ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಮಳೆಕಾಡುಗಳು

ಭಾರತದಲ್ಲಿ ಮಳೆಕಾಡುಗಳು ಕೇವಲ ದಕ್ಷಿಣ ರಾಜ್ಯವಾದ ಕೇರಳದಲ್ಲಿವೆ ಎಂದೆಣಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಸೌಮ್ಯದೀಪ್‌ ದತ್ತ ಎಂಬ ಪರಿಸರವಾದಿಯು, ಈಶಾನ್ಯ ರಾಜ್ಯಗಳಾದ ಆಸ್ಸಾಮ್‌ ಮತ್ತು ಅರುಣಾಚಲ ಪ್ರದೇಶವನ್ನು ಜೋಡಿಸುವ, 500 ಚದರ ಕಿಲೋಮೀಟರ್‌ ವ್ಯಾಪ್ತಿಯ ಮಳೆ​ಕಾಡನ್ನು ಕಂಡುಹಿಡಿದರು. ಇದನ್ನು ಡೌನ್‌ ಟು ಅರ್ತ್‌  ಎಂಬ ನವ ದೆಹಲಿಯ ಪತ್ರಿಕೆಯೊಂದು ವರದಿಸುತ್ತದೆ. ಈ ಕಾಡು ವಿಭಿನ್ನ ಪ್ರಕಾರದ ವನ್ಯಜೀವಿಗಳನ್ನು ಪೋಷಿಸುತ್ತದೆ. ಅದರಲ್ಲಿ “32 ಜಾತಿಗಳ ಸಸ್ತನಿಗಳು, 260 ಜಾತಿಗಳ ಪಕ್ಷಿಗಳು ಇವೆ. ಇದರಲ್ಲಿ ಆನೆ, ಹುಲಿ, ಮತ್ತು ಮಚ್ಚೆ ಚಿರತೆ, ಚೀನೀ ಪ್ಯಾಂಗೋಲಿನ್‌, ಸ್ಲಾತ್‌ ಕರಡಿ, ಜಿಂಕೆ, ಹೂಲಾಕ್‌ ಗಿಬನ್‌ ಕೋತಿಗಳು, ಕಲಿಜ್‌ ಫೆಸೆಂಟ್‌ ಹಕ್ಕಿಗಳು, ಹಾರ್ನ್‌ಬಿಲ್‌ ಹಕ್ಕಿಗಳು, ಮತ್ತು ಕಾಡು ಬಾತುಕೋಳಿಗಳಂಥ ಅಪರೂಪದ ಜಾತಿಗಳು ಸೇರಿವೆ.” ಆದರೆ, ಕಾಡಿನ ಉತ್ಪಾದನೆಗಳಿಗಾಗಿರುವ ಅಂತಾರಾಷ್ಟ್ರೀಯ ಬೇಡಿಕೆಯು, ಅನೇಕ ಮಳೆಕಾಡುಗಳಿಗೆ ಬೆದರಿಕೆಯನ್ನೊಡ್ಡುತ್ತಿದೆ ಎಂದು ಡೌನ್‌ ಟು ಅರ್ತ್‌  ಪತ್ರಿಕೆಯು ಹೇಳುತ್ತದೆ. ಅತಿಯಾದ ಕಡಿತದ ಕಾರಣ ಅಂಥ ಉತ್ಪಾದನೆಗಳು ಬರಿದಾಗುವಲ್ಲಿ, ಮಳೆಕಾಡುಗಳು ಇನ್ನು ಮುಂದೆ ರಕ್ಷಿಸಲ್ಪಡದೇ, ಕೇವಲ ವ್ಯವಸಾಯಕ್ಕಾಗಿ ಉಪಯೋಗಿಸಲ್ಪಡುವವೆಂದು ಕೆಲವು ನಿಸರ್ಗವಾದಿಗಳು ಭಯಪಡುತ್ತಾರೆ.(g01 10/8)

ಮಲೇರಿಯ ಔಷಧವು ಈಗ ಪರಿಣಾಮಕಾರಿಯಾಗಿಲ್ಲ

‘ಸಾಂಬಿಯದಲ್ಲಿ ಮಲೇರಿಯ ನಿವಾರಕ ಔಷಧಿಯೆಂದು ಶಿಫಾರಸ್ಸುಮಾಡಲಾಗುವ ಕ್ಲೊರೋಕ್ವೀನ್‌ ಅನ್ನು, ಎಲ್ಲ ಸರಕಾರಿ ಔಷಧದಂಗಡಿಗಳಲ್ಲಿ ಆ ರೋಗದ ಚಿಕಿತ್ಸೆಗಾಗಿ ಮೊತ್ತಮೊದಲ ಕ್ರಮದೋಪಾದಿ ಬಳಸುವುದನ್ನು ನಿಲ್ಲಿಸಿ,’ ಅದರ ಬದಲಿಗೆ ಇನ್ನೂ ಹೆಚ್ಚು ಪರಿಣಾಮಕಾರಿಯಾದ ಔಷಧವನ್ನು ಬಳಸಬೇಕು ಎಂದು ಟೈಮ್ಸ್‌ ಆಫ್‌ ಸಾಂಬಿಯ  ವಾರ್ತಾಪತ್ರಿಕೆಯು ವರದಿಸುತ್ತದೆ. “ದೇಹದಲ್ಲಿನ ಕ್ಲೊರೋಕ್ವೀನ್‌ ಅನ್ನು ನಿರೋಧಿಸುವ ಶಕ್ತಿಯಿಂದಾಗಿ, ಪ್ರತಿ ವರ್ಷ ಸಾಂಬಿಯದಲ್ಲಿ ಐದು ವರ್ಷಗಳಿಗಿಂತ ಚಿಕ್ಕ ಪ್ರಾಯದ 12,000 ದಿಂದ ಹಿಡಿದು 25,000 ಮಕ್ಕಳು ಮಲೇರಿಯದಿಂದ ಸಾಯುತ್ತಾರೆ” ಎಂಬುದನ್ನು ತೋರಿಸಿದ ಒಂದು ಸಮೀಕ್ಷೆಯ ನಂತರ, ಈ ಔಷಧವನ್ನು ನಿರ್ಮೂಲನಮಾಡುವ ಕಾರ್ಯಾಚರಣೆಯು ಆರಂಭವಾಯಿತು. ಈ ಸಂಪೂರ್ಣ ಬದಲಾವಣೆಯನ್ನು, ಇತರ ಪೌರಾತ್ಯ ಮತ್ತು ದಕ್ಷಿಣ ಆಫ್ರಿಕದ ಹೆಚ್ಚಿನ ದೇಶಗಳಲ್ಲೂ ಜಾರಿಗೆ ತರಲಾಗಿದೆ. “ಕ್ಲೊರೋಕ್ವೀನ್‌ ಔಷಧವು 30 ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಈ ದೇಶದಲ್ಲಿ ಪರಿಣಾಮಕಾರಿಯಾಗಿ ಕೆಲಸಮಾಡಿದ್ದರೂ, ಅದು ಈಗ ಮಲೇರಿಯ ಜ್ವರದ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿಲ್ಲ. ಮತ್ತು ಮಲೇರಿಯ ಈ ವರೆಗೂ ದೇಶದ ನಂಬರ್‌ ಒನ್‌ ಹಂತಕವಾಗಿ ಉಳಿದಿದೆ” ಎಂದು ಟೈಮ್ಸ್‌ ವಾರ್ತಾಪತ್ರಿಕೆಯು ಹೇಳುತ್ತದೆ.(g01 10/22)

ಆನೆಯಂಥ ಜ್ಞಾಪಕಶಕ್ತಿಯೊ?

ಕೆನ್ಯಾದ ಆ್ಯಂಬೊಸೆಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಕೆಲಸಮಾಡುತ್ತಿರುವ ಸಂಶೋಧಕರು, ಒಂದು ಆನೆ ಹಿಂಡಿನ ಬದುಕುಳಿಯುವಿಕೆಗಾಗಿ ಮುಖ್ಯ ಕೀಲಿ ಕೈ, ಆ ಹಿಂಡಿನಲ್ಲಿರುವ ಅತಿ ವೃದ್ಧ ಹೆಣ್ಣಾನೆಯ ಜ್ಞಾಪಕಶಕ್ತಿಯೇ ಆಗಿದೆ ಎಂಬುದನ್ನು ಕಂಡುಹಿಡಿದಿದ್ದಾರೆ. “ಈ ಮಾತೃಪ್ರಧಾನ ವ್ಯವಸ್ಥೆಯಲ್ಲಿ, ಹಿರಿಯಾನೆಗಳು ಅಂದರೆ ಕಡಿಮೆಪಕ್ಷ 55 ವರ್ಷ ಪ್ರಾಯದ ಹೆಣ್ಣಾನೆಗಳು, ಸ್ನೇಹಿತರು ಯಾರು ಮತ್ತು ಅಪರಿಚಿತರು ಯಾರೆಂಬುದನ್ನು ಗುರುತಿಸುವುದರಲ್ಲಿ . . . 35 ವರ್ಷ ಪ್ರಾಯದ ಹೆಣ್ಣಾನೆಗಳಿಗಿಂತಲೂ ಉತ್ತಮವಾಗಿವೆ” ಎಂದು ಸೈಎನ್ಸ್‌ ನ್ಯೂಸ್‌ ವರದಿಸುತ್ತದೆ. ಸಂಪರ್ಕ ಕರೆಗಳು ಎಂದು ಕರೆಯಲಾಗುವ ಕರೆಗಳನ್ನು ಇಲ್ಲವೇ ಕಡಿಮೆ ಕಂಪನದ ಸದ್ದುಗಳನ್ನು ನೆನಪಿನಲ್ಲಿಡುವ ಮೂಲಕ, ಈ ಹಿರಿಯ ಯಜಮಾನಿಗಳು ಅಪರಿಚಿತವಾದ ಕರೆಗಳನ್ನು ಗುರುತಿಸಿ, ಹಿಂಡನ್ನು ಒಂದು ರಕ್ಷಕ ಗುಂಪಾಗಿ ಕೂಡಿಸುತ್ತವೆ. “ಒಂದು ಹೆಣ್ಣಾನೆಯು, ಸುಮಾರು 100 ಸಮಾನಸ್ಥ ಆನೆಗಳನ್ನು ಅವುಗಳ ಕರೆಗಳಿಂದಲೇ ಗುರುತಿಸುತ್ತದೆ” ಎಂದು ಆ ವರದಿಯು ಹೇಳುತ್ತದೆ. ಹೀಗಿರುವುದರಿಂದ, ಕಳ್ಳ ಬೇಟೆಗಾರರು ಒಂದು ಹಿರಿಯ ಹೆಣ್ಣಾನೆಯನ್ನು ಕೊಲ್ಲುವಾಗ, ಇಡೀ ಹಿಂಡಿಗೆ ಮಾಹಿತಿಯ ದೊಡ್ಡ ಭಂಡಾರದ ನಷ್ಟವಾಗುತ್ತದೆ.(g01 11/22)

ಮದ್ಯ ಕುಡಿದು, ಸೈಕಲ್‌ ಓಡಿಸಬೇಡಿ

ಮದ್ಯಪಾನ ಮಾಡಿದ ನಂತರ ಸೈಕಲ್‌ ಸವಾರಿಮಾಡುವುದು, ಕುಡಿತದ ನಂತರ ಒಂದು ಕಾರನ್ನು ಚಲಾಯಿಸುವಷ್ಟೇ ಅಪಾಯಕಾರಿಯಾಗಿರಬಹುದು ಎಂದು ನ್ಯೂ ಸೈಎಂಟಿಸ್ಟ್‌  ಪತ್ರಿಕೆಯು ವರದಿಸುತ್ತದೆ. “ಸೈಕಲನ್ನು ಓಡಿಸಲು, ಒಂದು ಕಾರನ್ನು ಚಲಾಯಿಸುವುದಕ್ಕಿಂತಲೂ ಉಚ್ಚ ಮಟ್ಟದ ಮಾನಸ ಚಾಲನ ಕೌಶಲಗಳು ಮತ್ತು ಶಾರೀರಿಕ ಹೊಂದಾಣಿಕೆಗಳು ಬೇಕಾಗುತ್ತವೆ, ಆದುದರಿಂದ ಮದ್ಯವು ಇನ್ನೂ ಹೆಚ್ಚು ಬಲವಾದ ಪರಿಣಾಮ ಬೀರಬಲ್ಲದು” ಎಂದು ಅಮೆರಿಕದ ಮೇರಿಲ್ಯಾಂಡ್ಸ್‌ನಲ್ಲಿರುವ ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾನಿಲಯದ ಗುವಾಹುವಾ ಲೀ ಎಂಬವರು ಹೇಳುತ್ತಾರೆ. ಲೀ ಮತ್ತು ಅವರ ಸಹೋದ್ಯೋಗಿಗಳು 466 ಮಂದಿ ಸೈಕಲ್‌ ಸವಾರರ ಅಧ್ಯಯನ ನಡೆಸಿದರು, ಮತ್ತು ನಾಲ್ಕು ಅಥವಾ ಐದು ಪೆಗ್‌ ಕುಡಿದವರು, ಗಂಭೀರವಾಗಿ ಗಾಯಗೊಳ್ಳುವ ಇಲ್ಲವೇ ಕೊಲ್ಲಲ್ಪಡುವ ಸಾಧ್ಯತೆ 20 ಪಟ್ಟು ಹೆಚ್ಚಾಗಿರುತ್ತದೆ ಎಂಬುದನ್ನು ಕಂಡುಹಿಡಿದರು. ಕೇವಲ ಒಂದೇ ಪೆಗ್‌ ಕುಡಿಯುವುದು ಸಹ, ಸೈಕಲ್‌ ಸವಾರಿಯನ್ನು ಆರು ಪಟ್ಟು ಹೆಚ್ಚು ಅಪಾಯಕಾರಿಯನ್ನಾಗಿ ಮಾಡಿತು. “ಇನ್ನೂ ಕೆಟ್ಟ ಸಂಗತಿಯೇನೆಂದರೆ, ಸೈಕಲ್‌ ಸವಾರರು ಎಷ್ಟು ಹೆಚ್ಚು ಕುಡಿಯುತ್ತಾರೊ, ಅವರು ಒಂದು ಹೆಲ್ಮೆಟನ್ನು ಧರಿಸುವ ಸಂಭವನೀಯತೆಯು ಅಷ್ಟೇ ಕಡಿಮೆಯಾಗುತ್ತದೆ” ಎಂದು ನ್ಯೂ ಸೈಎಂಟಿಸ್ಟ್‌  ಹೇಳುತ್ತದೆ. (g01 10/22)

ಬಾಳೆಗಿಡಗಳಿಂದ ಕಾಗದ

ಬಾಳೆಗೊನೆಗಳನ್ನು ತೆಗೆದ ನಂತರ, ಹೆಚ್ಚಾಗಿ ಬಾಳೆದಿಂಡುಗಳನ್ನು ಗೊಬ್ಬರದೋಪಾದಿ ನೆಲದ ಮೇಲೆ ಹಾಗೆಯೇ ಬಿಡಲಾಗುತ್ತದೆ. ಆದರೆ ನಗೊಯಾ ಸಿಟಿ ವಿಶ್ವವಿದ್ಯಾನಿಲಯದ ಪ್ರೊಫೆಸರರಾದ ಹಿರೊಷಿ ಮೊರಿಶೀಮಾ ಎಂಬುವವರು ಬಾಳೆದಿಂಡುಗಳಿಂದ ಕಾಗದವನ್ನು ತಯಾರಿಸುವುದರಲ್ಲಿ ಸಫಲರಾಗಿದ್ದಾರೆಂದು ಜಪಾನಿನ ಆಸಾಹೀ ಶೀಂಬುನ್‌  ವಾರ್ತಾಪತ್ರಿಕೆಯು ವರದಿಸುತ್ತದೆ. ಆ ಗಿಡದ ನಾರುಗಳು “ಉದ್ದವಾಗಿರುತ್ತವೆ ಮತ್ತು ಗಟ್ಟಿಯಾಗಿರುತ್ತವೆ ಮತ್ತು ಮನಿಲ ನಾರಿನಿಂದ ಕಾಗದವನ್ನು ತಯಾರಿಸಲಿಕ್ಕಾಗಿ ಉಪಯೋಗಿಸಲಾಗುವ ಕಚ್ಚಾ ವಸ್ತುವಿನಷ್ಟೇ ಉತ್ತಮ ಗುಣಮಟ್ಟದ್ದಾಗಿರುತ್ತವೆ.” ಬಾಳೆದಿಂಡಿನ ಯಂತ್ರ-ಉತ್ಪಾದಿತ ಕಾಗದದ ಗುಣಮಟ್ಟವು, ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಕಾಪಿ ಕಾಗದದ ಗುಣಮಟ್ಟದ್ದೇ ಆಗಿರುತ್ತದೆ. ಮತ್ತು ಅದು ಪುನಃ ಬಳಸಲ್ಪಟ್ಟ ಕಾಪಿ ಕಾಗದಕ್ಕಿಂತಲೂ ಹೆಚ್ಚು ಗಟ್ಟಿಯಾಗಿರುವುದಾಗಿ ರುಜುವಾಗಿದೆ. “ಲೋಕದಾದ್ಯಂತ 123 ದೇಶಗಳಲ್ಲಿ ಮತ್ತು ವಾರ್ಷಿಕವಾಗಿ 5,80,00,000 ಟನ್ನುಗಳಷ್ಟು ಬಾಳೆಹಣ್ಣುಗಳನ್ನು ಉತ್ಪಾದಿಸಲಾಗುತ್ತದೆ. ಆದುದರಿಂದ ಅದು ಒಂದು ಲಾಭದಾಯಕ ಸಂಪನ್ಮೂಲವಾಗಿರುವ ಸಾಧ್ಯತೆಯಿದೆ” ಎಂದು ಆ ವಾರ್ತಾಪತ್ರಿಕೆಯು ಹೇಳುತ್ತದೆ. (g01 10/22)

ಧಾರ್ಮಿಕ ಲೂಟಿ

“ಶಾಸನವು ಹೆಚ್ಚು ಬಿಗಿಗೊಳಿಸಲ್ಪಟ್ಟರೂ, ಯೂರೋಪಿನಲ್ಲಿ ಧಾರ್ಮಿಕ ವಸ್ತುಗಳ ಕಳವು ಮತ್ತು ಕ್ರಯವಿಕ್ರಯವು ಮಾತ್ರ ಕಡಿಮೆಯಾಗುತ್ತಿಲ್ಲ” ಎಂದು ಲಾ ಕ್ವಾ  ಎಂಬ ಫ್ರೆಂಚ್‌ ಕ್ಯಾಥೊಲಿಕ್‌ ವಾರ್ತಾಪತ್ರಿಕೆಯು ಹೇಳುತ್ತದೆ. ಕಳವು ಮಾಡಲ್ಪಟ್ಟಿರುವ ವಸ್ತುಗಳಲ್ಲಿ, ಶಿಲುಬೆಗಳು, ಪೀಠೋಪಕರಣಗಳು, ಚಿನ್ನ ಮತ್ತು ಬೆಳ್ಳಿಯ ವಸ್ತುಗಳು, ಶಿಲ್ಪಕೃತಿಗಳು, ಕಲಾಕೃತಿಗಳು, ಮತ್ತು ಪವಿತ್ರಪೀಠಗಳೂ ಇವೆ. ವಸ್ತುಸಂಗ್ರಹಾಲಯಗಳ ಅಂತಾರಾಷ್ಟ್ರೀಯ ಸಭೆಗನುಸಾರ, ಇತ್ತೀಚಿನ ವರ್ಷಗಳಲ್ಲಿ ಚೆಕ್‌ ರಿಪಬ್ಲಿಕ್‌ನಲ್ಲಿ 30,000 ದಿಂದ 40,000 ವಸ್ತುಗಳು ಮತ್ತು ಇಟಲಿಯಲ್ಲಿ 88,000 ಕ್ಕಿಂತಲೂ ಹೆಚ್ಚು ವಸ್ತುಗಳು ಕದಿಯಲ್ಪಟ್ಟಿವೆ. 87 ಕತೀಡ್ರಲ್‌ಗಳಿರುವ ಫ್ರಾನ್ಸ್‌ ಸಹ ಕಳ್ಳರ ಮುಖ್ಯ ಗುರಿಯಾಗಿದೆ. 1907 ರಿಂದ 1996 ರ ನಡುವಿನ ಸಮಯದಲ್ಲಿ “ಐತಿಹಾಸಿಕ ಸ್ಮಾರಕಗಳೆಂದು” ಪರಿಗಣಿಸಲ್ಪಟ್ಟಿದ್ದ ಸುಮಾರು 2,000 ವಸ್ತುಗಳು, ಫ್ರಾನ್ಸ್‌ನಲ್ಲಿರುವ ಧಾರ್ಮಿಕ ಸಂಸ್ಥೆಗಳಿಂದ ಕದಿಯಲ್ಪಟ್ಟವು, ಮತ್ತು ಇವುಗಳಲ್ಲಿ 10 ಪ್ರತಿಶತಕ್ಕಿಂತಲೂ ಕಡಿಮೆ ವಸ್ತುಗಳನ್ನು ಮರಳಿಪಡೆಯಲಾಯಿತು. ಇಂಥ ಲೂಟಿಮಾಡುವಿಕೆಯನ್ನು ನಿಯಂತ್ರಿಸುವುದು ತುಂಬ ಕಷ್ಟ, ಯಾಕೆಂದರೆ ಚರ್ಚುಗಳೊಳಗೆ ಪ್ರವೇಶಿಸುವುದು ತುಂಬ ಸುಲಭ ಮತ್ತು ಅವುಗಳಿಗೆ ತೀರ ಕಡಿಮೆ ಭದ್ರತೆಯಿರುತ್ತದೆ. (g01 12/8)

ಹಾಲು ಉತ್ಪಾದನೆಯಲ್ಲಿ ಲೋಕ ನಾಯಕ

ಹಿಂದುಸ್ತಾನ್‌ ಟೈಮ್ಸ್‌  ವಾರ್ತಾಪತ್ರಿಕೆಗನುಸಾರ, ಈಗ ಭಾರತ ದೇಶವು ಜಗತ್ತಿನ ಹಾಲು ಉತ್ಪಾದಕರಲ್ಲಿ ಅಗ್ರಸ್ಥಾನದಲ್ಲಿದೆ. “ಪರಿಸರಾಭಿಮುಖಿ ವರ್ಲ್ಡ್‌ವಾಚ್‌ ಸಂಸ್ಥೆಯು [ಅಮೆರಿಕದ ವಾಷಿಂಗ್ಟನ್‌ ಡಿ.ಸಿ.ಯಲ್ಲಿದೆ] ಭಾರತದ ಹಾಲಿನ ಕ್ರಾಂತಿಯನ್ನು ಹೊಗಳಿದೆ” ಎಂದು ಆ ವರದಿಯು ತಿಳಿಸುತ್ತದೆ. “1994 ರಂದಿನಿಂದ, ಭಾರತದ ಹೈನು ಉತ್ಪಾದನೆಗಳಲ್ಲಿ ಹಾಲು ಮುಖ್ಯವಾಗಿತ್ತು ಮತ್ತು 1997 ರಲ್ಲಿ ಅದು ಅಮೆರಿಕವನ್ನು ಮೀರಿಸಿ, ಲೋಕದ ಅತಿ ದೊಡ್ಡ ಹಾಲು ಉತ್ಪಾದಕವಾಯಿತು.” ವರ್ಲ್ಡ್‌ವಾಚ್‌ ಸಂಸ್ಥೆಯ ಅಧ್ಯಕ್ಷರಾಗಿರುವ ಲೆಸ್ಟರ್‌ ಬ್ರೌನ್‌ರವರು ಹೀಗೆ ಹೇಳಿದರೆಂದು ಉಲ್ಲೇಖಿಸಲಾಗಿದೆ: “ಗಮನಾರ್ಹ ಸಂಗತಿಯೇನೆಂದರೆ, ಈ ಪ್ರಾಣಿಗಳ ಆಹಾರಕ್ಕಾಗಿ ಧಾನ್ಯವನ್ನು ಉಪಯೋಗಿಸುವ ಬದಲು, ಹೈನಿನ ಉಪಪದಾರ್ಥಗಳನ್ನು ಮತ್ತು ಬೆಳೆಯ ಉಳಿಕೆಗಳನ್ನು ಉಪಯೋಗಿಸುವ ಮೂಲಕ ಅದು ಇಷ್ಟೊಂದು ಹಾಲನ್ನು ಉತ್ಪಾದಿಸಿತು. ಮಾನವರ ಬಳಕೆಗಾಗಿರುವ ಧಾನ್ಯವನ್ನು ದನಕರುಗಳಿಗೆ ಕೊಡದೇ ಭಾರತವು ಸಸಾರಜನಕ ಸರಬರಾಯಿಯನ್ನು ಹೆಚ್ಚಿಸಲು ಶಕ್ತವಾಗಿತ್ತು.” (g01 12/22)

ಬಾಟಲಿ ನೀರಿಗೆ ಪ್ರತಿಯಾಗಿ ನಲ್ಲಿ ನೀರು

“ಬಾಟಲಿ ನೀರು ಎಷ್ಟು ಜನಪ್ರಿಯವಾಗಿದೆ ಎಂದರೆ, ಲೋಕವ್ಯಾಪಕವಾಗಿ 700 ಕ್ಕಿಂತಲೂ ಹೆಚ್ಚು ಬ್ರ್ಯಾಂಡುಗಳುಳ್ಳ ನೀರನ್ನು ಉತ್ಪಾದಿಸಲಾಗುತ್ತಿದೆ,” ಎಂದು ನ್ಯೂ ಯಾರ್ಕ್‌ ಟೈಮ್ಸ್‌  ವರದಿಸುತ್ತದೆ. ಆದರೆ, “ಹೆಚ್ಚಿನ ಸಂದರ್ಭಗಳಲ್ಲಿ ದುಬಾರಿಯಾದ ಬಾಟಲಿ ನೀರು ಮತ್ತು ನಲ್ಲಿ ನೀರಿನ ನಡುವಿನ ಒಂದೇ ವ್ಯತ್ಯಾಸವೇನೆಂದರೆ, ಬಾಟಲಿಯೇ.” ನಿಸರ್ಗಕ್ಕಾಗಿ ಲೋಕವ್ಯಾಪಕ ನಿಧಿ (ಡಬ್ಲ್ಯೂ.ಡಬ್ಲ್ಯೂ.ಎಫ್‌) ಎಂಬ ಸಂಸ್ಥೆಯು ತಿಳಿಸುವಂತೆ, “ಹೆಚ್ಚಿನ ದೇಶಗಳಲ್ಲಿ ಬಾಟಲಿ ನೀರು, ನಲ್ಲಿ ನೀರಿಗಿಂತ ಹೆಚ್ಚೇನೂ ಸುರಕ್ಷಿತವಾಗಿರಲಿಕ್ಕಿಲ್ಲ, ಆದರೆ ಅದನ್ನು ನಲ್ಲಿ ನೀರಿಗಿಂತ 1,000 ಪಟ್ಟು ಹೆಚ್ಚು ಬೆಲೆಗೆ ಮಾರಲಾಗುತ್ತದೆ.” ನಲ್ಲಿ ನೀರಿನ ಉಪಯೋಗವು ಹಣವನ್ನು ಉಳಿಸುತ್ತದೆ ಮಾತ್ರವಲ್ಲ ಅದು ಪರಿಸರವನ್ನೂ ಸಂರಕ್ಷಿಸುತ್ತದೆ. ಏಕೆಂದರೆ ಪ್ರತಿ ವರ್ಷ ನೀರಿನ ಬಾಟಲಿಗಳಿಗಾಗಿ 15 ಲಕ್ಷ ಟನ್‌ ಪ್ಲಾಸ್ಟಿಕನ್ನು ಉಪಯೋಗಿಸಲಾಗುತ್ತದೆ. ಮತ್ತು “ಬಾಟಲಿಗಳ ತಯಾರಿಕೆ ಹಾಗೂ ತೊಲಗಿಸುವಿಕೆಯ ಸಮಯದಲ್ಲಿ ಬಿಡುಗಡೆಯಾಗುವ ವಿಷಕರ ರಾಸಾಯನಿಕಗಳು, ಹವಾಮಾನದಲ್ಲಿನ ಬದಲಾವಣೆಗೆ ನೆರವು ನೀಡುವ ಅನಿಲಗಳನ್ನು ಬಿಡುಗಡೆಮಾಡಬಲ್ಲದು.” ಡಬ್ಲ್ಯೂ.ಡಬ್ಲ್ಯೂ.ಎಫ್‌ ಅಂತಾರಾಷ್ಟ್ರೀಯ ಸಂಸ್ಥೆಯ ಸಿಹಿ ನೀರು ಕಾರ್ಯಕ್ರಮದ ಮುಂದಾಳುವಾಗಿರುವ, ಡಾಕ್ಟರ್‌ ಬಿಕ್‌ಶಾಮ್‌ ಗುಜ್ಜರವರಿಗನುಸಾರ, “ಯೂರೋಪ್‌ ಮತ್ತು ಅಮೆರಿಕದಲ್ಲಿ ಬಾಟಲಿ ನೀರಿನ ಉದ್ಯಮಕ್ಕಿಂತಲೂ, ನಲ್ಲಿ ನೀರನ್ನು ನಿಯಂತ್ರಿಸುವ ಮಟ್ಟಗಳೇ ಹೆಚ್ಚಾಗಿರುತ್ತವೆ.” (g01 12/8)

ಅಶ್ಲೀಲ ಸಾಹಿತ್ಯದ ವ್ಯಾಪಾರ

“ಅಶ್ಲೀಲ ಸಾಹಿತ್ಯವು, ವೃತ್ತಿಪರ ಕಾಲ್ಚೆಂಡಾಟ, ಬಾಸ್ಕೆಟ್‌ಬಾಲ್‌ ಮತ್ತು ಬೇಸ್‌ಬಾಲ್‌ ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ ಆಗುವ ವ್ಯಾಪಾರಕ್ಕಿಂತಲೂ ದೊಡ್ಡದಾದ ವ್ಯಾಪಾರವಾಗಿದೆ. ಅಮೆರಿಕದಲ್ಲಿರುವ ಜನರು ಅಶ್ಲೀಲ ಸಾಹಿತ್ಯಕ್ಕಾಗಿ ತೆರುವ ವಾರ್ಷಿಕ ಹಣವು, ಅವರು ಚಲನಚಿತ್ರದ ಟಿಕೇಟುಗಳಿಗಾಗಿ ಒಂದು ವರ್ಷದಲ್ಲಿ ತೆರುವ ಹಣ ಮತ್ತು ಒಟ್ಟು ಸೇರಿ ಎಲ್ಲ ಕಲಾ ಕಾರ್ಯಕ್ರಮಗಳಿಗಾಗಿ ಖರ್ಚುಮಾಡುವ ಹಣಕ್ಕಿಂತಲೂ ಹೆಚ್ಚಾಗಿರುತ್ತದೆ” ಎಂದು, ನ್ಯೂ ಯಾರ್ಕ್‌ ಟೈಮ್ಸ್‌ ಮ್ಯಾಗಸೀನ್‌  ಹೇಳುತ್ತದೆ. “ಅಶ್ಲೀಲ ಚಿತ್ರಗಳ ಜಾಲಗಳು, ಕೇಬಲ್‌ ಟಿವಿಗಳಲ್ಲಿ ವಿಶೇಷ ಚಿತ್ರಗಳಿಗಾಗಿರುವ ಹೆಚ್ಚಿನ ಹಣ, ಮತ್ತು ಉಪಗ್ರಹ, ಇಂಟರ್‌ನೆಟ್‌ ಸೈಟ್‌ಗಳು, ಹೋಟೆಲ್‌ ರೂಮುಗಳಲ್ಲಿನ ಕೇಬಲ್‌ ಚಲನಚಿತ್ರಗಳು, ಫೋನಿನಲ್ಲಿ ಅಶ್ಲೀಲ ಮಾತುಕತೆ, ಸೆಕ್ಸ್‌ ಆಟಿಕೆಗಳು ಮತ್ತು . . . ಅಶ್ಲೀಲ ಪತ್ರಿಕೆಗಳನ್ನು ಕೂಡಿಸುವಾಗ, ಅಮೆರಿಕದಲ್ಲಿ ಅಶ್ಲೀಲ ಸಾಹಿತ್ಯದ ವ್ಯಾಪಾರವು, ವಾರ್ಷಿಕವಾಗಿ ಒಟ್ಟು 1,000 ಕೋಟಿ ಡಾಲರುಗಳಿಂದ ಹಿಡಿದು 1,400 ಕೋಟಿ ಡಾಲರುಗಳಷ್ಟಾಗಿರುತ್ತದೆಂದು ಅಂದಾಜುಮಾಡಲಾಗಿದೆ.” ಆ ಲೇಖನವು ಕೂಡಿಸಿ ಹೇಳುವುದು: “1,000 ಕೋಟಿ ಡಾಲರುಗಳ ವ್ಯಾಪಾರವೆಂದರೆ, 60 ಕೋಟಿ ಡಾಲರುಗಳ ವ್ಯಾಪಾರವುಳ್ಳ ನ್ಯೂ ಯಾರ್ಕ್‌ನ ಬ್ರಾಡ್‌ವೇ ನಾಟಕ ಮತ್ತು ಮನೋರಂಜನಾ ಉದ್ಯಮದಂಥ ಪ್ರಧಾನ ಪ್ರದರ್ಶನಕ್ಕೆ ಹೋಲಿಸುವಾಗ, ಅಶ್ಲೀಲ ಸಾಹಿತ್ಯವು ಈಗ ಒಂದು ಉಪ ಪ್ರದರ್ಶನವಾಗಿಲ್ಲ. ಬದಲಾಗಿ ಅದು ತಾನೇ ಈಗ ಪ್ರಧಾನ ಪ್ರದರ್ಶನವಾಗಿದೆ.” ಉದಾಹರಣೆಗಾಗಿ, ಕಳೆದ ವರ್ಷ ಹಾಲಿವುಡ್‌ ಚಿತ್ರೋದ್ಯಮವು 400 ಚಲನಚಿತ್ರಗಳನ್ನು ಬಿಡುಗಡೆಮಾಡಿತು, ಆದರೆ ಅದೇ ಸಮಯದಲ್ಲಿ ಅಶ್ಲೀಲ ಸಾಹಿತ್ಯದ ಉದ್ಯಮವು 11,000 “ವಯಸ್ಕ” ವಿಡಿಯೋಗಳನ್ನು ತಯಾರಿಸಿತು. ಆದರೆ, ಅಮೆರಿಕನರಲ್ಲಿ ಈ ವಿಡಿಯೋಗಳನ್ನು ವೀಕ್ಷಿಸುತ್ತೇವೆಂದು ಒಪ್ಪಿಕೊಳ್ಳುವವರು ತೀರ ಕೆಲವೇ ಮಂದಿ. “ಅಶ್ಲೀಲ ಸಾಹಿತ್ಯದ ವ್ಯಾಪಾರದಂಥ ವ್ಯಾಪಾರ ಬೇರೊಂದಿಲ್ಲ,” ಎಂದು ಟೈಮ್ಸ್‌ ವಾರ್ತಾಪತ್ರಿಕೆಯು ಹೇಳುತ್ತದೆ. “ಅಶ್ಲೀಲ ಚಿತ್ರಗಳನ್ನು ನೋಡುತ್ತೇವೆಂದು ಯಾರೂ ಹೇಳದಿದ್ದರೂ, ಅದ್ಭುತಕರವಾಗಿ ಅದು ಎಂದೂ ನಿಂತುಹೋಗದ ಒಂದು ಮನೋರಂಜನೆಯಾಗಿದೆ.” (g01 12/8)