಮಾಡುತ್ತಿದ್ದ ಒಂದು ತಂಡದ ವರದಿಯನ್ನು ಪರಿಗಣಿಸುವಾಗ ಇದು ಗಮನಾರ್ಹವಾಗಿದೆ. ಆ ವರದಿಯು ಹೇಳಿದ್ದು: “ಇಸವಿ 2020ರೊಳಗೆ ಲೋಕದ ಜನಸಂಖ್ಯೆಯು 770 ಕೋಟಿಗೇರುವುದೆಂದು ಊಹಿಸಲಾಗಿದೆ. . . . ಆದರೆ ಈ ಜನಸಂಖ್ಯೆ ವೃದ್ಧಿಯಲ್ಲಿ ಅಧಿಕಾಂಶ ಭಾಗವು (95%) ಅಭಿವೃದ್ಧಿಶೀಲ ದೇಶಗಳಲ್ಲಿ ನಡೆಯುವುದೆಂದು ಭವಿಷ್ಯನುಡಿಯಲಾಗಿದೆ.” ಈಗಾಗಲೇ ಸುಮಾರು 80 ಕೋಟಿ ಜನರು ನ್ಯೂನಪೋಷಣೆಯಿಂದಾಗಿ ನರಳುತ್ತಿದ್ದಾರೆಂಬುದನ್ನು ಪರಿಗಣಿಸುವಾಗ, ಆ ಹೇಳಿಕೆಯು ಇನ್ನೂ ಹೆಚ್ಚು ಅರ್ಥಗರ್ಭಿತವಾಗುತ್ತದೆ!

ಹಾಗಿದ್ದರೂ, ಕೋಳಿಮಾಂಸವು ಈ ಹಸಿದಿರುವ ಜನಸಮೂಹಗಳನ್ನು ಉಣಿಸಬಲ್ಲದು ಮತ್ತು ರೈತರಿಗೆ ತುಂಬ ಅಗತ್ಯವಾಗಿರುವ ವರಮಾನವನ್ನು ಒದಗಿಸಬಲ್ಲದೆಂದು ಅನೇಕ ತಜ್ಞರಿಗೆ ಅನಿಸುತ್ತದೆ. ಈ ಪಕ್ಷಿಗಳ ದೊಡ್ಡ ಪ್ರಮಾಣದ ತಳಿಬೆಳೆಸುವಿಕೆಯು ಬಡ ರೈತರಿಗೆ ಒಂದು ದೊಡ್ಡ ಪಂಥಾಹ್ವಾನವಾಗಿರಬಲ್ಲದೆಂಬುದೇ ಸಮಸ್ಯೆಯಾಗಿದೆ. ಒಂದು ಕಾರಣವೇನೆಂದರೆ, ಹೆಚ್ಚು ಬಡ ರಾಷ್ಟ್ರಗಳಲ್ಲಿ ಕೋಳಿಗಳನ್ನು ಚಿಕ್ಕದಾದ, ರೈತಾಪಿ ಫಾರ್ಮ್‌ಗಳಲ್ಲಿ ಇಲ್ಲವೇ ಮನೆಯ ಹಿಂದಿನ ಹಿತ್ತಲಲ್ಲಿ ಸಾಕಲಾಗುತ್ತದೆ. ಮತ್ತು ಇಂಥ ದೇಶಗಳಲ್ಲಿ ಕೋಳಿಗಳನ್ನು ಸಂರಕ್ಷಕ ವಾತಾವರಣದಲ್ಲಿರಿಸುವುದು ತೀರ ವಿರಳ. ಈ ಪಕ್ಷಿಗಳು ದಿನವೆಲ್ಲ ಮುಕ್ತವಾಗಿ ಸುತ್ತಾಡಿ, ಆಹಾರಕ್ಕಾಗಿ ಹುಡುಕಾಡುವಂತೆ ಬಿಡಲ್ಪಡುತ್ತವೆ, ರಾತ್ರಿ ಸಮಯದಲ್ಲಿ ಅವು ಮನೆಗೆ ಹಿಂದಿರುಗುತ್ತವೆ ಮತ್ತು ಕೆಲವೊಮ್ಮೆ ಮರಗಳ ಮೇಲೆ ಮಲಗುತ್ತವೆ ಇಲ್ಲವೇ ಲೋಹದ ಪಂಜರಗಳಲ್ಲಿ ಜೀವಿಸುತ್ತವೆ.

ಇಂಥ ವಿಧಾನಗಳ ಮೂಲಕ ಸಾಕಲ್ಪಟ್ಟಿರುವ ಹೆಚ್ಚಿನ ಕೋಳಿಗಳು ಸಾಯುವುದು ಆಶ್ಚರ್ಯದ ಸಂಗತಿಯೇನಲ್ಲ. ಕೆಲವೊಂದು ಕೋಳಿಗಳು, ಮಾರಕವಾದ ನ್ಯೂಕ್ಯಾಸಲ್‌ ರೋಗಕ್ಕೆ ತುತ್ತಾಗುತ್ತವೆ ಮತ್ತು ಇನ್ನು ಕೆಲವು ಪರಭಕ್ಷಕ ಪ್ರಾಣಿ ಮತ್ತು ಮನುಷ್ಯರಿಗೆ ಬಲಿಯಾಗುತ್ತವೆ. ಹೆಚ್ಚಿನ ರೈತರಿಗೆ, ತಮ್ಮ ಕೋಳಿಗಳನ್ನು ಸರಿಯಾದ ರೀತಿಯಲ್ಲಿ ಉಣಿಸುವ, ಸರಿಯಾದ ಗೂಡುಗಳಲ್ಲಿರಿಸುವ ಇಲ್ಲವೇ ರೋಗಗಳಿಂದ ಅವುಗಳನ್ನು ಸಂರಕ್ಷಿಸುವ ವಿಧಿವಿಧಾನ ತಿಳಿದಿರುವುದಿಲ್ಲ, ಇಲ್ಲವೇ ಹಾಗೆ ಮಾಡಲು ಸಾಕಷ್ಟು ಹಣವಿರುವುದಿಲ್ಲ. ಈ ಕಾರಣಕ್ಕಾಗಿ, ಅಭಿವೃದ್ಧಿಶೀಲ ದೇಶಗಳಲ್ಲಿರುವ ರೈತರಿಗೆ ಶಿಕ್ಷಣವನ್ನು ಕೊಡಲು ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ಉದಾಹರಣೆಗಾಗಿ, ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಇಲಾಖೆಯು, “ಹೆಚ್ಚಿಸಲ್ಪಟ್ಟ ಕೋಳಿ ಉತ್ಪಾದನೆಯ ಮೂಲಕ ಆಫ್ರಿಕದಲ್ಲಿರುವ ಗ್ರಾಮೀಣ ಬಡವರಿಗೆ ಪ್ರಯೋಜನ ತರಲಿಕ್ಕಾಗಿ” ಒಂದು ಪಂಚವಾರ್ಷಿಕ ಕಾರ್ಯಯೋಜನೆಯನ್ನು ಇತ್ತೀಚೆಗೆ ಆರಂಭಿಸಿತು.

ಇಂಥ ಸದುದ್ದೇಶವುಳ್ಳ ಗುರಿಗಳ ಅಂತಿಮ ಫಲಿತಾಂಶವೇನಾಗಿರುವುದು ಎಂಬುದನ್ನು ಕಾದು ನೋಡಬೇಕಷ್ಟೇ. ಆದುದರಿಂದ, ಕೋಳಿಮಾಂಸದ ಒಂದು ತುಂಡಿನಷ್ಟು ಸಾಮಾನ್ಯವಾದ ವಿಷಯವು, ಜಗತ್ತಿನ ಹೆಚ್ಚಿನ ನಿವಾಸಿಗಳಿಗೆ ಒಂದು ಭೋಗವಸ್ತುವಾಗಿದೆ ಎಂಬ ವಾಸ್ತವಾಂಶದ ಕುರಿತಾಗಿ ಧನಿಕ ರಾಷ್ಟ್ರಗಳ ನಿವಾಸಿಗಳು ಯೋಚಿಸಿ ನೋಡಬಹುದು. ಅಂಥವರಿಗೆ, ಕೋಳಿಮಾಂಸವು ಪ್ರತಿಯೊಂದು ಕುಟುಂಬದ ಆರ್ಥಿಕ ಸ್ಥಿತಿಗತಿಗೆ ಎಟುಕುವಂಥ ಬೆಲೆಯದ್ದಾಗಿರುವುದೆಂಬ ವಿಚಾರವು ಒಂದು ಗಗನಕುಸುಮದಂತೆ ತೋರಬಹುದು.(g01 10/8)

[ಪಾದಟಿಪ್ಪಣಿ]

^ ಕೋಳಿಗಳನ್ನು ಮೊಟ್ಟೆಗಳಿಗಾಗಿಯೂ ಸಾಕಲಾಗುತ್ತದಾದರೂ, ಅಮೆರಿಕದಲ್ಲಿ 90 ಪ್ರತಿಶತ ಕೋಳಿಗಳನ್ನು ಅವುಗಳ ಮಾಂಸಕ್ಕಾಗಿ ಸಾಕಲಾಗುತ್ತದೆ.

[ಪುಟ 25ರಲ್ಲಿರುವ ಚೌಕ/ಚಿತ್ರಗಳು]

ಹಸಿ ಕೋಳಿಮಾಂಸವನ್ನು ಸುರಕ್ಷಿತವಾಗಿ ನಿರ್ವಹಿಸುವ ವಿಧ

“ಹಸಿ ಕೋಳಿಮಾಂಸದಲ್ಲಿ, ಸಾಲ್‌ಮೊನೆಲ್ಲಾ ಅಣುಜೀವಿಯಂಥ ಹಾನಿಕರವಾಗಿ ಪರಿಣಮಿಸುವ ಸಾಧ್ಯತೆಯುಳ್ಳ ಜೀವಿಗಳಿರಬಹುದು. ಆದುದರಿಂದ ಅದನ್ನು ಅಡಿಗೆಮಾಡುವಾಗ ಜಾಗ್ರತೆವಹಿಸುವುದು ಅತ್ಯಾವಶ್ಯಕ. ಹಸಿ ಕೋಳಿಮಾಂಸವನ್ನು ಮುಟ್ಟುವ ಮುಂಚೆ ಮತ್ತು ಅನಂತರ ಯಾವಾಗಲೂ ನಿಮ್ಮ ಕೈಗಳನ್ನು, ಕತ್ತರಿಸುವ ಬೋರ್ಡನ್ನು, ಕತ್ತಿಯನ್ನು ಮತ್ತು ಮಾಂಸವನ್ನು ಕತ್ತರಿಸುವ ಸಾಧನವನ್ನು ಬಿಸಿಬಿಸಿ, ಸಾಬೂನು ನೀರಿನಲ್ಲಿ ತೊಳೆಯಿರಿ. ತುಂಬ ಬಿಸಿಯಾದ ನೀರಿನಲ್ಲಿ ತೊಳೆಯಬಹುದಾದಂಥ ಕತ್ತರಿಸುವ ಬೋರ್ಡನ್ನು ಬಳಸುವುದು . . . ಮತ್ತು ಸಾಧ್ಯವಿರುವಲ್ಲಿ, ಈ ಬೋರ್ಡನ್ನು ಹಸಿಮಾಂಸವನ್ನು ಕತ್ತರಿಸಲಿಕ್ಕಾಗಿ ಮಾತ್ರ ಬಳಸುವುದು ಒಳ್ಳೇದು. ಅಡಿಗೆಮಾಡುವ ಮುಂಚೆ, ಹೆಪ್ಪುಗಟ್ಟಿರುವ ಕೋಳಿಮಾಂಸವು ಚೆನ್ನಾಗಿ ಕರಗಲಿ.”​—⁠ದ ಕುಕ್ಸ್‌ ಕಿಚನ್‌ ಬೈಬಲ್‌.

[ಪುಟ 23ರಲ್ಲಿರುವ ಚಿತ್ರಗಳು]

ಕೋಳಿಗಳ ಕೆಲವೊಂದು ತಳಿಗಳು: ವೈಟ್‌ ಲೆಗ್‌ಹಾರ್ನ್‌, ಗ್ರೇ ಜಂಗಲ್‌ ಫೌಲ್‌, ಆರ್ಪಿಂಗ್ಟನ್‌, ಪೊಲಿಷ್‌ ಮತ್ತು ಸ್ಪೆಕಲ್ಡ್‌ ಸಸೆಕ್ಸ್‌

[ಕೃಪೆ]

ವೈಟ್‌ ಲೆಗ್‌ಹಾರ್ನ್‌ ಅನ್ನು ಬಿಟ್ಟು ಬೇರೆಲ್ಲವೂ: © Barry Koffler/www.feathersite.com

[ಪುಟ 24ರಲ್ಲಿರುವ ಚಿತ್ರಗಳು]

ಅಭಿವೃದ್ಧಿಶೀಲ ದೇಶಗಳಲ್ಲಿ ಕೋಳಿಮಾಂಸದ ಉತ್ಪಾದನೆಯನ್ನು ಹೆಚ್ಚಿಸಲಿಕ್ಕಾಗಿ ರೈತರಿಗೆ ಸಹಾಯಮಾಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ

[ಪುಟ 24ರಲ್ಲಿರುವ ಚಿತ್ರಗಳು]

ಅಮೆರಿಕದಲ್ಲಿ, 90 ಪ್ರತಿಶತ ಕೋಳಿಗಳನ್ನು ಮಾಂಸಕ್ಕಾಗಿ ಸಾಕಲಾಗುತ್ತದೆ