ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಾನು ಕನಸು ಕಾಣುತ್ತಿದ್ದೇನೆ ಎಂದು ಕೆಲವೊಮ್ಮೆ ನನಗನಿಸುತ್ತದೆ!”

“ನಾನು ಕನಸು ಕಾಣುತ್ತಿದ್ದೇನೆ ಎಂದು ಕೆಲವೊಮ್ಮೆ ನನಗನಿಸುತ್ತದೆ!”

“ನಾನು ಕನಸು ಕಾಣುತ್ತಿದ್ದೇನೆ ಎಂದು ಕೆಲವೊಮ್ಮೆ ನನಗನಿಸುತ್ತದೆ!”

ನಡುಗುತ್ತಿರುವ ತನ್ನ ಬಾಯಿಯನ್ನು ಬೆರಳುಗಳಿಂದ ಮುಚ್ಚಿಕೊಳ್ಳುತ್ತಾ, ಲೂರ್‌ಡಸ್‌ ತನ್ನ ಮನೆಯ ಕಿಟಕಿಯಿಂದ ನಗರದ ಕಡೆಗೆ ದೃಷ್ಟಿಹಾಯಿಸುತ್ತಾಳೆ. ಅವಳು ಲ್ಯಾಟಿನ್‌ ಅಮೆರಿಕದ ಸ್ತ್ರೀಯಾಗಿದ್ದು, 20ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ತನ್ನ ಹಿಂಸಾತ್ಮಕ ಪತಿಯಾದ ಆಲ್‌ಫ್ರಾಡೊನ ಕೈಕೆಳಗೆ ತುಂಬ ಕಷ್ಟವನ್ನು ಅನುಭವಿಸಿದ್ದಾಳೆ. ಆದರೆ ಸಮಯಾನಂತರ ಆಲ್‌ಫ್ರಾಡೊ ತನ್ನ ನಡತೆಯನ್ನು ಬದಲಾಯಿಸುವಂತೆ ಪ್ರಚೋದಿಸಲ್ಪಟ್ಟನು. ಆದರೂ, ತಾನು ಸಹಿಸಿಕೊಂಡ ಶಾರೀರಿಕ ಹಾಗೂ ಭಾವನಾತ್ಮಕ ವೇದನೆಯ ಕುರಿತು ಮಾತಾಡುವುದು ಈಗಲೂ ಲೂರ್‌ಡಸ್‌ಳಿಗೆ ತುಂಬ ಕಷ್ಟಕರವಾಗಿದೆ.

ತುಂಬ ಕ್ಷೀಣವಾದ ಸ್ವರದಲ್ಲಿ ಲೂರ್‌ಡಸ್‌ ಹೇಳುವುದು: “ನಮ್ಮ ಮದುವೆಯಾಗಿ ಎರಡು ವಾರಗಳು ಕಳೆದ ಕೂಡಲೆ ಇದು ಆರಂಭವಾಯಿತು. ಒಂದು ಸಲ ಅವರು ನನ್ನ ಎರಡು ಹಲ್ಲುಗಳನ್ನೇ ಉದುರಿಸಿಬಿಟ್ಟರು. ಇನ್ನೊಂದು ಸಲ ನನ್ನನ್ನು ಹೊಡೆಯಲು ಬಂದಾಗ ನಾನು ಥಟ್ಟನೆ ಚಲಿಸಿದೆ ಮತ್ತು ಅವರ ಮುಷ್ಟಿ ಹೋಗಿ ಜೋರಾಗಿ ಕಪಾಟಿಗೆ ಬಡಿಯಿತು. ಆದರೆ ಅವರು ಕರೆಯುತ್ತಿದ್ದ ಹೀನೈಸುವಂಥ ಹೆಸರುಗಳು ಇನ್ನೂ ಹೆಚ್ಚು ನೋಯಿಸುವಂಥವುಗಳಾಗಿದ್ದವು. ಅವರು ನನ್ನನ್ನು ‘ಕೆಲಸಕ್ಕೆ ಬಾರದ ಕಸ’ ಎಂದು ಕರೆಯುತ್ತಿದ್ದರು ಮತ್ತು ನನಗೆ ಬುದ್ಧಿವಂತಿಕೆಯೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದರು. ನಾನು ಅವರನ್ನು ಬಿಟ್ಟುಹೋಗಲು ಬಯಸುತ್ತಿದ್ದೆ, ಆದರೆ ಮೂರು ಮಕ್ಕಳೊಂದಿಗೆ ನಾನು ಎಲ್ಲಿಗೆ ಹೋಗಲಿ ಹೇಳಿ?”

ಆಲ್‌ಫ್ರಾಡೊ ಲೂರ್‌ಡಸ್‌ಳ ಭುಜವನ್ನು ಕೋಮಲವಾಗಿ ಸ್ಪರ್ಶಿಸುತ್ತಾನೆ. ಅವನು ಹೇಳುವುದು: “ನಾನು ಉನ್ನತ ಉದ್ಯೋಗದಲ್ಲಿದ್ದೇನೆ. ನನಗೆ ಸಮನ್ಸ್‌ ಕಳಿಸಲ್ಪಟ್ಟು, ಅರ್ಜಿದಾರಳಿಗೆ ರಕ್ಷಣೆಯನ್ನು ಒದಗಿಸುವ ಕೋರ್ಟ್‌ ಆರ್ಡರ್‌ ಕೊಡಲ್ಪಟ್ಟಾಗ, ನನಗೆ ತಲೆತಗ್ಗಿಸುವಂತಾಯಿತು. ತದನಂತರ ನಾನು ಬದಲಾಗಲು ಪ್ರಯತ್ನಿಸಿದೆ, ಆದರೆ ಸ್ವಲ್ಪ ಸಮಯಾನಂತರ ಪುನಃ ಹಿಂದಿನಂತೆಯೇ ವರ್ತಿಸತೊಡಗಿದೆ.”

ಹಾಗಾದರೆ ವಿಷಯಗಳು ಹೇಗೆ ಬದಲಾದವು? ಈಗ ದುಗುಡ ಕಡಿಮೆಯಾದಂತೆ ಕಂಡುಬಂದ ಲೂರ್‌ಡಸ್‌ ವಿವರಿಸುವುದು: “ಬೀದಿಯ ಮೂಲೆಯಲ್ಲಿರುವ ಅಂಗಡಿಯ ಮಹಿಳೆಯು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದಾಳೆ. ಬೈಬಲನ್ನು ಅರ್ಥಮಾಡಿಕೊಳ್ಳಲು ನಾನು ನಿಮಗೆ ಸಹಾಯಮಾಡುತ್ತೇನೆ ಎಂದು ನನಗೆ ಹೇಳಿದಳು. ಯೆಹೋವ ದೇವರು ಸ್ತ್ರೀಯರಿಗೆ ಬೆಲೆಕೊಡುತ್ತಾನೆ ಎಂಬುದನ್ನು ನಾನು ಕಲಿತೆ. ಮೊದಮೊದಲು ಇದು ಆಲ್‌ಫ್ರಾಡೊಗೆ ತುಂಬ ಕೋಪವನ್ನು ಉಂಟುಮಾಡಿದರೂ, ನಾನು ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗಲಾರಂಭಿಸಿದೆ. ರಾಜ್ಯ ಸಭಾಗೃಹದಲ್ಲಿ ಸ್ನೇಹಿತರೊಂದಿಗೆ ಸಮಯವನ್ನು ಕಳೆಯುವುದು ನನಗೆ ಒಂದು ಹೊಸ ಅನುಭವವಾಗಿತ್ತು. ನನ್ನ ಸ್ವಂತ ನಂಬಿಕೆಗಳನ್ನು ಹೊಂದಿರಲು, ಅವುಗಳನ್ನು ಸ್ವತಂತ್ರವಾಗಿ ವ್ಯಕ್ತಪಡಿಸಲು, ಮತ್ತು ಅವುಗಳನ್ನು ಇತರರಿಗೆ ಕಲಿಸಲೂ ಸಾಧ್ಯವಿದೆ ಎಂಬುದನ್ನು ಕಂಡು ನಾನು ಆಶ್ಚರ್ಯಚಕಿತಳಾದೆ. ದೇವರು ನನ್ನನ್ನು ಅಮೂಲ್ಯವಾಗಿ ಪರಿಗಣಿಸುತ್ತಾನೆ ಎಂಬುದು ನನಗೆ ಅರಿವಾಯಿತು. ಇದು ನನಗೆ ಧೈರ್ಯವನ್ನು ನೀಡಿತು.

“ಈ ಹಂತದಲ್ಲಿ ಉಂಟಾದ ಬದಲಾವಣೆಯನ್ನು ನಾನೆಂದಿಗೂ ಮರೆಯಲಾರೆ. ಆಗಲೂ ಕೂಡ ಆಲ್‌ಫ್ರಾಡೊ ಪ್ರತಿ ಭಾನುವಾರ ಕ್ಯಾಥೊಲಿಕ್‌ ಮಾಸ್‌ಗೆ ಹಾಜರಾಗುತ್ತಿದ್ದರು, ಮತ್ತು ಯೆಹೋವನ ಸಾಕ್ಷಿಗಳೊಂದಿಗಿನ ನನ್ನ ಸಹವಾಸದ ಬಗ್ಗೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದರು. ಆಗ ನಾನು ಅವರನ್ನು ನೇರವಾಗಿ ನೋಡಿ, ‘ಆಲ್‌ಫ್ರಾಡೊ, ನಿಮಗೆ ಯಾವ ದೃಷ್ಟಿಕೋನವಿದೆಯೋ ಆ ದೃಷ್ಟಿಕೋನ ನನಗಿಲ್ಲ’ ಎಂದು ಶಾಂತಚಿತ್ತಳಾಗಿ ಆದರೆ ದೃಢವಾಗಿ ಹೇಳಿದೆ. ಹೀಗೆ ಹೇಳಿದಾಗ ಅವರು ನನಗೆ ಹೊಡೆಯಲಿಲ್ಲ! ಇದಾದ ಸ್ವಲ್ಪದರಲ್ಲೇ ನಾನು ದೀಕ್ಷಾಸ್ನಾನ ಪಡೆದುಕೊಂಡೆ, ಮತ್ತು ಅಂದಿನಿಂದ ದಾಟಿಹೋಗಿರುವ ಐದು ವರ್ಷಗಳಲ್ಲಿ ಅವರೆಂದೂ ನನ್ನನ್ನು ಹೊಡೆದಿಲ್ಲ.”

ಇನ್ನೂ ಮಹತ್ತರವಾದ ಬದಲಾವಣೆಗಳು ಸಂಭವಿಸಲಿಕ್ಕಿದ್ದವು. ಆಲ್‌ಫ್ರಾಡೊ ವಿವರಿಸುವುದು: “ಲೂರ್‌ಡಸ್‌ ದೀಕ್ಷಾಸ್ನಾನ ಪಡೆದುಕೊಂಡು ಸುಮಾರು ಮೂರು ವರ್ಷಗಳು ಕಳೆದ ಬಳಿಕ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರುವ ನನ್ನ ಸಹಕರ್ಮಿಯು ನನ್ನನ್ನು ತನ್ನ ಮನೆಗೆ ಆಮಂತ್ರಿಸಿದನು. ಮತ್ತು ಅವನು ಬೈಬಲಿನಿಂದ ನನಗೆ ಚಿತ್ತಾಕರ್ಷಕ ವಿಷಯಗಳನ್ನು ವಿವರಿಸಿದನು. ನನ್ನ ಪತ್ನಿಗೆ ತಿಳಿಸದೆ ನಾನು ಅವನೊಂದಿಗೆ ಬೈಬಲ್‌ ಅಧ್ಯಯನ ಮಾಡಲಾರಂಭಿಸಿದೆ. ತದನಂತರ ನಾನು ಲೂರ್‌ಡಸ್‌ಳೊಂದಿಗೆ ಕೂಟಗಳಿಗೆ ಹೋಗಲಾರಂಭಿಸಿದೆ. ನಾನು ಅಲ್ಲಿ ಕೇಳಿಸಿಕೊಂಡಂತಹ ಭಾಷಣಗಳಲ್ಲಿ ಹೆಚ್ಚಿನವು ಕುಟುಂಬ ಜೀವನದ ಕುರಿತಾಗಿದ್ದವು, ಮತ್ತು ಇವು ಕೆಲವೊಮ್ಮೆ ನನ್ನಲ್ಲಿ ನಾಚಿಕೆಯ ಭಾವನೆಯನ್ನು ಉಂಟುಮಾಡಿದವು.”

ಪುರುಷರನ್ನೂ ಒಳಗೊಂಡು ಸಭೆಯ ಸದಸ್ಯರೆಲ್ಲರೂ ಕೂಟಗಳ ನಂತರ ಕಸ ಗುಡಿಸುವುದನ್ನು ನೋಡಿ ಆಲ್‌ಫ್ರಾಡೊ ಪ್ರಭಾವಿತನಾದನು. ಅವನು ಅವರ ಮನೆಗಳನ್ನು ಸಂದರ್ಶಿಸಿದಾಗ, ಪಾತ್ರೆಗಳನ್ನು ತೊಳೆಯುವ ಕೆಲಸದಲ್ಲಿ ಗಂಡಂದಿರು ತಮ್ಮ ಹೆಂಡತಿಯರಿಗೆ ಸಹಾಯಮಾಡುತ್ತಿರುವುದನ್ನು ಅವನು ನೋಡಿದನು. ಈ ಚಿಕ್ಕಪುಟ್ಟ ಘಟನೆಗಳು, ನಿಜವಾದ ಪ್ರೀತಿಯನ್ನು ಕ್ರಿಯೆಯಲ್ಲಿ ಹೇಗೆ ವ್ಯಕ್ತಪಡಿಸಸಾಧ್ಯವಿದೆ ಎಂಬುದನ್ನು ಆಲ್‌ಫ್ರಾಡೊಗೆ ತೋರ್ಪಡಿಸಿದವು.

ತದನಂತರ ಸ್ವಲ್ಪದರಲ್ಲೇ ಆಲ್‌ಫ್ರಾಡೊ ದೀಕ್ಷಾಸ್ನಾನ ಪಡೆದುಕೊಂಡನು, ಮತ್ತು ಈಗ ಅವನೂ ಅವನ ಪತ್ನಿಯೂ ಪೂರ್ಣ ಸಮಯದ ಶುಶ್ರೂಷಕರಾಗಿ ಸೇವೆಮಾಡುತ್ತಾರೆ. ಲೂರ್‌ಡಸ್‌ ಹೇಳುವುದು: “ಊಟವಾದ ನಂತರ ಮೇಜನ್ನು ಸ್ವಚ್ಛಗೊಳಿಸಲು ಹಾಗೂ ಹಾಸಿಗೆಯನ್ನು ಸರಿಪಡಿಸಲು ಅವರು ನನಗೆ ಅನೇಕಬಾರಿ ಸಹಾಯಮಾಡುತ್ತಾರೆ. ನನ್ನ ಅಡಿಗೆಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾರೆ, ಮತ್ತು ನಾನು ಯಾವ ಸಂಗೀತವನ್ನು ಕೇಳಿಸಿಕೊಳ್ಳಲು ಬಯಸುತ್ತೇನೆ ಅಥವಾ ನಮ್ಮ ಮನೆಗಾಗಿ ನಾವು ಯಾವ ವಸ್ತುಗಳನ್ನು ಖರೀದಿಸಲು ಬಯಸುತ್ತೇವೆ ಎಂಬಂಥ ಆಯ್ಕೆಗಳನ್ನು ಮಾಡಲು ಅವರು ನನಗೆ ಅನುಮತಿ ನೀಡುತ್ತಾರೆ. ಈ ಮುಂಚೆ ಆಲ್‌ಫ್ರಾಡೊ ಹೀಗೆಂದೂ ಮಾಡಿರಲೇ ಇಲ್ಲ! ಇತ್ತೀಚೆಗೆ, ಮೊದಲ ಬಾರಿ ಅವರು ನನಗೆ ಒಂದು ಹೂಗುಚ್ಛವನ್ನು ತಂದುಕೊಟ್ಟರು. ನಾನು ಕನಸು ಕಾಣುತ್ತಿದ್ದೇನೆ ಎಂದು ಕೆಲವೊಮ್ಮೆ ನನಗನಿಸುತ್ತದೆ!” (g01 11/8)

[ಪುಟ 10ರಲ್ಲಿರುವ ಚಿತ್ರ]

“ದೇವರು ನನ್ನನ್ನು ಅಮೂಲ್ಯವಾಗಿ ಪರಿಗಣಿಸುತ್ತಾನೆ ಎಂಬುದು ನನಗೆ ಅರಿವಾಯಿತು. ಇದು ನನಗೆ ಧೈರ್ಯವನ್ನು ನೀಡಿತು”

[ಪುಟ 10ರಲ್ಲಿರುವ ಚಿತ್ರ]

ಪುರುಷರನ್ನೂ ಒಳಗೊಂಡು ಸಭೆಯ ಸದಸ್ಯರೆಲ್ಲರೂ ಕೂಟಗಳ ನಂತರ ಕಸ ಗುಡಿಸುವುದನ್ನು ನೋಡಿ ಆಲ್‌ಫ್ರಾಡೊ ಪ್ರಭಾವಿತರಾದರು

[ಪುಟ 10ರಲ್ಲಿರುವ ಚಿತ್ರ]

ಪಾತ್ರಗಳನ್ನು ತೊಳೆಯುವ ಕೆಲಸದಲ್ಲಿ ಗಂಡಂದಿರು ತಮ್ಮ ಹೆಂಡತಿಯರಿಗೆ ಸಹಾಯಮಾಡುತ್ತಿರುವುದನ್ನು ಅವರು ನೋಡಿದರು

[ಪುಟ 10ರಲ್ಲಿರುವ ಚಿತ್ರ]

“ಇತ್ತೀಚೆಗೆ, ಮೊದಲ ಬಾರಿ ಅವರು ನನಗೆ ಒಂದು ಹೂಗುಚ್ಛವನ್ನು ತಂದುಕೊಟ್ಟರು”