ಸೇಡುತೀರಿಸಿಕೊಳ್ಳುವುದರಲ್ಲಿ ತಪ್ಪೇನಿದೆ?
ಯುವಜನರು ಪ್ರಶ್ನಿಸುವುದು . . .
ಸೇಡುತೀರಿಸಿಕೊಳ್ಳುವುದರಲ್ಲಿ ತಪ್ಪೇನಿದೆ?
“ಅವನು ನನಗೆ ಅವಮಾನಮಾಡಿದನು.”—ಕಾನೀಲ್, 15ರ ಪ್ರಾಯದವನಾಗಿದ್ದು, ಕೊಲೆಮಾಡಿದ್ದಕ್ಕಾಗಿ ಸೆರೆಯಲ್ಲಿದ್ದಾನೆ.
ಒಂದು ಶಾಲಾ ಡ್ಯಾನ್ಸ್‌ನಲ್ಲಿ ಒಬ್ಬ ಶಿಕ್ಷಕಿಯನ್ನು ಕೊಂದ 14ರ ಪ್ರಾಯದ ಆ್ಯಂಡ್ರೂ, ಶಿಕ್ಷಕರನ್ನು ಹಾಗೂ ತನ್ನ ಹೆತ್ತವರನ್ನು ದ್ವೇಷಿಸುತ್ತೇನೆ ಮತ್ತು ತನ್ನನ್ನು ತಿರಸ್ಕರಿಸಿದ್ದಕ್ಕಾಗಿ ಹುಡುಗಿಯರ ಮೇಲೂ ಕೋಪಗೊಂಡಿದ್ದೇನೆ ಎಂದು ಪ್ರತಿಪಾದಿಸಿದನು.
ಟೈಮ್ ಪತ್ರಿಕೆಯು ಇದನ್ನು “ಒಂದು ಮಾರಕ ಪ್ರವೃತ್ತಿ” ಎಂದು ಕರೆಯುತ್ತದೆ. ಕೋಪಗೊಂಡಿದ್ದ ಒಬ್ಬ ಯೌವನಸ್ಥನು, ಗುಟ್ಟಾಗಿ ಒಂದು ಮಾರಕ ಆಯುಧವನ್ನು ಶಾಲೆಗೆ ತೆಗೆದುಕೊಂಡುಹೋಗುತ್ತಾನೆ ಮತ್ತು ತನ್ನ ಸಹಪಾಠಿಗಳು ಹಾಗೂ ಶಿಕ್ಷಕರ ಮೇಲೆ ಇದ್ದಕ್ಕಿದ್ದಂತೆ ಗುಂಡುಹಾರಿಸತೊಡಗುತ್ತಾನೆ. ಅಮೆರಿಕದಲ್ಲಿ ಇಂತಹ ದುರ್ಘಟನೆಗಳು ಎಷ್ಟು ಸರ್ವಸಾಮಾನ್ಯವಾಗಿ ಕಂಡುಬರಲಾರಂಭಿಸಿವೆಯೆಂದರೆ, ಒಂದು ಟಿವಿ ವಾರ್ತಾ ನೆಟ್‌ವರ್ಕ್ ಈ ಪ್ರವೃತ್ತಿಯನ್ನು “ಹಿಂಸಾಚಾರದ ಸ್ಫೋಟನ” ಎಂದು ವರ್ಣಿಸಿತು.
ಶಾಲೆಯಲ್ಲಿ ಗುಂಡುಹಾರಿಸುವುದು ಸ್ವಲ್ಪಮಟ್ಟಿಗೆ ಅಪರೂಪದ ಘಟನೆಯಾಗಿದೆ ಎಂಬುದು ಸಂತೋಷಕರ ಸಂಗತಿಯಾಗಿದೆ. ಹಾಗಿದ್ದರೂ, ಕೆಲವು ಯುವ ಜನರು ನಿಜವಾಗಿಯೂ ಎಷ್ಟು ರೋಷಗೊಂಡಿದ್ದಾರೆ ಎಂಬುದನ್ನು, ಅನಿರ್ಬಂಧಿತ ಕೋಪದಿಂದ ಗೈಯಲ್ಪಟ್ಟ ಅಪರಾಧಗಳೇ ತೋರಿಸುತ್ತವೆ. ಇಂತಹ ಕೋಪದ ಕೆರಳುವಿಕೆಗಳನ್ನು ಯಾವುದು ಉಂಟುಮಾಡುತ್ತದೆ? ಈ ಯುವ ಜನರಲ್ಲಿ ಕೆಲವರು, ಅಧಿಕಾರದಲ್ಲಿರುವಂಥ ಜನರ ಕೈಕೆಳಗೆ ತಾವು ಅನುಭವಿಸಿರುವ ಒಂದು ಅನ್ಯಾಯ ಅಥವಾ ಅಧಿಕಾರದ ದುರುಪಯೋಗವನ್ನು ನೋಡಿ ಕೋಪೋದ್ರಿಕ್ತರಾಗಿದ್ದರು ಎಂಬುದು ಸುವ್ಯಕ್ತ. ಇನ್ನಿತರರು, ತಮ್ಮ ಸಮಾನಸ್ಥರ ಸತತವಾದ ಕೀಟಲೆಗಳಿಂದ ಕುಪಿತರಾಗಿದ್ದರು. ಒಬ್ಬ ಸಹಪಾಠಿಯ ಮೇಲೆ ಗುಂಡುಹಾರಿಸಿ, ನಂತರ ತನ್ನ ಮೇಲೇ ಗುಂಡುಹಾರಿಸಿಕೊಂಡ 12 ವರ್ಷ ಪ್ರಾಯದ ಒಬ್ಬ ಹುಡುಗನನ್ನು, ಡುಮ್ಮ ಎಂದು ಗೇಲಿಮಾಡಲಾಗುತ್ತಿತ್ತು.
ಇಂತಹ ವಿಪರೀತ ಹಿಂಸಾತ್ಮಕ ಕೃತ್ಯಗಳಲ್ಲಿ ಒಳಗೂಡುವುದರ ಕುರಿತು ಬಹುಶಃ ಅಧಿಕಾಂಶ ಯುವ ಜನರು ಎಂದೂ ಗಂಭೀರವಾಗಿ ಆಲೋಚಿಸುವುದಿಲ್ಲ ಎಂಬುದು ಒಪ್ಪಿಕೊಳ್ಳತಕ್ಕದ್ದೇ. ಆದರೂ, ಜಾತಿವಾದ, ಪೀಡನೆ, ಅಥವಾ ಕ್ರೂರ ರೀತಿಯ ಕೀಟಲೆಗೆ ನೀವು ಬಲಿಯಾದಾಗ, ಅದರಿಂದ ಉಂಟಾಗುವ ವೇದನೆ ಹಾಗೂ ನೋವಿನ ಅನಿಸಿಕೆಗಳನ್ನು ನಿಗ್ರಹಿಸುವುದು ಅಷ್ಟೇನೂ ಸುಲಭವಾದದ್ದಲ್ಲ. ತನ್ನ ಶಾಲಾ ದಿನಗಳ ಕುರಿತು ಜ್ಞಾಪಿಸಿಕೊಳ್ಳುತ್ತಾ ಬೆನ್ ಹೇಳುವುದು: “ನಾನು ಯಾವಾಗಲೂ ನನ್ನ ವಯಸ್ಸಿನ ಅನೇಕ ಮಕ್ಕಳಿಗಿಂತ ತುಂಬ ಕುಳ್ಳಗಿದ್ದೆ. ಮತ್ತು ನನ್ನ ತಲೆಯೂ ಪೂರ್ಣವಾಗಿ ಬೋಳಿಸಲ್ಪಟ್ಟಿದ್ದರಿಂದ, ಬೇರೆ ಮಕ್ಕಳು ಯಾವಾಗಲೂ ನನ್ನನ್ನು ಗೇಲಿಮಾಡುತ್ತಿದ್ದರು ಮತ್ತು ನನ್ನ ತಲೆಯ ಮೇಲೆ ಹೊಡೆಯುತ್ತಿದ್ದರು. ಇದು ನನಗೆ ತುಂಬ ಕೋಪವನ್ನುಂಟುಮಾಡುತ್ತಿತ್ತು. ಸನ್ನಿವೇಶವನ್ನು ಇನ್ನೂ ಉಲ್ಬಣಗೊಳಿಸಿದ ಸಂಗತಿಯೇನೆಂದರೆ, ಅಧಿಕಾರದಲ್ಲಿದ್ದ ಜನರಿಂದ ಸಹಾಯವನ್ನು ಪಡೆದುಕೊಳ್ಳಲು ನಾನು ಅವರ ಬಳಿಗೆ ಹೋದಾಗ, ಅವರು ನನ್ನನ್ನು ಅಲಕ್ಷಿಸಿಬಿಟ್ಟರು. ಇದು ನನ್ನನ್ನು ಇನ್ನಷ್ಟು ಕೋಪೋದ್ರಿಕ್ತನನ್ನಾಗಿ ಮಾಡಿತು!” ಬೆನ್ ಮತ್ತೂ ಹೇಳಿದ್ದು: “ಒಂದು ಬಂದೂಕನ್ನು ತೆಗೆದುಕೊಂಡು ಈ ಜನರ ಮೇಲೆ ಗುಂಡುಹಾರಿಸುವುದರಿಂದ ನನ್ನನ್ನು ತಡೆದ ಒಂದೇ ಒಂದು ಸಂಗತಿಯು, ನಾನು ಒಂದು ಬಂದೂಕನ್ನು ಹೊಂದುವ ಮಾರ್ಗವಿಲ್ಲದಿರುವುದೇ ಆಗಿತ್ತು.”
ತಮಗೆ ನೋವನ್ನುಂಟುಮಾಡಿರುವ ಜನರಿಗೆ ನೋವನ್ನುಂಟುಮಾಡಲು ಪ್ರಯತ್ನಿಸುವ ಯುವ ಜನರನ್ನು ನೀವು ಯಾವ ದೃಷ್ಟಿಕೋನದಿಂದ ನೋಡತಕ್ಕದ್ದು? ಮತ್ತು ಸ್ವತಃ ನೀವೇ ದುರುಪಚಾರಕ್ಕೆ ಬಲಿಯಾಗುವುದಾದರೆ ನೀವೇನು ಮಾಡಬೇಕು? ಇದಕ್ಕೆ ಉತ್ತರವಾಗಿ, ದೇವರ ವಾಕ್ಯಕ್ಕೆ ಏನು ಹೇಳಲಿಕ್ಕಿದೆಯೆಂಬುದನ್ನು ಪರಿಗಣಿಸಿರಿ.
ಆತ್ಮನಿಯಂತ್ರಣ—ಬಲದ ಸಂಕೇತ!
ದುರುಪಚಾರ ಮತ್ತು ಅನ್ಯಾಯವು ಹೊಸ ಸಂಗತಿಯೇನಲ್ಲ. ಒಬ್ಬ ಬೈಬಲ್ ಲೇಖಕನು ಈ ಬುದ್ಧಿವಾದವನ್ನು ನೀಡಿದನು: “ಕೋಪವನ್ನು ಕೀರ್ತನೆ 37:8) ಅನೇಕವೇಳೆ ಕೋಪದಲ್ಲಿ ಆತ್ಮನಿಯಂತ್ರಣದ ಕೊರತೆಯು ಒಳಗೂಡಿರುತ್ತದೆ ಮತ್ತು ಅದರ ಫಲಿತಾಂಶಗಳನ್ನು ಪರಿಗಣಿಸದೇ ಅದನ್ನು ವ್ಯಕ್ತಪಡಿಸಲಾಗುತ್ತದೆ. ಒಬ್ಬನು ‘ಉರಿಗೊಳ್ಳುವಂತೆ’ ತನ್ನನ್ನು ಬಿಟ್ಟುಕೊಡುವುದು, ಕೋಪದ ಸ್ಫೋಟನದಲ್ಲಿ ಪರಿಣಮಿಸಸಾಧ್ಯವಿದೆ! ಇದರ ಫಲಿತಾಂಶವೇನಾಗಿರಬಹುದು?
ಅಣಗಿಸಿಕೋ; ರೋಷವನ್ನು ಬಿಡು. ಉರಿಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು.” (ಕಾಯಿನ ಮತ್ತು ಹೇಬೆಲರ ಉದಾಹರಣೆಯನ್ನು ಪರಿಗಣಿಸಿರಿ. ತನ್ನ ತಮ್ಮನಾದ ಹೇಬೆಲನ ಮೇಲೆ “ಕಾಯಿನನು ಬಹು ಕೋಪಗೊಂಡನು.” ಇದರ ಫಲಿತಾಂಶವಾಗಿ, ಅವರು “ಅಡವಿಗೆ ಬಂದಾಗ ಕಾಯಿನನು ತನ್ನ ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು.” (ಆದಿಕಾಂಡ 4:5, 8) ಅನಿಯಂತ್ರಿತ ಕೋಪದ ಇನ್ನೊಂದು ಉದಾಹರಣೆಯು, ಅರಸನಾದ ಸೌಲನನ್ನು ಒಳಗೂಡಿತ್ತು. ಯುವಕನಾದ ದಾವೀದನ ಮಿಲಿಟರಿ ಸಾಹಸಕಾರ್ಯಗಳಿಂದ ಈರ್ಷ್ಯೆಗೊಂಡ ಸೌಲನು, ಕೇವಲ ದಾವೀದನ ಕಡೆಗೆ ಮಾತ್ರವಲ್ಲ, ಬದಲಾಗಿ ತನ್ನ ಸ್ವಂತ ಮಗನಾಗಿದ್ದ ಯೋನಾತಾನನ ಕಡೆಗೂ ಈಟಿಯನ್ನು ಎಸೆದಿದ್ದನು!—1 ಸಮುವೇಲ 18:11; 19:10; 20:30-34.
ಕೋಪಗೊಳ್ಳುವುದು ಯೋಗ್ಯವಾಗಿರುವಂಥ ಸಮಯಗಳೂ ಇವೆ ಎಂಬುದು ನಿಜ. ಆದರೆ, ಆಗಲೂ ಸಹ, ಒಂದುವೇಳೆ ಯೋಗ್ಯವಾದ ಕೋಪವನ್ನು ಸರಿಯಾಗಿ ನಿಯಂತ್ರಿಸದಿದ್ದಲ್ಲಿ, ಇದರಿಂದ ಕೆಡುಕು ಉಂಟಾಗಸಾಧ್ಯವಿದೆ. ಉದಾಹರಣೆಗೆ, ಶೆಕೆಮನು, ತಮ್ಮ ತಂಗಿಯಾದ ದೀನಳ ಮೇಲೆ ಬಲಾತ್ಕಾರ ಸಂಭೋಗ ನಡೆಸಿದ್ದಾನೆ ಎಂಬುದು ಗೊತ್ತಾದಾಗ, ಸಿಮೆಯೋನ್ ಮತ್ತು ಲೇವಿಯರಿಗೆ ಅವನ ಮೇಲೆ ಕೋಪಗೊಳ್ಳುವ ಹಕ್ಕು ಇತ್ತು. ಆದರೆ ಶಾಂತಚಿತ್ತರಾಗಿರುವುದಕ್ಕೆ ಬದಲಾಗಿ ಅವರು ಹಿಂಸಾತ್ಮಕ ಕೋಪವನ್ನು ಕೆರಳಿಸಿದರು. ಇದು ಅವರ ಮುಂದಿನ ಮಾತುಗಳಲ್ಲಿ ವ್ಯಕ್ತಪಡಿಸಲ್ಪಟ್ಟಿತು: “ನಮ್ಮ ತಂಗಿಯನ್ನು ಸೂಳೆಯಂತೆ ನಡಿಸಬಹುದೋ”? (ಆದಿಕಾಂಡ 34:31) ಮತ್ತು ಅವರ ಕೋಪವು ಉದ್ವೇಗದ ಮಟ್ಟವನ್ನು ತಲಪಿದಾಗ, ‘ಅವರಿಬ್ಬರೂ ಕೈಯಲ್ಲಿ ಕತ್ತಿಹಿಡುಕೊಂಡು,’ ಶೆಕೆಮನ ಊರಿನಲ್ಲಿ ವಾಸಿಸುತ್ತಿದ್ದ ‘ಪುರುಷರೆಲ್ಲರನ್ನೂ ದಾಕ್ಷಿಣ್ಯವಿಲ್ಲದೆ ಕೊಲ್ಲಲು’ ಮುಂದುವರಿದರು. ಅವರ ರೋಷವು ಸಾಂಕ್ರಾಮಿಕವಾಗಿತ್ತು, ಏಕೆಂದರೆ ಈ ಕೊಲೆಪಾತಕ ಆಕ್ರಮಣದಲ್ಲಿ “ಯಾಕೋಬನ ಇತರ ಪುತ್ರರೂ” ಇವರನ್ನು ಸೇರಿಕೊಂಡರು. (ಆದಿಕಾಂಡ 34:25-27, NW) ಅನೇಕ ವರ್ಷಗಳ ನಂತರವೂ, ಸಿಮೆಯೋನ್ ಮತ್ತು ಲೇವಿಯರ ತಂದೆಯಾದ ಯಾಕೋಬನು ಅವರ ಅನಿಯಂತ್ರಿತ ಕೋಪವನ್ನು ಬಲವಾಗಿ ಖಂಡಿಸಿದನು.—ಆದಿಕಾಂಡ 49:5-7.
ಇದರಿಂದ ನಾವು ಒಂದು ಪ್ರಾಮುಖ್ಯವಾದ ಅಂಶವನ್ನು ಕಲಿಯುತ್ತೇವೆ: ಅನಿಯಂತ್ರಿತ ಕೋಪವು ಬಲದ ಸಂಕೇತವಲ್ಲ, ಬದಲಾಗಿ ದೌರ್ಬಲ್ಯದ ಸಂಕೇತವಾಗಿದೆ. ಜ್ಞಾನೋಕ್ತಿ 16:32 (NW) ಹೇಳುವುದು: “ಕೋಪಿಸಿಕೊಳ್ಳುವುದರಲ್ಲಿ ನಿಧಾನಿಯು ಒಬ್ಬ ಶೂರನಿಗಿಂತಲೂ ಬಲಿಷ್ಠನಾಗಿದ್ದಾನೆ, ಮತ್ತು ತನ್ನ ಕೋಪವನ್ನು ನಿಯಂತ್ರಿಸುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಬಲಿಷ್ಠನಾಗಿದ್ದಾನೆ.”
ಸೇಡುತೀರಿಸಿಕೊಳ್ಳುವುದರ ಮೂರ್ಖತನ
ಹೀಗೆ ಶಾಸ್ತ್ರವಚನಗಳು ಈ ಬುದ್ಧಿವಾದವನ್ನು ನೀಡುತ್ತವೆ: “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. . . . ನೀವೇ ಮುಯ್ಯಿಗೆ ಮುಯ್ಯಿ ತೀರಿಸ”ಬೇಡಿ. (ರೋಮಾಪುರ 12:17, 19) ಸೇಡುತೀರಿಸಿಕೊಳ್ಳುವುದರಲ್ಲಿ ಶಾರೀರಿಕ ಹಿಂಸಾಚಾರವೇ ಒಳಗೂಡಿರಲಿ ಅಥವಾ ಕೇವಲ ಕ್ರೂರ ಮಾತುಗಳೇ ಒಳಗೂಡಿರಲಿ, ಅದು ದೇವರಿಗೆ ವಿರುದ್ಧವಾದ ಕೃತ್ಯವಾಗಿದೆ. ಅದೇ ಸಮಯದಲ್ಲಿ, ಅಂತಹ ಮುಯ್ಯಿತೀರಿಸುವಿಕೆಯು ಅಪ್ರಾಯೋಗಿಕವೂ ಅವಿವೇಕತನವೂ ಆಗಿದೆ. ಒಂದು ಕಾರಣವೇನೆಂದರೆ, ಸಾಮಾನ್ಯವಾಗಿ ಹಿಂಸಾಚಾರದಿಂದ ಇನ್ನಷ್ಟು ಹಿಂಸಾಚಾರವೇ ಫಲಿಸುತ್ತದೆ. (ಮತ್ತಾಯ 26:52) ಮತ್ತು ಕ್ರೂರ ಮಾತುಗಳು ಕೆಲವೊಮ್ಮೆ ಹೆಚ್ಚು ಕ್ರೂರವಾದ ಮಾತುಗಳನ್ನೇ ಉಂಟುಮಾಡುತ್ತವೆ. ಆದರೂ, ಅನೇಕವೇಳೆ ಕೋಪವು ನಿರಾಧಾರವಾದದ್ದಾಗಿದೆ ಎಂಬುದನ್ನೂ ನೆನಪಿನಲ್ಲಿಡಿರಿ. ಉದಾಹರಣೆಗೆ, ನಿಮಗೆ ಕೋಪವನ್ನು ಉಂಟುಮಾಡಿರುವ ಒಬ್ಬ ವ್ಯಕ್ತಿಗೆ ನಿಮ್ಮ ಕಡೆಗೆ ಹಗೆತನವಿತ್ತು ಎಂಬುದು ನಿಮಗೆ ನಿಜವಾಗಿಯೂ ಗೊತ್ತಿದೆಯೋ? ಆ ವ್ಯಕ್ತಿಯು ಯೋಚಿಸದೇ ಅಥವಾ ಅಸಂಸ್ಕೃತನಾದ್ದರಿಂದ ಹಾಗೆ ಮಾಡಿರಸಾಧ್ಯವಿದೆಯೋ? ಒಂದುವೇಳೆ ಅದರಲ್ಲಿ ಮತ್ಸರವು ಒಳಗೂಡಿರುವುದಾದರೂ, ಆ ಸನ್ನಿವೇಶದಲ್ಲಿ ಸೇಡುತೀರಿಸಿಕೊಳ್ಳುವುದು ಸಮಂಜಸವಾದದ್ದಾಗಿರುವುದೋ?
ಪ್ರಸಂಗಿ 7:21, 22ರಲ್ಲಿರುವ ಬೈಬಲಿನ ಮಾತುಗಳನ್ನು ಪರಿಗಣಿಸಿರಿ: “ಆಡುವ ಮಾತುಗಳನ್ನೆಲ್ಲಾ ಲಕ್ಷ್ಯಕ್ಕೆ ತಾರದಿರು; ನಿನ್ನ ಆಳು ನಿನ್ನನ್ನು ಶಪಿಸುವದು ಕಿವಿಗೆ ಬಿದ್ದೀತು. ನೀನೂ ಅನೇಕ ವೇಳೆ ಇತರರನ್ನು ಶಪಿಸಿದ್ದೀ ಎಂಬದಕ್ಕೆ ನಿನ್ನ ಮನಸ್ಸೇ ಸಾಕ್ಷಿ.” ಹೌದು, ನಿಮ್ಮ ಕುರಿತು ಜನರು ಕೆಟ್ಟದ್ದನ್ನು ಮಾತಾಡುವುದು ಅಹಿತಕರವಾದ ವಿಷಯವಾಗಿದೆ. ಆದರೆ ಇದು ಜೀವನದ ವಾಸ್ತವಿಕತೆಯಾಗಿದೆ ಎಂಬುದನ್ನು ಬೈಬಲ್ ಒಪ್ಪಿಕೊಳ್ಳುತ್ತದೆ. ಇತರರ ಕುರಿತು ಹೇಳಬಾರದಂಥ ಸಂಗತಿಗಳನ್ನೂ ನೀವು ಸಹ ಹೇಳಿರಬಹುದು ಎಂಬುದು ನಿಜವಲ್ಲವೋ? ಹಾಗಿರುವಾಗ, ಯಾರಾದರೊಬ್ಬರು ನಿಮ್ಮ ಕುರಿತು ಅನುಚಿತವಾಗಿ ಮಾತಾಡುವಾಗ ನೀವೇಕೆ ವಿಪರೀತವಾಗಿ ಪ್ರತಿಕ್ರಿಯಿಸಬೇಕು? ಅನೇಕವೇಳೆ, ಕೀಟಲೆಯನ್ನು ನಿಭಾಯಿಸುವ ಅತ್ಯುತ್ತಮ ವಿಧವು, ಸುಮ್ಮನೆ ಅದನ್ನು ಅಲಕ್ಷಿಸುವುದೇ ಆಗಿದೆ.
ತದ್ರೀತಿಯಲ್ಲಿ, ನಿಮ್ಮನ್ನು ದುರುಪಚರಿಸಲಾಗಿದೆ ಎಂದು ನಿಮಗನಿಸುವಾಗ, ಅದಕ್ಕೆ ಅತಿಯಾಗಿ ಪ್ರತಿಕ್ರಿಯಿಸುವುದು ಅವಿವೇಕತನವಾಗಿದೆ. ಡೇವಿಡ್ ಎಂಬ ಹೆಸರಿನ ಒಬ್ಬ ಹದಿವಯಸ್ಕನು, ತಾನು ಕೆಲವು ಜೊತೆ ಕ್ರೈಸ್ತರೊಂದಿಗೆ ಬಾಸ್ಕೆಟ್‌ಬಾಲ್ ಆಡುತ್ತಿದ್ದಾಗ ಏನು ಸಂಭವಿಸಿತೆಂಬುದನ್ನು ಜ್ಞಾಪಿಸಿಕೊಳ್ಳುತ್ತಾನೆ. “ಬೇರೆ ತಂಡದವರ್ಯಾರೋ ಒಬ್ಬರು ಚೆಂಡಿನಿಂದ ನನಗೆ ಹೊಡೆದರು” ಎಂದು ಡೇವಿಡ್ ಹೇಳುತ್ತಾನೆ. ಇದು ಮತ್ಸರದ ಕೃತ್ಯವಾಗಿದೆ ಎಂದು ಆ ಕೂಡಲೆ ತೀರ್ಮಾನಿಸಿದ ಡೇವಿಡ್, ಆ ಆಟಗಾರನ ಮೇಲೆ ಪುನಃ ಚೆಂಡನ್ನು ಎಸೆಯುವ ಮೂಲಕ ಸೇಡುತೀರಿಸಿಕೊಂಡನು. “ನನಗೆ ನಿಜವಾಗಿಯೂ ಕೋಪ ಬಂದಿತ್ತು” ಎಂದು ಡೇವಿಡ್ ಒಪ್ಪಿಕೊಳ್ಳುತ್ತಾನೆ. ಆದರೆ ಈ ಸಂಗತಿಯು ಇನ್ನಷ್ಟು ಹೀನ ಮಟ್ಟಕ್ಕೆ ಇಳಿಯುವ ಮೊದಲು, ಡೇವಿಡ್ ಯೆಹೋವನಿಗೆ ಪ್ರಾರ್ಥಿಸಿದನು. ಅವನು ಸ್ವತಃ ಹೀಗೆ ಹೇಳಿಕೊಂಡನು, ‘ನಾನೇನು ಮಾಡುತ್ತಿದ್ದೇನೆ, ಒಬ್ಬ ಕ್ರೈಸ್ತ ಸಹೋದರನೊಂದಿಗೆ ಕಾದಾಡಲು ಬಯಸುತ್ತಿದ್ದೇನೋ?’ ತದನಂತರ, ಅವರಿಬ್ಬರೂ ಪರಸ್ಪರ ಕ್ಷಮೆಯಾಚಿಸಿದರು.
ಅಂತಹ ಸನ್ನಿವೇಶಗಳಲ್ಲಿ ಯೇಸು ಕ್ರಿಸ್ತನ ಉದಾಹರಣೆಯನ್ನು ಜ್ಞಾಪಿಸಿಕೊಳ್ಳುವುದು ಒಳ್ಳೇದು. “ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸ”ಲಿಲ್ಲ. (1 ಪೇತ್ರ 2:23) ಹೌದು, ಒತ್ತಡದ ಕೆಳಗಿರುವಾಗ ಕೋಪದಿಂದ ಪ್ರತಿಕ್ರಿಯಿಸುವುದಕ್ಕೆ ಬದಲಾಗಿ, ದೇವರಿಗೆ ಪ್ರಾರ್ಥಿಸಿರಿ ಮತ್ತು ಆತ್ಮನಿಯಂತ್ರಣವನ್ನು ಕಾಪಾಡಿಕೊಳ್ಳಲಿಕ್ಕಾಗಿ ನಿಮಗೆ ಸಹಾಯಮಾಡುವಂತೆ ಆತನನ್ನು ಬೇಡಿಕೊಳ್ಳಿರಿ. ಆತನು “ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು” ಉದಾರವಾಗಿ ಕೊಡುವವನಾಗಿದ್ದಾನೆ. (ಲೂಕ 11:13) ಯಾರಾದರೂ ನಿಮಗೆ ಕೋಪವೆಬ್ಬಿಸುವಾಗ ಅವರ ವಿರುದ್ಧ ಸೇಡುತೀರಿಸಿಕೊಳ್ಳುವುದಕ್ಕೆ ಬದಲಾಗಿ, ನೀವು ಆ ವ್ಯಕ್ತಿಯ ಬಳಿಗೆ ಹೋಗಿ ಅದರ ಕುರಿತು ಮಾತಾಡಬೇಕು. (ಮತ್ತಾಯ 5:23, 24) ಅಥವಾ ಬಹುಶಃ ಶಾಲೆಯಲ್ಲಿರುವ ಒಬ್ಬ ರೌಡಿಯಿಂದ ನೀವು ಸತತವಾಗಿ ಗಂಭೀರವಾದ ಕಿರುಕುಳಕ್ಕೆ ಗುರಿಯಾಗುತ್ತಿರುವಲ್ಲಿ, ಅವನನ್ನು ಎದುರುಹಾಕಿಕೊಳ್ಳಲು ಪ್ರಯತ್ನಿಸಬೇಡಿ. ಅದಕ್ಕೆ ಬದಲಾಗಿ, ಸ್ವತಃ ನಿಮ್ಮನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿ ನೀವು ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. *
ಕೋಪೋದ್ರೇಕವನ್ನು ತೊರೆದುಬಿಟ್ಟ ಒಬ್ಬ ಯೌವನಸ್ಥ
ಅನೇಕ ಮಂದಿ ಯುವ ಜನರು ಈ ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸಿದ್ದಾರೆ ಮತ್ತು ಒಳ್ಳೇ ಫಲಿತಾಂಶಗಳನ್ನು ಪಡೆದುಕೊಂಡಿದ್ದಾರೆ. ಉದಾಹರಣೆಗೆ, ಕತ್ರೀನಾ ಎಂಬ ಹುಡುಗಿಯು ತೀರ ಚಿಕ್ಕ ಪ್ರಾಯದಲ್ಲೇ ದತ್ತು ಕೊಡಲ್ಪಟ್ಟಿದ್ದಳು. ಅವಳು ಹೇಳುವುದು: “ನನಗೆ ಕೋಪದ ಸಮಸ್ಯೆಯಿತ್ತು. ಏಕೆಂದರೆ ನನ್ನ ಸ್ವಂತ ತಾಯಿ ನನ್ನನ್ನು ಏಕೆ ದತ್ತು ಕೊಟ್ಟುಬಿಟ್ಟರು ಎಂಬುದು ನನಗೆ ಅರ್ಥವಾಗಲಿಲ್ಲ. ಆದುದರಿಂದ, ನಾನು ನನ್ನ ದತ್ತು ತಾಯಿಯ ಮೇಲೆ ಕೋಪವನ್ನು ತೋರಿಸುತ್ತಿದ್ದೆ. ಯಾವುದೋ ಒಂದು ಕ್ಷುಲ್ಲಕವಾದ ಕಾರಣಕ್ಕಾಗಿ, ನಾನು ದತ್ತು ತಾಯಿಗೆ ನೋವನ್ನುಂಟುಮಾಡಿದರೆ, ಯಾವುದೋ ಒಂದು ರೀತಿಯಲ್ಲಿ ನನ್ನ ಸ್ವಂತ ತಾಯಿಯ ಮೇಲೆ ಸೇಡುತೀರಿಸಿಕೊಳ್ಳುತ್ತಿದ್ದೇನೆ ಎಂದು ನನಗನಿಸುತ್ತಿತ್ತು. ಹೀಗೆ ನನ್ನಿಂದ ಸಾಧ್ಯವಿರುವುದೆಲ್ಲವನ್ನೂ—ಮಾತಿನ ನಿಂದನೆ, ನೆಲದ ಮೇಲೆ ಪಾದದಿಂದ ಕುಟ್ಟುವುದು, ಮುನಿಯುವುದು—ಮಾಡಿದೆ. ಜೋರಾಗಿ ಬಾಗಿಲನ್ನು ಬಡಿಯುವುದು ನನ್ನ ಅಚ್ಚುಮೆಚ್ಚಿನ ಕೆಲಸವಾಗಿತ್ತು. ‘ನಾನು ನಿನ್ನನ್ನು ದ್ವೇಷಿಸುತ್ತೇನೆ!’ ಎಂದು ಸಹ ನಾನು ಹೇಳುತ್ತಿದ್ದೆ. ಇದಕ್ಕೆಲ್ಲ ಕಾರಣವು ನನ್ನ ಅತಿಯಾದ ಕೋಪವೇ ಆಗಿತ್ತು. ಹಿಂದಿರುಗಿ ನೋಡುವಾಗ, ನಾನು ಹಾಗೆಲ್ಲಾ ಮಾಡುತ್ತಿದ್ದೆ ಎಂಬುದನ್ನು ನಂಬುವುದಕ್ಕೇ ಆಗುವುದಿಲ್ಲ.”
ಕತ್ರೀನಾ ತನ್ನ ಕೋಪವನ್ನು ನಿಯಂತ್ರಿಸುವಂತೆ ಯಾವುದು ಸಹಾಯಮಾಡಿತು? ಅವಳು ಉತ್ತರಿಸುವುದು: “ಬೈಬಲನ್ನು ಓದುವುದೇ! ಇದು ತುಂಬ ಪ್ರಾಮುಖ್ಯವಾಗಿದೆ, ಏಕೆಂದರೆ ನಿಮಗೆ ಹೇಗನಿಸುತ್ತದೆ ಎಂಬುದು ಯೆಹೋವನಿಗೆ ತಿಳಿದಿದೆ.” ನಿರ್ದಿಷ್ಟವಾಗಿ ಕತ್ರೀನಾಳ ಕುಟುಂಬದ ಸನ್ನಿವೇಶದೊಂದಿಗೆ ವ್ಯವಹರಿಸುತ್ತಿದ್ದ ಎಚ್ಚರ! ಪತ್ರಿಕೆಯ ಲೇಖನಗಳನ್ನು, ಅವಳು ಹಾಗೂ ಅವಳ ಕುಟುಂಬವು ಓದುವಾಗಲೂ ಕತ್ರೀನಾಳು ಸಾಂತ್ವನವನ್ನು ಪಡೆದುಕೊಂಡಳು. * “ನಾವೆಲ್ಲರೂ ಒಟ್ಟಿಗೆ ಕುಳಿತುಕೊಂಡು ಒಬ್ಬರು ಇನ್ನೊಬ್ಬರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಶಕ್ತರಾಗಿದ್ದೆವು” ಎಂದು ಅವಳು ಜ್ಞಾಪಿಸಿಕೊಳ್ಳುತ್ತಾಳೆ.
ನೀವು ಸಹ ಕೋಪೋದ್ರೇಕದ ಅನಿಸಿಕೆಗಳನ್ನು ನಿಯಂತ್ರಿಸಲು ಕಲಿಯಬಲ್ಲಿರಿ. ಕೀಟಲೆ, ರೌಡಿತನ, ಅಥವಾ ದುರುಪಚಾರವನ್ನು ಅನುಭವಿಸುವಾಗ, ಕೀರ್ತನೆ 4:4ರಲ್ಲಿರುವ (NW) ಬೈಬಲಿನ ಮಾತುಗಳನ್ನು ಜ್ಞಾಪಿಸಿಕೊಳ್ಳಿರಿ: “ಕೋಪಗೊಳ್ಳಿರಿ, ಆದರೆ ಪಾಪಮಾಡಬೇಡಿರಿ.” ವಿನಾಶಕರ ಕೋಪೋದ್ರೇಕಕ್ಕೆ ಒಳಗಾಗದಂತೆ ಈ ಮಾತುಗಳು ನಿಮಗೆ ಸಹಾಯಮಾಡಬಲ್ಲವು.(g01 10/22)
[ಪಾದಟಿಪ್ಪಣಿಗಳು]
^ ಅನ್ಯಾಯಮಾಡುವಂಥ ಶಿಕ್ಷಕರು, ಶಾಲೆಯ ರೌಡಿಗಳು ಮತ್ತು ಕಿರುಕುಳ ಕೊಡುವವರೊಂದಿಗೆ ವ್ಯವಹರಿಸಲಿಕ್ಕಾಗಿರುವ ಪ್ರಾಯೋಗಿಕ ಬುದ್ಧಿವಾದಕ್ಕಾಗಿ, ಯುವ ಜನರ ಪ್ರಶ್ನೆಗಳು ಪುಸ್ತಕದ 19 ಮತ್ತು 20ನೆಯ ಅಧ್ಯಾಯಗಳನ್ನು ಹಾಗೂ ಎಚ್ಚರ! ಪತ್ರಿಕೆಯ ಡಿಸೆಂಬರ್ 8, 1990ರ ಸಂಚಿಕೆಯಲ್ಲಿ “ಯುವ ಜನರು ಪ್ರಶ್ನಿಸುವುದು . . . ” ಎಂಬ ಲೇಖನವನ್ನು ನೋಡಿರಿ.
^ ಮೇ 8, 1996ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯ ಸಂಚಿಕೆಯಲ್ಲಿ ಕಂಡುಬರುವ “ದತ್ತುಸ್ವೀಕಾರ—ಆನಂದ ಮತ್ತು ಪಂಥಾಹ್ವಾನಗಳು” ಎಂಬ ಮೇಲ್ವಿಷಯವಿರುವ ಲೇಖನಮಾಲೆಯನ್ನು ನೋಡಿರಿ.
[ಪುಟ 15ರಲ್ಲಿರುವ ಚಿತ್ರ]
ಹೆಚ್ಚಾಗಿ ಕೀಟಲೆಯನ್ನು ನಿಭಾಯಿಸುವ ಅತ್ಯುತ್ತಮ ವಿಧವು, ಸುಮ್ಮನೆ ಅದನ್ನು ಅಲಕ್ಷಿಸುವುದೇ ಆಗಿದೆ