ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಮೀನಿನ ಚರ್ಮದಿಂದ ತಯಾರಿಸಲ್ಪಟ್ಟಿರುವ ಪಾದರಕ್ಷೆ

ಪೆರುವಿನ ಆ್ಯಂಡೀಸ್‌ ಪರ್ವತಗಳಲ್ಲಿರುವ ಒಂದು ಹೊಸ ಕಾರ್ಖಾನೆಯಲ್ಲಿ, ಜೋಡುಗಳನ್ನು ಟ್ರೌಟ್‌ ಮೀನಿನ ಚರ್ಮದಿಂದ ತಯಾರಿಸಲಾಗುತ್ತಿದೆ ಎಂದು, ಲೀಮಾ ನಗರದ ವಾರ್ತಾಪತ್ರಿಕೆಯಾದ ಎಲ್‌ ಕಾಮರ್ಸ್ಯೊ ವರದಿಸುತ್ತದೆ. ಮೀನನ್ನು ಮರಿಮಾಡುವ ಸ್ಥಳಗಳಿಂದ ಇಲ್ಲವೇ ಮೀನಿನ ಫಾರ್ಮ್‌ಗಳಿಂದ ಮೀನುಗಳ ಚರ್ಮಗಳನ್ನು ಶೇಖರಿಸಿ, ಶುಚಿಮಾಡಿ, ನೈಸರ್ಗಿಕವಾಗಿ ಹದಮಾಡುವ ಪದಾರ್ಥಗಳೊಂದಿಗೆ ಸಿದ್ಧಗೊಳಿಸಲಾಗುತ್ತದೆ. ನಂತರ ಅವುಗಳಿಗೆ ಎಣ್ಣೆಹಚ್ಚಲಾಗುತ್ತದೆ ಮತ್ತು ಹಳದಿ, ಕಿರುಮಂಜಿ, ಇಲ್ಲವೇ ಆಕಿಯೋಟ್‌ (ಮೆಕ್ಸಿಕನ್‌ ಜಿನಸಿ)ನೊಂದಿಗೆ ಬಣ್ಣಕೊಡಲಾಗುತ್ತದೆ. ಈ ಪ್ರಕ್ರಿಯೆಯು ಚರ್ಮಗಳ ಮೇಲಿರುವ ಆಕರ್ಷಕವಾದ ವಜ್ರದಂಥ ವಿನ್ಯಾಸವನ್ನು ಅಳಿಸಿಹಾಕುವುದಿಲ್ಲ. ಈ ಚರ್ಮವನ್ನು, “ಹಣದ ಪರ್ಸ್‌ಗಳು, ಬ್ಯಾಗ್‌ಗಳು, ಗಡಿಯಾರಪಟ್ಟಿಗಳು, ಇಲ್ಲವೆ ಸೆಲ್ಯುಲರ್‌ ಫೋನ್‌ ಕವರ್‌”ಗಳನ್ನು ತಯಾರಿಸಲೂ ಉಪಯೋಗಿಸಬಹುದು. ಈ ಕಾರ್ಯಯೋಜನೆಯನ್ನು ಮುಂತಂದಂಥ ಉದ್ಯಮಿ ಇಂಜಿನಿಯರ್‌ ಬಾರ್ಬರಾ ಲೀಯೊನ್‌ ಹೇಳುವುದು: “ಅತಿ ಪ್ರಾಮುಖ್ಯ ಸಂಗತಿಯೇನೆಂದರೆ, ಕ್ರೋಮ್ಯಮ್‌ನಂಥ ಯಾವುದೇ ಕೃತಕ ಹದಮಾಡುವ ಪದಾರ್ಥವು ಉಪಯೋಗಿಸಲ್ಪಡುವುದಿಲ್ಲ. ಇದು ಕಲುಷಿತತೆಯ ಸಮಸ್ಯೆಗಳನ್ನು ದೂರವಿರಿಸುತ್ತದೆ ಮತ್ತು ಟ್ರೌಟ್‌ ಮೀನಿನ ಚರ್ಮವನ್ನು ಸಂಪೂರ್ಣವಾಗಿ ಪರಿಸರೀಯ ಉತ್ಪನ್ನವಾಗಿ ಮಾಡುತ್ತದೆ.”(g02 3/8)

ನಗು​—⁠ಈಗಲೂ ಅತ್ಯುತ್ತಮ ಔಷಧ!

“ನಾಲ್ಕು ವಾರಗಳ ವರೆಗೆ ದಿನಾಲೂ ಹಾಸ್ಯದ ಸ್ವಲ್ಪ ಪ್ರಮಾಣವು, ಖಿನ್ನತೆಯ ಲಕ್ಷಣಗಳನ್ನು ಬಹಳಷ್ಟು ಮಟ್ಟಿಗೆ ಕಡಿಮೆಗೊಳಿಸಬಹುದೆಂಬುದನ್ನು ಈಗ ಕಂಡುಹಿಡಿಯಲಾಗಿದೆ” ಎಂದು ಲಂಡನ್‌ನ ದಿ ಇಂಡಿಪೆಂಡೆಂಟ್‌ ವಾರ್ತಾಪತ್ರಿಕೆಯು ವರದಿಸುತ್ತದೆ. “ಪ್ರತಿ ದಿನ 30 ನಿಮಿಷಗಳ ವರೆಗೆ ಹಾಸ್ಯನಟರ ಚಿಕಿತ್ಸಕ ಟೇಪುಗಳನ್ನು ಕೇಳಿಸಿಕೊಳ್ಳುವಂತೆ ಹೇಳಲಾಗಿದ್ದ ರೋಗಿಗಳಲ್ಲಿ ಕೆಲವರು ಗುಣಹೊಂದಿದ್ದರು ಮತ್ತು ಇತರರು ತಮ್ಮ ರೋಗಲಕ್ಷಣಗಳ ತೀವ್ರತೆಯು ಅರ್ಧದಷ್ಟು ಕಡಿಮೆಯಾಗಿರುವುದನ್ನು ಕಂಡುಕೊಂಡರು.” ಅಮೆರಿಕದಲ್ಲಿ ನಡೆಸಲ್ಪಟ್ಟ 100ಕ್ಕಿಂತಲೂ ಹೆಚ್ಚು ಸಂಶೋಧನಾ ಅಧ್ಯಯನಗಳು, ಹಾಸ್ಯದಿಂದ ಕೆರಳಿಸಲ್ಪಡುವ ನಗೆಯು ಉಪಯುಕ್ತವಾಗಿರಬಲ್ಲದೆಂಬುದನ್ನು ಸೂಚಿಸುತ್ತವೆ. ಖಿನ್ನರಾಗಿರುವ ಜನರು ಮಾತ್ರವಲ್ಲದೆ, ಅಲರ್ಜಿಗಳು, ಅಧಿಕ ರಕ್ತದೊತ್ತಡ, ದುರ್ಬಲವಾದ ಸೋಂಕು ರಕ್ಷಣಾ ವ್ಯವಸ್ಥೆಗಳು, ಮತ್ತು ಕ್ಯಾನ್ಸರ್‌ ಹಾಗೂ ಕೀಲುವಾಯು ರೋಗವುಳ್ಳವರು ಸಹ ಇದಕ್ಕೆ ಸ್ಪಂದಿಸಿದ್ದಾರೆ. ನಗೆಯು ಕ್ಷೇಮವನ್ನು ಪ್ರೋತ್ಸಾಹಿಸುತ್ತದೆಂಬುದು ದೀರ್ಘ ಸಮಯದಿಂದ ಜ್ಞಾತವಾಗಿರುವ ವಿಷಯವಾಗಿದೆ. ಆದರೆ ಅದು ಹೇಗೆ ಎಂಬುದನ್ನು ಈ ವರೆಗೂ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಮನೋರೋಗ ವೈದ್ಯರಾದ ಎಡ್‌. ಡಂಕಲ್‌ಬ್ಲೌ ಎಚ್ಚರಿಕೆಯ ಬುದ್ಧಿವಾದವನ್ನು ನೀಡುತ್ತಾರೆ: ಹೀಯಾಳಿಸುವ ಇಲ್ಲವೇ ಅಣಕದ ಹಾಸ್ಯದಿಂದ ದೂರವಿರಿ ಮತ್ತು ತೀರ ಹೆಚ್ಚು ಹಾಸ್ಯವನ್ನು ಮಾಡದಿರುವ ಬಗ್ಗೆ ಜಾಗ್ರತೆ ವಹಿಸಿರಿ. ಇಲ್ಲದಿದ್ದಲ್ಲಿ, ತನ್ನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲವೆಂದು ರೋಗಿಗೆ ಅನಿಸಬಹುದು.(g02 3/8)

ಮಲಿನ ಮಂಜು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ

“ಬೇಸಗೆಕಾಲದಲ್ಲಿ ಕೆನಡದ ಹೆಚ್ಚಿನ ನಗರಗಳ ಉಸಿರುಕಟ್ಟಿಸುವ ದಟ್ಟವಾದ ಮಲಿನ ಮಂಜು, ಎರಡು ತಾಸುಗಳೊಳಗೆ ಹೃದಯಾಘಾತಗಳನ್ನು ಉಂಟುಮಾಡಬಲ್ಲದು” ಎಂದು, ಕೆನಡದ ನ್ಯಾಷನಲ್‌ ಪೋಸ್ಟ್‌ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಈ ಮಲಿನ ಮಂಜಿನಲ್ಲಿ ಪೃಥಕ್ಕಣಗಳು, ಅಂದರೆ ವಾಹನಗಳು, ಶಕ್ತಿಸ್ಥಾವರಗಳು ಮತ್ತು ಬೆಂಕಿಗೂಡುಗಳಿಂದ ಪ್ರಧಾನವಾಗಿ ವಿಸರ್ಜಿಸಲ್ಪಡುವ ಅತಿ ಚಿಕ್ಕ, ಅದೃಶ್ಯ ಮಲಿನಕಾರಕಗಳು ಒಳಗೂಡಿವೆ. “ಈಗಾಗಲೇ ಹೃದಯಾಘಾತವಾಗುವ ಅಪಾಯವಿರುವವರು, ಅಂದರೆ ಮಧುಮೇಹಿಗಳು, ಹೃದ್ರೋಗವುಳ್ಳ ಜನರು ಇಲ್ಲವೇ ವಯಸ್ಸಾದವರು, ಈ ಪೃಥಕ್ಕಣಗಳುಳ್ಳ ತೀವ್ರ ವಾಯು ಮಾಲಿನ್ಯಕ್ಕೆ ಒಡ್ಡಲ್ಪಡುವ ಎರಡು ತಾಸುಗಳಲ್ಲೇ ಹೃದಯಾಘಾತಕ್ಕೆ ತುತ್ತಾಗುವ ಅಪಾಯವು 48% ಏರಿತ್ತು” ಎಂದು ಆ ವಾರ್ತಾಪತ್ರಿಕೆಯು ಹೇಳುತ್ತದೆ. “24 ತಾಸುಗಳಲ್ಲಿ ಆ ಅಪಾಯವು 62% ಹೆಚ್ಚಾಯಿತು.” ಮಲಿನ ಮಂಜಿನ ಕುರಿತಾಗಿ ಎಚ್ಚರಿಕೆಗಳು ಕೊಡಲ್ಪಡುವಾಗ, “ಮನೆಯೊಳಗೆ ಹೆಚ್ಚು ಸಮಯವನ್ನು ಕಳೆಯಲು ಪ್ರಯತ್ನಿಸಿರಿ, ಏರ್‌ ಕಂಡೀಷನ್‌ಗಳನ್ನು ಉಪಯೋಗಿಸಿದರೆ ಒಳ್ಳೇದು” ಎಂದು ಹಾವಾರ್ಡ್‌ ವಿಶ್ವವಿದ್ಯಾನಿಲಯದ ವೈದ್ಯಕೀಯ ಶಾಲೆಯ ಡಾಕ್ಟರ್‌ ಮರೇ ಮಿಟ್ಟಲ್‌ಮ್ಯಾನ್‌ ಸಲಹೆ ಕೊಡುತ್ತಾರೆ. “ಈ ಕಣಗಳು ಎಷ್ಟು ಚಿಕ್ಕದ್ದಾಗಿವೆ ಎಂದರೆ, ಅವು ಮನೆಯೊಳಗಿನ ಗಾಳಿಯೊಳಗೆ ನುಸುಳುತ್ತವೆ, ಆದರೆ ಏರ್‌ ಕಂಡೀಷನ್‌ ಅವುಗಳನ್ನು ಹೊರಕ್ಕೆ ಕಳುಹಿಸುವುದು.”(g02 3/8)

ಮದುವೆಯ ಮುಂಚೆ ಕೂಡುಬಾಳ್ವೆ

“ಮದುವೆಗೆ ಮುಂಚೆ ಜೊತೆಯಾಗಿ ವಾಸಿಸಿರುವ ಹೆತ್ತವರು, ಬಹುಮಟ್ಟಿಗೆ ಬೇರ್ಪಡುವ ಸಾಧ್ಯತೆಯು ಎರಡರಷ್ಟು ಹೆಚ್ಚಿದೆ” ಎಂದು ಕೆನಡದ ನ್ಯಾಷನಲ್‌ ಪೋಸ್ಟ್‌ ತಿಳಿಸುತ್ತದೆ. ಸ್ಟಾಟಿಸ್ಟಿಕ್ಸ್‌ ಕೆನಡ ನಡೆಸಿದ ಅಧ್ಯಯನದಲ್ಲಿ ಸಹಲೇಖಕಿಯಾಗಿರುವ ಹೆದರ್‌ ಜ್ಯೂಬಿ ಹೇಳಿದ್ದೇನೆಂದರೆ, ಒಂದು ಮಗುವನ್ನು ಹೊಂದುವುದು ಹೆತ್ತವರಿಗೆ ಪರಸ್ಪರರ ಕಡೆಗಿರುವ ವಚನಬದ್ಧತೆಯ ಪ್ರತೀಕವಾಗಿರುವುದೆಂದು ಕಂಡುಕೊಳ್ಳಲು ಸಂಶೋಧಕರು ನಿರೀಕ್ಷಿಸಿದರು. “ಆದರೆ, ಕೂಡುಬಾಳ್ವೆಯ ಕಡೆಗೆ ಹೆಚ್ಚು ಮನಸ್ಸಿರುವ ದಂಪತಿಗಳು ಬೇರ್ಪಡುವುದಕ್ಕೂ ಹೆಚ್ಚು ಮನಸ್ಸುಳ್ಳವರಾಗಿರುತ್ತಾರೆ” ಎಂಬುದನ್ನು ಅವಳು ಗಮನಿಸಿದಳು. ಮದುವೆಗೆ ಮುಂಚೆ ಜೊತೆಯಾಗಿ ಜೀವಿಸುತ್ತಿದ್ದವರಲ್ಲಿ 25.4 ಪ್ರತಿಶತ ಮಂದಿ ಬೇರ್ಪಟ್ಟರು, ಆದರೆ ಮದುವೆಯಾಗುವ ಮುಂಚೆ ಜೊತೆಯಾಗಿ ಜೀವಿಸದಿದ್ದ ಹೆತ್ತವರಲ್ಲಿ ಕೇವಲ 13.6 ಪ್ರತಿಶತ ಬೇರ್ಪಟ್ಟರು ಎಂಬುದನ್ನು ಸಂಶೋಧಕರು ಕಂಡುಹಿಡಿದರು. “ಮೊದಲು ಜೊತೆಯಾಗಿ ಜೀವಿಸುವ ಜನರಿಗೆ ಕಡಿಮೆ ಸ್ಥಿರತೆಯುಳ್ಳ ಸಂಬಂಧಗಳಿರುತ್ತವೆ, ಯಾಕೆಂದರೆ ಜೊತೆಯಾಗಿ ಬಾಳಲು ಸಿದ್ಧರಾಗಿದ್ದ ಜನರು, ಮದುವೆಯ ವಚನಬದ್ಧತೆಗೆ ಕಡಿಮೆ ಮೌಲ್ಯವನ್ನು ಕೊಡುತ್ತಿದ್ದ ಜನರಾಗಿದ್ದಿರಬೇಕು” ಎಂದು ಜ್ಯೂಬಿ ಹೇಳುತ್ತಾಳೆ. (g02 3/8)

ಜೇನುಗೂಡಿನಲ್ಲಿ ಜೀವಾವಧಿ ಶಿಕ್ಷೆ

“ಕರೆಯದೆ ಬಂದಿರುವ ಅತಿಥಿಗಳ ಸತ್ಕಾರಕ್ಕಾಗಿ ಆಫ್ರಿಕದ ಜೇನುನೊಣಗಳು, ವಿಲಕ್ಷಣವಾದರೂ ತುಂಬ ಪರಿಣಾಮಕಾರಿಯಾದ ಒಂದು ಉಪಾಯವನ್ನು ಕಂಡುಹಿಡಿದಿವೆ” ಎಂದು ನ್ಯೂ ಸೈಯಂಟಿಸ್ಟ್‌ ಪತ್ರಿಕೆಯು ಹೇಳುತ್ತದೆ. “ಜೇನುನೊಣಗಳು ಅವುಗಳನ್ನು ತಮ್ಮ ಗೂಡುಗಳಲ್ಲಿರುವ ಸೆರೆಕೋಣೆಗಳಲ್ಲಿ ಬಂಧಿಯಾಗಿರಿಸುತ್ತವೆ. ಈ ರೀತಿಯ ದಂಡನೆಯ ಕಾರ್ಯನೀತಿಯು, ಆ ಪರಾವಲಂಬಿ ಪರಜೀವಿಗಳನ್ನು ನಿಯಂತ್ರಣದೊಳಗಿಡುತ್ತದೆ ಮತ್ತು ಅಗತ್ಯಬಿದ್ದಲ್ಲಿ ಹಿಂಡಿಗೆ ಓಡಿಹೋಗಲಿಕ್ಕಾಗಿ ಸಾಕಷ್ಟು ಸಮಯವನ್ನು ಕೊಡುತ್ತದೆ.” ಸಂಶೋಧಕರು, “ಒಂದು ಜೇನುನೊಣದ ಸುಮಾರು ಅರ್ಧದಷ್ಟು ಗಾತ್ರದ ಚಿಕ್ಕ ಜೀರುಂಡೆ ಏತೀನಾ ಟ್ಯೂಮಿಡಾದ ವಿರುದ್ಧ ದಕ್ಷಿಣ ಆಫ್ರಿಕದಲ್ಲಿ ಜೇನುನೊಣಗಳು ಹೇಗೆ ತಮ್ಮನ್ನೇ ರಕ್ಷಿಸಿಕೊಳ್ಳುತ್ತವೆಂಬುದನ್ನು ಅಧ್ಯಯನ ಮಾಡಿದರು.” ಆ ಸಂಶೋಧಕರಲ್ಲಿ ಒಬ್ಬರಾದ ಪೀಟರ್‌ ನೊಯ್ಮಾನ್‌, ಆ ಜೀರುಂಡೆಯು “ಒಂದು ಫಿರಂಗಿ ರಥದಂತೆ ನಿರ್ಮಿಸಲ್ಪಟ್ಟಿದೆ” ಎಂದು ವರ್ಣಿಸುತ್ತಾರೆ. ಹೀಗಿರುವುದರಿಂದ, ಜೇನುನೊಣಗಳು ತಮ್ಮನ್ನು ರಕ್ಷಿಸಿಕೊಳ್ಳುವ ಒಂದೇ ಮಾರ್ಗ, ಜೀರುಂಡೆಯ ಬಂಧನವಾಗಿದೆ. “ಕೆಲವು ಜೇನುನೊಣಗಳು ಸೆರೆಮನೆಯನ್ನು ಕಟ್ಟುತ್ತಿರುವಾಗ, ಇತರ ಜೇನುನೊಣಗಳು ಆ ಜೀರುಂಡೆಯು ತಪ್ಪಿಸಿಕೊಳ್ಳದಂತೆ ನಿರಂತರವಾಗಿ ಕಾವಲಿಡುತ್ತವೆ” ಎಂದು ನೊಯ್ಮಾನ್‌ ವಿವರಿಸುತ್ತಾರೆ. ಉಪಯೋಗಿಸಲಾಗುವ ಕಚ್ಚಾ ಸಾಮಗ್ರಿಯು ಮರಗಳಿಂದ ಒಸರುವ ರಾಳವಾಗಿದೆ; ಇದನ್ನು ಜೇನುನೊಣಗಳು ಸಂಗ್ರಹಿಸುತ್ತವೆ ಮತ್ತು ನಿರ್ಮಾಣ ಕೆಲಸಕ್ಕೆ ನಾಲ್ಕು ದಿನಗಳು ತಗಲುತ್ತವೆ. ಉತ್ತರ ಅಮೆರಿಕದ ಜೇನುನೊಣಗಳು ಸೇರಿರುವ ಯೂರೋಪಿಯನ್‌ ಮೂಲದ ಜೇನುನೊಣಗಳಲ್ಲಿ ಈ ರೀತಿಯ ಉಪಾಯದ ನಡವಳಿಕೆಯಿಲ್ಲ. ಆದುದರಿಂದ, ಸುಮಾರು ಐದು ವರ್ಷಗಳ ಹಿಂದೆ ಆಕಸ್ಮಿಕವಾಗಿ ಅಮೆರಿಕಕ್ಕೆ ಪರಿಚಯಿಸಲ್ಪಟ್ಟ ಒಂದು ಜೀರುಂಡೆಯು, ಒಂದು ಜೇನುಗೂಡಿನ ಮೇಲೆ ದಾಳಿ ನಡೆಸಿದಾಗ ಆ ಜೇನುಗೂಡಿನ “ಸರ್ವನಾಶವಾಯಿತೆಂದೇ ಹೇಳಬಹುದು.”(g02 2/22)

ಮಾಲಿನ್ಯ ಪರೀಕ್ಷಕ ಪ್ರಾಣಿಗಳು

ಗಾಳಿ ಮತ್ತು ಮಣ್ಣಿನ ಮಾಲಿನ್ಯವನ್ನು ಅಳೆಯಲಿಕ್ಕಾಗಿ ಎರೆಹುಳುಗಳು ಅತ್ಯುತ್ತಮ ಜೀವಿಗಳಾಗಿವೆ ಎಂದು ಪ್ರಾಣಿಶಾಸ್ತ್ರಜ್ಞರಾದ ಸ್ಟೀವ್‌ ಹಾಪ್ಕಿನ್‌ ಹೇಳುತ್ತಾರೆ. ಹೇರಳವೂ ಸುಲಭಲಭ್ಯವೂ ಆಗಿರುವ ಈ ದೀನ ಹುಳುಗಳು, ಸಂಕೀರ್ಣ ಕೃತಕ ಯಂತ್ರಗಳಿಗಿಂತಲೂ ಹೆಚ್ಚು ಉತ್ತಮ ಕೆಲಸವನ್ನು ಮಾಡುತ್ತವೆ. ಸಾಧಾರಣವಾದ ಚಿಪ್ಪುಜೀವಿಯನ್ನು, ನೀರಿನ ಗುಣಮಟ್ಟವನ್ನು ಅಳೆಯಲು ಬಳಸಲಾಗುತ್ತದೆ. ಈಗಾಗಲೇ ಮಸಲ್‌ಮಾನಿಟರು ರೈನ್‌ ಹಾಗೂ ಡಾನುಬೆ ನದಿಗಳಲ್ಲಿನ ಮಾಲಿನ್ಯವನ್ನು ಅಳೆಯುವುದರಲ್ಲಿ ಪರಿಣಾಮಕಾರಿಯೆಂದು ರುಜುವಾಗಿದೆ. ಈ ಮಸಲ್‌ಮಾನಿಟರ್‌ ಒಂದು ಬಕೆಟಿನ ಗಾತ್ರದ ಯಂತ್ರವಾಗಿದ್ದು, ಅದರೊಳಗೆ ಎಂಟು ಜೀವಂತ ಚಿಪ್ಪುಜೀವಿಗಳಿರುತ್ತವೆ. “ಯಾವುದೇ ಒಂದು ಮಲಿನಕಾರಕ ಅಂಶದ ಸಾರವು ತಟ್ಟನೆ ಏರುವಲ್ಲಿ, ಆ ಚಿಪ್ಪುಜೀವಿಗಳು ಅದನ್ನು ಪತ್ತೆಹಚ್ಚುತ್ತವೆ,” ಎಂದು ಆ ಯಂತ್ರದ ವಿನ್ಯಾಸಕರಾದ ಕೀಸ್‌ ಕ್ರೇಮರ್‌ ಹೇಳಿದರು. ಈ ಚಿಪ್ಪುಜೀವಿಗಳು ಭಿನ್ನ ಭಿನ್ನವಾದ ಸಾವಿರಾರು ರಾಸಾಯನಿಕ ಮಲಿನಕಾರಕಗಳಿಗೆ ಪ್ರತಿಕ್ರಿಯೆಯಲ್ಲಿ ತಮ್ಮ ಚಿಪ್ಪನ್ನು ಮುಚ್ಚಿಬಿಡುತ್ತವೆ ಮತ್ತು ಆಗ ಆ ಮಸಲ್‌ಮಾನಿಟರ್‌ನಲ್ಲಿರುವ ಅಪಾಯಸೂಚಕ ಗಂಟೆಯು ಬಾರಿಸಲಾರಂಭಿಸುತ್ತದೆ. ಈ ಅಪಾಯಸೂಚಕ ಯಂತ್ರಗಳ ಮುಖ್ಯ ಲಾಭವೇನೆಂದರೆ, ಜೀವಿಗಳ ಮೇಲೆ ಮಾಲಿನ್ಯದ ಪರಿಣಾಮವನ್ನು ಅವು ಅಳೆಯುತ್ತವೆ ಎಂದು ಸ್ಪೆಯ್ನ್‌ನ ಎಲ್‌ ಪೇಯಿಸ್‌ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ.(g02 2/22)

ಬೈಬಲ್‌ ಭಾಷಾಂತರದ ಹೊಸ ದಾಖಲೆ

“ಈಗ ಇಡೀ ಬೈಬಲ್‌ ಇಲ್ಲವೇ ಅದರ ಕೆಲವೊಂದು ಭಾಗಗಳು ಒಟ್ಟಿನಲ್ಲಿ 2,261 ಭಾಷೆಗಳಲ್ಲಿ ಲಭ್ಯವಿವೆ. ಅಂದರೆ 12 ತಿಂಗಳುಗಳ ಹಿಂದೆ ಇದ್ದ ಭಾಷೆಗಳಿಗಿಂತ 28 ಭಾಷೆಗಳು ಹೆಚ್ಚಾಗಿವೆ” ಎಂದು ಬ್ರಿಟನಿನ ಬೈಬಲ್‌ ಸೊಸೈಟಿಯು ವರದಿಸುತ್ತದೆ. “ಇಡೀ [ಬೈಬಲ್‌] ಈಗ 383 ಭಾಷೆಗಳಲ್ಲಿ ಲಭ್ಯವಿದೆ. ಇದು ಹಿಂದಿನ ವರ್ಷಕ್ಕಿಂತ 13 ಹೆಚ್ಚು ಭಾಷೆಗಳನ್ನು ಒಳಗೂಡಿದೆ.” ಹಳೇ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆ ಎಂದೂ ಕರೆಯಲಾಗುವ ಹೀಬ್ರು ಶಾಸ್ತ್ರವಚನಗಳ ಇಲ್ಲವೇ ಗ್ರೀಕ್‌ ಶಾಸ್ತ್ರವಚನಗಳ ಇಡೀ ಸಂಪುಟಗಳು ಈಗ 987 ಭಾಷೆಗಳಲ್ಲಿ ಲಭ್ಯವಿವೆ.(g02 2/22)

ತಿಳಿವಳಿಕೆಯ ಸಮ್ಮತಿಯು ದೃಢೀಕರಿಸಲ್ಪಡುತ್ತದೆ

ಜನವರಿ 1991ರ ತಾರೀಖಿನಂದು ಕೊಡಲ್ಪಟ್ಟ ಮೊದಲ ನಿಯಮದ ನಂತರ, ಇಟಲಿಯ ಆರೋಗ್ಯ ಇಲಾಖೆಯು, ರೋಗಿಯು ತನ್ನ ತಿಳಿವಳಿಕೆಯ ಸಮ್ಮತಿಯನ್ನು ಕೊಡುವ ಮುಂಚೆ ರಕ್ತಪೂರಣಗಳು ಕೊಡಲ್ಪಡಬಾರದೆಂಬ ನಿಯಮವನ್ನು ಪುನರಾವರ್ತಿಸಿದೆ. ಈ ನಿಯಮದ ತಾರೀಖು ಜನವರಿ 25, 2001 ಆಗಿದ್ದು, ಗಾಸೆಟಾ ಉಫಿಸ್ಯಲ್‌ ಡೆಲಾ ರೀಪಬ್ಲಿಕಾ ಇಟಾಲ್ಯಾನಾ (ಇಟಾಲಿಯನ್‌ ರಿಪಬ್ಲಿಕ್‌ನ ಅಧೀಕೃತ ವೃತ್ತಪತ್ರಿಕೆ)ದಲ್ಲಿ ಪ್ರಕಾಶಿಸಲ್ಪಟ್ಟಿತ್ತು. ಅದು ತಿಳಿಸುವುದು: “ರಕ್ತ ಇಲ್ಲವೇ ರಕ್ತದ ಘಟಕಗಳನ್ನೊಳಗೊಂಡ ಪೂರಣಗಳು ಮತ್ತು/ಇಲ್ಲವೇ ರಕ್ತದಿಂದ ತಯಾರಿಸಲ್ಪಟ್ಟಿರುವ ಉತ್ಪನ್ನಗಳ ಕೊಡುವಿಕೆಯು ಅಪಾಯಗಳಿಂದ ಮುಕ್ತವಾಗಿಲ್ಲ ಎಂದು ತಿಳಿಸಲ್ಪಟ್ಟ ನಂತರ, ಈ ಪ್ರಕ್ರಿಯೆಗಳನ್ನು ಸ್ವೀಕರಿಸುವ ಆ ವ್ಯಕ್ತಿಯು, ತನ್ನ ಒಪ್ಪಿಗೆ ಇಲ್ಲವೆ ನಿರಾಕರಣೆಯನ್ನು ಮುಂಗಡವಾಗಿ ಲಿಖಿತರೂಪದಲ್ಲಿ ವ್ಯಕ್ತಪಡಿಸಬೇಕು.”(g02 3/22)

ಇಂಟರ್‌ನೆಟ್‌ನಲ್ಲೇ ಸಮಾಧಿಗೆ ಭೇಟಿ

ಒಂದು ಇಂಟರ್‌ನೆಟ್‌ ಸೌಲಭ್ಯದಿಂದಾಗಿ ಈಗ ಸೈಬರ್‌ಸ್ಪೇಸ್‌ನಲ್ಲಿ ಸಮಾಧಿಗಳನ್ನು ಭೇಟಿಮಾಡಲು ಸಾಧ್ಯವಾಗುತ್ತಿದೆಯೆಂದು, ದ ಜಪಾನ್‌ ಟೈಮ್ಸ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಬಂಧುಬಳಗದವರು ಇಂಟರ್‌ನೆಟ್‌ನಲ್ಲೇ ಮೃತ ವ್ಯಕ್ತಿಗಳಿಗೆ ತಮ್ಮ ಗೌರವವನ್ನು ಸಲ್ಲಿಸಬಹುದು. ಕಂಪ್ಯೂಟರ್‌ ಪರದೆಯ ಮೇಲೆ ಒಂದು ಸಮಾಧಿಶಿಲೆಯ ಚಿತ್ರದೊಂದಿಗೆ, ಮೃತ ವ್ಯಕ್ತಿಯ ಒಂದು ಫೋಟೋ ಮತ್ತು ಆ ವ್ಯಕ್ತಿಯ ಬಗ್ಗೆ ಚುಟುಕಾದ ವಿವರಗಳು ಬರುತ್ತವೆ. ಸಂದರ್ಶಕರು ತಮ್ಮ ಸಂದೇಶಗಳನ್ನು ಕಳುಹಿಸಲು ಅಲ್ಲಿ ಸ್ವಲ್ಪ ಸ್ಥಳವನ್ನು ಬಿಡಲಾಗುತ್ತದೆ. ಬೌದ್ಧ ಮತದ ಸಂದರ್ಶಕರ ಸೌಕರ್ಯಕ್ಕಾಗಿ, ಮೌಸ್‌ ಅನ್ನು ಕ್ಲಿಕ್‌ ಮಾಡಿ ಆ ಸಮಾಧಿಯ ಬಳಿ ಹಣ್ಣು, ಹೂವು, ಧೂಪದ ಕಡ್ಡಿಗಳು ಮತ್ತು ಮದ್ಯದ ಅರ್ಪಣೆಗಳನ್ನು ಮಾಡಸಾಧ್ಯವಿದೆ. ಇಂಟರ್‌ನೆಟ್‌ ಸ್ಮಾರಕ ಸೌಲಭ್ಯಗಳ ವಾಣಿಜ್ಯ ಸಂಸ್ಥೆಯ ಅಧ್ಯಕ್ಷರಾದ ಟಾಡಾಶೀ ವಾಟಾನಾಬೆರವರಿಗನುಸಾರ, “ಹೆಚ್ಚು ಸಲ ಸಮಾಧಿಗಳಿಗೆ ಭೇಟಿಮಾಡಲು ಸಾಧ್ಯವಾಗದ ಜನರಿಗೆ, ಉದಾಹರಣೆಗೆ ವಿದೇಶದಲ್ಲಿ ವಾಸಿಸುತ್ತಿರುವವರಿಗಾಗಿ ಇದೊಂದು ತುಂಬ ಪ್ರಾಯೋಗಿಕ ವಿಚಾರವಾಗಿದೆಯೆಂದು ಕೆಲವರು ಹೇಳುತ್ತಾರೆ.” (g02 3/22)