“ಸುವರ್ಣ ಭೂಮಿ” ಮ್ಯಾನ್‌ಮಾರ್
“ಸುವರ್ಣ ಭೂಮಿ” ಮ್ಯಾನ್‌ಮಾರ್
ಮ್ಯಾನ್ಮಾರ್‌ನಲ್ಲಿರುವ ಎಚ್ಚರ! ಲೇಖಕರಿಂದ
“ಸುವರ್ಣ ಭೂಮಿ”ಯು, ನೆರೆಹೊರೆಯ ಏಷಿಯನ್ ದೇಶಗಳಿಂದ ಪ್ರತ್ಯೇಕಿಸುವ ಗಡಿಯಂತಿರುವ ಪರ್ವತ ಶ್ರೇಣಿಗಳ ಮಧ್ಯದಲ್ಲಿ ನೆಲೆಸಿದೆ. ನೈರುತ್ಯದಲ್ಲಿ ಬಂಗಾಳ ಕೊಲ್ಲಿ ಮತ್ತು ಅಂದಮಾನ್ ಸಮುದ್ರವು, ಅದರ 2,000ಕ್ಕಿಂತಲೂ ಹೆಚ್ಚು ಕಿಲೊಮೀಟರ್ ಉದ್ದದ ಕರಾವಳಿ ತೀರಕ್ಕೆ ಅಪ್ಪಳಿಸುತ್ತದೆ. ಅದರ ಪಶ್ಚಿಮಕ್ಕೆ ಬಾಂಗ್ಲಾದೇಶ ಮತ್ತು ಭಾರತ; ಉತ್ತರದಲ್ಲಿ ಚೀನಾ; ಮತ್ತು ಪೂರ್ವಕ್ಕೆ ಲಾವೊಸ್ ಹಾಗೂ ಥಾಯ್‌ಲೆಂಡ್ ದೇಶಗಳಿವೆ. ಅದು ಮಡಗಾಸ್ಕರ್‌ಗಿಂತ ಸ್ವಲ್ಪ ದೊಡ್ಡದು ಮತ್ತು ಉತ್ತರ ಅಮೆರಿಕದ ಟೆಕ್ಸಸ್ ರಾಜ್ಯಕ್ಕಿಂತ ಚಿಕ್ಕದಾಗಿದೆ. ಈ ದೇಶದ ಹೆಸರೇನು? ಇದು ಮ್ಯಾನ್‌ಮಾರ್ ದೇಶವಾಗಿದ್ದು, ಹಿಂದೆ ಇದಕ್ಕೆ ಬರ್ಮ ಎಂಬ ಹೆಸರಿತ್ತು.
ಅದರ ಅತ್ಯಾರಂಭದ ನೆಲೆಸಿಗರು ಅದನ್ನು ಸುವರ್ಣ ಭೂಮಿಯೆಂದು ಕರೆಯುತ್ತಿದ್ದರು. ತೈಲ ಮತ್ತು ನೈಸರ್ಗಿಕ ಅನಿಲ, ತಾಮ್ರ, ತಗಡು, ಬೆಳ್ಳಿ, ಟಂಗ್‌ಸ್ಟನ್ ಮತ್ತು ಇತರ ಖನಿಜಗಳು ಮಾತ್ರವಲ್ಲದೆ ನೀಲಮಣಿಗಳು, ಕೆಂಪು ಪಚ್ಚೆ, ಪದ್ಮರಾಗ ಮತ್ತು ಜೇಡಶಿಲೆಯಂಥ ಅಮೂಲ್ಯ ರತ್ನಗಳ ಸಮೃದ್ಧ ಸಂಪನ್ಮೂಲಗಳು ಅಲ್ಲಿವೆ. ಉಷ್ಣವಲಯದ ಮಳೆಕಾಡುಗಳು, ಮತ್ತು ತೇಗು, ಬೀಟೆ ಹಾಗೂ ಪದೌಕ್ ಎಂಬಂಥ ಅಪರೂಪದ ಮರಗಳು ಅದರ ಇತರ ನಿಧಿಗಳಲ್ಲಿ ಸೇರಿವೆ. ಆ ಅರಣ್ಯಗಳು ಮಂಗಗಳು, ಹುಲಿಗಳು, ಕರಡಿಗಳು, ನೀರೆಮ್ಮೆಗಳು ಮತ್ತು ಆನೆಗಳಂಥ ಕಾಡು ಪ್ರಾಣಿಗಳಿಗೂ ಬೀಡಾಗಿವೆ. ಆದರೂ, ಆ ಸುವರ್ಣ ಭೂಮಿಯ ಜನರೇ ಅದರ ನಿಜ ನಿಕ್ಷೇಪವಾಗಿದ್ದಾರೆ.
ಮ್ಯಾನ್ಮಾರ್‌ನ ಜನರು
ಸಾಮಾನ್ಯವಾಗಿ ಮೃದುಸ್ವಭಾವದವರೂ ಪ್ರಶಾಂತರೂ ಆಗಿರುವ ಮ್ಯಾನ್ಮಾರ್‌ನ ಜನರು, ಶಿಷ್ಟಾಚಾರವುಳ್ಳವರೂ, ಅತಿಥಿಸತ್ಕಾರಭಾವದವರೂ ಆಗಿದ್ದಾರೆ. ಅವರು ಸಂದರ್ಶಕರಿಗೆ ಮಾನಮರ್ಯಾದೆ ಕೊಟ್ಟು ಉಪಚರಿಸುತ್ತಾರೆ. ಸಾಮಾನ್ಯವಾಗಿ ಮಕ್ಕಳು ತಮಗಿಂತಲೂ ಹಿರಿಯ ಪುರುಷರನ್ನು ಅಂಕಲ್ ಮತ್ತು ಹಿರಿಯ ಮಹಿಳೆಯರನ್ನು ಆಂಟೀ ಎಂದು ಕರೆಯುತ್ತಾರೆ.
ಮ್ಯಾನ್ಮಾರ್‌ಗೆ ಭೇಟಿ ನೀಡುವವರು ಹೆಚ್ಚಾಗಿ ಅಲ್ಲಿನ ವೃದ್ಧ ಜನರ ಸೌಮ್ಯ ತ್ವಚೆಯ ಕುರಿತಾಗಿ ಮಾತಾಡುತ್ತಾರೆ. ಅಲ್ಲಿನ ಸ್ತ್ರೀಯರಿಗನುಸಾರ ಈ ಯೌವನಭರಿತ ಚರ್ಮಕ್ಕೆ ಒಂದು ಕಾರಣ, ಅವರು ಬಳಸುವಂಥ ಟನಾಖಾ ಎಂಬ ಜನಪ್ರಿಯವಾದ ನಸುಹೊಂಬಣ್ಣದ ಪ್ರಸಾಧನವೇ ಆಗಿದೆ. ಇದನ್ನು ಟನಾಖಾ ಎಂಬ ಹೆಸರಿನ ಮರದಿಂದ ಪಡೆಯಲಾಗುತ್ತದೆ. ಅದರ ರೆಂಬೆಯ ಒಂದು ಚಿಕ್ಕ ತುಂಡನ್ನು, ಒಂದು ಗಟ್ಟಿಯಾದ ಚಪ್ಪಟೆ ಕಲ್ಲಿನ ಮೇಲೆ ಉಜ್ಜಿ, ಸ್ವಲ್ಪ ನೀರನ್ನು ಸೇರಿಸುವ ಮೂಲಕ, ಸ್ತ್ರೀಯರು ಒಂದು ನುಣ್ಣನೆಯ ಲೇಪವನ್ನು ತಯಾರಿಸುತ್ತಾರೆ. ಇದನ್ನು ಅವರು ತಮ್ಮ ಮುಖದ ಮೇಲೆ ಕಲಾತ್ಮಕ ವಿನ್ಯಾಸಗಳಲ್ಲಿ ಹಚ್ಚುತ್ತಾರೆ. ಇದು ರಕ್ತಬಂಧಕವಾಗಿದೆ, ಚರ್ಮಕ್ಕೆ
ತಂಪನ್ನೀಯುತ್ತದೆ ಮಾತ್ರವಲ್ಲ, ಕಠಿನವಾದ, ಉಷ್ಣವಲಯದ ಸೂರ್ಯನ ಬಿಸಿಲಿನಿಂದಲೂ ರಕ್ಷಣೆಯನ್ನು ಒದಗಿಸುತ್ತದೆ.ಮ್ಯಾನ್ಮಾರ್‌ನಲ್ಲಿ ಸ್ತ್ರೀಪುರುಷರಿಗಾಗಿರುವ ಸಾಮಾನ್ಯ ಉಡುಪು, ಲುಂಗಿ ಆಗಿದೆ. ಇದನ್ನು ಸುಲಭವಾಗಿ ತಯಾರಿಸಲಾಗುತ್ತದೆ. ಸುಮಾರು ಎರಡು ಮೀಟರ್ ಉದ್ದದ ಬಟ್ಟೆಯ ಎರಡೂ ತುದಿಗಳನ್ನು ಒಟ್ಟಿಗೆ ಹೊಲಿಯುವ ಮೂಲಕ ವೃತ್ತಾಕಾರದ ರಚನೆಯು ಉಂಟಾಗುತ್ತದೆ. ಒಬ್ಬ ಸ್ತ್ರೀಯು ಆ ವೃತ್ತಾಕಾರದೊಳಗೆ ಕಾಲಿರಿಸಿದ ನಂತರ, ಅದನ್ನೆತ್ತಿ ತನ್ನ ಹೊಟ್ಟೆಯ ಸುತ್ತಲೂ ಒಂದು ಲಂಗದಂತೆ ಸುತ್ತಿಕೊಳ್ಳುತ್ತಾಳೆ, ಮತ್ತು ಉಳಿದಿರುವ ತುದಿಯನ್ನು ತನ್ನ ಸೊಂಟದಲ್ಲಿ ತುರುಕಿಸುತ್ತಾಳೆ. ಇನ್ನೊಂದು ಕಡೆ, ಒಬ್ಬ ಪುರುಷನು ಆ ಎರಡು ತುದಿಗಳನ್ನು ತೆಗೆದುಕೊಂಡು, ಸೊಂಟದ ಬಳಿ ಮುಂದೆ ಅದನ್ನು ಸಡಿಲವಾಗಿ ಕಟ್ಟುತ್ತಾನೆ. ಸಭ್ಯ ಮತ್ತು ಸಡಿಲವಾಗಿರುವ ಈ ಲುಂಗಿ, ಉಷ್ಣವಲಯದ ಕ್ಷೇತ್ರಗಳಿಗೆ ಹೇಳಿಮಾಡಿಸಿದಂಥ ರೀತಿಯ ಉಡುಗೆಯಾಗಿದೆ.
ಮ್ಯಾನ್ಮಾರ್‌ನ ಜನರು ತುಂಬ ಪ್ರತಿಭಾವಂತರು. ರೇಷ್ಮೆ ನೂಲನ್ನು ನೇಯುವುದರಲ್ಲಿ, ಆಭರಣಗಳನ್ನು ಕೈಕಸಬಿನಿಂದ ತಯಾರಿಸುವುದರಲ್ಲಿ ಮತ್ತು ಮರವನ್ನು ಕೆತ್ತುವುದರಲ್ಲಿ ಅವರದ್ದು ಎತ್ತಿದ ಕೈ ಎಂಬ ಸಂಗತಿಯು ಅಲ್ಲಿನ ಮಾರುಕಟ್ಟೆಗಳಿಗೆ ಒಮ್ಮೆ ಭೇಟಿಯಿತ್ತರೆ ತಿಳಿದುಬರುತ್ತದೆ. ತೇಗು, ಪದೌಕ್ ಮತ್ತು ಇತರ ಮರಗಳನ್ನು, ಮನುಷ್ಯರು, ಹುಲಿಗಳು, ಕುದುರೆಗಳು, ಎಮ್ಮೆ, ಮತ್ತು ಆನೆಗಳ ಕಣ್ಸೆಳೆಯುವಂಥ ಆಕಾರಗಳಾಗಿ ರೂಪಿಸಲಾಗುತ್ತದೆ. ಟೇಬಲ್ ಟಾಪ್‌ಗಳು, ಕೋಣೆಯನ್ನು ಎರಡು ಭಾಗ ಮಾಡಲು ಬಳಸುವ ಪರದೆ ಮತ್ತು ಕುರ್ಚಿಗಳು, ಕೆತ್ತನೆ ಕೆಲಸದಿಂದ ಕ್ಲಿಷ್ಟವಾಗಿ ಸಿಂಗರಿಸಲ್ಪಟ್ಟಿವೆ. ಆದರೆ ನೀವು ನಿಜವಾಗಿ ಅದನ್ನು ಖರೀದಿಸಬೇಕಾದರೆ, ಚೌಕಾಸಿ ಮಾಡಲು ಸಿದ್ಧರಿರಿ!
ಮ್ಯಾನ್ಮಾರ್‌ನ ಜನರು, ಸುಂದರವಾಗಿ ಅಲಂಕೃತವಾಗಿರುವ, ಮೆರುಗೆಣ್ಣೆ ಬಳಿದಿರುವ ಸಾಮಾನುಗಳು, ಅಂದರೆ ಬೋಗುಣಿಗಳು, ದೊಡ್ಡ ತಟ್ಟೆಗಳು ಮತ್ತು ಮುಚ್ಚಳವುಳ್ಳ ಡಬ್ಬಗಳನ್ನು ತಯಾರಿಸುವುದರಲ್ಲಿಯೂ ನಿಪುಣರು. ಅವರ ಸಾಮಾನುಗಳು ಅಪೂರ್ವವಾಗಿರಲು ಕಾರಣವು, ಅವರು ಕೊಡುವಂತಹ ಮುಕ್ತ ರೂಪದ ವಿನ್ಯಾಸಗಳು ಮತ್ತು ಕಡಿದಾದ ನಮೂನೆಗಳೇ. ಮೊದಲನೆಯ ರೂಪವು, ನವಿರಾದ ಬಿದಿರು ದಬ್ಬೆಗಳಿಂದ ಹೆಣೆಯಲ್ಪಟ್ಟ ಜಾಲರಿಯಿಂದ ಆರಂಭವಾಗುತ್ತದೆ. (ಉಚ್ಚ ಗುಣಮಟ್ಟದ ಸಾಮಾನುಗಳ ತಯಾರಿಯು, ಬಿದಿರು ಮತ್ತು ಕುದುರೆ ಕೂದಲಿನ ಹೆಣೆಯುವಿಕೆಯಿಂದ ಆರಂಭವಾಗುತ್ತದೆ.) ಈ ಆಧಾರಕಟ್ಟಿನ ಮೇಲೆ ಕುಶಲಕರ್ಮಿಯು, ತೆಸೈ ಅಥವಾ ಮೆರುಗೆಣ್ಣೆಯ ಮರದಿಂದ ತೆಗೆಯಲಾಗಿರುವ ಎಣ್ಣೆಯೊಂದಿಗೆ, ಚೆನ್ನಾಗಿ ಅರೆಯಲಾಗಿರುವ ಮತ್ತು ಸುಡಲ್ಪಟ್ಟಿರುವ ಪ್ರಾಣಿ ಎಲುಬಿನೊಂದಿಗೆ ಮಿಶ್ರಮಾಡಿ ತಯಾರಿಸಲಾಗಿರುವ ಮೆರುಗೆಣ್ಣೆಯ ಸುಮಾರು ಏಳು ಪದರಗಳನ್ನು ಕೂಡಿಸುತ್ತಾನೆ.
ಈ ಮೆರುಗೆಣ್ಣೆಯು ಒಣಗಿದಾಗ ಆ ಕುಶಲಕರ್ಮಿಯು, ಆ ವಸ್ತುವಿನ ಮೇಲೆ ಒಂದು ಉಕ್ಕಿನ ಲೇಖನಿಯಿಂದ ಒಂದು
ವಿನ್ಯಾಸವನ್ನು ಕೆತ್ತುತ್ತಾನೆ. ಅನಂತರ ಸ್ವಲ್ಪ ಬಣ್ಣ ಮತ್ತು ಪಾಲಿಷ್ ಹಚ್ಚಿದ ನಂತರ, ಅದು ಒಂದು ಉತ್ತಮ ಕಲಾಕೃತಿಯಾಗಿರುತ್ತದೆ ಮಾತ್ರವಲ್ಲ, ಗೃಹೋಪಯೋಗಿ ವಸ್ತುವೂ ಆಗಿಬಿಡುತ್ತದೆ.ಧರ್ಮದ ಪ್ರಭಾವವು ಹೆಚ್ಚೆಚ್ಚಾಗುತ್ತದೆ
ಮ್ಯಾನ್ಮಾರ್ ಜನರಲ್ಲಿ ಸುಮಾರು 85 ಪ್ರತಿಶತ ಮಂದಿ ಬೌದ್ಧಮತಕ್ಕೆ ಸೇರಿದವರಾಗಿದ್ದಾರೆ; ಬಾಕಿ ಉಳಿದವರಲ್ಲಿ ಹೆಚ್ಚಿನವರು ಇಸ್ಲಾಮ್ ಮತ ಇಲ್ಲವೇ ಕ್ರೈಸ್ತ ಮತಕ್ಕೆ ಸೇರಿದವರಾಗಿದ್ದಾರೆ. ಆಗ್ನೇಯ ಏಷಿಯಾದ ಹೆಚ್ಚಿನ ಭಾಗದಲ್ಲಿರುವಂತೆಯೇ, ಮ್ಯಾನ್ಮಾರ್ ಜನರ ಜೀವಿತಗಳಲ್ಲಿಯೂ ಧರ್ಮವು ಒಂದು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಆದರೆ, ನಿರ್ದಿಷ್ಟ ಧಾರ್ಮಿಕ ಪದ್ಧತಿಗಳು ಅನೇಕ ಸಂದರ್ಶಕರಿಗೆ ಅಪರಿಚಿತವಾಗಿರಬಹುದು.
ಉದಾಹರಣೆಗಾಗಿ, ಬೌದ್ಧ ಸಂನ್ಯಾಸಿಗಳು ಒಬ್ಬ ಹೆಣ್ಣನ್ನು ಮುಟ್ಟದಿರುವ ಶಪಥವನ್ನು ಮಾಡುತ್ತಾರೆ. ಆದುದರಿಂದ, ಗೌರವಾರ್ಥವಾಗಿ ಸ್ತ್ರೀಯರು ಆ ಸಂನ್ಯಾಸಿಗಳ ತೀರ ಹತ್ತಿರ ಹೋಗದಂತೆ ಜಾಗ್ರತೆ ವಹಿಸುತ್ತಾರೆ. ಬಸ್ ಪ್ರಯಾಣದ ಮೇಲೂ ಧಾರ್ಮಿಕ ಪದ್ಧತಿಗಳು ಪರಿಣಾಮ ಬೀರುತ್ತವೆ. “ನಾವು ಎಷ್ಟು ಹೊತ್ತಿಗೆ ತಲಪುವೆವು ಎಂದು ದಯವಿಟ್ಟು ಬಸ್ ಚಾಲಕನಿಗೆ ಕೇಳಬೇಡಿ” ಎಂಬ ಸೂಚನೆಯನ್ನು ಬಸ್‌ನಲ್ಲಿ ನೋಡಿ ಒಬ್ಬ ಪಾಶ್ಚಾತ್ಯ ವ್ಯಕ್ತಿ ತಬ್ಬಿಬ್ಬಾಗಬಹುದು. ಬಸ್ ಚಾಲಕರು, ತಾಳ್ಮೆಗೆಟ್ಟಿರುವ ಪ್ರಯಾಣಿಕರಿಂದ ಬೇಸತ್ತು ಹೋಗಿರುವುದರಿಂದ ಈ ಸೂಚನೆಯನ್ನು ಹಾಕಿದ್ದಾರೊ? ಇಲ್ಲ. ನತ್ಸ್ (ಭೂತಾತ್ಮಗಳು) ಇಂಥ ಪ್ರಶ್ನೆಯನ್ನು ಕೇಳಿ ಕುಪಿತಗೊಂಡು, ಬಸ್ ಅನ್ನು ತಡಮಾಡಿಸುವವೆಂದು ಬೌದ್ಧರು ನಂಬುತ್ತಾರೆ!
ಮ್ಯಾನ್ಮಾರ್‌ನ ಇತಿಹಾಸ
ಮ್ಯಾನ್ಮಾರ್‌ನ ಅತ್ಯಾರಂಭದ ಇತಿಹಾಸವು ಅಸ್ಪಷ್ಟವಾಗಿದೆ. ಆದರೆ ಅಕ್ಕಪಕ್ಕದ ದೇಶಗಳಿಂದ ಹಲವಾರು ಬುಡಕಟ್ಟು ಗುಂಪುಗಳು ಅಲ್ಲಿಗೆ ವಲಸೆಹೋಗಿರುವಂತೆ ತೋರುತ್ತದೆ. ಮೊನ್ ಜನಾಂಗದವರು ಈ ದೇಶಕ್ಕೆ ಸುವನ್ನಭೂಮಿ, ಅಂದರೆ “ಸುವರ್ಣ ಭೂಮಿ” ಎಂಬ ಹೆಸರನ್ನು ಕೊಟ್ಟಿರಬಹುದು. ಹಿಮಾಲಯದ ಪೂರ್ವದಿಂದ ಟಿಬೆಟೊ ಬರ್ಮನರು ಬಂದರು, ಮತ್ತು ಈಗ ನೈರುತ್ಯ ಚೀನಾ ಆಗಿಬಿಟ್ಟಿರುವ ಪ್ರದೇಶದಿಂದ ಟಾಯ್ ಜನರು ಬಂದರು. ಮ್ಯಾನ್ಮಾರ್‌ನಲ್ಲಿರುವ ಕಗ್ಗಾಡುಗಳು ಆ ಗೋತ್ರಗಳನ್ನು ಪ್ರತ್ಯೇಕವಾಗಿರಿಸಿದವು ಮತ್ತು ಈ ಕಾರಣದಿಂದಲೇ ಅಸಂಖ್ಯಾತ ಬುಡಕಟ್ಟು ಮತ್ತು ಭಾಷಾ ಗುಂಪುಗಳು ಅಲ್ಲಿವೆ.
ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ, ಬ್ರಿಟಿಷರು ಹೊಸದಾಗಿ ವಸಾಹತನ್ನು ಸ್ಥಾಪಿಸಿದ್ದ ಭಾರತದಿಂದ ಆಗಮಿಸಲಾರಂಭಿಸಿದರು. ಅವರು ಮೊದಲು ದಕ್ಷಿಣಾರ್ಧ ಪ್ರದೇಶದಲ್ಲಿ ನೆಲೆಸಿದರು ಮತ್ತು ಕ್ರಮೇಣ ಇಡೀ ದೇಶವನ್ನೇ ವಶಪಡಿಸಿಕೊಂಡರು. 1886ರೊಳಗೆ, ಆಗ ಬರ್ಮ ಎಂದು ಕರೆಯಲ್ಪಡುತ್ತಿದ್ದ ಮ್ಯಾನ್ಮಾರ್ ಬ್ರಿಟಿಷರ ಕೆಳಗಿದ್ದ ಭಾರತಕ್ಕೆ ಜೋಡಿಸಲ್ಪಟ್ಟಿತು.
ಎರಡನೆಯ ವಿಶ್ವ ಯುದ್ಧದ ಸಮಯದಲ್ಲಿ ಈ ದೇಶವು, ತೀವ್ರ ಹೋರಾಟದ ಕೇಂದ್ರವಾಯಿತು ಮತ್ತು 1942ರಲ್ಲಿ ಕೆಲವೇ ತಿಂಗಳುಗಳೊಳಗೆ ಜಪಾನೀ ಸೇನೆಗಳು ಬ್ರಿಟಿಷರನ್ನು ಹೊರಗಟ್ಟಿದವು. ಅನಂತರ, ಕುಪ್ರಸಿದ್ಧವಾದ “ಮೃತ್ಯು ರೈಲ್ವೇಮಾರ್ಗ”ವನ್ನು ನಿರ್ಮಿಸಲಾಯಿತು. 400 ಕಿಲೊಮೀಟರ್ ಉದ್ದದ ಈ ರೈಲ್ವೇ ಮಾರ್ಗವು, ನಿರಾಶ್ರಯವಾದ ಕಾಡುಪ್ರದೇಶ ಮತ್ತು ಗುಡ್ಡಗಾಡು ಪ್ರದೇಶದ ಮೂಲಕ ಹಾದುಹೋಗುತ್ತಾ, ಬರ್ಮದಲ್ಲಿರುವ ತಾನ್‌ಪ್ಯೂಜಯಾತ್ ಎಂಬ ಪಟ್ಟಣವನ್ನು ಥಾಯ್‌ಲೆಂಡ್‌ನಲ್ಲಿರುವ ನಾಂಗ್ ಪ್ಲಾಡುಕ್ ಎಂಬ ಪಟ್ಟಣದೊಂದಿಗೆ ಜೋಡಿಸಿತು. ಲೋಹದ ಕೊರತೆಯಿಂದಾಗಿ, ಮಧ್ಯ ಮಲೇಯದಿಂದ (ಈಗ ಮಲೇಷಿಯಾ) ತೆಗೆಯಲಾದ ರೈಲ್ವೇ ಕಂಬಿಗಳಿಂದಲೇ ಇದರ ಹೆಚ್ಚಿನ ಕಂಬಿಗಳ ಕೆಲಸವು ಪೂರ್ಣಗೊಳಿಸಲ್ಪಟ್ಟಿತು. ಆ ಇಡೀ ಕಾರ್ಯಯೋಜನೆಯ ಒಂದು ಚಿಕ್ಕ ಭಾಗ, ಅಂದರೆ ಕ್ವೈ ನದಿಯ ಮೇಲೆ ಸೇತುವೆಯನ್ನು ಕಟ್ಟುವ ಕೆಲಸವು ಆಮೇಲೆ ಒಂದು ಜನಪ್ರಿಯ ಚಲನಚಿತ್ರಕ್ಕೆ ಆಧಾರವಾಯಿತು.
ನಾನ್ನೂರು ಆನೆಗಳ ಸಹಾಯದಿಂದ, 3,00,000ಕ್ಕಿಂತಲೂ ಹೆಚ್ಚು ಪುರುಷರು ಆ ರೈಲ್ವೇ ಮಾರ್ಗವನ್ನು ಕಟ್ಟಿದರು. ಇವರಲ್ಲಿ ಯುದ್ಧ ಕೈದಿಗಳು ಮತ್ತು ಭಾರತೀಯ ಹಾಗೂ ಬರ್ಮಿ ನಾಗರಿಕರು ಸೇರಿದ್ದರು. ಈ ಕೆಲಸವನ್ನು ಮಾಡುತ್ತಾ ಸಾವಿರಾರು ಜನರು ತಮ್ಮ ಕೊನೆಯುಸಿರೆಳೆದರು. ಈ ರೈಲ್ವೇ ಮಾರ್ಗದ ಮೇಲೆ ಮಿತ್ರ ಪಡೆಗಳ ಬಾಂಬ್‌ವಿಮಾನಗಳ ಸತತ ದಾಳಿಗಳಿಂದಾಗಿ, ಅದನ್ನು ತುಂಬ ಕಡಿಮೆ ಉಪಯೋಗಿಸಲಾಗುತ್ತಿತ್ತು ಮತ್ತು ಕಟ್ಟಕಡೆಗೆ ಅದನ್ನು ತೊರೆಯಲಾಯಿತು. ಅನಂತರ, ಆ ರೈಲ್ವೇ ಮಾರ್ಗದ ಹೆಚ್ಚಿನ ಕಂಬಿಗಳನ್ನು ಕಿತ್ತುಹಾಕಿ, ಬೇರೆಡೆ ಉಪಯೋಗಿಸಲಾಯಿತು.
ಕಟ್ಟಕಡೆಗೆ ಬ್ರಿಟಿಷರು ಪುನಃ ಹೋರಾಡಿ, 1945ರಲ್ಲಿ ಆ ದೇಶವನ್ನು ಜಪಾನಿನ ವಶದಿಂದ ಮರಳಿಪಡೆಯುವುದರಲ್ಲಿ ಸಫಲರಾದರು. ಆದರೆ ಅವರ ಆಳ್ವಿಕೆಯು ಅಲ್ಪಾವಧಿಯದ್ದಾಗಿತ್ತು. ಯಾಕೆಂದರೆ 1948ರ ಜನವರಿ 4ರಂದು ಬರ್ಮವು ಬ್ರಿಟನ್‌ನಿಂದ ಸ್ವಾತಂತ್ರ್ಯವನ್ನು ಪಡೆಯಿತು. 1989ರ ಜೂನ್ 22ರಂದು ವಿಶ್ವ ಸಂಸ್ಥೆಯು ಮ್ಯಾನ್ಮಾರ್ ಎಂಬ ಆ ದೇಶದ ಹೊಸ ಹೆಸರನ್ನು ಅಂಗೀಕರಿಸಿತು.
ಸುವರ್ಣ ರಾಜಧಾನಿಗಳ ದೇಶ
ಗತ ಶತಮಾನಗಳಾದ್ಯಂತ ಮ್ಯಾನ್ಮಾರ್ ದೇಶಕ್ಕೆ ಅನೇಕ ರಾಜಧಾನಿಗಳಿದ್ದವು. ಉದಾಹರಣೆಗಾಗಿ, ಸುವರ್ಣ ನಗರವೆಂದು ಜನಜನಿತವಾಗಿರುವ ಮಾಂಡಲೇ ನಗರವು ಮ್ಯಾನ್ಮಾರ್ ದೇಶದ ಮಧ್ಯ ಭಾಗದಲ್ಲಿ ನೆಲೆಸಿದೆ. ಈ ನಗರದಲ್ಲೆಲ್ಲಾ ಪ್ರತಿಯೊಂದು ವಿಧದ ಪಗೋಡಗಳು ಎಲ್ಲೆಡೆಯೂ ಚುಕ್ಕೆಗಳಂತೆ ಹರಡಿಕೊಂಡಿವೆ. 5,00,000 ಜನರಿದ್ದಂಥ ಈ ನಗರವು, ಬ್ರಿಟಿಷರು ಮ್ಯಾನ್ಮಾರ್ ಅನ್ನು ವಶಪಡಿಸಿಕೊಳ್ಳುವ ಮುಂಚೆ ಅದರ ಕೊನೆಯ ರಾಜಧಾನಿಯಾಗಿತ್ತು. ರಾಜ ಮಿಂಡೊನನು, ತನಗಾಗಿ ಮತ್ತು ತನ್ನ ರಾಣಿಯರಿಗಾಗಿ ಒಂದು ದೊಡ್ಡ ಅರಮನೆಯನ್ನು ಮಾಂಡಲೇಯಲ್ಲಿ ಕಟ್ಟಿಸಿದಾಗ ಅವನು ಆ ನಗರಕ್ಕೆ ರಾಜವೈಭವದ ಸನ್ಮಾನವನ್ನು 1857ರಲ್ಲಿ ದಯಪಾಲಿಸಿದನು. ನಾಲ್ಕು ಚದರ ಕಿಲೊಮೀಟರ್‌ಗಳ ವ್ಯಾಪ್ತಿಯ ಆ ಹಳೇ ನಗರವು, 8 ಮೀಟರ್ ಎತ್ತರದ ಮತ್ತು ತಳದಲ್ಲಿ
ಮೂರು ಮೀಟರ್ ದಪ್ಪವಾಗಿರುವ ಗೋಡೆಗಳ ಮಧ್ಯ ನೆಲೆಸಿರುತ್ತದೆ. ಆ ಗೋಡೆಗಳ ಹೊರಗೆ ಸುತ್ತಲೂ 70 ಮೀಟರ್ ಅಗಲವಾದ ಕಂದಕವು ಇದೆ.ಇಸವಿ 1885ರಲ್ಲಿ ಬ್ರಿಟಿಷರು ಮಿಂಡೊನ್‌ನ ಉತ್ತರಾಧಿಕಾರಿಯಾಗಿದ್ದ ರಾಜ ತಿಬೊನನ್ನು ಭಾರತಕ್ಕೆ ಗಡೀಪಾರುಮಾಡಿದರು, ಆದರೆ ಅವರು ಆ ಅರಮನೆಗೆ ಹಾನಿಮಾಡಲಿಲ್ಲ. IIನೆಯ ವಿಶ್ವ ಯುದ್ಧವಾದರೊ ಅರಮನೆಯನ್ನು ಬಿಟ್ಟುಬಿಡಲಿಲ್ಲ, ಅದು ಬೆಂಕಿಯಿಂದ ನೆಲಸಮವಾಯಿತು. ಧೈರ್ಯಗೆಡದೆ ಮ್ಯಾನ್ಮಾರ್‌ನ ಜನರು, ಅದರ ಮೂಲ ಸ್ಥಾನದಲ್ಲೇ ಆ ಅರಮನೆ ಹಾಗೂ ಅದರ ವೈಭವಯುತ ಕೆಂಪು ಮತ್ತು ಚಿನ್ನ ಮಿಶ್ರಿತ ಮರದ ಕಟ್ಟಡಗಳ ಒಂದು ಉತ್ಕೃಷ್ಟವಾದ ಪ್ರತಿಕೃತಿಯನ್ನು ಕಟ್ಟಿಸಿದರು. ಈಗಲೂ ಸಂದರ್ಶಕರು ಅವುಗಳೊಳಗೆ ಹೋಗಿ ನೋಡಸಾಧ್ಯವಿದೆ.
ಮಾಂಡಲೇಯಿಂದ ಇನ್ನೂರು ಕಿಲೊಮೀಟರ್ ದೂರದಲ್ಲಿ ಪಗಾನ್ ಎಂಬ ಸ್ಥಳವಿದೆ. ಅದು ಕೂಡ ಹಿಂದಿನ ರಾಜಧಾನಿಯಾಗಿದ್ದು, ಸಾಮಾನ್ಯ ಶಕದ ಮೊದಲನೆಯ ಸಹಸ್ರಮಾನದಲ್ಲಿ ಸ್ಥಾಪಿಸಲ್ಪಟ್ಟಿತು. ಅದು, 11ನೆಯ ಶತಮಾನದಲ್ಲಿ ವೈಭವದ ಶಿಖರಕ್ಕೇರಿತು, ಆದರೆ ಕೇವಲ 200 ವರ್ಷಗಳ ಬಳಿಕವೇ ಅದನ್ನು ತೊರೆಯಲಾಯಿತು. ಹಾಗಿದ್ದರೂ, ಕೆಲವು ಚಿಕ್ಕಪುಟ್ಟ ಹಳ್ಳಿಗಳ ನಡುವೆ ಮತ್ತು ಸುತ್ತಲೂ ಹಾಳುಬಿದ್ದಿರುವ ನೂರಾರು ದೇವಾಲಯಗಳು ಮತ್ತು ಪಗೋಡಗಳಿವೆ. ಇವೆಲ್ಲವೂ ಅದರ ಹಿಂದಿನ ಮಹಿಮೆಯ ಸ್ಮಾರಕಗಳಾಗಿವೆ.
ಇಂದಿನ ರಾಜಧಾನಿಯಾಗಿರುವ ಯಾಂಗೊನ್ (1989ರ ವರೆಗೆ ರಂಗೂನ್ ಎಂದು ಅಧಿಕೃತವಾಗಿ ಪ್ರಸಿದ್ಧವಾಗಿತ್ತು) 30 ಲಕ್ಷಕ್ಕಿಂತಲೂ ಹೆಚ್ಚು ಜನರಿರುವ ಗಿಜಿಗಿಟ್ಟುವ ನಗರವಾಗಿದೆ. ಕಾರುಗಳು, ಬಸ್ಸುಗಳು ಮತ್ತು ಎಲ್ಲ ಪಕ್ಕದಲ್ಲೂ ತೆರೆದಿರುವ ಟ್ಯಾಕ್ಸಿಗಳ ಹಾರ್ನ್‌ಗಳ ಕರ್ಕಶ ಶಬ್ದವು ಯಾವಾಗಲೂ ಕೇಳಿಬರುತ್ತದೆ. ಯಾಂಗೊನ್‌ನ ಅಗಲವಾದ ಸಾಲುಮರಗಳ ಮಾರ್ಗಗಳಲ್ಲಿ ಬ್ರಿಟಿಷ್ ವಸಾಹತಿನ ಕಾಲದ ಹಳೆಯ ಕಟ್ಟಡಗಳಿರುವುದಾದರೂ, ಆಕಾಶದ ಹಿನ್ನೆಲೆಯ ಮೇಲೆ ಕಾಣುವ ನಗರದ ರೂಪರೇಖೆಯಲ್ಲಿ ಈಗ ಹೆಚ್ಚಾಗಿ ಆಧುನಿಕ ಬಹುಮಹಡಿ ಹೋಟೆಲುಗಳು ಮತ್ತು ಆಫೀಸ್ ಕಟ್ಟಡಗಳು ನೋಡಲು ಸಿಗುತ್ತವೆ.
ಇದೇ ರೂಪರೇಖೆಯಲ್ಲಿ ನೋಡಬಹುದಾದ, 2,500 ವರ್ಷಗಳಷ್ಟು ಹಳೆಯ ಶ್ವೇದಾಗನ್ ಪಗೋಡದ 98 ಮೀಟರ್ ಎತ್ತರದ ಚಿನ್ನಲೇಪವುಳ್ಳ ಶೃಂಗವನ್ನು ನೋಡಬಹುದು. ಅದು ಹಿಂದಿನ ಕಾಲಗಳ ಐಶ್ವರ್ಯ ಮತ್ತು ಕಲಾತ್ಮಕ ಬುದ್ಧಿಯನ್ನು ಪ್ರಕಟಪಡಿಸುತ್ತದೆ. ಸುಮಾರು 7,000 ವಜ್ರಗಳು ಮತ್ತು ಇತರ ಅಮೂಲ್ಯ ರತ್ನಗಳು ಆ ಶೃಂಗದ ಸುತ್ತಲೂ ಇವೆಯೆಂದು ಹೇಳಲಾಗುತ್ತದೆ. ಅದರ ನೆತ್ತಿಯಲ್ಲಿ, 76 ಕ್ಯಾರಟ್ ವಜ್ರವು ಕಿರೀಟದಂತಿದೆ. ಮ್ಯಾನ್ಮಾರ್‌ನಲ್ಲಿರುವ ಅನೇಕ ಹಳೆಯ ಕಟ್ಟಡಗಳಂತೆಯೇ, ಈ ಶ್ವೇದಾಗನ್ ಪಗೋಡವು ಸಹ, ಭೂಕಂಪಗಳು ಮತ್ತು ಯುದ್ಧಗಳಿಂದ ಅಲ್ಲಾಡಿಸಲ್ಪಟ್ಟು, ಜಜ್ಜಲ್ಪಟ್ಟಿದೆ. ಅದರಲ್ಲಿ ಹೆಚ್ಚಿನ ಭಾಗವು ಪುನರ್ನಿರ್ಮಿಸಲ್ಪಟ್ಟಿದೆ.
ಆದರೆ, ಸುವರ್ಣ ಸೂಲೆ ಪಗೋಡವು, ಯಾಂಗೊನ್‌ನ ನಿಜವಾದ ಮುಖ್ಯ ಆಕರ್ಷಣೆಯಾಗಿದೆ ಎಂದು ಕೆಲವರು ಹೇಳುತ್ತಾರೆ. ನಲ್ವತ್ತಾರು ಮೀಟರ್‌ಗಳಷ್ಟು ಎತ್ತರವಿದ್ದು, 2,000 ವರ್ಷ ಹಳೆಯದಾದ ಸೂಲೆ ಪಗೋಡವು, ನಗರದ ನಾಲ್ಕು ಮುಖ್ಯ ಬೀದಿಗಳ ಜಂಕ್ಷನ್‌ನಲ್ಲಿ ಒಂದು ಸುವರ್ಣ ವಾಹನ ಸಂಚಾರದ ದ್ವೀಪವಾಗಿದೆ. ಆ ಪಗೋಡದ ಸುತ್ತಲೂ, ಅಂಗಡಿಗಳು ಒಂದು ಕಂಠಹಾರದಂತೆ ಮುತ್ತಿಕೊಂಡಿವೆ.
ಆತ್ಮಿಕ ಚಿನ್ನ
ಇಸವಿ 1914ರಲ್ಲಿ ಇಬ್ಬರು ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳು (ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳನ್ನು ಹಾಗೆ ಕರೆಯಲಾಗುತ್ತಿತ್ತು) ಭಾರತದಿಂದ ರಂಗೂನ್‌ಗೆ ಬಂದರು. ಅವರು ಹೆಚ್ಚು ಶ್ರೇಷ್ಠವಾದ ಚಿನ್ನ, ಅಂದರೆ ಆತ್ಮಿಕ ಚಿನ್ನಕ್ಕೆ ಮೌಲ್ಯವನ್ನು ನೀಡುವ ಜನರಿಗಾಗಿ ಹುಡುಕುತ್ತಿದ್ದರು. 1928 ಮತ್ತು 1930ರಲ್ಲಿ ಇನ್ನೂ ಹೆಚ್ಚು ಮಿಷನೆರಿಗಳು ಬಂದರು ಮತ್ತು 1939ರಷ್ಟಕ್ಕೆ, ಒಟ್ಟು 28 ಸಾಕ್ಷಿಗಳಿದ್ದ ಮೂರು ಸಭೆಗಳು ಅಲ್ಲಿ ಸ್ಥಾಪಿಸಲ್ಪಟ್ಟಿದ್ದವು. ಬಾಂಬೆಯಲ್ಲಿದ್ದ, ಯೆಹೋವನ ಸಾಕ್ಷಿಗಳ ಭಾರತದ ಬ್ರಾಂಚ್ ಆಫೀಸು, ಅಲ್ಲಿನ ಕೆಲಸವನ್ನು 1938ರ ವರೆಗೆ ನೋಡಿಕೊಂಡಿತು. ಅಂದಿನಿಂದ 1940ರ ವರೆಗೆ ಆಸ್ಟ್ರೇಲಿಯ ಬ್ರಾಂಚ್ ಆಫೀಸು ಅಲ್ಲಿನ ಕೆಲಸವನ್ನು ನೋಡಿಕೊಂಡಿತು. 1947ರಲ್ಲಿ, IIನೇ ವಿಶ್ವ ಯುದ್ಧದ ನಂತರ ಮ್ಯಾನ್ಮಾರ್‌ನ ಮೊದಲನೆಯ ಬ್ರಾಂಚ್ ಆಫೀಸನ್ನು ರಂಗೂನ್‌ನಲ್ಲಿ ತೆರೆಯಲಾಯಿತು.
ಜನವರಿ 1978ರಲ್ಲಿ, ಬ್ರಾಂಚ್ ಆಫೀಸನ್ನು ಇನ್ಯಾ ರೋಡ್ ಎಂಬಲ್ಲಿಗೆ ಸ್ಥಳಾಂತರಿಸಲಾಯಿತು. ಮೂರು ಮಹಡಿಗಳುಳ್ಳ ಮುಖ್ಯ ಕಾರ್ಯಾಲಯವನ್ನು ಮ್ಯಾನ್ಮಾರ್ ಬೆತೆಲ್ ಗೃಹ ಎಂದು ಕರೆಯಲಾಗಿದೆ. 52 ಸದಸ್ಯರುಳ್ಳ ಅಲ್ಲಿನ ಬೆತೆಲ್ ಕುಟುಂಬವು, ಆ ದೇಶದಲ್ಲಿ ಸಕ್ರಿಯರಾಗಿರುವ ಸುಮಾರು 3,000 ಮಂದಿ ಸಾಕ್ಷಿಗಳ ಅಗತ್ಯಗಳನ್ನು ಪೂರೈಸುವುದರಲ್ಲಿ ಕಾರ್ಯಮಗ್ನವಾಗಿದೆ. ಮ್ಯಾನ್ಮಾರ್‌ನಲ್ಲಿರುವ ಅನೇಕಾನೇಕ ಬುಡಕಟ್ಟು ಭಾಷೆಗಳಿಂದಾಗಿ, ಬ್ರಾಂಚ್‌ನಲ್ಲಿ ಮಾಡಲ್ಪಡುವ ಕೆಲಸಗಳಲ್ಲಿ ಭಾಷಾಂತರವು ಒಂದು ಪ್ರಧಾನ ಭಾಗವಾಗಿದೆ. ಯೆಹೋವನ ಸಾಕ್ಷಿಗಳ ಕಠಿನ ಪರಿಶ್ರಮವು, ಆ ಸುವರ್ಣ ದೇಶದಲ್ಲಿನ ವಿಫುಲವಾದ ಐಶ್ವರ್ಯಕ್ಕೆ ಇನ್ನೊಂದು ‘ಚಿನ್ನದ ಗಟ್ಟಿಯನ್ನು’ ಕೂಡಿಸುತ್ತದೆ. (g01 12/8)
[ಪುಟ 19ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಬಾಂಗ್ಲಾದೇಶ
ಭಾರತ
ಚೀನಾ
ಮಾಂಡಲೇ
ಲಾವೊಸ್
ಥಾಯ್‌ಲೆಂಡ್
ಮಂಡಲೇ
ಪಗಾನ್
ಯಾಂಗೊನ್
ಬಾಂಗಾಳ ಕೊಲ್ಲಿ
[ಕೃಪೆ]
Mountain High Maps® Copyright © 1997 Digital Wisdom, Inc.
[ಪುಟ 19ರಲ್ಲಿರುವ ಚಿತ್ರಗಳು]
ಮೇಲಿನಿಂದ: ಸ್ತ್ರೀಪುರುಷರು ಲುಂಗಿಗಳನ್ನು ಉಟ್ಟುಕೊಳ್ಳುತ್ತಾರೆ; ಒಬ್ಬ ಎಳೆಯ ಬೌದ್ಧ ಸಂನ್ಯಾಸಿ; “ಟನಾಖಾ” ಹಚ್ಚಿಕೊಂಡಿರುವ ಸ್ತ್ರೀಯರು
[ಪುಟ 20ರಲ್ಲಿರುವ ಚಿತ್ರ]
ನೆಲಗಡಲೆಯ ಹೊಲದಲ್ಲಿ ಸಾರುವುದು
[ಪುಟ 20ರಲ್ಲಿರುವ ಚಿತ್ರ]
ಮರದ ಕೆತ್ತನೆಗಳನ್ನು ಸ್ಥಳಿಕ ಮಾರುಕಟ್ಟೆಗಳಲ್ಲಿ ಮಾರಲಾಗುತ್ತದೆ
[ಕೃಪೆ]
[ಪುಟ 20ರಲ್ಲಿರುವ ಚಿತ್ರ]
ಮೆರುಗೆಣ್ಣೆಯ ಲೇಪವಿರುವ ಒಂದು ಟೇಬಲ್ ಟಾಪ್‌ನ ಮೇಲೆ ವಿನ್ಯಾಸವನ್ನು ಮಾಡುವುದು
[ಪುಟ 20ರಲ್ಲಿರುವ ಚಿತ್ರ]
ಸುಂದರವಾಗಿ ಅಲಂಕೃತವಾಗಿರುವ ಮೆರುಗೆಣ್ಣೆಯ ಬೋಗುಣಿ
[ಕೃಪೆ]
chaang.com
[ಪುಟ 22ರಲ್ಲಿರುವ ಚಿತ್ರ]
ಯೆಹೋವನ ಸಾಕ್ಷಿಗಳ ಮ್ಯಾನ್ಮಾರ್ ಬ್ರಾಂಚ್ ಆಫೀಸ್
[ಪುಟ 19ರಲ್ಲಿರುವ ಚಿತ್ರ ಕೃಪೆ]
© Jean Leo Dugast/Panos