ಗಾಳಿಯ ಜೊತೆ ಜೊತೆ
ಗಾಳಿಯ ಜೊತೆ ಜೊತೆ
ಕೆನಡದಲ್ಲಿರುವ ಎಚ್ಚರ! ಲೇಖಕರಿಂದ
“ಬೇಗನೆ ನನಗೆ ಒಂದಿಷ್ಟು ಟಫೆಟ ಬಟ್ಟೆ ಮತ್ತು ಹಗ್ಗವನ್ನು ಕೊಡು. ಜಗತ್ತನ್ನೇ ದಂಗುಬಡಿಸುವಂಥದ್ದೇನನ್ನೊ ನಿನಗೆ ತೋರಿಸುವೆ!”—ಜೋಸೆಫ್-ಮಿಶೆಲ್ ಮಾಂಟ್‌ಗಾಲ್ಫಿಯರ್, 1782.
ವೂಶ್! ಬೆಂಕಿಯ ಒಂದು ಜ್ವಾಲೆಯು ಮೇಲಕ್ಕೆ ಒಂದು ರಂಗುರಂಗಿನ ಗೂಡಿನೊಳಗೆ ಚಿಮ್ಮುತ್ತಾ, ಅದು ಮೆಲ್ಲನೆ ಆಕಾಶದತ್ತ ಏರುವಂತೆ ಮಾಡುತ್ತದೆ. ಒಂದು ಸುಂದರವಾದ, ಕಾಮನಬಿಲ್ಲಿನ ರಂಗುಗಳ ಬಟ್ಟೆಯ ಗುಳ್ಳೆಯಲ್ಲಿ ಎತ್ತರದಲ್ಲಿ ತೇಲುವುದು ನಿಮ್ಮನ್ನು ಉಲ್ಲಾಸಗೊಳಿಸುವುದು ಮಾತ್ರವಲ್ಲ, ದೈನಂದಿನ ತರಾತುರಿಯ ಜೀವನಗತಿಯಿಂದ ನೆಮ್ಮದಿಯನ್ನೂ ಕೊಡುತ್ತದೆ. “ಅದು ಪ್ರಶಾಂತವೂ, ರೋಮಾಂಚಕಾರಿಯೂ” ಆಗಿದೆ ಎಂದು ಒಬ್ಬ ದೀರ್ಘಕಾಲೀನ ಬಿಸಿಗಾಳಿ ಬಲೂನ್ ಉತ್ಸಾಹಿಯು ಹೇಳಿದನು.
ಜೋಸೆಫ್-ಮಿಶೆಲ್ ಮತ್ತು ಜಾಕ್ ಏಟ್ಯೇನ್ ಮಾಂಟ್‌ಗಾಲ್ಫಿಯರ್‌ರವರು, 1780ಗಳ ಆರಂಭದಲ್ಲಿ ಮಾಡಿದ ಪ್ರಥಮ ಯಶಸ್ವೀ ಬಲೂನ್ ಉಡ್ಡಯನದಿಂದ ಹಿಡಿದು ಇಂದಿನ ವರೆಗೂ, ಬಲೂನು ಹಾರಾಟವು ಮನುಷ್ಯನನ್ನು ಮೋಹಗೊಳಿಸಿದೆ. (ಕೆಳಗಿರುವ ರೇಖಾಚೌಕವನ್ನು ನೋಡಿರಿ.) ಆದರೆ ಬಲೂನು ಹಾರಾಟವು ನಿಜವಾಗಿಯೂ ಎತ್ತರಕ್ಕೇರಿದ್ದು 1960ಗಳ ದಶಕದಂದಿನಿಂದಲೇ. ಏಕೆಂದರೆ ಆಗ ಬೆಂಕಿ ವಿಲಂಬಕ ಬಟ್ಟೆಯ ಜೊತೆಯಲ್ಲಿ ಆಕಾಶಬುಟ್ಟಿಯೊಳಗೆ ಗಾಳಿಯ ತಾಪಮಾನವನ್ನು ಬಿಸಿಮಾಡಿ ನಿಯಂತ್ರಿಸಲಿಕ್ಕಾಗಿ ಉಪಯೋಗಿಸಲ್ಪಡುವ ದಹನಯೋಗ್ಯ ಪ್ರೋಪೇನ್ ಗ್ಯಾಸ್‌ನ ಸುರಕ್ಷಿತ ಹಾಗೂ ಅಗ್ಗವಾದ ವ್ಯವಸ್ಥೆಯನ್ನು ಪರಿಚಯಿಸಲಾಯಿತು.
ಹತ್ತಿರದ ನೋಟ
ಒಂದು ಸುಂದರವಾದ ಬಲೂನನ್ನು ಹತ್ತಿರದಿಂದ ನೋಡುವಾಗ, ಬಣ್ಣಬಣ್ಣದ ಬಟ್ಟೆ ಸಾಮಗ್ರಿಯು ಭದ್ರವಾಗಿ ಜೋಡಿಸಲ್ಪಟ್ಟು, ಮೇಲಿನಿಂದ ಕೆಳತುದಿಯ ಕಡೆಗೆ ಹೋಗುತ್ತಾ ಅಗಲಕಿರಿದಾಗುವುದನ್ನು ನಾವು ಕಾಣುತ್ತೇವೆ. ಕೆಲವು ಬಲೂನುಗಳಲ್ಲಿ ಗಾಳಿಯನ್ನು ತುಂಬುವಾಗ, ಅವು 15 ಮೀಟರ್ ಅಗಲ ಮತ್ತು 25ಕ್ಕಿಂತಲೂ ಹೆಚ್ಚು ಮೀಟರ್ ಎತ್ತರವಾಗಿ ಉಬ್ಬುತ್ತವೆ.
ಕಲ್ಪನಾಶಕ್ತಿಯುಳ್ಳ ಹಾರಾಟಗಾರರು ತಮ್ಮ ವೈಯಕ್ತಿಕ ವೈಲಕ್ಷಣಗಳನ್ನು ವ್ಯಕ್ತಪಡಿಸುತ್ತಾ, ತಮ್ಮ ಸ್ವಂತ ಆಕಾರ ಮತ್ತು ಗಾತ್ರಗಳ ಬಲೂನುಗಳನ್ನು ರೂಪಿಸುತ್ತಾರೆ. ಇವು ಪ್ರಾಣಿಗಳಿಂದ ಹಿಡಿದು, ಬಾಟಲಿಗಳು ಮತ್ತು ವಿದೂಷಕರ ಆಕಾರಗಳಲ್ಲೂ ಇರುತ್ತವೆ. ಅವುಗಳ ವಿನ್ಯಾಸವು ಏನೇ ಆಗಿರಲಿ, ಗಗನದ ಈ ಮೌನ ಹಾರುಗರ ಹಾರಾಟ ಸೂತ್ರಗಳು ಒಂದೇ ಆಗಿರುತ್ತವೆ.
ಪೈಲಟ್ ಮತ್ತು ಪ್ರಯಾಣಿಕರು, ಹಗುರವಾದ ಆದರೆ ಗಟ್ಟಿಮುಟ್ಟಾದ ಜೊಂಡಿನ ತೂಗುದೊಟ್ಟಿಲಿನಲ್ಲಿ ಅಥವಾ ಬುಟ್ಟಿಯಲ್ಲಿ ಜೊತೆಯಾಗಿರುತ್ತಾರೆ. ಈ ತೂಗುದೊಟ್ಟಿಲು, ಕೇಬಲ್‌ಗಳ ಸಹಾಯದಿಂದ ಬಲೂನಿಗೆ ಜೋಡಿಸಲ್ಪಟ್ಟಿರುತ್ತದೆ ಮತ್ತು ನೇರವಾಗಿ ಬಲೂನಿನ ಬಾಯಿಯ ಕೆಳಗಿರುತ್ತದೆ. ಕೆಲವು ಬುಟ್ಟಿಗಳನ್ನು ಆಲ್ಯೂಮಿನಿಯಮ್‌ನಿಂದ ತಯಾರಿಸಲಾಗುತ್ತದೆ. ಈಗ ಪುನಃ ತೂಗುದೊಟ್ಟಿಲಿನ ಮೇಲಕ್ಕೆ ನೋಡಿರಿ. ಅಲ್ಲಿ ಇಂಧನವನ್ನು ಸುಡುವ ಯಂತ್ರ ಮತ್ತು ನಿಯಂತ್ರಿಸುವ ಒಂದು ಯಂತ್ರವು ಬಲೂನಿನ
ಬಾಯಿಯಿಂದ ಸ್ವಲ್ಪ ಕೆಳಕ್ಕೆ ಒಂದು ಲೋಹದ ದಿಬ್ಬಕ್ಕೆ ಜೋಡಿಸಲ್ಪಟ್ಟಿರುವುದನ್ನು ನೀವು ನೋಡುವಿರಿ. ಇಂಧನದ ಟಾಂಕಿಗಳು ಬುಟ್ಟಿಯೊಳಗಿರುತ್ತವೆ.ಮೇಲೇರಲು ಸಿದ್ಧರಾಗಿ
ಒಂದು ವಿಮಾನವು ನೆಲಬಿಟ್ಟು ಆಕಾಶಕ್ಕೆ ಹಾರಬೇಕಾದರೆ ಉದ್ದವಾದ ರನ್‌ವೇ ಬೇಕಾಗುತ್ತದೆ. ಆದರೆ ಒಂದು ಬಿಸಿಗಾಳಿಯ ಬಲೂನಿಗೆ ಒಂದು ಚಿಕ್ಕ ಹೊಲದಷ್ಟು ದೊಡ್ಡದಾದ ಬಯಲು ಇದ್ದರೆ ಸಾಕು. ಆದರೆ ಮೇಲೆ ಯಾವುದೇ ಅಡಚಣೆಗಳಿಲ್ಲದಿರುವ ಸ್ಥಳವನ್ನು ಹುಡುಕುವುದು ತುಂಬ ಪ್ರಾಮುಖ್ಯ. ಈ ಮೌನ ವಾಯುನೌಕೆಯಲ್ಲಿ ಪ್ರಯಾಣಿಸಲು ತವಕಿಸುತ್ತಿದ್ದೀರೊ? ನೀವು ತೂಗುದೊಟ್ಟಿಲೊಳಗೆ ಕಾಲಿಡುವ ಮುಂಚೆಯೂ, ಕೆಲವು ಪೂರ್ವಸಿದ್ಧತೆಗಳನ್ನು ಮಾಡಬೇಕಾಗಿದೆ.
ಮೊದಲು, ಗಾಳಿಯಿಲ್ಲದ ಬಲೂನನ್ನು ತೂಗುದೊಟ್ಟಿಲಿನಿಂದ ಗಾಳಿಬೀಸುವ ದಿಕ್ಕಿನಲ್ಲಿ ನೆಲದ ಮೇಲೆ ಹರಡಿಸಲಾಗುತ್ತದೆ. ತದನಂತರ ಮೋಟಾರು ಜೋಡಿಸಲ್ಪಟ್ಟಿರುವ ಒಂದು ದೊಡ್ಡ ಫ್ಯಾನನ್ನು ಉಪಯೋಗಿಸಿ ಬಲೂನಿನ ಬಾಯೊಳಗೆ ಗಾಳಿಯನ್ನು ಊದಲಾಗುತ್ತದೆ. ತದನಂತರ, ಬಲೂನ್ ಸ್ವಲ್ಪ ಏರಿ, ತೂಗುದೊಟ್ಟಿಲನ್ನು ನೇರವಾಗಿ ನಿಲ್ಲಿಸುವಂತೆ ಎತ್ತಲಿಕ್ಕಾಗಿ, ಕಾವೇರಿರುವ ಗಾಳಿಯನ್ನು ಬಲೂನಿನೊಳಗೆ ಊದಲಾಗುತ್ತದೆ. ಅನಂತರ, ಇಂಧನದ ಜೋಡಿಸುವಿಕೆಗಳನ್ನು ಸೇರಿಸಿ, ಎಲ್ಲ ಸಲಕರಣೆ ಯಥಾ ಸ್ಥಾನದಲ್ಲಿವೆಯೊ ಎಂದು ಕೊನೆಯ ಬಾರಿ ಪರೀಕ್ಷಿಸಲಾಗುತ್ತದೆ. ಅಷ್ಟುಮಾತ್ರವಲ್ಲದೆ, ಹೊಗೆಕೊಳವೆ ಹಾಗೂ ವಾಯುಹರಣ ನಿಯಂತ್ರಣದ ಹಗ್ಗಗಳು ತೂಗುದೊಟ್ಟಿಲಿನೊಳಗೆ ಕೆಳಮುಖವಾಗಿ ತೂಗುತ್ತಿವೆಯೊ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಈಗ, ಪೈಲಟನು ಪ್ರಯಾಣಿಕರನ್ನು ಒಳಸೇರಿಸಿ, ಮೇಲೇರಲು ಸಿದ್ಧನಾಗಿದ್ದಾನೆ. ಕೆಲವು ಬಲೂನ್ ಹಾರಾಟಗಾರರು ರೇಡಿಯೊ ಸಲಕರಣೆಯನ್ನು ಒಯ್ಯುತ್ತಾರೆ, ಮತ್ತು ಬಲೂನು ಕೆಳಗಿಳಿಯುವಾಗ, ಬಲೂನನ್ನೂ ಪ್ರಯಾಣಿಕರನ್ನೂ ತರಲಿಕ್ಕಾಗಿ ಬಲೂನನ್ನೇ ಹಿಂಬಾಲಿಸಿ ಬರುತ್ತಿರುವ ವಾಹನದಲ್ಲಿರುವ ನೆಲದ ಮೇಲಿನ ಸಿಬ್ಬಂದಿಯೊಂದಿಗೆ ಆಗಾಗ ಸಂಪರ್ಕ ಮಾಡುತ್ತಿರುತ್ತಾರೆ.
ಗಾಳಿಯ ಜೊತೆ ಜೊತೆ
ಹೆಚ್ಚಿನ ಬಲೂನ್ ಹಾರಾಟಗಾರರು, ಸುಮಾರು 100 ಮೀಟರ್‌ಗಳಷ್ಟು ಎತ್ತರದಲ್ಲಿ ಹಾರಲು ಇಷ್ಟಪಡುತ್ತಾರೆ. ಆಗ ಅವರು ಶಾಂತವಾಗಿ
ಹಳ್ಳಿಗಾಡುಗಳ ಮೇಲಿಂದ ತೇಲಿಕೊಂಡುಹೋಗಬಹುದು ಮತ್ತು ಅದೇ ಸಮಯದಲ್ಲಿ ಕೆಳಗೆ ಏನೆಲ್ಲ ನಡೆಯುತ್ತಿದೆಯೊ ಅದನ್ನೂ ನೋಡಬಹುದು. ಈ ಎತ್ತರದಲ್ಲಿ, ನೆಲದ ಮೇಲಿರುವ ಜನರು ನಗಾಡುತ್ತಿರುವುದನ್ನೂ ಕೂಗುತ್ತಿರುವುದನ್ನೂ ಕೇಳಿಸಿಕೊಳ್ಳಸಾಧ್ಯವಿದೆ. ನೆಲದಿಂದ ಮೇಲೆ ನೋಡುವಾಗ, ಈ ದೃಶ್ಯವು ಮನಸ್ಸನ್ನು ಸೂರೆಗೊಳಿಸುತ್ತದೆ ಮತ್ತು ಸೇವಂತಿಗೆ ಹೂವಿನ ಒಂದು ಬೀಜವು ಮಂದಮಾರುತದಲ್ಲಿ ತೇಲುತ್ತಿರುವುದನ್ನು ನೆನಪಿಗೆ ತರುತ್ತದೆ. ಕೆಲವು ಹಾರುಗರು ರೂಢಿಗತವಾಗಿ 600 ಮೀಟರ್ ಇಲ್ಲವೇ ಅದಕ್ಕಿಂತಲೂ ಹೆಚ್ಚು ಎತ್ತರಕ್ಕೆ ತೇಲುತ್ತಾರೆ. ಆದರೆ ಆಕ್ಸಿಜನ್ ಸರಬರಾಯಿ ಇಲ್ಲದೆ 3,000 ಮೀಟರ್‌ಗಿಂತಲೂ ಹೆಚ್ಚು ಎತ್ತರಕ್ಕೆ ಹೋಗುವುದು ಒಳ್ಳೇದಲ್ಲ.—“ಅತ್ಯುನ್ನತ ಎತ್ತರದಲ್ಲಿ ಹಾರಾಟ” ಎಂಬ ರೇಖಾಚೌಕವನ್ನು ನೋಡಿರಿ.ಒಮ್ಮೆ ನೀವು ಮೇಲೆ ಹೋದ ನಂತರ ಕೆಳಗಿಳಿಯುವುದು ಹೇಗೆ? ಗುರುತ್ವಾಕರ್ಷಣದ ಸಹಾಯದಿಂದಲೇ. ಹೊಗೆಕೊಳವೆಯ ಹಗ್ಗವನ್ನು ಎಳೆದು, ಸ್ವಲ್ಪ ಬಿಸಿಗಾಳಿಯು ಹೊರಹೋಗುವಂತೆ ಮಾಡುವ ಮೂಲಕ ಕೆಳಗಿಳಿಯುವ ವೇಗವನ್ನು ನೀವು ನಿಯಂತ್ರಿಸಬಹುದು. ಆದರೆ ಸಮತಲ ದಿಕ್ಕಿನಲ್ಲಿ ಪ್ರಯಾಣಿಸುವುದರಲ್ಲಿ ವ್ಯತ್ಯಾಸವಿದೆ. ಪೈಲಟನು ಸಂಪೂರ್ಣವಾಗಿ ಪ್ರಕೃತಿ ಶಕ್ತಿಗಳ ಅಧೀನನಾಗಿರುತ್ತಾನೆ. “ಪ್ರತಿಯೊಂದು ಹಾರಾಟವು ಭಿನ್ನವಾಗಿರುತ್ತದೆ, ಯಾಕೆಂದರೆ ಬಲೂನಿನ ದಿಕ್ಕು ಮತ್ತು ವೇಗವನ್ನು ಗಾಳಿಯು ನಿಯಂತ್ರಿಸುತ್ತದೆ,” ಎಂದು ಒಬ್ಬ ಅನುಭವಸ್ಥ ಬಲೂನ್ ಹಾರಾಟಗಾರನು ಹೇಳುತ್ತಾನೆ. ಮತ್ತು ವಾಯು ಹರಿವಿನ ಭಿನ್ನ ಮಟ್ಟಗಳು, ವೇಗ ಹಾಗೂ ದಿಕ್ಕನ್ನು ಬದಲಾಯಿಸಬಲ್ಲವು. ಭೂಮಿಗಿಂತ 100 ಮೀಟರ್ ಮೇಲ್ಮೈಯಲ್ಲಿ ಗಾಳಿಯು ಒಂದು ದಿಕ್ಕಿನಲ್ಲಿ ಚಲಿಸುತ್ತಿರುವಾಗ, ಇನ್ನೂ ಮೇಲೆ ಅಂದರೆ 200 ಮೀಟರ್ ಎತ್ತರದಲ್ಲಿ ಅದು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವುದು ಅಸಾಮಾನ್ಯ ಸಂಗತಿಯಲ್ಲ.
ಬಲೂನು ಗಾಳಿಯ ವೇಗದಲ್ಲೇ ಪ್ರಯಾಣಿಸುತ್ತಿರುವುದರಿಂದ, ನಿಮ್ಮ ಕೆಳಗೆ ಭೂಮಿಯು ತಿರುಗುತ್ತಾ ಇರುವಾಗ, ನೀವು ಚಲಿಸದೆ ತೂಗಾಡುತ್ತಿದ್ದೀರೊ ಎಂಬಂತೆ ಅನಿಸುತ್ತದೆ. “ಬಲೂನ್ ಹಾರಾಟಗಾರರು ಎಷ್ಟು ಸರಾಗವಾಗಿ ಗಾಳಿಯ ಜೊತೆಯಲ್ಲೇ ಹಾರುತ್ತಾರೆಂದರೆ, ಒಮ್ಮೆ ಅವರು ಮೇಲೇರಿದ ನಂತರ, ಅಲ್ಲಿ ಅವರೊಂದು ಭೂಪಟವನ್ನು ತೆರೆದು ನೋಡಿದರೂ ಅದು ಹಾರಿಹೋಗುವುದಿಲ್ಲ” ಎಂದು ಸ್ಮಿತ್‌ಸೋನ್ಯನ್ ಎಂಬ ಪತ್ರಿಕೆಯು ಹೇಳುತ್ತದೆ.
ಬಲೂನ್ ಹಾರಾಟಕ್ಕಾಗಿ ಅನುಭವವನ್ನು ಪಡೆಯುವುದು
ಬಲೂನಿನಲ್ಲಿ ಹಾರಲಿಕ್ಕಾಗಿ ಅತ್ಯುತ್ತಮ ಸಮಯವು, ಗಾಳಿಯ ಚಲನೆಯು ಕನಿಷ್ಠ ಮಟ್ಟದ್ದಾಗಿರುವಾಗಲೇ ಆಗಿದೆ. ಇದು ಸಾಮಾನ್ಯವಾಗಿ, ಸೂರ್ಯೋದಯದ ಸ್ವಲ್ಪ ಸಮಯದ ನಂತರ ಇಲ್ಲವೇ ಸೂರ್ಯಾಸ್ತಮಾನಕ್ಕೆ ಸ್ವಲ್ಪ ಮುಂಚೆ ಆಗಿದೆ. ಬೆಳಗ್ಗಿನ ಸಮಯ ಹೆಚ್ಚು ಒಳ್ಳೇದು, ಯಾಕೆಂದರೆ ಆಗ ವಾತಾವರಣವು ಹೆಚ್ಚು ತಂಪಾಗಿರುತ್ತದೆ ಮತ್ತು ಬಲೂನು ಹೆಚ್ಚು ಬೇಗನೆ ಮೇಲೇರುತ್ತದೆ. ಮಧ್ಯಾಹ್ನದ ಕೊನೆಯ ಭಾಗಗಳಲ್ಲಿನ ಹಾರಾಟಗಳಲ್ಲಿ, ಸೂರ್ಯನ ಬೆಳಕು ಕಡಿಮೆಯಾಗುತ್ತಾ ಹೋಗುವ ಅಪಾಯವಿದೆ.
ಬಲೂನ್ ಹಾರಾಟದ ಅನುಭವವನ್ನು ಅನೇಕ ಬಾರಿ ಪ್ರ್ಯಾಕ್ಟೀಸ್ ಮಾಡಿದ ನಂತರವೇ ಪಡೆಯಬಹುದು. ಒಂದು ಪ್ರಮುಖ ಅಂಶವೇನೆಂದರೆ, ನಾವು ಅಪೇಕ್ಷಿಸುವ ದಿಕ್ಕಿನಲ್ಲಿ ಚಲಿಸುತ್ತಿರುವ ಗಾಳಿ ಪುಂಜವನ್ನು
ಕಂಡುಹಿಡಿದು, ಅದರೊಳಗೆಯೇ ಉಳಿಯುವುದು. ಅನುಭವೀ ಹಾರಾಟಗಾರರು, ಮೆಟ್ಟಲೇರುವಿಕೆಯೆಂದು ಏನನ್ನು ಕರೆಯಲಾಗುತ್ತದೊ ಅದನ್ನು ಕರಗತಗೊಳಿಸಿಕೊಳ್ಳುತ್ತಾರೆ. ಅವರು ಒಂದು ನಿರ್ದಿಷ್ಟ ಎತ್ತರಕ್ಕೇರಿ, ನೌಕೆಯನ್ನು ಸ್ಥಿರಗೊಳಿಸುತ್ತಾರೆ. ತದನಂತರ ಬೆಂಕಿಯ ಒಂದು ಚಿಕ್ಕ ಚಿಮ್ಮುವಿಕೆಯ ನಂತರ, ಬಿಸಿಗಾಳಿಯು ಬಲೂನಿನ ತುದಿಯೊಳಗಿಂದ ಮೇಲಕ್ಕೇರಿ, ಆ ಮೌನ ನೌಕೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುತ್ತದೆ.ಬಲೂನು ಪೈಲಟನ ನಿಯಂತ್ರಣವನ್ನು ಮೀರಿ ಹೋಗದಂತೆ, ಬಿಸಿಗಾಳಿಯನ್ನು ಬಲೂನಿನೊಳಗೆ ನುಗ್ಗಿಸುವ ಸರಿಯಾದ ಗತಿ ಮತ್ತು ಸತತವಾದ ಗಮನವು ಅಗತ್ಯ. ಅವನ ಗಮನವು ಸ್ವಲ್ಪ ಅತ್ತಿತ್ತ ಹೋದರೆ, ಬಲೂನು ಅನಿರೀಕ್ಷಿತವಾಗಿ ಇಳಿಯಲಾರಂಭಿಸುವುದು. ಒಬ್ಬ ಚುರುಕಿನ ಪೈಲಟನು ಯಾವಾಗಲೂ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾನೆ: ಶಾಖದ ಮೂಲವು ಸಾಮಾನ್ಯವಾಗಿ ಬಲೂನಿನ ತುದಿಗಿಂತ 15ರಿಂದ 18 ಮೀಟರ್ ಕೆಳಗಿರುವುದರಿಂದ, ಆ ನೌಕೆಯು ಅಗ್ನಿಯ ಸಿಡಿತದಿಂದ ಬರುವ ಶಾಖಕ್ಕೆ ಪ್ರತಿಕ್ರಿಯಿಸಲು ಅದಕ್ಕೆ ಸುಮಾರು 15ರಿಂದ 30 ಸೆಕೆಂಡುಗಳು ಬೇಕಾಗುವವು.
ಕೆಳಗಿಳಿಯುವುದು, ವಿಶೇಷವಾಗಿ ವೇಗಗತಿಯ ವಾಯುವಿನ ಸಹಾಯದಿಂದ ಮತ್ತು ಮೇರೆಗಳುಳ್ಳ ಒಂದು ನಿರ್ದಿಷ್ಟ ಕ್ಷೇತ್ರದೊಳಗೆ ಮಾಡಲ್ಪಡುವಲ್ಲಿ ಉಲ್ಲಾಸಮಯವಾಗಿರಬಲ್ಲದು. ಅಂಥ ಪರಿಸ್ಥಿತಿಗಳಲ್ಲಿ, “ನಿಧಾನವಾಗಿ ಇಳಿಯುತ್ತಾ ಒಂದು ಮೃಗಾಲಯದಲ್ಲಿ ಒಂದು ಸಿಂಹದ ಗೂಡಿನೊಳಗೆ ಬಂದು ತಲಪುವ ಬದಲು, ಸರಿಯಾದ ಸ್ಥಳದಲ್ಲಿ ಶೀಘ್ರವಾದ, ಎತ್ತೆತ್ತಿಹಾಕುವ ಇಳಿಯುವಿಕೆಯೇ ಉತ್ತಮ.” ಆದರೆ ವಾಯುವಿನ ಸ್ಥಿತಿಯು ಒಳ್ಳೇದಾಗಿರುವಾಗ, ನಿಧಾನವಾಗಿ ಕೆಳಗಿಳಿಯುವುದು ಹೆಚ್ಚು ಉತ್ತಮ.
ಅನೇಕರು ಪಂದ್ಯಗಳಲ್ಲಿ, ಸ್ಪರ್ಧೆಗಳಲ್ಲಿ ಮತ್ತು ಉತ್ಸವಗಳಲ್ಲಿ ಭಾಗವಹಿಸುವಾಗ ಮತ್ತು ಇತರರು ಕೇವಲ ಆ ಅನುಭವದ ಶುದ್ಧ ಆನಂದವನ್ನು ಸವಿಯಲಿಕ್ಕೋಸ್ಕರ ಹಾರುವಾಗ, ಮನೋರಂಜನೀಯ ಬಿಸಿಗಾಳಿ ಬಲೂನುಗಳ ಹಾರಾಟವು, ಅದರ ಉಜ್ವಲವಾದ ಬಣ್ಣಗಳಲ್ಲಿ ಅರಳುತ್ತಾ ಇರುವುದು. (g02 3/8)
[ಪುಟ 14, 15ರಲ್ಲಿರುವ ಚೌಕ/ಚಿತ್ರಗಳು]
ಬಲೂನು ಹಾರಾಟದ ಆರಂಭದ ಇತಿಹಾಸ
ಜೋಸೆಫ್-ಮಿಶೆಲ್ ಮತ್ತು ಜಾಕ್ ಏಟ್ಯೇನ್ ಮಾಂಟ್‌ಗಾಲ್ಫಿಯರ್, ಫ್ರಾನ್ಸ್‌ನ ಆನೊನೇ ಎಂಬಲ್ಲಿನ ಒಬ್ಬ ಧನಿಕ ಕಾಗದ ಉತ್ಪಾದಕನ ಪುತ್ರರಾಗಿದ್ದರು. ಮೊತ್ತಮೊದಲ ಬಿಸಿಗಾಳಿ ಬಲೂನನ್ನು ನಿರ್ಮಿಸಿ ಅದನ್ನು ಹಾರಿಸಿದ್ದಕ್ಕಾಗಿ ಅವರನ್ನು ಇತಿಹಾಸವು ಸನ್ಮಾನಿಸುತ್ತದೆ. 1780ರ ಆರಂಭದಲ್ಲಿ ಅವರು ನಡೆಸಿದ ಅತ್ಯಾರಂಭದ ಪ್ರಯೋಗಗಳಲ್ಲಿ ಅವರು ಕಾಗದದ ಬಲೂನುಗಳನ್ನು ಉಪಯೋಗಿಸಿದರು. ಇದನ್ನು, ಒಣಹುಲ್ಲು ಮತ್ತು ಉಣ್ಣೆಯನ್ನು ಸುಡುವುದರಿಂದ ಬರುವ ಹೊಗೆಯು ಮೇಲೇರುವಂತೆ ಮಾಡುವುದೆಂದು ಅವರು ನೆನಸಿದರು. ಆದರೆ, ಮೇಲೇರುವಂತೆ ಮಾಡುವಂಥದ್ದು ಬಿಸಿಗಾಳಿಯೆಂಬುದನ್ನು ಅವರು ಸ್ವಲ್ಪ ಸಮಯದೊಳಗೆ ಗ್ರಹಿಸಿದರು.
ತದನಂತರ ಅವರು ಬಟ್ಟೆಯಿಂದ ಬಲೂನುಗಳನ್ನು ಮಾಡಲಾರಂಭಿಸಿದಾಗ, ಅವರು ಪ್ರಗತಿಪರವಾಗಿ ಬಲೂನುಗಳ ಗಾತ್ರವನ್ನು ದೊಡ್ಡದಾಗಿಸಿ ಮೇಲೇರಿಸುತ್ತಾ ಹೋದಂತೆ, ಅವು ಹೆಚ್ಚು ಎತ್ತರಕ್ಕೆ ಹಾರಲು ಮತ್ತು ಹೆಚ್ಚು ಭಾರವನ್ನು ಒಯ್ಯಲು ಶಕ್ತವಾಗಿದ್ದವೆಂಬುದನ್ನು ಗಮನಿಸಿದರು. 1783ರ ಜೂನ್ ತಿಂಗಳಿನಲ್ಲಿ, ಆನೊನೇಯ ಸಾರ್ವಜನಿಕ ಚೌಕದಿಂದ, ಅಷ್ಟರ ತನಕ ಅವರು ಕಟ್ಟಿರುವಂಥದ್ದರಲ್ಲೇ ಅತಿ ದೊಡ್ಡದಾದ ಬಲೂನನ್ನು ಹೊರಡಿಸಿದರು. ಅದು ಗಗನದತ್ತ ಹತ್ತು ನಿಮಿಷಗಳ ವರೆಗೆ ತೇಲಿ, ಬಳಿಕ ಭೂಮಿಗೆ ಇಳಿಯಿತು.
ಈ ಸಾಧನೆಯ ಬಳಿಕ, ಜನರನ್ನು ಒಯ್ಯುವ ಒಂದು ಬಲೂನನ್ನು ಹಾರಿಸುವ ಸಮಯ ಬಂದಿದೆಯೆಂದು ಅವರು ತೀರ್ಮಾನಿಸಿದರು. ಆದರೆ ಮೊದಲು, 1783ರ ಸೆಪ್ಟೆಂಬರ್ ತಿಂಗಳಿನಲ್ಲಿ ಸಾವಿರಾರು ಪ್ರೇಕ್ಷಕರು ವರ್ಸೈಯಲ್ಲಿ ಕೂಡಿಬಂದು, ತೂಗುದೊಟ್ಟಿಲಿನಲ್ಲಿ ಒಂದು ಕೋಳಿ, ಒಂದು ಬಾತುಕೋಳಿ ಮತ್ತು ಒಂದು ಕುರಿಯು ಇದ್ದ ಒಂದು ಬಲೂನು ಹಾರಿಸಲ್ಪಡುವುದನ್ನು ಕಣ್ಣಾರೆ ನೋಡಿದರು. ಈ ಮೂರೂ ಪ್ರಾಣಿಗಳು, ಎಂಟು ನಿಮಿಷಗಳ ಆ ಹಾರಾಟವನ್ನು ಯಾವುದೇ ದುಷ್ಪರಿಣಾಮಗಳಿಲ್ಲದೆ ಪಾರಾದವು. ತದನಂತರ ಸ್ವಲ್ಪ ಸಮಯದೊಳಗೆ 1783ರ ನವೆಂಬರ್ 21ರಂದು, ತೂಗುದೊಟ್ಟಿಲಿನಲ್ಲಿ ಮನುಷ್ಯರಿರುವ ಮೊದಲ ಹಾರಾಟವನ್ನು ಪ್ರಯತ್ನಿಸಲಾಯಿತು. ಇಬ್ಬರು ಕುಲೀನ ವ್ಯಕ್ತಿಗಳು ಈ ಸನ್ಮಾನವನ್ನು ಪಡೆಯುವಂತೆ ಅನುಮತಿಸಲು XVIನೆಯ ಲೂಯಿಯ ಮನವೊಪ್ಪಿಸಲಾಯಿತು. ಅವರನ್ನು ಷಾಟೋ ಡಾ ಲಾ ಮ್ಯೂಎಟ್‌ನಿಂದ ಹಾರಿಸಲಾಯಿತು ಮತ್ತು ಅವರು ಸುಮಾರು ಎಂಟು ಕಿಲೊಮೀಟರುಗಳಷ್ಟು ದೂರದ ವರೆಗೆ ಪ್ಯಾರಿಸ್‌ನ ಮೇಲೆ ತೇಲಿದರು. ಸುಮಾರು 25 ನಿಮಿಷಗಳ ನಂತರ ಅವರು ತುರ್ತಾಗಿ ಭೂಮಿಗಿಳಿಯಬೇಕಾಯಿತು, ಏಕೆಂದರೆ ಬಲೂನಿಗೆ ಬೆಂಕಿ ಹಿಡಿಯಿತು!
ಸುಮಾರು ಈ ಸಮಯದಷ್ಟಕ್ಕೆ, ಪ್ಯಾರಿಸ್‌ನಲ್ಲಿರುವ ಆ್ಯಕಡೆಮಿ ಆಫ್ ಸೈಎನ್ಸಸ್ ಈ ಕಂಡುಹಿಡಿತದಲ್ಲಿ ಆಸಕ್ತಿಯನ್ನು ತೋರಿಸಿತು. ಆ ಸಮಯದಲ್ಲಿ ಸುಪ್ರಸಿದ್ಧ ಭೌತವಿಜ್ಞಾನಿಗಳಲ್ಲಿ ಒಬ್ಬರಾಗಿದ್ದ ಪ್ರೊಫೆಸರ್ ಜಾಕ್ ಶಾರ್ಲ್, ಚಾರ್ಲ್ಸ್ ಮತ್ತು ಎಮ್. ಎನ್. ರಾಬರ್ಟ್ ಎಂಬ ಇಬ್ಬರು ನಿಸ್ಸೀಮ ಮೆಕ್ಯಾನಿಕರೊಂದಿಗೆ ಕೂಡಿ, ಹೈಡ್ರೊಜನ್ ತುಂಬಿರುವ ಮೊದಲನೆಯ ಬಲೂನನ್ನು ನಿರ್ಮಿಸಿದರು ಮತ್ತು 1783ರ ಆಗಸ್ಟ್ 27ರಂದು ಅದನ್ನು ಪರೀಕ್ಷಿಸಿದರು. ಅದು 45 ನಿಮಿಷಗಳ ವರೆಗೆ ತೇಲಿತು ಮತ್ತು ಸುಮಾರು 24 ಕಿಲೊಮೀಟರ್‌ಗಳಷ್ಟು ದೂರ ಪ್ರಯಾಣಿಸಿತು. ಈ ಬಲೂನು ಶಾಲ್ಯರ್ ಎಂದು ಪ್ರಸಿದ್ಧವಾಯಿತು. ಈ ರೀತಿಯ ಬಲೂನನ್ನು ಬಹುಮಟ್ಟಿಗೆ ಅದರ ಮೂಲ ರೂಪದಲ್ಲೇ ಇಂದಿನ ವರೆಗೂ ಉಪಯೋಗಿಸಲಾಗುತ್ತಿದೆ.
[ಪುಟ 17ರಲ್ಲಿರುವ ಚೌಕ]
ಅತ್ಯುನ್ನತ ಎತ್ತರದಲ್ಲಿ ಹಾರಾಟ
ಹೆನ್ರಿ ಕಾಕ್ಸ್‌ವೆಲ್ ಎಂಬ ಒಬ್ಬ ಆಂಗ್ಲ ವ್ಯಕ್ತಿಯು, ಎತ್ತರದಲ್ಲಿ ಹಾರುವ ಪೈಲಟ್ ಎಂಬ ಖ್ಯಾತಿಯನ್ನು ಗಳಿಸಿದನು. 1862ರ ಸೆಪ್ಟೆಂಬರ್‌ನಲ್ಲಿ, ಬ್ರಿಟಿಷ್ ಪವನಶಾಸ್ತ್ರ ಸಂಸ್ಥೆಯವರಾಗಿದ್ದ ಜೇಮ್ಸ್ ಗ್ಲೈಶರ್ ಎಂಬವರು, ಉನ್ನತವಾದ ಎತ್ತರದಲ್ಲಿ ವೈಜ್ಞಾನಿಕ ಅವಲೋಕನೆಗಳನ್ನು ಮಾಡಲಿಕ್ಕಾಗಿ ತಮ್ಮನ್ನು ಕರೆದುಕೊಂಡು ಹೋಗಲು ಕಾಕ್ಸ್‌ವೆಲ್‌ನನ್ನು ನೇಮಿಸಿದರು. ಅವರು ಆಮ್ಲಜನಕವನ್ನು ಉಸಿರಾಡುವ ಯಾವುದೇ ಸಲಕರಣೆಯಿಲ್ಲದೆ ಒಂಬತ್ತು ಕಿಲೊಮೀಟರುಗಳಷ್ಟು ಎತ್ತರಕ್ಕೇರಿದರು!
ಅವರು 8,000 ಮೀಟರುಗಳಿಗಿಂತಲೂ ಹೆಚ್ಚು ಎತ್ತರವನ್ನು ತಲಪಿದ ನಂತರ ಮತ್ತು ಚಳಿಯಾದ ಹಾಗೂ ಆಮ್ಲಜನಕದ ಪ್ರಮಾಣವು ಕಡಿಮೆಯಾಗಿರುವ ಗಾಳಿಯನ್ನು ಕಷ್ಟದಿಂದ ಉಸಿರಾಡಲು ಆರಂಭಿಸಿದ ನಂತರ, ಕಾಕ್ಸ್‌ವೆಲ್ ಕೆಳಗಿಳಿಯುವ ತಯಾರಿಯನ್ನು ನಡೆಸಿದನು. ಆದರೆ ಬಲೂನು ಸತತವಾಗಿ ತಿರುಗುತ್ತಾ ಇದ್ದದರಿಂದ, ಗಾಳಿಯನ್ನು ಹೊರಬಿಡುವ ಕವಾಟದ ಹಗ್ಗವು ತಿರುಚಿಕೊಂಡಿತ್ತು ಮತ್ತು ಅದನ್ನು ಬಿಡಿಸಲಿಕ್ಕಾಗಿ ಕಾಕ್ಸ್‌ವೆಲ್, ಹಗ್ಗಗಳು ಮತ್ತು ತಂತಿಗಳಿರುವ ಸಜ್ಜಿಗೇರಬೇಕಾಯಿತು. ಗ್ಲೈಶರ್ ಆಗಲೇ ಪ್ರಜ್ಞಾಹೀನನಾಗಿದ್ದನು, ಮತ್ತು ಕಾಕ್ಸ್‌ವೆಲ್ ಆ ಹಗ್ಗವನ್ನು ತನ್ನ ಹಲ್ಲುಗಳಿಂದ ಎಳೆಯಬೇಕಾಯಿತು, ಯಾಕೆಂದರೆ ಅವನ ಕೈಗಳು ಚಳಿಯಿಂದ ಮರಗಟ್ಟಿದ್ದವು. ಕೊನೆಗೆ, ಅವರು ಭೂಮಿಗೆ ಇಳಿಯತೊಡಗಿದರು.
ಇಬ್ಬರೂ ಮನುಷ್ಯರು ಕ್ರಮೇಣ ಚೇತರಿಸಿಕೊಂಡು, ಬಲೂನಿನ ಇಳಿಯುವ ವೇಗವನ್ನು ನಿಧಾನಿಸಲು ಶಕ್ತರಾದರು. ಅವರು ಆ ಪ್ರದೇಶದಲ್ಲಿ ಬಹುಮಟ್ಟಿಗೆ 10,000 ಮೀಟರುಗಳಷ್ಟು ಎತ್ತರವನ್ನು ತಲಪಿದ್ದರು. ಇದು, ಒಂದು ಶತಮಾನಕ್ಕಿಂತಲೂ ಹೆಚ್ಚು ಸಮಯದ ವರೆಗೆ ಉಳಿದ ಒಂದು ದಾಖಲೆಯಾಗಿತ್ತು. ತೆರೆದ ಬುಟ್ಟಿಯುಳ್ಳ ಬಲೂನಿನಲ್ಲಿ ಅವರ ಹಾರಾಟವು, ವಾಯುಯಾನ ಕಲೆಯಲ್ಲಿ ಅತಿ ಶ್ರೇಷ್ಠವಾದ ಸಾಧನೆಗಳಲ್ಲಿ ಒಂದಾಗಿತ್ತು. ಏಕೆಂದರೆ ಅದನ್ನು ಅವರು ಯಾವುದೇ ಆಮ್ಲಜನಕ ಸರಬರಾಯಿ ಇಲ್ಲದೆ, ಕನಿಷ್ಠ ಪ್ರಮಾಣದ ಸಂರಕ್ಷಕ ಉಡುಗೆತೊಡುಗೆ ಮತ್ತು ಮೇಲಿನ ವಾತಾವರಣದ ಬಗ್ಗೆ ಕಾರ್ಯತಃ ಯಾವುದೇ ಜ್ಞಾನವಿಲ್ಲದೆ ಮಾಡಿದರು.
[ಪುಟ 15ರಲ್ಲಿರುವ ಚಿತ್ರ]
ಗಾಳಿಯನ್ನು ತುಂಬಿಸುವ ಸಮಯದಲ್ಲಿ ಬಲೂನಿನ ಒಳಭಾಗ
[ಪುಟ 15ರಲ್ಲಿರುವ ಚಿತ್ರ]
ನೆಲಬಿಟ್ಟು ಏರಿ, ಹಾರಲಿಕ್ಕಾಗಿ ಬಲೂನಿನೊಳಗೆ ಕಾವೇರಿರುವ ಗಾಳಿಯನ್ನು ಊದಲಾಗುತ್ತದೆ
[ಪುಟ 16ರಲ್ಲಿರುವ ಚಿತ್ರ]
ಅಸಾಮಾನ್ಯವಾದ ಬಲೂನು ಆಕಾರಗಳು