ನಮ್ಮ ವಾಚಕರಿಂದ
ನಮ್ಮ ವಾಚಕರಿಂದ
ಒಳ್ಳೆಯ ಆರೋಗ್ಯ “ಎಲ್ಲರಿಗೂ ಒಳ್ಳೆಯ ಆರೋಗ್ಯ—ಸಾಧ್ಯವೊ?” (ಜುಲೈ-ಸೆಪ್ಟೆಂಬರ್, 2001) ಎಂಬ ಲೇಖನಮಾಲೆಗಳಿಂದ ನಾನು ಪಡೆದಂಥ ಸಾಂತ್ವನ ಹಾಗೂ ಉತ್ತೇಜನವು ಅಳೆಯಲಸಾಧ್ಯವಾದದ್ದು. ನನಗೆ ಮನೋರೋಗವಿದೆ ಮತ್ತು ಹಿಂದೆ ನಾನು ಆತ್ಮಹತ್ಯೆಯನ್ನು ಮಾಡಿಕೊಳ್ಳುವುದರ ಬಗ್ಗೆಯೂ ಯೋಚಿಸಿದ್ದೇನೆ. ಪ್ರತಿದಿನವೂ, ‘ನಾನು ಈ ದಿನವನ್ನು ಹೇಗೆ ಪಾರಾಗುವೆ?’ ಎಂದು ಯೋಚಿಸುತ್ತಿರುತ್ತೇನೆ. ಈ ಪತ್ರಿಕೆಯು, ಪ್ರಕಟನೆ 21:4ರಲ್ಲಿನ ‘ನಮ್ಮ ಕಣ್ಣೀರನ್ನೆಲ್ಲಾ ಒರಸಿಬಿಡುವ’ ಯೆಹೋವನ ವಾಗ್ದಾನವನ್ನು ನೆನಪಿಗೆ ತಂದಿತು.
ಸಿ. ಟಿ., ಜಪಾನ್ (g02 2/8)
ನಿಮ್ಮ ಅತ್ಯುತ್ಕೃಷ್ಟವಾದ ಲೇಖನಗಳಿಗಾಗಿ ನಿಮಗೆ ಉಪಕಾರ. ಪ್ರಕೃತಿ ಚಿಕಿತ್ಸಕನಾಗಿರುವ ನಾನು, ಯಾವುದೇ ರೋಗವಿಲ್ಲದಿರುವ ದಿನಕ್ಕಾಗಿ ಎದುರುನೋಡುತ್ತಿದ್ದೇನೆ. ಆಗ ನಾನು ನನ್ನ ವೈದ್ಯ ಕೆಲಸದಿಂದ ವಿಶ್ರಮಿಸಿ, ನನ್ನ ಎರಡನೆಯ ಅಚ್ಚುಮೆಚ್ಚಿನ ಕೆಲಸವಾಗಿರುವ ಬೇಸಾಯವನ್ನು ಆರಂಭಿಸಬಹುದು!
ಬಿ. ಸಿ., ಅಮೆರಿಕ (g02 2/8)
ಪತಂಗಗಳು ನಾನು 14 ವರ್ಷದವಳಾಗಿದ್ದೇನೆ ಮತ್ತು “ಸುಂದರವಾದ ಪತಂಗ” ಎಂಬ ಲೇಖನವನ್ನು (ಜುಲೈ-ಸೆಪ್ಟೆಂಬರ್ 2001) ಓದಿ ತುಂಬ ಪ್ರಭಾವಿತಳಾದೆ. ಪತಂಗಗಳು ನೋಡಲು ಭಯಾನಕವಾಗಿರುತ್ತವೆಂದು ನಾನು ಯಾವಾಗಲೂ ನೆನಸುತ್ತಿದ್ದೆ, ಆದರೆ ಈ ಲೇಖನವನ್ನು ಓದಿರುವುದರಿಂದ ನಾನೀಗ ಅವುಗಳನ್ನು ಹೊಡೆದುಬಿಡುವ ಮೊದಲು ಯೋಚಿಸುವೆ!
ಡಿ. ಎಸ್., ಅಮೆರಿಕ (g02 2/8)
ಈ ಲೇಖನವನ್ನು ಓದುತ್ತಿದ್ದಾಗ, ಒಂದು ಪತಂಗವು ನನ್ನ ಪಾದಗಳ ಬಳಿ ಬಂದು ನಿಂತಿತು. ಇಷ್ಟು ಸುಂದರವಾದ ಪತಂಗವನ್ನು ನಾನು ಹಿಂದೆಂದೂ ನೋಡಿರಲಿಲ್ಲ! ಪ್ರಕೃತಿಯು ನಿಜವಾಗಿಯೂ ಅದ್ಭುತವಾಗಿದೆ, ಮತ್ತು ನಾವು ಅದನ್ನು ಗಮನಿಸಿದರೆ ದೇವರಿಗಾಗಿರುವ ನಮ್ಮ ಪ್ರೀತಿಯು ಖಂಡಿತವಾಗಿಯೂ ಗಾಢವಾಗುವುದು.
ಜಿ. ಪಿ., ಇಟಲಿ (g02 2/8)
ಯೆಹೋವನು ಸೃಷ್ಟಿಸಿರುವ ಪತಂಗಗಳ ಸೌಂದರ್ಯ ಹಾಗೂ ವೈವಿಧ್ಯವನ್ನು ಗಣ್ಯಮಾಡದೆ, ನಾನು ಅವುಗಳನ್ನು ನೀರಸವಾದ ಕೀಟಗಳೆಂದು ಪರಿಗಣಿಸುತ್ತಿದ್ದೆ. ಆ ಲೇಖನವನ್ನು ಓದಿದ ನಂತರ, ನಾನು ಗಿಡಗಳಿಗೆ ನೀರೆರೆಯುತ್ತಿದ್ದಾಗ ಒಂದು ಸುಂದರವಾದ ಪತಂಗವು ನನ್ನ ಹತ್ತಿರ ಬಂತು. ಆತನ ಸೃಷ್ಟಿಗಾಗಿ ಮತ್ತು ನಾನು ಅದಕ್ಕೆ ಹೆಚ್ಚು ಗಮನಕೊಡುವಂತೆ ಮಾಡಿದ ಲೇಖನಕ್ಕಾಗಿ ನಾನು ಯೆಹೋವನಿಗೆ ಉಪಕಾರ ಹೇಳಿದೆ.
ಸಿ. ಎಸ್., ಅಮೆರಿಕ (g02 2/8)
ದ್ವೇಷ ನನ್ನ ಅಣ್ಣನು ಇತ್ತೀಚೆಗೆ ನನ್ನನ್ನು ಭೇಟಿಯಾಗಲು ಬಂದನು. ಅವನು ತನ್ನನ್ನೇ ಒಬ್ಬ ಜಾತೀಯ ಅಂಧಾಭಿಮಾನಿಯೆಂದು ಘೋಷಿಸುತ್ತಾನೆಂಬುದು ನನಗೆ ಗೊತ್ತಿರಲೇ ಇಲ್ಲ. ಅವನು ಬೇರೆ ಬೇರೆ ಜಾತಿಯ ಬಗ್ಗೆ ಮಾತಾಡಿದನು ಮತ್ತು ಅವುಗಳ ಕಡೆಗೆ ತನ್ನ ತಿರಸ್ಕಾರವನ್ನು ಆವೇಶದಿಂದ ವ್ಯಕ್ತಪಡಿಸುತ್ತಿದ್ದನು. ನಾನು ಅವನಿಗೆ ಸಹಾಯಮಾಡಲು ಬಯಸಿದೆ, ಆದರೆ ಆ ವಿಷಯವನ್ನು ಹೇಗೆ ಪ್ರಸ್ತಾಪಿಸುವುದೆಂದು ನನಗೆ ಗೊತ್ತಿರಲಿಲ್ಲ. “ದ್ವೇಷದ ಚಕ್ರಗತಿಯನ್ನು ಮುರಿಯುವುದು” ಎಂಬ ಲೇಖನಮಾಲೆಯುಳ್ಳ ಅಕ್ಟೋಬರ್-ಡಿಸೆಂಬರ್ 2001ರ ಸಂಚಿಕೆಯನ್ನು ನಾನು ನೋಡಿದಾಕ್ಷಣ, ಅದು ನನ್ನ ಆ ಪ್ರಾರ್ಥನೆಗೆ ಉತ್ತರವೆಂದು ನನಗೆ ಗೊತ್ತಿತ್ತು.
ಎಲ್. ಬಿ., ಅಮೆರಿಕ (g02 3/22)
ನೀವೇನನ್ನು ಬರೆದಿದ್ದೀರೊ ಅದನ್ನು ಒಬ್ಬ ನ್ಯಾಯವಂಥ ವ್ಯಕ್ತಿ ಸ್ವೀಕರಿಸಲಾರನು. ನೀವು ಹೀಗೆ ಹೇಳಿದ್ದೀರಿ: “ಅಪರಿಪೂರ್ಣ ಮಾನವರು ಜನಿಸುವಾಗಲೇ ಕೆಟ್ಟ ಪ್ರವೃತ್ತಿಗಳನ್ನು ಹಾಗೂ ಕುಂದುಕೊರತೆಗಳನ್ನು ಪಡೆದುಕೊಂಡಿದ್ದಾರೆ ಎಂದು ಬೈಬಲು ತಾನೇ ಹೇಳುತ್ತದೆ. (ಆದಿಕಾಂಡ 6:5; ಧರ್ಮೋಪದೇಶಕಾಂಡ 32:5) ಆ ಮಾತುಗಳು ಎಲ್ಲಾ ಮಾನವರಿಗೂ ಅನ್ವಯವಾಗುತ್ತವೆ ಎಂಬುದಂತೂ ಖಂಡಿತ.” ಆದರೆ ಆ ವಚನಗಳು ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಸ್ಥಳಗಳಲ್ಲಿ ಎರಡು ವಿಶೇಷ ಗುಂಪುಗಳಿಗೆ ಸಂಬೋಧಿಸಲ್ಪಟ್ಟಿದ್ದವು. ಅವು ಖಂಡಿತವಾಗಿಯೂ ಎಲ್ಲ ಮನುಷ್ಯರಿಗೆ ಅನ್ವಯವಾಗಲಾರವು.
ಡಿ. ಸಿ., ಚೆಕ್ ರಿಪಬ್ಲಿಕ್
ಎಚ್ಚರ! ಪತ್ರಿಕೆಯ ಪ್ರತಿಕ್ರಿಯೆ: ಈ ಮಾತುಗಳು ಜಲಪ್ರಳಯಕ್ಕೆ ಮುಂಚೆ ಜೀವಿಸಿದ್ದ ಜನರಿಗೆ ಮತ್ತು ಇಸ್ರಾಯೇಲ್ ಜನಾಂಗಕ್ಕೆ ನಿರ್ದಿಷ್ಟವಾಗಿ ಅನ್ವಯವಾದವೆಂಬುದು ನಿಜ. ಆದರೆ “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ” ಎಂಬುದನ್ನು ಬೈಬಲ್ ಪದೇ ಪದೇ ಹೇಳುತ್ತದೆ. (ರೋಮಾಪುರ 3:23; 5:12; ಯೋಬ 14:4; ಕೀರ್ತನೆ 51:5) ಈ ರೀತಿಯಲ್ಲಿ, ಇಸ್ರಾಯೇಲ್ಯರು ಮತ್ತು ಜಲಪ್ರಳಯಕ್ಕಿಂತಲೂ ಮುಂಚೆ ಜೀವಿಸುತ್ತಿದ್ದ ಜನರು, ಮಾನವ ಅಪರಿಪೂರ್ಣತೆಯ ಉದಾಹರಣೆಗಳಾಗಿ ಉಲ್ಲೇಖಿಸಲ್ಪಟ್ಟಿದ್ದಾರೆ. (g02 3/22)
ನ್ಯಾವಹೋ ನ್ಯಾವಹೋ ಮಹಿಳೆ ಸಾಂಡೀ ಯಾಸೀ ಸೋಸೀ ಅವರು ಹೇಳಿದಂತೆ, “ದೇವರ ಹೆಸರು ನನ್ನ ಜೀವಿತವನ್ನೇ ಬದಲಾಯಿಸಿತು!” (ಅಕ್ಟೋಬರ್-ಡಿಸೆಂಬರ್ 2001) ಎಂಬ ಆತ್ಮೋನ್ನತಿ ಮಾಡುವ ಮತ್ತು ಅತ್ಯುತ್ಕೃಷ್ಟವಾದ ಲೇಖನಕ್ಕಾಗಿ ನಾನು ನಿಮಗೆ ಉಪಕಾರ ಹೇಳಲು ಬಯಸುವೆ. ಅವಳ ಮಾತುಗಳು ನನ್ನ ಮನಮುಟ್ಟಿ, ನಾನು ಅಳುವಂತೆ ಮಾಡಿದವು. ಪ್ರೀತಿ ಮತ್ತು ಸಂತೋಷವನ್ನು ಕಂಡುಕೊಳ್ಳಲಿಕ್ಕಾಗಿ ಮತ್ತು ತನ್ನ ಖಿನ್ನತೆಯನ್ನು ಜಯಿಸಲಿಕ್ಕಾಗಿ ಅವಳು ನಡೆದುಬಂದಿರುವ ದಾರಿಯ ಕುರಿತಾಗಿ ಓದುವುದು ನನಗೆ ನಿರೀಕ್ಷೆಯನ್ನು ಕೊಟ್ಟಿದೆ. ಯೆಹೋವ ದೇವರು ನಮ್ಮೆಲ್ಲರನ್ನು ಎಷ್ಟೊಂದು ಪ್ರೀತಿಸುತ್ತಾನೆಂಬುದನ್ನು ನಾನು ಗ್ರಹಿಸುತ್ತೇನೆ!
ಎ. ಎಸ್., ಅಮೆರಿಕ (g02 3/22)