ಅಪರಾಧಿ ಮನೋಭಾವವಿರುವುದು ಯಾವಾಗಲೂ ತಪ್ಪಾಗಿದೆಯೋ?
ಬೈಬಲಿನ ದೃಷ್ಟಿಕೋನ
ಅಪರಾಧಿ ಮನೋಭಾವವಿರುವುದು ಯಾವಾಗಲೂ ತಪ್ಪಾಗಿದೆಯೋ?
ಇಂದು ಅನೇಕ ಜನರು ಅಪರಾಧಿ ಮನೋಭಾವವನ್ನು ಅನಪೇಕ್ಷಣೀಯವಾಗಿ ಪರಿಗಣಿಸುತ್ತಾರೆ. ಅವರಿಗೆ ಜರ್ಮನ್ ತತ್ತ್ವಜ್ಞಾನಿಯಾದ ಫ್ರೀಡ್ರಿಕ್ ನೀಚನಿಗಿದ್ದಂತಹದ್ದೇ ಅನಿಸಿಕೆಯಿದೆ. ಅವನು ಹೇಳಿದ್ದು: “ಅಪರಾಧಿ ಮನೋಭಾವವು, ಇಷ್ಟರ ತನಕ ಮಾನವನಲ್ಲಿ ಪ್ರಬಲವಾಗಿ ಬೇರೂರಿರುವ ಅತ್ಯಂತ ಭೀಕರ ಅಸ್ವಸ್ಥತೆಯಾಗಿದೆ.”
ಆದರೆ ಈಗ ಕೆಲವು ಸಂಶೋಧಕರು ಬೇರೊಂದು ತೀರ್ಮಾನಕ್ಕೆ ಬರುತ್ತಿದ್ದಾರೆ. ಅಂತಾರಾಷ್ಟ್ರೀಯವಾಗಿ ಚಿಕಿತ್ಸಕರಾಗಿ ಮತ್ತು ಲೇಖಕಿಯಾಗಿ ಪ್ರಸಿದ್ಧಿಯನ್ನು ಹಾಗೂ ಪಿ.ಏಚ್.ಡಿ., ಪದವಿಯನ್ನು ಪಡೆದಿರುವ ಸೂಸನ್ ಫಾರ್‌ವರ್ಡ್ ಅವರು ಹೇಳುವುದು: “ಅಪರಾಧಿ ಮನೋಭಾವವು, ಒಬ್ಬ ಭಾವನಾತ್ಮಕ ಹಾಗೂ ಭರವಸಾರ್ಹ ವ್ಯಕ್ತಿಯಾಗಿರುವುದರ ಒಂದು ಅತ್ಯಗತ್ಯ ಭಾಗವಾಗಿದೆ. ಇದು ಮನಸ್ಸಾಕ್ಷಿಯ ಒಂದು ಸಾಧನವಾಗಿ ಕಾರ್ಯನಡಿಸುತ್ತದೆ.” ಆದುದರಿಂದ, ಎಲ್ಲ ರೀತಿಯ ಅಪರಾಧಿ ಅನಿಸಿಕೆಗಳು ತಪ್ಪಾಗಿವೆಯೋ? ಅಪರಾಧಿ ಮನೋಭಾವವು ಸಹಾಯಕರವಾಗಿರಬಹುದಾದ ಯಾವುದೇ ಸನ್ನಿವೇಶಗಳು ಇವೆಯೋ?
ಅಪರಾಧಿ ಮನೋಭಾವ ಎಂದರೇನು?
ನಾವು ಯಾರ ಬಗ್ಗೆ ಕಾಳಜಿ ವಹಿಸುತ್ತೇವೋ ಅಂಥ ಒಬ್ಬ ವ್ಯಕ್ತಿಗೆ ನಾವು ನೋವನ್ನುಂಟುಮಾಡಿದ್ದೇವೆ ಅಥವಾ ಯಾವ ಮಟ್ಟಗಳಿಗನುಸಾರ ಜೀವಿಸಬೇಕು ಎಂದು ನಾವು ನೆನಸುತ್ತೇವೋ ಅವುಗಳಿಗೆ ಅನುಸಾರವಾಗಿ ನಡೆಯಲು ತಪ್ಪಿಹೋಗಿದ್ದೇವೆ ಎಂಬುದು ನಮ್ಮ ಅರಿವಿಗೆ ಬಂದಾಗ, ಅಪರಾಧಿ ಮನೋಭಾವವು ಉಂಟಾಗುತ್ತದೆ. ಒಂದು ಪುಸ್ತಕವು ತಿಳಿಸುವಂತೆ, “ಒಂದು ಸೋಲು, ತಪ್ಪು, ಅಪರಾಧ ಅಥವಾ ಪಾಪಕ್ಕಾಗಿರುವ ಒಬ್ಬ ವ್ಯಕ್ತಿಯ ದಂಡಾರ್ಹತೆಯ ಕಾರಣದಿಂದ ಉಂಟಾಗುವ” ಅಪರಾಧಿ ಮನೋಭಾವವು “ಕೃತಜ್ಞತಾಭಾವಕ್ಕೆ” ಸಂಬಂಧಿಸಿದ್ದಾಗಿದೆ.
ಹೀಬ್ರು ಶಾಸ್ತ್ರಗಳಲ್ಲಿ, ಇಸ್ರಾಯೇಲ್ಯರು ದೇವರ ಧರ್ಮಶಾಸ್ತ್ರಕ್ಕನುಸಾರ ಜೀವಿಸಲು ತಪ್ಪಿಹೋದದ್ದರೊಂದಿಗೆ ಅಪರಾಧಿ ಮನೋಭಾವವು ಸಂಬಂಧಿಸಿತ್ತು. ಮತ್ತು ಅಪರಾಧಿ ಮನೋಭಾವಕ್ಕೆ ಸೂಚಿಸುವಂಥ ಅಧಿಕಾಂಶ ಉಲ್ಲೇಖಗಳು ಬೈಬಲಿನ ಯಾಜಕಕಾಂಡ ಮತ್ತು ಅರಣ್ಯಕಾಂಡ ಪುಸ್ತಕಗಳಲ್ಲಿವೆ. ಆದರೆ ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ, ಅಪರಾಧಿ ಮನೋಭಾವದ ಕುರಿತಾದ ವಿಚಾರವು ತದ್ರೀತಿಯಲ್ಲಿ ದೇವರ ವಿರುದ್ಧ ಮಾಡಲ್ಪಡುವ ಗಂಭೀರವಾದ ತಪ್ಪುಗಳಿಗೆ ಸಂಬಂಧಿಸಿದ್ದಾಗಿದೆ.—ಮಾರ್ಕ 3:29; 1 ಕೊರಿಂಥ 11:27.
ಅಸಂತೋಷಕರವಾಗಿ, ಅಪರಾಧಿ ಮನೋಭಾವವು ಉಂಟಾಗಲು ಯಾವುದೇ ವಾಸ್ತವಿಕ ಕಾರಣವಿಲ್ಲದಿದ್ದರೂ ನಮಗೆ ಅಪರಾಧಿ ಮನೋಭಾವವು ಉಂಟಾಗುವ ಸಾಧ್ಯತೆಯಿದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಪರಿಪೂರ್ಣತಾವಾದಿಯಾಗಿರುವಲ್ಲಿ ಮತ್ತು ತನಗಾಗಿ ಅನುಚಿತ ಮಟ್ಟಗಳನ್ನು ಇಟ್ಟುಕೊಳ್ಳುವ ಪ್ರವೃತ್ತಿಯವನಾಗಿರುವಲ್ಲಿ, ಅವನು ಎದುರಿಸುವ ಪ್ರತಿಯೊಂದು ನಿರಾಶೆಯು ಅನರ್ಹ ಅಪರಾಧಿ ಮನೋಭಾವವನ್ನು ಅವನಲ್ಲಿ ಉಂಟುಮಾಡಬಹುದು. (ಪ್ರಸಂಗಿ 7:16) ಅಥವಾ ಒಂದು ತಪ್ಪಿನ ಕುರಿತಾದ ನ್ಯಾಯಸಮ್ಮತ ಪಶ್ಚಾತ್ತಾಪವು ನಾಚಿಕೆಯ ಅನಿಸಿಕೆಯಾಗಿ ತೀವ್ರಗೊಳ್ಳುವಂತೆ ನಾವು ಅನುಮತಿಸಬಹುದು ಮತ್ತು ಕೊನೆಗೆ ನಮ್ಮನ್ನು ನಾವೇ ಅನಗತ್ಯವಾಗಿ ಶಿಕ್ಷೆಗೊಳಪಡಿಸಿಕೊಳ್ಳಬಹುದು. ಹಾಗಾದರೆ, ಅಪರಾಧಿ ಮನೋಭಾವವು ಯಾವ ರೀತಿಯ ಒಳಿತನ್ನು ಸಾಧಿಸಬಲ್ಲದು?
ಅಪರಾಧಿ ಮನೋಭಾವವು ಒಳ್ಳೇದನ್ನು ಮಾಡಬಲ್ಲದು
ಅಪರಾಧಿ ಮನೋಭಾವವುಂಟಾಗುವುದು, ಕಡಿಮೆಪಕ್ಷ ಮೂರು ವಿಧಗಳಲ್ಲಿ ಒಳ್ಳೇದನ್ನು ಮಾಡಬಲ್ಲದು. ಮೊದಲನೆಯದಾಗಿ, ಅಂಗೀಕೃತ ಮಟ್ಟಗಳ ಅರಿವು ನಮಗಿದೆ ಎಂಬುದನ್ನು ಅದು ತಿಳಿಯಪಡಿಸಬಲ್ಲದು. ನಮ್ಮ ಮನಸ್ಸಾಕ್ಷಿಯು ಕಾರ್ಯನಡಿಸುತ್ತಿದೆ ಎಂಬುದನ್ನು ಅದು ತೋರಿಸುತ್ತದೆ. (ರೋಮಾಪುರ 2:15) ವಾಸ್ತವದಲ್ಲಿ, ಅಮೆರಿಕನ್ ಸೈಕೈಆ್ಯಟ್ರಿಕ್ ಅಸೋಸಿಯೇಷನ್‌ನಿಂದ ಪ್ರಕಾಶಿಸಲ್ಪಟ್ಟ ಒಂದು ಪುಸ್ತಕವು, ಅಪರಾಧಿ ಮನೋಭಾವದ ಕೊರತೆಯನ್ನು ಸಮಾಜಕ್ಕೆ ಬೆದರಿಕೆಯನ್ನೊಡ್ಡುವಂಥ ಒಂದು ವರ್ತನೆಯಾಗಿ ಪರಿಗಣಿಸುತ್ತದೆ. ಭ್ರಷ್ಟಗೊಂಡಿರುವ ಅಥವಾ ಜಡವಾಗಿರುವ ಮನಸ್ಸಾಕ್ಷಿಯನ್ನು ಹೊಂದಿರುವವರಿಗೆ, ಒಳ್ಳೇದು ಮತ್ತು ಕೆಟ್ಟದ್ದರ ನಡುವಣ ಭಿನ್ನತೆಯನ್ನು ಅರ್ಥಮಾಡಿಕೊಳ್ಳುವುದು ತುಂಬ ಕಷ್ಟಕರವಾಗಿರುತ್ತದೆ, ಮತ್ತು ಇದು ಅಪಾಯಕರವಾಗಿರಸಾಧ್ಯವಿದೆ.—ತೀತ 1:15, 16.
ಎರಡನೆಯದಾಗಿ, ನಾವು ಅನಪೇಕ್ಷಿತ ಕೃತ್ಯಗಳನ್ನು ದೂರಮಾಡಲು ಅಪರಾಧಿ ಮನೋಭಾವವು ನಮಗೆ ಸಹಾಯಮಾಡಬಲ್ಲದು. ಶಾರೀರಿಕ ನೋವು ಸಂಭಾವ್ಯ ಆರೋಗ್ಯ ಸಮಸ್ಯೆಯ ಕುರಿತು ನಮಗೆ ಎಚ್ಚರಿಕೆ ನೀಡುವಂತೆಯೇ, ಅಪರಾಧಿ ಮನೋಭಾವದೊಂದಿಗೆ ಸಂಬಂಧಿಸಿದ ಭಾವನಾತ್ಮಕ ನೋವು, ನಮ್ಮ ಗಮನವನ್ನು ಕೇಳಿಕೊಳ್ಳುವಂಥ ಒಂದು ನೈತಿಕ ಅಥವಾ ಆತ್ಮಿಕ ಸಮಸ್ಯೆಯ ಕುರಿತು ನಮಗೆ ಎಚ್ಚರಿಕೆ ನೀಡುತ್ತದೆ. ನಮಗೆ ನಮ್ಮ ದೌರ್ಬಲ್ಯದ ಅರಿವಿರುವಾಗ, ಸ್ವತಃ ನಮಗೆ, ನಮ್ಮ ಪ್ರಿಯ ಜನರಿಗೆ, ಅಥವಾ ಇನ್ನಿತರರಿಗೆ ಮುಂದೆ ಎಂದೂ ಪುನಃ ನೋವನ್ನುಂಟುಮಾಡದಂತೆ ನಾವು ತುಂಬ ಜಾಗ್ರತೆ ವಹಿಸುವೆವು.—ಮತ್ತಾಯ 7:12.
ಮೂರನೆಯದಾಗಿ, ಅಪರಾಧವನ್ನು ನಿವೇದಿಸಿಕೊಳ್ಳುವುದರಿಂದ ಅಪರಾಧಿಗೆ ಮತ್ತು ಅಪರಾಧಕ್ಕೆ ಗುರಿಯಾಗಿರುವವರಿಬ್ಬರಿಗೂ ಒಳಿತಾಗಸಾಧ್ಯವಿದೆ. ಉದಾಹರಣೆಗೆ, ರಾಜ ದಾವೀದನ ಅಪರಾಧಿ ಮನೋಭಾವವು ತೀವ್ರವಾದ ಭಾವನಾತ್ಮಕ ವೇದನೆಯನ್ನು ಒಳಗೊಂಡಿತ್ತು. “ನಾನು [ನನ್ನ ಪಾಪವನ್ನು] ಅರಿಕೆಮಾಡದೆ ಇದ್ದಾಗ ದಿನವೆಲ್ಲಾ ನರಳುವದರಿಂದ ನನ್ನ ಎಲುಬುಗಳು ಸವೆದುಹೋಗುತ್ತಿದ್ದವು” ಎಂದು ಅವನು ಬರೆದನು. ಆದರೆ ಕೊನೆಗೆ ದಾವೀದನು ತನ್ನ ಪಾಪವನ್ನು ದೇವರಿಗೆ ನಿವೇದಿಸಿಕೊಂಡಾಗ, ಅವನು ಹರ್ಷಚಿತ್ತನಾಗಿ ಹೀಗೆ ಹಾಡಿದನು: “ವಿಮೋಚನಧ್ವನಿಯಿಂದ ನನ್ನನ್ನು ಆವರಿಸಿಕೊಳ್ಳುತ್ತೀ.” (ಕೀರ್ತನೆ 32:3, 7) ಅಪರಾಧವನ್ನು ನಿವೇದಿಸಿಕೊಳ್ಳುವುದು ಅಪರಾಧಕ್ಕೆ ಗುರಿಯಾಗಿರುವ ವ್ಯಕ್ತಿಗೂ ಉತ್ತಮ ಅನಿಸಿಕೆಯನ್ನು ಉಂಟುಮಾಡುವುದು. ಏಕೆಂದರೆ ಅಪರಾಧವನ್ನು ಒಪ್ಪಿಕೊಳ್ಳುವುದು, ಇಷ್ಟೊಂದು ನೋವನ್ನು ಉಂಟುಮಾಡಿರುವುದಕ್ಕಾಗಿ ವಿಷಾದಿಸುವಷ್ಟರ ಮಟ್ಟಿಗೆ ಇನ್ನೊಬ್ಬ ವ್ಯಕ್ತಿಯು ಅವನನ್ನು ಅಥವಾ ಅವಳನ್ನು ಪ್ರೀತಿಸುತ್ತಾನೆ ಎಂಬ ಆಶ್ವಾಸನೆಯನ್ನು ಅಪರಾಧಕ್ಕೆ ಗುರಿಯಾಗಿರುವ ವ್ಯಕ್ತಿಗೆ ನೀಡುವುದು.—2 ಸಮುವೇಲ 11:2-15.
ಅಪರಾಧಿ ಮನೋಭಾವದ ಕುರಿತಾದ ಸಮತೂಕ ನೋಟ
ಅಪರಾಧಿ ಮನೋಭಾವದ ಕುರಿತು ಸಮತೂಕ ನೋಟವನ್ನು ಪಡೆದುಕೊಳ್ಳಲಿಕ್ಕಾಗಿ, ಪಾಪಿಗಳು ಮತ್ತು ಪಾಪವನ್ನು ಪರಿಗಣಿಸುವ ವಿಷಯದಲ್ಲಿ ಯೇಸುವಿಗೂ ಫರಿಸಾಯರಿಗೂ ಇದ್ದ ತೀರ ವ್ಯತಿರಿಕ್ತ ದೃಷ್ಟಿಕೋನವನ್ನು ಗಮನಿಸಿರಿ. ಲೂಕ 7:36-50ರಲ್ಲಿ, ಯೇಸು ಎಲ್ಲಿ ಊಟಮಾಡುತ್ತಾ ಇದ್ದನೋ ಆ ಫರಿಸಾಯನ ಮನೆಯನ್ನು ಪ್ರವೇಶಿಸಿದ ಒಬ್ಬ ಅನೈತಿಕ ಸ್ತ್ರೀಯ ಕುರಿತು ನಾವು ಓದುತ್ತೇವೆ. ಅವಳು ಯೇಸುವನ್ನು ಸಮೀಪಿಸಿ, ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ತೊಳೆದು, ತುಂಬ ದುಬಾರಿಯಾದ ತೈಲವನ್ನು ಅವುಗಳಿಗೆ ಹಚ್ಚಿದಳು.
ಧರ್ಮಶ್ರದ್ಧೆಯುಳ್ಳ ಫರಿಸಾಯನು ಈ ಸ್ತ್ರೀಯನ್ನು, ತನ್ನ ಸಮಯ ಹಾಗೂ ಗಮನಕ್ಕೆ ಅನರ್ಹಳಾದ ವ್ಯಕ್ತಿಯಾಗಿ ಪರಿಗಣಿಸಿದನು. ಅವನು ಹೀಗೆ ಅಂದುಕೊಂಡನು: “ಇವಳು ದುರಾಚಾರಿ; ಇವನು [ಯೇಸು] ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟಿದ ಈ ಹೆಂಗಸು ಇಂಥವಳೆಂದು ತಿಳುಕೊಳ್ಳುತ್ತಿದ್ದನು.” (ಲೂಕ 7:39) ಆ ಕೂಡಲೆ ಯೇಸು ಅವನ ಆಲೋಚನೆಯನ್ನು ಸರಿಪಡಿಸಿದನು. ಯೇಸು ಹೇಳಿದ್ದು: “ನೀನು ನನ್ನ ತಲೆಗೆ ಎಣ್ಣೆ ಹಚ್ಚಲಿಲ್ಲ; ಇವಳಾದರೋ ಸುಗಂಧ ತೈಲವನ್ನು ಕಾಲಿಗೆ ಹಚ್ಚಿದಳು. ಹೀಗಿರಲು ನಾನು ಹೇಳುವ ಮಾತೇನಂದರೆ—ಇವಳ ಪಾಪಗಳು ಬಹಳವಾಗಿದ್ದರೂ ಅವು ಕ್ಷಮಿಸಲ್ಪಟ್ಟಿವೆ. ಇದಕ್ಕೆ ಪ್ರಮಾಣವೇನಂದರೆ ಇವಳು ತೋರಿಸಿದ ಪ್ರೀತಿ ಬಹಳ.” ಇಂತಹ ಮಾತುಗಳು ಆ ಸ್ತ್ರೀಯನ್ನು ತುಂಬ ಉತ್ತೇಜಿಸಿದವು ಮತ್ತು ಅವಳ ಹೃದಯವನ್ನು ಹಗುರಗೊಳಿಸಿದವು ಎಂಬುದರಲ್ಲಿ ಸಂದೇಹವಿಲ್ಲ.—ಲೂಕ 7:46, 47.
ಯಾವ ರೀತಿಯಲ್ಲಿಯೂ ಯೇಸು ಅನೈತಿಕತೆಯನ್ನು ಮನ್ನಿಸುತ್ತಿರಲಿಲ್ಲ. ಅದಕ್ಕೆ ಬದಲಾಗಿ, ಪ್ರೀತಿಯ ಉತ್ಕೃಷ್ಟತೆಯೇ ದೇವರ ಸೇವೆಮಾಡುವುದಕ್ಕೆ ಒಂದು ಪ್ರಚೋದನೆಯಾಗಿದೆ ಎಂಬುದನ್ನು ಅವನು ಜಂಬವಿದ್ದ ಆ ಫರಿಸಾಯನಿಗೆ ಕಲಿಸುತ್ತಿದ್ದನು. (ಮತ್ತಾಯ 22:36-40) ಆ ಸ್ತ್ರೀಯು ತನ್ನ ಗತ ಅನೈತಿಕ ಜೀವನಕ್ಕಾಗಿ ಅಪರಾಧಿ ಮನೋಭಾವವನ್ನು ತೋರಿಸಿದ್ದು ಸೂಕ್ತವಾದದ್ದಾಗಿತ್ತು. ಅವಳು ಪಶ್ಚಾತ್ತಾಪವನ್ನು ತೋರಿಸಿದಳು ಎಂಬುದು ಸುವ್ಯಕ್ತ, ಏಕೆಂದರೆ ಅವಳು ತುಂಬ ಅತ್ತಳು, ತನ್ನ ಹಿಂದಿನ ನಡತೆಯನ್ನು ಸರಿಯೆಂದು ಸಮರ್ಥಿಸಲು ಅವಳು ಪ್ರಯತ್ನಿಸಲಿಲ್ಲ, ಮತ್ತು ಎಲ್ಲರ ಮುಂದೆ ಯೇಸುವನ್ನು ಗೌರವಿಸಲು ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಂಡಳು. ಇದನ್ನು ನೋಡಿ ಯೇಸು ಅವಳಿಗೆ ಹೇಳಿದ್ದು: “ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿ ಅದೆ; ಸಮಾಧಾನದಿಂದ ಹೋಗು.”—ಲೂಕ 7:50.
ಇನ್ನೊಂದು ಕಡೆಯಲ್ಲಿ, ಆ ಫರಿಸಾಯನು ಅವಳನ್ನು ಒಬ್ಬ ಪಾಪಿಯೋಪಾದಿ ನಿಕೃಷ್ಟವಾಗಿ ಕಾಣುವುದನ್ನು ಮುಂದುವರಿಸಿದನು. ಬಹುಶಃ ಅವನು ಅವಳು ತನ್ನ ಪಾಪಗಳಿಗಾಗಿ ದೇವರಿಗೆ ಲೆಕ್ಕವೊಪ್ಪಿಸಬೇಕು ಎಂಬ ಭಯವನ್ನು ಅವಳಲ್ಲಿ ಉಂಟುಮಾಡಲು ಮತ್ತು ಅವಳನ್ನು ನಾಚಿಕೆಗೀಡುಮಾಡಲು ಬಯಸಿದ್ದಿರಬೇಕು. ಆದರೆ ಇತರರು ಮಾಡಬೇಕೆಂದು ನಾವು ಬಯಸುವಂತಹ ರೀತಿಯಲ್ಲಿ ಅವರು ಯಾವಾಗಲೂ ವಿಷಯಗಳನ್ನು ಮಾಡದಿರುವಾಗ, ಅವರು ಅಪರಾಧಿ ಭಾವವನ್ನು ಅನುಭವಿಸುವಂತೆ ಮಾಡಲು ನಾವು ಸತತವಾಗಿ ಪ್ರಯತ್ನಿಸುವಲ್ಲಿ, ಇದು ತುಂಬ ಪ್ರೀತಿರಹಿತವಾದದ್ದಾಗಿರುವುದು ಮತ್ತು ಕಾಲಕ್ರಮೇಣ ಇದು ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಬಹುದು. (2 ಕೊರಿಂಥ 9:7) ಯೋಗ್ಯವಾದ ಮಾದರಿಯನ್ನು ಇಡುವ ಮೂಲಕ, ಇತರರನ್ನು ಪ್ರಾಮಾಣಿಕವಾಗಿ ಪ್ರಶಂಸಿಸುವ ಮೂಲಕ, ಮತ್ತು ಕೆಲವೊಮ್ಮೆ ತಿದ್ದುಪಾಟು ಹಾಗೂ ಸಲಹೆಯನ್ನು ಕೊಡುವ ಅಗತ್ಯವಿರುವುದಾದರೂ ಅವರಲ್ಲಿ ದೃಢಭರವಸೆಯನ್ನು ವ್ಯಕ್ತಪಡಿಸುವ ಮೂಲಕ, ಯೇಸುವನ್ನು ಅನುಕರಿಸುವುದರಿಂದ ಅತ್ಯುತ್ತಮ ಫಲಿತಾಂಶಗಳು ದೊರಕುವವು.—ಮತ್ತಾಯ 11:28-30; ರೋಮಾಪುರ 12:10; ಎಫೆಸ 4:29.
ಆದುದರಿಂದ, ಅಪರಾಧಿ ಮನೋಭಾವವು ಒಳ್ಳೇದಾಗಿರಸಾಧ್ಯವಿದೆ ಮತ್ತು ನಾವು ಏನಾದರೂ ತಪ್ಪು ಮಾಡಿರುವಲ್ಲಿ ಅದು ಅಗತ್ಯವಾದದ್ದಾಗಿದೆ. ಜ್ಞಾನೋಕ್ತಿ 14:9 (NW) ಹೇಳುವುದು: “ಮೂಢರು ದೋಷಪರಿಹಾರವನ್ನು ಅಗತ್ಯಪಡಿಸುವ ಅಪರಾಧವನ್ನು ಹಗುರವಾಗಿ ಪರಿಗಣಿಸುತ್ತಾರೆ.” ಒಂದು ಅಪರಾಧಿ ಮನೋಭಾವವು ನಮ್ಮನ್ನು ಪಾಪವನ್ನು ನಿವೇದಿಸಿಕೊಳ್ಳುವಂತೆ ಮತ್ತು ಅಗತ್ಯವಿರುವ ಕ್ರಿಯೆಯನ್ನು ಕೈಕೊಳ್ಳುವಂತೆ ಪ್ರಚೋದಿಸಬಲ್ಲದು ಮತ್ತು ಪ್ರಚೋದಿಸತಕ್ಕದ್ದು. ಆದರೂ, ಯೆಹೋವನ ಸೇವೆಮಾಡುವುದಕ್ಕಾಗಿರುವ ನಮ್ಮ ಮೂಲಭೂತ ಕಾರಣವು ಯಾವಾಗಲೂ ಪ್ರೀತಿಯಾಗಿರಬೇಕು, ಅಪರಾಧಿ ಮನೋಭಾವವಲ್ಲ. (ಯೋಬ 1:9-11; 2:4, 5) ಇದನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ ಒಳ್ಳೇ ಜನರು ಉತ್ತೇಜನವನ್ನು ಮತ್ತು ಚೈತನ್ಯವನ್ನು ಪಡೆದುಕೊಳ್ಳುವಾಗ, ಅವರು ತಮ್ಮಿಂದಾದುದೆಲ್ಲವನ್ನೂ ಮಾಡುತ್ತಾರೆ ಎಂದು ಬೈಬಲ್ ನಮಗೆ ಆಶ್ವಾಸನೆ ನೀಡುತ್ತದೆ. ಹೆಚ್ಚು ಪ್ರಾಮುಖ್ಯವಾಗಿ, ಹೀಗೆ ಮಾಡುತ್ತಾ ಇರುವುದರಲ್ಲಿ ಅವರು ಸಂತೋಷವನ್ನು ಪಡೆದುಕೊಳ್ಳುವರು.(g02 3/8)