ನಿಮ್ಮ ಮಕ್ಕಳಿಗೆ ಗಟ್ಟಿಯಾಗಿ ಏಕೆ ಓದಿಹೇಳಬೇಕು?
ನಿಮ್ಮ ಮಕ್ಕಳಿಗೆ ಗಟ್ಟಿಯಾಗಿ ಏಕೆ ಓದಿಹೇಳಬೇಕು?
“ನಾಯಿಕಿವಿಗಳುಳ್ಳ, ಮತ್ತು . . . ಪೀನಟ್ ಬಟರ್ ಅಂಟಿಕೊಂಡಿದ್ದ ಪುಟಗಳುಳ್ಳ ಒಂದು ಪುಸ್ತಕವನ್ನು ತನ್ನ ಹಿಂದೆ ಎಳೆಯುತ್ತಾ, ಅವಳು ನನ್ನ ಬಳಿ ಬಂದು, ತೆವಳುತ್ತಾ ನನ್ನ ಮಡಿಲಿನಲ್ಲಿ ಕುಳಿತುಕೊಂಡು, . . . ‘ನನಗೆ ಓದಿಹೇಳು ಪಪ್ಪಾ, ನನಗೆ ಓದಿಹೇಳು’ ಎಂದು ಸೂಚಿಸಿದಳು.” —ಡಾ. ಕ್ಲಿಫರ್ಡ್ ಶಿಮಲ್ಸ್, ಶಿಕ್ಷಣದ ಪ್ರೊಫೆಸರರು.
ಮಕ್ಕಳು ತುಂಬ ಬೇಗನೆ ಕಲಿತುಕೊಳ್ಳುತ್ತಾರೆ. ಮೂರು ವರ್ಷಕ್ಕಿಂತಲೂ ಚಿಕ್ಕ ಪ್ರಾಯದ ಮಕ್ಕಳಲ್ಲಿ ಮಿದುಳು ಕ್ಷಿಪ್ರವಾಗಿ ಬೆಳೆಯುತ್ತದೆಂಬುದನ್ನು ಸಂಶೋಧನೆಯು ತೋರಿಸುತ್ತದೆ. ಒಂದು ಮಗುವಿನ ಆರೋಗ್ಯಕರ ಬೆಳವಣಿಗೆಯಲ್ಲಿ, ಓದುವುದು, ಹಾಡುವುದು, ಮತ್ತು ಮಮತೆ ತೋರಿಸುವಂಥ ಹೆತ್ತವರ ಚಟುವಟಿಕೆಗಳು ಒಂದು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಆದರೆ ಒಂದು ಸಮೀಕ್ಷೆಗನುಸಾರ, ಎರಡರಿಂದ ಎಂಟು ವರ್ಷಗಳ ನಡುವಣ ವಯಸ್ಸಿನ ಮಕ್ಕಳ ಹೆತ್ತವರಲ್ಲಿ ಕೇವಲ ಅರ್ಧದಷ್ಟು ಹೆತ್ತವರು ಮಾತ್ರ ತಮ್ಮ ಮಕ್ಕಳಿಗೆ ದಿನಾಲೂ ಏನಾದರೊಂದನ್ನು ಓದಿಹೇಳುತ್ತಾರೆ. ‘ಓದುವುದರಿಂದ ನನ್ನ ಮಗುವಿನಲ್ಲಿ ನಿಜವಾಗಿಯೂ ಏನಾದರೂ ವ್ಯತ್ಯಾಸವಾಗುವುದೊ?’ ಎಂದು ನೀವು ಯೋಚಿಸಬಹುದು.
ಓದುವಿಕೆಯ ಪ್ರೀತಿಯನ್ನು ಹುಟ್ಟಿಸುವುದು
ಹೌದು, ಎಂದು ನಿಪುಣರು ಹೇಳುತ್ತಾರೆ. “ಓದುವುದರಲ್ಲಿ ಕಟ್ಟಕಡೆಗೆ ಸಫಲತೆಯನ್ನು ಪಡೆಯಲಿಕ್ಕಾಗಿ ಬೇಕಾಗಿರುವ ಜ್ಞಾನವನ್ನು ಬೆಳೆಸುವುದರಲ್ಲಿ ಒಂದೇ ಒಂದು ಅತಿ ಪ್ರಾಮುಖ್ಯವಾದ ಚಟುವಟಿಕೆಯು, ಮಕ್ಕಳಿಗೆ ಗಟ್ಟಿಯಾಗಿ ಓದಿಹೇಳುವುದೇ ಆಗಿದೆ. ಇದು ಶಾಲಾ ಮುಂಚಿನ ವರ್ಷಗಳಲ್ಲಿ ವಿಶೇಷವಾಗಿ ಸತ್ಯವಾಗಿದೆ” ಎಂದು ವಾಚಕರ ಒಂದು ರಾಷ್ಟ್ರವಾಗುವುದು (ಇಂಗ್ಲಿಷ್) ಎಂಬ ವರದಿಯು ಹೇಳುತ್ತದೆ.
ಒಂದು ಪುಸ್ತಕದಿಂದ ಓದಿಹೇಳಲಾಗುವ ಕಥೆಗಳಿಗೆ ಕಿವಿಗೊಡುತ್ತಿರುವಾಗ, ನಮ್ಮ ಮಾತುಗಳು ಮತ್ತು ಪುಟದಲ್ಲಿರುವ ಅಕ್ಷರಗಳು ಒಂದಕ್ಕೊಂದು ಹೊಂದಿಕೊಂಡು ಹೋಗುತ್ತವೆಂಬುದನ್ನು ಮಕ್ಕಳು ಎಳೆಯ ಪ್ರಾಯದಲ್ಲೇ ಕಲಿತುಕೊಳ್ಳುತ್ತಾರೆ. ಪುಸ್ತಕದಲ್ಲಿರುವ ಭಾಷೆಯೊಂದಿಗೂ ಅವರು ಪರಿಚಿತರಾಗುತ್ತಾರೆ. “ನಾವು ಒಂದು ಮಗುವಿಗೆ ಪ್ರತಿ ಸಾರಿ ಓದಿದಾಗಲೆಲ್ಲ, ಆ ಮಗುವಿನ ಮಿದುಳಿಗೆ ‘ಸಂತೋಷದ’ ಸಂದೇಶವೊಂದನ್ನು ಕಳುಹಿಸುತ್ತೇವೆ. ನೀವು ಅದನ್ನು ಒಂದು ಜಾಹೀರಾತೆಂದೂ ಕರೆಯಬಹುದು. ಯಾಕೆಂದರೆ ಅದು ಪುಸ್ತಕಗಳನ್ನು ಹಾಗೂ ಮುದ್ರಿತ ವಿಷಯಗಳನ್ನು, ಸಂತೋಷದೊಂದಿಗೆ ಜೋಡಿಸುವಂತೆ ಮಗುವಿನ ಮನಸ್ಸನ್ನು ಒಗ್ಗಿಸುತ್ತದೆ” ಎಂದು, ಗಟ್ಟಿಯಾಗಿ ಓದುವುದರ ಕುರಿತಾದ ಒಂದು ಕೈಪಿಡಿಯು ಹೇಳುತ್ತದೆ. ಈ ಪುಸ್ತಕ ಪ್ರೇಮವನ್ನು ಪೋಷಿಸಿ ಅದಕ್ಕೆ ನೀರೆರೆಯುವ ಹೆತ್ತವರು, ತಮ್ಮ ಮಕ್ಕಳಲ್ಲಿ ವಾಚಕರಾಗಿರುವ ಜೀವನಪೂರ್ತಿ ಆಸೆಯೊಂದನ್ನು ಬೆಳೆಸುವರು.
ತಮ್ಮ ಸುತ್ತಲಿನ ಜಗತ್ತನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯಮಾಡುವುದು
ತಮ್ಮ ಮಕ್ಕಳಿಗೆ ಗಟ್ಟಿಯಾಗಿ ಓದಿಹೇಳುವ ಹೆತ್ತವರು ಅವರಿಗೆ ಒಂದು ಬೆಲೆಬಾಳುವ ಉಡುಗೊರೆಯನ್ನು ಕೊಡಬಲ್ಲರು. ಅದೇನೆಂದರೆ ಜನರು, ಸ್ಥಳಗಳು ಮತ್ತು ವಸ್ತುಗಳ ಕುರಿತಾದ ಜ್ಞಾನವೇ. ತೀರ ಕಡಿಮೆ ಖರ್ಚಿನಲ್ಲಿ, ಅವರು ಪುಸ್ತಕಗಳ ಪುಟಗಳ ಮುಖಾಂತರ ಲೋಕವನ್ನು “ಸುತ್ತಾಡಬಲ್ಲರು.” ಎರಡು ವರ್ಷ ಪ್ರಾಯದ ಆಂತೊನಿಯ ಉದಾಹರಣೆಯನ್ನು ಪರಿಗಣಿಸಿರಿ. ಅವನು ಹುಟ್ಟಿದಂದಿನಿಂದ ಅವನ ತಾಯಿ ಅವನಿಗೆ ಓದಿಹೇಳುತ್ತಿದ್ದಳು. ಅವಳನ್ನುವುದು: “ಅವನು ಪ್ರಾಣಿಸಂಗ್ರಹಾಲಯಕ್ಕೆ ನೀಡಿದ ಪ್ರಥಮ ಭೇಟಿಯು ಒಂದು ಮರುಕಂಡುಹಿಡಿತವಾಗಿತ್ತು.” ಹೇಗೆ? ಯಾಕೆಂದರೆ ಆಂತೊನಿ ಜೀಬ್ರಾಗಳನ್ನು, ಸಿಂಹಗಳನ್ನು, ಜಿರಾಫೆಗಳನ್ನು ಮತ್ತು ಇತರ ಪ್ರಾಣಿಗಳನ್ನು ಪ್ರಥಮ ಸಲ ಕಣ್ಣಾರೆ ನೋಡುತ್ತಿದ್ದರೂ, ಅವನಿಗೆ ಈ ಪ್ರಾಣಿಗಳನ್ನು ಮೊದಲೇ ಪುಸ್ತಕಗಳ ಮುಖಾಂತರ ಪರಿಚಯಿಸಲಾಗಿತ್ತು.
ಅವನ ತಾಯಿ ಇನ್ನೂ ವಿವರಿಸುವುದು: “ಆಂತೊನಿ ಅಸಂಖ್ಯಾತ ಜನರು, ಪ್ರಾಣಿಗಳು, ವಸ್ತುಗಳು ಮತ್ತು ವಿಚಾರಗಳೊಂದಿಗೆ ಸಂತೋಷದಿಂದ ಪರಿಚಯ ಬೆಳೆಸಿದ್ದಾನೆ. ಇದೆಲ್ಲವನ್ನೂ ಕೇವಲ ಪುಸ್ತಕಗಳಿಂದ, ಅವನ ಜೀವನದ ಮೊದಲ ಎರಡು ವರ್ಷಗಳಲ್ಲಿ ಮಾಡಿದ್ದಾನೆ.” ಹೌದು ಮಕ್ಕಳು ಎಳೆಯರಾಗಿರುವಾಗಲೇ ಅವರಿಗೆ ಗಟ್ಟಿಯಾಗಿ ಓದಿಹೇಳುವುದು, ಅವರು ಜೀವಿಸುತ್ತಿರುವ ಜಗತ್ತಿನ ಕುರಿತಾದ ಅವರ ತಿಳಿವಳಿಕೆಯನ್ನು ಹೆಚ್ಚಿಸಬಲ್ಲದು.
ಒಂದು ಆಪ್ತ ಸಂಬಂಧವನ್ನು ಬೆಳೆಸುವುದು
ರೂಪುಗೊಳ್ಳುವ ವರ್ಷಗಳಲ್ಲಿ ಎಳೆಯ ಮಕ್ಕಳು ಯಾವ ಮನೋಭಾವಗಳನ್ನು ಬೆಳೆಸಿಕೊಳ್ಳುತ್ತಾರೋ ಅವು, ಮುಂದಿನ ವರ್ಷಗಳಲ್ಲಿ ಅವರ ಕ್ರಿಯೆಗಳನ್ನು ಪ್ರಭಾವಿಸುವವು. ಹೀಗಿರುವುದರಿಂದ, ಭರವಸೆ, ಪರಸ್ಪರ ಗೌರವ, ಮತ್ತು ತಿಳಿವಳಿಕೆಯಿಂದ ಕೂಡಿದ ಒಂದು ಆಪ್ತ ಸಂಬಂಧಕ್ಕಾಗಿ ಹೆತ್ತವರು ಅಸ್ತಿವಾರವನ್ನು ಹಾಕಬೇಕು. ಇದನ್ನು ಮಾಡುವುದರಲ್ಲಿ, ಓದುವಿಕೆಯು ಒಂದು ಪ್ರಮುಖ ಪಾತ್ರವನ್ನು ವಹಿಸಬಲ್ಲದು.
ಹೆತ್ತವರು ಮಕ್ಕಳನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು, ಅವರಿಗಾಗಿ ಓದಲು ಸಮಯವನ್ನು ತೆಗೆದುಕೊಂಡರೆ, “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂಬ ಸಂದೇಶವು ಸ್ಪಷ್ಟವಾಗಿ ಅವರಿಗೆ ತಲಪುವುದು. ಕೆನಡದಲ್ಲಿರುವ ಫೀಬಿ ಎಂಬ ತಾಯಿಯೊಬ್ಬಳು, ಈಗ ಎಂಟು ವರ್ಷದವನಾಗಿರುವ ತಮ್ಮ ಮಗನಿಗೆ ಓದಿಹೇಳುವುದರ ಕುರಿತಾಗಿ ತಿಳಿಸುವುದು: “ನೇತನ್ ನಮಗೆ ತುಂಬ ಆಪ್ತನಾಗಿರಲು ಇದು ತುಂಬ ಸಹಾಯಮಾಡಿದೆ ಎಂದು ನನಗೂ ನನ್ನ ಗಂಡನಿಗೂ ಅನಿಸುತ್ತದೆ. ಅವನು ನಮ್ಮೊಂದಿಗೆ ಮನಬಿಚ್ಚಿ ಎಲ್ಲವನ್ನೂ ಹೇಳುತ್ತಾನೆ. ಅದು ಒಂದು ವಿಶೇಷ ರೀತಿಯ ಬಂಧವನ್ನು ಸೃಷ್ಟಿಸಿದೆ.”
ಸಿಂಡಿ ಎಂಬವಳು, ತನ್ನ ಮಗಳು ಸುಮಾರು ಒಂದು ವರ್ಷದವಳಾಗಿದ್ದಂದಿನಿಂದ ಮತ್ತು ಒಂದೋ ಎರಡೋ ನಿಮಿಷಗಳ ವರೆಗೆ ಕುಳಿತುಕೊಂಡು ಕಿವಿಗೊಡುವಷ್ಟು ಎಚ್ಚರಿಕೆಯುಳ್ಳವಳಾಗಿದ್ದಂದಿನಿಂದ, ಅವಳಿಗೆ ಗಟ್ಟಿಯಾಗಿ ಓದಿಹೇಳುವ ಅಭ್ಯಾಸವನ್ನು ಮಾಡಿದ್ದಾಳೆ. ಈ ಎಲ್ಲ ಸಮಯ ಮತ್ತು ಪ್ರಯತ್ನವು ಸಾರ್ಥಕವಾಯಿತೊ? ಸಿಂಡಿ ಗಮನಿಸುವುದು: “ಜೊತೆಯಾಗಿ ಓದುವುದರಿಂದ ಬರುವ ಸ್ನೇಹಪರ, ಕಾಳಜಿಭರಿತ ಪರಿಸರವು, ಶಾಲೆಯಲ್ಲಿ ನಡೆದ ಘಟನೆಯನ್ನೊ ಅಥವಾ ಒಬ್ಬ ಸ್ನೇಹಿತೆಯೊಂದಿಗಿನ ಯಾವುದೇ ಸಮಸ್ಯೆಯನ್ನೊ ಮುಚ್ಚುಮರೆಯಿಲ್ಲದೆ ತಿಳಿಸುವಂತೆ ಅಬೀಗೈಲಳನ್ನು ಪ್ರೇರಿಸುತ್ತದೆ. ಎಲ್ಲ ಹೆತ್ತವರು ಇದೇ ರೀತಿಯ ಪ್ರತಿಕ್ರಿಯೆಗಾಗಿ ಕಾತುರದಿಂದ ಎದುರುನೋಡುತ್ತಾರಲ್ಲವೆ?” ಗಟ್ಟಿಯಾಗಿ ಓದುವುದು, ಹೆತ್ತವರ ಮತ್ತು ಮಗುವಿನ ನಡುವೆ ಒಂದು ಆಪ್ತವಾದ ಬಂಧಕ್ಕೆ ನಡೆಸುವುದು.
ಪ್ರಾಮುಖ್ಯ ಜೀವನ ಕೌಶಲಗಳನ್ನು ನಾಟಿಸುವುದು
“ಇಂದು ನಮ್ಮ ಮಕ್ಕಳು ಟೆಲಿವಿಷನ್ ಮತ್ತು ಬೇರೆ ಮೂಲಗಳಿಂದ ಎಷ್ಟೊಂದು ಮಾನಸಿಕ ಕಚಡವನ್ನು ಒಳತೆಗೆದುಕೊಳ್ಳುತ್ತಾರೆಂದರೆ, ಅವರಿಗೆ ಹಿಂದೆಂದಿಗಿಂತಲೂ ಹೆಚ್ಚಾಗಿ ಸ್ವಲ್ಪ ಮಾನಸಿಕ ಪೌಷ್ಟಿಕತೆ, ಸ್ವಲ್ಪ ಸ್ಪಷ್ಟವಾದ ಯೋಚನಾಶಕ್ತಿ, ಸ್ವಲ್ಪ ವಿವೇಕ, ಸ್ವಲ್ಪ ಮಾನಸಿಕ ಲಂಗರುಗಳ ಅಗತ್ಯವಿದೆ. ಇದು ಅವರಿಗೆ ತಮ್ಮ ಮೌಲ್ಯಗಳಿಗನುಸಾರ ಜೀವಿಸುವಂತೆ ಮತ್ತು ತಮ್ಮ ಬದುಕಿನ ಬಗ್ಗೆ ಸರಿಯಾದ ದೃಷ್ಟಿಕೋನವನ್ನು ಇಟ್ಟುಕೊಳ್ಳುವಂತೆ ಸಹಾಯಮಾಡುವುದು,” ಎಂದು ಬಲವಾದ ಕುಟುಂಬಕ್ಕೆ 3 ಹೆಜ್ಜೆಗಳು (ಇಂಗ್ಲಿಷ್) ಎಂಬ ಪುಸ್ತಕವು ಹೇಳುತ್ತದೆ. ಮಕ್ಕಳಿಗೆ ಸಕಾರಾತ್ಮಕವಾದ ಮತ್ತು ಹಿತಕರವಾದ ಪ್ರಭಾವವನ್ನು ಒದಗಿಸಲು ಹೆತ್ತವರೇ ಯೋಗ್ಯವಾದ ಸ್ಥಾನದಲ್ಲಿದ್ದಾರೆ.
ಪುಸ್ತಕಗಳಲ್ಲಿರುವ ಜಟಿಲವಾದ ಮತ್ತು ಚೆನ್ನಾಗಿ ರಚಿಸಲ್ಪಟ್ಟಿರುವ ವಾಕ್ಯಗಳನ್ನು ಮಗುವಿಗೆ ಪರಿಚಯಿಸುವುದು, ಮಗು ಮಾತಿನಲ್ಲಿ ಮತ್ತು ಬರಹದಲ್ಲಿ ತನ್ನ ವಿಚಾರಗಳನ್ನು ವ್ಯಕ್ತಪಡಿಸುವಂತೆ ಕಲಿಸುವುದರಲ್ಲಿ ಒಂದು ಉಪಯುಕ್ತ ಸಾಧನವಾಗಿರಬಲ್ಲದು. ಶಿಶುಗಳಿಗೆ ಪುಸ್ತಗಳು ಅಗತ್ಯ (ಇಂಗ್ಲಿಷ್) ಎಂಬ ಪುಸ್ತಕದ ಲೇಖಕರಾದ ಡಾರತಿ ಬಟ್ಲರ್ ಹೇಳುವುದು: “ಒಬ್ಬ ವ್ಯಕ್ತಿಯ ಯೋಚನಾಲಹರಿಯ ಗುಣಮಟ್ಟವು, ಅವನ ಭಾಷೆಯ ಗುಣಮಟ್ಟದ ಮೇಲೆ ಹೊಂದಿಕೊಂಡಿರುವುದು. ಕಲಿಯುವಿಕೆ ಮತ್ತು ಬುದ್ಧಿಶಕ್ತಿಯ ಸಂಬಂಧದಲ್ಲಿ ಭಾಷೆಯು ಅತಿ ಪ್ರಧಾನವಾದದ್ದಾಗಿದೆ.” ಚೆನ್ನಾಗಿ ಸಂವಾದಮಾಡುವ ಸಾಮರ್ಥ್ಯವು, ಒಳ್ಳೆಯ ಸಂಬಂಧಗಳ ಜೀವಾಧಾರವಾಗಿರುತ್ತದೆ.
ಯೋಗ್ಯವಾದ ಪುಸ್ತಕಗಳಿಂದ ಓದಿಹೇಳುವುದು, ಮಕ್ಕಳಲ್ಲಿ ಒಳ್ಳೆಯ ನೀತಿತತ್ತ್ವಗಳು ಮತ್ತು ಮೌಲ್ಯಗಳನ್ನು ಸಹ ಬಲಪಡಿಸಬಲ್ಲದು. ತಮ್ಮ ಮಕ್ಕಳಿಗೆ ಓದಿಹೇಳಿ, ಅವರೊಂದಿಗೆ ವಿವೇಚಿಸುವ ಹೆತ್ತವರು, ಅವರು ಸಮಸ್ಯೆಯನ್ನು ಬಗೆಹರಿಸುವ ಕೌಶಲಗಳನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಬಲ್ಲರು. ಸಿಂಡಿ ತನ್ನ ಮಗಳಾದ ಅಬೀಗೈಲಳಿಗೆ ಓದಿಹೇಳುತ್ತಿದ್ದಾಗ, ಆ ಕಥೆಗಳಲ್ಲಿದ್ದ ಸನ್ನಿವೇಶಗಳಿಗೆ ಅಬೀಗೈಲಳು ತೋರಿಸುತ್ತಿದ್ದ ಪ್ರತಿಕ್ರಿಯೆಯನ್ನು ಜಾಗರೂಕತೆಯಿಂದ ಗಮನಿಸುತ್ತಿದ್ದಳು. “ಹೆತ್ತವರೋಪಾದಿ ನಾವು ಅವಳ ವ್ಯಕ್ತಿತ್ವದಲ್ಲಿರುವ ಗೂಢ ಲಕ್ಷಣಗಳ ಕುರಿತಾಗಿ ಹೆಚ್ಚನ್ನು ತಿಳಿದುಕೊಂಡು,
ಅಯೋಗ್ಯವಾದ ಆಲೋಚನಾ ರೀತಿಯನ್ನು ಅವಳು ಮೊಳಕೆಯಲ್ಲೇ ಚಿವುಟಿಹಾಕುವಂತೆ ಸಹಾಯಮಾಡಬಲ್ಲೆವೆಂದು ನಿರೀಕ್ಷಿಸುತ್ತೇವೆ.” ಹೌದು, ಮಕ್ಕಳಿಗೆ ಗಟ್ಟಿಯಾಗಿ ಓದಿಹೇಳುವುದು ಹೃದಮನಗಳೆರಡನ್ನೂ ತರಬೇತುಗೊಳಿಸಬಲ್ಲದು.ಓದುವಿಕೆಯನ್ನು ಆನಂದದಾಯಕವಾಗಿ ಮಾಡಿರಿ
“ಮಗುವಿನ ಮೇಲೆ ಒತ್ತಡವನ್ನು ಹಾಕದೇ” ಓದಿರಿ. ವಾತಾವರಣವು ಆರಾಮದಾಯಕವೂ, ಕಟ್ಟುನಿಟ್ಟಿನ ಕ್ರಮವನ್ನೇ ಅನುಸರಿಸದಂಥದ್ದು ಮತ್ತು ಆನಂದದಾಯಕವಾಗಿರಲಿ. ಓದುವುದನ್ನು ಯಾವಾಗ ನಿಲ್ಲಿಸಬೇಕೆಂಬುದು ವಿವೇಚನಾಶೀಲ ಹೆತ್ತವರಿಗೆ ಗೊತ್ತಿರುತ್ತದೆ. ಲೀನಾ ಹೇಳುವುದು: “ಎರಡು ವರ್ಷದವನಾಗಿರುವ ಆ್ಯಂಡ್ರೂ ಕೆಲವೊಮ್ಮೆ ತುಂಬ ದಣಿದಿರುತ್ತಾನೆ ಮತ್ತು ತುಂಬ ಹೊತ್ತು ಸುಮ್ಮನೆ ಕೂರುವುದಕ್ಕೆ ಆಗುವುದಿಲ್ಲ. ಆಗ ನಾವು ಅವನ ಮನಸ್ಸಿನ ಸ್ಥಿತಿಗೆ ಹೊಂದಿಕೊಂಡು, ನಮ್ಮ ಓದುವ ಶೆಡ್ಯೂಲನ್ನು ಮೊಟಕುಗೊಳಿಸುತ್ತೇವೆ. ಓದುವಿಕೆಯ ಬಗ್ಗೆ ಆ್ಯಂಡ್ರೂ ನಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುವುದನ್ನು ನಾವು ಬಯಸುವುದಿಲ್ಲ. ಆದುದರಿಂದ, ಅವನಿಗೆ ತಡೆದುಕೊಳ್ಳಲು ಸಾಧ್ಯವಾಗದಷ್ಟರ ಮಟ್ಟಿಗೆ ನಾವು ಬಲವಂತದಿಂದ ಓದುತ್ತಾ ಹೋಗುವುದಿಲ್ಲ.”
ಗಟ್ಟಿಯಾಗಿ ಓದುವುದರಲ್ಲಿ, ಪುಸ್ತಕದಿಂದ ಕೇವಲ ಓದುತ್ತಾ ಹೋಗುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಚಿತ್ರಗಳಿರುವ ಪುಸ್ತಕದ ಪುಟವನ್ನು ಯಾವಾಗ ತಿರುವಿಹಾಕಿದರೆ ಮಗುವಿನ ಕುತೂಹಲವು ಹೆಚ್ಚುವುದೆಂಬುದನ್ನು ತಿಳಿದುಕೊಳ್ಳಿರಿ. ಸರಾಗವಾಗಿ ಓದಿರಿ. ಸ್ವರಭಾರ ಮತ್ತು ಅರ್ಥಒತ್ತು ಸಹ ಕಥೆಯಲ್ಲಿ ಜೀವತುಂಬಿಸುವುದು. ನಿಮ್ಮ ಸ್ವರದಲ್ಲಿರುವ ಅಕ್ಕರೆಯು ನಿಮ್ಮ ಮಗುವಿನಲ್ಲಿ ಸುರಕ್ಷಿತ ಭಾವನೆಯನ್ನು ತುಂಬಿಸಬಲ್ಲದು.
ನಿಮ್ಮ ಮಗು ಸಕ್ರಿಯವಾಗಿ ಪಾಲ್ಗೊಂಡರೆ, ಆಗ ಅತ್ಯಧಿಕ ಪ್ರಯೋಜನಗಳು ದಕ್ಕುವವು. ಆಗಾಗ್ಗೆ ಓದುವುದನ್ನು ನಿಲ್ಲಿಸಿ, ಒಂದಕ್ಕಿಂತಲೂ ಹೆಚ್ಚು ಶಬ್ದಗಳನ್ನುಪಯೋಗಿಸಿ ಉತ್ತರಿಸಬೇಕಾಗುವಂಥ ರೀತಿಯ ಪ್ರಶ್ನೆಗಳನ್ನು ಕೇಳಿರಿ. ನಿಮ್ಮ ಮಗು ಕೊಡುವ ಉತ್ತರಗಳಿಗೆ ಇನ್ನೂ ಕೆಲವೊಂದು ಪರ್ಯಾಯ ಉತ್ತರಗಳನ್ನು ನೀಡುವ ಮೂಲಕ ಆ ಉತ್ತರಗಳನ್ನು ವಿಸ್ತರಿಸಿ.
ಪುಸ್ತಕಗಳನ್ನು ಜಾಗ್ರತೆಯಿಂದ ಆಯ್ಕೆಮಾಡಿರಿ
ಆದರೆ ಅತಿ ಪ್ರಾಮುಖ್ಯ ಅಂಶವು, ಒಳ್ಳೆಯ ಪುಸ್ತಕಗಳನ್ನು ಆಯ್ಕೆಮಾಡುವುದಾಗಿರಬಹುದು. ಅದಕ್ಕಾಗಿ ಸ್ವಲ್ಪ ಸಂಶೋಧನೆಯನ್ನು ಮಾಡಬೇಕಾಗಬಹುದು. ಪುಸ್ತಕಗಳನ್ನು ಕೂಲಂಕಷವಾಗಿ ಪರೀಕ್ಷಿಸಿರಿ, ಮತ್ತು ಸಕಾರಾತ್ಮಕವಾದ ಇಲ್ಲವೇ ಬೋಧಪ್ರದ ಸಂದೇಶವುಳ್ಳ ಮತ್ತು ಕಥೆಯಲ್ಲಿ ಒಳ್ಳೆಯ ನೀತಿಪಾಠವುಳ್ಳ ಪುಸ್ತಕಗಳಿಗೆ ಮಾತ್ರ ಅಂಟಿಕೊಳ್ಳಿ. ಪುಸ್ತಕದ ಮುಖಪುಟಗಳು, ಚಿತ್ರಗಳು, ಮತ್ತು ಸಾಮಾನ್ಯ ಲಿಪಿಶೈಲಿಯನ್ನು ನಿಕಟವಾಗಿ ಪರೀಕ್ಷಿಸಿರಿ. ಹೆತ್ತವರಿಗೂ ಮಗುವಿಗೂ ಆಸಕ್ತಿಕರವಾಗಿರುವ ಪುಸ್ತಕಗಳನ್ನು ಆರಿಸಿರಿ. ಅನೇಕ ಬಾರಿ ಮಕ್ಕಳು, ಒಂದೇ ಕಥೆಯನ್ನು ಪುನಃ ಪುನಃ ಓದಿಹೇಳುವಂತೆ ಕೇಳಿಕೊಳ್ಳುತ್ತಾರೆ.
ಲೋಕದಾದ್ಯಂತ ಅನೇಕಾನೇಕ ಹೆತ್ತವರು, ಬೈಬಲ್ ಕಥೆಗಳ ನನ್ನ ಪುಸ್ತಕವನ್ನು ವಿಶೇಷವಾಗಿ ಗಣ್ಯಮಾಡಿದ್ದಾರೆ. * ಹೆತ್ತವರು ಅದನ್ನು ತಮ್ಮ ಮಕ್ಕಳೊಂದಿಗೆ ಓದುವಂಥ ರೀತಿಯಲ್ಲಿ ಅದು ವಿನ್ಯಾಸಿಸಲ್ಪಟ್ಟಿತು. ಮಕ್ಕಳು ಒಳ್ಳೆಯ ವಾಚಕರಾಗುವಂತೆ ಅದು ಸಹಾಯಮಾಡಬಲ್ಲದು ಮಾತ್ರವಲ್ಲ, ಅದು ಬೈಬಲಿನಲ್ಲಿ ಅವರ ಆಸಕ್ತಿಯನ್ನೂ ಕೆರಳಿಸಬಲ್ಲದು.
ತಮ್ಮ ಮಕ್ಕಳಿಗೆ ಗಟ್ಟಿಯಾಗಿ ಓದಿಹೇಳುವ ಹೆತ್ತವರು ಅವರಲ್ಲಿ ಒಳ್ಳೆಯ ಓದುವ ರೂಢಿಗಳನ್ನು ಹುಟ್ಟಿಸಬಲ್ಲರು. ಮತ್ತು ಇದು ಅವರಿಗೆ ಜೀವನದಾದ್ಯಂತ ಅರ್ಥಪೂರ್ಣ ಫಲಿತಾಂಶಗಳನ್ನು ತರಬಹುದು. ಜೋಆನ್ ಎಂಬವಳು ತನ್ನ ಮಗಳ ಕುರಿತಾಗಿ ಹೀಗಂದಳು: “ಜೆನಿಫರ್ ಶಾಲೆಗೆ ಹೋಗುವುದನ್ನು ಆರಂಭಿಸುವ ಮುಂಚೆಯೇ ಓದಲು ಹಾಗೂ ಬರೆಯಲು ಕಲಿತಳು ಮತ್ತು ಓದುವಿಕೆಯ ಬಗ್ಗೆ ಅಭಿರುಚಿಯನ್ನು ಬೆಳೆಸಿಕೊಂಡಳು ಮಾತ್ರವಲ್ಲ, ಇನ್ನೂ ಪ್ರಾಮುಖ್ಯವಾಗಿ ನಮ್ಮ ಮಹಾ ಸೃಷ್ಟಿಕರ್ತನಾಗಿರುವ ಯೆಹೋವನಿಗಾಗಿಯೂ ಅವಳು ಪ್ರೀತಿಯನ್ನು ಬೆಳೆಸಿಕೊಂಡಳು. ತನ್ನ ಎಲ್ಲ ನಿರ್ಣಯಗಳಲ್ಲಿ ಮಾರ್ಗದರ್ಶನವನ್ನು ನೀಡುವಂತೆ ಅವಳು ಆತನ ಲಿಖಿತ ವಾಕ್ಯವಾದ ಬೈಬಲಿನ ಮೇಲೆ ಆತುಕೊಳ್ಳಲು ಕಲಿತುಕೊಂಡಿದ್ದಾಳೆ.” ನಿಜವಾಗಿಯೂ, ನೀವು ಒಬ್ಬ ಮಗುವಿಗೆ ಏನನ್ನು ಪ್ರೀತಿಸುವಂತೆ ಸಹಾಯಮಾಡುತ್ತೀರೊ ಅದು, ಅವನು ಇಲ್ಲವೇ ಅವಳು ಏನನ್ನು ಕಲಿಯುವಂತೆ ಸಹಾಯಮಾಡುತ್ತೀರೊ ಅದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿರಬಲ್ಲದು. g01 11/22
[ಪಾದಟಿಪ್ಪಣಿ]
^ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
[ಪುಟ 28ರಲ್ಲಿರುವ ಚೌಕ/ಚಿತ್ರ]
ನಿಮ್ಮ ಮಗುವಿಗೆ ಓದಿಹೇಳುವಾಗ
•ಅವನು ಅಥವಾ ಅವಳು ಶಿಶುವಾಗಿರುವಾಗಲೇ ಆರಂಭಿಸಿರಿ.
•ನಿಮ್ಮ ಮಗು ಓದುವಿಕೆಗಾಗಿ ತಯಾರಾಗುತ್ತಾ ಶಾಂತವಾಗಿ ಕುಳಿತುಕೊಳ್ಳುವಂತೆ ಸಮಯವನ್ನು ಕೊಡಿರಿ.
•ನಿಮಗಿಬ್ಬರಿಗೂ ಇಷ್ಟವಾಗುವಂಥ ಕಥೆಗಳನ್ನು ಓದಿರಿ.
•ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚು ಸಲ ಓದಿರಿ ಮತ್ತು ಭಾವನೆಗಳೊಂದಿಗೆ ಓದಿರಿ.
•ಪ್ರಶ್ನೆಗಳನ್ನು ಕೇಳುವ ಮೂಲಕ ನಿಮ್ಮ ಮಗುವನ್ನು ಅದರಲ್ಲಿ ಒಳಗೂಡಿಸಿರಿ.
[Picture Credit Line on page ]
Photograph taken at the Wildlife Conservation Society’s Bronx Zoo