ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾಂತ್ರಿಕತೆಯಲ್ಲಿ ತೊಡಗುವುದು—ಇದರಿಂದ ಹಾನಿಯೇನು?

ಮಾಂತ್ರಿಕತೆಯಲ್ಲಿ ತೊಡಗುವುದು—ಇದರಿಂದ ಹಾನಿಯೇನು?

ಯುವ ಜನರು ಪ್ರಶ್ನಿಸುವುದು . . .

ಮಾಂತ್ರಿಕತೆಯಲ್ಲಿ ತೊಡಗುವುದು​—⁠ಇದರಿಂದ ಹಾನಿಯೇನು?

ದಿವಯಸ್ಕರು ನಿಜವಾಗಿಯೂ ಮಾಂತ್ರಿಕತೆಯಲ್ಲಿ ಆಸಕ್ತರಾಗಿದ್ದಾರೋ? ಸಂಶೋಧಕರ ಒಂದು ಗುಂಪು, 115 ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಮೀಕ್ಷೆ ನಡೆಸುವ ಮೂಲಕ ಇದನ್ನು ಕಂಡುಕೊಳ್ಳಲು ಪ್ರಯತ್ನಿಸಿತು. ಆ ಸಮೀಕ್ಷೆಯು ಈ ಅರ್ಥಗರ್ಭಿತ ಸಂಖ್ಯಾಸಂಗ್ರಹಣಗಳನ್ನು ಬಯಲುಪಡಿಸಿತು: ಸಮೀಕ್ಷೆ ನಡೆಸಲ್ಪಟ್ಟವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ (54 ಪ್ರತಿಶತ), ತಮಗೆ ಮಾಂತ್ರಿಕತೆಯಲ್ಲಿ ಹಾಗೂ ಪ್ರಕೃತ್ಯತೀತದಲ್ಲಿ ಆಸಕ್ತಿಯಿದೆ ಎಂದು ಹೇಳಿದರು ಮತ್ತು ತಾವು “ತೀರ ಆಸಕ್ತರಾಗಿದ್ದೇವೆ” ಎಂದು ಕಾಲುಭಾಗದಷ್ಟು ಮಂದಿ (26 ಪ್ರತಿಶತ) ಹೇಳಿದರು.

ಯೂನಿವರ್ಸಿಟಿ ಆಫ್‌ ಅಲಾಸ್ಕ ಆ್ಯಟ್‌ ಆ್ಯಂಕರೇಜ್‌ಗಾಗಿರುವ ಸಂಶೋಧಕರು ಬರೆಯುವುದು: “ಸೈತಾನಸಂಬಂಧಿತ ಪಂಥದ ಚಟುವಟಿಕೆಯ ಸ್ಫೋಟನದ ಕುರಿತಾದ ವಾರ್ತಾಪತ್ರಿಕೆಯ ಹಾಗೂ ಪತ್ರಿಕೆಯ ಕಥೆಗಳು . . . ಇತ್ತೀಚಿನ ವರ್ಷಗಳಲ್ಲಿ ತ್ವರಿತಗತಿಯಲ್ಲಿ ಸಂಖ್ಯಾಭಿವೃದ್ಧಿಹೊಂದುತ್ತಿವೆ.” ಯುವ ಜನರ ನಡುವೆ ವ್ಯಾಪಕವಾಗಿ ಹರಡಿಕೊಂಡಿರುವ ಸೈತಾನವಾದದ ಪ್ರತಿಪಾದನೆಯನ್ನು ಬೆಂಬಲಿಸಲು ಯಾವುದೇ ರೀತಿಯ ವಿಚಾರಪರ ಪುರಾವೆಯಿಲ್ಲ ಎಂದು ಪರಿಣತರು ಹೇಳುತ್ತಾರೆ. ಹಾಗಿದ್ದರೂ, ಅನೇಕ ಯುವ ಜನರು ಸೈತಾನವಾದ ಹಾಗೂ ಮಾಂತ್ರಿಕತೆಯ ವಿಚಾರಗಳಲ್ಲಿ ತೋರಿಸುವ ಆಸಕ್ತಿಯು ಸಾಂದರ್ಭಿಕವಾಗಿರುವುದಾದರೂ, ಅವರು ಅದರಲ್ಲಿ ಖಂಡಿತವಾಗಿಯೂ ಆಸಕ್ತರಾಗಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ.

ಆದುದರಿಂದ, ‘ಮಾಂತ್ರಿಕತೆಯಲ್ಲಿ ತೊಡಗುವುದರಿಂದ ಯಾವ ಹಾನಿಯಿದೆ?’ ಎಂದು ಕೆಲವು ಯುವ ಜನರು ಕೇಳಬಹುದು. ಇದಕ್ಕೆ ಉತ್ತರವಾಗಿ, ಮೊದಲನೆಯದಾಗಿ ಯುವ ಜನರು ಈ ಮಾಂತ್ರಿಕತೆಯಲ್ಲಿ ಒಳಗೂಡಬಹುದಾದ ಕೆಲವು ವಿಧಗಳನ್ನು ನಾವು ಪರಿಶೀಲಿಸೋಣ.

ಮಾಂತ್ರಿಕತೆಯ ಸೆಳೆತ

ಯು.ಎಸ್‌.ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ ಎಂಬ ಪತ್ರಿಕೆಯಲ್ಲಿನ ಲೇಖನವೊಂದು ಗಮನಿಸಿದ್ದೇನೆಂದರೆ, “ಇಂದಿನ ಮಕ್ಕಳು ಹಾಗೂ ಹದಿವಯಸ್ಕರು, ಭಾರೀ ಪ್ರಮಾಣದಲ್ಲಿ ದಾರಿತಪ್ಪಿಸುವಂಥ ಹಾಗೂ ಅನೇಕವೇಳೆ ತೊಂದರೆದಾಯಕವಾಗಿರುವಂಥ, ಸುಮಾರು 20 ವರ್ಷಗಳ ಹಿಂದೆ ಊಹಿಸಲೂ ಅಸಾಧ್ಯವಾಗಿದ್ದಿರಬಹುದಾದಂತಹ ದೃಶ್ಯಮಾಹಿತಿ ಹಾಗೂ ಸಮಾಚಾರಗಳೊಂದಿಗೆ ಸಂಪರ್ಕ ಹೊಂದಿರುತ್ತಾರೆ ಮತ್ತು ಅದಕ್ಕೆ ಒಡ್ಡಲ್ಪಡುತ್ತಾರೆ.” ಅನೇಕ ಯುವ ಜನರು ಮಾಂತ್ರಿಕತೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತುತಪಡಿಸುವ ಪುಸ್ತಕಗಳನ್ನು ಹಾಗೂ ಪತ್ರಿಕೆಗಳನ್ನು ಓದುವಂತೆ, ವಿಡಿಯೋಗಳನ್ನು ನೋಡುವಂತೆ ಅಥವಾ ಇಂಟರ್‌ನೆಟ್‌ಗಳಲ್ಲಿ ವೆಬ್‌ ಸೈಟ್‌ಗಳನ್ನು ಸರ್ಫ್‌ಮಾಡುವಂತೆ ಕುತೂಹಲವು ಅವರನ್ನು ಪ್ರಚೋದಿಸುತ್ತದೆ.

ಬಿಬಿಸಿ ನ್ಯೂಸ್‌ ಆನ್‌ಲೈನ್‌ಗನುಸಾರ, ಮಾಟ ಹಾಗೂ ರಕ್ತಪಿಶಾಚಿಗಳಲ್ಲಿನ ನಂಬಿಕೆಯನ್ನು ಸಾದರಪಡಿಸುವಂಥ ಜನಪ್ರಿಯ ಟಿವಿ ಕಾರ್ಯಕ್ರಮಗಳು, “ಮಕ್ಕಳ ನಡುವೆ ಮಾಟದಲ್ಲಿ ಆಸಕ್ತಿಯನ್ನು ಉತ್ತೇಜಿಸುತ್ತವೆ ಎಂದು ಪ್ರತಿಪಾದಿಸಲಾಗಿದೆ.” ತದ್ರೀತಿಯಲ್ಲಿ ಕೆಲವು ರಾಕ್‌ (ಹೆವಿ-ಮೆಟಲ್‌) ಸಂಗೀತಗಳು ಹಿಂಸಾತ್ಮಕವಾದ ಅಥವಾ ಪೈಶಾಚಿಕ ವಿಷಯಗಳನ್ನು ಪ್ರಸ್ತುತಪಡಿಸುತ್ತವೆ. ದ ಸಂಡೇ ಸ್ಟಾರ್‌ ಎಂಬ ಟೊರಾಂಟೊ ವಾರ್ತಾಪತ್ರಿಕೆಯಲ್ಲಿ ಅಂಕಣಕಾರನಾದ ಟಾಮ್‌ ಹಾರ್ಪರ್‌ ಬರೆದುದು: “[ಸಂಗೀತದಲ್ಲಿ] ಏನು ಸಂಭವಿಸುತ್ತಿದೆ ಎಂಬುದರ ಕುರಿತು ಅತ್ಯಂತ ಪ್ರಬಲವಾದ ಎಚ್ಚರಿಕೆಯನ್ನು ನಾನು ಹೊರಡಿಸಬೇಕು. . . . ಇಷ್ಟೊಂದು ನೀತಿಭ್ರಷ್ಟವಾದ ಯಾವುದನ್ನೂ ನಾನು ನೋಡಿಲ್ಲ. ಹಾಡುಗಳು ಹುಚ್ಚುತನ, ಭೂತಬಾಧೆ, ದೆವ್ವಗಳು, ರಕ್ತಪಾತ, ಶಾಪಗಳು, ಬಲಾತ್ಕಾರ ಸಂಭೋಗ, ಸ್ವಅಂಗಹೀನಮಾಡುವಿಕೆ, ಕೊಲೆ ಹಾಗೂ ಆತ್ಮಹತ್ಯೆಯಂಥ ಪ್ರತಿಯೊಂದು ರೀತಿಯ ಹಿಂಸಾಚಾರದಿಂದ ತುಂಬಿಹೋಗಿವೆ. ಮರಣ ಮತ್ತು ವಿನಾಶ, ದಂಡನೆಯ ಪ್ರವಾದನೆಗಳು, ಎಲ್ಲ ರೀತಿಯ ಒಳ್ಳೇತನವನ್ನು ನಿರಾಕರಿಸುವುದು ಮತ್ತು ಎಲ್ಲ ರೀತಿಯ ಅಸಹ್ಯಕರವಾದ ಹಾಗೂ ದುಷ್ಟ ವಿಷಯಗಳನ್ನು ಅಂಗೀಕರಿಸುವುದು​—⁠ಇವು ಅವುಗಳ ಮುಖ್ಯ ವಿಷಯಗಳಾಗಿವೆ.”

ಅಂಥ ಸಂಗೀತಕ್ಕೆ ಕಿವಿಗೊಡುವುದು ನಿಜವಾಗಿಯೂ ವಿನಾಶಕರ ನಡತೆಗೆ ಕಾರಣವಾಗಿದೆಯೋ? ಕಡಿಮೆಪಕ್ಷ ಒಂದು ವಿದ್ಯಮಾನದಲ್ಲಿ ಇದು ಹಾಗೆ ಮಾಡಿತು ಎಂಬುದಂತೂ ಸುವ್ಯಕ್ತ. ಅಮೆರಿಕದಲ್ಲಿದ್ದ 14 ವರ್ಷ ಪ್ರಾಯದ ಒಬ್ಬ ಹುಡುಗನು, ತನ್ನ ತಾಯಿಯನ್ನು ಕತ್ತಿಯಿಂದ ಇರಿದು ಸಾಯಿಸಿದನು ಮತ್ತು ನಂತರ ಸ್ವತಃ ತನ್ನನ್ನೇ ಕೊಂದುಕೊಂಡನು. ಅವನ ರೂಮಿನ ಗೋಡೆಗಳ ಮೇಲೆಲ್ಲಾ ಹೆವಿ-ಮೆಟಲ್‌ ರಾಕ್‌ ಸಂಗೀತಗಾರರ ಚಿತ್ರಪಟಗಳು ಅಂಟಿಸಲ್ಪಟ್ಟಿದ್ದವು. ತದನಂತರ ಅವನ ತಂದೆಯು ವಿನಂತಿಸಿಕೊಂಡದ್ದು: “ತಮ್ಮ ಮಕ್ಕಳು ಯಾವ ಸಂಗೀತವನ್ನು ಕೇಳಿಸಿಕೊಳ್ಳುತ್ತಿದ್ದಾರೆ ಎಂಬುದರ ಕುರಿತು ಎಚ್ಚರಿಕೆ ವಹಿಸುವಂತೆ ಹೆತ್ತವರಿಗೆ ತಿಳಿಸಿರಿ.” ತನ್ನ ಮಗನು ಅವನ ತಾಯಿಯನ್ನು ಕೊಂದುಹಾಕುವ ಒಂದು ವಾರಕ್ಕೆ ಮುಂಚೆ, “ರಕ್ತ ಮತ್ತು ನಿಮ್ಮ ತಾಯಿಯನ್ನು ಕೊಲ್ಲುವುದು” ಎಂಬುದರ ಕುರಿತಾದ ಒಂದು ರಾಕ್‌ ಸಂಗೀತವನ್ನು ಹಾಡುತ್ತಾ ಇದ್ದನು ಎಂದು ಅವನು ಹೇಳಿದನು.

ಅಷ್ಟುಮಾತ್ರವಲ್ಲ, ಪಾತ್ರ ನಟಿಸುವ ಆಟಗಳೂ ಇವೆ. ಇವುಗಳಲ್ಲಿ ಕೆಲವು, ಈ ಆಟದಲ್ಲಿ ಭಾಗವಹಿಸುವವರು ಮಂತ್ರವಾದಿಗಳ ಹಾಗೂ ಮಾಂತ್ರಿಕತೆಯ ಇತರ ವ್ಯಕ್ತಿಗಳ ಪಾತ್ರವನ್ನು ವಹಿಸುವಂತೆ ಅನುಮತಿಸುತ್ತವೆ. ಈ ಆಟಗಳಲ್ಲಿ ಹೆಚ್ಚಿನವು ಪೈಶಾಚಿಕ ಹಿಂಸಾಚಾರವನ್ನು ಪ್ರಸ್ತುತಪಡಿಸುತ್ತವೆ. *

ಆದರೂ, ಮೀಡಿಯಸ್ಕೋಪ್‌ ಎಂಬ ಸಂಶೋಧನಾ ಸಂಸ್ಥೆಯು ವರದಿಸುವುದು: “ಹೆವಿ-ಮೆಟಲ್‌ ಸಂಗೀತವನ್ನು ತುಂಬ ಇಷ್ಟಪಡುವುದು ತಾನೇ, ವಿಮುಖಗೊಳಿಸುವಿಕೆಗೆ, ಅಮಲೌಷಧ ಹಾಗೂ ಮದ್ಯಸೇವನೆಯ ದುಶ್ಚಟಕ್ಕೆ, ಮನೋವೈದ್ಯಕೀಯ ಅಸ್ವಸ್ಥತೆಗಳಿಗೆ, ಆತ್ಮಹತ್ಯೆಯ ಅಪಾಯಗಳಿಗೆ . . . ಅಥವಾ ತಾರುಣ್ಯದ ಸಮಯದಲ್ಲಿ ಅಪಾಯಕರವಾದ ವರ್ತನೆಗಳಿಗೆ ಗಮನಾರ್ಹ ಸೂಚನೆಯಾಗಿರಬಹುದು. ಆದರೆ ಈ ವರ್ತನೆಗಳಿಗೆ ಸಂಗೀತವು ಕಾರಣವಾಗಿರುವುದಿಲ್ಲ ಎಂದು ಅಧ್ಯಯನಗಳು ತೋರಿಸುತ್ತವೆ. ಈಗಾಗಲೇ ಈ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಹದಿವಯಸ್ಕರು ಹೆವಿ-ಮೆಟಲ್‌ ಸಂಗೀತದ ಕಡೆಗೆ ಆಕರ್ಷಿತರಾಗಬಹುದು, ಏಕೆಂದರೆ ಅವುಗಳ ಭಾವಗೀತೆಗಳು ಅವರ ಸ್ವಂತ ಚಿಂತಾಭರಿತ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತವೆ ಎಂದು ಊಹಿಸಲಾಗಿದೆ.”

ಸೈತಾನಸಂಬಂಧಿತ ಸಂಗೀತಕ್ಕೆ ಕಿವಿಗೊಡುವುದರಿಂದ ಉಂಟಾಗುವ ಅಪಾಯಗಳನ್ನು ಎಲ್ಲ ಸಂಶೋಧಕರು ಒಪ್ಪಿಕೊಳ್ಳದಿರಬಹುದು. ಆದರೆ ಹಿಂಸಾಚಾರ ಅಥವಾ ಸ್ವವಿನಾಶಕ್ಕೆ ಒತ್ತನ್ನು ನೀಡುವಂತಹ ವಿಡಿಯೋಗಳನ್ನು ನೋಡುವುದು, ಸಂಗೀತವನ್ನು ಕೇಳಿಸಿಕೊಳ್ಳುವುದು ಅಥವಾ ಆಟಗಳಲ್ಲಿ ಪಾಲ್ಗೊಳ್ಳುವುದನ್ನು ರೂಢಿಮಾಡಿಕೊಳ್ಳುವುದು ವಿಷಕರವಾಗಿಲ್ಲದಿರಸಾಧ್ಯವಿದೆಯೋ? ಆದರೂ, ಕ್ರೈಸ್ತರಿಗಾದರೋ ಮಾಂತ್ರಿಕತೆಯಲ್ಲಿ ತೊಡಗುವುದು ಇನ್ನೂ ಗಂಭೀರವಾದ ಅಪಾಯವನ್ನು ತಂದೊಡ್ಡುತ್ತದೆ.

ಮಾಂತ್ರಿಕತೆಯ ವಿಷಯದಲ್ಲಿ ದೇವರ ದೃಷ್ಟಿಕೋನ

ಒಂದನೆಯ ಕೊರಿಂಥ 10:20ರಲ್ಲಿ ಅಪೊಸ್ತಲ ಪೌಲನು ಕ್ರೈಸ್ತರಿಗೆ ಎಚ್ಚರಿಕೆ ನೀಡಿದ್ದು: “ನೀವು ದೆವ್ವಗಳೊಡನೆ ಭಾಗಿಗಳಾಗಿರಬೇಕೆಂಬದು ನನ್ನ ಇಷ್ಟವಲ್ಲ.” ದೆವ್ವಗಳು ಯಾರಾಗಿವೆ ಮತ್ತು ಅವುಗಳೊಂದಿಗೆ ಒಳಗೂಡುವುದು ಏಕೆ ಅಷ್ಟೊಂದು ಅಪಾಯಕರವಾದದ್ದಾಗಿದೆ? ಸರಳವಾಗಿ ಹೇಳುವಲ್ಲಿ, ದೆವ್ವಗಳು ಒಂದು ಕಾಲದಲ್ಲಿ ದೇವದೂತರಾಗಿದ್ದು, ನಂತರ ಪಿಶಾಚನಾದ ಸೈತಾನನನ್ನು ಹಿಂಬಾಲಿಸುವ ಆಯ್ಕೆಮಾಡಿದವುಗಳಾಗಿವೆ. ಸೈತಾನ ಎಂಬುದರ ಅರ್ಥ “ಪ್ರತಿಭಟಕ” ಎಂದಾಗಿದೆ ಮತ್ತು ಪಿಶಾಚ ಎಂಬುದರ ಅರ್ಥ “ಮಿಥ್ಯಾಪವಾದಿ” ಎಂದಾಗಿದೆ. ಬೈಬಲಿಗನುಸಾರ, ಈ ಮುಂಚೆ ದೇವರ ದೇವದೂತ ಪುತ್ರನಾಗಿದ್ದ ಇವನು, ದೇವರ ವಿರುದ್ಧ ದಂಗೆಯೇಳುವ ಆಯ್ಕೆಯನ್ನು ಮಾಡುವ ಮೂಲಕ ತನ್ನನ್ನು ಪ್ರತಿಭಟಕನನ್ನಾಗಿ ಹಾಗೂ ಮಿಥ್ಯಾಪವಾದಿಯನ್ನಾಗಿ ಮಾಡಿಕೊಂಡನು. ಸಕಾಲದಲ್ಲಿ, ಈ ದಂಗೆಕೋರ ಕೃತ್ಯದಲ್ಲಿ ತನ್ನೊಂದಿಗೆ ಜೊತೆಗೂಡುವಂತೆ ಅವನು ಇತರ ದೇವದೂತರನ್ನೂ ಆಕರ್ಷಿಸಿದನು. ಹೀಗೆ, ಈ ಜೊತೆಗೂಡುವಿಕೆಯಿಂದಾಗಿ ಅವರು ದೆವ್ವಗಳಾಗಿ ಪರಿಣಮಿಸಿದರು.​—⁠ಆದಿಕಾಂಡ 3:​1-15; 6:​1-4; ಯೂದ 6.

ಯೇಸು ಸೈತಾನನನ್ನು “ಇಹಲೋಕಾಧಿಪತಿ” ಎಂದು ಕರೆದನು. (ಯೋಹಾನ 12:31) ಸೈತಾನನೂ ಅವನ ದೆವ್ವಗಳೂ ಆಗಮಿಸುತ್ತಿರುವ ತಮ್ಮ ವಿನಾಶದ ವಿಷಯದಲ್ಲಿ “ಮಹಾ ರೌದ್ರವುಳ್ಳವ”ರಾಗಿದ್ದಾರೆ. (ಪ್ರಕಟನೆ 12:​9-12) ಯಾರು ಈ ದೆವ್ವಗಳೊಂದಿಗೆ ಒಳಗೂಡಿದ್ದಾರೋ ಅವರು ತಮ್ಮನ್ನು ಕ್ರೂರ ವ್ಯಕ್ತಿಗಳನ್ನಾಗಿ ಕಂಡುಕೊಂಡಿದ್ದಾರೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ. ಸುರಿನಾಮ್‌ನಲ್ಲಿ ಪ್ರೇತಾತ್ಮವಾದವನ್ನು ನಡೆಸುತ್ತಿದ್ದ ಒಂದು ಕುಟುಂಬದಲ್ಲಿ ಬೆಳೆದ ಒಬ್ಬ ಸ್ತ್ರೀಯು, ದೆವ್ವಗಳು ಹೇಗೆ “ತಮಗೆ ಒಳಪಡದಿರುವಂಥ ವ್ಯಕ್ತಿಗಳಿಗೆ ಚಿತ್ರಹಿಂಸೆ ನೀಡುವುದರಲ್ಲಿ ಆನಂದಿಸುತ್ತವೆ” ಎಂಬುದನ್ನು ನೇರವಾಗಿ ನೋಡಿದಳು. * ಹೀಗೆ, ಯಾವುದೇ ರೀತಿಯಲ್ಲಿ ಈ ಕ್ರೂರ ಆತ್ಮ ಜೀವಿಗಳೊಂದಿಗೆ ಒಳಗೂಡುವುದು ಅತ್ಯಂತ ಅಪಾಯಕರವಾದದ್ದಾಗಿದೆ!

ಈ ಕಾರಣದಿಂದಲೇ, ಎಲ್ಲ ರೀತಿಯ ಮಾಂತ್ರಿಕ ರೂಢಿಗಳನ್ನು ತೊರೆಯುವಂತೆ ತನ್ನ ಪುರಾತನ ಜನರಾಗಿದ್ದ ಇಸ್ರಾಯೇಲ್ಯರಿಗೆ ದೇವರು ಆಜ್ಞಾಪಿಸಿದ್ದನು. “ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ” ಎಂದು ಧರ್ಮೋಪದೇಶಕಾಂಡ 18:​10-12 ಎಚ್ಚರಿಕೆ ನೀಡುತ್ತದೆ. ತದ್ರೀತಿಯಲ್ಲಿ “ಪ್ರೇತಾತ್ಮವಾದವನ್ನು ಆಚರಿಸುವವರು” ದೇವರ ಕೈಯಲ್ಲಿ ನಾಶವನ್ನು ಅನುಭವಿಸುವರು ಎಂದು ಕ್ರೈಸ್ತರಿಗೆ ಎಚ್ಚರಿಕೆ ನೀಡಲಾಗಿದೆ. (ಪ್ರಕಟನೆ 21:​8, NW) ಮಾಂತ್ರಿಕತೆಯಲ್ಲಿ ತೊಡಗುವುದು ಸಹ ದೇವರಿಂದ ಖಂಡಿಸಲ್ಪಟ್ಟಿದೆ. “ಅಶುದ್ಧವಾದ ಯಾವದನ್ನೂ ಮುಟ್ಟದಿರಿ” ಎಂದು ಬೈಬಲು ಆಜ್ಞಾಪಿಸುತ್ತದೆ.​—⁠2 ಕೊರಿಂಥ 6:⁠17.

ಮಾಂತ್ರಿಕತೆಯ ರೂಢಿಗಳಿಂದ ಸ್ವತಂತ್ರರಾಗುವುದು

ಮಾಂತ್ರಿಕತೆಯಲ್ಲಿ ತೊಡಗುವ ತಪ್ಪನ್ನು ನೀವು ಮಾಡಿದ್ದೀರೋ? ಹಾಗಾದರೆ ಪ್ರಥಮ ಶತಮಾನದ ಎಫೆಸ ಪಟ್ಟಣದಲ್ಲಿ ಏನು ಸಂಭವಿಸಿತು ಎಂಬುದನ್ನು ಪರಿಗಣಿಸಿರಿ. ಅಲ್ಲಿ ಅನೇಕರು ‘ಮಾಟ ಮಂತ್ರಗಳನ್ನು ನಡಿಸುತ್ತಿದ್ದರು.’ ಆದರೆ ಪವಿತ್ರಾತ್ಮದ ಸಹಾಯದಿಂದ ಅಪೊಸ್ತಲ ಪೌಲನು ಮಾಡಿದಂಥ ಅದ್ಭುತಕಾರ್ಯಗಳನ್ನು ನೋಡಿ ಕೆಲವರು ಪ್ರಚೋದಿತರಾದರು. ಫಲಿತಾಂಶಗಳೇನು? “ಇದಲ್ಲದೆ ಮಾಟ ಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ತಂದು ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು. ಅವುಗಳ ಕ್ರಯವನ್ನು ಲೆಕ್ಕಮಾಡಿ ಐವತ್ತು ಸಾವಿರ ಬೆಳ್ಳೀ ನಾಣ್ಯ ಆಯಿತೆಂದು ತಿಳಿದುಕೊಂಡರು. ಈ ರೀತಿಯಾಗಿ ಕರ್ತನ [“ಯೆಹೋವನ,” NW] ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.”​—⁠ಅ. ಕೃತ್ಯಗಳು 19:​11-20.

ಇದು ನಮಗೆ ಏನು ಹೇಳುತ್ತದೆ? ಒಬ್ಬ ವ್ಯಕ್ತಿಯು ದೆವ್ವಗಳ ಹಿಡಿತದಿಂದ ಬಿಡಿಸಿಕೊಳ್ಳಲು ಬಯಸುವಲ್ಲಿ, ಅವನು ಅಥವಾ ಅವಳು ಸೈತಾನನ ಆರಾಧನೆಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ನಾಶಮಾಡಿಬಿಡಬೇಕು. ಎಲ್ಲ ಪುಸ್ತಕಗಳು, ಪತ್ರಿಕೆಗಳು, ಚಿತ್ರಗಳು, ಕಾಮಿಕ್‌ ಪುಸ್ತಕಗಳು, ವಿಡಿಯೋಗಳು, ತಾಯಿತಗಳು (“ರಕ್ಷಣೆ”ಗಾಗಿ ಕಟ್ಟಿಕೊಳ್ಳುವ ವಸ್ತುಗಳು), ಮತ್ತು ಇಂಟರ್‌ನೆಟ್‌ನಿಂದ ತೆಗೆದ ಪೈಶಾಚಿಕ ವಿಷಯಗಳು ಇದರಲ್ಲಿ ಒಳಗೂಡಿವೆ. (ಧರ್ಮೋಪದೇಶಕಾಂಡ 7:​25, 26) ಸ್ಫಟಿಕದ ಗೋಳ ಅಥವಾ ವೀಜಾ ಹಲಗೆಗಳಂಥ ಕಣಿಹೇಳುವಿಕೆಯಲ್ಲಿ ಉಪಯೋಗಿಸಲ್ಪಡುವ ಯಾವುದೇ ವಸ್ತುಗಳನ್ನು ಎಸೆದುಬಿಡಿರಿ. ಹಾಗೂ ಸೈತಾನಸಂಬಂಧಿತ ವಿಷಯಗಳನ್ನು ಸಾದರಪಡಿಸುವಂಥ ಸಂಗೀತವನ್ನು ಅಥವಾ ವಿಡಿಯೋವನ್ನು ನಿಮ್ಮಿಂದ ದೂರ ತೊಲಗಿಸಿ.

ಇಂತಹ ಧೀರ ಹೆಜ್ಜೆಗಳನ್ನು ತೆಗೆದುಕೊಳ್ಳಲಿಕ್ಕಾಗಿ ಧೈರ್ಯ ಹಾಗೂ ದೃಢನಿರ್ಧಾರದ ಅಗತ್ಯವಿದೆ. ಆದರೆ ಇದರಿಂದ ಅಪಾರ ಪ್ರಯೋಜನಗಳಿವೆ. ಜೀನ್‌ * ಎಂಬ ಹೆಸರಿನ ಒಬ್ಬ ಕ್ರೈಸ್ತ ಸ್ತ್ರೀಯು, ಆರಂಭದಲ್ಲಿ ಹಾನಿರಹಿತವಾದದ್ದಾಗಿ ಕಂಡುಬಂದ ಒಂದು ಕಂಪ್ಯೂಟರ್‌ ಆಟವನ್ನು ಖರೀದಿಸಿದಳು. ಆ ಆಟದ ಬೇರೆ ಬೇರೆ ಹಂತಗಳನ್ನು ಅವಳು ನಿಧಾನವಾಗಿ ಹಾದುಹೋದಾಗ, ಅದರಲ್ಲಿ ಪ್ರೇತಾತ್ಮವಾದದ ಸೂಚ್ಯಾರ್ಥಗಳಿದ್ದ ಅಂಶಗಳನ್ನು ಅವಳು ಕಂಡುಹಿಡಿದಳು. ಸ್ವಲ್ಪದರಲ್ಲೇ ಅವಳು ಹಿಂಸಾತ್ಮಕವಾದ ಘೋರ ಸ್ವಪ್ನಗಳನ್ನು ಕಾಣತೊಡಗಿದಳು! ಜೀನ್‌ ಹೇಳುವುದು: “ನಾನು ಮಧ್ಯ ರಾತ್ರಿಯೇ ಎದ್ದು, ಈ ಆಟವನ್ನು ಒಳಗೊಂಡಿದ್ದ ಸಿ.ಡಿ.ಗಳನ್ನು ನಾಶಮಾಡಿಬಿಟ್ಟೆ.” ಇದರ ಫಲಿತಾಂಶವೇನು? “ಅಂದಿನಿಂದ ನನಗೆ ಯಾವ ತೊಂದರೆಯೂ ಆಗಲಿಲ್ಲ.”

ಇದರಿಂದ ಸ್ವತಂತ್ರರಾಗಲು ನೀವು ನಿಜವಾಗಿಯೂ ದೃಢನಿರ್ಧಾರವನ್ನು ಮಾಡುವಲ್ಲಿ, ನೀವು ಖಂಡಿತ ಯಶಸ್ಸನ್ನು ಪಡೆದುಕೊಳ್ಳುವಿರಿ. ಪಿಶಾಚನು ತನ್ನನ್ನು ಆರಾಧಿಸುವಂತೆ ಯೇಸುವನ್ನು ಸೆಳೆಯಲು ಪ್ರಯತ್ನಿಸಿದಾಗ, ಯೇಸು ತೋರಿಸಿದಂಥ ದೃಢನಿರ್ಧಾರವನ್ನು ಜ್ಞಾಪಿಸಿಕೊಳ್ಳಿರಿ. “ಯೇಸು ಅವನಿಗೆ​—⁠ಸೈತಾನನೇ, ನೀನು ತೊಲಗಿ ಹೋಗು, ನಿನ್ನ ದೇವರಾಗಿರುವ ಕರ್ತನಿಗೆ [“ಯೆಹೋವನಿಗೆ,” NW] ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ ಎಂದು ಹೇಳಿದನು. ಆಗ ಸೈತಾನನು ಆತನನ್ನು ಬಿಟ್ಟುಬಿಟ್ಟನು.”​—⁠ಮತ್ತಾಯ 4:​8-11.

ಒಂಟಿಯಾಗಿಯೇ ದೆವ್ವಗಳೊಂದಿಗೆ ಹೋರಾಡಬೇಡಿ

“ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ” ಎಂದು ಅಪೊಸ್ತಲ ಪೌಲನು ಎಲ್ಲ ಕ್ರೈಸ್ತರಿಗೆ ಜ್ಞಾಪಕ ಹುಟ್ಟಿಸುತ್ತಾನೆ. (ಎಫೆಸ 6:12) ಆದರೆ ಒಂಟಿಯಾಗಿಯೇ ಸೈತಾನನೊಂದಿಗೆ ಹಾಗೂ ಅವನ ದೆವ್ವಗಳೊಂದಿಗೆ ಹೋರಾಡಲು ಪ್ರಯತ್ನಿಸಬೇಡಿ. ನಿಮ್ಮ ದೇವಭಯವುಳ್ಳ ಹೆತ್ತವರಿಂದ ಹಾಗೂ ಸ್ಥಳಿಕ ಕ್ರೈಸ್ತ ಸಭೆಯ ಹಿರಿಯರಿಂದ ಸಹಾಯವನ್ನು ಪಡೆದುಕೊಳ್ಳಿ. ಮಾಂತ್ರಿಕತೆಯಲ್ಲಿ ನಿಮ್ಮ ಒಳಗೂಡುವಿಕೆಯನ್ನು ನಿವೇದಿಸಿಕೊಳ್ಳುವುದು ಪೇಚಾಟವನ್ನು ಉಂಟುಮಾಡುವಂಥದ್ದಾಗಿರಬಹುದಾದರೂ, ಇದರ ಫಲಿತಾಂಶವಾಗಿ ನಿಮಗೆ ಅತ್ಯಗತ್ಯವಾಗಿರುವ ಬೆಂಬಲವನ್ನು ನೀವು ಪಡೆದುಕೊಳ್ಳಸಾಧ್ಯವಿದೆ.​—⁠ಯಾಕೋಬ 5:​14, 15.

“ಸೈತಾನನನ್ನು ಎದುರಿಸಿರಿ. ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು. ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಸಹ ಬೈಬಲ್‌ ಹೇಳುತ್ತದೆಂಬುದನ್ನು ಮರೆಯದಿರಿ. (ಯಾಕೋಬ 4:​7, 8) ಹೌದು, ನಿಮಗೆ ಯೆಹೋವ ದೇವರ ಬೆಂಬಲವಿದೆ! ಮಾಂತ್ರಿಕತೆಯ ಪಾಶದಿಂದ ನಿಮ್ಮನ್ನು ಸ್ವತಂತ್ರಗೊಳಿಸಿಕೊಳ್ಳಲು ಆತನು ನಿಮಗೆ ಸಹಾಯಮಾಡುವನು.(g02 1/22)

[ಪಾದಟಿಪ್ಪಣಿಗಳು]

^ ಸೆಪ್ಟೆಂಬರ್‌ 8, 1999ರ ಎಚ್ಚರ! ಪತ್ರಿಕೆಯ “ಯುವ ಜನರು ಪ್ರಶ್ನಿಸುವುದು . . . ಪಾತ್ರ ನಟಿಸುವ ಆಟಗಳಲ್ಲಿ ಅಪಾಯವೇನಾದರೂ ಇದೆಯೆ?” ಎಂಬ ಲೇಖನವನ್ನು ನೋಡಿ.

^ ನಮ್ಮ ಈ ಪತ್ರಿಕೆಯ ಜೊತೆ ಪತ್ರಿಕೆಯಾಗಿರುವ ಕಾವಲಿನಬುರುಜುವಿನ 1987, ಸೆಪ್ಟೆಂಬರ್‌ 1ರ ಸಂಚಿಕೆಯಲ್ಲಿರುವ (ಇಂಗ್ಲಿಷ್‌) “ಪ್ರೇತಾತ್ಮವಾದದ ನೊಗವನ್ನು ಜಾಡಿಸಿಹಾಕುವುದು” ಎಂಬ ಲೇಖನವನ್ನು ನೋಡಿರಿ.

^ ಹೆಸರು ಬದಲಾಯಿಸಲ್ಪಟ್ಟಿದೆ.

[ಪುಟ 26ರಲ್ಲಿರುವ ಚಿತ್ರ]

ಸೈತಾನನ ಆರಾಧನೆಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಇಲ್ಲವಾಗಿಸಿರಿ

[ಪುಟ 26ರಲ್ಲಿರುವ ಚಿತ್ರ]

ಪ್ರೇತಾತ್ಮವಾದವನ್ನು ಉತ್ತೇಜಿಸುವ ವೆಬ್‌ ಸೈಟ್‌ಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ