ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುರುಷರು ಸ್ತ್ರೀಯರನ್ನು ಏಕೆ ಹೊಡೆಯುತ್ತಾರೆ?

ಪುರುಷರು ಸ್ತ್ರೀಯರನ್ನು ಏಕೆ ಹೊಡೆಯುತ್ತಾರೆ?

ಪುರುಷರು ಸ್ತ್ರೀಯರನ್ನು ಏಕೆ ಹೊಡೆಯುತ್ತಾರೆ?

ಲ್ಲ ರೀತಿಯ ದುಷ್ಕರ್ಮಿಗಳಿಂದ ಬರುವ ಅಪಾಯಕ್ಕಿಂತಲೂ ಸ್ತ್ರೀಯರು ತಮ್ಮ ಪುರುಷ ಸಹಭಾಗಿಗಳಿಂದ ಕೊಲ್ಲಲ್ಪಡುವುದೇ ಹೆಚ್ಚು ಸಂಭವನೀಯ ಎಂದು ಕೆಲವು ಪರಿಣತರು ಹೇಳುತ್ತಾರೆ. ವಿವಾಹ ಸಂಗಾತಿಗಳ ಮೇಲೆ ದೌರ್ಜನ್ಯ ನಡೆಸುವ ಪ್ರವೃತ್ತಿಯನ್ನು ನಿಲ್ಲಿಸುವ ಪ್ರಯತ್ನದಲ್ಲಿ, ಅನೇಕಾನೇಕ ಅಧ್ಯಯನಗಳು ನಡೆಸಲ್ಪಟ್ಟಿವೆ. ಯಾವ ರೀತಿಯ ವ್ಯಕ್ತಿಯು ತನ್ನ ಪತ್ನಿಯನ್ನು ಹೊಡೆಯುತ್ತಾನೆ? ಅವನ ಬಾಲ್ಯಾವಸ್ಥೆ ಹೇಗಿತ್ತು? ಪ್ರಣಯಾಚರಣೆ ನಡೆಸುತ್ತಿದ್ದಾಗ ಅವನು ಹಿಂಸಾತ್ಮಕವಾಗಿ ವರ್ತಿಸುತ್ತಿದ್ದನೋ? ತನ್ನ ಸಂಗಾತಿಯನ್ನು ಹೊಡೆಯುವವನು ವೈದ್ಯಕೀಯ ಚಿಕಿತ್ಸೆಗೆ ಹೇಗೆ ಪ್ರತಿಕ್ರಿಯಿಸುತ್ತಾನೆ?

ಪರಿಣತರು ತಿಳಿದುಕೊಂಡಿರುವ ಒಂದು ಮುಖ್ಯ ಸಂಗತಿಯೇನೆಂದರೆ, ತಮ್ಮ ಪತ್ನಿಯರನ್ನು ಹೊಡೆಯುವ ವ್ಯಕ್ತಿಗಳು ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವುದಿಲ್ಲ. ತಮ್ಮ ಸಂಗಾತಿಗಳನ್ನು ಹೊಡೆಯುವವರಲ್ಲಿ ಎರಡು ವಿಧದ ವ್ಯಕ್ತಿಗಳಿರುತ್ತಾರೆ. ಒಂದು ಕಡೆಯಲ್ಲಿ, ಎಲ್ಲೋ ಒಮ್ಮೊಮ್ಮೆ ಮಾತ್ರ ಹೊಡೆಯುವ ವ್ಯಕ್ತಿಯಿದ್ದಾನೆ. ಅವನು ಯಾವುದೇ ರೀತಿಯ ಆಯುಧವನ್ನು ಉಪಯೋಗಿಸುವುದಿಲ್ಲ ಮತ್ತು ತನ್ನ ಸಂಗಾತಿಯ ಮೇಲೆ ಸತತವಾಗಿ ದೌರ್ಜನ್ಯ ನಡೆಸುವ ದಾಖಲೆಯೂ ಇರುವುದಿಲ್ಲ. ಅವನಾದರೋ, ಒಂದು ಹಿಂಸಾತ್ಮಕ ಘಟನೆಯನ್ನು ಕ್ರಮವಾಗಿ ನಡೆಸುವುದಿಲ್ಲ, ಮತ್ತು ಬಾಹ್ಯ ಅಂಶಗಳಿಂದ ಹೀಗೆ ಮಾಡುವಂತೆ ಅವನು ಪ್ರಚೋದಿಸಲ್ಪಡುತ್ತಾನೆ ಎಂಬಂತೆ ತೋರುತ್ತದೆ. ಇನ್ನೊಂದು ಕಡೆಯಲ್ಲಿ, ಯಾವಾಗಲೂ ಪತ್ನಿಗೆ ಹೊಡೆಯುತ್ತಲೇ ಇರುವ ರೂಢಿಯನ್ನು ಬೆಳೆಸಿಕೊಂಡಿರುವ ವ್ಯಕ್ತಿಯೂ ಇದ್ದಾನೆ. ಅವನ ದೌರ್ಜನ್ಯವು ಮುಂದುವರಿಯುತ್ತಲೇ ಇರುತ್ತದೆ ಮತ್ತು ಈ ವಿಷಯದಲ್ಲಿ ಪಶ್ಚಾತ್ತಾಪಪಡುವ ಸೂಚನೆಯೇ ಕಂಡುಬರುವುದಿಲ್ಲ.

ಆದರೂ, ಬೇರೆ ಬೇರೆ ಪ್ರಮಾಣದಲ್ಲಿ ತಮ್ಮ ಸಂಗಾತಿಯನ್ನು ಹೊಡೆಯುವವರಿದ್ದಾರೆ ಎಂಬ ವಾಸ್ತವಾಂಶವು, ಕೆಲವು ರೀತಿಯ ಹೊಡೆಯುವಿಕೆಯು ಅಷ್ಟೇನೂ ಗಂಭೀರವಾದದ್ದಲ್ಲ ಎಂಬುದನ್ನು ಅರ್ಥೈಸುವುದಿಲ್ಲ. ಯಾವುದೇ ರೀತಿಯ ಶಾರೀರಿಕ ದೌರ್ಜನ್ಯವು ಹಾನಿಯನ್ನು ಹಾಗೂ ಮರಣವನ್ನೂ ಉಂಟುಮಾಡಬಹುದು ಎಂಬುದಂತೂ ಸತ್ಯ. ಆದುದರಿಂದ, ಒಬ್ಬ ವ್ಯಕ್ತಿಗೆ ಹೋಲಿಸುವಾಗ ಇನ್ನೊಬ್ಬ ವ್ಯಕ್ತಿಯು ತೀರ ಆಗಿಂದಾಗ್ಗೆ ಹಿಂಸಾಚಾರವನ್ನು ನಡಿಸುವುದಿಲ್ಲ ಅಥವಾ ಅಷ್ಟೇನೂ ತೀವ್ರವಾದ ಹಾನಿಯನ್ನು ಉಂಟುಮಾಡುವುದಿಲ್ಲ ಎಂಬ ಸಂಗತಿಯು, ಅಂತಹ ಕೃತ್ಯವನ್ನು ಕ್ಷಮಾರ್ಹವಾಗಿ ಮಾಡಲಾರದು. “ಅಂಗೀಕಾರಾರ್ಹ” ಹೊಡೆಯುವಿಕೆ ಎಂಬಂಥ ವಿಚಾರವೇ ಇಲ್ಲ ಎಂಬುದಂತೂ ಸ್ಪಷ್ಟ. ಆದರೂ, ತನ್ನ ಉಳಿದ ಜೀವಮಾನವೆಲ್ಲಾ ಪಾಲನೆಮಾಡುತ್ತೇನೆಂದು ಪ್ರತಿಜ್ಞೆಮಾಡಿ ಸ್ವೀಕರಿಸಿದಂಥ ಸ್ತ್ರೀಯ ಮೇಲೆ ಶಾರೀರಿಕವಾಗಿ ದೌರ್ಜನ್ಯ ನಡೆಸುವಂತೆ ಯಾವ ಅಂಶಗಳು ಒಬ್ಬ ಪುರುಷನನ್ನು ಪ್ರಚೋದಿಸಬಹುದು?

ಕುಟುಂಬದ ಪ್ರಭಾವ

ಶಾರೀರಿಕವಾಗಿ ದೌರ್ಜನ್ಯ ನಡೆಸುವ ಪುರುಷರಲ್ಲಿ ಅನೇಕರು, ದೌರ್ಜನ್ಯಭರಿತ ಕುಟುಂಬಗಳಲ್ಲಿ ಬೆಳೆಸಲ್ಪಟ್ಟವರಾಗಿದ್ದರು ಎಂಬುದರಲ್ಲಿ ಆಶ್ಚರ್ಯವೇನಿಲ್ಲ. “ತಮ್ಮ ಸಂಗಾತಿಗಳನ್ನು ಹೊಡೆಯುವವರಲ್ಲಿ ಹೆಚ್ಚಿನವರು, ‘ಯುದ್ಧ ಕ್ಷೇತ್ರ’ಗಳಿಗೆ ಹೋಲುವಂತಹ ಮನೆಗಳಲ್ಲಿ ಬೆಳೆಸಲ್ಪಟ್ಟವರಾಗಿದ್ದರು” ಎಂದು, ಪತ್ನಿಯರ ಮೇಲಿನ ದೌರ್ಜನ್ಯದ ಕುರಿತು ಸುಮಾರು ಎರಡು ದಶಕಗಳಿಗಿಂತಲೂ ಹೆಚ್ಚಿನ ಕಾಲಾವಧಿಯ ವರೆಗೆ ಸಂಶೋಧನೆ ನಡೆಸಿರುವ ಮೈಕಲ್‌ ಗ್ರಾಬಿಕ್‌ ಬರೆಯುತ್ತಾರೆ. “ಅವರು ಶಿಶುಗಳು ಮತ್ತು ಚಿಕ್ಕ ಮಕ್ಕಳಾಗಿದ್ದಾಗ, ಭಾವನಾತ್ಮಕ ಮತ್ತು ಶಾರೀರಿಕ ಹಿಂಸಾಚಾರವು ‘ಸರ್ವಸಾಮಾನ್ಯ’ವಾಗಿದ್ದಂಥ ಪ್ರತಿಕೂಲ ವಾತಾವರಣದಲ್ಲಿ ಬೆಳೆದವರಾಗಿದ್ದರು.” ಒಬ್ಬ ಪರಿಣತರಿಗನುಸಾರ, ಅಂತಹ ಪರಿಸರದಲ್ಲಿ ಬೆಳೆಸಲ್ಪಟ್ಟಿರುವ ಒಬ್ಬ ವ್ಯಕ್ತಿಯು, “ಸ್ತ್ರೀಯರ ಕಡೆಗಿನ ತನ್ನ ತಂದೆಯ ತಿರಸ್ಕಾರ ಮನೋಭಾವವನ್ನು ತೀರ ಚಿಕ್ಕ ಪ್ರಾಯದಲ್ಲೇ ರೂಢಿಸಿಕೊಳ್ಳಸಾಧ್ಯವಿದೆ. ಒಬ್ಬ ಪುರುಷನು ಯಾವಾಗಲೂ ಸ್ತ್ರೀಯರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕು ಮತ್ತು ಅವರನ್ನು ಹಿಡಿತದಲ್ಲಿಟ್ಟುಕೊಳ್ಳಬೇಕಾದರೆ ಅವರನ್ನು ಹೆದರಿಸಬೇಕು, ಅವರಿಗೆ ನೋವನ್ನುಂಟುಮಾಡಬೇಕು ಮತ್ತು ಅವರನ್ನು ತುಚ್ಛವಾಗಿ ನೋಡಬೇಕು ಎಂದು ಹುಡುಗನು ಕಲಿಯುತ್ತಾನೆ. ಅದೇ ಸಮಯದಲ್ಲಿ, ತನ್ನ ತಂದೆಯ ಅನುಗ್ರಹವನ್ನು ಪಡೆದುಕೊಳ್ಳುವ ಒಂದು ನಿಶ್ಚಿತ ವಿಧವು, ತನ್ನ ತಂದೆಯಂತೆಯೇ ವರ್ತಿಸುವುದಾಗಿದೆ ಎಂಬುದನ್ನೂ ಅವನು ಕಲಿಯುತ್ತಾನೆ.”

ಒಬ್ಬ ಹೆತ್ತವನ ನಡತೆಯು, ಒಂದು ಮಗುವಿನ ಮೇಲೆ ಗಮನಾರ್ಹ ರೀತಿಯ ಅಂದರೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮವನ್ನು ಬೀರಸಾಧ್ಯವಿದೆ ಎಂಬುದನ್ನು ಬೈಬಲು ಸ್ಪಷ್ಟಪಡಿಸುತ್ತದೆ. (ಜ್ಞಾನೋಕ್ತಿ 22:6; ಕೊಲೊಸ್ಸೆ 3:21) ಕುಟುಂಬದ ವಾತಾವರಣವು ಒಬ್ಬ ವ್ಯಕ್ತಿಯು ತನ್ನ ಪತ್ನಿಯನ್ನು ಹೊಡೆಯಲು ನೆಪವನ್ನು ನೀಡುವುದಿಲ್ಲ ಎಂಬುದು ನಿಜವಾದರೂ, ಹಿಂಸಾತ್ಮಕ ಸ್ವಭಾವದ ಬೀಜಗಳು ಎಲ್ಲಿ ಬಿತ್ತಲ್ಪಟ್ಟವು ಎಂಬುದನ್ನು ವಿವರಿಸಲು ಅದು ಸಹಾಯಮಾಡಬಹುದು.

ಸಾಂಸ್ಕೃತಿಕ ಪ್ರಭಾವ

ಕೆಲವು ದೇಶಗಳಲ್ಲಿ ಪತ್ನಿಯನ್ನು ಹೊಡೆಯುವುದು, ಅಂಗೀಕಾರಾರ್ಹವಾದ ಹಾಗೂ ಸಾಮಾನ್ಯವಾದ ವಿಷಯವಾಗಿ ಪರಿಗಣಿಸಲ್ಪಡುತ್ತದೆ. “ತನ್ನ ಪತ್ನಿಗೆ ಹೊಡೆಯುವುದು ಅಥವಾ ಅವಳನ್ನು ಶಾರೀರಿಕವಾಗಿ ಹೆದರಿಸುವುದು ಗಂಡನ ಹಕ್ಕಾಗಿದೆ ಎಂಬುದು ಅನೇಕ ಸಮಾಜಗಳಲ್ಲಿ ತುಂಬ ಮಾನ್ಯಮಾಡಲ್ಪಟ್ಟ ನಿಶ್ಚಿತಾಭಿಪ್ರಾಯವಾಗಿದೆ” ಎಂದು ವಿಶ್ವ ಸಂಸ್ಥೆಯ ವರದಿಯು ತಿಳಿಸುತ್ತದೆ.

ಇಂತಹ ದೌರ್ಜನ್ಯವು ಅಂಗೀಕಾರಾರ್ಹವಾಗಿ ಮಾನ್ಯಮಾಡಲ್ಪಡದಿರುವಂಥ ದೇಶಗಳಲ್ಲೂ, ಅನೇಕ ವ್ಯಕ್ತಿಗಳು ಹಿಂಸಾತ್ಮಕ ರೀತಿಯಲ್ಲಿ ವರ್ತಿಸುವುದನ್ನು ರೂಢಿಸಿಕೊಂಡಿದ್ದಾರೆ. ಈ ವಿಷಯದಲ್ಲಿ ಕೆಲವು ಪುರುಷರ ವಿಚಾರಹೀನ ಅಭಿಪ್ರಾಯವು ನಿಜವಾಗಿಯೂ ಆಘಾತಕರವಾಗಿದೆ. ದಕ್ಷಿಣ ಆಫ್ರಿಕದ ವೀಕ್ಲಿ ಮೇಲ್‌ ಆ್ಯಂಡ್‌ ಗಾರ್ಡಿಯನ್‌ ವಾರ್ತಾಪತ್ರಿಕೆಗನುಸಾರ, ಕೇಪ್‌ ಪೆನಿನ್‌ಸ್ಯುಲದಲ್ಲಿನ ಒಂದು ಅಧ್ಯಯನವು ಕಂಡುಕೊಂಡದ್ದೇನೆಂದರೆ, ತಮ್ಮ ಸಂಗಾತಿಗಳ ಮೇಲೆ ತಾವು ದೌರ್ಜನ್ಯ ನಡೆಸುತ್ತಿಲ್ಲ ಎಂದು ಹೇಳಿಕೊಂಡಂಥ ಅಧಿಕಾಂಶ ಪುರುಷರು, ಒಬ್ಬ ಸ್ತ್ರೀಯನ್ನು ಹೊಡೆಯುವುದು ಅಂಗೀಕಾರಾರ್ಹವಾಗಿದೆ ಮತ್ತು ಅಂತಹ ನಡತೆಯು ಹಿಂಸಾಚಾರಕ್ಕೆ ಸಮಾನವಾಗಿಲ್ಲ ಎಂಬ ಅಭಿಪ್ರಾಯವನ್ನು ಹೊಂದಿದ್ದರು.

ಅಂತಹ ವಕ್ರ ದೃಷ್ಟಿಕೋನವು ಅನೇಕವೇಳೆ ಬಾಲ್ಯಾವಸ್ಥೆಯಲ್ಲಿಯೇ ಆರಂಭವಾಗುತ್ತದೆ ಎಂಬುದು ಸುಸ್ಪಷ್ಟ. ಉದಾಹರಣೆಗೆ, ಬ್ರಿಟನ್‌ನಲ್ಲಿ, ಒಬ್ಬ ಮನುಷ್ಯನು ಕೋಪೋದ್ರೇಕಗೊಂಡರೆ ಅವನು ಸ್ತ್ರೀಯನ್ನು ಹೊಡೆಯುವುದು ಅಂಗೀಕಾರಾರ್ಹವಾಗಿದೆ ಎಂದು, 11 ಮತ್ತು 12ರ ಪ್ರಾಯದ ಹುಡುಗರಲ್ಲಿ ಸುಮಾರು 75 ಪ್ರತಿಶತ ಮಂದಿ ನೆನಸುತ್ತಾರೆ ಎಂದು ಒಂದು ಅಧ್ಯಯನವು ತೋರಿಸಿತು.

ಸಂಗಾತಿಯನ್ನು ಹೊಡೆಯಲು ಯಾವುದೇ ನೆಪವಿಲ್ಲ

ಈ ಮೇಲಿನ ಅಂಶಗಳು ಪತ್ನಿಯರ ಮೇಲಿನ ದೌರ್ಜನ್ಯವನ್ನು ವಿವರಿಸಲು ಸಹಾಯಮಾಡಬಹುದು, ಆದರೆ ಅವು ಅದನ್ನು ಮಾಡಲು ನೆಪವನ್ನು ನೀಡುವುದಿಲ್ಲ. ಸರಳವಾಗಿ ಹೇಳುವುದಾದರೆ, ಒಬ್ಬನ ಸಂಗಾತಿಗೆ ಹೊಡೆಯುವುದು ದೇವರ ದೃಷ್ಟಿಯಲ್ಲಿ ಘೋರ ಪಾಪವಾಗಿದೆ. ಆತನ ವಾಕ್ಯವಾದ ಬೈಬಲಿನಲ್ಲಿ ನಾವು ಓದುವುದು: “ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ.”​—⁠ಎಫೆಸ 5:​28, 29.

ಈ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ಅನೇಕರು “ದೌರ್ಜನ್ಯ” ನಡೆಸುವವರೂ “ಮಮತೆಯಿಲ್ಲದವರೂ” “ಉಗ್ರರೂ” ಆಗಿರುವರು ಎಂದು ಬೈಬಲ್‌ ದೀರ್ಘ ಸಮಯದ ಹಿಂದೆಯೇ ಮುಂತಿಳಿಸಿತ್ತು. (2 ತಿಮೊಥೆಯ 3:​1-3; ದ ನ್ಯೂ ಇಂಗ್ಲಿಷ್‌ ಬೈಬಲ್‌) ಪತ್ನಿಯರ ಮೇಲೆ ದೌರ್ಜನ್ಯ ನಡೆಸುವ ವಿಷಯವು ಅತ್ಯಧಿಕವಾಗಿ ಹೆಚ್ಚುತ್ತಿರುವುದು, ಈ ಪ್ರವಾದನೆಯಿಂದ ಸೂಚಿಸಲ್ಪಟ್ಟ ಕಾಲಾವಧಿಯಲ್ಲೇ ನಾವು ಜೀವಿಸುತ್ತಿದ್ದೇವೆ ಎಂಬುದರ ಇನ್ನೊಂದು ಸೂಚನೆಯಾಗಿದೆ. ಆದರೆ ಶಾರೀರಿಕ ದೌರ್ಜನ್ಯಕ್ಕೆ ಬಲಿಯಾಗಿರುವ ವ್ಯಕ್ತಿಗಳಿಗೆ ಸಹಾಯ ನೀಡಲು ಏನು ಮಾಡಸಾಧ್ಯವಿದೆ? ಪತ್ನಿಯರನ್ನು ಹೊಡೆಯುವವರು ತಮ್ಮ ನಡತೆಯನ್ನು ಬದಲಾಯಿಸಸಾಧ್ಯವಿದೆ ಎಂಬ ವಿಷಯದಲ್ಲಿ ಯಾವುದಾದರೂ ನಿರೀಕ್ಷೆ ಇದೆಯೋ? (g01 11/8)

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

“ತನ್ನ ಪತ್ನಿಯ ಮೇಲೆ ಹಲ್ಲೆಮಾಡಿರುವ ಒಬ್ಬ ಪುರುಷನು, ಒಬ್ಬ ಅಪರಿಚಿತನನ್ನು ಮುಷ್ಟಿಯಿಂದ ಗುದ್ದಿರುವ ಒಬ್ಬ ಮನುಷ್ಯನಷ್ಟೇ ಗಂಭೀರ ಅಪರಾಧವನ್ನು ಮಾಡಿದ್ದಾನೆ.”—ಪುರುಷರು ಸ್ತ್ರೀಯರನ್ನು ಹೊಡೆಯುವಾಗ

[ಪುಟ 6ರಲ್ಲಿರುವ ಚೌಕ]

ಪುರುಷತ್ವ ಪ್ರದರ್ಶನ–ಒಂದು ವಿಶ್ವವ್ಯಾಪಕ ಸಮಸ್ಯೆ

ಲ್ಯಾಟಿನ್‌ ಅಮೆರಿಕವು, ಇಂಗ್ಲಿಷ್‌ ಮಾತಾಡುವ ಜಗತ್ತಿಗೆ “ಮಚಿಸ್ಮೋ” (ಪುರುಷತ್ವ ಪ್ರದರ್ಶನ) ಎಂಬ ಶಬ್ದವನ್ನು ನೀಡಿದೆ. ಅದು ಆಕ್ರಮಣಶೀಲ ಗಂಡಸುತನದ ಅಹಂಕಾರವನ್ನು ಸೂಚಿಸುತ್ತದೆ ಮತ್ತು ಸ್ತ್ರೀಯರ ಮೇಲೆ ದೌರ್ಜನ್ಯ ನಡೆಸುವ ಮನೋಭಾವವನ್ನು ಒಳಗೊಂಡಿದೆ. ಆದರೆ ಈ ಕೆಳಗಿನ ವರದಿಗಳು ಸೂಚಿಸುವಂತೆ, ಈ ಪುರುಷತ್ವ ಪ್ರದರ್ಶನವೆಂಬ ವಿಚಾರವು ಕೇವಲ ಲ್ಯಾಟಿನ್‌ ಅಮೆರಿಕದಲ್ಲಿ ಮಾತ್ರ ಇಲ್ಲ.

ಈಜಿಪ್ಟ್‌: ಅಲೆಕ್ಸಾಂಡ್ರಿಯದಲ್ಲಿನ ಮೂರು ತಿಂಗಳ ಅಧ್ಯಯನವು, ಸ್ತ್ರೀಯರಿಗಾಗುವ ಗಾಯಗಳಿಗೆ ಪ್ರಮುಖ ಕಾರಣವು ಗೃಹ ಹಿಂಸಾಚಾರವಾಗಿದೆ ಎಂಬುದನ್ನು ಸೂಚಿಸಿತು. ಸ್ಥಳಿಕ ಅವಗಡ ಸೌಕರ್ಯಗಳಿಗೆ ಸ್ತ್ರೀಯರು ನೀಡುವ ಎಲ್ಲ ಭೇಟಿಗಳಲ್ಲಿ ಸುಮಾರು 27.9 ಪ್ರತಿಶತ ಭೇಟಿಗಳಿಗೆ ಇದೇ ಕಾರಣವಾಗಿದೆ.​—⁠ಸ್ತ್ರೀಯರ ಕುರಿತಾದ ನಾಲ್ಕನೆಯ ಜಾಗತಿಕ ಸಮ್ಮೇಳನದ 5ನೆಯ ಸಾರಾಂಶ.

ಥಾಯ್‌ಲೆಂಡ್‌: ಬ್ಯಾಂಗ್‌ಕಾಕ್‌ನ ಅತಿ ದೊಡ್ಡ ಉಪನಗರದಲ್ಲಿ, ವಿವಾಹಿತ ಸ್ತ್ರೀಯರಲ್ಲಿ 50 ಪ್ರತಿಶತ ಮಂದಿ ಯಾವಾಗಲೂ ಹೊಡೆತಕ್ಕೊಳಗಾಗುತ್ತಾರೆ.​—⁠ಸ್ತ್ರೀಯರ ಆರೋಗ್ಯಕ್ಕಾಗಿರುವ ಪೆಸಿಫಿಕ್‌ ಸಂಸ್ಥೆ.

ಹಾಂಗ್‌ ಕಾಂಗ್‌: “ತಮ್ಮ ಸಂಗಾತಿಗಳಿಂದ ಹೊಡೆತಕ್ಕೊಳಗಾಗಿದ್ದೇವೆ ಎಂದು ಹೇಳಿಕೊಳ್ಳುವ ಸ್ತ್ರೀಯರ ಸಂಖ್ಯೆಯು, ಕಳೆದ ವರ್ಷದಲ್ಲಿ ಇದ್ದಕ್ಕಿದ್ದಂತೆ 40 ಪ್ರತಿಶತಕ್ಕಿಂತಲೂ ಹೆಚ್ಚು ಅಧಿಕಗೊಂಡಿದೆ.”​—⁠ಸೌತ್‌ ಚೈನಾ ಮಾರ್ನಿಂಗ್‌ ಪೋಸ್ಟ್‌, ಜುಲೈ 21, 2000.

ಜಪಾನ್‌: ಆಶ್ರಯವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾ ಇದ್ದ ಸ್ತ್ರೀಯರ ಸಂಖ್ಯೆಯು, 1995ರಲ್ಲಿ 4,843ರಿಂದ 1998ರಲ್ಲಿ 6,340ಕ್ಕೆ ಏರಿತು. “ತಮ್ಮ ಗಂಡಂದಿರ ಹಿಂಸಾತ್ಮಕ ವರ್ತನೆಯ ಕಾರಣದಿಂದಾಗಿ ತಾವು ಆಶ್ರಯವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೆವು ಎಂದು ಮೂರನೇ ಒಂದು ಭಾಗದಷ್ಟು ಸ್ತ್ರೀಯರು ಹೇಳಿದರು.”​—⁠ದ ಜಪಾನ್‌ ಟೈಮ್ಸ್‌, ಸೆಪ್ಟೆಂಬರ್‌ 10, 2000.

ಬ್ರಿಟನ್‌: “ಬ್ರಿಟನಿನಾದ್ಯಂತ ಇರುವ ಮನೆಗಳಲ್ಲಿ ಬಲಾತ್ಕಾರ ಸಂಭೋಗ, ಹೊಡೆಯುವಿಕೆ ಅಥವಾ ಕತ್ತಿಯಿಂದ ಇರಿಯುವಿಕೆಯು ಹೆಚ್ಚುಕಡಿಮೆ ಪ್ರತಿ ಆರು ಸೆಕೆಂಡುಗಳಿಗೆ ಒಮ್ಮೆ ಸಂಭವಿಸುತ್ತದೆ.” ಲಂಡನ್ನಿನ ಪತ್ತೇದಾರಿ ಇಲಾಖೆಯ ವರದಿಗನುಸಾರ, “ಗೃಹ ಹಿಂಸಾಚಾರಕ್ಕೆ ಬಲಿಯಾದ ವ್ಯಕ್ತಿಗಳಿಂದ ಪೊಲೀಸರಿಗೆ ಪ್ರತಿ ದಿನ 1,300 ಫೋನ್‌ ಕರೆಗಳು ಮತ್ತು ಒಂದು ವರ್ಷಕ್ಕೆ 5,70,000ಕ್ಕಿಂತಲೂ ಹೆಚ್ಚು ಫೋನ್‌ ಕರೆಗಳು ಬರುತ್ತವೆ. ಸುಮಾರು ಎಂಬತ್ತೊಂದು ಪ್ರತಿಶತ ಬಲಿಪಶುಗಳು ಸ್ತ್ರೀಯರಾಗಿದ್ದು, ಅವರು ಪುರುಷರ ಆಕ್ರಮಣಕ್ಕೆ ಬಲಿಯಾಗಿರುತ್ತಾರೆ.”​—⁠ದ ಟೈಮ್ಸ್‌, ಅಕ್ಟೋಬರ್‌ 25, 2000.

ಪೆರು: ಪೊಲೀಸರಿಗೆ ವರದಿಸಲ್ಪಡುವ ಎಲ್ಲ ದುಷ್ಕೃತ್ಯಗಳಲ್ಲಿ ಸುಮಾರು ಎಪ್ಪತ್ತು ಪ್ರತಿಶತವು, ತಮ್ಮ ಗಂಡಂದಿರಿಂದ ಹೊಡೆಯಲ್ಪಟ್ಟಿರುವ ಸ್ತ್ರೀಯರನ್ನು ಒಳಗೊಂಡಿರುತ್ತದೆ.​—⁠ಸ್ತ್ರೀಯರ ಆರೋಗ್ಯಕ್ಕಾಗಿರುವ ಪೆಸಿಫಿಕ್‌ ಸಂಸ್ಥೆ.

ರಷ್ಯಾ: “ಒಂದು ವರ್ಷದಲ್ಲಿ, ರಷ್ಯಾದ 14,500 ಮಂದಿ ಸ್ತ್ರೀಯರು ತಮ್ಮ ಗಂಡಂದಿರಿಂದ ಕೊಲ್ಲಲ್ಪಟ್ಟರು ಮತ್ತು ಮನೆಯ ಆಕ್ರಮಣಗಳಲ್ಲಿ ಸುಮಾರು 56,400 ಮಂದಿ ಸ್ತ್ರೀಯರು ಅಂಗವಿಕಲರಾದರು ಅಥವಾ ಗಂಭೀರವಾಗಿ ಗಾಯಗೊಳಿಸಲ್ಪಟ್ಟರು.”​—⁠ದ ಗಾರ್ಡಿಯನ್‌.

ಚೀನಾ: “ಇದು ಒಂದು ಹೊಸ ಸಮಸ್ಯೆಯಾಗಿದೆ. ವಿಶೇಷವಾಗಿ ಪಟ್ಟಣಗಳಲ್ಲಿ ಇದು ತ್ವರಿತಗತಿಯಲ್ಲಿ ಅಧಿಕಗೊಳ್ಳುತ್ತಿದೆ” ಎಂದು, ಜಿಂಗ್‌ಲೂನ್‌ ಕುಟುಂಬ ಕೇಂದ್ರದ ಡೈರೆಕ್ಟರರಾದ ಪ್ರೊಫೆಸರ್‌ ಚನ್‌ ಯಯೂನ್‌ ಹೇಳುತ್ತಾರೆ. “ನೆರೆಹೊರೆಯವರ ಬಲವಾದ ಪ್ರಭಾವವು ಗೃಹ ಹಿಂಸಾಚಾರವನ್ನು ನಿಗ್ರಹಿಸುವಂತಿಲ್ಲ.”​—⁠ದ ಗಾರ್ಡಿಯನ್‌.

ನಿಕರಾಗುವ: “ನಿಕರಾಗುವದಲ್ಲಿ ಸ್ತ್ರೀಯರ ವಿರುದ್ಧ ಹಿಂಸಾಚಾರವು ಅತ್ಯಧಿಕವಾಗಿ ಹೆಚ್ಚುತ್ತಿದೆ. ಕಳೆದ ವರ್ಷವೊಂದರಲ್ಲಿಯೇ ನಿಕರಾಗುವದ ಸ್ತ್ರೀಯರಲ್ಲಿ 52 ಪ್ರತಿಶತ ಮಂದಿ, ಒಂದಲ್ಲ ಒಂದು ರೀತಿಯ ಗೃಹ ಹಿಂಸಾಚಾರದಿಂದ ತಮ್ಮ ಗಂಡಂದಿರಿಂದಲೇ ಬಹಳಷ್ಟು ಕಷ್ಟಾನುಭವಿಸಿದರು ಎಂದು ಒಂದು ಸಮೀಕ್ಷೆಯು ತಿಳಿಸಿತು.”​—⁠ಬಿಬಿಸಿ ನ್ಯೂಸ್‌.

[ಪುಟ 7ರಲ್ಲಿರುವ ಚೌಕ]

ಅಪಾಯ ಸೂಚಕಗಳು

ಅಮೆರಿಕದ ರ್ಹೋಡ್‌ ಐಲೆಂಡ್‌ನ ವಿಶ್ವವಿದ್ಯಾನಿಲಯದಲ್ಲಿ ರಿಚಾರ್ಡ್‌ ಜೆ. ಜೆಲ್ಸ್‌ರಿಂದ ನಿರ್ದೇಶಿಸಲ್ಪಟ್ಟ ಒಂದು ಅಧ್ಯಯನಕ್ಕನುಸಾರ, ಮನೆಯ ವಾತಾವರಣದಲ್ಲಿ ಶಾರೀರಿಕ ಮತ್ತು ಭಾವನಾತ್ಮಕ ದೌರ್ಜನ್ಯಕ್ಕಾಗಿರುವ ಅಪಾಯ ಸೂಚಕಗಳಲ್ಲಿ ಕೆಲವು ಈ ಕೆಳಗಿನಂತಿವೆ:

1. ಆ ಪುರುಷನು ಈ ಮುಂಚೆ ಯಾವುದಾದರೊಂದು ರೀತಿಯಲ್ಲಿ ಗೃಹ ಹಿಂಸಾಚಾರದಲ್ಲಿ ಒಳಗೂಡಿರುತ್ತಾನೆ.

2. ಅವನು ನಿರುದ್ಯೋಗಿಯಾಗಿರುತ್ತಾನೆ.

3. ಅವನು ಕಡಿಮೆಪಕ್ಷ ವರ್ಷಕ್ಕೆ ಒಮ್ಮೆಯಾದರೂ ನಿಷಿದ್ಧ ಅಮಲೌಷಧಗಳನ್ನು ಉಪಯೋಗಿಸುತ್ತಾನೆ.

4. ಅವನು ತನ್ನ ಮನೆಯಲ್ಲಿದ್ದಾಗ, ಅವನ ತಂದೆಯು ಅವನ ತಾಯಿಯನ್ನು ಹೊಡೆಯುವುದನ್ನು ನೋಡಿದ್ದಾನೆ.

5. ದಂಪತಿಗೆ ವಿವಾಹವಾಗಿರುವುದಿಲ್ಲ; ಅವರು ಮದುವೆಯಾಗದೆ ಜೊತೆಯಲ್ಲಿ ವಾಸಮಾಡುತ್ತಿರುತ್ತಾರೆ.

6. ಅವನಿಗೆ ಉದ್ಯೋಗವಿದ್ದರೂ, ತುಂಬ ಕಡಿಮೆ ಸಂಬಳ ಸಿಗುತ್ತದೆ.

7. ಅವನಿಗೆ ಪ್ರೌಢ ಶಾಲಾ ಶಿಕ್ಷಣ ದೊರೆತಿಲ್ಲ.

8. ಅವನು 18ರಿಂದ 30 ವರ್ಷ ಪ್ರಾಯದವನಾಗಿರುತ್ತಾನೆ.

9. ಮನೆಯಲ್ಲಿ ಅವನ ಹೆತ್ತವರಲ್ಲೊಬ್ಬರು ಅಥವಾ ಇಬ್ಬರೂ ಮಕ್ಕಳ ಕಡೆಗೆ ಹಿಂಸಾಚಾರವನ್ನು ಉಪಯೋಗಿಸುತ್ತಾರೆ.

10. ಅವನ ಆದಾಯವು ಬಡತನದ ರೇಖೆಗಿಂತ ಕೆಳಗಿನ ಮಟ್ಟದ್ದಾಗಿರುತ್ತದೆ.

11. ಆ ಪುರುಷನೂ ಸ್ತ್ರೀಯೂ ಬೇರೆ ಬೇರೆ ಸಾಂಸ್ಕೃತಿಕ ಹಿನ್ನೆಲೆಗಳಿಂದ ಬಂದವರಾಗಿರುತ್ತಾರೆ.

[ಪುಟ 7ರಲ್ಲಿರುವ ಚಿತ್ರ]

ಗೃಹ ಹಿಂಸಾಚಾರವು ಮಕ್ಕಳ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಬಲ್ಲದು