ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೇನು ಮಧುರ ವೈದ್ಯ

ಜೇನು ಮಧುರ ವೈದ್ಯ

ಜೇನು ಮಧುರ ವೈದ್ಯ

ಕೆಲವು ವೈದ್ಯಕೀಯ ಸಂಶೋಧಕರು ಜೇನಿನ, ಭಾರೀ ಪೂತಿನಾಶಕ ಹಾಗೂ ಉರಿಯೂತ ವಿರೋಧಿ ಗುಣಗಳ ಕುರಿತಾಗಿ ಉತ್ಸಾಹದಿಂದಿದ್ದಾರೆ. ಕೆನಡದ ದಿ ಗ್ಲೋಬ್‌ ಆ್ಯಂಡ್‌ ಮೇಲ್‌ ವಾರ್ತಾಪತ್ರಿಕೆಯು ವರದಿಸುವುದು: “ಆ್ಯಂಟಿಬಯೋಟಿಕ್‌ ನಿರೋಧಕ ಸೂಕ್ಷ್ಮಾಣುಜೀವಿಗಳ ಮೇಲೆ ಯಾವುದೇ ಪರಿಣಾಮವನ್ನು ಬೀರದಿರುವಂಥ ಸಂಕೀರ್ಣವಾದ ಆ್ಯಂಟಿಬಯೋಟಿಕ್‌ಗಳ ಶಸ್ತ್ರಾಗಾರದಂತಿರದೆ, ಸೋಂಕು ತಗಲಿರುವ ಗಾಯಗಳ ವಿಷಯದಲ್ಲಿ ಜೇನು, ಕಡಿಮೆಪಕ್ಷ ಕೆಲವೊಂದು ಸೂಕ್ಷ್ಮಾಣುಜೀವಿಗಳೊಂದಿಗೆ ಹೋರಾಡಲು ಶಕ್ತವಾಗಿದೆ.”

ವಾಸಿಯಾಗುವಿಕೆಯ ಮೇಲೆ ಪರಿಣಾಮ ಬೀರುವಂಥ ಯಾವ ವಿಶೇಷತೆ ಜೇನಿನಲ್ಲಿದೆ? ಕಾರ್ಮಿಕ ಜೇನುನೊಣವು ಹೂವುಗಳಿಂದ ಶೇಖರಿಸುವ ಮಕರಂದದಿಂದ ಇದಕ್ಕೆ ಉತ್ತರವನ್ನು ಪಡೆಯಬಹುದು. ಜೇನುನೊಣದ ಲಾಲಾರಸದಲ್ಲಿ ಗ್ಲುಕೋಸ್‌ ಆಕ್ಸಿಡೇಸ್‌ ಇದೆ. ಇದು ಮಕರಂದದಲ್ಲಿರುವ ಗ್ಲುಕೋಸನ್ನು ವಿಘಟಿಸುವ ಒಂದು ಮುಖ್ಯ ಕಿಣ್ವವಾಗಿದೆ. ಈ ವಿಘಟನೆಯ ಒಂದು ಉಪೋತ್ಪನ್ನವು ಹೈಡ್ರೋಜನ್‌ ಪೆರೊಕ್ಸೈಡ್‌ ಆಗಿದೆ. ಇದನ್ನು, ರೂಢಿಗನುಸಾರ ಗಾಯಗಳನ್ನು ಶುಚಿಗೊಳಿಸಲು ಮತ್ತು ಸೋಂಕು ನಿವಾರಿಸಲು ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ, ಒಂದು ಗಾಯಕ್ಕೆ ಹಚ್ಚಲಾಗುವ ಹೈಡ್ರೊಜನ್‌ ಪೆರೊಕ್ಸೈಡ್‌ನ ಪರಿಣಾಮವು ಸ್ವಲ್ಪ ಸಮಯ ಮಾತ್ರ ಇರುತ್ತದೆ, ಆದರೆ ಜೇನು ಹಚ್ಚಲ್ಪಟ್ಟಾಗ ಪರಿಣಾಮವು ಭಿನ್ನವಾಗಿರುತ್ತದೆ. “ಜೇನನ್ನು ಒಂದು ಗಾಯಕ್ಕೆ ಹಚ್ಚಿದ ನಂತರ, ಅದು ದೇಹದ ದ್ರವಗಳಿಂದ ಸ್ವಲ್ಪ ತೆಳುವಾಗುತ್ತದೆ ಮತ್ತು ಇದು ಜೇನಿನ ಸ್ವಾಭಾವಿಕ ಆಮ್ಲದ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ” ಎಂದು ಗ್ಲೋಬ್‌ ವರದಿಯು ಹೇಳುತ್ತದೆ. ಈ ಕಡಿಮೆ ಆಮ್ಲ ಪ್ರಮಾಣದ ಪರಿಸರದಲ್ಲಿ, ಆ ಕಿಣ್ವವು ಕೆಲಸವನ್ನು ಆರಂಭಿಸುತ್ತದೆ. ಜೇನಿನಲ್ಲಿರುವ ಸಕ್ಕರೆ ಅಂಶದ ವಿಘಟನೆಯು ನಿಧಾನವಾಗಿಯೂ ಸತತವಾಗಿಯೂ ನಡೆಯುತ್ತಿರುತ್ತದೆ. ಹೀಗೆ ಈ ಕಾರ್ಯವಿಧಾನವು ಅಲ್ಲಿರುವ ಬ್ಯಾಕ್ಟೀರಿಯಗಳನ್ನು ಕೊಂದು ಹಾಕುವಷ್ಟು, ಆದರೆ ಅದೇ ಸಮಯದಲ್ಲಿ ಸುತ್ತಲಿನ ಆರೋಗ್ಯಕರ ಜೀವಕೋಶಗಳಿಗೆ ಹಾನಿಮಾಡದಷ್ಟು ಪ್ರಮಾಣದಲ್ಲಿ ಹೈಡ್ರೊಜನ್‌ ಪೆರೊಕ್ಸೈಡನ್ನು ನಿಧಾನವಾಗಿ ಹೊರಡಿಸುತ್ತದೆ.

ಗ್ಲೋಬ್‌ ವಾರ್ತಾಪತ್ರಿಕೆಗನುಸಾರ, ಗಾಯದ ವಾಸಿಮಾಡುವಿಕೆಯ ಮೇಲೆ ಪರಿಣಾಮ ಬೀರಸಾಧ್ಯವಿರುವ ಅನೇಕ ಲಕ್ಷಣಗಳು ಜೇನಿನಲ್ಲಿವೆ. “ಜೇನಿನ ಒಂದು ತೆಳುವಾದ ಪದರವು, ಚರ್ಮವನ್ನು ಸಂರಕ್ಷಿಸಿ, ಒರಟು ಒಣಕಲು ಪದರವು ಉಂಟಾಗುವುದರಿಂದ ತಡೆಯುವಂಥ ಒಂದು ತೇವದ ವಾತಾವರಣವನ್ನು ಸೃಷ್ಟಿಸುತ್ತದೆ. ಜೇನು ಹೊಸ ರಕ್ತನಾಳಗಳ ಉತ್ಪತ್ತಿ ಮತ್ತು ಬೆಳವಣಿಗೆಯನ್ನು ಕೆರಳಿಸುತ್ತದೆ ಮತ್ತು ಹೊಸ ಚರ್ಮವು ಬೆಳೆಯುವಂತೆ ಮಾಡುವ ಕಣಗಳನ್ನು ಕೆಲಸಕ್ಕೆ ತೊಡಗಿಸುತ್ತದೆ. ಅಲ್ಲದೆ, ಜೇನಿನಲ್ಲಿರುವ ಆ್ಯಂಟಿ ಓಕ್ಸಿಡೆಂಟ್ಸ್‌ಗಳ ಉರಿಯೂತವಿರೋಧಿ ಕ್ರಿಯೆಯು, ಊತವನ್ನು ಕಡಿಮೆಗೊಳಿಸುತ್ತದೆ, ರಕ್ತದ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಗಾಯವು ‘ಅಳುವುದರಿಂದ’ ತಡೆಯುತ್ತದೆ.”

“ಆದರೆ ಜೇನು ಎಲ್ಲರ ಮದ್ದಲ್ಲ” ಎಂದು ಆ ವರದಿಯು ಎಚ್ಚರಿಸುತ್ತದೆ. ಜೇನಿನ ಸುಮಾರು 5 ಪ್ರತಿಶತ ಭಾಗದಲ್ಲಿ ಆಹಾರನಂಜು ಇದೆಯೆಂದು ಅಂದಾಜಿಸಲಾಗಿದೆ. ಹೆಲ್ತ್‌ ಕೆನಡದ ಆಹಾರವಿಷ ವಿಚಾರಣಾ ಸೇವಾ ಕೇಂದ್ರ ಮತ್ತು ಶಿಶುವೈದ್ಯ ಸಂಘಗಳಂಥ ಸಂಸ್ಥೆಗಳು, ಒಂದು ವರ್ಷಕ್ಕಿಂತ ಚಿಕ್ಕ ಪ್ರಾಯದ ಮಕ್ಕಳಿಗೆ ಜೇನನ್ನು ಕೊಡದಂತೆ ಸಲಹೆ ಕೊಡುತ್ತವೆ. “ಯಾಕೆಂದರೆ ಶಿಶುಗಳು ಆ ಏಕಾಣುಜೀವಿಗಳಿಂದ ತಮ್ಮನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿ ಇನ್ನೂ ತಮ್ಮ ಕರುಳುಗಳಲ್ಲಿ ಸಾಕಷ್ಟು ಸೂಕ್ಷ್ಮಾಣುಜೀವಿಗಳನ್ನು ಬೆಳೆಸಿಕೊಂಡಿಲ್ಲ.”(g02 3/8)