ದೇವರು ಎಷ್ಟರ ಮಟ್ಟಿಗೆ ಸೈರಣೆಯುಳ್ಳವನಾಗಿದ್ದಾನೆ?
ಬೈಬಲಿನ ದೃಷ್ಟಿಕೋನ
ದೇವರು ಎಷ್ಟರ ಮಟ್ಟಿಗೆ ಸೈರಣೆಯುಳ್ಳವನಾಗಿದ್ದಾನೆ?
“ದೇವರು ತನ್ನ ಕೋಪವನ್ನು ತೋರಿಸಿ ತನ್ನ ಶಕ್ತಿಯನ್ನು ಪ್ರಸಿದ್ಧಿಪಡಿಸಬೇಕೆಂದಿದ್ದರೂ ಹಾಗೆ ಮಾಡದೆ ತನ್ನ ಕೋಪಕ್ಕೆ ಗುರಿಯಾದ ನಾಶನಪಾತ್ರರನ್ನು ಬಹು ಸೈರಣೆಯಿಂದ ಸೈರಿಸಿಕೊಂಡಿದ್ದಾನೆ.”—ರೋಮಾಪುರ 9:22.
ಇತಿಹಾಸದಾದ್ಯಂತ ದೇವರು ಅತಿ ಹೆಚ್ಚು ಕೆಟ್ಟತನ ಹಾಗೂ ದುಷ್ಟತನವನ್ನು ಸಹಿಸಿಕೊಂಡಿದ್ದಾನೆ. 3,000ಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಯೋಬನು ಪ್ರಲಾಪಿಸಿದ್ದು: “ದುಷ್ಟರು ಬಾಳಿ ವೃದ್ಧರಾಗುವದಕ್ಕೂ ಇದಲ್ಲದೆ ಪ್ರಬಲಿಸುವದಕ್ಕೂ ಕಾರಣವೇನು? ಅವರ ಸಂತಾನದವರು ಅವರೊಂದಿಗಿರುತ್ತಾ ಅವರ ಮುಂದೆಯೇ ಸುಸ್ಥಿರವಾಗಿರುವರು, ಅವರ ಮಕ್ಕಳು ಅವರ ಕಣ್ಣೆದುರಿನಲ್ಲಿ ಅಚಲವಾಗಿ ನಿಲ್ಲುವರು. ಅವರ ಮನೆಗಳು ಸುರಕ್ಷಿತವಾಗಿ ನಿರ್ಭಯದಿಂದಿರುವವು; ದೇವರ ದಂಡವು ಅವರ ಮೇಲೆ ಬೀಳದು.” (ಯೋಬ 21:7-9) ಅಷ್ಟುಮಾತ್ರವಲ್ಲದೆ, ಪ್ರವಾದಿಯಾದ ಯೆರೆಮೀಯನಂತಹ ಇನ್ನಿತರ ನ್ಯಾಯಪ್ರಿಯರು ಸಹ, ಕೆಟ್ಟ ಜನರ ಕುರಿತಾದ ದೇವರ ಸೈರಣೆಯ ವಿಷಯದಲ್ಲಿ ಚಿಂತೆಯನ್ನು ವ್ಯಕ್ತಪಡಿಸಿದರು.—ಯೆರೆಮೀಯ 12:1, 2.
ನಿಮ್ಮ ಅಭಿಪ್ರಾಯವೇನು? ದೇವರು ದುಷ್ಟತನವನ್ನು ಏಕೆ ಅನುಮತಿಸಿದ್ದಾನೆ ಎಂದು ಅರ್ಥವಾಗದೆ ನೀವು ಗಲಿಬಿಲಿಗೊಂಡಿದ್ದೀರೋ? ದೇವರು ಒಡನೆಯೇ ಕ್ರಿಯೆಗೈದು, ಈಗಲೇ ಎಲ್ಲ ದುಷ್ಟರನ್ನು ಮುಗಿಸಿಬಿಡಬೇಕು ಎಂದು ನಿಮಗೆ ಕೆಲವೊಮ್ಮೆ ಅನಿಸುತ್ತದೋ? ದೇವರ ಸೈರಣೆಯ ಪರಿಮಿತಿಯ ಕುರಿತು ಮತ್ತು ಅದಕ್ಕಿರುವ ಕಾರಣದ ಕುರಿತು ಬೈಬಲ್ ಏನು ಹೇಳುತ್ತದೆ ಎಂಬುದನ್ನು ಪರಿಗಣಿಸಿರಿ.
ದೇವರು ಏಕೆ ಸೈರಣೆಯುಳ್ಳವನಾಗಿದ್ದಾನೆ?
ಮೊದಲಾಗಿ ನಾವು ಹೀಗೆ ಕೇಳಬೇಕು: ನೀತಿಯ ಅತ್ಯುಚ್ಛ ಮಟ್ಟಗಳನ್ನು ಹೊಂದಿರುವ ದೇವರು ದುಷ್ಟತನವನ್ನು ಏಕೆ ತಾನೇ ಸಹಿಸಿಕೊಳ್ಳಬೇಕು? (ಧರ್ಮೋಪದೇಶಕಾಂಡ 32:4; ಹಬಕ್ಕೂಕ 1:13) ಆತನು ಕೆಟ್ಟತನವನ್ನು ಕಂಡೂಕಾಣದಂತೆ ಇರುತ್ತಾನೆ ಎಂಬುದು ಇದರರ್ಥವೋ? ಖಂಡಿತವಾಗಿಯೂ ಇಲ್ಲ! ಈ ಕೆಳಗಿನ ದೃಷ್ಟಾಂತವನ್ನು ಪರಿಗಣಿಸಿರಿ: ಆರೋಗ್ಯದ ಮೂಲಭೂತ ತತ್ತ್ವಗಳನ್ನು ಉಲ್ಲಂಘಿಸುವಂಥ ಹಾಗೂ ತನ್ನ ರೋಗಿಗಳಿಗೆ ಅತ್ಯಧಿಕ ನೋವನ್ನು ಉಂಟುಮಾಡುವಂಥ ಒಬ್ಬ ಶಸ್ತ್ರಚಿಕಿತ್ಸಕನಿದ್ದಾನೆ ಎಂದಿಟ್ಟುಕೊಳ್ಳಿ. ಒಂದು ಆಸ್ಪತ್ರೆಯಲ್ಲಿ ಅವನು ಕೆಲಸಮಾಡುತ್ತಿರುವಲ್ಲಿ, ಆ ಕೂಡಲೆ ಅವನನ್ನು ಕೆಲಸದಿಂದ ತೆಗೆದುಹಾಕಲಾಗುತ್ತದಲ್ಲವೋ? ಆದರೆ ಅಸಾಧಾರಣವಾದ ಸೈರಣೆಯನ್ನು ಅಗತ್ಯಪಡಿಸಬಹುದಾದಂತಹ ಕೆಲವು ಸನ್ನಿವೇಶಗಳೂ ಇವೆ. ಉದಾಹರಣೆಗೆ, ಬಹುಶಃ ಒಂದು ಯುದ್ಧರಂಗದಂತಹ ತೀರ ತುರ್ತು ಪರಿಸ್ಥಿತಿಯಲ್ಲಿ, ಸೌಕರ್ಯರಹಿತವಾದ ಹಾಗೂ ಅಪಾಯಕರ ಸನ್ನಿವೇಶಗಳಲ್ಲಿ, ಕೆಳಮಟ್ಟದ ಸಾಧನಗಳು ಹಾಗೂ ಶಸ್ತ್ರಚಿಕಿತ್ಸೆಯ ಉಪಕರಣಗಳೆಂದು ಸಾಮಾನ್ಯವಾಗಿ ಪರಿಗಣಿಸಲಾಗುವ ವಸ್ತುಗಳನ್ನು ಉಪಯೋಗಿಸುತ್ತಾ ಕೆಲಸಮಾಡುತ್ತಿರುವ ಶಸ್ತ್ರಚಿಕಿತ್ಸಕರನ್ನು ಸಹಿಸಿಕೊಳ್ಳುವ ಅಗತ್ಯವಿರಬಹುದಲ್ಲವೋ?
ತದ್ರೀತಿಯಲ್ಲಿ, ಇಂದು ಸಂಪೂರ್ಣವಾಗಿ ಅನಂಗೀಕೃತವಾಗಿ ಕಂಡುಬರುತ್ತಿರುವ ಅನೇಕ ವಿಷಯಗಳನ್ನು ದೇವರು ತಾಳ್ಮೆಯಿಂದ ಸಹಿಸಿಕೊಳ್ಳುತ್ತಿದ್ದಾನೆ. ಆತನು ದುಷ್ಟತನವನ್ನು ಹಗೆಮಾಡುತ್ತಾನಾದರೂ, ಅದು ತಾತ್ಕಾಲಿಕವಾಗಿ ಮುಂದುವರಿಯುವಂತೆ ಆತನು ಅನುಮತಿಸುತ್ತಿದ್ದಾನೆ. ಆತನು ಹಾಗೆ ಮಾಡಲು ಸಕಾರಣಗಳಿವೆ. ಒಂದು ಕಾರಣವೇನೆಂದರೆ, ಏದೆನ್ ತೋಟದಲ್ಲಿ ಸೈತಾನನ ದಂಗೆಯಿಂದ ಎಬ್ಬಿಸಲ್ಪಟ್ಟ ನಿರ್ಣಾಯಕ ವಾದಾಂಶಗಳನ್ನು ಶಾಶ್ವತವಾಗಿ ಬಗೆಹರಿಸಲಿಕ್ಕಾಗಿ ಇದು ಸಮಯಾವಕಾಶವನ್ನು ಮಾಡಿಕೊಡುತ್ತದೆ. ಈ ವಾದಾಂಶಗಳು, ದೇವರ ಆಳ್ವಿಕೆಯ ಯುಕ್ತತೆಗೆ ಹಾಗೂ ನ್ಯಾಯವಾದ ಹಕ್ಕಿಗೆ ನಿಕಟವಾಗಿ ಸಂಬಂಧಿಸಿದ್ದಾಗಿವೆ. ಇದಲ್ಲದೆ, ಕೆಟ್ಟದ್ದನ್ನು ಆತನು ತಾಳ್ಮೆಯಿಂದ ಸಹಿಸಿಕೊಂಡಿರುವುದು, ಕೆಟ್ಟತನದಲ್ಲಿ ಒಳಗೂಡಿರುವವರು ಬದಲಾವಣೆಗಳನ್ನು ಮಾಡಲು ಸಮಯ ಮತ್ತು ಅವಕಾಶವನ್ನು ನೀಡುವುದು.
ಕರುಣಾಭರಿತನೂ ತಾಳ್ಮೆಯುಳ್ಳವನೂ ಆಗಿರುವ ದೇವರು
ನಮ್ಮ ಮೂಲ ಹೆತ್ತವರಾದ ಆದಾಮಹವ್ವರು, ದೇವರ ವಿರುದ್ಧವಾದ ದಂಗೆಯಲ್ಲಿ ಸೈತಾನನ ಜೊತೆಗೂಡಿದರು. ಆ ಕೂಡಲೆ ದೇವರು ಅವರನ್ನು ಕಾನೂನುಬದ್ಧವಾಗಿ ನಾಶಮಾಡಿಬಿಡಬಹುದಿತ್ತು. ಆದರೆ, ಅವರು ಮಕ್ಕಳನ್ನು ಪಡೆಯುವಂತೆ ಪ್ರೀತಿಯಿಂದ ಅನುಮತಿ ನೀಡುವ ಮೂಲಕ, ತಾನು ಕರುಣಾಭರಿತನೂ ತಾಳ್ಮೆಯುಳ್ಳವನೂ ಆಗಿದ್ದೇನೆ ಎಂಬುದನ್ನು ಆತನು ತೋರಿಸಿಕೊಟ್ಟನು. ಈ ಮಕ್ಕಳು ಮತ್ತು ಅವರ ಸಂತತಿಯಲ್ಲಿ ಜನಿಸಿದ ಇಡೀ ಮಾನವ ಕುಟುಂಬವು, ಪಾಪಭರಿತ ಸ್ಥಿತಿಯಲ್ಲಿ ಜನಿಸಿತು.—ರೋಮಾಪುರ 5:12; 8:20-22.
ದೇವರು ಮನುಷ್ಯನನ್ನು ತನ್ನ ಶೋಚನೀಯ ಸ್ಥಿತಿಯಿಂದ ಕಾಪಾಡಲು ಉದ್ದೇಶಿಸಿದನು. (ಆದಿಕಾಂಡ 3:15) ಆದರೂ, ಈ ಮಧ್ಯೆ, ಆದಾಮನಿಂದ ಬಾಧ್ಯತೆಯಾಗಿ ಬಂದ ಅಪರಿಪೂರ್ಣತೆಯು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಆತನು ಅರ್ಥಮಾಡಿಕೊಳ್ಳುತ್ತಾನಾದ್ದರಿಂದ, ಆತನು ಅತ್ಯಧಿಕ ತಾಳ್ಮೆ ಹಾಗೂ ಕರುಣೆಯನ್ನು ತೋರಿಸುತ್ತಾನೆ. (ಕೀರ್ತನೆ 51:5; 103:13) ಆತನು “ಹೇರಳವಾಗಿ ಪ್ರೀತಿಪೂರ್ವಕ ದಯೆಯನ್ನು” ತೋರಿಸುವವನಾಗಿದ್ದಾನೆ ಮತ್ತು ‘ಮಹಾಕೃಪೆಯಿಂದ ಕ್ಷಮಿಸಲು’ ಸಿದ್ಧನಾಗಿದ್ದಾನೆ ಮತ್ತು ಇದನ್ನು ಮನಃಪೂರ್ವಕವಾಗಿ ಮಾಡುತ್ತಾನೆ.—ಕೀರ್ತನೆ 86:5, 15, NW; ಯೆಶಾಯ 55:6, 7.
ದೇವರ ಸೈರಣೆಗಿರುವ ಮಿತಿಗಳು
ಆದರೂ, ಕೆಟ್ಟತನವು ಸದಾಕಾಲಕ್ಕೂ ಮುಂದುವರಿಯುವಂತೆ ಬಿಡುವುದು, ದೇವರ ಪಕ್ಷದಿಂದ ಪ್ರೀತಿರಹಿತವೂ ನ್ಯಾಯಸಮ್ಮತವಲ್ಲದ್ದೂ ಆಗಿರುವುದು. ಪ್ರೀತಿಯಿರುವಂಥ ಯಾವ ತಂದೆಯೂ, ತನ್ನ ಮಕ್ಕಳಲ್ಲಿ ಒಬ್ಬನು ಕುಟುಂಬದ ಇತರ ಸದಸ್ಯರ ಮೇಲೆ ಉದ್ದೇಶಪೂರ್ವಕವಾಗಿ ದುಃಖಕರ ನೋವನ್ನು ತಂದೊಡ್ಡುತ್ತಾ, ನಿರಂತರವಾಗಿ ಕೆಟ್ಟತನವನ್ನು ಮಾಡುತ್ತಾ ಮುಂದುವರಿಯುವುದನ್ನು ತಾಳಿಕೊಳ್ಳನು. ಆದುದರಿಂದ, ಪಾಪವನ್ನು ಸಹಿಸಿಕೊಳ್ಳುವುದರಲ್ಲಿ ದೇವರ ತಾಳ್ಮೆಯು, ಯಾವಾಗಲೂ ಪ್ರೀತಿ, ವಿವೇಕ, ಹಾಗೂ ನ್ಯಾಯದಂತಹ ಇತರ ಗುಣಗಳಿಂದ ಸರಿದೂಗಿಸಲ್ಪಟ್ಟಿರುವುದು. (ವಿಮೋಚನಕಾಂಡ 34:6, 7) ಆತನ ದೀರ್ಘಶಾಂತಿಯ ಹಿಂದಿರುವ ಉದ್ದೇಶವು ಪೂರ್ಣಗೊಂಡ ಬಳಿಕ, ಕೆಟ್ಟತನದ ಕಡೆಗಿನ ಆತನ ಸೈರಣೆಯು ಕೊನೆಗೊಳ್ಳುವುದು.—ರೋಮಾಪುರ 9:22.
ಅಪೊಸ್ತಲ ಪೌಲನು ಇದನ್ನು ಸ್ಪಷ್ಟವಾಗಿ ಸೂಚಿಸಿದನು. ಒಂದು ಸಂದರ್ಭದಲ್ಲಿ ಅವನು ಹೇಳಿದ್ದು: “ಗತಿಸಿಹೋದ ಕಾಲದಲ್ಲಿ [ದೇವರು] ಎಲ್ಲಾ ಜನಾಂಗಗಳನ್ನು ತಮ್ಮ ತಮ್ಮ ಮನಸ್ಸಿಗೆ ತೋಚಿದ ಮಾರ್ಗಗಳಲ್ಲಿ ನಡೆಯುವದಕ್ಕೆ ಬಿಟ್ಟನು.” (ಅ. ಕೃತ್ಯಗಳು 14:16) ಇನ್ನೊಂದು ಸಂದರ್ಭದಲ್ಲಿ ಪೌಲನು, ತನ್ನ ನಿಯಮಗಳು ಹಾಗೂ ಮೂಲತತ್ತ್ವಗಳಿಗೆ ಅವಿಧೇಯರಾಗಿರುವ ಜನರ “ಅಜ್ಞಾನಕಾಲಗಳನ್ನು ದೇವರು” ಹೇಗೆ “ಲಕ್ಷ್ಯಕ್ಕೆ ತರಲಿಲ್ಲ” ಎಂಬುದರ ಕುರಿತು ಮಾತಾಡಿದನು. ಪೌಲನು ಮುಂದುವರಿಸಿದ್ದು: “ಈಗಲಾದರೋ [ದೇವರು] ನಾಲ್ಕು ದಿಕ್ಕಿನಲ್ಲಿರುವ ಮನುಷ್ಯರೆಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪ್ಪಣೆಕೊಡುತ್ತಾನೆ.” ಏಕೆ? “ಯಾಕಂದರೆ ಆತನು . . . ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ.”—ಅ. ಕೃತ್ಯಗಳು 17:30, 31.
ದೇವರ ಸೈರಣೆಯಿಂದ ಈಗಲೇ ಪ್ರಯೋಜನವನ್ನು ಪಡೆದುಕೊಳ್ಳಿ
ಆದುದರಿಂದ, ದೇವರ ನಿಯಮಗಳನ್ನು ಅಲಕ್ಷಿಸಿ, ತದನಂತರ ತನ್ನ ಕೃತ್ಯಗಳ ಪರಿಣಾಮಗಳನ್ನು ತಪ್ಪಿಸಿಕೊಳ್ಳಲು ಬಯಸುವಾಗ ಮಾತ್ರ ಔಪಚಾರಿಕವಾಗಿ ದೇವರಿಂದ ಕ್ಷಮಾಪಣೆಯನ್ನು ಕೇಳಿಕೊಳ್ಳಸಾಧ್ಯವಿದೆ ಎಂದು ಯಾರೊಬ್ಬರೂ ಭಾವಿಸಬಾರದು ಎಂಬುದಂತೂ ನಿಶ್ಚಯ. (ಯೆಹೋಶುವ 24:19) ಪುರಾತನ ಇಸ್ರಾಯೇಲಿನಲ್ಲಿದ್ದ ಅನೇಕರು, ತಾವು ಹಾಗೆ ಮಾಡಸಾಧ್ಯವಿದೆಯೆಂದು ನೆನಸಿದರು. ಅವರು ಬದಲಾಗಲಿಲ್ಲ. ಅವರು ದೇವರ ಸೈರಣೆ ಹಾಗೂ ತಾಳ್ಮೆಯ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ತಪ್ಪಿಹೋದರು. ದೇವರು ಸದಾಕಾಲಕ್ಕೂ ಅವರ ಕೆಟ್ಟತನವನ್ನು ಸೈರಿಸಿಕೊಳ್ಳಲಿಲ್ಲ.—ಯೆಶಾಯ 1:16-20.
ದೇವರ ಅಂತಿಮ ನ್ಯಾಯತೀರ್ಪಿನಿಂದ ತಪ್ಪಿಸಿಕೊಳ್ಳಬೇಕಾದರೆ, ಒಬ್ಬ ವ್ಯಕ್ತಿಯು “ಪಶ್ಚಾತ್ತಾಪ”ಪಡಬೇಕು, ಅಂದರೆ ದೇವರ ಮುಂದೆ ತನ್ನ ಅಪರಿಪೂರ್ಣ ಹಾಗೂ ಪಾಪಭರಿತ ಸ್ಥಿತಿಯನ್ನು ಪಶ್ಚಾತ್ತಾಪಸೂಚಕವಾಗಿ ಒಪ್ಪಿಕೊಳ್ಳಬೇಕು ಮತ್ತು ಕೆಟ್ಟದ್ದರಿಂದ ನಿಜವಾಗಿಯೂ ವಿಮುಖನಾಗಬೇಕು ಎಂದು ಬೈಬಲು ತೋರಿಸುತ್ತದೆ. (ಅ. ಕೃತ್ಯಗಳು 3:19-21) ಆಗಲೇ, ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ಯೆಹೋವ ದೇವರು ಕ್ಷಮೆಯನ್ನು ನೀಡುವನು. (ಅ. ಕೃತ್ಯಗಳು 2:38; ಎಫೆಸ 1:6, 7) ತನ್ನ ನೇಮಿತ ಸಮಯದಲ್ಲಿ ದೇವರು, ಆದಾಮನಿಂದ ಉಂಟುಮಾಡಲ್ಪಟ್ಟ ಪಾಪದ ದುಃಖಕರ ಪರಿಣಾಮಗಳನ್ನು ಇಲ್ಲವಾಗಿಸುವನು. ಆಗ ‘ನೂತನಾಕಾಶಮಂಡಲ ಹಾಗೂ ನೂತನಭೂಮಂಡಲವು’ ಇರುವುದು, ಮತ್ತು ಅದರಲ್ಲಿ ಆತನು “ನಾಶನವನ್ನು ಅಗತ್ಯಪಡಿಸುವ ವಿಷಯಗಳ . . . ಅಸ್ತಿತ್ವವನ್ನು” ಇನ್ನೆಂದಿಗೂ ಸೈರಿಸಿಕೊಳ್ಳುವುದಿಲ್ಲ. (ಪ್ರಕಟನೆ 21:1-5; ರೋಮಾಪುರ 9:22, ಫಿಲಿಪ್ಸ್) ದೇವರ ಅಸಾಧಾರಣವಾದ, ಆದರೆ ಸೀಮಾತೀತ ಸೈರಣೆಯಿಂದ ಎಷ್ಟು ಅದ್ಭುತಕರವಾದ ಫಲಿತಾಂಶ! (g01 10/8)
[ಪುಟ 17ರಲ್ಲಿರುವ ಚಿತ್ರ]
ಆದಾಮಹವ್ವರು ಸಂತಾನವನ್ನು ಪಡೆದುಕೊಳ್ಳುವಂತೆ ದೇವರು ಅನುಮತಿಸಿದನು